ಜಯ ಅಥವಾ ಜಯಕ್ಕ ನನ್ನ ಚಿಕ್ಕಜ್ಜನ ಮಗಳು. ಅಂದರೆ ನಿಜಾರ್ಥದಲ್ಲಿ ನನಗೆ ಇವಳು ಅತ್ತೆ ಆದರೆ ಬಳಕೆಯಿಂದ ಅಕ್ಕ ಇವಳು. ಸಂಗೀತದಲ್ಲಿ ಅಪಾರ ಆಸಕ್ತಿ ಇರುವ ಈಕೆ ಸಂಗೀತವನ್ನು ಶಾಸ್ತ್ರೀಯವಾಗಿ ಕಲಿತವಳೂ ಹೌದು. ಅವಳ ಗಂಡ, ಜ್ಞಾನಶೇಖರ್ ಬಾಶ್ ಕಂಪನಿಯಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ಅವರು ತಮ್ಮ ಕೆಲಸದ ಮೇರೆಗೆ ಬಾಶ್ ಕಂಪನಿಯ ತವರು ಮನೆಯಾದ ಜರ್ಮನಿಗೆ ಆಗಾಗ ಹೋಗುತ್ತಿರುತ್ತಾರೆ. (ಜ್ಞಾನಶೇಖರ ಮಾವ ತಮಾಷೆಗಾಗಿ ನಾನು ನನ್ನ ತವರು ಮನೆ ಜರ್ಮನಿಗೆ ಹೋಗುತ್ತಿದ್ದೇನೆ ಎನ್ನುತ್ತಾರೆ!) ಈ ಬಾರಿ ಜರ್ಮನಿಗೆ ಜಯಕ್ಕನೂ ಹೋಗಿದ್ದಳು. ಒಟ್ಟಿಗೆ ಮಕ್ಕಳು, ಜ್ಯೋತ್ಸ್ನಾ ಹಾಗೂ ಆದಿತ್ಯರೂ ಇದ್ದರು. ಅವಳ ಜರ್ಮನಿಯ ಪ್ರವಾಸ ಕಥನ ಇಲ್ಲಿದೆ ಓದಿ.

ಪತಿ (ಜ್ಞಾನಶೇಖರ) ಜರ್ಮನಿಗೆ ೬ ವಾರಗಳ ಆಫೀಸ್ ಕೆಲಸಕ್ಕೆಂದು ಹೋಗುವವರಿದ್ದರು. ಜರ್ಮನಿ ಅವರಿಗೆ ಹೊಸತಲ್ಲ, ಓಡಾಡಿ,ತಂಗಿ,ತಾನು ಬಹಳ ಮೆಚ್ಚಿದ ದೇಶವನ್ನು ಪತ್ನಿ,ಮಕ್ಕಳಿಗೂ ತೋರಿಸುವ ಉಮೇದು ಅವ್ರಿಗೆ. ನಮ್ಮ ದೇಶವನ್ನೇ ನೋಡದೆ ಸೀದಾ ಪರದೇಶವನ್ನು ನೋಡಿ ಹೆಮ್ಮೆ ಪಡುವುದು ಸರಿಯೆ ಎಂಬ ಭಾವ ನನ್ನದು.ಆದರೆ ಪತಿಯ ಉತ್ಸಾಹಕ್ಕೆ ತಲೆ ಬಾಗಿದೆ. ಅವರೇ ಪಾಸ್ ಪೋರ್ಟ್, ವೀಸಾ ಅಂತ ಬಹಳ ಮುತುವರ್ಜಿಯಿಂದ ಓಡಾಡಿ,ಮೇ ೧೧ರ ಬೆಳಿಗ್ಗೆ ಹೊರಡಲು ಟಿಕೆಟ್ ತೆಗೆದು ನಂತರ ತಮ್ಮ ಪ್ರವಾಸವನ್ನು ಕೈಗೊಂಡರು.೬ ವಾರಗಳ ಕೆಲಸ ಮುಗಿಸಿ ನಮ್ಮನ್ನು ಕರೆದೊಯ್ಯಲಿಕ್ಕಾಗಿಯೇ ಮೇ.೯ರ ಬೆಳಗಿನ ಝಾವ ಬೆಂಗಳೂರಿಗೆ ಬಂದಿಳಿದರು.ನಾನೆಷ್ಟು ಸೋಮಾರಿ ಗೊತ್ತಲ್ಲ, ಅವರು ಬಂದ ನಂತರ ಅವರ ಮಾರ್ಗದರ್ಶನದಲ್ಲೇ ಬಟ್ಟೆ,ಬರೆಯ ತಯಾರಿ ನಡೆಯಿತು. ಈ ನಡುವೆ ಅಲ್ಲೆಲ್ಲೋ ಜ್ವಾಲಾಮುಖಿ ಎದ್ದು ವಿಮಾನಗಳು ಹಾರಾಡದೆ ನಮ್ಮ ಪ್ರವಾಸವು ರದ್ದಾಗುವ ಸಂಭವವೂ ಇತ್ತು,ಹೊರಡುವ ಮೊದಲು ಅದರ ಬಗ್ಗೆ ಖಚಿತ ಮಾಹಿತಿಯನ್ನು ಪಡೆದುಕೊಂಡೇ ಪ್ರವಾಸವನ್ನು ಕೈಗೊಂಡೆವು.

