ಈ ಕಥೆ ಆರಂಭವಾಗುವುದು ಒಂದು ಸಾವಿನಿಂದ. ಅದ್ಯಾವುದೋ ಅಂತರ ರಾಷ್ಟ್ರೀಯ ಓಟ ಸ್ಪರ್ಥೆಯಲ್ಲಿ ಗೆದ್ದ ಆಲ್ಬರ್ಟ್ ಪಿಂಟೋರವರಿಗೆ ಅಂದಿನ ಮುಖ್ಯಮಂತ್ರಿಗಳು ರಾಜ್ಯ ಸರಕಾರದ ಕಡೆಯಿಂದ ಒಂದು ೪೦-೬೦ ವಿಸ್ತೀರ್ಣದ ಸೈಟನ್ನು ಬೆಂಗಳೂರಿನಲ್ಲಿ ಕೊಟ್ಟರು. ಆದರೆ ಮಂಗಳೂರು ಮೂಲದ ಆಲ್ಬರ್ಟ್ ಪಿಂಟೋರಿಗೆ ಇದು ಗೊತ್ತೇ ಇರಲಿಲ್ಲ! ಆಲ್ಬರ್ಟ್ ಪಿಂಟೋರವರಿಗೆ ರಕ್ತದ ಒತ್ತಡ ಇದೆ ಅವರು ಸಿಟ್ಟು ಮಾಡಬಾರದು ಎಂದು ಅವರ ವೈದ್ಯರು ಹೇಳಿದ್ದರು. ಹಲವು ವರ್ಷಗಳ ನಂತರ ಪಕ್ಕದ ಗಲ್ಲಿಯ ಮಕ್ಕಳು ಕ್ರಿಕೆಟ್ ಆಡುತ್ತಾ ಚಂಡನ್ನು ತಮ್ಮ ಮನೆಯ ಕಿಟಕಿಗೆ ಹೊಡೆದದ್ದರಿಂದ ಸಿಟ್ಟುಗೊಂಡ ಆಲ್ಬರ್ಟ್ ಪಿಂಟೋ ರಕ್ತದ ಒತ್ತಡ ಹೆಚ್ಚಿ ದೈವಾಧೀನರಾದರು. “ಸೌಮ್ಯ ಸ್ವಭಾವದ, ಕರುಣಾಮಯಿ ತಂದೆಯ ನೆನಪಿನಲ್ಲಿ – ಮಕ್ಕಳು” ಎಂದು ಅಮೇರಿಕಾದಲ್ಲಿದ್ದ ಅವರ ಮಕ್ಕಳು ಮಂಗಳೂರಿನಲ್ಲಿ ಮಾತ್ರ ಪ್ರಕಟವಾಗುತ್ತಿದ್ದ ಪತ್ರಿಕೆಯೊಂದರಲ್ಲಿ ಅಶ್ರುತರ್ಪಣವನ್ನು ಎರಡು ಸಾವಿರ ರೂಪಾಯಿ ಕೊಟ್ಟು ಮುದ್ರಿಸಿದ್ದರು. ಬೆಂಗಳೂರಲ್ಲಿ ಆಲ್ಬರ್ಟ್ ಪಿಂಟೋಗಾಗಿ ಕಾದುಕೊಂಡಿದ್ದ ಸೈಟು ಈಗ ಅನಾಥವಾಗಿತ್ತು.

