ಪೂನಾದ ಚಿತ್ರಶಾಲೆಯಲ್ಲಿ ನಾನು ಕಲಿಯುತ್ತಿರುವಾಗ ಕೊನೆಯ ವರ್ಷದಲ್ಲಿ ಸುಮಾರು ಒಂದೂವರೆ ತಿಂಗಳ ಕಾಲದಷ್ಟು ಒಬ್ಬ ಹಿರಿಯ ಚಿತ್ರ ನಿರ್ದೇಶನ ಸಹವಾಸದ ಅವಕಾಶ ನಿರ್ದೇಶನ ವಿದ್ಯಾರ್ಥಿಗಳಿಗೆ ಇತ್ತು. ಇದರ ಪ್ರಕಾರ ನಮ್ಮ ಪಾಲಿಗೆ ಸಿಕ್ಕಿದ್ದು, ೧೯೪೪ನೇ ಕ್ರಿಸ್ ಮಸ್ ದಿನದಂದು ಹುಟ್ಟಿದ ಸಿನೆಮಾ ಸಂತ ಮಣಿ ಕೌಲರದ್ದು. ಇವರೊಡನೆ ಕಳೆದ ಆ ಒಂದೂವರೆ ತಿಂಗಳ ಕಾಲ ಸಿನೆಮಾದ ಕುರಿತಾಗಿ ನನಗೆ ಕೊಟ್ಟ ಹೊಳಹುಗಳು ನನ್ನೊಳಗಿನ ಚಿತ್ರ ನಿರ್ದೇಶಕನಿಗೆ ದಾರಿ ತೋರಿಸಿತ್ತು. ಕೆಲವು ದಿನಗಳ ಹಿಂದೆ ಜುಲೈ ಆರನೇ ತಾರೀಕಿನಂದು ಬೆಳಗ್ಗೆ ಹೈದರಾಬಾದಿನಲ್ಲಿ ನನ್ನ ಚಿತ್ರ ಶಿಕಾರಿಯ ವರ್ಣಸಂಸ್ಕರಣೆ ಮಾಡುತ್ತಾ ಕುಳಿತಿದ್ದಾಗ ಈ ಮಹಾ ಗುರು ಅಸ್ತಂಗತವಾದ ಸುದ್ದಿ ಬಂದಪ್ಪಳಿಸಿತು. ಮನಸ್ಸು ಭಾರವಾಯಿತು. ಭಾರತೀಯ ಚಲನ ಚಿತ್ರ ಇತಿಹಾಸದ ಒಂದು ಅಧ್ಬುತ ಅಧ್ಯಾಯ ಅಲ್ಲಿಗೆ ಮುಗಿದಂತಾಗಿತ್ತು.
ಮೊದಲಬಾರಿಗೆ ಅವರನ್ನು ನಮ್ಮ ತರಗತಿಯಲ್ಲಿ ಕಂಡಾಗ ಅವರಿಗೆ ಸುಮಾತು ಅರುವತ್ತ ಎರಡು ವರ್ಷವಾಗಿರಬೇಕು. ಸದಾ ಹಸನ್ಮುಖಿ, ಪ್ರಕಾಂಡ ಪಂಡಿತ. ಅವರ ಪಾಂಡಿತ್ಯ ಕೇವಲ ಚಲನ ಚಿತ್ರಕ್ಕೆ ಸೀಮಿತವಾಗಿರಲಿಲ್ಲ. ಅವರ ಓದಿನ ಹರಿವು, ಸಾಹಿತ್ಯ, ಸಂಗೀತ, ಚಿತ್ರಕಲೆ, ಅಧ್ಯಾತ್ಮ ಹೀಗೆ ಜ್ಞಾನಸೀಮೆಯ ಉದ್ದಗಲಕ್ಕೂ ಹರಿದಿತ್ತು. ಉಸ್ತಾದ್ ಜಿಯಾ ಮಯುದ್ದೀನ್ ಡಾಗರ್ ಗುರುಗಳಿಂದ ಸಂಗೀತವನ್ನು ಅಭ್ಯಾಸ ಮಾಡಿದ್ದ ಇವರು ಸಂಗೀತ ಹಾಗೂ ಚಲನ ಚಿತ್ರದ ನಡುವಿನ ಅಧ್ಬುತ ಸಂಬಂಧದ ಕುರಿತಾಗಿ ಬಹಳ ಚಿಂತನೆ ನಡೆಸಿದ್ದರು. ಪೂನೆಯ ಚಲನಚಿತ್ರ ಶಾಲೆಯಲ್ಲಿ ಚಲನಚಿತ್ರವನ್ನೂ ಅಭ್ಯಾಸ ಮಾಡಿದ್ದ ಇವರು ಸಂಗೀತ ಹಾಗೂ ಚಲನಚಿತ್ರ ಈ ಎರಡೂ ಮಾಧ್ಯಮದಲ್ಲಿ ಸಾಕಷ್ಟು ಪರಿಶ್ರಮವನ್ನು ಹೊಂದಿದ್ದವರಾಗಿದ್ದರು.
ಮಣಿ ಕೌಲ್ ಉಸ್ಕಿ ರೋಟಿ ಚಿತ್ರವನ್ನು ನಿರ್ದೇಶಿಸಿದಾಗ ಅದು ಭಾರತೀಯ ಚಲನ ಚಿತ್ರ ವಲಯದಲ್ಲಿ ಭಾರೀ ಚರ್ಚೆಗೆ ಒಳಗಾಯಿತು. ಆಗ ಆ ಚಿತ್ರವನ್ನು ನೋಡುವ ಬಯಕೆ ಭಾರತೀಯ ಚಿತ್ರರಂಗದ ಪಿತಾಮಹರಲ್ಲಿ ಒಬ್ಬರಾದ ಸತ್ಯಜಿತ್ ರೇಯವರಿಗಾಯಿತಂತೆ. ಮುಂಬೈನಲ್ಲಿ ಅವರಿಗಾಗಿ ವಿಶೇಷ ಪ್ರದರ್ಶನದ ಏರ್ಪಾಡಾಯಿತು. ಅಂದು ಸಂಜೆ ಭಾರೀ ಮಳೆ. ಮಣಿ ಕೌಲ್ ಇನ್ನೂ ಇಪ್ಪತ್ತರ ಹುಡುಗ, ಕೈಯಲ್ಲಿ ಕಾಸಿಲ್ಲದ ಸಮಯ. ಮಳೆಯಲ್ಲಿ ಸಿಲುಕಿ ಸಮಯಕ್ಕೆ ಸರಿಯಾಗಿ ಚಿತ್ರ ಮಂದಿರ ತಲುಪಲಿಲ್ಲ. ಸರಿ, ಹುಡುಗ ಬರುತ್ತಾನೆ ಬಿಡಿ ಚಿತ್ರ ಆರಂಭಿಸಿ ಎಂದರು ಸತ್ಯಜಿತ್ ರೇ. ಚಿತ್ರ ಪ್ರದರ್ಶನ ಮುಗಿಯುವ ವೇಳೆಗೆ ಮಣಿ ಕೌಲ್ ಬಂದು ತಲುಪಿದ್ದರು. ಚಿತ್ರಮಂದಿರದಲ್ಲಿ ಚಿತ್ರ ಮುಗಿದು ಬೆಳಕು ಹರಿಯಲು, ಮಣಿ ಕೌಲ್ ತೆಪ್ಪಗೆ ಸತ್ಯಜಿತ್ ರೇಯವರ ಎದುರಿಗೆ ಬಂದು ನಿಂತರು. ಅವರು ಮೇಲಿನಿಂದ ಕೆಳಗೊಮ್ಮೆ ನೋಡಿ, ನೀನು ನಿನ್ನ ಪ್ರಾಯಕ್ಕೆ ತಕ್ಕಂತೆ ಚಿತ್ರ ನಿರ್ಮಿಸುವುದು ಯಾವಾಗ? ಇದು ನಿನ್ನ ಪ್ರಾಯಕ್ಕೆ ತೀರಾ ಮೇಲಿನ ಕೃತಿ. ಶಭಾಷ್ ಎಂದರಂತೆ ಸತ್ಯಜಿತ್ ರೇ! ಅಂಥಾ ಮೇಧಾವಿ ನಮ್ಮ ಗುರು ಮಣಿ ಕೌಲ್. ಆದರೆ ಸ್ವತಃ ಮಣಿ ಕೌಲ್ ತೀರಾ ಪ್ರಭಾವಿತರಾಗಿದ್ದದ್ದು ಹೃತ್ವಿಕ್ ಘಟಕ್ ಎಂಬ ಇನ್ನೊಬ್ಬ ಮೇಧಾವಿ ಭಾರತೀಯ ಚಿತ್ರ ನಿರ್ದೇಶಕರಿಂದ. ಅವರು ಆ ಕಾಲದಲ್ಲಿ ಪೂನಾದಲ್ಲಿ ಕಲಿಸುತ್ತಿದ್ದರು.
