ಇವತ್ತು ಅದ್ಯಾವುದೋ ಚಿತ್ರಕಥೆಗಾಗಿ ರೊಮ್ಯಾಂಟಿಕ್ ದೃಶ್ಯವೊಂದನ್ನು ಯೋಚಿಸುತ್ತಿದ್ದೆ. ಆಗ ಸುಮಾರು ಐದು ವರುಷಗಳ ಹಿಂದಿನ ಒಂದು ಘಟನೆ ನೆನಪಿಗೆ ಬಂತು. ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳೋಣ ಎನಿಸಿತು. ಅದು ತ್ರಿಪುರಾದಲ್ಲಿ ಒಂದು ಚಿತ್ರೀಕರಣದಲ್ಲಿ ಇದ್ದಾಗ ಆದ ಘಟನೆ. ಡಿ.ಡಿ ನಾರ್ತ್ ಈಸ್ಟ್ ಗಾಗಿ ಒಂದು ದಾರವಾಹಿಯನ್ನು ಚಿತ್ರೀಕರಿಸಲಿಕ್ಕಾಗಿ ನಾನು, ಗೆಳೆಯ ವಿಕ್ರಮ್ ಹಾಗೂ ಅತಿರೇಕ್ ಜೊತೆಗೆ ಹೋಗಿದ್ದೆ. ನಾನು ನಿರ್ದೇಶನ ಮಾಡುತ್ತಿದ್ದೆ, ವಿಕ್ರಮ್ ಕ್ಯಾಮರಾ ಹಿಡಿದರೆ, ಅತಿರೇಕ್ ಧ್ವನಿ ಗ್ರಹಣದ ಕೆಲಸ ಮಾಡುತ್ತಿದ್ದ. ಆ ಕೆಲಸ ಅಷ್ಟೇನೂ ವಿಶೇಷವಾಗಿಲ್ಲದಿದ್ದರೂ ಆ ಅನುಭವವನ್ನು ಅನುಭವಿಸಲಿಕ್ಕಾಗಿಯೇ ನಾನು ಆ ಚಿತ್ರೀಕರಣವನ್ನು ಒಪ್ಪಿಕೊಂಡಿದ್ದೆ. ನಾನು ಹೇಳಲಿಕ್ಕೆ ಹೊರಟಿರುವುದು ಒಂದು ಸುಂದರ ಪ್ರೇಮ ಕಥೆ ಅಂದುಕೊಳ್ಳಬೇಡಿ. ಇದು ಒಂದು ವಿಚಿತ್ರ ಘಟನೆ ಅಷ್ಟೆ. ಪ್ರೇಮ ಇಲ್ಲಿ ಒಂದು ಭಾಗ ಮಾತ್ರ!
ನಾವು ತ್ರಿಪುರಾದಲ್ಲಿ ಚಿತ್ರೀಕರಣಕ್ಕೆ ಆಯ್ಕೆ ಮಾಡಿದ್ದ ಜಾಗ ಭಾರತದ ಕೊನೆಯ ಹಳ್ಳಿಯಾಗಿತ್ತು. ಅದರಲ್ಲೂ ವಿಕ್ರಂ, ಅತಿರೇಕ್ ಹಾಗೂ ನಾನು ವಾಸವಾಗಿದ್ದ ಸಣ್ಣ ಗುಡಿಸಲು ಭಾರತದ ಕೊನೆಯ ಗುಡಿಸಲಾಗಿತ್ತು! ನಮ್ಮ ಗುಡಿಸಲಿನಾಚೆಗೆ ಒಂದು ಕಣಿವೆ ಇತ್ತು. ಅದರ ನಂತರ ಬಾಂಗ್ಲಾದೇಶದ ಸೈನ್ಯದ ಗುಡಾರಗಳು ನಮಗೆ ಕಾಣಿಸುತ್ತಿದ್ದವು! ನಾವಿದ್ದ ಗುಡಿಸಲು ಸುಮಾರು ಹತ್ತು ಅಡಿ ಉದ್ದ ಅಗಲಗಳ ಮಣ್ಣಿನ ರಚನೆ. ಬಾಗಿಲಿನ ಹೆಸರಿಗೆ ಒಂದು ಬಿದಿರಿನ ಅಡ್ಡ ಮಾತ್ರ. ಬೀಗದ ಕಲ್ಪನೆ ಆ ಇಡೀ ಊರಿಗೇ ಇದ್ದಂತಿರಲಿಲ್ಲ! ಆದರೂ ಅಲ್ಲಿ ಕಮ್ಯೂನಿಸ್ಟ್ ಸರಕಾರದಾ ಕೃಪೆಯಿಂದಾಗಿ ವಿದ್ಯುತ್ ಸಂಪರ್ಕ ಇತ್ತು. ಸಂಪರ್ಕ ಇತ್ತು ಎಂದಾಕ್ಷಣ ವಿದ್ಯುತ್ ಇತ್ತು ಎಂದು ನೀವು ಭಾವಿಸುವುದು ಬೇಡ. ವಿದ್ಯುತ್ತಿನಿಂದಾಗಿ ಇಡೀ ಹಳ್ಳಿ ಟಿವಿ, ಡಿವಿಡಿ ಪಡೆದಿತ್ತು! ಕೇಬಲ್ ಟಿವಿ ಅಲ್ಲಿ ಇರಲಿಲ್ಲ! ಮತ್ತು ಡಿಟಿಎಚ್ ಗಳು ಆಗಿನ್ನೂ ಇಂದಿನಂತೆ ಬಂದಿರಲಿಲ್ಲ. ಇದರಿಂದಾಗಿ ಟಿವಿ ಇದ್ದರೂ ವಾರ್ತೆಗೆ ರೇಡಿಯೋವೇ ಗತಿಯಾಗಿತ್ತು. ಹೀಗೆ ವಿಚಿತ್ರವಾದ ಸನ್ನಿವೇಶದಲ್ಲಿದ್ದ ಹಳ್ಳಿ ಅದು. ಅಲ್ಲಿನ ನಿವಾಸಿಗಳು ಕೊಕ್ ಬರಾಕ್ ಎನ್ನುವ ಭಾಷೆಯಲ್ಲಿ ಮಾತನಾಡುವವರು. ಈ ಭಾಷೆ ಸಂವಿಧಾನದಲ್ಲಿ ಉಲ್ಲೇಖವಾಗಿರುವ ಭಾಷೆಗಳಲ್ಲಿ ಒಂದು. ಅಲ್ಲಿ ನಾವು ಕಳೆದ ಪ್ರತಿ ದಿನವೂ ಒಂದು ವಿಶೇಷವೇ ಆಗಿತ್ತು. (ಅಲ್ಲಿನ ಘಟನೆಗಳ ಕುರಿತ ವಿಸ್ತೃತ ಲೇಖನ ಇಲ್ಲಿ ಓದಿ) ಅಲ್ಲಿನ ಆದಿವಾಸಿಗಳು ನಮ್ಮನ್ನು ಮುಂಬೈನಿಂದ ಬಂದವರೆಂದು ವಿಶೇಷವಾಗಿ ಕಾಣುತ್ತಿದ್ದರು. ಸಾರ್ವಜನಿಕ ಬೋರ್ವೆಲ್ಲಿನಲ್ಲಿ ನಾವು ಸ್ನಾನಕ್ಕೆ ನಿಂತಿದ್ದರೆ ಸುತ್ತುಗಟ್ಟಿ ನಾವು ಸ್ನಾನ ಮಾಡುವುದನ್ನು ನೋಡಲು ಊರಿಗೆ ಊರೇ ಸೇರುತ್ತಿತ್ತು! ಹೀಗೆಲ್ಲಾ ತಮಾಷೆಗಳು ನಡೆಯುತ್ತಿರಲು ದಿನಗಳು ಹೋಗುತ್ತಿದ್ದುದೇ ಗೊತ್ತಾಗುತ್ತಿರಲಿಲ್ಲ.