ಕಳೆದು ಹೋದ ಈ ಅನೇಕ ವರ್ಷಗಳಲ್ಲಿ, ಈ ಸೈಟಿನ ಸುತ್ತಲಿನ ಸೈಟುಗಳಲ್ಲಿ ವಾಸ್ತು, ಫೆಂಗ್ ಶುಯ್ ಇತ್ಯಾದಿಗಳ ಪ್ರಕಾರ ಅನೇಕ ಮನೆಗಳು ಮೂಡಿ ಬಂದಿದ್ದವು. ಐಟಿಯಿಂದ ಹಿಡಿದು, ಡಾಕ್ಟರ್ ವರೆಗೆ ನಾನಾವೃತ್ತಿಯವರು ನೆಲೆಸಿದ್ದ ಆ ಸ್ಥಳವನ್ನು ‘ಹಸ್ತಿನಾವತಿ ಲೇಔಟ್’ ಅಂತ ಗುರುತಿಸಲಾಗುತ್ತಿತ್ತು. ದಿನದಿಂದ ದಿನಕ್ಕೆ ಕೊಬ್ಬುತ್ತಿರುವ ಬೆಂಗಳೂರು ನಗರಕ್ಕೆ ಒಂದು ಕಾಲದಲ್ಲಿ ಉದ್ಯಾನನಗರಿ ಎಂಬ ಅನ್ವರ್ಥನಾಮವಿದ್ದುದು ನಿಮಗೆಲ್ಲರಿಗೂ ನೆನಪಿದ್ದರೂ, ಬೆಂಗಳೂರಿನ ಹೆಚ್ಚಿನ ಕಡೆ ಇಂದು ನಾಮ ಮಾತ್ರ ಶೇಷವಾಗಿದೆ. ನಮ್ಮ ಹಸ್ತಿನಾವತಿ ಲೇಔಟ್ ಕೂಡಾ ಇದಕ್ಕೆ ಹೊಸತಲ್ಲ. ಇಲ್ಲಿ ಸಾರ್ವಜನಿಕ ಸ್ಥಳ ಎಂಬುದು ಕೇವಲ ರಸ್ತೆ ಮಾತ್ರವಾಗಿತ್ತು. ಬೆಳಗಾಗೆದ್ದು ಕೊಬ್ಬು ಕರಗಿಸಲು ಈ ಲೇಔಟಿನವರೆಲ್ಲರೂ ಅಲ್ಲಿನ ದಾರಿಗಳಲ್ಲೇ ಏದುಸಿರು ಬಿಡುತ್ತಾ ಓಡುತ್ತಿದ್ದರು. ಹಾ! ಆಲ್ಬರ್ಟ್ ಪಿಂಟೋ ಬಿಟ್ಟುಹೋಗಿದ್ದ ಅವರಿಗೇ ಗೊತ್ತಿಲ್ಲದಿದ್ದ ೪೦-೬೦ ಈ ಲೇಔಟಿನಲ್ಲಿದ್ದ ಇನ್ನೊಂದು ಸಾರ್ವಜನಿಕ ಸ್ಥಳವಾಗಿತ್ತು.

ಯಾರೂ ಇಲ್ಲದವರಿಗೆ ಆ ದೇವರಿದ್ದಾನೆ ಎನ್ನುವುದು ನಮ್ಮ ಸಿನೆಮಾಗಳಲ್ಲಿ ಜನಪದ. ಹೀಗೆ ಆಲ್ಬರ್ಟ್ ಪಿಂಟೋರ ಸೈಟಿಗೆ ಆಗಿಬಂದದ್ದೂ ದೇವರೇ. ಲೇಔಟ್ ಸಾಕಷ್ಟು ದೊಡ್ಡದಾಗುವ ಮೊದಲು ಅತ್ತಿತ್ತಲಿನ ಗೆಳೆಯರ ಬಳಗಕ್ಕೆ ಸಾರ್ವಜನಿಕ ಗಣಪತಿ ಕೂರಿಸಲು ಇದು ಸಾಕಷ್ಟು ಪ್ರಶಸ್ತ ಸ್ಥಳವಾಗಿತ್ತು. ಈ ಸೈಟಿನಲ್ಲಿ ಗಣಪತಿ ಕೂರಿಸಲು ಯಾರನ್ನು ಕೇಳುವುದು ಎಂದು ಯುವಕ ವೃಂದ ಗೊಂದಲದಲ್ಲಿರಲು, ಅದು