ಮಣಿ ಕೌಲರ ಉಸ್ಕಿ ರೋಟಿ ಚಿತ್ರ ಖ್ಯಾತಿಯನ್ನು ಪಡೆಯುತ್ತಿರುವಾಗ ಒಂದು ಪಾರ್ಟಿಯಲ್ಲಿ ಸಿಕ್ಕಿದ ಖ್ಯಾತ ತಾರೆಯೊಬ್ಬರು, ಮಣಿ ಅವನ ರೊಟ್ಟಿ ಇವನ ರೊಟ್ಟಿ ಅಂತ ಯಾಕೆ ಚಿತ್ರ ಮಾಡುತ್ತೀಯಾ? ನನ್ನೊಂದಿಗೆ ಸೇರು. ಇಬ್ಬರೂ ಸೇರಿ ನಮ್ಮ ಪರೋಟ ಅಂತ ಸಿನೆಮಾ ಮಾಡೋಣ ಎಂದು ತಮಾಷೆ ಮಾಡಿದ್ದರು. ಇಂಥದ್ದೇ ಒಂದು ಚಿತ್ರ ಸಂತೋಷ ಕೂಟದಲ್ಲಿ ಮಣಿ ಕೌಲರಿಗೆ ದೇವ್ ಆನಂದ್ ಸಿಕ್ಕಿದರಂತೆ ಮಣಿ ಕೌಲ್ ಸಣ್ಣವರಿದ್ದಾಗ ದೇವಾನಂದರ ಭಕ್ತರಾಗಿದ್ದರು. ಮಣಿ ಕೌಲ್ ಸಂತೋಷದಿಂದ ದೇವ್ ಆನಂದರಿಗೆ ಹೇಳಿದರಂತೆ, “ಸರ್… ನಾನು ಸಣ್ಣವನಿದ್ದಾಗ ನಿಮ್ಮ ಭಾರೀ ದೊಡ್ಡ ಅಭಿಮಾನಿಯಾಗಿದ್ದೆ” ದೇವಾನಂದ್ ನಸುನಕ್ಕು. “ಈಗ ಭಾರೀ ಇಂಟಲೆಕ್ಚ್ಯುಲ್ ಆಗಿದ್ದೀಯೇನೋ?” ಎಂದು ಅಲ್ಲಿಂದ ಹೊರಟು ಹೋದರಂತೆ!
ಮಣಿ ಕೌಲ್ ತನ್ನ ಬಾಲ್ಯದ ಕುರಿತಾಗಿ ಎಲ್ಲೋ ಒಂದು ಸ್ವಾರಸ್ಯಕರ ಘಟನೆ ಹೇಳುತ್ತಾರೆ. ಅವರಿಗೆ ಎಲ್ಲವೂ ಮಸುಕು ಮಸುಕಾಗಿ ಕಾಣಿಸುತ್ತಿತ್ತಂತೆ. ಸಿನೆಮಾ ನೋಡಲು ಹೋದಾಗಲೂ ಎಲ್ಲವೂ ಮಯ-ಮಯ. ತನಗೆ ಕಣ್ಣು ಸರಿಯಿಲ್ಲ ಎಂಬ ವಿಷಯ ಅವರಿಗೆ ಅರಿವೇ ಇರಲಿಲ್ಲವಂತೆ ಏಕೆಂದರೆ, ಸಿನೆಮಾ ಮಾತ್ರ ಏನು ಅವರು ಇಡೀ ಜೀವನವನ್ನೇ ಮಯ-ಮಯವಾಗಿ ನೋಡುತ್ತಿದ್ದರು! ಅದೊಂದು ದಿನ ಮಗನ ವಿಚಿತ್ರವರ್ತನೆಯಿಂದ ಅಚ್ಚರಿಗೊಂಡ ಅವರ ಅಪ್ಪ ತನ್ನ ಕನ್ನಡಕವನ್ನು ಇವರಿಗೆ ತೊಡಿಸಿದರಂತೆ. ಮಣಿ ಕೌಲರಿಗೆ ಅಚ್ಚರಿಯೋ ಅಚ್ಚರಿ. ಅವರು ಮರ-ಗಿಡ-ಕಲ್ಲು ಎಲ್ಲವನ್ನೂ ಸ್ಪಷ್ಟವಾಗಿ ಕಾಣಲಾರಂಭಿಸಿದ್ದರು! ಅವರು ಆಮೇಲೆ ನೋಡಿದ ಚಿತ್ರ ಹೆಲೆನ್ ಆಫ್ ಟ್ರಾಯ್. “ಆಮೇಲೆ ನಾನು ನನ್ನ ಜೀವನದಲ್ಲಿ ಸಿನೆಮಾ ಬಿಟ್ಟು ಬೇರೇನೂ ಯೋಚಿಸಲಿಕ್ಕೇ ಆಗಿಲ್ಲ!” ಎನ್ನುತ್ತಾರೆ ಮಣಿ ಕೌಲ್.