ಚಿತ್ರೀಕರಣ ಆರಂಭವಾಗಿ ಕೆಲವೇ ದಿನಗಳಾಗಿತ್ತು. ಅದೊಂದು ದಿನ ಬೆಳಗ್ಗೆ ನನಗೆ ಅಕಸ್ಮತ್ತಾಗಿ ಉಳಿದಿಬ್ಬರಿಗಿಂತ ಬೇಗನೆ ಎಚ್ಚರವಾಯಿತು. ಕಣ್ಣು ಬಿಟ್ಟು ಎದ್ದು ಕುಳಿತೆ ಹಾಸಿಗೆಯಲ್ಲೇ. ಹಾಗೇ ಬೆಚ್ಚಿ ಬಿದ್ದೆ. ನನ್ನೆದುರು ದೈತ್ಯಾಕಾರದ ಮೂವರು ಹಳ್ಳಿಗರು ತೀಕ್ಷ್ಣವಾಗಿ ನನ್ನನ್ನೇ ನೋಡುತ್ತಾ ಕುಳಿತಿದ್ದರು! ಅವರ ಕೈಯಲ್ಲಿ ಉದ್ದದ ಮಚ್ಚುಗಳು (ಅದೇ ಸ್ವಾಮಿ… ನಮ್ಮ ಕನ್ನಡ ಚಿತ್ರಗಳಲ್ಲಿ ತೋರಿಸುತ್ತಾರಲ್ಲಾ ಲಾಂಗು… ಅದೇ!) ನಾನು ಎದ್ದುದನ್ನು ನೋಡುತ್ತಲೇ ಅವರಲ್ಲಿ ಒಬ್ಬ ಕೊಕ್ ಬರಾಕ್ ಭಾಷೆಯಲ್ಲಿ ಜೋರು ಜೋರಾಗಿ ಅದೇನೋ ಹೇಳಲಾರಂಭಿಸಿದ. ಅವನ ಕೈಯಲ್ಲಿದ್ದ ಕತ್ತಿಯನ್ನೂ ಅವನ ಹಾವಭವವನ್ನೂ ನೋಡಿ ನಾನು ನನ್ನ ಕಥೆ ಮುಗಿಯುತ್ತೆ ಇನ್ನು ಸ್ವಲ್ಪ ಹೊತ್ತಲ್ಲಿ ಅಂದು ಕೊಂಡು ಬೆವರಿದೆ. ಬಲಗೈಯಲ್ಲಿ ವಿಕ್ರಮ್ಮನ್ನೂ ಎಡಗೈಯಲ್ಲಿ ಅತಿರೇಕನ್ನೂ ಎಬ್ಬಿಸಿದೆ. ಅವರಿಬ್ಬರೂ ಇನ್ನೂ ನಿದ್ದೆಗಣ್ಣಲ್ಲೇ ಇದ್ದರು. ನನ್ನ ಕಣ್ಣಿನ ನಿದ್ದೆ ಸಂಪೂರ್ಣವಾಗಿ ಹಾರಿ ಹೋಗಿತ್ತು!
ಅಯ್ಯೋ! ಅದೇನೋ ನನಗೆ ಗೊತ್ತಾಗ್ತಾ ಇಲ್ಲ ನೀನೇ ನೋಡು ಎಂದು ಅತಿರೇಕ್ ಮತ್ತೆ ಮಲಗಿದ. ವಿಕ್ರಂ ಕುತೂಹಲದಿಂದ ಇಡೀ ಘಟನೆಯನ್ನು ನೋಡಲಾರಂಭಿಸಿದ. ನನ್ನೆದುರಿದ್ದವನು ಮಾತನಾಡುತ್ತಲೇ ಇದ್ದ. ಕತ್ತಿ ಮೇಲೆ ಕೆಳಗೆ ಹೋಗುತ್ತಲೇ ಇತ್ತು. ಅಷ್ಟರಲ್ಲಿ ನಮ್ಮ ಚಿತ್ರೀಕರಣ ತಂಡದಲ್ಲಿದ್ದವನೊಬ್ಬ ಬೆಳಗ್ಗಿನ ಚಹಾ ಕೊಡಲೆಂದು ನಮ್ಮ ಗುಡಿಸಲಿಗೆ ಬಂದ. ಅವನು ಅಲ್ಲಿಯವನೇ. ಅವನಿಗೆ ಹಿಂದಿಯೂ ಬರುತ್ತಿತ್ತು. ನಾನು ಬದುಕಿದೆ ಅಂದುಕೊಳ್ಳುತ್ತಾ, ಇವನೇನು ಹೇಳುತ್ತಿದ್ದಾನೆ ಎಂದು ಕೇಳಿದೆ. ಅವನು ವಿಚಾರಿಸಿ ನಗುತ್ತಾ ನನಗೆ ವಿವರಿಸಿದ.
