ಶಿಕಾರಿ ಚಿತ್ರದಲ್ಲಿ ಮಮ್ಮುಟ್ಟಿ ಹಾಗೂ ಪೂನಂ ಬಾಜ್ವಾ

ಉದಯವಾಣಿಯ ದೀಪಾವಳಿ ವಿಶೇಷಾಂಕದಲ್ಲಿ ಪ್ರಕಟವಾದ ಶಿಕಾರಿಯ ನಿರ್ಮಾಣ ಕಥನದ ವಿಸ್ತಾರ ರೂಪ ಇಲ್ಲಿದೆ.

ನಮ್ಮ ಕನಸಿನ ಕೂಸು, `ಶಿಕಾರಿ’ ಸಿನೆಮಾ ಈಗ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಈ
ಸಂದರ್ಭದಲ್ಲಿ ದೀಪಾವಳಿಯ ನೆಪ ಹಿಡಿದು ನಮ್ಮ ಚಿತ್ರದ ಬಗ್ಗೆ, ಮತ್ತು ನಮ್ಮ ನಾಯಕ ನಟ ಮಮ್ಮುಟ್ಟಿಯವರ ಬಗ್ಗೆ ಒಂದು
ನಾಲ್ಕು ಮಾತು ನಿಮ್ಮೊಂದಿಗೆ ಹಂಚಿಕೊಳ್ಳೋಣ ಎನಿಸಿತು. ಹಾಗಾಗಿ ಇಂದು ನಾನು ಇಲ್ಲಿ.

ಶಿಕಾರಿ ಚಿತ್ರದ
ಕನಸು ಮೊಳೆತದ್ದು ಸುಮಾರು ಎರಡು ವರ್ಷ ಹಿಂದೆ. ನನ್ನ ಮೊದಲ ಚಿತ್ರ ’ಗುಬ್ಬಚ್ಚಿಗಳು’ ಆದ ಮೇಲೆ ಏನು
ಎಂದು ಯೋಚಿಸುತ್ತಿರುವಾಗ ಹೊಳೆದದ್ದು ’ಶಿಕಾರಿ’ಯ ಕಥೆ. ಬಹಳ ಕಾಲದಿಂದ
ಕಾಡುತ್ತಿದ್ದ ವಿಷಯವೊಂದು ಕಥೆಯ ರೂಪವಾಗಿ ಹೀಗೆ ಹೊರಬಂದಿತ್ತು. ಭಾರತಕ್ಕೆ ಬ್ರಿಟಿಷ್ ಆಡಳಿತದಿಂದ
ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ನಾವು ನಿಜಕ್ಕೂ ಸ್ವತಂತ್ರರೇ? ಮಾನಸಿಕವಾಗಿ ನಾವು
ಎದುರಿಸುತ್ತಿರುವ ದಾಸ್ಯದಿಂದ ಎಂದು ನಮಗೆ ಸ್ವಾತಂತ್ರ್ಯ ಎನ್ನುವ ಎಳೆಯೇ ಶಿಕಾರಿ ಸಿನೆಮಾಕ್ಕೆ ಕಥೆಯಾಗಿ
ರೂಪಗೊಂಡಿದ್ದು. ಒಂದು ಜನಪ್ರಿಯ ಧಾಟಿಯ ಸಿನೆಮಾವಾಗಿ ಇದನ್ನು ರೂಪಿಸಬೇಕು ಎಂದು ನಾನೂ ನನ್ನ ಚಿತ್ರ
ಜೀವನದ ಮಾರ್ಗದರ್ಶಿ, ಬರಹಗಾರ, ಗೆಳೆಯ ಇಸ್ಮಾಯಿಲ್ ನಿರ್ಧರಿಸಿದೆವು. ಇಂದು ಜನಪ್ರಿಯ
ಧಾಟಿಯ ಚಿತ್ರಗಳಲ್ಲಿ ಅನೇಕ ಬಾರಿ ಕಂಡು ಬರುವ ಹಿಂಸೆ, ಅಶ್ಲೀಲತೆಗಳಿಂದ ದೂರವಾದ ಒಂದು ಸುಂದರ ಕಥಾನಕ ಇದಾಗಬೇಕು
ಎನ್ನುವುದು ನಮ್ಮ ಹೆಗ್ಗುರಿಯಾಯಿತು.
ಚಿತ್ರೀಕರಣದ ಒಂದು ದಿನ ಇನ್ನೊಸೆಂಟ್ ಎಂಬ ಇನ್ನೊಬ್ಬ ಮಹಾನಟನೊಂದಿಗೆ
ಸುಮಾರು ಆರು ತಿಂಗಳ
ಕಾಲ ಸತತವಾಗಿ ಚಿತ್ರ ಕಥೆ ನಡೆಯಿತು. ಹಾಡುಗಳ ಸ್ಥಳ ನಿರ್ಧಾರ ಇತ್ಯಾದಿಗಳು ನಡೆಯಿತು. ಇಷ್ಟೆಲ್ಲ
ಆಗುತ್ತಿರಬೇಕಾದರೆ, ಈ ಚಿತ್ರಕ್ಕೆ ನಾಯಕ ನಟ ಯಾರಾಗಬಹುದು ಎಂದು ಚಿಂತೆ
ಆರಂಭವಾಯಿತು. ಇದೇ ಕಾಲಕ್ಕೆ ಗೆಳೆಯ ಚಿತ್ರಕಥೆಯನ್ನು ಓದಿ, ಸಂಜು ಸುರೇಂದ್ರನ್ (ಕೇರಳದವನು) ಮಮ್ಮುಟ್ಟಿಯವರು
ಯಾಕಾಗಬಾರದು ಎಂದು ಕೇಳಿದ. ನನಗೆ ಮೊದಲು ನಗುಬಂತು. ಆಮೇಲೆ ಗಂಭೀರನಾದೆ. ತಲೆಯೊಳಗೊಂದು ಗೊಂದಲ ಆರಂಭವಾಯಿತು.
ಭಾರತದ ಮೇರು ನಟರುಗಳಲ್ಲಿ ಒಬ್ಬರಾದ ಮಮ್ಮುಟ್ಟಿಯವರು, ನನ್ನಂಥಾ ಚಿತ್ರರಂಗದಲ್ಲಿ ಈಗಷ್ಟೇ ಕಣ್ಣುಬಿಡುತ್ತಿರುವವನೊಡನೆ
ಕೆಲಸ ಮಾಡಿಯಾರೇ? ಮತ್ತೆ ನಗು! ಆದರೆ ಅವರೇನಾದರೂ ಈ ಕಥೆಯ ನಾಯಕ ನಟರಾಗಿ
ಬಂದರೆ, ಕಥೆಗೆ ಸಿಗುವ ಘನತೆಯನ್ನು ನೆನೆದಾಗ ಆಗುವ ಖುಷಿಗೆ
ಮೇರೆಯುಂಟೇ? ಮತ್ತೆ ಗಂಭೀರ! ಆದದ್ದಾಗಲಿ, ಒಮ್ಮೆ ಅವರನ್ನು
ಮಾತನಾಡಿಸಿಯೇ ಬಿಡೋಣ ಎಂದು ಕೊಂಡೆವು. ಅದು ಹೇಗೋ ಮಮ್ಮುಟ್ಟಿಯವರ ದೂರವಾಣಿ ಸಂಖ್ಯೆ ಸಂಪರ್ಕಿಸಿ ಅವರಿಗೆ
ನಾನು ಒಂದು ಸಣ್ಣ ಸಂದೇಶವನ್ನು ಎಸ್.ಎಂ.ಎಸ್ ಮೂಲಕ ಕಳಿಸಿದೆ. ನಿಮಗೆ ಒಂದು ಕಥೆ ಹೇಳುವ ಆಸೆ ನನಗೆ.
ಕೇಳುವಿರಾ ಎಂದು ಬೇಡಿಕೆ ರವಾನೆಯಾಯಿತು. ನಿಜಕ್ಕೂ ಇಂಥಾ ಸಂದೇಶಕ್ಕೆ ಅವರು ಪ್ರತಿಕ್ರಿಯಿಸಿಯಾರು
ಎಂದು ಅನಿಸಿಯೇ ಇರಲಿಲ್ಲ. ಆದರೆ ಬಂದೇ ಬಂತು ಉತ್ತರ! ಮರುದಿನವೇ ಚಿತ್ರಕಥೆಯನ್ನು ಇ-ಮೇಯ್ಲ್ ಮೂಲಕ
ಕಳಿಸಿಕೊಡು ಎಂದು ಅವರು ಪ್ರತಿಕ್ರಿಯಿಸಿದಾಗ ಕೊಂಚ ಗಾಬರಿಯೇ ಆಯಿತು. ಆದರೂ ಸುಧಾರಿಸಿಕೊಂಡು ಚಿತ್ರಕಥೆಯನ್ನು
ಕಳಿಸಿದೆ. ಮರುದಿನ ಮತ್ತೆ ನನ್ನ ದೂರವಾಣಿ ರಿಂಗಿಣಿಸಿದಾಗ ತಡಬಡಿಸಿ ಉತ್ತರಿಸಿದೆ. ನಿನ್ನ ಕಥೆಯನ್ನು
ಓದಿದ್ದೇನೆ. ಬಂದು ಭೇಟಿಯಾಗುವೆಯಾ ಮಾತನಾಡಲಿಕ್ಕಿದೆ ಎಂದರು! ಮೊದಲ ಭೇಟಿ ನಿಯತವಾದದ್ದು ಹೀಗೆ!
ಅದು ಜನವರಿ ತಿಂಗಳು
ಬೆಳಗ್ಗಿನ ವಿಮಾನ ಹತ್ತಿ ಬೆಂಗಳೂರಿನಿಂದ ಹಾರಿ ಕೊಚ್ಚಿಯಲ್ಲಿ ಇಳಿದೆ. ಕೇರಳ ಚಿತ್ರರಂಗದ ಅತಿರಥ ಮಹಾರಥರು
ಇರುವ ಊರು. ಅಲ್ಲಿ ಮತ್ತೊಬ್ಬ ಗೆಳೆಯ ಅಭಿಲಾಶ್ ಜೊತೆಸೇರಿ ಮಮ್ಮುಟ್ಟಿಯವರು ಚಿತ್ರೀಕರಣ ನಡೆಸುತ್ತಿದ್ದ
ಸ್ಥಳಕ್ಕೆ ಹೋದೆ. ತಲೆಯಲ್ಲಿ ಸಾವಿರ ಯೋಚನೆಗಳ ಝೇಂಕಾರ. ಅಷ್ಟರಲ್ಲಿ ತಮ್ಮ ವಾಹನದಿಂದ ಇಳಿದು ಬಂದರು
ಮಮ್ಮುಟ್ಟಿ! ತುಸುದೂರದಲ್ಲೇ ನಿಂತಿದ್ದ ನನ್ನನ್ನು ಅವರ ಸಹಾಯಕರು ಪರಿಚಯಿಸಿದರು. ಪ್ರೀತಿಯಿಂದ ಕರೆದು
ತಮ್ಮ ಪಕ್ಕದಲ್ಲಿ ಕೂರಿಸಿಕೊಂಡರು. ಪ್ರಯಾಣ ಸುಖಕರವಾಯಿತೇ? ಇಲ್ಲಿಗೆ ಬರಲು ಕಷ್ಟವಾಗಲಿಲ್ಲವಷ್ಟೇ? ಎಂದೆಲ್ಲಾ ವಿಚಾರಿಸಿಕೊಂಡರು.
ರಾಜ್ ಕುಮಾರ್ ಅವರ ಅಭಿನಯ ಪ್ರತಿಭೆಯ ಕುರಿತಾಗಿ ಹೊಗಳಿದ ಅವರು, ವಿಷ್ಣುವರ್ಧನ್
ಅವರೊಡನೆ ನಟಿಸಿದ್ದನ್ನು ನೆನೆಸಿಕೊಂಡರು. ಕನ್ನಡದ ಹೊಸ ನಾಯಕ ನಟರುಗಳ ಬಗ್ಗೆ ವಿಚಾರಿಸಿಕೊಂಡರು.
ಏನೆಲ್ಲಾ ಮಾತು ಕಥೆಗಳು ನಡೆದರೂ ನನ್ನ ಚಿತ್ರದ ಕುರಿತಾಗಿ ಏನೂ ಮಾತನಾಡುತ್ತಿಲ್ಲವಲ್ಲಾ ಎಂದು ನಿಧಾನಕ್ಕೆ, ನನ್ನ ಚಿತ್ರ ಕಥೆ
ಏನನಿಸಿತು? ಅಂತ ಕೇಳಿಯೇ ಬಿಟ್ಟೆ. “ಅಯ್ಯೋ! ಓದಿದೆ. ತುಂಬಾ
ಚೆನ್ನಾಗಿದೆ ನನಗೆ ಇಷ್ಟವಾಯಿತು. ನಟಿಸಲು ಸಿದ್ಧನಿದ್ದೇನೆ” ಅಂದರು. ಅಂದು ಶಿಕಾರಿಯ ಪಯಣಕ್ಕೆ
ಹೊಸ ಆಯಾಮ ಬಂದಂತಾಯಿತು.
ನಿರ್ಮಾಪಕ ಗಂಡುಗಲಿ ಕೆ. ಮಂಜು
ಮಮ್ಮುಟ್ಟಿಯವರು
ಚಿತ್ರಕ್ಕೆ ಬಂದಾಗ ನಮ್ಮೊಂದಿಗಿದ್ದ ನಿರ್ಮಾಪಕರು ವೈಯಕ್ತಿಕ ಕಾರಣಗಳಿಂದ ಚಿತ್ರದಿಂದ ದೂರ‍ ಹೋಗುವ
ಪರಿಸ್ಥಿತಿ ಎದುರಾಯಿತು. ಆ ಸಂದರ್ಭದಲ್ಲಿ ಕನ್ನಡದ ಪ್ರಮುಖ ನಿರ್ಮಾಪಕರಾದ ಕೆ. ಮಂಜು, ಶಿಕಾರಿಯ ನಿರ್ಮಾಣದ
ಭಾರವನ್ನು ಎತ್ತಿಕೊಂಡರು. ಈ ಎಲ್ಲಾ ಪ್ರಕ್ರಿಯೆಗಳಿಗೆ, ಸಿನೆಮಾದ ಚಿತ್ರೀಕರಣ ಆರಂಭವಾಗಲಿಕ್ಕೆ ಸುಮಾರು ಆರು
ತಿಂಗಳೇ ಹಿಡಿದು ಬಿಟ್ಟಿತು. ಆಗೆಲ್ಲಾ ಮಮ್ಮುಟ್ಟಿಯವರು ಈ ಚಿತ್ರ ನನ್ನದು ಎಂಬಂತೆ ಹೊಂದಿಕೊಂಡು ಸಹಕರಿಸುತ್ತಾ
ಬಂದರು. ಈ ಸಂದರ್ಭದಲ್ಲಿ ಪೂನಂ ಬಾಜ್ವಾ ಚಿತ್ರದ ನಾಯಕಿಯಾಗಿಯೂ, ಕನ್ನಡದ ನಾಯಕ
ನಟ ಆದಿತ್ಯ (ಅತಿಥಿ ಪಾತ್ರದಲ್ಲಿ) ನಟ-ನಿರ್ದೇಶಕ ಮೋಹನ್, ಸಿಹಿ ಕಹಿ ಚಂದ್ರು, ಶರತ್ ಲೋಹಿತಾಶ್ವ, ಅಚ್ಯುತ ಕುಮಾರ್, ನೀನಾಸಂ ಅಶ್ಚಥ, ಸತೀಶ, ಚಂದ್ರಹಾಸ ಉಳ್ಳಾಲ್, ನವೀನ್ ಪಡಿಲ್
ಸಹಕಲಾವಿದರ ನಿಶ್ಚಯವೂ ನಡೆಯಿತು. ತಾಂತ್ರಿಕ ತಂಡಕ್ಕೆ, ನನ್ನ ಹಲವು ವರ್ಷಗಳ ಗೆಳೆಯ, ಸಹಪಾಠಿ ಡಾ. ವಿಕ್ರಂ
ಶ್ರೀವಾಸ್ತವ ಕ್ಯಾಮರಾ ಜವಾಬ್ದಾರಿಯಲ್ಲೂ, ವಿ. ಹರಿಕೃಷ್ಣ ಸಂಗೀತ ನಿರ್ದೇಶಕರಾಗಿಯೂ, ಮನೋಹರ್ ಸಂಕಲನಕಾರರಾಗಿಯೂ, ಮದನ್-ಹರಿಣಿ ನೃತ್ಯ
ನಿರ್ದೇಶಕರಾಗಿಯೂ, ಅನಲ್ ಅರಸು ಸಾಹಸ ನಿರ್ದೇಶಕರಾಗಿಯೂ ತಂಡಕ್ಕೆ ಸೇರಿಕೊಂಡರು.
ಜಯಂತ್ ಕಾಯ್ಕಿಣಿ, ನಾಗೇಂದ್ರ ಪ್ರಸಾದ್ ಹಾಗೂ ಕವಿರಾಜ್ ಹರಿಕೃಷ್ಣ ಸಂಗೀತಕ್ಕೆ
ರಚಿಸಿದ ಸಾಹಿತ್ಯವೂ ಸಿದ್ಧವಾಯಿತು.
‘ಶಿಕಾರಿ’ ಚಿತ್ರೀಕರಣ ಆರಂಭವಾಯಿತು.
ಮಮ್ಮುಟ್ಟಿಯಂಥಾ ಹಿರಿಯ ಕಲಾವಿದರೊಡನೆ ಹೇಗೆ ಕೆಲಸ ಮಾಡುವುದು ಎಂಬ ಆತಂಕ ನನ್ನನ್ನು ಚಿತ್ರೀಕರಣದ
ಆರಂಭಕ್ಕೆ ಮುನ್ನಾ ದಿನಗಳಲ್ಲಿ ಬಹಳವಾಗಿ ಕಾಡಿಸಿತು. ಚಿತ್ರೀಕರಣದ ಮೊದಲ ದಿನ ಮೊದಲ ಚಿತ್ರೀಕೆಯನ್ನು
ತೆಗೆಯುವಾಗ ನನಗೆ, ಇದು ಕೊಂಚ ಭಿನ್ನವಾಗಿದ್ದರೆ ಚೆನ್ನಾಗಿರುತ್ತಿತ್ತಲ್ಲವೇ
ಎನಿಸಿತು. ಈ ಚಿತ್ರೀಕೆಯನ್ನು ಇನ್ನೊಮ್ಮೆ ತೆಗೆಯೋಣ ಎಂದು ಮಮ್ಮುಟ್ಟಿಯವರನ್ನು ಕೇಳಿದೆ. ಏಕೆ?! ಏನಾಯ್ತು ಅವರ
ಪ್ರಶ್ನೆ. ಸರ್… ಈ ಚಿತ್ರೀಕೆ ಹೀಗಿದ್ದರೆ ಚೆನ್ನಾಗಿರುತ್ತಿತ್ತು ಅಂದೆ. ಅವರು ‘ಸರಿ’ ಅಂದರು. ಮೊದಲ ಸಂವಾದ ಅಷ್ಟು ಸರಳವಾಗಿತ್ತು. ಆ ಕ್ಷಣದಿಂದ
ಮಮ್ಮುಟ್ಟಿಯವರ ಹಾಗೂ ನನ್ನ ನಡುವೆ ಸಂಬಂಧ ಹಗುರಾಯಿತು. ಚಿತ್ರೀಕರಣದ ದಿನಗಳು ಉರುಳುತ್ತಿದ್ದಂತೆ, ಮಮ್ಮುಟ್ಟಿಯವರನ್ನು
ಇನ್ನಷ್ಟು ಹತ್ತಿರದಿಂದ ನೋಡುವ ಅವಕಾಶ, ಅವರ ಅಭಿನಯ ರೀತಿಯಿಂದ ಕಲಿಯುವ ಅವಕಾಶ ನನಗೆ ದೊರೆಯಿತು.
ಮುಂದಿನ ಆರು ತಿಂಗಳಲ್ಲಿ ಒಟ್ಟು ನಲವತ್ತೇಳು ದಿನಗಳ ಚಿತ್ರೀಕರಣ ನಡೆಯಿತು. ಬೆಂಗಳೂರು, ಕೊಚ್ಚಿನ್, ತೀರ್ಥಳ್ಳಿ, ಶ್ರೀರಂಗಪಟ್ಟಣ
ಹಾಗೂ ಮೇಲುಕೋಟೆಯಲ್ಲಿ ಚಿತ್ರೀಕರಣ ನಡೆಯಿತು. ಅದರ ನಂತರ ಸಾಕಷ್ಟು ತಿಂಗಳುಗಳ ಸಂಸ್ಕರಣೆಯ ನಂತರ, ನಮ್ಮ ಚಿತ್ರ, ‘ಶಿಕಾರಿ’ ಸಕಲಾಂಗ ಅಲಂಕೃತವಾಗಿ ನಿಮ್ಮ ಮುಂದೆ ಬರಲು ಇಂದು
ಸಜ್ಜಾಗಿ ನಿಂತಿದೆ.
ಚಿತ್ರೀಕರಣದ ವೇಳೆಯಲ್ಲಿ…
ಚಿತ್ರೀಕರಣದ ನಡುವೆ ಒಮ್ಮೆ ಚಿತ್ರೀಕರಣ ಸ್ಥಳದಲ್ಲಿ
ಕುಳಿತಿದ್ದಾಗ, ಮಮ್ಮುಟ್ಟಿಯವರನ್ನು ಕೇಳಿದೆ, “ನಿಮಗೆ ಶಿಕಾರಿ ಚಿತ್ರ ಮಾಡಬೇಕು ಎಂದು ಅನಿಸಿದ್ದಾದರೂ ಯಾಕೆ? ಮಮ್ಮುಟ್ಟಿಯವರು
ಕೂಡಲೇ ಉತ್ತರಿಸಿದರು, “ಈ ಚಿತ್ರದಲ್ಲಿ, ಎರಡು ಕಾಲ ಘಟ್ಟಗಳಲ್ಲಿ ಕಥೆ ನಡೆಯುತ್ತದೆ. ಕಥಾ
ನಾಯಕ ಎರಡೂ ಕಾಲ ಘಟ್ಟಗಳಲ್ಲಿ ಸಂಚರಿಸುತ್ತಾ ವರ್ತಿಸುತ್ತಾನೆ. ಈ ಕಥನ ಕ್ರಮ ನನ್ನನ್ನು ಮೊದಲು ಆಕರ್ಷಿಸಿತು.
ಅದಲ್ಲದೇ ಕಥೆಯು ಕರ್ನಾಟಕದ ದಟ್ಟಾರಣ್ಯಗಳ ನಡುವೆ ನಡೆಯುತ್ತದೆ. ನಾನು ಕರ್ನಾಟಕದ ಜನತೆಯೊಂದಿಗೆ ಒಂದು
ರೀತಿಯಲ್ಲಿ ಗುರುತಿಸಿಕೊಳ್ಳುತ್ತೇನೆ. ಅಲ್ಲಿನ ಜನ, ನಡೆ, ನುಡಿ ಸಾಹಿತ್ಯ ನನ್ನನ್ನು ಬಹಳ ಪ್ರಭಾವಿಸಿದೆ. ಕರ್ನಾಟಕದಲ್ಲಿ
ನಡೆದ ಸ್ವಾತಂತ್ರ್ಯ ಹೋರಾಟಗಳನ್ನು ನಾನು ಕುತೂಹಲದಿಂದ ತಿಳಿದುಕೊಂಡಿದ್ದೇನೆ. ಇವೆಲ್ಲ ಈ ಚಿತ್ರದ
ಆತ್ಮದಲ್ಲಿ ಇದ್ದುದರಿಂದ, ಎಲ್ಲೋ ನನಗೆ ನಟನಾಗಿ ಒಂದು ಹೊಸತನವನ್ನು ಕೊಡಲು
ಇದೊಂದು ಅವಕಾಶವಾಗಬಹುದು ಎನಿಸಿತು. ಹೀಗಾಗಿ ನನಗೆ ಶಿಕಾರಿ ಚಿತ್ರದ ಚಿತ್ರಕಥೆ ಬಹಳ ಹಿಡಿಸಿತು. ಚಿತ್ರದಲ್ಲಿ
ಕಥಾನಾಯಕ ಆಧುನಿಕ ವ್ಯಕ್ತಿಯೇ. ಅವನೊಬ್ಬ ಸಾಫ್ಟ್ವೇರ್ ಉದ್ಯಮಿ ಅವನೊಂದು ಅಪೂರ್ವವಾದ ಕಥೆಯನ್ನು ಹುಡುಕುತ್ತಾ
ಹೊರಡುತ್ತಾನೆ. ಇಂಥಾ ಕೌತುಕಮಯ ಕಥಾವಸ್ತು ನನ್ನನ್ನು ಬಹಳವಾಗಿ ಆಕರ್ಷಿಸಿತು. ನಾನು ನಟನಾಗಿ ರೂಪುಗೊಂಡದ್ದು, ಬೆಳೆದು ಬಂದದ್ದು
ಇಂಥಾ ಭಿನ್ನವಾದ ಚಿತ್ರಗಳ ಪರಂಪರೆಯ ಮೂಲಕ. ನನ್ನನ್ನು ಚಿತ್ರೋದ್ಯಮಕ್ಕೆ ಪರಿಚಯಿಸಿದ ಮಹಾನುಭಾವರೆಲ್ಲರೂ
ಭಿನ್ನ ರೀತಿಯ ಚಿತ್ರಗಳನ್ನು ಮಾಡುತ್ತಿದ್ದವರೂ, ಸದಭಿರುಚಿಯ ಚಿತ್ರಗಳನ್ನು ಮಾಡುತ್ತಿದ್ದವರೂ ಆಗಿದ್ದರು
ಹಾಗಾಗಿ ಇಂಥಾ ಚಿತ್ರಗಳ ಕಡೆಗೆ, ಗಂಭೀರ ಪ್ರಯತ್ನಗಳ ಕಡೆಗೆ ನನ್ನ ಒಲವು ಸದಾ ಇತ್ತು.
ಕೆ. ಮಂಜುವಿನಂಥಾ ಗಟ್ಟಿ ನಿರ್ಪಾಪಕರು ಇಂಥಾ ಒಂದು ಭಿನ್ನವಾದ ಚಿತ್ರವನ್ನು ಪ್ರೋತ್ಸಾಹಿಸಿ ಈ ಚಿತ್ರ
ಆರಂಭವಾಗಿರುವುದು ನನಗೆ ಬಹಳ ಸಂತೋಷವನ್ನು ತಂದಿತು. ಈ ಎಲ್ಲಾ ಕಾರಣಗಳಿಂದ ನನಗೆ ಈ ಚಿತ್ರ ಮಾಡಬೇಕು
ಅನಿಸಿತು”.
ಆದರೆ ನಿಮ್ಮನ್ನು ಸಂಪರ್ಕಿಸಿದಾಗ ನಾನಿನ್ನೂ ಒಂದು
ಸಣ್ಣ ಮಕ್ಕಳ ಚಿತ್ರವನ್ನಷ್ಟೇ ಮಾಡಿದ್ದೆ. ನಿಮ್ಮಂಥಾ ದಿಗ್ಗಜರೊಡನೆ ಚಿತ್ರವನ್ನು ನಿರ್ದೇಶಿಸುವ ಅವಕಾಶ
ನನಗೆ ನೀಡಿದಿರಿ. ಎಂದೂ ಇದರ ಬಗ್ಗೆ ನೀವು ಯೋಚಿಸಲಿಲ್ಲವೇ ಅಂತ ಮಮ್ಮುಟ್ಟಿಯವರನ್ನು ಮತ್ತೆ ಕೇಳಿದೆ.
ಅವರು ನಗುತ್ತಾ, “ನಾನು ಹೊಸಬರೊಡನೆ ಕೆಲಸ ಮಾಡಲು ಇಷ್ಟಪಡುತ್ತೇನೆ. ಏಕೆಂದರೆ ಅವರು ಹೊಸಬರಾಗಿರುತ್ತಾರೆ!
ಅವರೊಡನೆ ಹೊಸ ಯೋಚನೆಗಳು, ಹೊಸ ಕಥಾನಕಗಳು, ಹೊಸ ಪಾತ್ರಗಳು
ಇರುತ್ತವೆ. ನನ್ನನ್ನು ಹೊಸದೊಂದು ರೂಪದಲ್ಲಿ ತೋರಿಸಲು ಅವರು ಪ್ರಯತ್ನಿಸುತ್ತಿರುತ್ತಾರೆ. ನನಗೆ ಹೊಸ
ಜೀವವೊಂದನ್ನು ಕೊಡುತ್ತಿರುತ್ತಾರೆ. ನಾನು ಒಮ್ಮೆ ಮಾತ್ರ ಅವರೊಡನೆ ಇಂಥಾ ಪ್ರಯೋಗವನ್ನು ಮಾಡಬಹುದು.