ಮಣಿ ಕೌಲ್ ಹೇಳುವಂತೆ ಅವರಿಗೆ ಚಲನ ಚಿತ್ರಗಳ ಕುರಿತಾಗಿ ಕಣ್ತೆರೆಸಿದ ಗುರು ರಾಬರ್ಟ್ ಬ್ರೆಸೊ. ಅವರ ಪಿಕ್ ಪಾಕೆಟ್ ಎಂಬ ಚಿತ್ರವನ್ನು ನೋಡಿ ಚಲನ ಚಿತ್ರದ ನಿಜಾರ್ಥವನ್ನು ಕಂಡುಕೊಂಡೆ. ಚಲನ ಚಿತ್ರ ಎನ್ನುವುದು ಪೂರ್ವನಿರ್ಧಾರಿತವಲ್ಲದ ಅಚಾತುರ್ಯಗಳ ಸಮ್ಮಿಲನ ಎನ್ನುವುದು ಅವರ ನಂಬಿಕೆಯಾಗಿತ್ತು. ಹೀಗಾಗಿ ಚಲನಚಿತ್ರದಲ್ಲಿ ಸಮಯದ ಪರಿಮಾಣದ ಕುರಿತು ಅವರು ಬಹಳ ಚಿಂತನೆಯನ್ನು ನಡೆಸಿದ್ದರು. ಅವರ ಮೊದಲ ಚಿತ್ರ ಉಸ್ಕಿ ರೋಟಿ ಈ ಸಮಯದ ಕುರಿತಾಗಿ ಒಂದು ಅಧ್ಬುತವಾದ ಪ್ರಯೋಗವಾಗಿದೆ. ಈ ಚಿತ್ರದ ಕುರಿತಾಗಿ ಅವರೇ ಹೇಳುತ್ತಿದ್ದ ಒಂದು ಹಾಸ್ಯ ಹೀಗಿದೆ. ಅವರ ಗೆಳೆಯರ ಮನೆಗೆ ಒಮ್ಮೆ ಹೋಗಿದ್ದಾಗ ಅವರ ಗೆಳೆಯ ತನ್ನ ಪತ್ನಿಗೆ ಹೇಳಿದರಂತೆ, “ಮಣಿಯ ಮುಂದಿನ ಚಿತ್ರ ಬಸ್ ನಿಲ್ದಾಣದಲ್ಲಿ ಕಾಯುತ್ತಿರುವ ಒಬ್ಬ ವ್ಯಕ್ತಿಯ ಕುರಿತಾಗಿದೆ” ಅವನ ಪತ್ನಿ, “ಹೇ… ನನಗೆ ಮುಂದೇನೂ ಹೇಳಬೇಡ. ಕಥೆಯ ಸ್ವಾರಸ್ಯ ಇರಲಿ. ನಾನು ಚಿತ್ರ ನೋಡಬೇಕು” ಎಂದಳಂತೆ. ಮಣಿ ಕೌಲ್ ನಗುತ್ತಾ, ಚಿತ್ರದ ಕಥೆ ಅಷ್ಟೇ. ಚಿತ್ರದಲ್ಲಿ ಇನ್ನೇನೂ ಇಲ್ಲ ಎಂದರಂತೆ! ಹೌದು. ಉಸ್ಕಿ ರೋಟಿ ಚಿತ್ರ ಕಾಯುವಿಕೆಯ ಪ್ರಕ್ರಿಯೆಯ ಸುತ್ತ ನಡೆಯುತ್ತದೆ. ಇಲ್ಲಿ ಸಮಯದ ಸಾಪೇಕ್ಷತೆಯ ಕುರಿತು ಪ್ರಯೋಗವನ್ನು ಅವರು ನಡೆಸುತ್ತಾರೆ. ಇನ್ನು ಇದೇ ಚಿತ್ರಕ್ಕೆ ಧ್ವನಿ ಜೋಡಣೆಯಲ್ಲೂ ಅವರು ನಡೆಸಿರುವ ಪ್ರಯೋಗ ಅಚ್ಚರಿ ತರಿಸುವಂಥಾದ್ದು. ರೆಕಾರ್ಡಿಂಗ್ ಸ್ಟೂಡಿಯೋದಲ್ಲಿ ಮೈಕನ್ನು ಒಂದು ಸ್ಥಳದಲ್ಲಿಟ್ಟು ಪಾತ್ರಗಳು ಪರದೆಯಲ್ಲಿ ಕಾಣುವಷ್ಟು ದೂರದಲ್ಲಿ ನಿಂತು ಧ್ವನಿಕೊಡುವಂತೆ ಮಾಡಿದ್ದರಂತೆ ಮಣಿ ಕೌಲ್.
