ಚಿತ್ರ ಶಾಲೆಯಲ್ಲಿ ಮೊದಲ ದಿನ ನಾನು ಎದುರಿಸಿದ್ದು ನಿರ್ದೇಶನ ತರಗತಿಯನ್ನು. ಬೆಳಗ್ಗೆ ಪೆನ್ನು ಪುಸ್ತಕ ಹಿಡಿದು ಕ್ಲಾಸಿಗೆ ಹೋದೆವು. ಆದರೆ ಅಚ್ಚರಿ ಕಾದಿತ್ತು ನಮಗೆ! ತರಗತಿಯ ಹೊರಗೆ ಒಂದು ವ್ಯಾನ್ ಕಾದಿತ್ತು ನಮ್ಮ ಹತ್ತು ಜನರ ತರಗತಿಗಾಗಿ. ಅದರಲ್ಲಿ ಹತ್ತಿದರೆ, ಅದು ನೇರ ನಮ್ಮನ್ನು ಪೂನದ ಮಂಡೈಗೆ (ಮಾರುಕಟ್ಟೆ) ಕರೆದುಕೊಂಡು ಹೋಯಿತು! ಇದೇನಪ್ಪಾ ಇಲ್ಲಿಗೆ ಎಂದು ಯೋಚಿಸಿದರೆ, ನಮ್ಮ ನಿರ್ದೇಶನ ಉಪನ್ಯಾಸಕ, ಚೌದ್ರಿ ಹೇಳಿದ್ದು ಇಷ್ಟು: “ನಿರ್ದೇಶಕನಿಗೆ ಇತರರನ್ನು ಗಮನಿಸುವ, ಅಲ್ಲಿನ ಕಥೆಗಳನ್ನು ಗ್ರಹಿಸುವ ಶಕ್ತಿ ಬೇಕು. ಅದಕ್ಕೆ ಇಲ್ಲಿಗೆ ಕರೆದುಕೊಂಡು ಬಂದಿರುವುದು. ಇಲ್ಲಿ ಮಧ್ಯಾಹ್ನದವರೆಗೆ ಇರಿ. ನೋಡಿ ಜನಗಳನ್ನು, ಜಾನುವಾರುಗಳನ್ನು, ಕೊಳ್ಳುವ – ಮಾರುವವರನ್ನು. ಗಮನಿಸಿ ಅವರನ್ನು, ಅಲ್ಲಿನ ಕಥೆಗಳನ್ನು. ಮರಳಿ ಬಂದು ಈ ಕುರಿತು ಬರೆಯಬೇಕು ನೀವು ಇದರ ಬಗ್ಗೆ”
ಇದೇನಪ್ಪಾ, ಕ್ಲಾಸ್ ಪಿಕ್ನಿಕ್ ಕರೆದುಕೊಂಡು ಹೋಗಿ ಪ್ರಬಂಧ ಬರೆಸುತ್ತಾರೆ ಎಂದುಕೊಂಡೆವು ನಾವು. ಆದರೆ ಮಧ್ಯಾಹ್ನದವರೆಗೆ ಬೇರೆ ಕೆಲಸ ಇರಲಿಲ್ಲ. ಸುಮ್ಮನೆ ಮಾರುಕಟ್ಟೆಯ ಒಂದೊಂದು ಮೂಲೆಯಲ್ಲಿ ಹರಡಿ ಹೋದೆವು ನಾವು ಹತ್ತು ಜನ. ಅಲ್ಲಿ ಎಲ್ಲೋ ಯಾರೋ ಏನೋ ಕೊಳ್ಳುತ್ತಿದ್ದಾರೆ, ಇನ್ನೆಲ್ಲೋ ಮತ್ತಿನ್ಯಾರೊಂದಿಗೋ ಮಾತನಾಡುತ್ತಾ ನಿಂತಿದ್ದಾರೆ ಹೀಗೆ ಮೇಲಿಂದ ಮೇಲೆ ನೋಡುತ್ತಾ ಸಾಗಿದ್ದ ದೃಷ್ಟಿಗೆ ನಿಧಾನಕ್ಕೆ ಒಂದು ಹೊಸ ಪ್ರಪಂಚ ತೆರೆಯುತ್ತಾ ಹೋಯಿತು. ಕಾಲ ಸರಿದಂತೆ, ನಮ್ಮ ಕಣ್ಣುಗಳು, ಸುತ್ತಲೂ ಚೆಲ್ಲಿರುವ ಅಸಂಖ್ಯ ಅಜ್ಞಾತ ಮುಖಗಳಲ್ಲಿ, ಅಜ್ಞಾತ ವ್ಯವಹಾರಗಳಲ್ಲಿ ಒಂದು ಸೂತ್ರವನ್ನು ಹೆಣೆಯಲಾರಂಭಿಸಿತು, ಕಥೆಗಳು ಹುಟ್ಟಲಾರಂಭಿಸಿತು. ತರಕಾರಿ ಮಾರುವ ಹೆಂಗಸು ಕುಳಿತಿದ್ದ ಕಟ್ಟೆಯ ಕೆಳಗೆ ಸಣ್ಣ ಗೂಡಿನಂಥಾ ವ್ಯವಸ್ಥೆಯಲ್ಲಿ ಆಕೆಯ ಮಗು ಮಲಗಿರುವುದು ಕಾಣುತ್ತಿತ್ತು. ಆ ಗೂಡಿನ ಬಾಗಿಲು ಸ್ವಲ್ಪ ತೆರೆಯುತ್ತಿದ್ದಂತೆಯೇ, ಅದರೊಳಗೆ ಒಂದು ಪುಟಾಣಿ ಟಿ.ವಿಯಲ್ಲಿ ಕ್ರಿಕೆಟ್ ಪ್ರಸಾರವಾಗುತ್ತಿತ್ತು! ಹೋ! ಈ ಪೆಟ್ಟಿಗೆಯೇ ಈ ಹೆಂಗಸಿನ ಸಂಸಾರ ಸಾಗುವ ಸ್ಥಳ ಎಂದು ತಿಳಿದು ಅಚ್ಚರಿಯಾಯಿತು. ಆ ಹೆಂಗಸನ್ನು ಮಾತನಾಡಿಸುವ ಮನಸ್ಸಾಯಿತು.
ಆಕೆಯೊಡನೆ ಮಾತನಾಡುತ್ತಾ ಹೊಸದೊಂದು ಪ್ರಪಂಚ ಎದುರಾಯಿತು. ಆಕೆಯ ಗಂಡ ಒಂದು ರಾತ್ರಿ ಇದ್ದಕ್ಕಿದ್ದಂತೆ ಕಾಣೆಯಾಗಿ ಬಿಟ್ಟಿದ್ದ. ಹುಡುಕುವ ಪ್ರಯತ್ನಗಳೆಲ್ಲಾ ವಿಫಲ. ಇಂದಿಗೂ ಆಕೆಗೆ ಆತನೆಲ್ಲಿ ಎಂದು ತಿಳಿದಿರಲಿಲ್ಲ. ಈ ಪೆಟ್ಟಿಗೆಯೇ ಮನೆ ಆಕೆಗೆ! ಮಗುವನ್ನು ಸಾಕುತ್ತಾ, ಆ ಪೆಟ್ಟಿಗೆಯಲ್ಲೇ ಟಿ.ವಿ ಕನೆಕ್ಷನ್ ಇಟ್ಟುಕೊಳ್ಳುವಲ್ಲಿಯವರೆಗೆ ಜೀವನವನ್ನು ಹಸನಾಗಿಸಿಬಿಟ್ಟಿದ್ದಳು ಆ ಮಹಾತಾಯಿ. ಆಕೆಗೆ ಡೈರಿ ಬರೆಯುವ ಅಭ್ಯಾಸ ಇತ್ತು! ಆಕೆ ಇದ್ದ ಪರಿಸ್ಥಿತಿಗೆ ಡೈರಿ ಬರೆಯುವುದು ಅಚ್ಚರಿಯ ವಿಷಯವೇ ಆಗಿತ್ತು ನನಗೆ. ಅನೇಕ ಬಾರಿ ಚಿತ್ರ ಕಥೆ ಬರೆಯುವ ಸಂದರ್ಭದಲ್ಲಿ ಒಂದು ನಿರ್ದಿಷ್ಟ ಪಾತ್ರ ಹೀಗೆ ವರ್ತಿಸಲಾರದು ಎಂದು ಅನಿಸುತ್ತದೆ. ಆದರೆ ನಿಜ ಜೀವನದಲ್ಲಿ ಪಾತ್ರಗಳು ಅನೇಕ ಬಾರಿ ಅನಿರೀಕ್ಷಿತವಾಗಿ ಭಿನ್ನವಾಗಿ ವರ್ತಿಸುತ್ತವೆ ಅಲ್ಲವೇ?
