ಅಂದು ಫೇಸ್ ಬುಕ್ ತೆರೆದು ನೋಡಿದಾಗ, ಮಂಗಳೂರಿನಲ್ಲಿ ಎಸ್.ಇ.ಝಡ್ ವಿರೋಧೀ ಒಂದು ವೀಡಿಯೋ ತುಣುಕು ಕಾಣಿಸಿತು. ರೈತನೊಬ್ಬನ ಮನೆಯನ್ನು ಅಮಾನುಷವಾಗಿ ಧ್ವಂಸ ಮಾಡುವ ದಾಖಲೀಕರಣ ಅದು. ಸುಮಾರು ಏಳೆಂಟು ನಿಮಿಷದ ಆ ವೀಡಿಯೋ ಮುದ್ರಿಕೆ ನೋಡಿದಾಗ ಎಸ್.ಇ.ಝಡ್ ಕಲ್ಪನೆಯ ಬಗ್ಗೆಯೇ ಹೇಸಿಗೆ ಹುಟ್ಟುತ್ತದೆ. ಮತ್ತೊಂದು ದಿನ ವೀಡಿಯೋದಲ್ಲಿ ವಿಶ್ವಕಪ್ ಫುಟ್ಬಾಲ್ ಆಟಕ್ಕಾಗಿ ತಯಾರಿಸಿದ ಗೀತೆ ವಾಕ-ವಾಕಕ್ಕೆ ಮಗುವೊಂದು ಸೊಂಟ ತಿರುಗಿಸಿ ಕುಣಿಯುವ ಮುದ್ದಾದ ವೀಡಿಯೋವನ್ನು ನೋಡಿದೆ. ಆಹಾ! ವಿಶ್ವಕಪ್ ಪುಟ್ಬಾಲ್ ಜ್ವರ ಹೇಗೆ ಜಗತ್ತನ್ನೇ ಆವರಿಸುತ್ತಿದೆ ಎಂದು ನಾನು ಅಂದು ಕೊಂಡೆ. ಈ ವಿಷಯ ನನ್ನಲ್ಲಿ ಇನ್ನೊಂದಷ್ಟು ವಿಷಯಗಳನ್ನು, ಪ್ರಶ್ನೆಗಳನ್ನೂ ಹುಟ್ಟಿ ಹಾಕಿತು. ಕೊಲ್ಲಿ ಯುದ್ಧದ ಸಂದರ್ಭದಿಂದ ಆರಂಭಿಸಿ, ಇಂದಿನವರೆಗೆ ಅಮೇರಿಕಾ ದೇಶದಲ್ಲಿನ ಮಾಧ್ಯಮ ಜನರಿಗೆ ಯುದ್ಧದ ಬಗ್ಗೆ ನೀಡುತ್ತಿರುವ ಚಿತ್ರ, ಹಿಟ್ಲರ್ ಜಾಗತಿಕ ಯುದ್ಧದ ಸಂದರ್ಭದಲ್ಲಿ ತನ್ನ ಜನರಿಗೆ ತೋರಿಸಿದ ದೃಶ್ಯ-ಶ್ರವ್ಯಗಳು ಇತ್ಯಾದಿಗಳು ಒಮ್ಮೆ ಮನಸ್ಸಲ್ಲಿ ಹಾದು ಹೋದವು. ಅದರ ಕುರಿತು ಒಂದಿಷ್ಟು ಮಾತುಗಳನ್ನು ಇಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

ಸಿನೆಮಾ ಮಾಧ್ಯಮ ಅಥವಾ ದೃಶ್ಯ-ಶ್ರವ್ಯ ಮಾಧ್ಯಮ ಪ್ರತಿದಿನವೂ ತೀವ್ರ ಗತಿಯಲ್ಲಿ ಬದಲಾಗುತ್ತಿದೆ. ಹಾಗೆಯೇ ಅದರ ಸೃಷ್ಟಿ, ಹಂಚಿಕೆ ವಿಧಾನಗಳಲ್ಲೂ ಕ್ರಾಂತಿಕಾರೀ ಬದಲಾವಣೆಗಳಾಗುತ್ತಿವೆ. ಇಂದು, ಇತಿಹಾಸದ ಪುಟಗಳನ್ನು ಓದಲು ಹೊರಟರೆ ಅದನ್ನು ಒಬ್ಬನೋ ಇಬ್ಬರೋ ನಿಯಮಿತ ಇತಿಹಾಸಜ್ಞರು ಬರೆಯುತ್ತಿದ್ದರು. ಆ ಕಾಲದ ಇತಿಹಾಸವನ್ನು ನಾವು ಒಂದೋ ಇತಿಹಾಸಜ್ಞರ ಬರವಣಿಗೆಯನ್ನು ಅರ್ಥೈಸುವುದರ ಮೂಲಕ ಅಥವಾ ಆ ಕಾಲದ ಉಳಿಕೆಗಳ ಪುರಾವೆಗಳಿಂದ ಪುಷ್ಟೀಕರಿಸಿ ಅರಿತುಕೊಳ್ಳುತ್ತೇವೆ. ಇದರಿಂದ ಆ ಕಾಲದ ಕುರಿತಾದ ನೋಟಗಳು ನಮಗೆ ಕೆಲವೇ ಕೆಲವು ದೃಷ್ಟಿಕೋನಗಳಿಂದ ದೊರೆತಿರುತ್ತದೆ.