ಇವತ್ತು ‘ದಿ ಡರ್ಟಿ ಪಿಕ್ಚರ್’ ಸಿನೆಮಾವನ್ನು ನೋಡಿದೆ. ವಿದ್ಯಾಬಾಲನ್ ಅಭಿನಯಿಸಿದ ಈ ಚಿತ್ರದ ಬಗ್ಗೆ ಬಹಳ ಹೊಗಳಿಕೆಯ ಮಾತುಗಳನ್ನು ಕೇಳಿ ಬಹಳ ದಿನಗಳಿಂದ ಕಾದು ಅಂತೂ ಇವತ್ತು ಆ ಚಿತ್ರವನ್ನು ನೋಡುವ ಅವಕಾಶ ಸಿಕ್ಕಿತು. ನೋಡಿ ಬಹಳ ನಿರಾಸೆಯಾಯಿತು. ದಕ್ಷಿಣ ಭಾರತದಲ್ಲಿ ತನ್ನ ಮಾದಕ ಅಭಿನಯಕ್ಕೆ ಹೆಸರಾದ ಸಿಲ್ಕ್ ಸ್ಮಿತಾ ಜೀವನಾಧಾರಿತ ಚಿತ್ರ ಎಂದು ಚಿತ್ರೀಕರಣ ಆರಂಭವಾಗುವಾಗ ಹೇಳಿಕೊಳ್ಳುತ್ತಿದ್ದ ಚಿತ್ರ ತಂಡ, ಅದು ಬಿಡುಗಡೆಯಾಗುವ ಸಂದರ್ಭದಲ್ಲಿ, ಇಲ್ಲ… ಇದು ಕೇವಲ ಸಿಲ್ಕ್ ಸ್ಮಿತಾ ರೀತಿಯ ಅಭಿನಯೇತ್ರಿ ಆಗುವ ಆಕಾಂಕ್ಷಿಗಳ ದುರಂತ ಕಥನ ಎಂದರು. ತಾವು ‘ಸೆಕ್ಸ್’ನ್ನೇ ಮಾರ್ಕೇಟಿಂಗ್ ಟೆಕ್ನಿಕ್ ಆಗಿ ಬಳಸುತ್ತೇವೆ ಎಂದೆಲ್ಲಾ ಹೇಳಿದರು. ಆದರೆ ಚಿತ್ರ ಅತ್ತ ಒಂದು ಜೀವನ ಕಥನದ ನಂಬಿಕಾರ್ಹತೆಯನ್ನೂ ಹೊಂದದೆ, ಇತ್ತ ಸಿನೆಮ್ಯಾಟಿಕ್ ಎನ್ನುವಂಥಾ ಮಂತ್ರಮುಗ್ಧವಾಗಿಸುವ ಕಥಾನಕವನ್ನೂ ಹೊಂದದೆ ಸೋಲುತ್ತದೆ.
ಸಿನೆಮಾ ಸೇರಲು ಬರುವಂಥಾ ಹುಡುಗಿಯರ ಕಥೆ ಎಂಥಾ ದುರಂತದ್ದಾಗಿರಬಹುದು ಎನ್ನುವುದನ್ನು ತೋರಿಸುವ ಅನೇಕ ಚಿತ್ರಗಳು ಭಾರತೀಯ ಸಿನೆಮಾ ಇತಿಹಾಸದಲ್ಲಿ ಆಗಿಂದಾಗ್ಗೆ ಬಂದಿವೆ. ಅನೇಕ ಕಥೆಗಳನ್ನು ಪತ್ರಿಕೆಗಳಲ್ಲಿ, ಟಿ.ವಿಯಲ್ಲಿ ನಾವು ನೋಡಿಯೂ ಇದ್ದೇವೆ. ಹೀಗಿರುವಾಗ ‘ದಿ ಡರ್ಟಿ ಪಿಕ್ಚರ್’ ಚಿತ್ರದ ವಸ್ತು ವಿಶೇಷವೇನೂ ಅನಿಸುವುದಿಲ್ಲ. ಎಂಭತ್ತರ ದಶಕದ ಕಥೆ ಎಂದು ಆರಂಭವಾಗುವ ಈ ಚಿತ್ರ ಆ ಕಾಲದ ನಿಜಗುಣಗಳನ್ನು ಎಲ್ಲೂ ತಟ್ಟದೇ ತಾನೊಂದು ‘ಕಮರ್ಶಿಯಲ್ ಚಿತ್ರ’ ಹಾಗಾಗಿ ನನ್ನನ್ನು ವಸ್ತು ನಿಷ್ಟತೆಗೆ ದೂರವಿಟ್ಟು ನೋಡಿ ಅನ್ನುತ್ತದೆ. ಹೀಗೆ ಒಂದು ಸಾಕ್ಷ್ಯಚಿತ್ರವೂ ಆಗದೇ ಒಂದು ಕಾಲ್ಪನಿಕ ಕಥಾ ಚಿತ್ರವೂ ಆಗದೇ ಸಿನೆಮಾ ಸೋಲುತ್ತದೆ.