ಹಾರೋಣ ಬಾ!

೧೧ರ ಬೆಳಿಗ್ಗೆ ೪ ಘಂಟೆಯ emirates ವಿಮಾನದಲ್ಲಿ ಬೆಂಗಳೂರಿನಿಂದ ದುಬೈಗೆ ಹಾರಬೇಕಿತ್ತು.ರಾತ್ರಿ ಒಂದು ಘಂಟೆಯ ತನಕ ಮಲಗೋಣ ಅಂತ ೮ ಘಂಟೆಗೆ ಮಲಗಿದರೂ ನಿದ್ದೆ ಹತ್ತಿರ ಸುಳಿಯಲಿಲ್ಲ.ಅಂಥಾ ಕಾತುರ. ೧.೧೫ಕ್ಕೆ ವಿಮಾನನಿಲ್ದಾಣಕ್ಕೆ ಹೊರಟೆವು.ಹೊರಟದ್ದು ೧೦ ದಿನಗಳ ಪ್ರವಾಸಕ್ಕೆ ಆದರೂ ಬೆಂಗಳೂರಿನ ರಸ್ತೆಗಳಲ್ಲಿ ಆ ರಾತ್ರಿ ಹೋಗುವಾಗ ಇನ್ಯಾವಾಗ ಇಲ್ಲಿಗೆ ಬರುತ್ತೇನೋ,ಬರುತ್ತೇನೋ ಇಲ್ಲವೋ ಈ ರಸ್ತೆಗಳನ್ನೆಲ್ಲ ಬಿಟ್ಟುಹೋಗ್ತಿದ್ದೇನಾ ಎಂಬ ಎಂದೂ ಕಾಡದ ಆತಂಕ,ಈ ಊರಮೇಲಿನ ಮೋಹ ಇಷ್ಟು ಬಲವತ್ತಾದುದೆ ಎನಿಸುವಂತೆ ಮಾಡಿತು.ವಿಮಾನ ನಿಲ್ದಾಣದಲ್ಲಿ ಚೆಕ್ ಇನ್, ಸೆಕ್ಯುರಿಟಿ ಚೆಕ್, ಇಮಿಗ್ರೇಶನ್ ಚೆಕಿಂಗ್ ಅಂತೆಲ್ಲಾ ಮುಗಿಸಿ ತೂಕಡಿಸುತ್ತಾ ವಿಮಾನ ಹತ್ತಲು ಕಾಯುತ್ತಿದ್ದೆವು. ೩.೧೫ಕ್ಕೆ ವಿಮಾನದ ದ್ವಾರ ತೆಗೆಯಿತು.ಮಕ್ಕಳ ಮುಖದಲ್ಲಿ ಖುಷಿಯೋ ಖುಷಿ. ನನಗೂ ಸಂಭ್ರಮ.ಇಷ್ಟು ದೂರದ ವಿಮಾನ ಪ್ರಯಾಣ ಹೊಸ ಅನುಭವ.ಆದಿತ್ಯನಿಗೆ ಅದರಲ್ಲಿ ತಿನ್ನಲು ಏನು ಕೊಡುತ್ತಾರೋ ಎಂಬ ಕುತೂಹಲ.ಅಷ್ಟು ಹೊತ್ತೂ ಕುಳಿತಲ್ಲೇ ಕುಳಿತಿರುವುದೆಂದರೆ ಬೋರಾಗುತ್ತೇನೋ ಎಂಬ ಆತಂಕ ನನ್ನದು.ಆ ವಿಮಾನದ ಗಗನಸಖಿಯರ ದಿರಿಸು  ನನಗೆ ಬಹಳ ಆಕರ್ಷಣೀಯವೆನಿಸಿತು. ಕೆನೆಬಣ್ಣದ ಶರ್ಟು, ಪ್ಯಾಂಟು ತೊಟ್ಟು ಕೆಂಪು ಟೊಪ್ಪಿಯನ್ನು ಹಾಕಿ ಆ ಟೋಪಿಯು ಬದಿಯಿಂದ ಕಿವಿಯ ಮೇಲೆ ಹಾದು ಭುಜವನ್ನು ಸುತ್ತುವರಿದಿದ್ದ ದುಪಟ್ಟಾದಿಂದ ಅವರು ಕಿನ್ನರಿಯರಂತೆ ಕಂಡರು.ಮತ್ತೆ ಮತ್ತೆ ಆ ವೇಷವನ್ನು ನೋಡುವುದೇ ನನ್ನ ಕೆಲಸವಾಯಿತು. ವಿಮಾನದೊಳಗಿದ್ದ ಟಿ.ವಿ.ಯಲ್ಲಿ ಅರಬ್ಬಿ ಭಾಷೆಯಲ್ಲಿ,ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಸುರಕ್ಷರತೆಗೆ ಸಂಬಂಧಿಸಿದಂತೆ ವಿವರಣೆಗಳೂ ಬರುತ್ತಿದ್ದವು. ಅಲ್ಲಿಯೂ ಈ ದಿರಿಸು ತೊಟ್ಟ ಸಖಿಯರು, ಸೂಚನೆಗಳನ್ನು ಕೊಡುವಾಗ ಅವರ ಕಣ್ಣು,ಬಾಯಿ ತಿರುಗುತ್ತಿದ್ದ ರೀತಿ,ಮುಗುಳ್ನಗೆ ಇವೆಲ್ಲ ಅವರು ಈ ಮರ್ತ್ಯಲೋಕಕ್ಕೆ ಸೇರಿದವರಲ್ಲ ಎಂಬ ಬೆರಗನ್ನು ಮೂಡಿಸಿತು ನನ್ನಲ್ಲಿ. ಅವರನ್ನು ಗಮನಿಸುವುದು,ತೂಕಡಿಸಿ ಏನೋ ಕನಸು ಕಾಣುವುದು—೪ ಘಂಟೆಗೆ ಸರಿಯಾಗಿ ನಮ್ಮ ವಿಮಾನ ಹೊರಟಿತು. ಸ್ವಲ್ಪ ದೂರ ಕ್ರಮಿಸುವಾಗ ಕಿತ್ತಳೆ ರಸ ಕೊಟ್ಟರು. ತಿಂಡಿ ಕೊಟ್ಟರು, ರುಚಿಯಾಗಿತ್ತು. ತಿಂದು,ನಾನಂತೂ ನಿದ್ರಿಸಿದೆ.ನನ್ನ ನಿದ್ದೆ ಇವರಿಗೆಲ್ಲ ತಮಾಷೆಯೆನಿಸುತ್ತಿತ್ತು.ಹಾರಿ ಹಾರಿ ದುಬೈಗೆ ಭಾರತೀಯ ಸಮಯ ಬೆಳಗಿನ ೭.೪೫ಕ್ಕೆ (ದುಬೈ ಸಮಯ ಬೆಳಿಗ್ಗೆ ೬.೧೫) ತಲುಪಿದೆವು.