ಇದರಿಂದಾಗಿ ಒಂದು ಗುಂಪಿನ ಜನರ ಸ್ವಾರ್ಥಕ್ಕಾಗಿ ಇತಿಹಾಸವನ್ನೇ ತಿರುಚುವ, ಅದನ್ನೇ ಸತ್ಯ ಎಂದು ಪ್ರಚುರಪಡಿಸುವ ಸಾಧ್ಯತೆಗಳು ತೀವ್ರವಾಗಿರುತ್ತವೆ. ಮಹಾ ಕಾವ್ಯಗಳನ್ನು ಐತಿಹಾಸಿಕ ದಾಖಲೆಗಳೆಂದು ಪರಿಗಣಿಸುವವರು ಅನೇಕರಿದ್ದರೆ, ಅವು ಕೇವಲ ಮೌಲ್ಯಬೋಧಕ ಕಾವ್ಯಗಳೆಂದು ನಂಬಿದವರು ಅನೇಕರಿದ್ದಾರೆ. ಈ ಹುಡುಕಾಟಗಳು ಗೊಂದಲಮಯವಾಗಲು ದೃಷ್ಟಿಕೋನದ ಅಂಶವೇ ಪ್ರಮುಖವಾಗಿಬಿಡುತ್ತದೆ.

ಆದರೆ ಇಂದು ನಾವು ಇತಿಹಾಸವನ್ನು ದಾಖಲಿಸುವ ಹಾಗೂ ಪ್ರಸರಿಸುವ, ಶೇಖರಿಸಿಡುವ ಕ್ರಮಗಳೆಲ್ಲವೂ ತೀವ್ರವಾಗಿ ಬದಲಾಗಿದೆ. ವಿದ್ಯುನ್ಮಾನ ಕ್ರಾಂತಿಯಿಂದ, ಪ್ರತಿಯೊಬ್ಬನ ಕೈಯಲ್ಲೂ ಬಿಂಬಗಳನ್ನು ಸೃಷ್ಟಿಸುವ, ಪ್ರಸರಿಸುವ ಸಾಧನಗಳು ಕುಣಿದಾಡುತ್ತಿವೆ. ಇಂದಿನ ಮನುಷ್ಯ, ವರ್ತಮಾದಲ್ಲಿ ಜೀವಿಸುತ್ತಾ, ಇತಿಹಾಸವನ್ನು ಸೃಷ್ಟಿಸುತ್ತಾ, ಅದೇ ಸಮಯದಲ್ಲಿ ಅದನ್ನು ತನ್ನ ಅನುಕೂಲಕ್ಕೆ ತಕ್ಕಂತೆ, ತನ್ನದೇ ದೃಷ್ಟಿಕೋನಕ್ಕೆ ತಕ್ಕಂತೆ ದಾಖಲಿಸುತ್ತಲೂ, ಅದನ್ನು ವಿಶ್ವದುದ್ದಗಲಕ್ಕೆ ಪ್ರಸರಿಸುತ್ತಲೂ ಸಾಗುತ್ತಿದ್ದಾನೆ. ಇದರಿಂದ ದಾಖಲಾಗುತ್ತಿರುವ ಇತಿಹಾಸಕ್ಕೂ ಭಿನ್ನಾರ್ಥಗಳೂ, ಭಿನ್ನ ನೋಟಗಳೂ ದೊರೆಯುತ್ತಿವೆ. ಇದನ್ನು ಅರಿತುಕೊಂಡು ನಾವು ಸೃಷ್ಟಿಸುತ್ತಿರುವ ಬಿಂಬಗಳ ಕುರಿತಾಗಿಯೂ, ಅವುಗಳು ಹುಟ್ಟಿಸುತ್ತಿರುವ ಅರ್ಥಸಾಧ್ಯತೆಗಳ ಬಗ್ಗೆಯೂ ಜಾಗ್ರತರಾಗಬೇಕಾಗಿರುವುದು ಇಂದಿನ ವಿದ್ಯುನ್ಮಾನ ಜಗತ್ತಿನ ಅನಿವಾರ್ಯವಾಗಿದೆ.

