ಕತ್ತಲ ಆಳದಿಂದ ಒಂದು ಮೂಗು ಮಾತ್ರ ಬೆಳಕಿಗೆ ಬರುತ್ತದೆ. ಗಾಳಿಯನ್ನು ಆಘ್ರಾಣಿಸುತ್ತದೆ. ಪರದೆಯಲ್ಲಿ ಕಾಣಿಸುತ್ತಿರುವ ಆ ಮೂಗಿಗೆ ಬೇಟೆ ನಾಯಿಯ ಚಾಕಚಕ್ಯತೆ ಇರುವುದು ಸ್ಪಷ್ಟ. ಅದರಲ್ಲಿ ಅದೇನೋ ತಂತ್ರಗಾರಿಕೆ, ನಯಗಾರಿಕೆಯೂ ಕಾಣುತ್ತಿದೆ. ಆ ಮೂಗಿನ ಮಾಲಿಕ ಬೆದರಿದ ಮೊಲದಂತೆ ಸಣ್ಣ-ಚುರುಕಾದ ಉಸಿರೆಳೆದು ಗಾಳಿಯಲ್ಲಿನ ವಾಸನೆಗಳನ್ನು ಪರೀಕ್ಷಿಸುತ್ತಾನೆ. ಮತ್ತೆ ಮುಖವಿಡೀ ಬೆಳಕಿನೆದುರು ಬರುತ್ತದೆ. ಇಡುವ ಹೆಜ್ಜೆಯ ಪರೀಕ್ಷಿಸಿ ನಡೆವ ಹುಲಿಯಂತೆ. ಇಲ್ಲಿಂದ ಆರಂಭವಾಗುತ್ತದೆ ಒಂದು ವಿಚಿತ್ರ ಸಿನೆಮಾ.

ಪರ್ಫ್ಯೂಮ್ ಎನ್ನುವ ಚಿತ್ರವನ್ನು ನೋಡಿದೆ ಇತ್ತೀಚೆಗೆ. ಮೇಲಿನದು ಆ ಚಿತ್ರ ಆರಂಭವಾಗುವ ರೀತಿ. ಮೂಗೆಂಬ ಇಂದ್ರಿಯ ಮಾತ್ರ ಅತಿ ತೀವ್ರವಾಗಿ ವಿಕಸಿತವಾಗಿರುವ (ಗಾತ್ರದಲ್ಲಲ್ಲ ಸಾಮರ್ಥ್ಯದಲ್ಲಿ) ಮನುಷ್ಯನೊಬ್ಬನ ಕಥೆ ಇದು. ಜಗತ್ತಿನಲ್ಲಿ ಪ್ರತಿಯೊಂದು ವಸ್ತುವಿಗೂ ಅದರದೇ ಆದ ಒಂದು ಪರಿಮಳ ಇರುತ್ತದೆ. ಇದರ ಸರಿಯಾದ ಅರಿವಿನಿಂದ ಸಣ್ಣ ಸಣ್ಣ ವ್ಯತ್ಯಾಸಗಳನ್ನೂ ಬೇರ್ಪಡಿಸಿ ತಿಳಿದುಕೊಳ್ಳಬಹುದು ಎಂಬ ಜ್ಞಾನ ಒಬ್ಬನಿಗೆ ಬಂದರೆ ಏನಾಗಬಹುದು ಎಂಬ ಸಾಧ್ಯತೆಗಳನ್ನು ಈ ಚಿತ್ರದ ನಿರ್ದೇಶಕ ಟಾಮ್ ಟೈಕ್ವೆರ್ ತೋರಿಸುತ್ತಾ ಹೋಗುತ್ತಾನೆ. ಜಾನ್ ಬ್ಯಾಪ್ಟಿಸ್ ಎನ್ನುವಾತನೇ ಹೀಗೆ ವಾಸನೆಯನ್ನು ಹಿಡಿದು ಹೊರಡುವ ವ್ಯಕ್ತಿ. ಈತನ ಹುಟ್ಟಿನ ಅಸಜತೆಗಳಿಂದಾಗಿ ಅವನಲ್ಲಿ ಈ ವೈಚಿತ್ರ್ಯ ಉಂಟಾಗಿರುತ್ತದೆ. ತನ್ನ ಶಕ್ತಿಯ ಅರಿವಿಲ್ಲದೆ ಆತ ಇದು ಎಲ್ಲರಿಗೂ ಸಹಜ ಎನ್ನುವಂತೆ ಬದುಕುತ್ತಿರುತ್ತಾನೆ. ಆಗೀಗ ಹೊಸ ವಾಸನೆಯೊಂದರ ಜಾಡುಹಿಡಿದು ಹೊರಟು ದಾರಿಕಳೆದುಕೊಳ್ಳುವುದು ಅವನಿಗೆ ಸಹಜವಾಗಿರುತ್ತದೆ. ಹೀಗೆ ಸಮಯ ಸಾಗಿರಲು ಒಂದು ದಿನ ಆತನಿಗೆ ಅಪೂರ್ವ ಸುಂದರಿಯೊಬ್ಬಾಕೆ ಎದುರಾಗುತ್ತಾಳೆ. ಅಂದು ಆತ ಅಪೂರ್ವ ಸೌಂದರ್ಯದ ಹುಡುಗಿಯೊಂದಿಗೆ ಅಪೂರ್ವ ಸುವಾಸನೆಯೊಂದೂ ಇರುವುದನ್ನು ಅರಿಯುತ್ತಾನೆ. ಆತ ಆ ಸುಂದರಿಯ ವಾಸನೆಯಿಂದ ದೂರವಿರಲಾರದೆ ಅದನ್ನು ತನ್ನೊಳಗೆ ಬಚ್ಚಿಡಲು ಪ್ರಯತ್ನಿಸುತ್ತಾನೆ. ಈ ಪ್ರಯತ್ನದಲ್ಲಿ ಆಕೆ ಪ್ರಾಣ ಕಳೆದುಕೊಳ್ಳುತ್ತಾಳೆ. ವಾಸನೆಯನ್ನು ಸಂಗ್ರಹಿಸಿಡುವ ಆತುರದಲ್ಲಿ ತಾನು ಮಾಡಿದ ಕೃತ್ಯದ ಅರಿವೂ ಜಾನ್ ಬ್ಯಾಪ್ಟಿಸ್‍ಗೆ ಇರುವುದಿಲ್ಲ! ಇಲ್ಲಿಂದ ಆರಂಭವಾಗುತ್ತದೆ ಆತನ ವಾಸನೆಯನ್ನು ಸಂಗ್ರಹಿಸಿಡುವ ಪ್ರಯತ್ನ.