ಹೇಗೋ, ಇದರ ಮಾಲಿಕರು ಔಟ್ ಆಫ್ ಟೌನ್ ಇರೋದು ಅಂತ ಯಾರೋ ಒಬ್ಬರು ಹೇಳಿಬಿಟ್ಟರು. ಸರಿ, ಅವರು ಬಂದರೆ, ನಾವೇನೂ ಕಳ್ಳತನ ಮಾಡುತ್ತಿಲ್ಲವಷ್ಟೇ, ಗಣಪನನ್ನು ಕೂರಿಸೋದು ತಾನೇ ಎಂದು ಯುವಕ ವೃಂದ ಗಣಪನನ್ನು ಕೂರಿಸಿಯೇ ಬಿಟ್ಟರು. ಒಂದನೇ ವರ್ಷ ಏನೂ ತೊಂದರೆ ಆಗಲಿಲ್ಲ ಎಂದ ಮೇಲೆ ಆ ಜಾಗ ಖಾಯಂ ಜಾಗವಾಗಿಯೇ ಬಿಟ್ಟಿತು. ಲೇಔಟ್ ಬೆಳೆಯುತ್ತಿದ್ದಂತೆ ಅಲ್ಲಿಗೆ ಹೊಸತಾಗಿ ಬರುತ್ತಿದ್ದ ವಲಸೆಗಾರರು ಗಣಪನಿಗೆ ಬಂದು ನಮಸ್ಕಾರ ಮಾಡುತ್ತಿದ್ದದ್ದು ವಾಡಿಕೆಯಾಗಿತ್ತು. ದೂರದ ಕಾಸರಗೋಡಿನಿಂದ “ಕನಸಲ್ಲಿ ಬಂದು ದೇವಿಯೇ ಅಪ್ಪಣೆ ಕೊಟ್ಟಳು” ಎಂದು ಹೇಳಿಕೊಂಡು ಇಲ್ಲಿಗೆ ಬಂದ ಕಾವಿಧಾರಿಯೊಬ್ಬ ಅಲ್ಲಿ ಮರದ ಕೆಳಗೆ ಕೂತು ತಪಸ್ಸು ಮಾಡಿ, ಸುತ್ತಮುತ್ತಲಿನ ಜನರಿಂದ ಕಾಲು ಹಿಡಿಸಿಕೊಳ್ಳಲಾರಂಭಿಸಿದ. ಗಣೇಶ ಕೂರಿಸುವ ಕೆಲಸಕ್ಕಾಗಿ ಯುವಕ ವೃಂದದ ಚಂದಾ ಸಂಗ್ರಹಣೆ ವರ್ಷದಿಂದ ವರ್ಷಕ್ಕೆ ಜೋರಾಗಲಾರಂಭಿಸಿತು. ಲೇಔಟಿನಲ್ಲಿ ಶಿಷ್ಟ ಜನರು ಹೆಚ್ಚಾಗುತ್ತಿದ್ದಂತೆ, ಯುವಕ ಸಂಘ ಒಂದು ನ್ಯೂಸೆನ್ಸ್ ಎಂದು ಅವರಿಗೆ ಅನಿಸಲಾರಂಭಿಸಿತು. ಸಂಘದಲ್ಲಿದ್ದ ಯುವಕರೆಲ್ಲರೂ ಅಪ್ಪಂದಿರಾಗಿ ಸಂಸಾರಭಾರ ತೂಗಲು ಕೆಲಸದ ದಾರಿ ಹಿಡಿದರು. ಕಾವಿಧಾರಿಯನ್ನು ಒಂದು ದಿನ ಪೋಲೀಸರು ಕಾಸರಗೋಡಿನಲ್ಲಿ ಅವನು ಮಾಡಿ ಓಡಿ ಬಂದಿದ್ದ ಕೇಸ್ ಮೇಲೆ ಎಳೆದುಕೊಂಡು ಹೋದರು. ಅಲ್ಲಿಗೆ ಹಸ್ತಿನಾವತಿಯಲ್ಲಿದ್ದ ಆಲ್ಬರ್ಟ್ ಪಿಂಟೋರ ೪೦-೬೦ ಮತ್ತೆ ಅನಾಥವಾಗಿತ್ತು. ಲೇಔಟ್ ಮತ್ತೆ ದೊಡ್ಡದಾಗುತ್ತಾ, ಜನನಿಬಿಡವಾಗುತ್ತಾ ಹೋಯಿತು.