ಹಿಟ್ಲರ್ ತನ್ನ ಯುದ್ಧತಂತ್ರವಾಗಿ ಸಿನೆಮಾವನ್ನು ಬಳಸಿದ್ದು ಗೊತ್ತೇ ಇರುವ ಸಂಗತಿ. ಅಮೇರಿಕಾ ತನ್ನ ಕೊಳ್ಳುಬಾಕತನವನ್ನು ಜನರ ಮೇಲೆ ಹೇರಲು ಬಳಸುವ ವಿಧಾನಗಳಲ್ಲಿ ಪ್ರಮುಖವಾದದ್ದು ಅತ್ಯಂತ ಪರಿಣಾಮಕಾರಿಯಾದ ಮಾಧ್ಯಮ ಬಳಕೆ. ಅಂದು ಒಂದು ಸ್ಥಾಪಿತ ವ್ಯವಸ್ಥೆಗೆ ಮಾತ್ರ ಈ ಮಾಧ್ಯಮವನ್ನು ಸೃಷ್ಟಿಸುವ, ಪ್ರಸರಿಸುವ ಶಕ್ತಿ ಇತ್ತು. ಇದರಿಂದಾಗಿ ’ಪರ-ಅಭಿಪ್ರಾಯವನ್ನು’ ರೂಪಿಸುವುದೂ, ’ವಿರೋಧೀ ಧ್ವನಿಗಳನ್ನು’ ಹತ್ತಿಕ್ಕುವುದೂ ಸುಲಭವಾಗಿತ್ತು. ಆದರೆ ಇಂದು ಹಾಗಲ್ಲ. ಗುಜರಾತ್ ನರಮೇಧ ನಡೆದಾಗ ಸೃಷ್ಟಿಯಾದ ಸರಕಾರದ ಪರವಾದ ಸಾಕ್ಷ್ಯಚಿತ್ರಗಳ ವಿರುದ್ಧವಾಗಿ, ಸರಕಾರದ ವಿರೋಧೀ ಅಭಿಪ್ರಾಯಗಳನ್ನು ಹೊತ್ತ ಪ್ರಭಲ ಸಾಕ್ಷ್ಯಚಿತ್ರಗಳು ಹರಿದಾಡಿದ್ದು ಗೊತ್ತೇ ಇದೆ. ಹೀಗೆ ವಿದ್ಯುನ್ಮಾನ ದಾಖಲೀಕರಣದ ಆರಂಭದಿಂದ ಇತಿಹಾಸ ದಾಖಲೀಕರಣ ಕೇವಲ ಆಢಳಿತರೂಢರ ಧ್ವನಿಯಾಗದೇ, ಶ್ರೀ ಸಾಮಾನ್ಯನ ಜೀವನದ ದಾಖಲೀಕರಣವೂ ಆಗುತ್ತಾ ಸಾಗಿತು. ಇದು ನಿಜಕ್ಕೂ ಸ್ವಾಗತಾರ್ಹ ವಿಷಯವಾಗಿದೆ. ಇದರಿಂದ ಸರಿ-ತಪ್ಪುಗಳ ನಡುವಿನ ಗೆರೆಯು ಮಾಯವಾಗಿ ಎಲ್ಲವೂ ಕೇವಲ ದೃಷ್ಟಿಕೋನ ಎಂಬ ಹಂತಕ್ಕೆ ಜೀವನ ಇಂದು ತಲುಪಿದೆ.

