ಉಡುಪಿಯ ಬಳಿಯ ಸೈಂಟ್ ಮೇರೀಸ್ ದ್ವೀಪದಲ್ಲಿ ನಡೆದ ರೇವ್ ಪಾರ್ಟಿಯ ಕುರಿತಾಗಿ ಆಡಳಿತ ಪಕ್ಷದಿಂದ ಪ್ರವಾಸೋದ್ಯಮ, ಆರ್ಥಿಕ ಅಭಿವೃದ್ಧಿ ಎಂಬ ಹೆಸರಿನಲ್ಲಿ ಸಮರ್ಥನೆಗಳು ನಡೆದರೆ, ವಿರೋಧಪಕ್ಷಗಳಿಂದ ನೈತಿಕ ನೆಲೆಯಲ್ಲೂ ಸಾರ್ವಜನಿಕ ವಲಯದಲ್ಲಿ ಧಾರ್ಮಿಕ ನೆಲದ ಭಾವುಕ ಮೂಲದದಿಂದೆದ್ದ, ಇನ್ನೂ ಬಿಡಿಸಿ ಹೇಳುವುದಾದರೆ ಸಂಪ್ರದಾಯನಿಷ್ಠರ ವಿರೋಧವೂ ನಡೆದಿದೆ. ಇವೆರಡರಿಂದಲೂ ದೂರ ನಿಂತು ನೋಡುವಾಗ, ಇಲ್ಲಿ ಹಿನ್ನೆಲೆಗೆ ಬಿದ್ದ ಮುಖ್ಯ ವಿಚಾರ ಈ ದ್ವೀಪದ ನೈಜ ಸ್ವಾರಸ್ಯ. ಇಲ್ಲಿರುವ ಪ್ರಾಕೃತಿಕವಾಗಿ ರೂಪುಗೊಂಡ ಅಷ್ಟಭುಜಾಕೃತಿಯ ಶಿಲಾಸ್ತಂಭಗಳು ಶ್ರೀಕೃಷ್ಣ-ನಾಡಿನ  ಪುಣ್ಯಕ್ಕೂ ರೇವ್ ಪಾರ್ಟಿಯ ಪಾಪಕ್ಕೂ ಅತೀತವಾದ ಸತ್ಯ ಎನ್ನುವುದು ಎಲ್ಲ ಮರೆತಂತಿದೆ. 
ಎಂಭತ್ತರ ದಶಕದ ಕೊನೆಯ ಭಾಗದಲ್ಲಿ ವಿಶ್ವ-ಪ್ರವಾಸೋದ್ಯಮ ದಿನದ ಸಂದರ್ಭದಲ್ಲಿ ಮಂಗಳೂರಿನಲ್ಲಿ ಹಲವು ವೈಚಾರಿಕ ಉತ್ಸಾಹಿಗಳು ಸೇರಿ, ‘ಯಾನ’ ಹೆಸರಿನಲ್ಲಿ ಒಂದು ಪ್ರವಾಸೋದ್ಯಮದ ಹಾನಿಗಳ ಕುರಿತು ಪ್ರದರ್ಶನ ನಡೆಸಿದರು. ಸುಲಭ ದರ್ಶನದ ಪರಿಸರ ಹಾನಿಗಿಂತಲೂ ಸಾಮಾಜಿಕ ಜೀವನದಲ್ಲಿ ಉಂಟಾಗುವ ಏರುಪೇರುಗಳ ಕುರಿತಾಗಿ ಧ್ವನಿ ಎತ್ತಲಾಯಿತು. ಜಾಗೃತಿ ಮೂಡಿಸುವ ಕಾರ್ಯಾಗಾರ ಹಾಗೂ ಪ್ರತಿಭಟನಾ ಚಿತ್ರಪ್ರದರ್ಶನವೂ ನಡೆಯಿತು. ‘ಪಶ್ಚಿಮ ಘಟ್ಟ ಉಳಿಸಿ’ ಹೆಸರಿನ ಚಳವಳಿಯೂ (ಕೇರಳದಿಂದ ತೊಡಗಿ, ದಕ ಜಿಲ್ಲೆ ಹಾಯ್ದು, ಗುಜರಾತಿನಲ್ಲಿ ಕೊನೆಗೊಂಡ ಪರಿಸರ ಜಾಥಾ) ತನ್ನ ಮುಖ್ಯ ವಿಷಯಗಳಲ್ಲಿ ಪ್ರವಾಸೋದ್ಯಮದ ಜನಪ್ರಿಯ ಕಲ್ಪನೆಯ ವಿರುದ್ಧದ ದಿಟ್ಟ ನಡೆಯಾದದ್ದೂ ಗಮನಿಸಬೇಕು. ಜಗತ್ತಿನಾದ್ಯಂತ ಕೇಳಿಸಿ ಬರುವ ಇಂಥಾ ಕೂಗುಗಳನ್ನು ಕುಗ್ಗಿಸಲು ಎಂಬಂತೆ ಇಕೋ-ಟೂರಿಸಮ್ ಎನ್ನುತ್ತಾರೆ. ಪ್ರಕೃತಿಯೊಟ್ಟಿಗೆ ಸಹಬಾಳ್ವೆಯ ಸೋಗಲಾಡಿ ಹೆಸರಿನಲ್ಲಿ ‘ಸಕಲ ಸೌಕರ್ಯಗಳ’ ಪ್ರವಾಸೋದ್ಯಮ ನಡೆದೇ ಇದೆ. ಗೋವಾದಲ್ಲಿ ವಿದೇಶೀಯರು ಬಂದು ಅರೆಬತ್ತಲೆ ಪೂರ್ಣ ಬತ್ತಲೆಯಾಗಿ ತಿರುಗುವುದು, ಮಾದಕ ದ್ರವ್ಯ ವ್ಯವಹಾರ ಇತ್ಯಾದಿಗಳ ಬಗ್ಗೆ ವರದಿಗಳನ್ನು ನಾವೆಲ್ಲರೂ ಓದಿದವರೇ.