ಈ ಜಾಗವೊಂದರಲ್ಲೇ ಸ್ಥಳಾಂತರಗೊಂಡು ಮೂಲೆಗೆ ಒತ್ತಲ್ಪಟ್ಟಿದ್ದ ಕೇರೆ ಹಾವು, ನಾಗರ ಹಾವು, ಮುಂಗುಸಿಗಳು ಹಾಗೂ ಬೀದಿ ನಾಯಿಗಳು ಹುಟ್ಟಿದ್ದವು. ಬೆಳವಣಿಗೆಯ ಓಟದಲ್ಲಿ ಮನುಷ್ಯನ ಹೃದಯದಲ್ಲಿ ಸ್ಥಳ ಕಳೆದುಕೊಂಡಿದ್ದ ಇವೆಲ್ಲವುಗಳಿಗೂ ಇಂದು ಉಳಿದಿದ್ದದ್ದು ಕೇವಲ ಈ ೪೦-೬೦ ಸೈಟು ಒಂದೇ. ಅಭಿವೃದ್ಧಿಯ ಸೂಚಕವೋ ಎಂಬಂತೆ ಇದೇ ಸೈಟಿನಲ್ಲಿ ಇಂದು ಕೋಟಿಗಟ್ಟಲೆ ಸೊಳ್ಳೆಗಳೂ ಹುಟ್ಟುತ್ತಿದ್ದವು. ಲೇಔಟಿನ ಮಕ್ಕಳಿಗೆ ಈ ೪೦-೬೦ಯಲ್ಲಿ ಬಿದ್ದು ಸಿಕ್ಕುತ್ತಿದ್ದ ಒಣಗಿದ ಎಲೆ, ತಮ್ಮ ಸೈಕಲ್ಲಿನ ಚಕ್ರದೆಡೆಗೆ ಸಿಕ್ಕಿಸಿ ಬೈಕಿನಂತೆ ಸದ್ದು ಹೊರಡಿಸುವ ಆಟದ ವಸ್ತುವಾಗುತ್ತಿತ್ತು. ಮದುವೆಯಾಗಿ ದಕ್ಷಿಣ ಕನ್ನಡದಿಂದ ಬಂದು ಬೆಂಗಳೂರಲ್ಲಿ ನೆಲೆಸಿದ್ದ ಶ್ವೇತಾಳಿಗೆ ಆಗೀಗ ಹಲಸಿನ ಹಣ್ಣು, ತೆಂಗಿನ ಕಾಯಿ, ಕೆಸುವಿನೆಲೆ ಸಿಗುತ್ತಿದ್ದುದೂ ಈ ಆಲ್ಬರ್ಟ್ ಪಿಂಟೋರ ೪೦-೬೦ರಿಂದಲೇ. ಹೀಗೆ ಒಂಥರಾ ಈ ಸೈಟ್ ‘ಆರ್ಗಾನಿಕ್ ಗಾರ್ಡನ್’ ಆಗಿತ್ತು! ಇದರ ಕಥೆ ಸಾವಿನಿಂದ ಆರಂಭವಾದರೂ, ಅನೇಕ ಹುಟ್ಟುಗಳಿಗೆ, ಬೆಳವಣಿಗೆಗಳಿಗೆ, ಹಳೆಯದರ ನೆನಪುಗಳಿಗೆ ಈ ಸೈಟು ಕಾರಣವಾಗಲಾರಂಭಿಸಿತ್ತು.