ಆದರೆ ಇದರಿಂದ ಉಂಟಾಗುತ್ತಿರುವ ಪ್ರಮುಖ ಪರಿಸ್ಥಿತಿಯೆಂದರೆ, ಬೇಜವಾಬ್ದಾರಿಯುತ ದಾಖಲೀಕರಣದ ಅಪಾಯ. ದೃಶ್ಯವಾಹಿನಿಗಳ ಮೂಲಕ ಸಾಮಾನ್ಯನ ಧ್ವನಿ ಎಂಬ ಹೆಸರಿನಲ್ಲಿ ಪ್ರಸಾರವಾಗುವ ಅನೇಕ ವಿಷಯಗಳು, ಸಮಾಜದ ಸುಳ್ಳು ಮುಖವನ್ನು ತೋರಿಸುತ್ತವೆ, ಎಷ್ಟೋಬಾರಿ ಸಮಾಜದಲ್ಲಿ ಭಯವನ್ನು ಸೃಷ್ಟಿಸುವ, ತನ್ಮೂಲಕ ಸಮಾಜವನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳುವ ಪ್ರಯತ್ನಗಳು ನಡೆಯುತ್ತಲೇ ಇವೆ. ಸಮಸ್ಯೆಯ ಪ್ರತಿಯೊಂದು ಮಗ್ಗುಲಲ್ಲೂ ಹೊಕ್ಕು ನೋಡುವ ಕ್ಯಾಮರಾ ಕಣ್ಣುಗಳಿರುವಾಗ, ಅಷ್ಟೊಂದು ಬಗೆಯ ಅರ್ಥೈಸುವಿಕೆಗಳು ನಡೆದು, ಸಮಸ್ಯೆಯ ನಿಜವನ್ನೇ ಬಿಟ್ಟುಬಿಡುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ. ಇಂದು ಅನೇಕ ದೃಶ್ಯವಾಹಿನಿಗಳಲ್ಲಿ, ಸುದ್ದಿಯನ್ನು ರೋಚಕವಾಗಿಸಿ, ಪ್ರಚೋದನಾಕಾರಿಯಾಗಿಸಿ ಮಾರಾಟ ಮಾಡಲು ಪ್ರಯತ್ನಿಸುತ್ತಿರುವ ಕಾಲದಲ್ಲಿ, ಈ ಅಪಾಯ ಇನ್ನಷ್ಟು ಹೆಚ್ಚಾಗಿರುತ್ತದೆ.

ಇನ್ನು ವಿದ್ಯುನ್ಮಾನ ಮಾಧ್ಯಮಗಳು ಮೊದಲು ಬಂದಾಗ, ಇದ್ದ ಇನ್ನೊಂದು ಪ್ರಮುಖ ಆಶಯವೆಂದರೆ, ಇದನ್ನು ನಮ್ಮಲ್ಲಿನ ಕಲೆಗಳ, ಸಾಮಾನ್ಯರ ಜನಜೀವನದ ಸಮರ್ಥ ದಾಖಲೀಕರಣಕ್ಕೆ ಬಳಸಲಾಗುತ್ತದೆ ಎಂಬ ಕನಸು. ನಾನೂ ಅಂಥಾ ಕನಸನ್ನು ಕಂಡವನು. ಆದರೆ ನನ್ನೂರಾದ ಮಂಗಳೂರಿನ ಯಕ್ಷಗಾನದ ದಾಖಲೀಕರಣವನ್ನೇ ಗಮನಿಸಿದಾಗ ಈ ಆಶಯ ಸುಳ್ಳಾದದ್ದು ಕಾಣಿಸುತ್ತದೆ. ದಾಖಲೀಕರಣ ಸಮರ್ಥವಾಗಿ ನಡೆಯದೇ ಅಲ್ಲೊಂದು ಹೊಸ ವ್ಯಾಪಾರ ಮಾತ್ರ ಹುಟ್ಟಿಕೊಂಡಿದೆ. ಅನೇಕ ಯಕ್ಷಗಾನ ಮೇಳಗಳು, ಆಭಾಸಕರವಾದ ಪ್ರದರ್ಶನಗಳನ್ನು ಕೆಟ್ಟ ರೀತಿಯಲ್ಲಿ, ಪೂರ್ವಭಾವೀ ಸಿದ್ಧತೆಗಳಿಲ್ಲದೇ ದಾಖಲೀಕರಿಸಿ ತ್ವರಿತಗತಿಯಲ್ಲಿ ಪ್ರಸಾರ ಮಾಡಿ ಹಣ ಮಾಡಿಕೊಂಡವು. ಇಂಥಾ ಪ್ರತಿಗಳು ದೇಶ-ವಿದೇಶಗಳಲ್ಲಿ ವಾಸಿಸುತ್ತಿರುವ ಕನ್ನಡಿಗರ, ಪಾಶ್ಚಾತ್ಯರ ಕೈಗಳಿಗೆ ಸೇರಿಕೊಂಡವು. ಇದರಿಂದ ಯಕ್ಷಗಾನವನ್ನು ಅರ್ಥೈಸುವ ವಿಧಾನವೇ ಕಾಲಕ್ರಮೇಣ ಬದಲಾದಲ್ಲಿ ಅಚ್ಚರಿಯಿಲ್ಲ. ಸಾಂಪ್ರದಾಯಿಕ ಪ್ರದರ್ಶನಗಳನ್ನು ಕೊಡುವವರು ಈ ಮಾಧ್ಯಮವನ್ನೂ, ಅದರ ಸಾಮರ್ಥ್ಯವನ್ನೂ ಚೆನ್ನಾಗಿ ಅರ್ಥ ಮಾಡಿಕೊಳ್ಳಲಿಲ್ಲ ಹಾಗೂ ಅದನ್ನು ಸಮರ್ಥವಾಗಿ ಬಳಸಿಕೊಳ್ಳಲಿಲ್ಲ. ಈ ಮಾಧ್ಯಮದ ಅರಿವಿದ್ದ ಅನೇಕರಿಗೆ ಯಕ್ಷಗಾನಕ್ಕೇ ಪ್ರವೇಶವಿರಲಿಲ್ಲ! ಹೀಗಾಗಿ ಕಲೆಯನ್ನು ಸಮರ್ಥವಾಗಿ ದಾಖಲೀಕರಿಸಿಕೊಳ್ಳುವಲ್ಲಿ ವಿದ್ಯುನ್ಮಾನ ಮಾಧ್ಯಮ ಸೋತಿತು. ಯಕ್ಷಗಾನ ದಾಖಲೀಕರಣದಲ್ಲಿ ಅದರ ‘ಎಕ್ಸಾಟಿಕ್’ ಗುಣ ಮಾತ್ರ ಎದ್ದು ಕಂಡಿತು ಹೊರತು ಯಕ್ಷಗಾನದ ನಿಜ ಸೌಂದರ್ಯವಲ್ಲ!