ಅ ಬ್ರೇಕ್

ದುಬೈ ವಿಮಾನ ನಿಲ್ದಾಣದ ಅಗಾಧತೆ, ವೈಭೋಗವನ್ನು ಅಚ್ಚರಿಯಿಂದ ದಿಟ್ಟಿಸುತ್ತಾ ನಡೆದೆ, ನಡೆದಷ್ಟೂ ಮುಗಿಯದ ಕಾರಿಡಾರುಗಳು, ನಡಿಗೆಯ ಶ್ರಮವನ್ನು ಕಡಿಮೆಮಾಡಲೆಂದು ಅಲ್ಲಲ್ಲಿ ಹಾಸಿದ್ದ ವಿದ್ಯುತ್ ಚಾಲಿತ ನಡೆಹಾಸುಗಳು, ಏರುವ ಶ್ರಮ ತಿಳಿಯದಿರಲಿ ಎಂದು ಅಳವಡಿಸಿದ್ದ ಎಸ್ಕಲೇಟರುಗಳು, ಎಲ್ಲೆಲ್ಲಿಯೂ ಶುಭ್ರತೆ, ಸ್ವಚ್ಛತೆ.ನಮ್ಮನ್ನು ತಲೆಯಿಂದ ಕಾಲತನಕ ಸ್ಥೂಲವಾಗಿ ಪರೀಕ್ಶಿಸಿ,ಸಾಕ್ಸನ್ನೂ ಬಿಚ್ಚಿಸಿ ಪರೀಕ್ಷಿಸಿದರು.ಎಲಾ ತಪಾಸಣೆಗಳು ಮುಗಿದು ಹಾದಿ ಸುಗಮವಾದ ಮೇಲೆ ಫ್ರಾಂಕ್ ಫರ್ಟ್ ಗೆ ನಮ್ಮನ್ನು ಹೊತ್ತು ಹಾರುವ ಇನ್ನೊಂದು ಎಮಿರೇಟ್ಸ್ ವಿಮಾನಕ್ಕಾಗಿ ಕಾಯುತ್ತಾ ಕುಳಿತೆವು.ನಾವುಕುಳಿತಲ್ಲಿಗೆ ವಿಮಾನಗಳು ಮೇಲೇರುವುದು,ಕೆಳಗಿಳಿಯುವುದು ಕಾಣಿಸುತ್ತಿತ್ತು.ಓಡಿ ಮೇಲೇರಿದ ವಿಮಾನಗಳನ್ನು ನೋಡುವಾಗ ಆಕಾಶದಲ್ಲಿ ಮೀನುಗಳು ಹಾರುತ್ತಿವೆಯೇನೋ ಎನಿಸುತ್ತಿತ್ತು.ನಮ್ಮ ವಿಮಾನಕ್ಕೇರುವ ಸಮಯವಾಗುತ್ತಿದ್ದಂತೆ ನಮ್ಮನ್ನೆಲ್ಲ ಒಂದು ವ್ಯಾನಿನಲ್ಲಿ ತುಂಬಿ ಕರೆದೊಯ್ದರು.ಎಮಿರೆಟ್ಸ್ ವಿಮಾನಗಳ ಹೊರಭಾಗದಲ್ಲಿ ಅರಬಿ ಭಾಷೆಯಲ್ಲಿ ಬರೆದ ಬರಹ ಕನ್ನಡದಲ್ಲಿ ಶ್ರೀ ಬರೆದಂತೆ ತೋರುತ್ತಿತ್ತು,ಜ್ಯೋತ್ಸ್ನಳೂ ಅದನ್ನು ಅನುಮೋದಿಸಿದಳೂ.ಈ ವಿಮಾನದಲ್ಲೂ ಅದೇ ದಿರಿಸಿನ ಸಖಿಯರಿದ್ದರು,ಖುಷಿಯೆನಿಸಿತು.