“ಒಂದು ಕಾಲದಲ್ಲಿ ಇಲ್ಲಿ ರಾತ್ರಿ ಹೊತ್ತು ಸುತ್ತಾಡೋಕೆ ಭಯ. ಇಲ್ಲೆಲ್ಲಾ ಬರೇ ಕಾಡು ತುಂಬಿಕೊಂಡು ಇರುತ್ತಿತ್ತು. ಈಗ ನೋಡು ಹೇಗೆ ಡೆವಲಪ್ ಆಗಿದೆ” ಎಂದು ಒಂದು ಕಾಲದಲ್ಲಿ ಇದೇ ಜಾಗದಲ್ಲಿ ಸೌದೆ ಹೆಕ್ಕುತ್ತಿದ್ದ ಗಾಯತ್ರಮ್ಮ ತಮ್ಮ ಗಂಡನೊಂದಿಗೆ ಸ್ಕೂಟರಿನಲ್ಲಿ ಹಸ್ತಿನಾವತಿ ಲೇಔಟಿನ ಮೂಲಕ ಹಾದುಹೋಗುವಾಗ ತಮ್ಮ ಮಗನಿಗೆ ಹೇಳಿದರು. ಇಂದು ಹಸ್ತಿನಾವತಿ ಲೇಔಟಿನಲ್ಲಿರುವ ‘ವಸುದೈವಕುಟುಂಬ’ ಅಂತರ ರಾಷ್ಟ್ರೀಯ ಶಾಲೆ ಬೆಂಗಳೂರಿನಲ್ಲೆಲ್ಲಾ ವರ್ಲ್ಡ್ ಫೇಮಸ್ಸುತಾನೇ… ಅಲ್ಲಿಗೆ ತಮ್ಮ ಮಗನನ್ನು ಸೇರಿಸಲು ಗಾಯತ್ರಮ್ಮ ಸುಮಾರು ಹತ್ತು ವರ್ಷಗಳ ನಂತರ ಅಂದು ಮತ್ತೆ ಆ ಕಡೆ ಬಂದಿದ್ದರು. ಆದರೆ ಆಲ್ಬರ್ಟ್ ಪಿಂಟೋರ ೪೦-೬೦ ಇನ್ನೂ ಖಾಲಿಯಾಗಿಯೇ ಇತ್ತು.

ಲೇಔಟ್ ಈಗ ಇನ್ನಷ್ಟು ದೊಡ್ಡದಾಗಿತ್ತು. ಅಲ್ಲಿದ್ದ ಡಾಕ್ಟರ್ ಪ್ರಭಾಕರನ ಅಮೇರಿಕಾದಿಂದ ತಂದಿದ್ದ ವಿಶಿಷ್ಟ ತಳಿಯ ನಾಯಿಗೆ, ಬೀದಿಯಲ್ಲಿ ಸುತ್ತಾಡುತ್ತಾ ಬಡವರ ಮಕ್ಕಳನ್ನು ತಿನ್ನುವುದನ್ನೇ ಅಭ್ಯಾಸ ಮಾಡಿಕೊಂಡಿದ್ದ ಬೆಂಗಳೂರಿನ ಬೀದಿನಾಯಿಗಳಿಗೆ, ಐಟಿ ಕಂಪನಿಯಲ್ಲಿ ದೊಡ್ಡ ಕೆಲಸದಲ್ಲಿದ್ದ ರಾಜುವಿನ ಮನೆಯ ಮೊದಲ ಮಹಡಿ ಕಟ್ಟುತ್ತಿರುವ ದೂರದೂರಿನ ಕೂಲಿ ಕಾರ್ಮಿಕರಿಗೆ, ಅವರ ಮಕ್ಕಳಿಗೆ, ಆಗೀಗ ಹಸ್ತಿನಾವತಿಯಿಂದ ಹಾದುಹೋಗುವ ರಿಕ್ಷಾ ಚಾಲಕರಿಗೆ ಆಲ್ಬರ್ಟ್ ಪಿಂಟೋರ ೪೦-೬೦ ಸೈಟ್ ಒಂದು ಸಾರ್ವಜನಿಕ ಶೌಚಾಲಯವೇ ಆಗಿತ್ತು. ಹಠಾತ್ತನೆ ಬರುವ ಬೆಂಗಳೂರಿನ ಮಳೆಯಿಂದಾಗಿ, ತರಕಾರಿ ಬೆಳೆಯಲು ಯೋಗ್ಯವಾಗಿರುವ ಈ ಮಣ್ಣಿಂದಾಗಿ, ಕುರುಚಲು ಗಿಡಗಳೇ ಇಲ್ಲಿ ಸೊಕ್ಕಿ, ೪೦-೬೦ರ ಒಂದು ಕಾಡೇ ಅಲ್ಲಿ ರೂಪುಗೊಂಡಿತ್ತು. ಅತ್ತಿತ್ತಲಿನ ಮನೆಯವರು, ಈ ಸೈಟಿನ ಮಾಲಿಕರ ಬಗ್ಗೆ ಶಪಿಸಲಾರಂಭಿಸಿದರು. ಎಂಥಾ ಜನ ಇವರು, ಸಿವಿಕ್ ಸೆನ್ಸ್ ಇಲ್ಲ. ಸದಾ ವಾಸನೆ ಹೊಡೆಯುತ್ತಿರುತ್ತದೆ, ಹಾವು, ಮುಂಗುಸಿ ಸುತ್ತುತ್ತಿರುತ್ತೆ, ಸೈಟ್ ನೀಟಾಗಿ ಇಟ್ಟುಕೊಳ್ಳಬಾರದೇ ಎಂದು ಶಪಿಸಿದ್ದು, ತನ್ನನ್ನೇ ಎಂದು ಮೋಡಗಳಾಚೆಯೆಲ್ಲೋ ಇದ್ದಿರಬಹುದಾದ ಆಲ್ಬರ್ಟ್ ಪಿಂಟೋರಿಗೆ, ತನ್ನನ್ನು ಕುರಿತು ಹೇಳಿದ್ದು ಎಂದು ಗೊತ್ತೇ ಆಗಲಿಲ್ಲ!