ಇನ್ನು ಮಾಧ್ಯಮದ ಪ್ರಸರಣದ ವಿಧಾನಗಳಲ್ಲಿ ಅನೇಕ ವರುಷಗಳಿಂದ ನಡೆದು ಬಂದಿರುವ ವಿಧಾನವನ್ನೇ ಚಿತ್ರೋದ್ಯಮ ನಂಬುತ್ತಿರುವ ಸಂದರ್ಭದಲ್ಲಿ, ಉದ್ಯಮ ಜಾಗೃತಗೊಳ್ಳುವ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ವಿದ್ಯುನ್ಮಾನ ಮಾಧ್ಯಮಗಳು ಜನರನ್ನು ಆವರಿಸುತ್ತಾ ಬಂದುದ್ದರಿಂದ ಹಾಗೂ ಈ ಮಾಧ್ಯಮದ ಪ್ರಸರಣದ ಸಾಧ್ಯತೆ ತೀರಾ ಭಿನ್ನವಾಗಿದ್ದುದರಿಂದ, ಸಾಂಪ್ರದಾಯಿಕ ಚಿತ್ರೋದ್ಯಮಕ್ಕೆ ದೊಡ್ಡದಾದ ಹೊಡೆತ ಬಿತ್ತು. ಜನರ ನೋಡುವ ಕ್ರಮಗಳು ಬದಲಾದವು, ಚಿತ್ರ ಮಾಧ್ಯಮದ ವ್ಯಾಕರಣಗಳು ತೀವ್ರಗತಿಯಲ್ಲಿ ತಿದ್ದಲ್ಪಟ್ಟವು. ಕೇವಲ ನೂರೇ ವರ್ಷದ ಇತಿಹಾಸವಿದ್ದರೂ ಈ ನೂರುವರ್ಷದಲ್ಲಿ ಕಾಣದಂಥಾ ತೀವ್ರಗತಿಯಲ್ಲಿ ನಡೆಯುತ್ತಿರುವ ತಂತ್ರಜ್ಞಾನ ಬದಲಾವಣೆಗೆ ಹೊಂದಿಕೊಳ್ಳಲು ಇಂದು ನಮ್ಮ ಚಿತ್ರೋದ್ಯಮ ಪ್ರಯತ್ನಿಸುತ್ತಿದೆ, ಒದ್ದಾಡುತ್ತಿದೆ. ಈ ಹೊಸ ಮಾಧ್ಯಮದ ಹೊಸ ಸಾಧ್ಯತೆಗಳನ್ನು, ಅದು ಸೃಷ್ಟಿಸುತ್ತಿರುವ ಹೊಸ ಮಾರುಕಟ್ಟೆ ಸಾಧ್ಯತೆಗಳನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವಲ್ಲಿ ನಮ್ಮಲ್ಲಿನ ಸಾಂಪ್ರದಾಯಿಕ ಚಿತ್ರೋದ್ಯಮ ಇನ್ನೂ ಸಫಲವಾಗಿಲ್ಲ.

ಮೊದಲು ಸಿನೆಮಾ ಎಂದರೆ, ಚಿತ್ರಕಥೆಯನ್ನು ಸಿದ್ಧಪಡಿಸಿ, ನಟರು ಅಭಿನಯಿಸಿ ಬಹಳ ಜನರು ಬಹಳ ಕಾಲ ಶ್ರಮಪಟ್ಟು ರೂಪಿಸುವ ಕಲಾಕೃತಿಯಾಗಿತ್ತು. ಆದರೆ ಇಂದು ಆ ಪರಿಸ್ಥಿತಿ ಬದಲಾಗಿದೆ. ಚಿತ್ರೀಕರಣ ನಡೆಸುತ್ತಲೇ ಚಿತ್ರಕಥೆಯನ್ನು ರೂಪಿಸಬಹುದು, ಚಿತ್ರೀಕರಿಸುತ್ತಲೇ ಕಥೆ ಬದಲಾಗಲೂಬಹುದು! ಸಾಕ್ಷ್ಯಚಿತ್ರದ ರೂಪದ ಕಥಾ ಚಿತ್ರ, ಕಥಾಚಿತ್ರ ರೂಪದ ಸಾಕ್ಷ್ಯಚಿತ್ರವೂ ಸಾಮಾನ್ಯ. (ಪರಿಸ್ಥಿತಿಯ ಗಂಭೀರತೆಯನ್ನು