ಉಡುಪಿ ಭಾಗವೇ ಆದ ಸೈಂಟ್ ಮೇರಿದ್ವೀಪದಲ್ಲಿ ಸರಕಾರದ ಸಮ್ಮತಿಯಿಂದಲೇ ಒಂದು ಮನೋರಂಜನಾ ಕೂಟದ ಏರ್ಪಾಡಾಯಿತು. ಇದನ್ನು ಸರಕಾರ ಸಮರ್ಥಿಸಿತು. ವಿರುದ್ಧ ಪಕ್ಷದವರು ವಿರೋಧಿಸಿದರು. ಸ್ಥಳೀಯ ಜನರು ಕೃಷ್ಣನ ಭೂಮಿಯಲ್ಲಿ ಇಂಥದ್ದು ಬೇಡ ಎಂದರು. ಆದರೆ ಧಾರ್ಮಿಕ ಭಾವನೆಗಳಿಗೆ ಹೊರತಾಗಿಯೂ ನಾವು ನಮ್ಮ ಪ್ರವಾಸೋದ್ಯಮ ಧೋರಣೆಯನ್ನು ಪುನರ್ವಿಮರ್ಷಿಸುವುದು ಇಂದಿನ ತುರ್ತು ಅಗತ್ಯ. ಪ್ರವಾಸೋದ್ಯಮದ ಮೂಲಕ ನಮ್ಮ ಪ್ರಾಕೃತಿಕ ಸೌಂದರ್ಯವನ್ನು ಜಗತ್ತಿಗೆ ತೆರೆದಿಡುವ ಉದಾತ್ತ ನಿಲುವಿನ ಹಿಂದೆ, ವ್ಯಾವಹಾರಿಕ ವಾಸನೆ ದಟ್ಟವಾಗಿ ಇರುವುದನ್ನು ನಾವು ಗಮನಿಸಲೇ ಬೇಕು. ನೆಲ-ಜಲ-ವಾಯುಗಳೆಲ್ಲವನ್ನೂ ಅಡವಿಡುವ ವಿದೇಶೀ-ವಿನಿಮಯದ ಮೋಹ ಯಾವುದೇ ಜನ-ಪರ ಸರಕಾರಕ್ಕೆ ಶೋಭೆ ತರುವುದಿಲ್ಲ. ಇದು ಕೊಳ್ಳುಬಾಕತನದ ಇನ್ನೊಂದು ರೂಪ. ಸ್ಥಳದ ಶಕ್ತಿಯನ್ನು ಗುರುತಿಸುವಲ್ಲಿ ಸೋತು, ಪ್ರವಾಸಿಗನ ದೌರ್ಬಲ್ಯ ಪೋಷಿಸುವಲ್ಲಿ ಬಳಲುತ್ತಿರುವ ನಮ್ಮೆಲ್ಲ ಧಾರ್ಮಿಕ ಕ್ಷೇತ್ರ, ಮೃಗಾಲಯ, ವಸ್ತು ಸಂಗ್ರಹಾಲಯಗಳಂತೆ ಪ್ರಾಕೃತಿಕ ತಾಣಗಳೂ ಪರಿವರ್ತನೆಗೊಳ್ಳುತ್ತಿರುವುದನ್ನು ಸಾರಿ ಹೇಳುತ್ತಿದೆ ಈ ರೇವ್ ಪಾರ್ಟಿ.