೪೦-೬೦ರ ಅಗ್ನಿ ಮೂಲೆಯಲ್ಲಿ ಮನೆ ಮಾಡಿಕೊಂಡಿದ್ದ ವಕೀಲ ಕುಮಾರ ಗೌಡರ ಮನೆಯ ಎರಡನೆ ಮಹಡಿಗೆ ನಾನು ಬಂದು ಬಾಡಿಗೆಗೆ ಸೇರಿಕೊಂಡಾಗ, ಆಲ್ಬರ್ಟ್ ಪಿಂಟೋರ ಸೈಟಿನಲ್ಲಿ ಅದ್ಯಾವುದೋ ಒಂದು ಜಾತಿಯ ಗಿಡ, ನೀಲಿ ಬಣ್ಣದ ಹೂ ಬಿಟ್ಟಿತ್ತು. ಇಡೀ ಸೈಟು ನೀಲಿ ಹೂಗಳಿಂದ ತುಂಬಿಹೋಗಿತ್ತು. ಅಕರಾಳ ವಿಕರಾಳವಾಗಿ ಬೆಳೆದುಕೊಂಡಿದ್ದ ಹಸ್ತಿನಾವತಿಯಲ್ಲಿ ಇದೊಂದೇ ಖಾಲಿ ಇದ್ದ ಸೈಟು ಅಂದು. ಅಲ್ಲಿಂದ ಬರುತ್ತಿದ್ದ ವಾಸನೆಗಳೆಲ್ಲಾ ಎರಡನೆಯ ಮಹಡಿಯ ನಾನಿದ್ದ ಮನೆಯವರೆಗೆ ಬರುತ್ತಿರಲಿಲ್ಲವಾದ್ದರಿಂದ ನನ್ನ ಕಣ್ಣಿಗೆ ಮುದಕೊಡುತ್ತಿದ್ದ ನೀಲಿಬಣ್ಣದ ಹೂವುಗಳನ್ನು ನಾನು ಬಹಳವಾಗಿ ಪ್ರೀತಿಸುತ್ತಿದ್ದೆ. ಆದರೆ ನಮ್ಮ ಮನೆಯ ಕಸ, ಕುಮಾರ ಗೌಡರ ಹೆಂಡತಿ ಮಾಡಿದ ಮಾಂಸದಡಿಗೆಯ ಮೂಳೆ ಮಾಂಸದ ಸಂಗ್ರಹ ಎಲ್ಲ ಹೋಗಿಸೇರುತ್ತಿದ್ದದ್ದು, ಆಲ್ಬರ್ಟ್ ಪಿಂಟೋರ ೪೦-೬೦ರ ಅಗ್ನಿ ಮೂಲೆಗೆ. ಇಡೀ ಹಸ್ತಿನಾವತಿಯಲ್ಲಿ ಎಲ್ಲೂ ಜಾಗ ಸಿಗದೇ, ಇಲ್ಲಿ ಖಾಲಿ ಜಾಗ ಸಿಕ್ಕಿದ ಸಂತೋಷದಲ್ಲಿ ಕನ್ನಡ, ತಮಿಳು, ತೆಲುಗು, ಹಿಂದಿ, ಇಂಗ್ಲೀಷಿನ ಅಷ್ಟೂ ಚಿತ್ರಗಳ ಪೋಸ್ಟರುಗಳು ಇದೇ ೪೦-೬೦ರ ಒಳಗೋಡೆಗಳಲ್ಲೆಲ್ಲಾ ರಾರಾಜಿಸುತ್ತಿದ್ದವು. ನನಗೆ ಈ ಸೈಟು ಒಂದು ಥರಾ ಮಜ ನೀಡುತ್ತಿತ್ತು.