ದುಬಾಯ್ ಸಮಯ ೮.೩೦ಕ್ಕೆ ಫ್ರಾಂಕ್ ಫರ್ಟಿನತ್ತ ಹಾರಿದೆವು.ಎದುರಿದ್ದ ಟಿವಿಯಲ್ಲಿ ನಾವು ಯಾವ ದೇಶದ ಮೇಲೆ ಹಾರುತ್ತಿದ್ದೇವೆಂಬ ವಿವರ ಬರ್ತಾ ಇತ್ತು.ವಿಮಾನದ ಅಡಿಯಲ್ಲಿ ಅಳವಡಿಸಿದ್ದ ಕ್ಯಾಮೆರಾದಿಂದ ಮೋಡಗಳ ಹಿಂಡೇ ಕಾಣುತ್ತಿತ್ತು.ಸ್ವಲ್ಪಹೊತ್ತು ಇವನ್ನೆಲ್ಲ ನೋಡಿ,ಕುತೂಹಲ ತಣಿದ ಮೇಲೆ ಸೀಟಿಗೆ ಅಳವಡಿಸಿದ್ದ ಪ್ರತ್ಯೇಕ ಟಿವಿಯಲ್ಲಿ ಎರಡು ಹಿಂದಿ ಸಿನೆಮಾಗಳನ್ನು ವೀಕ್ಷಿಸಿದೆ.ರುಚಿರುಚಿಯಾದ ಊಟ ಸಿಕ್ಕಿತು(ಏಷ್ಯನ್ ಸಸ್ಯಾಹಾರಿ ಊಟ).ದುಬಾಯ್ ಯಿಂದ ಫ್ರಾಂಕ್ ಫರ್ಟ್ ಗೆ ೫,೦೭೭ ಕಿಮಿ ಗಳಷ್ಟು ಹಾರಿದ್ದೆವು ಎಂದು ಟಿವಿ ತೋರಿಸಿತು.

ಸುಖಪ್ರಯಾಣವಾಯ್ತು

ಫ್ರಾಂಕ್ ಫರ್ಟ್ ವಿಮಾನ ನಿಲ್ದಾಣ ಯುರೋಪಿನ ಎರಡನೆಯ ಅತಿ ದೊಡ್ಡ ವಿಮಾನ ನಿಲ್ದಾಣವಂತೆ.ಅಲ್ಲಿ ನಮ್ಮ ಸಾಮಾನುಗಳನ್ನು ಇಳಿಸಿಕೊಳ್ಳುವುದು,ವೀಸಾ,ಪಾಸ್ ಪೋರ್ಟ್ ತಪಾಸಣೆ ಎಲ್ಲ ಮುಗಿಸಿ ಹೊರಬಂದು ಸ್ವಯಂಚಾಲಿತ ಟಿಕೆಟ್ ಯಂತ್ರದಿಂದ Intercity Express(ICE)ನಲ್ಲಿ ಸ್ಟುಟ್ಗಾರ್ಟಿಗೆ ಟಿಕೆಟ್ ಗಳನ್ನು ಕೊಂಡು,ರೈಲಿಗಾಗಿ ಕಾಯುತ್ತಾ ನಿಂತೆವು,ನಿಗದಿತ ಸಮಯಕ್ಕೆ ಸೆಕೆಂಡೂ ವ್ಯತ್ಯಾಸವಾಗದಂತೆ ಬಂದೇ ಬಂದಿತು ಬಾತುಕೋಳಿ ಮೂತಿಯ,ಕೆಂಪುಮೈನ ರೈಲು.ಇಂತಹ ರೈಲನ್ನು ನೋಡುತ್ತಿರುವುದು ಇದೇ ಮೊದಲು,ಮಕ್ಕಳಿಗೂ ನನಗೂ ಅಚ್ಚರಿಯ ಮಟ್ಟದಲ್ಲಿ ವ್ಯತ್ಯಾಸವೇ ಇಲ್ಲ.ರೈಲನ್ನೇರಿ ಬೋಗಿಯ ಒಳಗೆ ಹೋಗಲು ಸ್ವಯಂಚಾಲಿತ ಬಾಗಿಲು ನಮ್ಮನ್ನು ಮುಗುಳ್ನಗುತ್ತಾ ಸ್ವಾಗತಿಸುವಂತೆ ಮೃದುವಾಗಿ ತೆರೆದುಕೊಂಡಿತು.ಒಳಗೆಲ್ಲ ಶಿಸ್ತಿನಿಂದ ಮೌನದಿಂದ ಅಥವಾ ತಮ್ಮವರೊಂದಿಗೆ ಪಿಸುಮಾತನಾಡುತ್ತಾ ಕುಳಿತಿರುವ ಪ್ರಯಾಣಿಕರು,ನಮ್ಮ ಉಸಿರಿನ ಶಬ್ದ ಇಲ್ಲಿಯ ಮೌನಕ್ಕೆ ಭಂಗ ತಂದರೆ ಎಂದು ಆತಂಕವಾಯಿತು.ಆದಿತ್ಯ ಮಾತ್ರ ಏನೇನೋ ಹರಟುತ್ತಲೇ ಇದ್ದ.ನನ್ನ ಕಣ್ಸನ್ನೆ,ಮುಖಹಿಂಡುವಿಕೆ ಅವನ ಉತ್ಸಾಹವನ್ನಿನಿತೂ ಕಮರಿಸಲಿಲ್ಲ.ನಾವು ಮೂವರೂ ಆ ಮೌನದೊಳಗೆ ಸೇರಿಹೋದೆವು.ಹೊರಗಡೆ ವೀಕ್ಷಿಸುತ್ತಿದ್ದಾಗ ನಾವು ದೇಶಬಿಟ್ಟು ಬಂದಿದ್ದೇವೆನ್ನುವುದು ನಿಜವೋ,ಸುಳ್ಳೋ ಎಂಬ ಭಾವ ಹಾದುಹೋಯಿತು.ದಾರಿಬದಿಯಲ್ಲಿ ಕಾಣಿಸುತ್ತಿದ್ದ ಮನೆಗಳು ನಮ್ಮ ಬೆಂಗಳೂರಿನದ್ದೇನೊ ಅನಿಸಿತು,ಏನೇನೋ ಭಾವಗಳ ಲಹರಿಯಲ್ಲಿ ಸೇರಿಹೋಗಿದ್ದೆ.೧೧/೪ ಘಂಟೆಯಲ್ಲಿ ಇನ್ನೂರು ಕಿ.ಮೀ.ಗಳನ್ನು ಕ್ರಮಿಸಿ ಸ್ಟುಟ್ ಗಾರ್ಟನ್ನು ತಲುಪಿದೆವು.ಆಗ ಸಂಜೆ ೪ ಘಂಟೆ.ಸ್ಟೇಶನ್ನಿಂದ ಹೊರಬರುವಾಗ ಚಳಿಯು ಚರ್ಮಕ್ಕೆ ನಾಟತೊಡಗಿತ್ತು.ಬೆಂಜ್ ಟ್ಯಾಕ್ಸಿಯಲ್ಲಿ ನಮ್ಮ ಹೊಟೆಲ್ Fieurbauch in Biebuertune ಗೆ ತಲುಪಿದೆವು.ದಾರಿಯಲ್ಲೇ ನಮ್ಮ ಊರುಗಳಿಗೆ ಫೋನಾಯಿಸಿ ನಾವು ಸುಖವಾಗಿ ತಲುಪಿದ್ದುದರ ಬಗ್ಗೆ ತಿಳಿಸಿದೆವು.ಭಾರತದಲ್ಲಾಗ ರಾತ್ರಿ ಏಳೂವರೆ.

