ಕಳೆದ ಬಾರಿ ವೇದಿಕೆಯ ಮೇಲೆ ನಡೆಯುವ ಪ್ರದರ್ಶನವನ್ನು ದಾಖಲಿಸುವ ಕುರಿತಾಗಿ ಬರೆದಾಗ ಬಹಳಷ್ಟು ಪ್ರತಿಕ್ರಿಯೆ ಬಂದು ಒಳ್ಳೆಯ ಚರ್ಚೆ ನಡೆಯಿತು. ಅದೇ ಸಂತೋಷದಲ್ಲಿ, ಮತ್ತೊಂದಷ್ಟು ಮಾತು ಮುಂದುವರೆಸೋಣವೇ? ವೇದಿಕೆಯ ಮೇಲೆ ನಡೆಯುವ ಕಾರ್ಯಕ್ರಮವನ್ನು ರಂಗ ಮಂದಿರದಲ್ಲಿ ಕುಳಿತಿರುವ ಪ್ರೇಕ್ಷಕ ಒಂದೇ ಸ್ಥಾನದಿಂದ ನೋಡುತ್ತಾನೆ. ಅಲ್ಲಿ ಅವನು ತನ್ನ ಕಣ್ಣುಗಳ ಸಾಮರ್ಥ್ಯವನ್ನೇ ಬಳಸಿ ಕ್ಲೋಸಪ್, ಮಿಡ್ ಶಾಟ್ ಇತ್ಯಾದಿಗಳನ್ನು ಕಂಪೋಸ್ ಮಾಡಿಕೊಳ್ಳುತ್ತಾ ಪ್ರದರ್ಶನವನ್ನು ಅನುಭವಿಸುತ್ತಾನೆಯಷ್ಟೇ? ಇದೇ ಹಿನ್ನೆಲೆಯಲ್ಲಿ ದಾಖಲೀಕರಣದ ಸಂದರ್ಭದಲ್ಲಿ, ನನ್ನ ಕ್ಯಾಮರಾ ಕಣ್ಣೂ ಒಂದೇ ಕಡೆ ಕುಳಿತು ಭಿನ್ನ ಶಾಟುಗಳನ್ನು ಸೆರೆ ಹಿಡಿದು ಅದನ್ನು ಸಂಕಲಿಸಿ ಕೊಡಬೇಕು ಎಂದು ನಾನು ಅಂದುಕೊಂಡಿದ್ದೇನೆ. ಇನ್ನು ಮುಂದೆ ಮಾತನಾಡೋಣ. ರಂಗದ ಮೇಲಿನ ಬೆಳಕಿನ ಕುರಿತಾಗಿ ಒಂದಿಷ್ಟು ಮಾತುಗಳು.
ಹಿರಿಯ ಯಕ್ಷಗಾನ ಪಂಡಿತರಾಗಿರುವ ರಾಘವ ನಂಬಿಯಾರ್ ಅವರು ಒಮ್ಮೆ ಒಂದು ನಿಜ ಘಟನೆಯನ್ನು ಉಲ್ಲೇಖಿಸಿದ್ದರು. ಹಿರಿಯಡ್ಕ ಗೋಪಾಲ ರಾಯರ ಅನುಭವ ಅದು ಎಂದು ಅವರು ಹೇಳಿದ ಅಸ್ಪಷ್ಟ ನೆನಪು ನನಗೆ. ಘಟನೆ ಏನಪ್ಪಾ ಅಂದರೆ, ಬಹಳ ವರುಷಗಳ ಹಿಂದೆ ಆಗಿನ್ನೂ ದೊಂದಿ ಬೆಳಕಲ್ಲೇ ಯಕ್ಷಗಾನ ಆಡುತ್ತಿದ್ದ ಸಂದರ್ಭದಲ್ಲಿ, ಈ ಹಿರಿಯ ಯಕ್ಷಗಾನ ಕಲಾವಿದ ಕೆಲಸ ಮಾಡುತ್ತಿದ್ದ ಮೇಳವನ್ನು ಓರ್ವ ಹಳ್ಳಿಯಿಂದ ಹಳ್ಳಿಗೆ ಹಿಂಬಾಲಿಸುತ್ತಾ ಬರುತ್ತಿದ್ದನಂತೆ. ರಾತ್ರಿಯಿಡೀ ಆಟ (ಯಕ್ಷಗಾನ ಪ್ರದರ್ಶನ) ನೋಡುವುದು ಮತ್ತೆ ದಿನವಿಡೀ ಮಂಗ ಮಾಯ ಆ ವ್ಯಕ್ತಿ. ಅನೇಕ ದಿನ ಇದನ್ನು ಗಮನಿಸಿದ ಕಲಾವಿದರು ಅವನನ್ನೊಮ್ಮೆ ಕರೆದು ಕೇಳಿದರಂತೆ, ಏನಯ್ಯಾ..? ದಿನವೂ ಆಟಕ್ಕೆ ಬರುತ್ತೀಯಲ್ಲಾ? ಏನು ನಿನ್ನ ಹಿನ್ನೆಲೆ? ಹೀಗೆ ದಿನವೂ ಆಟ ನೋಡುವುದರ ಕಾರಣವೇನು ಇತ್ಯಾದಿ ಅವನನ್ನು ಪ್ರೀತಿಯಿಂದ ವಿಚಾರಿಸಿದರಂತೆ, ಆಗ ಆ ವ್ಯಕ್ತಿ, ಇಲ್ಲಾ ಸ್ವಾಮಿ, ನನ್ನ ಕಣ್ಣು ನಿಧಾನಕ್ಕೆ ಕುರುಡಾಗುತ್ತಾ ಸಾಗುತ್ತಿದೆ, ಅದಕ್ಕೆ ರಾತ್ರಿ ಹೊತ್ತಿನಲ್ಲಿ ದೊಂದಿ ಬೆಳಕಲ್ಲಿ ನಡೆಯುವ ಆಟವನ್ನೇ ದಿಟ್ಟಿಸಿ ನೋಡುವುದು ಪರಿಹಾರವಾಗಬಲ್ಲುದು ಎಂದು ವೈದ್ಯರು ಹೇಳಿದ್ದಾರೆ, ನನಗೀಗಾಗಲೇ ಸಾಕಷ್ಟು ಗುಣಮುಖನೂ ಆಗಿದ್ದೇನೆ ಎಂದನಂತೆ! ಇಂದಿನ ವಿವೇಚನಾರಹಿತ ಬೆಳಕಿನ ಧಾಳಿಯಲ್ಲಿ ನಡೆಯುತ್ತಿರುವ ಯಕ್ಷಗಾನ ಪ್ರದರ್ಶನದ ಸಂದರ್ಭದಲ್ಲಿ ರಂಗದ ಮೇಲಿನ ಬೆಳಕಿನ ಪ್ರಾಧಾನ್ಯತೆಯ ಕುರಿತಾಗಿ ನಾನು ಎಂದೂ ಮರೆಯದ ಮಾತಿದು.
ಒಂದಷ್ಟು ಕಾಲ ಹಿಂದೆ, ಕರ್ಕಿಯಲ್ಲಿ ಹಿರಿಯ ಕಲಾವಿದರ ಪ್ರದರ್ಶನದ ದಾಖಲೀಕರಣ ಮಾಡುತ್ತಿದ್ದೆ. ಆ ಹಿರಿಯ ಕಲಾವಿದರಿಗೆ ಆಗೀಗ ವಿಶ್ರಾಂತಿ ಬೇಕಾಗುತ್ತಿತ್ತು. ಆಗೆಲ್ಲಾ ಪ್ರದರ್ಶನಕ್ಕೆ ವಿರಾಮ ಕೊಟ್ಟು ಅವರು ಸುಧಾರಿಸಿಕೊಳ್ಳಲು ಕಾಯುತ್ತಿದ್ದೆವು. ರಾತ್ರಿ ಹೊತ್ತು, ಕರ್ಕಿಯಲ್ಲಿ ಒಂದು ಗುಡ್ಡದ ಮೇಲೆ, ಕತ್ತಲಲ್ಲಿ ಕುಳಿತಿದ್ದೆವು. ಅತ್ತಿತ್ತ ಹೋಗುವಾಗ ಇರಲಿ ಎಂದು ಸಣ್ಣ ಬೆಳಕಿನ ವ್ಯವಸ್ಥೆ ಮಾಡಿಕೊಂಡಿದ್ದೆವು ಅಷ್ಟೇ. ನಾನು ನನ್ನ ಕ್ಯಾಮರಾ, ಸೌಂಡು, ಲೈಟು ಎಂದು ಅತ್ತಿತ್ತ ಓಡಾಡುತ್ತಿರಬೇಕಾದರೆ, ಸಂಪೂರ್ಣ ವೇಷಧಾರಿಗಳಾಗಿ ಓರ್ವ ಕಲಾವಿದರು ನನ್ನ ಪಕ್ಕದಲ್ಲೇ ಹಾದು ಹೋದರು. ಆ ಮಬ್ಬು ಬೆಳಕಲ್ಲಿ, ಆ ವೇಷ ಒಂದು ಗಳಿಗೆ ನನ್ನಲ್ಲಿ ವಿಚಿತ್ರ ಭಾವನೆಯನ್ನು ಮೂಡಿಸಿತು. ಅದು ಮನುಷ್ಯ ಎಂದು ನಂಬಲು ಆ ಕ್ಷಣಕ್ಕೆ ಆಗಲೇ ಇಲ್ಲ ನನಗೆ. ಯಕ್ಷಗಾನದ ಮುಖವರ್ಣಿಕೆ, ವಸ್ತ್ರವಿನ್ಯಾಸ ಇತ್ಯಾದಿ ರೂಪಿತವಾಗಿರುವವು