ಪ್ರತಿಯೊಂದು ಚಿತ್ರಕ್ಕೂ ಒಬ್ಬ ಸಂಕಲನಕಾರನ ಅಗತ್ಯವಿರುತ್ತದೆ. ಏನಿವನ ಕೆಲಸ? ಒಟ್ಟಾರೆಯಾಗಿ ಚಿತ್ರೀಕರಿಸಿ ತಂದ ಸರಕನ್ನು ಕತ್ತರಿಸಿ, ಅಂಟಿಸಿ, ಜೋಡಿಸಿ ಒಂದು ಸಿನೆಮಾವನ್ನು ತಯಾರಿಸುವುದೇ ಇವನ ಕೆಲಸವೇ? ಹಾಗಿದ್ದರೆ, ಇದೊಂದು ಯಾಂತ್ರಿಕವಾದ ಕೆಲಸವೇ? ಇದಕ್ಕೆ ಒಬ್ಬ ನುರಿತ ಕಲಾವಿದ ಹಾಗೂ ತಂತ್ರಜ್ಞ ಇವರಿಬ್ಬರಲ್ಲಿ ಯಾರು ಬೇಕಾಗಿರುವುದು? ಹೀಗೆ ಅನೇಕ ಪ್ರಶ್ನೆಗಳು ನಿಮ್ಮನ್ನು ಕಾಡಿರಬಹುದು. ಒಂದು ಚಿತ್ರದ ರೂಪುಗೊಳ್ಳುವಿಕೆಯಲ್ಲಿ ಅತಿ ಮಹತ್ವದ ಅನೇಕ ಹುದ್ದೆಗಳಲ್ಲಿ ಸಂಕಲನಕಾರನದ್ದೂ ಒಂದು. ಈ ಬಾರಿ ಸಂಕಲನಕಾರನ ಕೆಲಸ, ಕಾರ್ಯಗಳ ಕುರಿತಾಗಿ ಒಂದಿಷ್ಟು ಮಾತು.
ಕಥೆ, ಚಿತ್ರಕಥೆಗಳೆಲ್ಲಾ ಸಿದ್ಧವಾದ ಮೇಲೆ, ಸಿನೆಮಾ ಚಿತ್ರೀಕರಣದ ಹಂತಕ್ಕೆ ಬರುತ್ತದೆ. ಅಲ್ಲಿ ಚಿತ್ರೀಕರಣದ ಅನುಕೂಲಕ್ಕೆ ತಕ್ಕಂತೆ, ಹಣ, ಸಮಯ, ಶ್ರಮದ ಉಳಿತಾಯಕ್ಕಾಗಿ ಚಿತ್ರಕಥೆಯ ಭಿನ್ನ ಭಿನ್ನ ಭಾಗಗಳನ್ನು ಅವುಗಳ ಕಾಲಕ್ರಮಣಿಕೆಗೆ ವ್ಯತಿರಿಕ್ತವಾಗಿ ಚಿತ್ರೀಕರಿಸಿಕೊಳ್ಳಲಾಗುತ್ತದೆ. ಇಡೀ ಚಿತ್ರದ ಅನೇಕ ಬಿಡಿ ಭಾಗಗಳನ್ನು ಹೀಗೆ ಚಿತ್ರೀಕರಿಸಿಕೊಳ್ಳಲಾಗುತ್ತದೆ. ಪ್ರತಿಯೊಂದು ಶಾಟ್ ಚಿತ್ರೀಕರಿಸಿಕೊಳ್ಳುವಾಗಲೂ ಅದು ಯಾವ ದೃಶ್ಯದ ಯಾವ ಶಾಟ್, ದಿನವೇ ರಾತ್ರಿಯೇ, ಇತ್ಯಾದಿ ವಿವರಗಳನ್ನು ಬರೆದಿರುವ ಕ್ಲಾಪ್ ಕೂಡಾ ಚಿತ್ರೀಕರಿಸಿಕೊಳ್ಳಲಾಗುತ್ತದೆ. ಇದನ್ನು ನೀವು ಗಮನಿಸಿಯೇ ಇರುತ್ತೀರಿ. ಹೀಗೆ ಒಟ್ಟಿನಲ್ಲಿ ಇಡೀ ಚಿತ್ರವನ್ನು ಚಿತ್ರೀಕರಿಸಿ, ಅದನ್ನು ಸಂಸ್ಕರಣೆ ಮಾಡಿಯಾದಾಗ ಒಂದು ಗೊಂದಲಮಯ ದೈತ್ಯ ರಾಶಿಯಾಗಿ ಚಿತ್ರೀಕರಿಸಲ್ಪಟ್ಟ ಒಟ್ಟು ಶಾಟ್ಸ್ ತಯಾರಿರುತ್ತವೆ. ಅವುಗಳೆಲ್ಲವೂ ಭಿನ್ನ ಭಿನ್ನ ಡಬ್ಬಿಗಳಲ್ಲಿ ಅಡಗಿದ್ದು ಸರಿಯಾದ ಜೋಡಣೆಗೆ ಸಿದ್ಧವಿರುತ್ತವೆ. ಇನ್ನು ಆರಂಭವಾಗುವುದೇ ಇವೆಲ್ಲವನ್ನೂ ಜೋಡಿಸಿ, ನಿರ್ದೇಶಕನ ಮನಸ್ಸಿನಲ್ಲಿ ಮೂಡಿದ್ದ ಚಿತ್ರಕ್ಕೆ ಹತ್ತಿರದ ಒಂದು ಜೋಡಣೆಯನ್ನು ಮಾಡುವ ಕೆಲಸ. ಅದು ಸಂಕಲನಕಾರನ ಕೆಲಸ.