ಚಿತ್ರದಲ್ಲಿ ಬರುವ ಅನೇಕ ಸಂಭಾಷಣೆಗಳು ಸಿಳ್ಳೆ ಪಡೆಯುತ್ತವೆ. ಆದರೆ ಈ ಸಿನೆಮಾ ಅದರ ಪಾತ್ರ ಸಿಲ್ಕ್ ನಂತೆ ಕೇವಲ ಸಿಳ್ಳೆ ಪಡೆಯುವೆಡೆಗೆ ತನ್ನ ಯೋಚನೆಗಳನ್ನು ಹರಿಬಿಟ್ಟಿದೆಯೇ ಹೊರತು ಪಾತ್ರದ ಆಳಕ್ಕೆ ಇಳಿದು ಅಲ್ಲಿ ಮಾನವ ಸಹಜ ಭಾವನೆಗಳನ್ನು ತಟುವುದಿಲ್ಲ. ತನ್ನ ಅನುಕೂಲಕ್ಕೆ ತಕ್ಕಂತೆ ಭಾವನೆಗಳನ್ನು ಮುಟ್ಟುವ ಸಂದರ್ಭ ಬಂದಾಗ ಒಂದೇ ದೃಶ್ಯದಲ್ಲಿ ಪಾತ್ರದ ಕಣ್ಣಲ್ಲಿ ಕಣ್ಣೀರು ಹುಟ್ಟಿಸಿ ಮುಂದೆ ಸಾಗುತ್ತದೆ. ನೀಲಚಿತ್ರ ಜಾಲಕ್ಕೆ ತನ್ನ ದುಸ್ಥಿತಿಯ ದಿನಗಳಲ್ಲಿ ಸಿಕ್ಕಿಹಾಕಿಕೊಳ್ಳುವ ಸಿಲ್ಕ್ ಮುಂದಿನ ಕ್ಷಣದಲ್ಲೇ ತನ್ನ ಇಡೀ ಜೀವನವನ್ನು ಕಣ್ಣೆದುರೆ ಕಾಣುವುದು ಆ ಪಾತ್ರದ ಬೆಳವಣಿಗೆಯ ದೃಷ್ಟಿಯಿಂದ ತೀರಾ ಹಗುರವಾಗಿದೆ ಎನಿಸುತ್ತದೆ.