ನಮ್ಮ ತರಗತಿಯಲ್ಲಿ ನಾವೆಲ್ಲರೂ ಸೇರಿ ಅನುಭವಿ ನಿರ್ದೇಶನ ಮಾರ್ಗದರ್ಶನದಲ್ಲಿ ಒಂದು ಕಿರುಚಿತ್ರವನ್ನು ಮಾಡುವುದೆಂದು ನಿರ್ಧಾರವಾಗಿತ್ತು. ಆದರೆ ಮಣಿ ಕೌಲ್ ಬಂದವರು, ಆ ಕ್ರಮ ಬೇಡ ಎಂದರು. ಅದಕ್ಕೆ ಕಾರಣ ನೀಡುತ್ತಾ ಅವರು ತಮ್ಮ ಸಂಗೀತ ಗುರುಗಳ ಉದಾಹರಣೆಯನ್ನು ನೀಡಿದರು. ಸಂಗೀತವನ್ನು ಕಲಿಸುವಾಗ ಅವರ ಗುರುಗಳು ಎಂದೂ ಹಾಡಿ ತೋರಿಸುತ್ತಿರಲಿಲ್ಲವಂತೆ. ಇತರರಂತೆ ನೀವ್ಯಾಕೆ ಹಾಡಿ ತೋರಿಸಬಾರದು ನನಗೆ ಎಂದು ಮಣಿ ಕೌಲ್ ಕೇಳಿದಾಗ, ನಾನು ಹಾಡಿ ಕಲಿಸಿದರೆ ನೀನು ನನ್ನಂತೆ ಹಾಡುವುದನ್ನು ಕಲಿಯುತ್ತೀಯಾ, ನೀನು ನಿನ್ನಂತೆ ಹಾಡುವುದನ್ನು ಕಲಿಯಬೇಕು ಎಂದು ಗುರುಗಳು ಹೇಳಿದರಂತೆ. ಮಣಿ ಕೌಲ್ ಹೀಗೆ ಸದಾ ನಮ್ಮಂಥಾ ಹುಡುಗರನ್ನು ಬೆಳೆಸಿದ್ದು. ಅವರು ಎಂದೂ ತಮ್ಮ ಚಿತ್ರ ವಿಧಾನವನ್ನು ನಮ್ಮ ಮೇಲೆ ಹೇರಲಿಲ್ಲ. ನಮ್ಮೊಳಗಿನ ಪ್ರಕಾರಗಳನ್ನು ಗುರುತಿಸಿ ಅದನ್ನು ಬೆಳೆಸಿಕೊಂಡು ಅದು ಒಂದು ಬುದ್ಧಿಪೂರ್ವಕ ಪ್ರಯೋಗವಾಗುವಲ್ಲಿ ನಮಗೆ ಸಹಾಯ ಮಾಡುತ್ತಿದ್ದರು. ಹೀಗಾಗಿ ನಮ್ಮ ತರಗತಿಯಲ್ಲಿ ಅವರು ಪ್ರತಿಯೊಬ್ಬನ ಕೆಲಸವನ್ನೂ ಸೂಕ್ಷ್ಮವಾಗಿ ಗುರುತಿಸಿ ಅದರಲ್ಲಿನ ಗುಣಗಳನ್ನಷ್ಟೇ ಎತ್ತಿ ಅವುಗಳನ್ನು ಅಭಿವೃದ್ಧಿಪಡಿಸುವೆಡೆಗೆ ನಮಗೆ ಸಲಹೆಗಳನ್ನು ನೀಡುತ್ತಾ ಒಟ್ಟು ಚಲನಚಿತ್ರ ನಿರ್ಮಾಣದ ಕುರಿತಾಗಿ ನಮಗೆ ಬೋಧನೆಯನ್ನು ಮಾಡಿದರು.
ಮಣಿ ಕೌಲ್ ಅವರ ಬೋಧನಾಕ್ರಮದಲ್ಲಿ ತರಗತಿಯೊಳಗೆ ಎಷ್ಟು ಸಮಯ ಕಳೆಯುತ್ತಿದ್ದೆವೋ ಅದಕ್ಕಿಂತ ಹೆಚ್ಚು ತರಗತಿಯ ಹೊರಗೆ ಇತರ ಕೆಲಸಗಳನ್ನು ಮಾಡುತ್ತಾ ಕಲಿಯುವುದು ಮುಖ್ಯವಾಗಿರುತ್ತಿತ್ತು. ಒಂದು ದಿನ ನಮ್ಮನ್ನೆಲ್ಲರನ್ನೂ ತಮ್ಮ ಮನೆಗೆ ಕರೆದರು. ಇಂದು ನಾನು ಅಡಿಗೆ ಮಾಡುತ್ತೇನೆ. ನೀವು ತಿನ್ನ ಬನ್ನಿ ಎಂದರು. ಸರಿ ಗುರುಗಳ ಕೈರುಚಿ ನೋಡಲು ನಾವು ಒಂಭತ್ತು ಮಂದಿ ಹೋದೆವು. ಅಧ್ಬುತವಾದ ಕಾಶ್ಮೀರೀ ಅಡಿಗೆಯನ್ನು ಮಾಡಿದ್ದರು ಅವರು. ಆದರೆ ಕಾಶ್ಮೀರೀ ಪಾಕದಲ್ಲಿ ಉಪ್ಪು, ಖಾರ ಕಡಿಮೆ. ಅವರು ಅಂದು ಅಡಿಗೆ ಮಾಡುತ್ತಾ, ಊಟ ಮಾಡುತ್ತಾ ಚಿತ್ರ ಪಾಠ ಮಾಡಿದರು. ಚಲನಚಿತ್ರ ನಿರ್ಮಾಣಕ್ಕೂ, ಅಡಿಗೆಗೂ ಇರುವ ಸಾಮ್ಯವನ್ನು ಅವರು ಸ್ವಾರಸ್ಯಕರವಾಗಿ ವಿವರಿಸಿದರು.