ಒಮ್ಮೆ ನನ್ನ ಸಿನೆಮಾಗೆ ಹಾಡು ಬರೆಯಿಸಿಕೊಳ್ಳಲಿಕ್ಕೇಂತ ಜಯಂತ್ ಕಾಯ್ಕಿಣಿಯವರ ಬಳಿಗೆ ಹೋಗಿದ್ದೆ. ಅವರು ಮಾತನಾಡುತ್ತಾ, ತಮ್ಮೂರು ಗೋಕರ್ಣದ ಕುರಿತಾಗಿ ಮಾತನಾಡಲಾರಂಭಿಸಿದರು. ಆ ಊರಿನ ಜನರ ಮನಸ್ಸು ಶುದ್ಧವಾದದ್ದು. ಯಾಕೇಂದ್ರೆ, ಅವರ ಮನಸ್ಸಿನ ಕಲ್ಮಶವೆಲ್ಲವೂ ಸಮುದ್ರದಲ್ಲಿ ಕೊಚ್ಚಿ ಹೋಗುತ್ತದೆ. ಅಲ್ಲಿನ ಗಾಳಿ ಬೀಸಿ ಜನಮನವನ್ನು ಶುದ್ಧಗೊಳಿಸುತ್ತದೆ ಎನ್ನುತ್ತಾ ಅವರು ನಕ್ಕರು. ಬೆಂಗಳೂರಿನಲ್ಲಿ ಸಮುದ್ರ ಇಲ್ಲ. ಸಮುದ್ರದ ಗಾಳಿ ಇಲ್ಲಿಗೆ ಬೀಸುವುದಿಲ್ಲ ಹೀಗಾಗಿ ಇಲ್ಲಿಗೆ ವಲಸೆ ಬಂದ ನಮ್ಮಂಥವರು ಮನಸ್ಸಿನೊಳಗೇ ಬೇಯುತ್ತಿರುತ್ತೇವೆ ಎಂದರು ಅವರು! ಆಗ ನನಗೆ ಫಕ್ಕನೆ ಹೊಳೆದದ್ದು ಹಸ್ತಿನಾವತಿ ಲೇಔಟಿನಲ್ಲಿ ನನ್ನ ಮನೆಯ ಪಕ್ಕದಲ್ಲಿದ್ದ ೪೦-೬೦! ಹಸ್ತಿನಾವತಿಯ ನಿವಾಸಿಗಳೆಲ್ಲರಿಗೂ ತಮ್ಮ ಮನದ ವಿಕಾರಗಳಿಗೆ ಆಗಿಬರುತ್ತಿದ್ದ ಈ ಸೈಟಿನ ಬಗ್ಗೆ ಅಂದು ನನ್ನಲ್ಲಿ ಅಂದು ಒಂಥರಾ ಗೌರವ ಬೆಳೆಯಿತು. ನಾನು ಅನೇಕ ವರ್ಷಗಳಿಂದ ಹಸ್ತಿನಾವತಿ ಲೇಔಟಿನಲ್ಲೇ ಇದ್ದೇನೆ. ಆಲ್ಬರ್ಟ್ ಪಿಂಟೋರ ೪೦-೬೦ ಹೀಗೇ ಜನರ ಮನಸ್ಸಿನ ವಿಕೃತಿಗಳಿಗೆ ಮೂರ್ತರೂಪವಾಗುತ್ತಲೇ ಇತ್ತು.