ಬಂದಿದ್ದವರು ಆ ಹಳ್ಳಿಯ ಕೃಷಿಕ ಯುವಕರು. ಅವರಲ್ಲಿ ಮಾತನಾಡುತ್ತಿದ್ದವನು ಅದೆ ಹಳ್ಳಿಯ ಇನ್ನೊಬ್ಬ ಹುಡುಗಿಯನ್ನು ಪ್ರೀತಿಸುತ್ತಿದ್ದಾನಂತೆ. ಆದರೆ ಅವನ ಪ್ರೀತಿಯನ್ನು ಯಾರೂ ಗೌರವಿಸುತ್ತಿಲ್ಲ. ಅವರು ಪೇಟೆಯಲ್ಲಿ ಇರುವ ಹುಡುಗನನ್ನು ನೋಡಿ ಆಕೆಯನ್ನು ಮದುವೆ ಮಾಡಬೇಕೆಂದಿದ್ದಾರಂತೆ. ತಾನು ಕೃಷಿಕನಾಗಿದ್ದೇ ತಪ್ಪೇ? ನನಗೆ ಇಷ್ಟು ಜಮೀನಿದೆ, ನಾನು ಇಂಥಾ ಸಾಹಸಗಳನ್ನು ಮಾಡಿದ್ದೇನೆ ಇತ್ಯಾದಿಯಾವಿ ವಿವರಗಳನ್ನು ಆತ ನನಗೆ ಹೇಳುತ್ತಿದ್ದನಂತೆ. ನಾನು ಏನೂ ಅರ್ಥವಗದೆ ಮಿಕಮಿಕ ನೋಡುತ್ತಿದ್ದದ್ದನ್ನು ಆತ ಅವನ ಕುರಿತಾದ ಸಿಂಪಥಿ ಅಂದುಕೊಂಡನೋ ಗೊತ್ತಿಲ್ಲ! ಇಡೀ ಕಥೆಯನ್ನು ನನಗೆ ಹೇಳಿದ. ನಾನು ಆ ಹಳ್ಳಿಗೆ ಅಪರಿಚಿತ ನಾನು ಏನು ಮಾಡಬಹುದು ಎಂದು ಕೇಳಿದೆ. ಭಾಷಾಂತರ ಕೇಳಿಸಿಕೊಂಡ ಅವನು, ಇಲ್ಲ… ನೀವೇನೂ ಮಾಡುವುದು ಬೇಡ. ಸುಮ್ಮನೆ ಹೇಳಬೇಕು ಅನಿಸಿತು ಅದಕ್ಕೆ ಹೇಳಿದೆ ಎಂದು ವಿಶಾಲವಾಗಿ ನಕ್ಕ. ಉಳಿದವರೂ ಸೇರಿ ಎದ್ದು ಹೊರಗೆ ನಡೆದರು. ನಾನು ನೆಮ್ಮದಿಯ ನಿಟ್ಟುಸಿರಿಟ್ಟೆ.
ಮೊನ್ನೆ ರಿಕ್ಷಾದ ರಿಚರ್ಡ್ ನನ್ನನ್ನು ನೋಡಿ ತನ್ನ ಮಗನ ಕಥೆಯನ್ನು ಹೇಳಿದ್ದನ್ನು ಬರೆದಿದ್ದೆ. ಇದು ಅಂಥಾ ಇನ್ನೊಂದು ಘಟನೆ. ಒಮ್ಮೊಮ್ಮೆ ತ್ರಿಪುರಾದ ನೆನಪಾದಾಗಲೆಲ್ಲಾ ಆ ಯುವಕ ನೆನಪಾಗುತ್ತಾನೆ. ನೀಲಿ ವರ್ಣದ ಪಂಚೆ ಉಟ್ಟು ಬರೆ ಮೈಯಲ್ಲಿದ್ದ ಆ ಆದಿವಾಸಿ ಯುವಕನ ಹೆಸರೂ ನಾನು ಕೇಳಿರಲಿಲ್ಲ ಅಂದು. ನನ್ನನ್ನು ನೋಡಿ ತನ್ನ ಕಥೆಯನ್ನು ಹೇಳಿಕೊಂಡನಲ್ಲಾ… ಏನು ಅಂದುಕೊಂಡಿರಬಹುದು ಅವನು? ಈಗ ಏನಾಗಿರಬಹುದು ಅವನು? ಅವನ ಪ್ರಿಯತಮೆಯನ್ನೇ ಮದುವೆಯಾದನೇ?
ಪ್ರಶ್ನೆಗಳಿವೆ ನನ್ನಲ್ಲಿ ಇಂದೂ… ಅಂದಿನಂತೆಯೇ…
ನಿನ್ನೆ – ನಾಳೆಗಳ ನಡುವೆ ನಾನು
ಇಂದಿನಂತಲ್ಲ ನಾಳೆಯ ನಾನು
ಕಳೆದು ಹೋದ ನಿನ್ನೆಗಳಲ್ಲಿದ್ದವರು
ಎಲ್ಲಿ ಹೋದರು ಕಳೆದು? ಏನಾದರು ಅವರು?
ನಾಳೆಯೊಳಗೆ ಮತ್ತೆ ಕಂಡರೆ ಅವರ
ಕಂಡೇನೇ ಬೇರೆ – ಅವರ ನಾನು?
ಪ್ರಶ್ನೆಗಳಿವೆ ನನ್ನಲ್ಲಿ ಇಂದೂ… ಅಂದಿನಂತೆಯೇ…