ಈ ಪ್ರಯತ್ನ ಆತನನ್ನು ಪ್ಯಾರಿಸ್‍ಗೆ ನಂತರ ಅಲ್ಲಿಂದ ಗ್ರೀಸ್‍ಗೆ ಕರೆದೊಯ್ಯುತ್ತದೆ. ಹೋದಲ್ಲೆಲ್ಲಾ ತನ್ನ ಹುಚ್ಚು ಪ್ರಯೋಗಗಳಿಂದ ಜನರ ಪ್ರಾಣ ಹಾನಿ ಮಾಡುತ್ತಾ ಹೋಗುತ್ತಾನೆ. ಈ ಪ್ರಕ್ರಿಯೆಯನ್ನು ನಿರ್ದೇಶಕ ಚಾಕಚಕ್ಯತೆಯಿಂದ ತೋರಿಸುತ್ತಾ ಸಾಗುತ್ತಾನೆ. ಮನುಷ್ಯರ ವಾಸನೆಯನ್ನು ಸಂಗ್ರಹಿಸಿಡುವಲ್ಲಿ, ಅದನ್ನು ಮರು ಸೃಷ್ಟಿ ಮಾಡುವಲ್ಲಿ ಆತ ಸಫಲನಾಗುತ್ತಾನೆಯೇ ಇಲ್ಲವೇ… ಮತ್ತೇನಾಗುತ್ತದೆ? ಇತ್ಯಾದಿಗಳನ್ನು ನೀವೇ ಸ್ವತಃ ಪರದೆಯ ಮೇಲೆ ನೋಡಿ ಆನಂದಿಸಬೇಕು.

ಸಿನೆಮಾ ಮಂದಿರಗಳಲ್ಲಿ ವಾಸನೆಯನ್ನು ವೀಕ್ಷಕರಿಗೆ ಉಣಬಡಿಸುವ ಪ್ರಯತ್ನಗಳು ಈ ಕೆಲವು ವರುಷಗಳಿಂದ ಆಗುತ್ತಿರುವುದು ನಿಮಗೆ ಗೊತ್ತೇ ಇರಬಹುದು. ಇದೇ ಸಂದರ್ಭದಲ್ಲಿ ನಾನು ನೋಡಿದ ಈ ಚಿತ್ರ (೨೦೦೭ರಲ್ಲಿ ಬಿಡುಗಡೆಯಾದದ್ದು) ವಾಸನೆಗಳ ಹೊಸ ಪ್ರಪಂಚಕ್ಕೆ, ಹೊಸ ಸಾಧ್ಯತೆಗಳಿಗೆ ಬಾಗಿಲು ತೆರೆದಂತಾಗಿದೆ ನನ್ನ ಮಟ್ಟಿಗೆ. ಚಿತ್ರದುದ್ದಕ್ಕೂ ಬೆತ್ತಲೆಯ ಪ್ರದರ್ಶನ, ಕ್ರೌರ್ಯ ಎದುರಾಗುತ್ತಾ ಸಾಗುತ್ತದೆ. ಆದರೆ ಎಲ್ಲೂ ಅದು ಸಭ್ಯತೆಯನ್ನು ಮೀರಿದಂತೆನಿಸದೆ, ವಾಸನೆಯ ಬೆನ್ನತ್ತಿ ಸಾಗುತ್ತಿರುವ ಓರ್ವನ ಮನಸ್ಸಿನ ಪರಿಚಯವನ್ನು ಕೊಡುತ್ತಾ ಸಾಗುತ್ತದೆ. ನಿಜಕಥೆಗಳನ್ನು ನಂಬಲಾಗದಂತೆ ಚಿತ್ರೀಕರಿಸುವ ನಮ್ಮ ಚಿತ್ರೋದ್ಯಮಕ್ಕೆ, ನಿಜಕ್ಕೆ ದೂರವಾಗಿರುವ ಕಥೆಯನ್ನು ನಂಬುವಂತೆ ಹೇಳಿರುವ ಈ ಚಿತ್ರದಿಂದ ಸಾಕಷ್ಟು ಕಲಿಯಲಿಕ್ಕಿದೆ ಎಂದು ನನಗೆ ಚಿತ್ರ ನೋಡಿ ಎದ್ದಾಗ ಅನಿಸುತ್ತಿತ್ತು. ಅವಕಾಶ ಸಿಕ್ಕಾಗ ನೀವು ಅವಶ್ಯ ನೋಡಿ… Perfume: The Story of a Murderer

Share This