ಫಿಲಂ ಸಿಟಿಯ ಹೊರಗಡೆ ಇರುವ ನಾಗರಿಕ್ ನಿವಾರ್ ಪರಿಷದ್ ಫ್ಲಾಟ್ಗಳಲ್ಲಿ ಬೆಳಗಾದಾಗ ಕೋಳಿ ಕೂಗುವುದಿಲ್ಲ. ಅಲ್ಲಿ ಕಾಗೆಗಳು ಆ ಕೆಲಸವನ್ನು ಮಾಡುತ್ತವೆ. ಹಿಂದಿನ ದಿನ ರಾತ್ರಿ ಯಾವುದೋ ಮನೆಯವರು ಹೊಡೆದು ಬಿಸಾಡಿದ ಹೆಗ್ಗಣದ ಹೆಣದ ಪೋಸ್ಟ್ಮಾರ್ಟಮ್ ಮಾಡಲು ಕಾಗೆಗಳ ದಂಡು ಅಂದು ಪದ್ಮಾ ಫ್ಲಾಟ್ ಹೊರಗಡೆ ಸೇರಿದ್ದವು. ಉಮ್ಮರ್ ಫಾರೂಕ್‍ನಿಗೆ ಕಾಗೆಗಳ ಸಂಗೀತ ಮೇಳದೊಂದಿಗೆ ಬೆಳಗಾದದ್ದು ಹೊಸದೇನೂ ಆಗಿರಲಿಲ್ಲ. ಅಂದ ಹಾಗೆ ಈ ಉಮ್ಮರ್ ಫಾರೂಕ್ ಈ ಫ್ಲಾಟಿನಲ್ಲಿ ಕಳೆದ ಆರು ತಿಂಗಳಿಂದ ವಾಸಿಸುತ್ತಿದ್ದಾನೆ. ಅವನ ಫ್ಲಾಟ್ ಮೇಟ್ ತ್ರಿಪುರಾರಿ ಶರನ್. ಉಮ್ಮರ್ ಫಾರೂಕ್ ಮೂಲತಃ ಮಂಗಳೂರಿನವ. ಅವನು ಮಂಗಳೂರಿನಲ್ಲಿ ಪದವಿ ಮುಗಿಸಿದ ನಂತರ ಮುಂಬೈನಲ್ಲಿ ಎಂ.ಬಿ.ಎ ಓದಿಕೊಂಡಿದ್ದ. ಉಮ್ಮರ್ ಫಾರೂಕ್ ಪದವಿಯ ನಂತರ ಎಂ.ಬಿ.ಎ ಓದಿಕೊಂಡಿದ್ದ. ಆರ್ಥಿಕ ಕುಸಿತದ ಹೊರತಾಗಿಯೂ ಅವನಿಗೆ ಮುಂಬೈನ ಅಂತರರಾಷ್ಟೀಯ ಕಂಪನಿಯಲ್ಲಿ ಕೆಲಸಕ್ಕೆ ಆಹ್ವಾನ ಬಂದಿತ್ತು. ಆತ ಜೀವನದ ಉದ್ದಕ್ಕೂ ಕಂಡಿದ್ದ ಕನಸು ಅದು. ಆ ದಿನ ಬೆಳಗ್ಗೆ ಮುಂಬೈನ ಫಿಲಂ ಸಿಟಿ ಹೊರಗಡೆ ಇರುವ ತನ್ನ ವನ್ ಬೆಡ್ ರೂಮ್ – ಹಾಲ್ – ಕಿಚನ್ನಲ್ಲಿ ಆತ ಬೆಳಗ್ಗೆ ಆರು ಗಂಟೆಗೇ ಎದ್ದಿದ್ದನು. ಅವನ ಗೆಳೆಯ ತ್ರಿಪುರಾರಿ ಶರನ್ ಕಳೆದ ಒಂದು ವರ್ಷದಿಂದ ಸಿನೆಮಾಗಳಲ್ಲಿ ಕೆಲಸ ಹುಡುಕುತ್ತಾ ಒಂದು ದಿನ ತಾನು ಮುಂಬೈಯ ಕೊಳಕಿನ ಮೇಲೆ ಹಾರಿ ಹೋಗುವ ಕನಸು ಕಾಣುವವನು. ಮೂಲತಃ ಅವನು ಬಿಹಾರದ ಪಾಟ್ನಾದಿಂದ ಇನ್ನೂರು ಕಿಲೋಮೀಟರ್ ದೂರದ ಒಂದು ಸಣ್ಣ ಹಳ್ಳಿಯವನು. ಉಮ್ಮರ್ ಫಾರೂಕ್ ಬೇಗನೇ ಸ್ನಾನ ಮುಗಿಸಿದನು. ತ್ರಿಪುರಾರಿ ಅವತ್ತು ಅದೇನೋ ಬೇಗನೇ ಎದ್ದು ಸಿದ್ದಿವಿನಾಯಕನಿಗೆ ನಮಸ್ಕಾರ ಮಾಡಿ ಸಣ್ಣಮಟ್ಟಿನ ಪೂಜೆಯನ್ನೇ ಮಾಡಿ ಉಮ್ಮರನಿಗೆ ಇಂದು ಕೆಲಸ ಸಿಗಲಿ ಎಂದು ಆಶಿಸಿ ಅವನಿಗೆ ಪ್ರಸಾದ ಕೊಟ್ಟನು. ಪ್ರಸಾದ?! ಮತ್ತೇನೂ ಅಲ್ಲ ಒಂದಿಷ್ಟು ಸಕ್ಕರೆ ಅಷ್ಟೇ. ಉಮ್ಮರ್ ನಕ್ಕ. ಮಗನೇ ನನಗೆ ಕೆಲಸ ಸಿಕ್ಕಿದರೆ, ನೀನು ಆರಾಮಾಗಿ ಮಜಾ ಮಾಡಬಹುದಂತ ಅಲ್ವಾ ಇದೆಲ್ಲಾ ನಿನ್ನ ನಾಟಕ? ಹ… ಹ… ಇಬ್ಬರೂ ಗೆಳೆಯರು ನಕ್ಕರು. ಅಂತೂ ಇಂತೂ ತಯಾರಾಗಿ ಉಮ್ಮರ್ ಮನೆಗೆ ಸಮೀಪದ ಲೋಕಲ್ ರೈಲು ಹತ್ತಿದನು. ಆಗ ಸಮಯ ಸುಮಾರು ಒಂಭತ್ತು ಗಂಟೆ. ಅಂದು ಭಾರತ-ಆಸ್ಟ್ರೇಲಿಯಾ ನಡುವೆ ಭಾರೀ ಮಹತ್ವದ ಕ್ರಿಕೆಟ್ ಪಂದ್ಯ ಇದ್ದದ್ದರಿಂದ ಲೋಕಲ್ ರೈಲಿನಲ್ಲಿ ಭಾರೀ ನೂಕು ನುಗ್ಗಲೇನೂ ಇರಲಿಲ್ಲ. ಪಂದ್ಯ ಆಗಷ್ಟೇ ಆರಂಭವಾಗಿತ್ತು. ರೈಲಿನಲ್ಲಿ ಯಾರದೋ ರೇಡಿಯೋದಲ್ಲಿ ಭಾರತ ಆಗಲೇ ಒಂದು ವಿಕೇಟ್ ಕಳೆದುಕೊಂಡಿರುವುದು ತಿಳಿದು ಉಮ್ಮರ್ನಿಗೆ ಸ್ವಲ್ಪ ಬೇಸರವಾಯಿತು. ಆದರೆ ಸಚಿನ್ ಇನ್ನೂ ಆಡುತ್ತಿರುವುದು ಅವನಿಗೆ ನೆಮ್ಮದಿ ಕೊಟ್ಟಿತು. ಸುಮಾರು ಇಪ್ಪತ್ತು ನಿಮಿಷದ ದಾರಿ ಲೋಕಲ್ ರೈಲಿನಲ್ಲಿ ಮತ್ತೆ ಐದು ನಿಮಿಷ ನಡಿಗೆಯ ದೂರದಲ್ಲೇ ಹೋಟೇಲ್ ರಾಜ್ಕಮಲ್. ಇಂದು ಅಲ್ಲೇ ಭೇಟಿಯಾಗುವುದಾಗಿ ಬೊಮನ್ ದೋತಿವಾಲ ಹೇಳಿದ್ದರು. ಉಮ್ಮರ್ ಹೋಟೇಲ್ ಸಮಯಕ್ಕೆ ಸರಿಯಾಗಿ ಸೇರಿದ. ಮುಂಬೈ ಎಷ್ಟೇ ಹಾಳಾದರೂ ಇಲ್ಲಿ ಲೋಕಲ್ ರೈಲು ಮತ್ತಿತರ ವ್ಯವಸ್ಥೆಗಳು ಚೆನ್ನಾಗಿವೆ ಎಂದು ಅಂದುಕೊಂಡ ಉಮ್ಮರ್. ಉಮ್ಮರ್ ಹೋಟೇಲ್ ತಲಪುವುದಕ್ಕೆ ಸರಿಯಾಗಿ ಅವನ ಮೊಬೈಲ್ ರಿಂಗ್ ಆಗುತ್ತದೆ. ಅದನ್ನೆತ್ತಿ ನೋಡಿದರೆ, ಅದ್ಯಾವುದೋ ಮಂಗಳೂರಿನ ಕಡೆಯ ಲ್ಯಾಂಡ್ ಲೈನ್ ನಂಬರ್. ಕರೆಯನ್ನು ರಿಸೀವ್ ಮಾಡುತ್ತಾನೆ… “ಹಲೋ ನಾನ್ ಉಮ್ಮರ್ ಪಲಕಪರೆಯೊ.” ಆದರೆ ಮರುಕ್ಷಣ…

ಅವನ ಹೆಸರು ಜವಾನ್ ರಾಮ್ದೇವ್ ಸಿಂಗ್. ಸೈನ್ಯದಲ್ಲಿ  ‘ಜವಾನ್’ ಆಗಿದ್ದರಿಂದ ಅವನ ಹೆಸರು ಹಾಗಿದ್ದರೂ ಅವನಿಗೆ ಜವಾನ್ ಎನ್ನುವುದು ತನ್ನ ಹೆಸರಲ್ಲ ಎನ್ನುವುದು ಮರೆತೇ ಹೋಗಿತ್ತು. ಈ ದಿನಗಳಲ್ಲಿ ಅವನಿಗೆ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ನೇಮಕಾತಿಯಾಗಿತ್ತು. ಅವನಿಗೆ ಭದ್ರತಾ ತಪಾಸಣೆ ನಡೆಯುವ ಸ್ಥಳದ ಬಳಿ ನಿಂತು ಅಲ್ಲಿ ತಪಾಸಣೆ ನಡೆಯುವುದನ್ನು ನೋಡುವುದು ಭಲೇ ಮೋಜೆನಿಸುತ್ತಿತ್ತು. ಒಬ್ಬೊಬ್ಬರು ಒಂದೊಂದು ರೀತಿ ಕೈ ಎತ್ತಿ ಶೂನ್ಯ ದಿಟ್ಟಿಸುತ್ತಾ ನಿಲ್ಲುವುದು ಅವನಿಗೆ ಭಾರೀ ಕುತೂಹಲದ ವಿಷಯವಾಗಿತ್ತು. ಇವನು ಏನು ಯೋಚಿಸುತ್ತಿರಬಹುದು? ಮತ್ತಿವನು ಯಾಕೆ ಅಷ್ಟು ಗಲಿಬಿಲಿಗೊಂಡಿದ್ದಾನೆ? ಹೀಗೆ ಯೋಚಿಸುತ್ತಾ ಅವರನ್ನೇ ನೋಡುತ್ತಾ ನಿಲ್ಲುತ್ತಿದ್ದ. ಪ್ರತಿಯೊಬ್ಬರೂ ತಪಾಸಣೆಗೆ ಸಹಕರಿಸಲೆಂದು ಕೈ ಎತ್ತುವ ರೀತಿಯಿಂದಲೇ ಅವರ ವ್ಯಕ್ತಿತ್ವ, ಸಮಾಜದಲ್ಲಿ ಅವರಿಗಿರುವ ಸ್ಥಾನ ಅರ್ಥವಾಗುತ್ತದೆಯಲ್ಲವಾ ಎಂದು ಅಂದುಕೊಂಡು ಮಾನವ ಮನಃಶಾಸ್ತ್ರದ ಮರುಶೋಧನೆಯನ್ನು ಮಾಡಿ ಅವನು ಸಂತಸಗೊಂಡಿದ್ದ. ಅಪ್ಪ-ಅಮ್ಮ ಇಂದಿರಾಗಾಂಧಿ ತೀರಿಹೋದಾಗ ನಡೆದ ಗಲಭೆಯಲ್ಲಿ ಕೊಲೆಗೀಡಾಗಿದ್ದರು. ಆಮೇಲೆ ಇವನು ಏಕಾಂಗಿಯಾಗಿ ಜೀವನ ಕಟ್ಟಿದ್ದನು. ಒಬ್ಬ ತಮ್ಮ ಅಜಿತ್ ಸಿಂಗ್ ಅದೇ ಸಂದರ್ಭದಲ್ಲಿ ಅಮೇರಿಕಾಗೆ ಓಡಿ ಹೋಗಿ ಅಲ್ಲಿ ಟ್ಯಾಕ್ಸಿ ಚಾಲಕನಾದ. ಅವನು ಈವರೆಗೆ ಹಿಂದಿರುಗಿ ಬರಲಿಲ್ಲ. ಆಗೊಮ್ಮೆ ಈಗೊಮ್ಮೆ ಅಲ್ಲಿಂದ ದೂರವಾಣಿಸಿ ಇಲ್ಲಿನ ವಿಷಯಗಳನ್ನು