ಮಣಿ ಕೌಲ್ ತಮ್ಮ ವೃತ್ತಿರಂಗದಲ್ಲಿ, ಉಸ್ಕಿ ರೋಟಿ (೧೯೬೯), ಆಶಾಡ್ ಕ ಏಕ್ ದಿನ್ (೧೯೭೧), ದುವಿಧಾ (೧೯೭೩), ಘಾಸೀರಾಂ ಕೋತ್ವಾಲ್ (೧೯೭೯), ಸತ್ತೆ ಸೆ ಉಠಾ ಆದ್ಮೀ (೧೯೮೦), ಧ್ರುಪದ್ (೧೯೮೨), ಮಾಟಿ ಮಾನಸ್ (೧೯೮೪) ಸಿದ್ದೇಶ್ವರಿ (೧೯೮೯), ನಝರ್ (೧೯೮೯), ಈಡಿಯಟ್ (೧೯೯೨), ದ ಕ್ಲೌಡ್ ಡೋರ್ (೧೯೯೫), ನೌಕರ್ ಕಿ ಕಮೀಝ್ (೧೯೯೯) ಭೋಜ್ (೨೦೦೦) IK Ben Geen Ander (೨೦೦೫) ಹೀಗೆ ಅನೇಕ ಚಿತ್ರಗಳನ್ನು ನಿರ್ದೇಶಿಸಿದರು. ಎರಡು ಬಾರಿ ಭಾರತೀಯ ಚಲನಚಿತ್ರ ರಾಷ್ಟ್ರಪ್ರಶಸ್ತಿಯನ್ನೂ ಅವರು ಪಡೆದಿದ್ದರು ಹಾಗೂ ಕೆಲವು ಫಿಲಂ ಫೇರ್ ಪ್ರಶಸ್ತಿಯನ್ನೂ ಪಡೆದಿದ್ದರು. ಹೆಚ್ಚಿನ ಚಿತ್ರಗಳು ಗುಣಾತ್ಮಕವಾಗಿ ಅಧ್ಬುತ ಪ್ರಯೋಗಗಳೇ ಆಗಿದ್ದರೂ ಅವುಗಳು ಆರ್ಥಿಕವಾಗಿ ಯಶಸ್ಸನ್ನು ಪಡೆಯಲಿಲ್ಲ. ಅದನ್ನೂ ಮಣಿ ಕೌಲ್ ಹಾಸ್ಯ ಮಾಡುತ್ತಿದ್ದರು. ಭಾರತೀಯ ಚಿತ್ರ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಫ್ಲಾಪ್ ಚಿತ್ರ ಕೊಟ್ಟರೂ ನಿರಂತರವಾಗಿ ಚಿತ್ರ ಮಾಡುತ್ತಿರುವ ಏಕೈಕ ನಿರ್ದೇಶಕ ನಾನಿರಬೇಕು. ನನ್ನ ಬಳಿ ಒಂದು ಗಂಟೆ ಮಾತಾಡಿದ ಯಾವುದೇ ನಿರ್ಮಾಪಕ ನನ್ನ ಪ್ರಯೋಗಕ್ಕೆ ತನ್ನ ಹಣವನ್ನು ಹಾಕಿ ನಷ್ಟ ಅನುಭವಿಸುತ್ತಿದ್ದ ಎಂದು ಮಣಿ ಕೌಲ್ ಸದಾ ತಮ್ಮನ್ನೇ ಹಾಸ್ಯಮಾಡಿಕೊಂಡು ನಗುತ್ತಿದ್ದರು.
ಮಣಿ ಕೌಲ್ ನಿರ್ದೇಶನದ ಈಡಿಯಟ್ಸ್ ಚಿತ್ರ ಇಂದು ಹಿಂದಿಯ ದೊಡ್ಡ ತಾರೆ ಶಾರುಖ್ ಖಾನರ ಮೊದಲ ಚಿತ್ರವಾಗಿತ್ತು. ಅವರು ಖ್ಯಾತಿಯ ಔನತ್ಯವನ್ನೇರುತ್ತಿದ್ದಾಗ ಮಣಿ ಕೌಲ್ ಆಮ್ಸ್ಟ್ರಡಾಮಿನಲ್ಲಿದ್ದರು. ಬಹಳ ವರ್ಷಗಳ ನಂತರ ಅವರು ಹಿಂದಿರುಗಿ ಬಂದಾಗ, ಶಾರುಖ್ ಹಿರಿಯ ತಾರೆಯಾಗಿದ್ದ. ಅರೆ! ನನ್ನ ಚಿತ್ರದ ಹುಡುಗ ಇಂದು ಎಷ್ಟು ದೊಡ್ಡವನಾಗಿದ್ದಾನೆ ಎಂದು ಮಣಿ ಕೌಲ್ ಅಚ್ಚರಿ ಪಟ್ಟಿದ್ದರು, ಸಂತೋಷ ಪಟ್ಟಿದ್ದರು. ಆದರೆ ಶಾರುಖ್ ಈ ಚಿತ್ರದ ಬಗ್ಗೆ ವಿಶೇಷವಾಗಿ ಮಾತನಾಡದೇ ಇರುವುದು ವಿಚಿತ್ರ ವಿಷಯ!