ಅರಿಯಲು, ಸುದ್ದಿಯ ಹೆಸರಿನಲ್ಲಿ ಪತ್ರಿಕೆಗಳಲ್ಲಿ ಕಥೆಗಳು ಪ್ರಕಟವಾಗುವುದೂ, ಕಥಾ ಸಂಕಲನದ ರೂಪದಲ್ಲಿ ಸುದ್ದಿಗಳ ಪ್ರಕಟಣೆಯನ್ನೊಮ್ಮೆ ಯೋಚಿಸಿ ನೋಡಿ!) ಈ ರೀತಿ ಅಭಿವ್ಯಕ್ತಿಗಳ ವಿಂಗಡನೆಯಲ್ಲಿನ ಗೋಜಲನ್ನು ಇಂದಿನ ಅಭಿವ್ಯಕ್ತಿ ಮಾಧ್ಯಮಗಳು ಸೃಷ್ಟಿಸುತ್ತಿವೆ. ಮೊದಲು ಈ ತಂತ್ರಜ್ಞಾನ ಕೆಲವರಿಗೆ ಮಾತ್ರ ಸೀಮಿತವಾಗಿತ್ತು. ಆದರೆ ನಾವು ವಿದ್ಯುನ್ಮಾನ ಕ್ಯಾಮರಾಗಳಿಗೆ ಸಿದ್ಧರಾಗುತ್ತಿರುವಷ್ಟರಲ್ಲೇ ಜೋಬಿನೊಳಗೆ ರಿಂಗಿಣಿಸುವ ಜಂಗಮವಾಣಿಗಳೊಳಗೇ ಶಕ್ತಿಶಾಲೀ ಕ್ಯಾಮರಾಗಳು ಬಂದು ಕುಳಿತವು. ದೇಶ-ವಿದೇಶ ಸುತ್ತುವ ಪ್ರವಾಸಿಗರ ಅಂಗೈಯಲ್ಲಿ ಶಕ್ತಿಶಾಲೀ ಸ್ಥಿರ ಚಿತ್ರಗ್ರಾಹಿಗಳು, ವೀಡಿಯೋ ಕ್ಯಾಮರಾಗಳು ಬಂದು ಬಿಟ್ಟವು. ಅಂತರ್ಜಾಲದ ರಕ್ಕಸ ಹಸಿವಿಗೆ, ಇವೆಲ್ಲವೂ ಕಾಸಿನ ಮಜ್ಜಿಗೆ ಎಂಬಂತೆ ಸೇರುತ್ತಾ ಹೋದವು. Orkut, Face Book, YouTube ಹೀಗೆ ಅನೇಕಾನೇಕ ಸಾರ್ವಜನಿಕ ವೇದಿಕೆಗಳಲ್ಲಿ ಸ್ಥಿರಚಿತ್ರ, ಚಲಿಸುವ ಚಿತ್ರಗಳು ರಾಶಿ ಬೀಳಲಾರಂಭಿಸಿದವು. ಮಂಗಳೂರಿನ ಯಾವುದೋ ಸಣ್ಣ ಹಳ್ಳಿಯಲ್ಲಿ ನಡೆಯುವ ಭೂತಾರಾಧನೆಯಿಂದ ಹಿಡಿದು ಅಮೇರಿಕಾದಲ್ಲಿ ಸದ್ದಾಂ ಹುಸೇನ್ ಗಲ್ಲಿಗೇರಿಸಿದ ಚಿತ್ರಗಳವರೆಗೆ ಎಲ್ಲವೂ ಲಭ್ಯ ಎನ್ನುವಂತಾಗಿದೆ ಇಂದು. ಇದರಿಂದಾಗಿ ಜನರ ನೋಡುವ ಸ್ವಾತಂತ್ರ್ಯ ಹೆಚ್ಚಾದಂತೆ ಹಾಗೂ ಇದರಿಂದ ಜಗತ್ತು ಹೆಚ್ಚು ಮುಕ್ತವಾದಂತೆ ಮೇಲ್ನೋಟಕ್ಕೆ ಅನಿಸಿದರೂ, ಇಲ್ಲಿ ದೊಡ್ಡ ಹೊಡೆತ ಬಿದ್ದಿರುವುದು ವ್ಯಕ್ತಿಯ ವೈಯಕ್ತಿಕ ಜೀವನಕ್ಕೆ. ನಮಗೇ ಅರಿವಿಲ್ಲದೇ ತನ್ನದೇ ಜೀವನದ ಗೌಪ್ಯ ವಿಚಾರಗಳನ್ನು ಇಂದು ದೃಶ್ಯ-ಶ್ರವ್ಯಗಳ ಮೂಲಕ ಜಗತ್ತಿಗೇ ಪಸರಿಸುತ್ತಿದ್ದೇವೆ ನಾವೆಲ್ಲ.