ತಿಳಿದುಕೊಳ್ಳುತ್ತಾನೆ. ಇತ್ತೀಚೆಗೆ ಅದೂ ಕಡಿಮೆಯಾಗಿದೆ ಎಂದು ರಾಮ್ದೇವ್ ಸಿಂಗ್ಗೆ ಅನಿಸುತ್ತಿದೆ. ಮತ್ತೊಬ್ಬ ತಮ್ಮ ರವಿದೇವ್ ಸಿಂಗ್ ದೆಹಲಿಯಲ್ಲಿ ಈಗ ಕೆಲಸ ಹುಡುಕಾಟದಲ್ಲಿದ್ದಾನೆ. ರಾಮ್ದೇವ್ನ ಹೆಂಡತಿ ಲಜ್ಜೋ ಈಗ ದೆಹಲಿಯಲ್ಲಿ ಇದ್ದಾಳೆ ಅವಳೊಂದಿಗೇ ರವಿದೇವ್ ಸಿಂಗ್ ಇದ್ದಾನೆ. ಇಂದೂ ಅಂಥದ್ದೇ ಒಂದು ಮಾಮೂಲು ದಿನ. ದೆಹಲಿಯಲ್ಲಿ ಯಾವುದೋ ಕಾರಣದಿಂದ ವಿಮಾನ ವಿಳಂಬವಾಗಿ ಇಡೀ ದೇಶದಾದ್ಯಂತ ವಿಮಾನಗಳ ಚಲನವಲನ ಏರುಪೇರಾಗಿತ್ತು. ಅಂದೇಕೋ ಕರ್ತವ್ಯದಲ್ಲಿದ್ದಾಗಲೇ ಜವಾನ್ ರಾಮ್ದೇವ್ ಸಿಂಗ್ಗೆ ತನ್ನ ಹೆಂಡತಿ ಲಜ್ಜೋನ ನೆನಪು ತುಂಬಾ ಕಾಡಲಾರಂಭಿಸಿತ್ತು. ಸ್ವಲ್ಪ ಹೊತ್ತು ಮೀನಾಮೇಷ ಎಣಿಸಿದ ಜವಾನ್ ರಾಮ್ದೇವ್ ಪಕ್ಕದಲ್ಲೇ ಇದ್ದ ದೂರವಾಣಿ ಅಂಗಡಿಯತ್ತ ನಡೆದ. ಅಲ್ಲಿ ಎಸ್.ಟಿ.ಡಿ ಎಂದು ಹೇಳಿ ಮನೆಯ ಸಂಖ್ಯೆ ಡಯಲ್ ಮಾಡಿದ. ತುಂಬಾ ಹೊತ್ತು ರಿಂಗ್ ಆದರೂ ಅತ್ತಲಿಂದ ಯಾರೂ ದೂರವಾಣಿ ಎತ್ತಲಿಲ್ಲ. ತಮ್ಮನೊಡನೆ ಪೇಟೆಕಡೆ ಏನಾದರೂ ಹೋಗಿರಬಹುದೇ ಎಂದು ಅಂದುಕೊಂಡು ಅವನ ಮೊಬೈಲ್ ಸಂಖ್ಯೆಯನ್ನು ಡಯಲ್ ಮಾಡಿದ. ಅವನ ತಮ್ಮ ರವಿದೇವ್ ಸಿಂಗ್ ಮೊಬೈಲ್ ಉತ್ತರಿಸಿದನು. ಇತ್ತಣಿಂದ ಜವಾನ್ ರಾಮ್ದೇವ್ ಸಿಂಗ್ ಹೇಳಿದ. “ಓಯ್!… ಮೆ ಜವಾನ್ ರಾಮ್ದೇವ್ ಬಾತ್ ಕರ್ರಿಯಾಸಿ.” ಆದರೆ ಮರುಕ್ಷಣ…

ಮುಂಬೈ ತೀರದಲ್ಲಿ ಸಮುದ್ರದಲ್ಲಿ ಅಂದೇಕೋ ಅಲೆಗಳು ಜೋರಾಗಿ ಏಳುತ್ತಿದ್ದವು. ಜೇಸನ್ ಕೆಲಸ ಕಳೆದುಕೊಂಡು ಆಗಲೇ ನಾಲ್ಕು ದಿನವಾಗಿತ್ತು. ಅವನು ದಿನಾ ಕೆಲಸಕ್ಕೆ ಹೊರಡುತ್ತೇನೆಂದು ಹೊರಟು ಮನೆಯಿಂದ ಹೊರಗೆ ಬಂದು ಇಲ್ಲೇ ಸಮುದ್ರ ದಂಡೆಯಲ್ಲಿ ಕುಳಿತು ದಿನ ಪತ್ರಿಕೆಯಲ್ಲಿ ಬರುತ್ತಿರುವ ಕೆಲಸ ಖಾಲಿ ಇದೆ ಜಾಹೀರಾತುಗಳಿಗೆ ಸ್ಪಂದಿಸುತ್ತಾ ಇರುತ್ತಿದ್ದ. ಹೊಸ ಕೆಲಸ ಸಿಗುವವರೆಗೆ ತಾನು ಕೆಲಸ ಕಳೆದು ಕೊಂಡದ್ದನ್ನು ಮನೆಯಲ್ಲಿ ಹೇಳಿದರೆ ಅದು ಉಂಟು ಮಾಡಬಹುದಾದ ಕೋಲಾಹಲ ಅವನಿಗೆ ಚೆನ್ನಾಗಿ ಗೊತ್ತು. ಆದರೆ ಇಡೀ ಜಗತ್ತೇ ಆರ್ಥಿಕ ಹಿನ್ನಡೆಯಲ್ಲಿರಬೇಕಾದರೆ, ಅವನ ಕೆಲಸ ಹೋದದ್ದರಲ್ಲಿ ಏನು ವಿಶೇಷ? ಅದೂ ಹೇಳಿ ಕೇಳಿ ಅವನು ಒಂದು ಕಂಪನಿಯಲ್ಲಿ ಐ.ಟಿ. ಅನಾಲಿಸ್ಟ್. ಹೊಟ್ಟೆಗೇ ಇಲ್ಲದಾಗ ಇಂಥಾ ಲಕ್ಷುರಿ ಕೆಲಸಗಳನ್ನು ಕಂಪನಿಗಳು ಮುಚ್ಚುತ್ತಿವೆ ಇದು ಸ್ವಾಭಾವಿಕವಲ್ಲವೇ? ಇಂದು ಯಾಕೋ ಅವನಿಗೆ ಮನಸ್ಸು ಶೂನ್ಯವಾಗಿ ಬಿಟ್ಟಿದೆ. ಏನೂ ಕೆಲಸ ಮಾಡುವ ಉತ್ಸಾಹವೇ ಇಲ್ಲ. ಸಣ್ಣಕೆ ಮಳೆ ಬೇರೆ ಬರುತ್ತಿತ್ತು. ಹಾಗೇ ಅವನು ಸಮುದ್ರ ತೀರದಲ್ಲೇ ನಡೆಯುತ್ತಾ ಹೊರಡುತ್ತಾನೆ. ಹಾಗೆ ಹೋಗುತ್ತಿರಬೇಕಾದರೆ, ಹಾದಿಯಲ್ಲಿ ಒಂದು ಪರ್ಸ್ ಬಿದ್ದದ್ದು ಸಿಗುತ್ತದೆ. ಅದನ್ನು ಹಾಗೇ ಎತ್ತಿಕೊಳ್ಳುತ್ತಾನೆ. ಸುತ್ತಮುತ್ತ ಯಾರೂ ಈ ಪರ್ಸ್ ಬಗ್ಗೆ ಗಮನ ಕೊಡದೇ ಇದ್ದದ್ದು ಕಂಡು ಅವನಿಗೆ ಅಚ್ಚರಿಯಾಗುತ್ತದೆ. ಅದನ್ನು ತೆರೆದು ನೋಡುತ್ತಾನೆ. ಅದರಲ್ಲಿ ನೂರು ರುಪಾಯಿಯ ಎರಡು ನೋಟು ಮತ್ತು ಒಂದು ಹುಡುಗಿಯ ಫೋಟೋ ಇರುತ್ತದೆ. ಆ ಫೋಟೋವನ್ನು ತೆಗೆದು ನೋಡುತ್ತಾನೆ. ಆ ಫೋಟೋದ ಹಿಂದೆ ಒಂದು ಚೀಟಿಯಲ್ಲಿ ರಮೇಶ್, ಚಾಲುಕ್ಯ ಇನ್ಫೋಟೆಕ್ ಬೆಂಗಳೂರು ಎಂದು ವಿಳಾಸ ಇತ್ತು. ಫೋಟೋದಲ್ಲಿದ್ದ ಹುಡುಗಿ ಅಂದವಾಗಿದ್ದಳು. ಬಹುಷಃ ರಮೇಶ್ ಪ್ರೀತಿಸುವ ಹುಡುಗಿ ಇವಳಾಗಿರಬೇಕು ಎಂದುಕೊಂಡ ಜೇಸನ್. ಇವನು ಮುಂಬೈನಲ್ಲಿ ಏನು ಮಾಡುತ್ತಿದ್ದ? ಪಾಪ ಪರ್ಸ್ ಕಳೆದುಕೊಂಡು ಗಾಬರಿಯಲ್ಲಿರಬಹುದು ಎಂದುಕೊಂಡ. ಅಷ್ಟರಲ್ಲಿ ಆ ವಿಳಾಸದ ಕೆಳಗಡೆ ರಮೇಶನ ಮೊಬೈಲ್ ಸಂಖ್ಯೆಯೂ ಬರೆದದ್ದು ಕಂಡು ಅವನಿಗೆ ಒಮ್ಮೆ ಫೋನ್ ಮಾಡೋಣ. ಪರ್ಸ್ ವಾಪಾಸ್ ಕೊಟ್ಟ ನೆಪಕ್ಕೆ ಅವನ ಕಂಪನಿಯಲ್ಲಿ ಏನಾದರೂ ಕೆಲಸಕೊಟ್ಟರೂ ಕೊಟ್ಟನೇ ಎಂದುಕೊಂಡ ಜೇಸನ್. ಮರುಕ್ಷಣದಲ್ಲೇ ಛೆ! ಎಂಥಾ ಹುಚ್ಚು ತನಗೆ ಈ ರಮೇಶ ಕೂಡಾ ನನ್ನಂತೆ ಕೇವಲ ಒಬ್ಬ ಕೆಲಸ ಮಾಡುವವನಿರಬಹುದು. ಕಂಪನಿಯ ಮಾಲಿಕನೇ ಆಗಿರಬೇಕೆಂದೇನೂ ಇಲ್ಲವಲ್ಲಾ ಎಂದು ತನ್ನಷ್ಟಕ್ಕೆ ತಾನೇ ನಗುತ್ತಾನೆ. ಏನಾದರೂ ಪಾಪ ಪರ್ಸ್ ವಾಪಾಸ್ ಕೊಡೋಣ ಎಂದು ತನ್ನ ಮೊಬೈಲ್ ತೆಗೆದು ಸಂಖ್ಯೆ ಡಯಲ್ ಮಾಡುತ್ತಾನೆ. ಆದರೆ ಆ ಸಂಖ್ಯೆ ಬೆಂಗಳೂರಿನದ್ದಾಗಿರುತ್ತದೆ ಮತ್ತು ಜೇಸನ್ನಿನ ಮೊಬೈಲಿನಲ್ಲಿ ಎಸ್.ಟಿ.ಡಿಗೆ ಬೇಕಾದಷ್ಟು ಹಣ ಇರುವುದಿಲ್ಲ. ಹಾಳಾಗಲಿ ಎಂದು ಪಕ್ಕದಲ್ಲಿದ್ದ ಹೋಟೇಲ್ ರಾಜ್ಕಮಲ್ ಬಳಿಯ ದೂರವಾಣಿ ಅಂಗಡಿಗೆ ಹೋಗುತ್ತಾನೆ. ಅಲ್ಲಿ ಇದ್ದ ಅಂಗಡಿಯಲ್ಲಿ ಜನ ಸೇರಿದ್ದರು. ಸಣ್ಣ ಕಪ್ಪು-ಬಿಳಿ ಟಿ.ವಿಯಲ್ಲಿ ಜನ ಕ್ರಿಕೆಟ್ ನೋಡುತ್ತಿದ್ದರು. ಭಾರತ ಈಗ ನಾಲ್ಕು ವಿಕೇಟ್ ಕಳೆದುಕೊಂಡುತ್ತು. ಆದರೆ ರನ್ ಧಾರಣೆ ಚೆನ್ನಾಗಿದ್ದದ್ದರಿಂದ ಜನ ಕುತೂಹಲದಿಂದ ಪ್ರತಿ ಬಾಲನ್ನು ಬಿಡದೇ ನೋಡುತ್ತಿದ್ದರು. ಜೇಸನ್ನಿಗೆ ಅದು ಅಷ್ಟಾಗಿ ಆಸಕ್ತಿಯ ವಿಷಯವಲ್ಲ. ಅವನು ದೂರವಾಣಿ ಎತ್ತಿಕೊಂಡು ಅಲ್ಲಿ ರಮೇಶನ ಸಂಖ್ಯೆ ಒತ್ತಿ ಕಿವಿಯಿಡುತ್ತಾನೆ. “ಹಲೋ… ದಿಸ್ ಈಸ್ ಜೇಸನ್ ಸ್ಪೀಕಿಂಗ್.” ಆದರೆ ಮರುಕ್ಷಣ…