ಉರಿಯುವ ದೊಂದಿಯ ತೊನೆದಾಡುವ ಬೆಳಕಿಗೆ. ಅದರ ಹತ್ತು ಅಡಿ ಉದ್ದ ಹತ್ತು ಅಡಿ ಅಗಲದ ಕಿರಿದಾದ ವೇದಿಕೆಯೂ ಆ ಬೆಂಕಿಯ ಬೆಳಕಿನ ಹೆಚ್ಚಿನ ಬಳಕೆಗಾಗಿ ಯೋಜಿಸಲ್ಪಟ್ಟಿದೆ. ಇನ್ನು ವೇಷಗಳ ನಿಲುವು, ಚಲನೆ ಇವೆಲ್ಲವುಗಳಲ್ಲಿಯೂ ಈ ಬೆಳಕನ್ನೇ ಅನುಸರಿಸಿ ಇರುವ ತಂತ್ರಗಾರಿಕೆಯನ್ನು ನೋಡಿಯೇ ಅನುಭವಿಸಬೇಕು. ಒಬ್ಬ ಪಾತ್ರಧಾರಿ ಇನ್ನೊಬ್ಬನ ಮೇಲೆ ನೆರಳು ಚೆಲ್ಲದಂತೆ, ತನ್ನ ನೆರಳು ತನ್ನದೇ ಮುಖವನ್ನಡಗಿಸದಂತೆ, ಕಲಾವಿದರ ನಡಿಗೆ, ಅಭಿನಯ ಇವೆಲ್ಲವೂ ಒಂದು ಶಾಸ್ತ್ರವೇ ಸರಿ.
ಆದರೆ, ಕ್ರಮೇಣ ರಂಗ ಮಂಚದ ಮೇಲೆ ಬೆಳಕು ಬದಲಾಗುತ್ತಾ ಸಾಗಿತು. ಗ್ಯಾಸ್ ಲೈಟ್, ಟ್ಯೂಬ್ ಲೈಟ್ ಹೀಗೆ ಬದಲಾಗುತ್ತಾ ಸಾಗಿ, ಇಂದು ಚಗಮಗಿಸುವ ಎಲ್ಲವನ್ನೂ ಬಿಚ್ಚಿ ತೋರಿಸುವ ಪ್ರಖರ ಬೆಳಕಿನ ಆಕರಗಳನ್ನು ಯಕ್ಷಗಾನ ಪ್ರದರ್ಶನಕ್ಕೆ ಬಳಸಲಾಗುತ್ತಿದೆ. ಇಲ್ಲಿ ಹಳೆಯ ವೈಭವ ಮಾಯವಾಗಿದೆ. ಹೇಗೆ ಕತ್ತಲ ಕೋಣೆಯಲ್ಲಿ ಕುಳಿತು ಪರದೆಯ ಮೇಲಿನ ಬೆಳಕನ್ನೇ ನೋಡುತ್ತಾ ಚಿತ್ರಮಂದಿರದಲ್ಲಿ ಪ್ರೇಕ್ಷಕನೋರ್ವ ಮಂತ್ರ ಮುಗ್ಧನಾಗುತ್ತಾನೆಯೋ ಅಂತೆಯೇ ಹಿಂದೆ ಯಕ್ಷಗಾನ ಪ್ರೇಕ್ಷಕನೂ ದೊಂದಿ ಬೆಳಕಿನಲ್ಲಿ ಕುಣಿದಾಡುವ ಕಲಾವಿದರನ್ನು ಪರಲೋಕದ ಯಕ್ಷ-ಕಿನ್ನರರೊಡನೆ ಸಮೀಕರಿಸಿ ನೋಡುತ್ತಿದ್ದ ಎನ್ನಲಡ್ಡಿಯಿಲ್ಲ. ಆದರೆ ಇಂದಿನ ಪ್ರಖರ ಬೆಳಕಿನಲ್ಲಿ ಆ ಅವ್ಯಕ್ತ ಮಾಯವಾದದ್ದರಲ್ಲಿ ಸಂಶಯವಿಲ್ಲ.
ಆಧುನಿಕ ರಂಗ ಭೂಮಿಯ ಹಿನ್ನೆಲೆಯಲ್ಲಿ, ಸಿನೆಮಾ ಹಿನ್ನೆಲೆಯಲ್ಲಿ, ಬೆಳಕಿನ ಬಳಕೆಯ ಕುರಿತಾಗಿ ತಾವು ಏನು ಯೋಚಿಸುತ್ತೀರಿ? ಬೆಳಕಿನ ಸಾಧ್ಯತೆಯನ್ನು ನಾವು ಬಳಸುತ್ತಿರುವ ಕುರಿತಾಗಿ ತಮ್ಮ ಅಭಿಪ್ರಾಯ ಏನು? ಇತ್ಯಾದಿ ತಿಳಿಯಲು ಉತ್ಸುಕನಾಗಿದ್ದೇನೆ.
(ಚಿತ್ರ ಕೃಪೆ: ಮನೋಹರ ಉಪಾಧ್ಯ)