manohara-upadhyaಅದೊಂದು ದಿನ ಹೀಗೆ ಮಂಗಳೂರಿಗೆ ಮನೆಯವರೊಂದಿಗಿರಲೆಂದು ಹೋಗಿದ್ದಾಗ ಹಿರಿಯ ಮಿತ್ರರೂ ತಜ್ಞ ಪಶುವೈದ್ಯರೂ ಯಕ್ಷಗಾನ ಇತ್ಯಾದಿ ಹತ್ತು ಹಲವು ಆಸಕ್ತಿಗಳನ್ನು ಹೊಂದಿರುವ ಮನೋಹರ ಉಪಾಧ್ಯರು ದೂರವಾಣಿಸಿದರು. ನೀವು ಬಿಡುವಾಗಿದ್ದರೆ ಒಂದು ಡಾಕ್ಯುಮೆಂಟೇಷನ್ ಮಾಡ್ಬಹುದಾ? ಎಂದು ಕೇಳಿದರು. ಮನೋಹರ ಉಪಾಧ್ಯರು ಇಂಥಾ ಕರೆ ಕೊಟ್ಟರೆಂದರೆ ಅದೇನೋ ವಿಶೇಷವಾದದ್ದೇ ಇರಬೇಕು ಅದನ್ನು ತಪ್ಪಿಸಬಾರದು ಎಂದು ಕೂಡಲೇ ಒಪ್ಪಿಕೊಂಡೆ. ಅಂದು ಅವರು ನನ್ನನ್ನು ನಾಯಿಯ ಶಸ್ತ್ರಚಿಕಿತ್ಸಾ ವಿಧಾನವೊಂದರ ದಾಖಲೀಕರಣಕ್ಕೆ ಕರೆದಿದ್ದರು. ಪಶುವೈದ್ಯಕೀಯದಲ್ಲಿ ಹೊಸ ವಿಧಾನವೊಂದನ್ನು ಅವರು ಕಂಡುಕೊಂಡಿದ್ದರು. ಇದನ್ನು ಅನೇಕರ ಉಪಯೋಗಕ್ಕೆ ಸಿಗುವಂತೆ ಮಾಡುವುದೇ ಅವರ ಉದ್ದೇಶ. ಇದರಿಂದ ನಾಯಿಗಳ ಆರೋಗ್ಯಕ್ಕೆ ಉಪಕಾರ ಮಾತ್ರವಲ್ಲ, ಪಶುವೈದ್ಯರಿಗೆ, ಪ್ರಾಣಿದಯಾ ಸಂಘಟನೆಗಳಿಗೆ ಇದೊಂದು ಉಪಯುಕ್ತ ಮಾಹಿತಿ ಹಾಗೂ ಅದನ್ನು ಅವರ ಬಳಿಗೆ ತಲುಪಿಸುವಂತೆ ಮಾಡುವ ಸದುದ್ದೇಶ ಉಪಾಧ್ಯರದ್ದು.