ತ್ರಿಪುರಾರಿ ಶರನ್, ಉಮ್ಮರ್ ಫಾರೂಕ್ ಕೆಲಸಕ್ಕೆ ಹೋಗಿ ಆದ ಮೇಲೆ ಅಂದಿನ ಅವನ ಕೆಲಸಕ್ಕೆ ಹೊರಟ. ಅಂದು ಮಧ್ಯಾಹ್ನ ಹನ್ನೊಂದು ಗಂಟೆಗೆ ಯಾವುದೋ ಒಬ್ಬ ನಿರ್ದೇಶನಕನೊಂದಿಗೆ ಇವನ ಭೇಟಿ ಇತ್ತು. ಅವನಿಗೆ ಕಥೆ ಇಷ್ಟವಾದರೆ ಮುಂದೆ ಅದನ್ನು ಚಿತ್ರಕಥೆಯನ್ನಾಗಿ ಬರೆಯುವ ಅವಕಾಶ ಸಿಗಲಿತ್ತು ತ್ರಿಪುರಾರಿಗೆ. ದಾದರಿನಲ್ಲಿರುವ ಇರಾನಿ ಹೋಟೇಲಿನಲ್ಲಿ ಸಿಗೋಣ. ಹೆಚ್ಚು ಜನ ಇರೋದಿಲ್ಲ ಎಷ್ಟೊತ್ತು ಕುಳಿತರೂ ಏನೂ ಹೇಳೋದಿಲ್ಲ ಎಂದು ಇವರ ನಡುವೆ ನಿಶ್ಚಯವಾಗಿತ್ತು. ಹಾಗಾಗಿ ತ್ರಿಪುರಾರಿ ಹತ್ತೂವರೆಯ ಸುಮಾರಿಗೆ ಇರಾನಿ ಹೋಟೇಲ್ ತಲುಪಿದ. ಎರಡು ಚಾ ಇಳಿದಾಗುವಾಗ ಗಂಟೆ ಹನ್ನೆರಡಾಗಿತ್ತು. ನಿರ್ದೇಶಕ ಮಹಾಶಯನ ಪತ್ತೆ ಇಲ್ಲ. ಇವನೆಲ್ಲಿ ಹಾಳಾಗಿ ಹೋದ ಎಂದು ತ್ರಿಪುರಾರಿಗೆ ಚಿಂತೆ ಹತ್ತಿತು. ಯಾವುದಕ್ಕೂ ಅವನಿಗೆ ಒಮ್ಮೆ ದೂರವಾಣಿಸಿ ಎಲ್ಲಿದ್ದಾನೆ ಎಂದು ಕೇಳೋಣ ಎಂದುಕೊಂಡ. ಮೊಬೈಲ್ ಡಯಲ್ ಮಾಡಿ ಕಿವಿಗಿಟ್ಟರೆ “ತಮ್ಮ ಅಕೌಂಟಿನಲ್ಲಿ ಹಣ ಇಲ್ಲದಿರುವುದರಿಂದ ಸೇವೆಯನ್ನು ರದ್ದುಪಡಿಸಲಾಗಿದೆ” ಎಂದು ಮಧುರ ಕಂಠವೊಂದು ಉಲಿಯಿತು. ದರಿದ್ರ ಎಂದುಕೊಂಡು ಪಕ್ಕದಲ್ಲೇ ಇದ್ದ ಕಾಯಿನ್ ಫೋನ್ ಕಡೆ ಹೆಚ್ಚೆ ಇಟ್ಟ. ನಿರ್ದೇಶಕನ ದೂರವಾಣಿ “ಕವರೇಜ್ ಕ್ಷೇತ್ರದ ಹೊರಗೆ ಇದೆ” ಎಂದು ಕೇಳಿಬಂತು. ತ್ರಿಪುರಾರಿ, ಹೋಗಲಿ ಇಂದು ನಡೆಯುತ್ತಿರುವ ಕ್ರಿಕೆಟ್ಟಿನಲ್ಲಿ ಸ್ಕೋರ್ ಎಷ್ಟಾಯಿತು ಎಂದು ತಿಳಿಯೋಣ ಎಂದು ತನ್ನ ಗೆಳೆಯ ಮಾಧವನ್ಗೆ ದೂರವಾಣಿ ಕರೆ ಮಾಡಿದ ಮತ್ತೆ ಕಾದ. ತ್ರಿಪುರಾರಿಗೆ ಸಣ್ಣಕೆ ಸಿಟ್ಟು ಬರಲಾರಂಭಿಸಿತ್ತು. ಬಿಹಾರಿ ಭಾಷೆಯಲ್ಲಿ ತನ್ನ ಅದೃಷ್ಟವನ್ನು ಅವನು ಹಳಿದುಕೊಂಡ. ಆದರೆ ಅವನ ಅದೃಷ್ಟ ನಿಜಕ್ಕೂ ಕೆಟ್ಟಿದ್ದು ಆಗಲೇ! ಅವನ ಪಕ್ಕದಲ್ಲೇ ಒಂದಿಷ್ಟು ಜನ ಮರಾಠೀ ರಕ್ಷಣಾ ವೇದಿಕೆಯವರಿದ್ದದ್ದು ಅವನಿಗೆ ಗೊತ್ತೇ ಇರಲಿಲ್ಲ! ಅಸಹಾಯಕ ಬಿಹಾರಿಯೊಬ್ಬ ಅವರಿಗೆ ಇಷ್ಟು ಸುಲಭಕ್ಕೆ ಎಂದೂ ಸಿಕ್ಕಿರಲಿಲ್ಲ. ಅಷ್ಟರಲ್ಲಿ ತ್ರಿಪುರಾರಿಯ ಫೋನ್ ಕನೆಕ್ಟ್ ಆಯಿತು. “ಹಲೋ… ಹಮ್ ತ್ರಿಪುರಾರಿ ಬೋಲತ್ ಹೈ…” ಆದರೆ ಮರುಕ್ಷಣ…

ಚಾಲುಕ್ಯ ಇನ್ಪೋಟೆಕ್ನ ಮಾಲಿಕ ರಮೇಶ ಮೂಲತಃ ತಮಿಳುನಾಡಿನವನು. ಆದರೆ ಅವನು ಓದಿದ್ದೆಲ್ಲಾ ಬೆಂಗಳೂರಿನಲ್ಲಿ. ಅವರಪ್ಪ ರೈಲ್ವೇ ಕೆಲಸದಲ್ಲಿದ್ದವರು. ಕೆಲಸದಿಂದ ನಿವೃತ್ತಿ ಹೊಂದಿದಾಗ ಅವರು ಬೆಂಗಳೂರಿನಲ್ಲಿ ನೇಮಕಗೊಂಡಿದ್ದರು. ಬೆಂಗಳೂರಿನ ಹವಾಮಾನಕ್ಕೆ ಮನಸೋತು ಅವರು ಮತ್ತೆ ಇಲ್ಲೇ ನೆಲೆಸಿದ್ದರು. ಹಾಗಾಗಿ ರಮೇಶನೂ ಇಲ್ಲೇ ನೆಲೆ ನಿಂತು ತನ್ನ ಇಂಜಿನಿಯರಿಂಗ್ ಮುಗಿದ ನಂತರ ಕೆಲವು ಗೆಳೆಯರನ್ನು ಸೇರಿಸಿಕೊಂಡು ಚಾಲುಕ್ಯ ಇನ್ಪೋಟೆಕ್ ಎಂಬ ಸಾಫ್ಟ್-ವೇರ್ ಸಂಸ್ಥೆಯೊಂದನ್ನು ಆರಂಭಿಸಿದ್ದ. ಮೊದಲು ತುಂಬಾ ಕಷ್ಟ ಇದ್ದರೂ, ಈಗ ಚೆನ್ನಾಗಿಯೇ ನಡೆಯುತ್ತಿದೆ ಅವರ ವ್ಯವಹಾರ. ಅವನು ಯಾವುದೋ ವ್ಯವಹಾರದ ಮೇಲೆ ಅಮೇರಿಕಾಗೆ ಹೋದಾಗ ಅಲ್ಲಿ ಅವನಿಗೆ ಸಿಕ್ಕಿದವಳೇ ಮೀನಾ ಬೋರಾ. ಅವಳು ಅಸ್ಸಾಮಿನ ಯಾವುದೋ ಸಣ್ಣ ಹಳ್ಳಿಯಿಂದ ಬಂದವಳು. ಅಲ್ಲಿನ ಉಗ್ರರ ಚಟುವಟಿಕೆಗಳ ನಡುವೆ ಬದುಕು ದುಸ್ಥರ ಎಂದು ಅವಳ ತಂದೆ-ತಾಯಿ ಮಗಳನ್ನು ಮುಂಬೈಗೆ ತಮ್ಮ ಸಂಬಂಧಿಗಳ ಮನೆಗೆ ಕಳಿಸಿ ಅಲ್ಲೇ ಆಕೆಯನ್ನು ಬೆಳೆಸಿದರು. ಆಕೆ ಬಲು ಜಾಣೆ. ಸಿಕ್ಕ ಅವಕಾಶಗಳನ್ನು ಸಮರ್ಥವಾಗಿ ಬಳಸಿ ಇಂಜಿನಿಯರ್ ಆಗಿದ್ದಳು. ರಮೇಶನಿಗೂ ಮೀನಾ ಬೋರಾಳಿಗೂ ಅಮೇರಿಕಾದಲ್ಲಿ ಪ್ರೇಮಾಂಕುರವಾಗಿದ್ದು. ಮರಳಿ ಬಂದ ಮೇಲೆ ಅವರಿಬ್ಬರೂ ವಿವಾಹವಾಗಿ ಬೆಂಗಳೂರಿನಲ್ಲಿ ನೆಲೆನಿಲ್ಲುವ ನಿರ್ಧಾರಕ್ಕೆ ಬಂದಿದ್ದರು. ಈ ಕುರಿತು ಮಾತನಾಡಲೆಂದೇ ರಮೇಶ ಮುಂಬೈಗೆ ತೆರಳಿದ್ದನು. ಮೀನಾಳೊಂದಿಗೆ ಸಮುದ್ರ ತೀರದಲ್ಲಿ ವಿಹರಿಸುತ್ತ ಇರಬೇಕಿದ್ದರೆ ಅವನ ಪರ್ಸ್ ಬಿದ್ದು ಹೋಗಿದ್ದು ಗೊತ್ತಾಗಲಿಲ್ಲ. ಆಗಲೇ ಅವನಿಗೆ ಕೆಟ್ಟ ಸುದ್ದಿ ಸಿಕ್ಕಿದ್ದು. ಬೆಂಗಳೂರಿನಲ್ಲಿ ಅಕಸ್ಮತ್ತಾಗಿ ಎದ್ದ ಕನ್ನಡ-ತಮಿಳು ದಂಗೆಯಲ್ಲಿ ಅವನ ಕಂಪನಿ ಚಾಲುಕ್ಯ ಇನ್ಪೋಟೆಕ್ ಪುಡಿ-ಪುಡಿಯಾಗಿತ್ತು! ರಮೇಶನ ಜೀವಮಾನದ ಕನಸು ನುಚ್ಚುನೂರಾಗಿತ್ತು. ರಮೇಶ ತುರ್ತಾಗಿ ಬೆಂಗಳೂರಿಗೆ ಮರಳುವ ತಯಾರಿ ಮಾಡಿದ. ಮರುದಿನ ಬೆಳಗ್ಗಿನ ವಿಮಾನವೇ ಅವನಿಗಿದ್ದ ಗತಿ. ಮರಳಿ ಹೋಟೇಲಿಗೆ ಬಂದಾಗ ಅವನಿಗೆ ತನ್ನ ಪರ್ಸ್ ಕಳೆದದ್ದು ಗೊತ್ತಾದರೂ ಇನ್ನು ಹುಡುಕುವುದು ವ್ಯರ್ಥ ಎಂದು ಸುಮ್ಮನಾದ. ಮರುದಿನ ಅವನು ಬೆಂಗಳೂರಿಗೆ ಮರಳುತ್ತಿದ್ದ. ದೆಹಲಿಯಲ್ಲಿ ವಿಮಾನ ವಿಳಂಬವಾದ್ದರಿಂದ ಅಂದು ಮುಂಬೈ-ಬೆಂಗಳೂರು ವಿಮಾನವೂ ವಿಳಂಬವಾಗಿತ್ತು. ಅಂತೂ ಇಂತೂ ಅವನು ಬೆಂಗಳೂರು ತಲಪುವಾಗ ಮಧ್ಯಾಹ್ನವಾಗಿತ್ತು. ವಿಮಾನ ನಿಲ್ದಾಣದಲ್ಲಿ ತನ್ನ ಬ್ಯಾಗೇಜ್ ತೆಗೆದುಕೊಂಡು ತುರ್ತಾಗಿ ಅವನು ಹೊರಗೆ ಹೋಗುತ್ತಿರಬೇಕಾದರೆ ಅವನ ಮೊಬೈಲ್ ರಿಂಗ್ ಆಯಿತು. ನೋಡಿದರೆ ಮುಂಬೈ ಸಂಖ್ಯೆ. “ಹಲೋ… ನಾನು ರಮೇಶ ಮಾತನಾಡ್ತಾ ಇದೇನೆ.” ಆದರೆ ಮರುಕ್ಷಣ…

ಲಜ್ಜೋ ಮತ್ತು ರವಿದೇವ್ ಸಿಂಗ್ ಕನಾಟ್ ಪ್ಲೇಸಿನಲ್ಲಿ ಯಾವುದೋ ಬಳಸಿಟ್ಟ ಪುಸ್ತಕಗಳನ್ನು ಕೊಂಡು ಕೊಳ್ಳಲೆಂದು ಬಂದಿದ್ದರು. ಲಜ್ಜೋಳಿಗೆ ಪುಸ್ತಕಗಳ ಬಗ್ಗೆ ಅಷ್ಟೇನೂ ಆಸಕ್ತಿ ಇರಲಿಲ್ಲವಾದರೂ ಕನಾಟ್ ಪ್ಲೇಸಿನಲ್ಲಿ ಸಿಗುವ ಐಸ್ಕ್ರೀಮ್ ಬಜ್ಜಿಯ ಕಡೆಗಿನ ಒಲವು ಆಕೆಯನ್ನು ರವಿದೇವ್ ಸಿಂಗ್ ಜೊತೆಗೆ ಬರುವಂತೆ ಮಾಡಿತ್ತು. ಮದುವೆಯಾದ ಮೇಲೆ ಮೊದಲಬಾರಿಗೆ ಜವಾನ್ ರಾಮ್ದೇವ್ ಸಿಂಗ್ ಲಜ್ಜೋಳನ್ನು ಇಲ್ಲಿಗೇ ಕರೆದುಕೊಂಡು ಬಂದು ಇದೇ ಐಸ್ಕ್ರೀಮ್ ಬಜ್ಜಿ ತಿನ್ನಿಸಿದ್ದ. ಹೊರಗಿನಿಂದ ಬಿಸಿ-ಬಿಸಿ ಹಿಟ್ಟಿನ ಪಾಕ ಒಳಗಡೆ ತಂಪನೆಯ ಐಸ್ಕ್ರೀಮ್ ಮೊದಲಬಾರಿಗೆ ತಿಂದಾಗ ಲಜ್ಜೋಳಿಗೆ ಇದು ತನ್ನ ಗಂಡನಂತೆಯೇ ಎನಿಸಿತ್ತು. ಹೊರಗಿನಿಂದ ಜವಾನ್ ರಾಮ್ದೇವ್ ಸಿಂಗ್ ಕಠಿಣವಾಗಿ ಕಾಣುತ್ತಿದ್ದ. ಬಹುಷಃ ಅವನ ವೃತ್ತಿಯ ಬೇಡಿಕೆಯಾಗಿತ್ತು ಅದು. ಆದರೆ ಜವಾನ್ ರಾಮ್ದೇವ್ ಸಿಂಗ್ ಬಹಳ ರಸಿಕ. ಹೆಂಡತಿಯೆಂದರೆ ಪ್ರಾಣ. ಸಿಕ್ಕ ಚಿಕ್ಕ-ಚಿಕ್ಕ ಅವಕಾಶಗಳಲ್ಲಿ ತನ್ನ ಪರಿಧಿಯಲ್ಲಿ ಲಜ್ಜೋಳ ಬಾಳನ್ನು ಅವಿಸ್ಮರಣೀಯಗೊಳಿಸಿದ್ದ. ಎಷ್ಟೆಂದರೂ ಅಪ್ಪ-ಅಮ್ಮ ಇಲ್ಲದ ಜವಾನ್ ರಾಮ್ದೇವ್ ಸಿಂಗನ್ನು ಲಜ್ಜೋ ಪ್ರೀತಿಸಿ ತನ್ನ ಸ್ವಂತ ಅಪ್ಪ-ಅಮ್ಮಂದಿರನ್ನು ಧಿಕ್ಕರಿಸಿ ಮದುವೆಯಾಗಿದ್ದಳು. ಹಾಗಾಗಿ ಜವಾನ್ ರಾಮ್ದೇವ್ ಸಿಂಗ್ ಆಕೆಯನ್ನು ತನ್ನ ಜೀವಕ್ಕಿಂತ ಮಿಗಿಲಾಗಿ ಪ್ರೀತಿಸುತ್ತಿದ್ದ. ಅವನು ಬೆಂಗಳೂರಿಗೆ ನಾಲ್ಕು ತಿಂಗಳ ಮಟ್ಟಿಗೆ ಕೆಲಸದ ಮೇಲೆ ಹೋದಾಗಿನಿಂದ ಲಜ್ಜೋ ಇದು ಎರಡನೇ ಬಾರಿ ಇಲ್ಲಿಗೆ ಬಂದು ಐಸ್ಕ್ರೀಮ್ ಬಜ್ಜಿ ತಿನ್ನುತ್ತಿರುವುದು. ರವಿದೇವ್ ಸಿಂಗ್ ಅತ್ತಿಗೆ ಇದು ಬರೇ ಒಂದು ತಿಂಡಿ ಅಣ್ಣ ಅಲ್ಲ. ಇದರ ಮೇಲೆ ಯಾಕಿಷ್ಟು ಪ್ರೀತಿಯೋ ಎಂದು ತಮಾಷೆ ಮಾಡುತ್ತಿದ್ದ.  ಕನಾಟ್ ಪ್ಲೇಸ್ ತಲುಪಿದಾಗ ಗಂಟೆ ಒಂಭತ್ತಾಗಿತ್ತು. ಐಸ್ಕ್ರೀಮ್ ಬಜ್ಜಿಯ ಅಂಗಡಿ ಇನ್ನೂ ತೆರೆಯದಿರಲಿಲ್ಲ. ರವಿದೇವ್ ಸಿಂಗ್ ತನಗೆ ಬೇಕಾದ ಪುಸ್ತಕಗಳನ್ನು ಆಯಲು ಆರಂಭಿಸಿದ. ಗಂಟೆ ಸುಮಾರು ಹನ್ನೆರಡಾಗುತ್ತಾ ಬಂದಾಗ ಐಸ್ಕ್ರೀಮ್ ಬಜ್ಜಿ ಅಂಗಡಿಯವನು ಬಾಗಿಲು ತೆರೆದ. ಲಜ್ಜೋ ರವಿದೇವ್ ಸಿಂಗ್ಗೆ ಹೇಳಿ ಅತ್ತ ಹೋಗುತ್ತಲೇ ರವಿದೇವ್ ಸಿಂಗ್ನ ಮೊಬೈಲ್ ರಿಂಗ್ ಆಗಲಾರಂಭಿಸಿತು. ನೋಡಿದರೆ ಬೆಂಗಳೂರಿನ ಸಂಖ್ಯೆ. ಹೋ! ಅಣ್ಣನೇ ಇರಬೇಕೆಂದು ಫೋನ್ ಎತ್ತಿದ. “ಹಲೋ… ಮೈ ರವಿದೇವ್ ಸಿಂಗ್ ಬಾತ್ ಕರ್ ರಹಾ ಹೂಂ…” ಆದರೆ ಮರುಕ್ಷಣ…

ಇಂದಿರಾ ಪ್ರಮುಖ ಸುದ್ದಿವಾಹಿನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದಳು. ಇಂದು ಆಕೆ ಮೊದಲ ಬಾರಿಗೆ ದೂರದರ್ಶನ ಪರದೆಯ ಮೇಲೆ ಕಾಣಿಸಿಕೊಳ್ಳುವವಳಿದ್ದಳು. ಸಂಜೆ ಐದು ಗಂಟೆಯ ಸುದ್ದಿಯನ್ನು ಇಂದು ಅವಳು ಓದುವವಳಿದ್ದಳು. ಅವಳು ಸುದ್ದಿಯನ್ನು ಓದುವುದನ್ನು ದೇಶವಿಡೀ ಕೇಳಲಿದೆ ಎನ್ನುವ ವಿಷಯ ಆಕೆಗೆ ರೋಮಾಂಚನ ಉಂಟು ಮಾಡಿತ್ತು. ಮೇಕಪ್ ಮುಗಿಯುತ್ತಿದ್ದಂತೆ ಇಂದಿರಾಳ ಎದೆಬಡಿತ ಜೋರಾಗಿತ್ತು. ಇನ್ನು ಕೇವಲ ಹತ್ತು ನಿಮಿಷಗಳಲ್ಲಿ ಆಕೆ ಇಡೀ ದೇಶದ ಮುಂದೆ ತನ್ನ ಮೋಹಕ ನಗು ಬೀರಲಿದ್ದಳು. ಭಾರತ ಅದೇ ಸ್ವಲ್ಪ ಹೊತ್ತಿನ ಮೊದಲು ಆಸ್ಟ್ರೇಲಿಯಾವನ್ನು ರೋಮಾಂಚಕ ರೀತಿಯಲ್ಲಿ ಕ್ರಿಕೆಟಿನಲ್ಲಿ ಸೋಲಿಸಿತ್ತು. ತನ್ನ ಮೊದಲ ದಿನವೇ ಇಂಥಾ ಸುದ್ದಿ ಸಿಕ್ಕಿದ್ದು ಇಂದಿರಾಳಿಗೆ ಸಂತೋಷಕೊಟ್ಟಿತ್ತು. ಅದನ್ನು ಹೇಗೆ ಹೇಗೆ ಹೇಳಬಹುದೆಂದು ಯೋಚಿಸುತ್ತಾ ಆಕೆ ಸ್ಟೂಡಿಯೋ ಒಳಗೆ ಹೋದಳು.  ಕೌನ್ಟ್ ಡೌನ್ ಆರಂಭವಾಯಿತು. ಹತ್ತು… ಒಂಭತ್ತು… … ಮೂರು… ಎರಡು… ಒಂದು… ಗೋ! ಇಂದಿರಾ ತನ್ನ ಮುಂದೆ ಇದ್ದ ಟೆಲಿ-ಪ್ರಾಂಪ್ಟರ್ನ ಮೇಲೆ ಮೂಡಿ ಬರುತ್ತಿದ್ದ ಸುದ್ದಿಯನ್ನು ನೋಡುತ್ತಾ ಓದಲಾರಂಭಿಸಿದಳು. ಆದರೆ…

“ನಮಸ್ಕಾರ. ನೀವು ನೋಡುತ್ತಿದ್ದೀರಿ ದೇಶಕಾಲ ಸುದ್ದಿವಾಹಿನಿಯನ್ನು. ನಾನು ಇಂದಿರಾ. ಮೊದಲಿಗೆ ಮುಖ್ಯವಾರ್ತೆಗಳು. ಇದೀಗಷ್ಟೇ ಬಂದ ಸುದ್ದಿಯಂತೆ, ಮುಂಬೈನ ರಾಜ್ ಮಹಲ್ ಹೋಟೇಲಿನ ಬಳಿ, ದೆಹಲಿಯ ಕನಾಟ್ ಪ್ಲೇಸಿನಲ್ಲಿ ಹಾಗೂ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಉಗ್ರಗಾಮಿಗಳು ಪ್ರಭಲ ಸ್ಪೋಟಕಗಳಿಂದ ಸ್ಪೋಟ ನಡೆಸಿದ್ದಾರೆ. ದೇಶದ ಮೂರು ಮೂಲೆಗಳಲ್ಲಿ ಏಕಕಾಲಕ್ಕೆ ಇಂಥಾ ಉಗ್ರಗಾಮಿ ಚಟುವಟಿಕೆ ನಡೆದಿರುವುದನ್ನು ಪ್ರಪಂಚದ ಅನೇಕ ನಾಯಕರು ಖಂಡಿಸಿದ್ದಾರೆ. ಇದರ ಹಿಂದೆ ಪಾಕಿಸ್ಥಾನದ ಕೈವಾಡ ಸಾಧ್ಯ ಎಂದು ಕೇಂದ್ರ ಸರಕಾರ ಮೊದಲ ಹೇಳಿಕೆ ನೀಡಿದೆ. ಸತ್ತವರ ಸಂಖ್ಯೆ ಸಧ್ಯಕ್ಕೆ ಸಿಕ್ಕ ವರದಿಯಂತೆ ಐವರು. ಹೆಚ್ಚಿನ ವಿವರಗಳು ಇನ್ನೂ ಸಿಕ್ಕಿಲ್ಲ. ***  ಮಹಾರಾಷ್ಟ್ರದಲ್ಲಿ ಮುಂದುವರೆದ ಮಹಾರಾಷ್ಟ್ರೇತರರ ಹತ್ಯೆಯ ಸರಣಿ ಮುಂದುವರೆಯುತ್ತಾ ಇಂದು ಮತ್ತೊಂದು ಹತ್ಯೆ ನಡೆದಿದೆ. ಹತರಾದವರ ಹೆಸರು ಇನ್ನೂ ತಿಳಿದು ಬಂದಿಲ್ಲ. ಅವರು ಬಿಹಾರ ಮೂಲದವರೆಂದೂ ತಿಳಿದು ಬಂದಿದೆ. ಹತ್ಯೆಯನ್ನು ಮುಂಬೈನ ಪ್ರಮುಖ ಮುಖಂಡರು ಖಂಡಿಸಿದ್ದಾರೆ. *** ನಿನ್ನೆ ನಡೆದ ಕನ್ನಡ-ತಮಿಳು ಗಲಭೆಯಲ್ಲಿ ನಷ್ಟ ಅನುಭವಿಸಿದವರಿಗೆ ತಲಾ ಒಂದು ಲಕ್ಷ ಪರಿಹಾರವನ್ನು ಕರ್ನಾಟಕದ ಮಾನ್ಯ ಮುಖ್ಯಮಂತ್ರಿಗಳಾದ ಚಿನ್ನಪ್ಪ ಗೌಡರು ಘೋಷಿಸಿದ್ದಾರೆ. *** ಹಾಗೂ ಭಾರತವು ರೋಮಾಂಚಕ ರೀತಿಯಲ್ಲಿ ಆಸ್ಟ್ರೇಲಿಯಾವನ್ನು ಕ್ರಿಕೆಟ್ ಪಂದ್ಯದಲ್ಲಿ ಸೋಲಿಸಿ ಸರಣಿಯನ್ನು ಗೆದ್ದುಕೊಂಡಿದ್ದಾರೆ. *** ಇನ್ನು ವಾರ್ತೆಗಳ ವಿವರ…”

ಉಮ್ಮರ್ ಫಾರೂಕ್, ತ್ರಿಪುರಾರಿ ಶರನ್, ಜವಾನ್ ರಾಮ್ದೇವ್ ಸಿಂಗ್, ರಮೇಶ್, ರವಿದೇವ್ ಸಿಂಗ್, ಜೇಸನ್ ಇವರುಗಳ ದೂರವಾಣಿ ಕರೆಯನ್ನು ಉತ್ತರಿಸುವವರು ಆ ದಿನ ಯಾರೂ ಇರಲಿಲ್ಲ.

Share This