ಏಕೆಂದರೆ ಒಮ್ಮೆ ಜೊತೆಯಲ್ಲಿ ಕೆಲಸ ಮಾಡಿದ ಮೇಲೆ ಅವರು ಹಳಬರಾಗುತ್ತಾರಲ್ಲವೇ? ಮಲಯಾಳದಲ್ಲಿ ಸಿನೆಮಾ
ಉದ್ಯಮದಲ್ಲಿ ತೊಡಗಿಸಿಕೊಳ್ಳಲು ಬಯಸುವ ಅನೇಕ ಹೊಸ ಪ್ರತಿಭೆಗಳು ನನಗೆ ಸದಾ ಚಿತ್ರಕಥೆಗಳನ್ನು ಓದುತ್ತಿರುತ್ತಾರೆ.
ಒಳ್ಳೆಯ, ಕೆಟ್ಟ, ಸದಭಿರುಚಿಯ, ರುಚಿಹೀನ ಹೀಗೆ ಎಲ್ಲಾ ಬಗೆಯ ಚಿತ್ರಗಳನ್ನೂ ನನ್ನೊಂದಿಗೆ
ಮಾಡಲು ಬಯಸುತ್ತಿರುತ್ತಾರೆ. ಬಹುಷಃ ನಾನು ಅಂಥವರಿಗೆ ಅದೃಷ್ಟವನ್ನು ತರುತ್ತೇನೆಂದು ನಂಬಿದ್ದಾರೋ
ನನಗೆ ಗೊತ್ತಿಲ್ಲ. ಆದರೆ ಅದ್ಯಾವುದೋ ಕಾರಣಕ್ಕೆ ಅವರು ನನ್ನ ಬಳಿಗೆ ಇಂಥಾ ಅವಕಾಶಗಳನ್ನು ಹೊತ್ತು
ಬರುತ್ತಿರುತ್ತಾರೆ.” ಅಂದರು. ಮಮ್ಮುಟ್ಟಿಯವರು ಸುಮಾರು ೩೭೫ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.
ಅದರಲ್ಲಿ ಶೇಕಡಾ ಎಪ್ಪತ್ತೈದರಷ್ಟು ಚಿತ್ರಗಳು ಗಲ್ಲಾಪೆಟ್ಟಿಗೆಯನ್ನು ಭರ್ತಿಮಾಡಿರುವಂಥವು. ಇದರಲ್ಲಿ
ಇನ್ನೊಂದು ವಿಶೇಷವೆಂದರೆ, ಅವರು ಸುಮಾರು ಐವತ್ತರಷ್ಟು ಹೊಸ ನಿರ್ದೇಶಕರೊಡನೆ
ಕೆಲಸ ಮಾಡಿರುವುದು!
ಕನ್ನಡದ ನಟ, ನಿರ್ದೇಶಕ, ಬರಹಗಾರ ಮೋಹನ್ ಅಭಿನಯದ ಕ್ಷಣ
ಚಿತ್ರೀಕರಣದುದ್ದಕ್ಕೂ ಮಮ್ಮುಟ್ಟಿಯವರೊಡನೆ ಸಾಕಷ್ಟು
ಸಮಯ ಕಳೆಯುವ ಅವಕಾಶ ಒದಗಿ ಬರುತ್ತಿತ್ತು. ಅದು ಅವರ ವ್ಯಕ್ತಿತ್ವದ ಹಲವು ಮುಖಗಳನ್ನು ನಮಗೆ ತೋರಿಸುತ್ತಿತ್ತು.
ತೀರ್ಥಳ್ಳಿಯಲ್ಲಿ ಚಿತ್ರೀಕರಣ ನಡೆಯುತ್ತಿದ್ದ ಸಂದರ್ಭದಲ್ಲಿ ಚಿತ್ರೀಕರಣ ಮುಗಿಸಿ ರಾತ್ರಿ ಹೊತ್ತು
ಅವರ ಕೋಣೆಗೆ ಹೋಗಿ ಅವರಿಗೆ ಒಮ್ಮೆ ಶುಭರಾತ್ರಿ ಕೋರಿ ಬರುವುದು ನನ್ನ ಹಾಗೂ ಗೆಳೆಯ ವಿಕ್ರಮ್‍ನ ಅಭ್ಯಾಸವಾಗಿತ್ತು.
ಹಾಗೆ ಹೋದಾಗೆಲ್ಲಾ, ಅವರೊಡನೆ ಕಳೆದ ಸಮಯ, ಮಾತುಕಥೆ ಎಲ್ಲಾ
ಸ್ಮರಣೀಯ. ಒಮ್ಮೆ ನಾನು ಕೊಂಚ ರೋಮಾಂಚಿತನಾಗಿಯೇ ಅವರಿಗೆ ಹೇಳಿದೆ, ಸರ್… ನಾನು
ಹುಟ್ಟಿದಾಗಲೇ ನೀವೊಬ್ಬರು ಸೂಪರ್ ಸ್ಟಾರ್ ಆಗಿದ್ದಿರಿ. ಇಂದಿಗೂ ನೀವೊಬ್ಬ ಸೂಪರ್ ಸ್ಟಾರ್. ನಾನು
ಮೊದಲು ಚಿತ್ರ ನೋಡಲು ಆರಂಭಿಸಿದ ಕಾಲದಲ್ಲಿ ನಿಮ್ಮನ್ನು ಪರದೆಯಲ್ಲಿ ನೋಡಿದ್ದೆ. ಇಂದು ನಿಮ್ಮೊಡನೆ
ತೀರ್ಥಳ್ಳಿಯ ಈ ಸುಂದರ ಪರಿಸರದಲ್ಲಿ ಕುಳಿತು ಮಾತಾಡುತ್ತಿದ್ದೇನೆ ಎಂದರೆ ತುಂಬಾ ವಿಚಿತ್ರ ಅನಿಸುತ್ತದೆ
ಅಂದೆ. ಅವರು ನಕ್ಕರು. ನೋಡು, ಪ್ರಪಂಚದ ಗಾತ್ರಕ್ಕೆ ಭೂಮಿ ಎನ್ನುವುದೇ ಒಂದು ಧೂಳಿನ
ಕಣ. ಇನ್ನು ಆ ಭೂಮಿಗೆ ತೀರ್ಥಳ್ಳಿ ಎನ್ನುವುದು ಇನ್ನೂ ಸಣ್ಣ ಧೂಳಿನ ಕಣ. ಇನ್ನು ತೀರ್ಥಳ್ಳಿಯಲ್ಲಿ
ಉಳಿದುಕೊಂಡಿರುವ ನಾನು ಎನ್ನುವುದು ಅದಕ್ಕಿಂತ ಕ್ಷುಲ್ಲಕ. ಹೀಗೆ ವಿಶ್ವದ ಅಗಾಧತೆಯನ್ನು ಸದಾ ನೆನಪಿಟ್ಟುಕೋ, ಆಗ ನಿಗರ್ವಿಯಾಗಿ
ಜೀವಿಸುವುದು ಮನುಷ್ಯನಿಗೆ ಸಾಧ್ಯ. ಒಬ್ಬ ಮನುಷ್ಯ ಜೀವನದಲ್ಲಿ ಇಂತಿಷ್ಟು ಅಂತ ಕೆಲಸ ಮಾಡಬಹುದು. ಅದನ್ನು
ಅವನು ಸಾಧನೆ ಅಂತಾನೂ ಅಂದುಕೊಳ್ಳಬಹುದು. ಆದರೆ ಅದೆಲ್ಲಾ ವೈಯಕ್ತಿಕ ಮಾತ್ರ. ಸೃಷ್ಟಿಯ ಅಗಾಧತೆಯಲ್ಲಿ
ಇವೆಲ್ಲವೂ ನಗಣ್ಯ ಅಂದರು.
ಅಧ್ಯಾತ್ಮ ಮಾತನಾಡುವ ಇವರಿಗೆ ಲೌಕಿಕದಲ್ಲೂ ಇನ್ನಿಲ್ಲದ
ಉತ್ಸಾಹ. ಅವರಿಗೆ ತಂತ್ರಜ್ಞಾನದ ವೇಗವನ್ನು ಮೀರಿ ಅದನ್ನು ಅರಿಯುವ ತವಕ. ಚಿತ್ರರಂಗಕ್ಕೆ ಸಂಬಂಧಿಸಿದ
ಯಾವುದೇ ತಂತ್ರಜ್ಞಾನವಾದರೂ ಅದನ್ನು ಕೇಳಲು ಅವರ ಕಿವಿಗಳು ಸದಾ ಸಿದ್ಧ. ಅವರ ಕೊಚ್ಚಿನ್ ಮನೆಯಲ್ಲಿ
ಮಮ್ಮುಟ್ಟಿಯವರು ಒಂದು ಅತ್ಯಾಧುನಿಕ ಕಿರಿ ಚಿತ್ರಮಂದಿರವನ್ನು ಮಾಡಿಸಿಕೊಂಡಿದ್ದಾರೆ. ಕೆ. ಮಂಜು, ವಿಕ್ರಂ ಹಾಗೂ
ನನಗೆ ಒಮ್ಮೆ ಅದನ್ನು ನೋಡಲು ಮಮ್ಮುಟ್ಟಿಯವರು ಆಹ್ವಾನ ನೀಡಿದರು. ೨ಕೆ ದೃಶ್ಯ ಸಾಧ್ಯತೆಯುಳ್ಳ, ಉಪಗ್ರಹ ಬಿಂಬದ
ಮೂಲಕ ಪ್ರದರ್ಶನ ವ್ಯವಸ್ಥೆ ಇರುವ ಚಿತ್ರ ಮಂದಿರ ಅದು. ಸುಮಾರು ಮೂವತ್ತು ಜನರು ಏಕ ಕಾಲಕ್ಕೆ ಬಲು
ಹಿತ ವಾತಾವರಣದಲ್ಲಿ ಚಿತ್ರ ನೋಡಲು ಸಾಧ್ಯ ಇಲ್ಲಿ. ಇನ್ನು ಅವರ ಚಿತ್ರ ಸಂಗ್ರಹವಂತೂ ಬಲು ಅಪರೂಪ.