ನಾಯಿಗಳಿಗೆ ಗರ್ಭನಿರೋಧಕ ಶಸ್ತ್ರಚಿಕಿತ್ಸೆ ಮಾಡುವಾಗ ಹೊಟ್ಟೆಯ ಕೆಳಗಿನ ಭಾಗದಲ್ಲಿ ಕತ್ತರಿಸಿ ಮಾಡುವುದೇ ಈ ವಿಧಾನದ ವಿಶೇಷತೆಯಂತೆ. ಸಾಮಾನ್ಯವಾಗಿ ನಾಯಿಗೆ ಈ ಆಪರೇಷನ್ ಮಾಡಿದ ಮೇಲೆ ಅದು ದೇಹದಲ್ಲಿ ಉಂಟು ಮಾಡುವ ಕಿರಿ-ಕಿರಿಯಿಂದಾಗಿ ನಾಯಿ ಗಾಯದ ಜಾಗವನ್ನು ಮತ್ತೆ ಮತ್ತೆ ನೆಕ್ಕುತ್ತದೆ ಹಾಗೂ ಕಚ್ಚಿಕೊಳ್ಳುವ ಸಾಧ್ಯತೆಯೂ ಇರುತ್ತದಂತೆ. ಇದರಿಂದಾಗಿ ಗಾಯ ಮತ್ತೆ ತೆರೆದುಕೊಳ್ಳುವ ಇಲ್ಲವೇ ಗಾಯದ ಸ್ಥಳದಲ್ಲಿ ಇನ್ಫೆಕ್ಷನ್ ಉಂಟಾಗುವ ಸಂಭವ ಇರುತ್ತದೆ. ಮನೆಯಲ್ಲಿ ಸಾಕಿದ ನಾಯಿಗಳ ಕುರಿತಾಗಿ ಮಾಲಕರು ವಿಶೇಷ ಕಾಳಜಿವಹಿಸಿ ಗಾಯ ಮಾಯುವವರೆಗೆ ನೋಡಿಕೊಳ್ಳಬೇಕಾಗುತ್ತದೆ. ಅದು ಮಾಲಿಕರಿಗೆ ತಲೆನೋವಿನ ಕೆಲಸವೇ ಸರಿ. ಇನ್ನು ಸರಕಾರೇತರ ಸಂಸ್ಥೆಗಳು ರಸ್ತೆ ಬದಿಯ ನಾಯಿಗಳಿಗೆ ಈ ಶಸ್ತ್ರಚಿಕಿತ್ಸೆ ಮಾಡಿಸಿದರೆ, ಆಪರೇಶನ್ ನಂತರದ ಆರೈಕೆ ಕಷ್ಟ ಸಾಧ್ಯವೇ ಸರಿ. ಈ ಎಲ್ಲಾ ತಲೆನೋವುಗಳಿಗೆ ಪರಿಹಾರವಾಗಿ ಉಪಾಧ್ಯರು ಕಂಡುಕೊಂಡ ಈ ವಿಧಾನದಲ್ಲಿ ಅತ್ಯಂತ ಸುರಕ್ಷಿತ, ಸರಳ ಶಸ್ತ್ರಚಿಕಿತ್ಸೆ ಮಾಡಬಹುದಂತೆ. ಈ ವಿಧಾನದಲ್ಲಿ ಗಾಯದ ಜಾಗ ಹೊಟ್ಟೆಯ ಅಡಿಭಾಗದಲ್ಲಿ ಇರುವುದರಿಂದಾಗಿ ನಾಯಿಯ ಬಾಯಿಗೆ ಇದು ಸಿಗುವುದಿಲ್ಲ. ಅಲ್ಲದೇ ಗಾಯ ಒಣಗಿದಾಗ ಅದು ಕಾಣಿಸುವುದೂ ಇಲ್ಲ. ಇದರಿಂದ ಗಾಯ ಮಾಸಲು ಸುಲಭ ಹಾಗೂ ಸುರಕ್ಷಿತ ವಿಧಾನ ಇದಾಗಿದೆ.

ನಾನು ದಾಖಲಿಸಿದ ಈ ಶಸ್ತ್ರಚಿಕಿತ್ಸಾ ವಿಧಾನವನ್ನು ಪ್ರಾಣಿ ಪ್ರಿಯರಿಗೆ, ಪಶುವೈದ್ಯರಿಗೆ ಬಳಕೆಯಾಗಲಿ ಎಂಬ ಉದ್ದೇಶದಿಂದ ಇಲ್ಲಿ ಕೊಟ್ಟಿದ್ದೇನೆ. ಹೆಚ್ಚಿನ ವಿವರಗಳಿಗೆ ನೇರವಾಗಿ ಡಾ. ಉಪಾಧ್ಯರನ್ನು ಸಂಪರ್ಕಿಸುವ ವಿಳಾಸ, ದೂರವಾಣಿ ಸಂಖ್ಯೆಯೂ ವೀಡಿಯೋದ ಕೊನೆಯಲ್ಲಿದೆ. ಈ ವೀಡಿಯೋವನ್ನು ನೀವು ನೋಡಿ, ಇತರರಿಗೆ ತೋರಿಸಿರಿ. ಪ್ರಾಣಿಗಳ ಶಸ್ತ್ರಚಿಕಿತ್ಸೆ ಇನ್ನಷ್ಟು ಸುರಕ್ಷಿತವಾಗುವಲ್ಲಿ ಇದೊಂದು ಉತ್ತಮ ಹೆಜ್ಜೆಯಾಗಲಿ.

[youtube=https://in.youtube.com/watch?v=m_CTURfjmlI]

Share This