ಹಾಗಾದರೆ, ಸಂಕಲನಕಾರ ಕೇವಲ ನಿರ್ದೇಶಕನ ಮನಸ್ಸಿನನುಸಾರ ಕೆಲಸ ಮಾಡುವ ತಂತ್ರಜ್ಞನೇ? ಅಲ್ಲ. ಚಿತ್ರೀಕರಣ ಮಾಡುವಾಗ ಹೇಗೆ ಕ್ಯಾಮರಾಮನ್ ಸಹಾಯದಲ್ಲಿ ನಿರ್ದೇಶಕ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿರುತ್ತಾನೋ, ಹಾಗೇ ಸಂಕಲನಕಾರ ತನ್ನೆದುರಿನಲ್ಲಿರುವ ಅಗಾಧ ಶಾಟ್ಸ್ ಸರಣಿಯನ್ನು ನೋಡಿಕೊಂಡು, ಕೇವಲ ಅದನ್ನೇ ಆಧರಿಸಿಕೊಂಡು ಒಂದು ಕಥೆಯನ್ನು ಹೇಳುವ ಪ್ರಯತ್ನವನ್ನು ಮಾಡುತ್ತಿರುತ್ತಾನೆ. ಹೀಗೆ ತನ್ನ ಕೈಸೇರಿದ ಶಾಟ್ಸಗಳನ್ನೇ ಬಳಸಿಕೊಂಡು ಒಂದು ಕಥೆಯನ್ನು ಇಡಿಯಾಗಿ ಹೇಳುವ ಪ್ರಯತ್ನವನ್ನು ಸಂಕಲನಕಾರ ಮಾಡಬೇಕಾಗಿರುತ್ತದೆ. ಇಲ್ಲಿ ಅವನೊಳಗಿನ ಉತ್ತಮ, ಸೃಜನಶೀಲ ಕಥೆಗಾರ, ಪರಿಣತ ತಂತ್ರಜ್ಞ ಈ ಎರಡೂ ಮಗ್ಗುಲುಗಳು ಕೆಲಸ ಮಾಡಬೇಕಾಗುತ್ತವೆ.
ಚಿತ್ರೀಕರಣದ ಸಂದರ್ಭದಲ್ಲಿ ಬಿಸಿಲು, ಮಳೆ ಚಳಿಗಳನ್ನೆದುರಿಸುತ್ತಾ, ಕ್ಷಣ ಕ್ಷಣಕ್ಕೂ ಎದುರಾಗುತ್ತಿರುವ ಸಮಸ್ಯೆಗಳನ್ನು ಎದುರಿಸುತ್ತಾ ಚಿತ್ರ ತಂಡವು ಚಿತ್ರೀಕರಿಸಿ ತರುವ ದ್ರವ್ಯವನ್ನು, ಹವಾನಿಯಂತ್ರಿತ ಕೋಣೆಯೊಳಗಡೆಯೇ ಕುಳಿತು, ಕೇವಲ ಪ್ರೇಕ್ಷಕನಂತೆ ವೀಕ್ಷಿಸುತ್ತಾ, ಅದರಲ್ಲೇ ಒಂದು ಕಥೆಯನ್ನು ಕಾಣುವುದು, ಕಟ್ಟುವುದು ನಿಜಕ್ಕೂ ಒಂದು ಅನುಭವವೇ ಸರಿ. ಚಿತ್ರೀಕರಣಕ್ಕೆ ಹೋದ ತಂಡ ಅನೇಕ ಬಾರಿ ಅನೇಕ ಶಾಟ್ಸ್ ಬಗ್ಗೆ ಅತಿಯಾದ ವ್ಯಾಮೋಹವನ್ನೇ ಹೊಂದಿದ್ದರೂ, ಚಿತ್ರದ ಒಟ್ಟಂದದಲ್ಲಿ ಅದು ಸೇರಿಕೆಯಾಗುವುದಿಲ್ಲ ಎನಿಸಿದರೆ ಅದನ್ನು ಕಿತ್ತೊಗೆಯುವ ಮಾನಸಿಕ ಸಿದ್ಧತೆ ಸಂಕಲನಕಾರನಿಗಿರಬೇಕಾಗುತ್ತದೆ. ಹೀಗೆ ನಿರ್ದೇಶಕನ ವಸ್ತು ನಿಷ್ಟ ಮನಸಾಗಿ, ಸಂಕಲನಕಾರ ಚಿತ್ರತಂಡದಲ್ಲಿ ಶಾಮೀಲಾಗುತ್ತಾನೆ.