ಎಲ್ಲಾ ಕ್ಲಾಸಿಕ್ ಚಿತ್ರಗಳಿಂದ ಹಿಡಿದು ಇತ್ತೀಚಿನ ಹಾಲಿವುಡ್ ಚಿತ್ರದವರೆಗೂ ಅವರು ಆಸ್ತೆಯಿಂದ ಮಾಡಿರುವ
ಸಂಗ್ರಹವನ್ನು ನೋಡುವುದೇ ಆನಂದ. ಅವರ ಮೊಬೈಲ್ ಆಗಿರಬಹುದು, ಕಂಪ್ಯೂಟರ್ ಆಗಿರಬಹುದು ಇವೆಲ್ಲವೂ ಅವರಿಗೆ ತಂತ್ರಜ್ಞಾನದ
ಮೇಲಿರುವ ಮೋಹವನ್ನು ತೋರಿಸುತ್ತದೆ. ಅವರ ಚೆನ್ನೈನಲ್ಲಿ ಇರುವ ಮನೆಯಲ್ಲೂ ಒಂದು ಕಿರು-ಚಿತ್ರಮಂದಿರವನ್ನು
ರೂಪಿಸಿಕೊಂಡಿದ್ದಾರೆ. ಇವೆಲ್ಲಾ ಸಾಲದು ಎಂದು ತೀರ್ಥಳ್ಳಿಗೆ ಚಿತ್ರೀಕರಣಕ್ಕೆ ಬಂದಾಗ ಅಲ್ಲಿಗೆ ಒಂದು
ಕಿರು ಪ್ರೊಜೆಕ್ಟರನ್ನು ಎತ್ತಿಕೊಂಡು ಬಂದಿದ್ದರು! ಜೊತೆಗೆ ಒಂದಷ್ಟು ಸಿನೆಮಾಗಳು!
ನೀನಾಸಂ ಅಶ್ವಥ್ ಹಾಗೂ ಅಚ್ಯುತ ಎಂಬ
ನನ್ನ ಪ್ರೀತಿಯ ಇಬ್ಬರು ನಟರೊಂದಿಗೆ ಮಮ್ಮುಟ್ಟಿ
ಮಮ್ಮುಟ್ಟಿಯವರದು ಬಹಳ ಶಿಸ್ತಿನ ಜೀವನ. ನಟನೊಬ್ಬನಿಗೆ
ಅವನ ದೇಹವೆಂಬುದು ಪ್ರಮುಖ ಬಂಡವಾಳ. ಹೀಗಾಗಿ ಮಮ್ಮುಟ್ಟಿಯವರು ಆ ಕುರಿತು ತೀವ್ರ ಕಾಳಜಿಯನ್ನು ವಹಿಸುತ್ತಾರೆ.
ವೃತ್ತಿಜೀವನ ಆರಂಭಿಸಿ ಮೂವತ್ತು ವರುಷಗಳೇ ಉರುಳಿಹೋಗಿದ್ದರೂ ಅವರ ಸೌಂದರ್ಯಕ್ಕೆ ಇಂದು ಅಭಿಮಾನಿಗಳು
ಮರುಳಾಗುತ್ತಿದ್ದಾರೆ. ತಮ್ಮೊಂದಿಗೆ ತಮ್ಮ ಅಡಿಗೆಯವನನ್ನೂ ಕರೆದುಕೊಂಡು ಚಿತ್ರೀಕರಣಕ್ಕೆ ಬರುವ ಅವರು, ಆಹಾರದಲ್ಲಿ ಕಟ್ಟುನಿಟ್ಟಿನ
ಶಿಸ್ತನ್ನು ಪಾಲಿಸುವವರು. ತಮ್ಮ ಅಡಿಗೆಯಾತ ಕಳಿಸುವ ಆಹಾರವನ್ನು ನಮ್ಮೊಂದಿಗೆ ಅದೆಷ್ಟೋ ಬಾರಿ ಹಂಚಿಕೊಂಡಿದ್ದಾರೆ.
ಚೆನ್ನೈನಲ್ಲಿರುವ ಅವರ ಮನೆಗೆ ಕರೆದು ನಮಗೆ ಅವರು ನೀಡಿದ ಆತಿಥ್ಯ ಇವತ್ತಿಗೂ ಒಂದು ಸುಂದರ ನೆನಪು
ನಮಗೆ. ಚಿತ್ರೀಕರಣದ ಮೊದಲ ದಿನಗಳಲ್ಲಿ ಒಮ್ಮೆ ನಾವು ಕೊಚ್ಚಿನ್ನಿಗೆ ಹೋದಾಗ ಮಮ್ಮುಟ್ಟಿಯವರು ಮನೆಯಿಂದ
ಮಾಂಸದಡಿಗೆ ಮಾಡಿಸಿಕೊಂಡು ಬಂದಿದ್ದರು. ತಮ್ಮ ಪತ್ನಿ ಬಹಳ ಅಧ್ಬುತ ಪಾಕಪ್ರವೀಣೆ, ಅವಳ ಕೈರುಚಿಯನ್ನು
ನಮಗೆ ತೋರಿಸಬೇಕೆಂದು ಅವರಿಗೆ ಬಹಳ ಆಸೆ. ಆದರೆ ನಾನು, ಗೆಳೆಯ ವಿಕ್ರಂ ಇಬ್ಬರೂ ಶುದ್ಧ ಸಸ್ಯಾಹಾರಿಗಳು!
ನಾವಿ ವಿನಯದಿಂದ ಅವರಿಗೆ ವಿಷಯವನ್ನು ಹೇಳಿದಾಗ ಅವರಿಗೆ ಕೊಂಚ ಬೇಸರವೇ ಆಯಿತು. ಆಮೇಲೆ, “ಇನ್ನು ಮುಂದೆ ನಾನು ಸಸ್ಯಾಹಾರಿಗಳೊಂದಿಗೆ ಕೆಲಸವೇ ಮಾಡುವುದಿಲ್ಲ. ಅವರ ಜೀವನ ಎಂಥಾ ನೀರಸ!” ಎನ್ನುತ್ತಾ ನಕ್ಕರು.
ಅವರು ಧೂಮಪಾನ ಹಾಗೂ ಮಧ್ಯಪಾನಗಳಿಂದಲೂ ದೂರವಿರುವುದಲ್ಲದೇ, ಕೇರಳಾದಲ್ಲಿ ಮಧ್ಯ, ಕುಡಿತ, ಅಮಲು ಔಷಧಿಗಳ
ವಿರುದ್ಧ ಹೋರಾಟಕ್ಕೆ ಸಕ್ರಿಯ ಪ್ರೋತ್ಸಾಹಿಗಳೂ, ದಾನಿಗಳೂ ಆಗಿದ್ದಾರೆ.
ಮಮ್ಮುಟ್ಟಿಯವರ ಶಿಸ್ತು, ವೃತ್ತಿಪರತೆಗಳ
ಇನ್ನೊಂದೆರಡು ಮಾತು ಇಲ್ಲಿ ಹೇಳಬೇಕೆನಿಸುತ್ತದೆ. ಅದೊಂದು ದಿನ ಚಿತ್ರೀಕರಣ ಜೋರಾಗಿ ನಡೆಯುತ್ತಿತ್ತು.
ಅಂದು ಬೆಳಗ್ಗೆ ಚಿತ್ರೀಕರಣ ಏಳ ಗಂಟೆಗೆ ಆರಂಭವಾಗಿತ್ತು. ಒಂಭತ್ತಕ್ಕೆ ಮಮ್ಮುಟ್ಟಿಯವರು ಬಂದು ನಮ್ಮನ್ನು
ಸೇರಿಕೊಂಡರು. ಅಂದು ತಡರಾತ್ರಿ ಸುಮಾರು ಹನ್ನೊಂದರವರೆಗೆ ಚಿತ್ರೀಕರಣ ಇದೆ ಎಂದು ನಾನು ಹೋಗಿ ಅವರಿಗೆ
ಹೇಳಿದೆ. ಹೋ! ಆಗಲಿ ಎಂದರು. ಆದರೆ ಸಂಜೆಯಾಗುತ್ತಿದ್ದಂತೆ, ಕ್ಯಾಮರಾ ಮನ್, ವಿಕ್ರಂ ಸಹಾಯಕರಿಬ್ಬರಲ್ಲಿ
ಒಬ್ಬರ ತಾಯಿ ತೀರಿಕೊಂಡ ಸುದ್ದಿ ಶ್ರೀರಂಗಪಟ್ಟಣದಲ್ಲಿ ಇದ್ದ ನಮಗೆ ತಿಳಿಯಿತು. ಅವರು ಕುಸಿದು ಹೋದರು.