ನಾನು ಚಿತ್ರ ಶಾಲೆ ಸೇರಿ ಎರಡು ವರ್ಷಗಳ ನಂತರ ಒಬ್ಬ ಹಿರಿಯ ಕ್ಯಾಮರಾಮ್ಯಾನನ್ನು ಭೇಟಿಯಾಗುವ ಸಂದರ್ಭ ದೊರೆಯಿತು. ಆ ವ್ಯಕ್ತಿ ತಮ್ಮ ಅರುವತ್ತನೇ ವಯಸ್ಸಿನಲ್ಲಿ ಚಿತ್ರಗಳಿಗೆ ಕೆಲಸ ಮಾಡಲು ಆರಂಭಿಸಿ ಎಂಭತ್ತರೊಳಗೆ ಮೂರು ಆಸ್ಕರ್ ಪಡೆದಿದ್ದರು! ನಾವು ವಿದ್ಯಾರ್ಥಿಗಳು, “ಸರ್, ನಮಗೆ ನಿಮ್ಮ ಸಲಹೆ…?” ಎಂದು ಕೇಳಿದ್ದೆವು. ಅವರು ನಮ್ಮ ಎಳಸು ಮುಖಗಳನ್ನು ನೋಡಿ, ಇಷ್ಟು ಬೇಗ ಸಿನೆಮಾ ಮಾಡುತ್ತೀರಾ? ಕನಿಷ್ಟ ಐವತ್ತರವರೆಗೆ ಬದುಕನ್ನು ಗಮನಿಸಿ, ಏನೂ ಮಾಡಬೇಡಿ. ಬೆಳಕನ್ನು ಅನುಭವಿಸಿ, ಪರಿಸರದಿಂದ ಪ್ರೇರಿತರಾಗಿ ಆಗ ಏನೋ ಒಂದು ಸಣ್ಣ ಕೆಲಸ ಮಾಡಲು ಸಾಧ್ಯ ಎಂದರು! ಇದೇ ಪಾಠವನ್ನು ನಮ್ಮ ಚಿತ್ರ ಶಾಲೆ ಇನ್ನೊಂದು ರೀತಿಯಲ್ಲಿ ನಮಗೆ ಮೊದಲ ದಿನವೇ ಪರಿಚಯಿಸಿತ್ತು!
ಮಧ್ಯಾಹ್ನದವರೆಗೆ ಈ ರೀತಿ ಬದುಕಿನಿಂದ ಪ್ರೇರಿತರಾಗುವ ಪ್ರಯತ್ನ ಮಾಡಿ ಶಾಲೆಗೆ ಮರಳಿದಾಗ ಮನಸ್ಸು ಒಂಥರಾ ಭಾರವಾಗಿತ್ತು. ನಮ್ಮಸುತ್ತಮುತ್ತ ಇಷ್ಟೆಲ್ಲಾ ಸೂಚನೆಗಳು, ದೃಶ್ಯಗಳು ಇವೆ. ಇವಲ್ಲೆಲ್ಲಾ ಒಂದು ಕಥೆ ಇದೆ, ವಿಷಯವಿದೆ. ಇದನ್ನೆಲ್ಲಾ ತಿರಸ್ಕರಿಸುತ್ತಾ ಹೇಗೆ ಬದುಕುತ್ತಿದ್ದೇವೆ, ಇವುಗಳಿಂದೆಲ್ಲಾ ಹೇಗೆ ನಾವು ಪ್ರೇರಿತರಾಗಬಹುದು ಎಂದು ರೋಮಾಂಚನವಾಗಿತ್ತು ನಮಗೆ ಅಂದು. ಇಂದು ಸಿನೆಮಾ ಮಾಡುವಾಗ, ಅಥವಾ ಅದಕ್ಕೆ ಬರೆಯುವಾಗ ಹೆಚ್ಚಿನ ಬಾರಿ ಮಾರುಕಟ್ಟೆಯಲ್ಲಿ ಪ್ರಸ್ತುತವಾಗುವಂಥಾ ಸರಕು, ಜನಕ್ಕೆ ಹಿಡಿಸಲೆಂದು ಮಾಡುವ ಪ್ರಯತ್ನಗಳು, ನಿರ್ಮಾಪಕರ ಇಚ್ಛೆಗಳು, ಮಿತ್ರರ ಬೇಡಿಕೆಗಳು, ಹಣಕಾಸಿನ ವಹಿವಾಟು ಇತ್ಯಾದಿ ಒತ್ತಡಗಳ ನಡುವೆ ಬದುಕು ಕಾಣೆಯಾಗಿಬಿಟ್ಟು ಅದರಿಂದ ಪ್ರೇರಿತನಾಗುವ ಅವಕಾಶದಿಂದ ವಂಚಿತನಾಗುತ್ತೇನೆಯೋ ಎಂಬ ಭಯ ಸದಾ ಕಾಡುತ್ತದೆ ನನಗೆ. ಆದರೆ ಈ ಮಾಧ್ಯಮದ ಕ್ರಮವೇ ಹಾಗೆ! ಏನು ಮಾಡಲಾಗುತ್ತೆ ಹೇಳಿ.