ಅವರೊಂದಿಗೆ ನಮ್ಮ ತರಗತಿಯು ಒಂದೂವರೆ ತಿಂಗಳ ಕಾಲ ಕಲಿಕೆ ನಡೆಸಿತು. ಅವರ ಸಹವಾಸದಿಂದ ನಮ್ಮ ಗುಂಪು ಬಹಳವಾಗಿ ಪ್ರಭಾವಿತವಾಗಿತ್ತು. ಅದಾದ ಮೇಲೆ ನಿರಂತರವಾಗಿ ಅವರ ಸಂಪರ್ಕದಲ್ಲಿದ್ದೆವು. ಕೆಲವು ಕಾಲದ ನಂತರ ನಮಗೆ ತಿಳಿದು ಬಂತು, ಅವರು ನಮ್ಮನ್ನು ಭೇಟಿ ಮಾಡುವಾಗಲೇ ಕ್ಯಾನ್ಸರಿನಿಂದ ನರಳುತ್ತಿದ್ದರು. ಆದರೂ ಅವರ ಮುಖದಲ್ಲಿ ಎಂದೂ ನೋವಿನ ಸೆಳೆಯನ್ನು ನಾವು ಕಂಡಿರಲಿಲ್ಲ. ಸದಾ ನಗುನಗುತ್ತಾ ಅವರು ಮುಂದಿನ ತಲೆಮಾರಿನ ಚಿತ್ರ ನಿರ್ದೇಶಕರನ್ನು ಬೆಳೆಸುವುದರಲ್ಲೇ ಮಗ್ನರಾಗಿದ್ದರು. ನಮ್ಮ ತರಗತಿಯ ನಂತರ ಸ್ವಲ್ಪ ಸಮಯದಲ್ಲಿ ದೆಹಲಿಯಲ್ಲಿ ಹೋಗಿ ನೆಲೆಸಿದರು. ನಮ್ಮ ಗುಂಪಿನಿಂದ ಕೆಲವರು ಸದಾ ಅವರ ಸೇವೆ ಮಾಡುತ್ತಾ, ನಿರಂತರ ಕಲಿಯುತ್ತಾ ಅವರೊಂದಿಗೆ ಸಮಯ ಕಳೆಯಲಾರಂಭಿಸಿದರು. ದೆಹಲಿಯ ಓಷಿಯಾನ್ಸ್ ಸಂಸ್ಥೆಯಲ್ಲಿ ಚಲನಚಿತ್ರ ವಿಭಾಗದಲ್ಲಿ ಅವರು ಕೆಲಸ ಮಾಡುತ್ತಿದ್ದರು. ಆಗೀಗ ಕಿರುಚಿತ್ರ ನಿರ್ಮಾಣ, ಯುವ ಚಿತ್ರ ನಿರ್ದೇಶಕರಿಗೆ ಮಾರ್ಗದರ್ಶನ ಮಾಡುತ್ತಾ ಮಣಿ ಕೌಲ್ ತಮ್ಮ ನೋವನ್ನು ಮರೆಯುತ್ತಿದ್ದರು. ಆದರೆ ಮಣಿ ಕೌಲ್ ಅವರಿಗೆ ಖಾಯಿಲೆ ತೀವ್ರವಾಗುತ್ತಾ ಹೋಯಿತು. ಮೊನ್ನೆ ಮಧ್ಯರಾತ್ರಿಯ ಸಮಯದಲ್ಲಿ ಕ್ಯಾನ್ಸರ್ ಅವರನ್ನು ಕರೆದೊಕೊಂಡು ಹೊರಟೇ ಹೋಯಿತು. ಸಮಯದ ಸಾಪೇಕ್ಷತೆಯ ಕುರಿತಾಗಿ ಸದಾ ಚಿಂತನೆ ನಡೆಸಿದ್ದ ಈ ಚಿತ್ರ ಬ್ರಹ್ಮನನ್ನು ಸಮಯವೇ ಸೋಲಿಸಿ ಕರೆದೊಯ್ದಿತ್ತು.
ಮಣಿ ಕೌಲ್ ತೀರಿಕೊಂಡದ್ದು ತುಂಬಲಾರದ ನಷ್ಟ ಎನ್ನಬಹುದು. ಆದರೆ ಅವರು ತಮ್ಮ ಜೀವನದುದ್ದಕ್ಕೂ, ತಮ್ಮ ಚಿಂತನೆಗಳಿಂದ ಎಬ್ಬಿಸಿದ ಮನಸುಗಳು, ತೆರೆಸಿದ ಕಣ್ಣುಗಳು ಹಾಗೂ ತಟ್ಟಿದ ಮನಸ್ಸುಗಳ ಮೂಲಕ ಇಂದಿಗೂ ಮುಂದೆಂದೆಂದಿಗೂ ಜೀವಿಸುತ್ತಾರೆ.
ಮಣಿ ಕೌಲರ ಕೆಲವು ನುಡಿ ಮುತ್ತುಗಳು.