ಮಮ್ಮುಟ್ಟಿಯವರು ಅವರನ್ನು ಸಮಾಧಾನ ಮಾಡಿದರು. ನಿರ್ಮಾಪಕ ಕೆ. ಮಂಜು ಕೂಡಲೇ ಸ್ಪಂದಿಸಿ, ಆ ವ್ಯಕ್ತಿಯನ್ನು
ಬೆಂಗಳೂರಿಗೆ ಕರೆಸಿಕೊಂಡು ವಿಮಾನದಲ್ಲಿ ಹರಿದ್ವಾರಕ್ಕೆ (ಉತ್ತರ ಕ್ರಿಯೆ ಅಲ್ಲಿ ನಡೆಯುವುದಿತ್ತು)
ಕಳಿಸಿದರು. ಇದರಿಂದ ಚಿತ್ರೀಕರಣ ಸುಮಾರು ಒಂದು ಗಂಟೆ ಕಾಲ ನಿಧಾನವಾಗಿ ಸಾಗಿತು. ಅಂದಿನ ಚಿತ್ರೀಕರಣ
ಮುಗಿಯುವಾಗ ಮಧ್ಯರಾತ್ರಿಯ ಎರಡು ಗಂಟೆ! ಮಮ್ಮುಟ್ಟಿಯವರು ಚಕಾರವನ್ನೆತ್ತದೆ ದುಡಿದರು. ನಮಗೆಲ್ಲ ಹಸನ್ಮುಖರಾಗಿ
ಶುಭರಾತ್ರಿ ತಿಳಿಸಿ ತಮ್ಮ ಹೋಟೇಲಿಗೆ ತೆರಳಿದರು. ಮರುದಿನ ಮತ್ತೆ ಅದೇ ಹಸನ್ಮುಖದಲ್ಲಿ ಸಕಾಲದಲ್ಲಿ
ಚಿತ್ರೀಕರಣಕ್ಕೆ ಹಾಜರ್! ವಿಕ್ರಂ ಸಹಾಯಕನ ಸ್ಥಿತಿಯ ಬಗ್ಗೆಯೂ ಕೇಳಿ ತಿಳಿದುಕೊಂಡರು. ಮತ್ತೊಂದು ತಡ
ರಾತ್ರಿ ಚಿತ್ರೀಕರಣ ನಡೆಯುತ್ತಿತ್ತು. ಅಂದು ಮಮ್ಮುಟ್ಟಿಯವರ ಆರೋಗ್ಯ ಕೊಂಚ ಹದಗೆಟ್ಟಿತ್ತು. ಅವರು
ಸಾಕಷ್ಟು ಬಳಲಿದ್ದರು. ರಾತ್ರಿ ಹನ್ನೊಂದು ಗಂಟೆಯ ಅಂದಾಜಿಗೆ ಕೊನೆಯ ಶಾಟ್ ತೆಗೆದೆವು. ಆಗ ಮಮ್ಮುಟ್ಟಿಯವರು
ಕ್ಯಾಮರಾ ಮ್ಯಾನ್ ವಿಕ್ರಂ ಮಾಡಿದ್ದ ವಿಶಿಷ್ಟ ಲೈಟಿಂಗನ್ನು ಶ್ಲಾಘಿಸಿ ಇದನ್ನು ಬೇರೆ ರೀತಿ ಮಾಡುತ್ತಿದ್ದರೆ
ಹೇಗೆ ಮಾಡುತ್ತಿದ್ದೆ ಎಂದು ಕೇಳಿದರು. ವಿಕ್ರಂ ಅದಕ್ಕೆ ಒಂದು ಸಮರ್ಪಕ ಉತ್ತರ ಕೊಟ್ಟ. ಮಮ್ಮುಟ್ಟಿಯವರು
ಸಂತೋಷಗೊಂಡರು. ಹಾಗೆ ಲೈಟಿಂಗ್ ಮಾಡಿಯೂ ಒಂದು ಶಾಟ್ ತೆಗೆಯೋಣ. ಯಾವುದು ಹೆಚ್ಚು ಸಮರ್ಪಕವಾಗಿ ಕಾಣುವುದು
ಎಂದು ನೋಡೋಣ ಎಂದರು. ಅದಕ್ಕೆ ಮತ್ತೆ ಅರ್ಧ ಗಂಟೆ ಸಮಯ ಹೋಯಿತು. ಶಾಟ್ ತೆಗೆದದ್ದೂ ಆಯಿತು. ಹೀಗೆ
ಮಮ್ಮುಟ್ಟಿಯವರದ್ದು ಸದಾ, ಕುತೂಹಲದ ಮನಸ್ಸು, ಅಧ್ಯಯನದ ಆಸಕ್ತಿ
ಜೊತೆಗೆ ಅಪರಿಮಿತ ವೃತ್ತಿಪರತೆ ನಮ್ಮನ್ನು ಮತ್ತೆ ಮತ್ತೆ ಚಕಿತಗೊಳಿಸುತ್ತಿತ್ತು. ಶಿಕಾರಿ ಚಿತ್ರದಲ್ಲಿ
ವರ್ಣ ಸಂಯೋಜನೆ, ವಸ್ತ್ರವಿನ್ಯಾಸ, ಕಥನ ಕ್ರಮ ಹೀಗೆ
ಪ್ರತಿವಿಭಾಗದಲ್ಲೂ ಸಾಕಷ್ಟು ಪ್ರಯೋಗಗಳನ್ನು ನಾವು ಮಾಡಿದ್ದೇವೆ. ಮಮ್ಮುಟ್ಟಿಯವರು ಪ್ರತಿಯೊಂದರ ಬಗ್ಗೆಯೂ
ಕೇಳಿ ತಿಳಿದು ಸಂತೋಷ ಪಡುತ್ತಿದ್ದರು. ಹಿರಿಯಣ್ಣನಂತೆ ನಮ್ಮ ಹಿಂದೆ ನಿಂತು ಪ್ರೋತ್ಸಾಹಿಸುತ್ತಿದ್ದರು.
ಚಿತ್ರರಂಗದಲ್ಲಿ ಈಗಷ್ಟೇ ಕಣ್ಣು ಬಿಡುತ್ತಿರುವ ನನ್ನೊಂದಿಗೆ ಮಮ್ಮುಟ್ಟಿಯಂಥಾ ಅಗಾಧ ಪ್ರತಿಭೆ ನಡೆದುಕೊಂಡ
ರೀತಿ ನನಗೆ ಸದಾ ಅವಿಸ್ಮರಣೀಯ.
ಹಾಡೊಂದರ ಚಿತ್ರೀಕರಣದ ವೇಳೆಯಲ್ಲಿ
ಮಮ್ಮುಟ್ಟಿಯವರು ನಟಿಸಲು ಆರಂಭಿ ಸುಮಾರು ಮೂವತ್ತು
ವರ್ಷವಾಗಿದೆ.ಮುನ್ನೂರ ಎಪ್ಪತ್ತರ ಹತ್ತಿರ ಚಿತ್ರಗಳು ಆಗಿಹೋಗಿವೆ. ಆದರೆ ಅವರ ಅಭಿಮಾನಿ ಬಳಗ ಇನ್ನೂ
ಹಾಗೆಯೇ ಇದೆ. ಅಭಿಮಾನಿಗಳಲ್ಲಿ ಒಂದು ತಲೆಮಾರು ಮುಗಿದು ಹೊಸ ತಲೆಮಾರಿನವರೂ ಅವರನ್ನು ಅದೇ ರೀತಿ ಬೆಂಬಲಿಸುತ್ತಿದ್ದಾರೆ, ಪ್ರೀತಿಸುತ್ತಾರೆ.
ಮಮ್ಮುಟ್ಟಿಯವರ ಚಿತ್ರ ಮಾಡಲು ನಾನು ಆರಂಭಿಸಿದಂದಿನಿಂದ ಇಂದಿನವರೆಗೆ ಫೇಸ್ ಬುಕ್, ಆರ್ಕುಟ್, ಟ್ವಿಟರ್ ಹೀಗೆ
ಸಾಧ್ಯ ಎಲ್ಲಾ ಮಾಧ್ಯಮಗಳ ಮೂಲಕ ಮಮ್ಮುಟ್ಟಿಯವರ ಅಭಿಮಾನಿಗಳು ನನ್ನನ್ನು ಸಂಪರ್ಕಿಸುವುದು, ಅವರ ಬಗ್ಗೆ ತಿಳಿದುಕೊಳ್ಳಲು
ಹವಣಿಸುವುದು ನೋಡುವಾಗ, ಇದೆಲ್ಲಾ ಕೆಲವರಿಗೆ ಹೇಗೆ ಸಾಧ್ಯ ಎಂದು ಅಚ್ಚರಿಯಾಗುತ್ತದೆ.
ಇದರ ಕುರಿತು ಅವರನ್ನು ಕೇಳಿದರೆ, “ನಾನು ಇನ್ನೂ ಪ್ರಸ್ತುತನಾಗುವುದು ಬಹುಷಃ ನಾನು ಇಂದಿನ
ಬಗ್ಗೆ ಜಾಗ್ರತನಾಗಿರುವುದರಿಂದ ಇರಬಹುದು. ನಾನು ಇರುವ ಕಾಲದ ಅರಿವನ್ನು ಸದಾ ಇಟ್ಟುಕೊಂಡು, ನನ್ನ ಸುತ್ತ ಮುತ್ತಲಿನ
ಬದಲಾವಣೆಗಳಿಗೆ, ಘಟನೆಗಳಿಗೆ ಸದಾ ಸ್ಪಂದಿಸುತ್ತಿರುವುದರಿಂದ ನಾನು
ಪ್ರಸ್ತುತನಾಗಿರಲು ಸಾಧ್ಯ ಎಂದು ನನ್ನ ಭಾವನೆ. ಕೆಲವೊಮ್ಮೆ ನಾನು ನನ್ನ ಸುತ್ತ ಮುತ್ತಲಿನ ಘಟನೆಗಳಲ್ಲಿ
ಭಾಗವಹಿಸುತ್ತೇನೆ, ಮಧ್ಯಸ್ತಿಕೆವಹಿಸುತ್ತೇನೆ. ಕೆಲವೊಮ್ಮೆ ಆ ಘಟನೆಗಳನ್ನು
ಪ್ರಭಾವಿಸುತ್ತೇನೆ ಕೂಡಾ. ಹೀಗಾಗಿ ನಾನು ಸದಾ ಕಾಲದ ಬದಲಾವಣೆಗಳ ಮಧ್ಯದಲ್ಲಿರುತ್ತೇನೆ. ಹಾಗೇ ಕಾಲಕ್ಕೆ
ತಕ್ಕಂತೆ ಪ್ರಸ್ತುತನಾಗಿರುತ್ತೇನೆ. ಒಬ್ಬ ಸಾಮಾಜಿಕ ಜೀವಿಯಾಗಿ ನೀರು, ಗಾಳಿ, ಬೆಳಕಿನಂತೆ ಸಮಾಜದಿಂದ
ನಾನು ಅನೇಕ ವಿಷಯಗಳನ್ನು ಪಡೆಯುತ್ತಿರುತ್ತೇನೆ. ಹೀಗಿರುವಾಗ ಸಮಾಜಕ್ಕೆ ಏನೋ ಒಂದನ್ನು ಮರಳಿಸುವುದೂ
ನನ್ನ ಕರ್ತವ್ಯವಾಗಿರುತ್ತದೆ. ಬಹುಷಃ ಹೀಗೆ ಹೇಳಿದರೆ ಅದು ತತ್ವಜ್ಞಾನವಾದೀತು. ಮೂಲತಃ ನಾನೊಬ್ಬ ನಟ.