ಆರ್ಥಿಕ ಶಿಖರದ ಲಕ್ಷ್ಯ ಪ್ರಚುರಿಸಿ ಅಭಯಾರಣ್ಯಗಳ ಒಳಗೆ ಭರದಿಂದ ವಿಕಸಿಸುವ ಧಾರ್ಮಿಕ ರಚನೆಗಳು, ಗಿರಿಧಾಮಗಳಲ್ಲಿ ಮೆರೆಯುವ ಸೂಸೈಡ್ ಪಾಯಿಂಟ್ ಅಥವಾ ಶೂಟಿಂಗ್ ಸ್ಪಾಟ್‍ಗಳು, ಪ್ರಾಕೃತಿಕ ವೈಶಿಷ್ಟ್ಯವನ್ನೇ ಅವಹೇಳನ ಮಾಡಿ ವಿಸ್ತರಿಸುವ ಹೋಟೇಲ್ ಜಾಲಗಳು ಇತ್ಯಾದಿ ನಿಜದಲ್ಲಿ ಅವನತಿಯ ಜಾರುದಾರಿ. ಕೇಬಲ್ಲು-ಕಾರು, ಬಾರು-ಗುಟ್ಕಾ, ವಿಕೃತ ಕಾಮ, ಮಾದಕ ದ್ರವ್ಯ ಎಲ್ಲವೂ ಇಂಥಲ್ಲಿ ಬಹುಮಾನ್ಯವಾಗುತ್ತಲೇ ಇವೆ. ಅರಣ್ಯ ತೋರಿಸುವ ಹೆಸರಿನಲ್ಲಿ, ಕಾಪಾಡುವ ಭರದಲ್ಲಿ ದಾರಿಗಳು ಹಿಗ್ಗುತ್ತಿವೆ, ಮರಗಳು ಮರೆಯಾಗುತ್ತಿವೆ. ಊಟವಾಸದ ಹೆಸರಿನಲ್ಲಿ ಮನೆಯಿಂದ-ದೂರವಾದ-ಮನೆ ಬೆಳೆದು, ಬಂದದ್ದೆಲ್ಲಿಗೆಂದೇ ಮರೆತುಹೋಗುತ್ತಿದೆ. ಈಗ ಮನರಂಜನೆ, ಸಂಸ್ಕೃತಿಯ ಹೆಸರಿನಲ್ಲಿ ವಿಕೃತಿ ವಿಜೃಂಭಿಸಲು ತೊಡಗಿದಂತಾಗಿದೆ. ಈ ಬೆಳವಣಿಗೆಗಳಲ್ಲಿ ಯಾವುದೇ ಒಂದು ರಾಜಕೀಯ ಪಕ್ಷದ ಮೇಲೆ ನಾನು ಆರೋಪ ಹೊರಿಸುತ್ತಿಲ್ಲ;.ಎಲ್ಲರೂ ಸಮಾನರು! ಆಡಳಿತದಲ್ಲಿರುವವರು ಸಮರ್ಥಿಸುತ್ತಾರೆ, ಇತರರಿಗೆ ವಿರ‍ೋಧ ಅನಿವಾರ್ಯ ಕರ್ಮ – ಪಾಪ!  
ಪ್ರವಾಸೋದ್ಯಮದ ಹೆಸರಿನಲ್ಲಿ, ಪ್ರಾಕೃತಿಕ ರಮ್ಯ ಸ್ಥಳಗಳನ್ನು ಸಾರ್ವಜನಿಕರಿಗೆ ತೆರೆದಿಡುವುದು, ಅವರನ್ನು ಅದರವರೆಗೆ ತಲಪಲು ಬೇಕಾದ ವ್ಯವಸ್ಥೆ ಮಾಡುವುದು ಇತ್ಯಾದಿಗಳಿಂದ ಆ ಪ್ರಾಕೃತಿಕ ಸ್ಥಾನದ ನಿಜಸ್ಥಿತಿಗೆ ಚ್ಯುತಿ ತರುವುದೇ ಪ್ರವಾಸೋದ್ಯಮ ಅಭಿವೃದ್ಧಿಯ ನಿಲುವಾಗಿರುವುದು ನಿಜಕ್ಕೂ ದುರಂತ. ಬಿಸಿಲೇ ಘಾಟಿಯನ್ನೇರುವವರಿಗೆ ಘಾಟಿ ನಡುವೆ ಸಿಗುವ ವ್ಯೂ ಪಾಯಿಂಟ್ ನೆನಪಿರಬಹುದು. ಸುಂದರ ಅರಣ್ಯದ ನಡುವೆ ದಾರಿಯಿಂದ ತುಸು ದೂರ ಕಾಡಿನೊಳಗೆ ಪ್ರವೇಶಿಸಲು ಕಾಂಕ್ರೀಟು ಹಾಸು ಪಥವನ್ನು ನಿರ್ಮಿಸಿ ಅಲ್ಲಿ ಎರಡು ಮಹಡಿ ಎತ್ತರದ ವೀಕ್ಷಣಾ ಗೋಪುರವನ್ನು ಕಟ್ಟಿ ಆದರ ಸೌಂದರ್ಯ ವರ್ಧಿಸಲು ಎರಡು ಕಾಂಕ್ರೀಟ್ ಆನೆಯನ್ನೂ ರೂಪಿಸಲಾಗಿದೆ! ಕುದುರೇ ಮುಖ ಅಭಯಾರಣ್ಯದ ಒಳಗಡೆ ಪ್ರವಾಸಿಗರಿಗೆ ಇರಗೊಡುವ ಅರಣ್ಯ ಕ್ಯಾಂಪ್ ಇತ್ತೀಚೆಗಷ್ಟೇ ನವೀಕರಿಸಲ್ಪಟ್ಟಿದೆ. ಇಲ್ಲಿಗೆ ಹೋದವರು ಅಲ್ಲಿನ ಪರಿಸರ ಸೌಂದರ್ಯಕ್ಕೆ ಮಿಗಿಲಾಗಿ ಒಡೆದು ಬಿದ್ದಿರುವ ಬೀರು ಬಾಟಲು, ತಿಂದು ಬಿಸುಟಿರುವ ಪ್ಲಾಸ್ಟಿಕ್ ಹಾಳೆಗಳು, ಥರ್ಮಾಕೋಲ್ ಲೋಟಗಳನ್ನು ಗಮನಿಸದೇ ಬರಲಾರರು. ಒಂದು ಕಾಲದಲ್ಲಿ ದಾರಿಯಿಂದ ತುಸುವೇ ದೂರದ ನಡಿಗೆಯಲ್ಲಿ ಸಿಕ್ಕಿ ಅದ್ಭುತ ಮುದ ನೀಡುತ್ತಿದ್ದ, ಹನುಮಾನ್ ಗುಂಡಿಯ ರೀತಿಯ ಜಲಪಾತಗಳ ಪಾತ್ರೆಯಲ್ಲಿಂದು ಒಡಕು ಬಾಟಲುಗಳ ರಾಶಿಯೇ ಇದೆ. ಹಾಗಿರುವಾಗ ಮೇರಿ ದ್ವೀಪದ  ಅಷ್ಟಭುಜಾಕೃತಿಯ ಶಿಲೆಗಳ ತಲೆಗೆ ಕಾಂಡೋಮ್‍ಗಳ ಟೊಪ್ಪಿ, ಪಶ್ಚಿಮದ ಪುಟ್ಟ ಲಗೂನಿನಂಚಿನ ನುಣ್ಣನೆಯ ಚಿಪ್ಪಿನ ಹುಡಿ ಕಿನಾರೆಯಲ್ಲಿ ಒಡಕು ಬಾಟಲಿಗಳ ಮೊಳಕೆ, ತಲೆ ಎತ್ತಿ ಗರಿಬೀಸಿ ನೆರಳೊಡ್ದುವ ತೆಂಗಿನ ತೋಪಿನಲ್ಲಿ ಶಿಬಿರಾಗ್ನಿ ಬಾರ್ಬೆಕ್ಯೂಗಳ ಉಳಿಕೆಗಳು, ಶುಭ್ರ ಗಾಳಿಗೆ ಉಚ್ಚಿಷ್ಟಗಳ ನಾರುನಾತ ಸೇರುವಂತಾಗಿರುವುದನ್ನು ಪರಂಪರೆಗೆ ಸರಿಯಾಗಿದೆ ಎಂದೇ ಭಾವಿಸಿ, ಸರಕಾರ ಸಮರ್ಥಿಸಿದ್ದಿರಬೇಕು! ಇದು ತಪ್ಪು,  ಇಂಥವುಗಳಿಗೆ ಪ್ರಜಾಸತ್ತಾತ್ಮಕ ಸರಕಾರದ ಬೆಂಬಲ ಇರಬಾರದು; ನಿಜಕ್ಕೂ ವಿರೋಧವಿರಬೇಕು. ವಿನಾಶಗೊಂಡಿರುವ ಅನೇಕ ಪ್ರಾಕೃತಿಕ ಪುಣ್ಯಕ್ಷೇತ್ರಗಳ ಹೆಸರಿಗೆ ಸೈಂಟ್ ಮೇರೀಸ್ ಸೇರದಿರಲಿ ಎಂದು ನನ್ನ ಆಶಯ.
Share This