- ಚಿತ್ರ ಹಾಗೂ ಧ್ವನಿಯ ಗುಣ (ಚಲನಚಿತ್ರ ಕ್ಷೇತ್ರದಲ್ಲಿ) ಅದು ಏನಾಗಿದೆ ಎನ್ನುವುದರ ಮೇಲಿಲ್ಲ. ಅದು ಏನಾಗದೇ ಇರುತ್ತದೆ ಎನ್ನುವುದರಲ್ಲಿದೆ.
- ಚಿತ್ರದಲ್ಲಿ ಅತ್ಯಂತ ಮುಖ್ಯವಾದ ಆದರೆ ಹುದಿಗಿರುವ ಭಾವವನ್ನು ಪ್ರೇಕ್ಷಕನು ಗ್ರಹಿಸಿದಾಗ ಅಥವಾ ಊಹಿಸಿದಾಗ ಚಿತ್ರವು ಮಾನವನ ಮನಸ್ಸು ಹಾಗೂ ಹೃದಯ ಎಷ್ಟು ಸಂಪಧ್ಬರಿತವಾಗಿದೆ ಎನ್ನುವುದನ್ನು ತೋರಿಸುತ್ತದೆಯೇ ಹೊರತು ಚಿತ್ರ ಮಾಧ್ಯಮದ ಕಲ್ಪನೆ ಹಾಗೂ ನಿರೂಪಣೆಯ ಶಕ್ತಿಯನ್ನಲ್ಲ.
- ಒಂದು ಚಲನಚಿತ್ರ ನಿರೂಪಣೆಯನ್ನು ರೂಪಿಸುವಾಗ, ಒಂದಷ್ಟು ದೃಶ್ಯಗಳನ್ನು ಯೋಚಿಸಬೇಕು. ಅವುಗಳು ಒಂದಷ್ಟು ಚಿತ್ರಿಕೆಗಳನ್ನೊಳಗೊಂಡಿರಬೇಕು. ಈ ಚಿತ್ರಿಕೆಗಳು ಸಮಷ್ಟಿಯಲ್ಲಿಟ್ಟಾಗ ಪರಸ್ಪರ ಸಂವಾದದಿಂದ ಒಂದು ಪ್ರಶ್ನೆಯನ್ನೆಬ್ಬಿಸಬೇಕು. ಕೇವಲ ದೃಶ್ಯದ ಕೊನೆಯಲ್ಲಿ ಪ್ರಶ್ನೆಯನ್ನೆಬ್ಬಿಸುವುದು ಗುರಿಯಾಗಬಾರದು. ಹೀಗೆ ಯೋಜಿಸಿದ ನಿರೂಪಣೆಯಲ್ಲಿ ನಿಜವಾದ ಅರ್ಥ ಅಥವಾ ಪ್ರಶ್ನೆ ತುಂಡು ಚಿತ್ರಿಕೆಗಳ ನಡುವೆಯೇ ಹೊಳಹುತ್ತದೆ. ಒಂದು ಚಿತ್ರಿಕೆ ಒಂದು ಪ್ರಶ್ನೆಯನ್ನು ಅಥವಾ ಒಂದು ಅರ್ಥವನ್ನು ತಿಳಿಸುವ ಪರಿಕರವಾಗಬಾರದು.
- ಚಿತ್ರಗಳು ಹಾಗೂ ಧ್ವನಿಯ ನಡುವಿನ ಸಂಬಂಧವೇ ಚಲನಚಿತ್ರದ ಕಥಾನಕವನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಅಗತ್ಯ ಚಿತ್ರ ಹಾಗೂ ಧ್ವನಿಗಳನ್ನು ಮಾತ್ರ ಚಿತ್ರದಲ್ಲಿ ಉಳಿಸಿಕೊಳ್ಳಬೇಕು. ಈ ಅಗತ್ಯ, ಅವುಗಳ ಪರಸ್ಪರ ಸಂಬಂಧದಿಂದ ನಿರ್ಧರಿತವಾಗುತ್ತದೆ.
- ಎಲ್ಲರ ಸಲಹೆಗಳನ್ನು ಕೇಳಿ. ಆದರೆ ನಿಮ್ಮ ಮನೋವೃತ್ತಿಯಂತೆ ನಡೆಯಿರಿ. ಪ್ರತಿಯೊಂದು ಚಲನಚಿತ್ರದ ಅಂತಿಮ ಸಾಫಲ್ಯವಿರುವುದು ಅದರ ನಿರ್ಮಾಣದ ಮೂಲಕ ನಿರ್ದೇಶಕ ತನ್ನನ್ನು ತಾನು ತನ್ನ ಕೃತಿಯಲ್ಲಿ ಕಂಡುಕೊಳ್ಳುವುದರಲ್ಲಿಯೇ ಹೊರತು, ಭಾವೂತ್ಕರ್ಷಕ ಅಥವಾ ಬೌದ್ಧಿಕ ಕಸರತ್ತಿನ ಉತ್ತುಂಗದಲ್ಲಿ ಅಲ್ಲ.