ಅನೇಕರು ನನ್ನ ಅಭಿನಯವನ್ನು ಇಷ್ಟಪಡುತ್ತಾರೆ ಹಾಗಾಗಿ ನಾನು ಚಿತ್ರತಾರೆ ಎನಿಸಿಕೊಳ್ಳುತ್ತೇನೆ. ವಿಷಯ
ಇಷ್ಟೇ ಇರುವುದು. ನನ್ನ ಅನಿಸಿಕೆಯ ಪ್ರಕಾರ ನಾನು ಮೂವತ್ತು ವರುಷಗಳ ನಂತರ ಇಂದಿಗೂ ಕೇವಲ ಬೆಳೆಯುತ್ತಿರುವ
ನಟ ಎಂದು ಅನಿಸುತ್ತದೆ. ನಾನು ಬೆಳೆಯುವುದು ನಿಲ್ಲಿಸಿದ ದಿನ ನಟನೆಯೂ ಮುಗಿಯುತ್ತದೆ ಎಂದು ನನ್ನ ಭಾವನೆ.” ಎನ್ನುತ್ತಾರೆ.
ಮಮ್ಮುಟ್ಟಿಯವರು ತಮ್ಮ ಅಭಿನಯಕ್ಕೆ ಮೂರು ಬಾರಿ ರಾಷ್ಟ್ರೀಯ
ಪ್ರಶಸ್ತಿಯನ್ನು ಪಡೆದಿದ್ದಾರೆ, ಹಲವು ಬಾರಿ ಕೇರಳ ರಾಜ್ಯ ಪ್ರಶಸ್ತಿಯನ್ನೂ, ಫಿಲ್ಮ್ ಫೇರ್
ಪ್ರಶಸ್ತಿಯನ್ನೂ ಸಾವಿರಾರು ಇತರ ಪ್ರಶಸ್ತಿಗಳನ್ನೂ ತಮ್ಮ ವೃತ್ತಿಜೀವನದಲ್ಲಿ ಪಡೆದಿದ್ದಾರೆ. ಅವರ
ಕೊಚ್ಚಿಯಲ್ಲಿರುವ ಮನೆಗೂ, ಚೈನ್ನೈಯಲ್ಲಿರುವ ಮನೆಗೂ ಹೋಗಿದ್ದಾಗ ಪ್ರಶಸ್ತಿಗಳೆಲ್ಲವನ್ನೂ
ನೋಡಿದಷ್ಟೂ ಮುಗಿಯುತ್ತಿರಲಿಲ್ಲ. ಆದರೆ ಇವ್ಯಾವುವೂ ಅವರ ಮೂಲಧಾತುವಿಗೆ ತಟ್ಟಿಯೇ ಇಲ್ಲ ಎಂದು ಅವರೊಡನೆ
ಸಮಯ ಕಳೆದಾಗೆಲ್ಲ ಅನಿಸುತ್ತದೆ. ತೀರ್ಥಳ್ಳಿಯಲ್ಲಿ ನಾವು ಚಿತ್ರೀಕರಣ ನಡೆಸುತ್ತಿದ್ದಾಗ ಕಾಕತಾಳೀಯವಾಗಿ
ಒಂದು ದಿನ, ಕನ್ನಡದ ದಿನಪತ್ರಿಕೆಯೊಂದರಲ್ಲಿ ಮಮ್ಮುಟ್ಟಿಯವರ
ಬಗ್ಗೆ ಒಂದು ಲೇಖನ ಪ್ರಕಟವಾಗಿತ್ತು. ಅದನ್ನು ಹೊತ್ತು ಅಲ್ಲೇ ತುಸು ದೂರದ ಹಳ್ಳಿಯ ಒಬ್ಬ ರೈತ ನಮ್ಮ
ಚಿತ್ರೀಕರಣ ಸ್ಥಳಕ್ಕೆ ಬಂದರು. ಇವರೇ ಆ ಮಹಾನ್ ನಟ ಅಲ್ಲವೇ, ಅವರಿಗೆ ನಾನು ಈ ಪತ್ರಿಕೆಯನ್ನು ತೋರಿಸಬೇಕು ಎಂದರು.
ನಾನು ಪತ್ರಿಕೆಯನ್ನು ತೆಗೆದುಕೊಂಡು ಹೋಗಿ ಮಮ್ಮುಟ್ಟಿಯವರಿಗೆ ಇಡೀ ಲೇಖನವನ್ನು ಓದಿ ಇಂಗ್ಲೀಷಿನಲ್ಲಿ
ಅರ್ಥ ಹೇಳಿದೆ. ಅವರು ಅದನ್ನು ಕೇಳಿ ಬಹಳ ಸಂತಸಪಟ್ಟರು. ಪತ್ರಿಕೆಯನ್ನು ಹೊತ್ತು ತಂದ ಆ ರೈತನನ್ನು
ತಮ್ಮ ಪಕ್ಕದಲ್ಲಿ ಕೂರಿಸಿ ಅವನ ಕುಶಲ ವಿಚಾರಿಸಿಕೊಂಡರು. ಆ ವ್ಯಕ್ತಿಯ ಹಿಗ್ಗಿಗೆ ಸೀಮೆಯೇ ಇರಲಿಲ್ಲ.
ಹಾಡಿನ ಚಿತ್ರೀಕರಣ
ಮಮ್ಮುಟ್ಟಿಯವರಿಗೆ ಕರ್ನಾಟಕದ ಇತಿಹಾಸ, ಸಂಸ್ಕೃತಿಯ ಬಗ್ಗೆ
ಅಪರಿಮಿತ ಆಸಕ್ತಿ, ಅಭಿಮಾನ. ಅವರು ಇಂಗ್ಲೀಷಿಗೆ ತರ್ಜುಮೆಯಾಗಿರುವ ಅನಂತ
ಮೂರ್ತಿ, ಗಿರೀಶ್ ಕಾರ್ನಾಡ್ ಇತ್ಯಾದಿ ಅನೇಕ ಪ್ರಮುಖ ಸಾಹಿತಿಗಳ
ಕೃತಿಯನ್ನು ಓದಿರುವುದಾಗಿ ಒಮ್ಮೆ ನನಗೆ ಹೇಳಿದ್ದರು. ಅವರು ಯಕ್ಷಗಾನ, ಡೊಳ್ಳುಕುಣಿತ
ಇತ್ಯಾದಿ ಸಾಂಸ್ಕೃತಿಕ ವಿಷಯಗಳ ಬಗ್ಗೆ, ಇಲ್ಲಿನ ರಾಜಕೀಯ ಆಗುಹೋಗುಗಳ ಬಗ್ಗೆ ಸದಾ ನಮ್ಮನ್ನು
ಕೇಳಿ ತಿಳಿದುಕೊಳ್ಳುತ್ತಿದ್ದರು. ನಮ್ಮಲ್ಲಿನ ಶ್ರೇಷ್ಟ ನಿರ್ದೇಶಕರಾದ ಗಿರೀಶ್ ಕಾಸರವಳ್ಳಿಯವರ ಬಗ್ಗೆ, ಕಾರಂತರ ಬಗ್ಗೆ
ಮಮ್ಮುಟ್ಟಿಯವರಿಗೆ ಅತೀವ ಅಭಿಮಾನ. ನಮ್ಮಲ್ಲಿನ ಹೊಸ ಅಲೆಯ ಚಿತ್ರಗಳ ಕುರಿತು ಅವರಿಗೆ ಬಹಳ ಗೌರವ.
ಇಲ್ಲಿನ ಚಿತ್ರಗೀತೆಗಳ ಬಗ್ಗೆಯೂ ಅವರಿಗೆ ಎಲ್ಲಿಲ್ಲದ ಕುತೂಹಲ, ಗೌರವ. ನಮ್ಮ ಚಿತ್ರದ
ಹಾಡುಗಳನ್ನು ಹರಿಕೃಷ್ಣ ತೀವ್ರ ಆಸಕ್ತಿಯಿಂದ ಬಹಳ ಅಂದವಾಗಿ ರಚಿಸಿದ್ದಾರೆ. ಅದನ್ನು ಕೇಳಿ, ಮಮ್ಮುಟ್ಟಿಯವರು
ಹರಿಕೃಷ್ಣರಿಗೇ ನೇರ ಕರೆ ಮಾಡಿ ಅವರಿಗೆ ತಮ್ಮ ಹರ್ಷವನ್ನು ವ್ಯಕ್ತಪಡಿಸಿದ್ದರು.
ಚಿತ್ರೀಕರಣ ಎಲ್ಲಾ ಮುಗಿದು ಚಿತ್ರದ ಸಂಸ್ಕರಣದ ಸಂದರ್ಭದಲ್ಲಿ, ಮಲಯಾಳ ಚಿತ್ರಕ್ಕೆ
ಮಮ್ಮುಟ್ಟಿಯವರು ತಮ್ಮ ವಿಶಿಷ್ಟ ಧ್ವನಿಯನ್ನು ಕೊಟ್ಟದ್ದಾಯ್ತು. ಇನ್ನು ಕನ್ನಡ ಚಿತ್ರಕ್ಕೆ ಧ್ವನಿ
ಜೋಡಣೆಯ ಸಂದರ್ಭ ಬಂದಾಗ, ಅದನ್ನು ತಾವೇ ಮಾಡುತ್ತೇವೆ ಎಂದು ಮುಂದೆ ಬಂದರು.
ಅದಕ್ಕಾಗಿ ನಾನು ಹೋಗಿ ಕೊಚ್ಚಿಯಲ್ಲಿ ಠಿಕಾಣಿ ಹೂಡಿದೆ. ಅವರ ಮನೆಯ ಬಳಿಯಲ್ಲೇ ಒಂದು ಸ್ಟೂಡಿಯೋದಲ್ಲಿ
ಇದು ನಡೆಯಿತು. ದಿನವೂ ಬೆಳಗ್ಗೆ ಸುಮಾರು ಒಂಭತ್ತೂವರೆಗೆ ಬರುವ ಅವರು, ಮಧ್ಯಾಹ್ನ ಒಂದರವರೆಗೆ
ಮತ್ತೆ ಮೂರರಿಂದ ಸಂಜೆ ಆರರವರೆಗೆ ಸಾಕಷ್ಟು ವಿರಾಮಗಳನ್ನು ತೆಗೆದುಕೊಳ್ಳುತ್ತಾ ಧ್ವನಿಜೋಡಣೆಯನ್ನು
ಮಾಡಿದರು. ಒಂದಕ್ಷರವೂ ಗೊತ್ತಿಲ್ಲದ ಭಾಷೆಯಲ್ಲಿ ಧ್ವನಿಕೊಡುವುದು ಬಹಳ ಕಷ್ಟದ ಕೆಲಸ. ಅದರಲ್ಲೂ ಚಿತ್ರೀಕರಣದ
ಸಂದರ್ಭದಲ್ಲಿನ ಹರಿವು ಇಲ್ಲದೆ, ಅಂದು ನೀಡಿದ ಅಭಿವ್ಯಕ್ತಿಯನ್ನೇ ಗೊತ್ತಿಲ್ಲದ ಭಾಷೆಯಲ್ಲಿ
ನೀಡುವುದು ಎಂಥಾ ಕಷ್ಟದ ಕೆಲಸ ನೀವೇ ಯೋಚಿಸಿನೋಡಿ. ತಮ್ಮ ಅನುಕೂಲಕ್ಕೆ ಇಡೀ ಚಿತ್ರದ ಕನ್ನಡ ಸಂಭಾಷಣೆಯನ್ನು
ಮಲಯಾಳದಲ್ಲಿ ಬರೆಯಿಸಿಕೊಡಲೇ ಅಂತ ನಾನು ಕೇಳಿದೆ. ಇಲ್ಲ, ನಾನೇ ಬರೆಯುತ್ತೇನೆ, ಆಗ ನನಗೆ ಅಭ್ಯಾಸ
ಆದಂತೆಯೂ ಆಯಿತು ಎಂದರು. ಹಾಗೆ ಆರಂಭವಾಯಿತು ನಮ್ಮ ಹದಿನಾಲ್ಕು ದಿನಗಳ ಧ್ವನಿಜೋಡಣೆಯ ಯಾನ. ಕುಳಿತರೆ
ಜಾಡ್ಯ ಕಾಡುತ್ತದೆ ಎಂದು ಸ್ಟೂಡಿಯೋದ ಒಳಗೆ ನಿಂತುಕೊಂಡು, ನಾನು ನಿಧಾನಕ್ಕೆ, ಬಿಡಿಸಿ ಹೇಳಿದ
ವಾಕ್ಯಗಳನ್ನು ಅವರು ವಿಧೇಯ ವಿದ್ಯಾರ್ಥಿಯಂತೆ ಬರೆದುಕೊಳ್ಳುತ್ತಿದ್ದರು. ಆಮೇಲೆ ನನ್ನಿಂದ ಅದನ್ನು
ಅನೇಕಬಾರಿ ಹೇಳಿಸಿ, ಕೇಳಿ, ಅನುಕರಿಸಿ ಅಭ್ಯಾಸ ಮಾಡಿಕೊಳ್ಳುತ್ತಿದ್ದರು. ಆಮೇಲೆ
ಒಂದೆರಡು ಬಾರಿ ಪ್ರಯತ್ನ ಮಾಡಿ ಸಮರ್ಪಕವಾಗಿ ಧ್ವನಿ ಜೋಡಣೆ ಮಾಡುತ್ತಿದ್ದರು. ಅವರ ಧ್ವನಿಯನ್ನು ಕೇಳಿದವರಿಗೆ
ಅವರು ಕನ್ನಡಿಗ ಅಲ್ಲ ಎನ್ನುವುದು ಕೂಡಲೇ ತಿಳಿಯುತ್ತದೆ. ಆದರೆ ಚಿತ್ರದಲ್ಲಿನ ಅವರ ಪಾತ್ರ ಕನ್ನಡಿಗನದ್ದೇ
ಆದರೂ, ಅವನು ಹುಟ್ಟಿದ್ದು, ಬೆಳೆದದ್ದು ಎಲ್ಲವೂ
ದೆಹಲಿಯಲ್ಲಿ ಹೀಗಾಗಿ ಅವರ ಕನ್ನಡವನ್ನು ಆನಿಟ್ಟಿನಲ್ಲಿ ನೋಡಿ ಅನುಭವಿಸಬಹುದಾಗಿದೆ. ಅವರು ಮಾಡಿದ
ಈ ಸಾಹಸವನ್ನು ಕಂಡು ನಾನು ಬೆರಗಾದೆ. ನಿಮ್ಮ ವೃತ್ತಿ ಜೀವನದ ಈ ಔನತ್ಯದಲ್ಲಿ, ಇಂಥಾ ಸಾಹಸಗಳು
ಬೇಕೇ? ನೀವು ಅಭಿನಯಿಸಿರುವ, ಮಲಯಾಳ, ತಮಿಳು, ತೆಲುಗು, ಹಿಂದಿ, ಇಂಗ್ಲೀಷ್ ಭಾಷೆಗಳಲ್ಲೂ
ನೀವು ಇದೇ ಹಠತೋರಿ ಧ್ವನಿಜೋಡಣೆ ಮಾಡಿದ್ದೀರಿ, ಇದು ಯಾಕೆ ಅಂತ ನಾನೊಮ್ಮೆ ವಿರಾಮದಲ್ಲಿ ಅವರನ್ನು
ಕೇಳಿದೆ. “ಒಬ್ಬ ನಟ ತನ್ನ
ದೇಹ ಭಾಷೆಯ ಮೂಲಕ ಪ್ರತಿಕ್ರಿಯಿಸಬಹುದಷ್ಟೇ. ಆದರೆ ನಟನೆ ಸಂಪೂರ್ಣವಾಗುವುದು ಆ ಪ್ರತಿಕ್ರಿಯೆಗೆ ಧ್ವನಿ
ಸೇರಿದಾಗ ಮಾತ್ರ. ನಿಮ್ಮ ಮುಖ ಮಾತನಾಡಬಹುದು. ಆದರೆ ಅದಕ್ಕೆ ಅರ್ಥ ಬರುವುದು ನಿಮ್ಮ ಭಾಷೆ, ಧ್ವನಿ ಸೇರಿದಾಗ
ಮಾತ್ರ. ಆದರೆ ನನ್ನ ನಟನೆಗೆ ಇನ್ಯಾರೋ ಒಬ್ಬರು ತಮ್ಮ ಧ್ವನಿಯನ್ನು ನೀಡಿದರೆ, ಅದು ಸಹಜವಾಗಿರುವುದಿಲ್ಲ.
ಹೀಗಾಗಿ ಸಂಪೂರ್ಣ ನಟನೆಗೆ ಸ್ವಂತ ಧ್ವನಿ ನೀಡುವುದುತೀರಾ ಅಗತ್ಯ ಎಂದು ನಾನು ನಂಬಿದ್ದೇನೆ. ಎಂದರು.
ಶಿಕಾರಿ ಚಿತ್ರೀಕರಣದುದ್ದಕ್ಕೂ ಮಮ್ಮುಟ್ಟಿಯಂಥಾ
ಮಹಾನ್ ನಟನಿಂದ ಅದೆಷ್ಟೋ ವಿಷಯಗಳನ್ನು ನಾನು ಹಾಗೂ ನನ್ನ ಚಿತ್ರ ತಂಡದವರು ಕಲಿತಿದ್ದೇವೆ. ‘ಶಿಕಾರಿ’ ಎಂಬ ಸುಂದರ ಕೃತಿಯನ್ನು ರೂಪಿಸಿದ್ದೇವೆ. ಮೂರು ವರ್ಷದ
ಹಿಂದೆ ನಾವು ಕಂಡ ಕನಸು ಇಂದು ಸಿಂಗರಿಸಿಕೊಂಡು ನಮ್ಮೆದುರು ನಿಂತಿದೆ. ನಾವು ಚಿತ್ರಮಂದಿರಕ್ಕೆ ಬಂದಾಗ
ನೀವೆಲ್ಲರೂ ಚಿತ್ರ ನೋಡಿ ನಮ್ಮ ಕನಸಿಗೆ ನಿಜವಾದ ಅರ್ಥವನ್ನು ಕೊಡುತ್ತೀರಿ, ನಮ್ಮ ಈ ಅವಿಸ್ಮರಣೀಯ
ಪಯಣಕ್ಕೆ ಜೊತೆಕೊಡುತ್ತೀರಿ ಎಂದು ನಂಬಿದ್ದೇನೆ. ನಿರ್ಮಾಪಕ ಕೆ. ಮಂಜು, ನಾನು ಹಾಗೂ ನಮ್ಮ
ಇಡೀ ಚಿತ್ರ ತಂಡ  ಹಾಗೂ ಜೊತೆಯಲ್ಲಿ ನಮ್ಮ ನಿಮ್ಮೆಲ್ಲರ
ಮಮ್ಮುಟ್ಟಿಯವರು ನಿಮಗಾಗಿ ಚಿತ್ರಮಂದಿರಗಳಲ್ಲಿ ಕಾಯುತ್ತಿರುತ್ತೇವೆ.
Share This