ಇನ್ನು ನಾಸಿರುದ್ದೀನ್ ಶಾಹ್ ಥರದ ಅನುಭವಿ ನಟನೂ ಪೇಲವವಾಗಿ ಕಾಣಿಸುವಂಥಾ, ಕಿಸ್ಸಿಂಗ್ ಕಿಂಗ್ ಎಂದೇ ಕರೆಯಲ್ಪಡುವ ಇಮ್ರಾನ್ ಸಿನೆಮಾದಲ್ಲಿ ಸೆಕ್ಸ್ ಎಂದರೆ ಹೇಸುವ ಪ್ರತಿಭಾನ್ವಿತ ನಿರ್ದೇಶಕನ ಪಾತ್ರದಲ್ಲಿ, ಕೇವಲ ನಿರ್ಮಾಪಕರ ತಮ್ಮ ಎಂಬ ಕಾರಣಕ್ಕೆ ಪಾತ್ರಗಿಟ್ಟಿಸಿರುವ ತುಶಾರ್ ಕಪೂರ್ ಇತ್ಯಾದಿ ಚಿತ್ರದಲ್ಲಿ ವಿಚಿತ್ರವಾಗಿ ಕಾಣಿಸುತ್ತಾರೆ. ನಾಸಿರುದ್ದೀನ್ ಶಾ ಹಾಗೂ ವಿದ್ಯಾಬಾಲನ್ ನಡುವೆ ಇಷ್ಕಿಯಾ ಚಿತ್ರದಲ್ಲಿ ಕಾಣುವ ನಂಬಲರ್ಹ ಸೆಳೆತ ಇಲ್ಲಿ ಮಾಯವಾದದ್ದಕ್ಕೆ ಕೇವಲ ಬಲಹೀನ ಚಿತ್ರಕಥೆಯೇ ಆರೋಪಿ.
ಹೀಗಿದ್ದರೂ ಈ ಚಿತ್ರವನ್ನು ನೋಡುವಾಗ, ಭಾರತೀಯ ಸಿನೆಮಾರಂಗವು ಪರದೆಯಲ್ಲಿ ಶೀಲ – ಅಶ್ಲೀಲತೆಯ ಪರಿಧಿಯನ್ನು ಪ್ರಶ್ನಿಸುತ್ತಿರುವುದು ಹಾಗೂ ತನ್ನ ನಿಲುವನ್ನು ಬದಲಿಸಿಕೊಳ್ಳುತ್ತಿರುವುದು ನಿಧಾನವಾಗಿಯಾದರೂ, ಸ್ಪಷ್ಟವಾಗಿ ಕಾಣಿಸುತ್ತಿದೆ. ಡೆಲ್ಲಿ-ಬೆಲ್ಲಿ ಚಿತ್ರದ ಅಶ್ಲೀಲ ಸಂಭಾಷಣೆಗಳಿರಬಹುದು, ಪರದೆಯ ಮೇಲೆ ಮುತ್ತಿನ ಮಳೆಗರೆಯುವ ಇಮ್ರಾನ್ ಥರದ ನಾಯಕನ ಜನನವಿರಬಹುದು ಹೀಗೆ ಭಾರತೀಯ ಸಿನೆಮಾ ಸೆಕ್ಸ್ ಬಗ್ಗೆ ತನ್ನ ನಿಲುವನ್ನು ಮರು-ವಿಶ್ಲೇಷಿಸುತ್ತಿರುವುದು ಕಾಣುತ್ತೇವೆ. ಯಾವುದೇ ರೀತಿಯ ಮಾರಲ್ ಪೋಲೀಸಿಂಗ್ ಮಾಡದೇ ಪ್ರೇಕ್ಷಕರಿಗೆ ತಮ್ಮ ಅಭಿಪ್ರಾಯವನ್ನು ತಾವೇ ರೂಪಿಸಿಕೊಳ್ಳಲು ಬಿಟ್ಟಲ್ಲಿ, ನೋಡುಗರ ಸಂಸ್ಕಾರಕ್ಕೆ ಹಾಗೂ ಚಿತ್ರ ನಿರ್ಮಿಸುವವರ ಸಂಸ್ಕಾರಕ್ಕೆ ತಕ್ಕಂತೆ (ಒಟ್ಟಿನಲ್ಲಿ ಸಮಾಜದ ಸಂಸ್ಕಾರಕ್ಕೆ ತಕ್ಕಂತೆ) ಭಾರತೀಯ ಸಿನೆಮಾ ಸಾಗುವುದರಲ್ಲಿ ಸಂಶಯವಿಲ್ಲ.