ಅಂದಿನ ಸರಕಾರ ಇದೇ ಒಳ್ಳೆ ಸಂದರ್ಭ ಎಂದು ನಿರ್ಧರಿಸಿ, ಈ ಜಾಗವನ್ನು ಮುಟ್ಟುಗೋಲು ಹಾಕಿಕೊಂಡಿತು. ಬಿ.ಡಿ.ಎ ಮರುಹಂಚಿಕೆಯಲ್ಲಿ ಈ ಸೈಟು ಅಂದಿನ ಸರಕಾರದ ಮಂತ್ರಿಗಳ ಕಾರುಚಾಲಕನ ಹೆಂಡತಿಯ ತಮ್ಮನ ಮಾವನ ಹೆಸರಿಗೆ ಕೊಡಲಾಯಿತು. ಅವರು ಇಲ್ಲಿ ಇಂದು ನಾಲ್ಕು ಮಹಡಿಯ ಕಟ್ಟಡವನ್ನು ಕಟ್ಟಿದ್ದಾರೆ. ಎಲ್ಲಾ ಮಹಡಿಯಲ್ಲೂ ಪಕ್ಕದ ‘ವಸುದೈವ ಕುಟುಂಬ’ ಕಾಲೇಜಿನಲ್ಲಿ ಎಂ.ಬಿ.ಎ ಮಾಡುತ್ತಿರುವ ಮಕ್ಕಳು ತುಂಬಿಕೊಂಡಿದ್ದಾರೆ. ಹಸ್ತಿನಾವತಿಯ ಜನರಿಗಿದ್ದ ಏಕೈಕ ಸಾರ್ವಜನಿಕ ಸ್ಥಳವೂ ಇದರಿಂದ ಮಾಯವಾಗಿದೆ!

ಈ ಕಥೆ ಮುಗಿಯುವುದು ಮತ್ತೊಂದು ಸಾವಿನಿಂದ. ಒಂದು ದಿನ ಬೆಳಗ್ಗೆ ನಾನು ಎದ್ದು ಹಲ್ಲುಜ್ಜುತ್ತಾ ಮನೆಯ ಎದುರು ಬಾಗಿಲು ತೆರೆದರೆ, ಆಲ್ಬರ್ಟ್ ಪಿಂಟೋರ ೪೦-೬೦ ಸೈಟಿನಲ್ಲಿ ಸಾಕಷ್ಟು ಪೋಲೀಸರು, ಮಾಧ್ಯಮದವರು ಸೇರಿದ್ದರು. ವಿಷಯ ಏನಪ್ಪಾಂತ ನೋಡಿದ್ರೆ, ಬೆಳಗ್ಗೆ ಹಾಲು ಹಾಕುವ ಮಾದಪ್ಪನಿಗೆ ಅದೇನೋ ವಾಸನೆ ಬಂತು ಅಂತ ನೋಡಲಿಕ್ಕೆ ಹೋದರೆ, ನಮ್ಮ ಆಲ್ಬರ್ಟ್ ಪಿಂಟೋರ ೪೦-೬೦ರ ಸೈಟಿನಲ್ಲಿ ಒಂದು ಅರ್ಧ ಕೊಳೆತ ಹೆಣ! ವಿಷಯ ಪೊಲೀಸರಿಗೆ ತಲುಪಿ, ಅವರಿಗಿಂತ ಮೊದಲು ಮಾಧ್ಯಮದವರು ಸ್ಥಳಕ್ಕೆ ತಲುಪಿ ದೊಡ್ಡ ಅವಾಂತರವೇ ಆಗಿತ್ತು ಅಂದು. ಹೆಣ ಯಾರದ್ದೆಂದೂ, ಕೊಂದವರು ಯಾರು ಎಂದೂ ಮುಂದೆ ವಿಚಾರಣೆಯಿಂದ ಗೊತ್ತಾಯಿತೋ ಇಲ್ಲವೋ ನನಗೆ ತಿಳಿಯದು. ಆದರೆ, ಈ ಸೈಟಿನ ವಾರಸುದಾರರು ಯಾರು ಎಂದು ದಾಖಲೆ ನೋಡಲಾಗಿ, ಆಲ್ಬರ್ಟ್ ಪಿಂಟೋರ ಇಡೀ ಕಥೆ ಹೊರಗೆ ಬಂತು.

Share This