ಇಂದು ಎಲ್ಲಾ ವಯಸ್ಸಿನವರಿಗೆ, ನಾನಾ ರೀತಿಯ ಮನೋವೃತ್ತಿಯ ಜನರಿಗೆ ನಮ್ಮ ವೈಯಕ್ತಿಕ ಜೀವನ ಆಹಾರವಾಗುತ್ತಿದೆ. ಇದರಿಂದ ಸಮಾಜದಲ್ಲಿನ ತಲ್ಲಣಗಳು ಹೆಚ್ಚಾಗುತ್ತಿರುವುದಂತೂ ಹೌದು. ಜನರು ಸಿನೆಮಾಗಳಿಂದ ಪ್ರಭಾವಿತರಾಗುತ್ತಾರೆ ಹೀಗಾಗಿ ಸಿನೆಮಾಕ್ಕೆ ಸಾಮಾಜಿಕ ಬದ್ಧತೆ ಬೇಕು ಎನ್ನುವುದು ಹಳೆಯ ವಾದ. ಅದನ್ನು ಅನುಷ್ಟಾನಗೊಳಿಸಲು, ಸೆನ್ಸಾರ್ ಮಂಡಳಿಯಂಥಾ ಸಂಸ್ಥೆಗಳನ್ನು ರೂಪಿಸಿದ್ದು, ಸಿನೆಮಾದಲ್ಲಿ ಕುಡಿತ, ಸಿಗರೇಟು ಸೇವನೆ ನಿಶೇಧಿಸಿದ್ದು, ಪ್ರಾಣಿಗಳ ಬಳಕೆಯ ಮೇಲೆ ತೀವ್ರವಾದ ಆಕ್ಷೇಪಣೆಗಳನ್ನು ಹೇರಿದ್ದು ಇತ್ಯಾದಿಗಳು ಚರ್ಚೆಯಾಗುತ್ತಲೇ ಇರುವ ಸಂದರ್ಭದಲ್ಲಿ, ವೈಯಕ್ತಿಕ ನೆಲೆಯಲ್ಲಿ ಪ್ರತಿಯೊಬ್ಬನೂ ತನಗೇ ಅರಿವಿಲ್ಲದೇ ತನ್ನ ವೀಡಿಯೋ ಕ್ಯಾಮರಾ, ಜಂಗಮವಾಣಿಗಳ ಮೂಲಕವೇ ಇಂಥಾ ಒಂದು ಕಂದರದೊಳಗಿಳಿಯುತ್ತಿದ್ದಾನೆ ಹಾಗೂ ತೀರಾ ಕ್ಷಣಿಕವಾದ, ಪ್ರೂರ್ವಯೋಜಿತವಲ್ಲದ ಅಭಿವ್ಯಕ್ತಿಗಳನ್ನು ತನ್ನದೇ ಆದ ರೀತಿಯಲ್ಲಿ, ತನ್ನದೇ ಕಾಲ, ಸ್ಥಳಗಳಲ್ಲಿ ನೋಡಿ ತೀವ್ರತರವಾದ ಅಭಿಪ್ರಾಯಗಳನ್ನು ಹೊಂದುತ್ತಿದ್ದಾನೆ. ಹೀಗಾಗಿ ಇಂದು ಬಿಂಬಗಳನ್ನು ಸೃಷ್ಟಿಸುವ ಪ್ರತಿಯೊಬ್ಬನಿಗೂ ಒಂದು ಸಾಮಾಜಿಕ ಜವಾಬ್ದಾರಿ ಅಗತ್ಯವಾಗಿದೆ. ವರ್ತಮಾನದಲ್ಲಿ ಜೀವಿಸುತ್ತಿರುವ ನಮಗೆಲ್ಲರಿಗೂ ನಾವು ದಾಖಲಿಸುತ್ತಿರುವ ಇತಿಹಾಸದ ಕುರಿತಾಗಿ, ಇಂದಿನ ಮಾಧ್ಯಮದ ಹೊಸ ಸಾಧ್ಯತೆಗಳನ್ನು ಕುರಿತಾದ ಜಾಗೃತಿ ಅಗತ್ಯವಾಗಿದೆ. ಈ ಜಾಗೃತಿ ಮಾಧ್ಯಮಗಳ ಬಳಕೆಯನ್ನು ನಾವು ಮಾಡುವಾಗ ನಮಗೆ ಒಂದು ಹೊಸ ಜವಾಬ್ದಾರಿಯನ್ನು ಕೊಡಲಿ ಎಂದು ಆಶಿಸುತ್ತೇನೆ.

Share This