ಈ ಹೋಟೆಲ್ ಗಳಲ್ಲಿ ಕಳೆದ ೬ ವಾರಗಳಿಂದ ಶೇಖರ್ ತಂಗಿದ್ದ ಕಾರಣ ಅವರಿಗೆ ಪರಿಚಯವಿದ್ದ ಸ್ವಾಗತಕಾರ್ತಿ ನಮ್ಮನ್ನು ವಿಶೇಷ ನಗುವಿನೊಂದಿಗೆ ಹಾರ್ದಿಕವಾಗಿ ಸ್ವಾಗತಿಸಿ ಇವರು ಇರಿಸಿಹೋಗಿದ್ದ ಲಗ್ಗೇಜನ್ನು ತಾನೇ ನಮ್ಮ ಕೋಣೆಗೆ ಸಾಗಿಸಿರುವುದಾಗಿ ಹೇಳಿ ಕೀ ಕೊಟ್ಟಳು.ಪ್ರತಿಯೊಂದೂ ಹೊಸತಲ್ಲವೆ ನಮಗೆ,ಇಲ್ಲಿಯ ಲಿಫ್ಟ್ ಒಂದುಕಡೆ ಮುಚ್ಚಿ ಹೊರಬರಲು ಇನ್ನೊಂದು ಬಾಗಿಲನ್ನು ತೆರೆಯುವುದೂ ಹೊಸತು!ಕೋಣೆ ನಮಗೆಲ್ಲರಿಗೂ ಇಷ್ಟವಾಯಿತು,ಪುಟ್ಟದಾದ,ಸುಸಜ್ಜಿತ ಕೋಣೆ,ಪುಟ್ಟ ಅಡಿಗೆಮನೆಯೂ ಇತ್ತು.ಸ್ನಾನ,ಶೌಚದ ವ್ಯವಸ್ಥೆ ಒಟ್ಟಿಗೇಇತ್ತು,ಸ್ನಾನವನ್ನು ಟಬ್ ನಲ್ಲಿ ಮಾಡಬೇಕಿತ್ತು,ನೆಲಕ್ಕೆ ನೀರು ಬೀಳದಂತೆ ಜಾಗ್ರತೆ ವಹಿಸಬೇಕಿತ್ತು.ಬಕೆಟ್,ಮಗ್ ಇರಲಿಲ್ಲ.ಶವರ್ ನಲ್ಲೆ ಸ್ನಾನ ಅಭ್ಯಾಸವಾಯಿತು.ಆ ಕೋಣೆಗೆ ಹೊಂದಿಕೊಂಡು ಪುಟ್ಟ ಬಾಲ್ಕನಿಯಿತ್ತು.ಅದರ ಬಾಗಿಲನ್ನು ತೆರೆದೊಡನೆಯೆ ಮುಖಸವರಿದ ತಣ್ಣನೆಯ ಗಾಳಿಗೆ ಮುಖದ ಸ್ಪರ್ಶಜ್ಞಾನವೇ ಹೋಗಿಬಿಟ್ಟಿತೇನೋ ಅನಿಸಿತು.ಸ್ವಲ್ಪ ಚೇತರಿಸಿಕೊಂಡು ಹೊರಬಂದು ನಿಂತರೆ ದೊಡ್ಡ,ಪುಟ್ಟ ಮನೆಗಳೂ,ಎಲ್ಲವೂ ಹಂಚಿನ ಮನೆಗಳು ಮತ್ತು ಪ್ರತೀ ಮನೆಯ ಮೇಲೂ ಚಿಮಣಿಗಳಿದ್ದುವು.ಚಳಿದೇಶವಲ್ಲವೆ,ನನ್ನ ಬಾಲ್ಯದ ಮಡಿಕೇರಿ ನೆನಪಾಗಿ ಮನಸ್ಸು ಭಾರವಾಗಿ ಹೋಂ ಸಿಕ್ ಅನಿಸಲಿಕ್ಕೆ ಸುರುವಾಯಿತು, ಏನೀ ವಿಚಿತ್ರ ಮನೋವ್ಯಾಪಾರ! ಸಂಜೆ ಆರು ಗಂಟೆಗೂ ನಿಚ್ಚಳ ಬೆಳಕು,ಮುಸ್ಸಂಜೆಯೆನಿಸುತ್ತಿರಲಿಲ್ಲ.ಸ್ನಾನ ಮುಗಿಸಿ ಹಗುರಾಗಿ ಪುಸ್ತಕವೊಂದನ್ನು ಹಿಡಿದು ಹಾಸಿಗೆಯಲ್ಲಿ ಅಡ್ಡಾದವಳಿಗೆ ಯಾವಾಗ ನಿದ್ದೆ ಆವರಿಸಿತೋ ತಿಳಿಯಲಿಲ್ಲ,ಮಕ್ಕಳು ಎಷ್ಟೋ ಮೊದಲೇ ನಿದ್ದೆಗೆ ಜಾರಿದ್ದರು.ಮರುದಿನದ ಪ್ಯಾರಿಸ್ ಪಯಣಕ್ಕೆ ಪತಿಯೇ ಬಟ್ಟೆಗಳನ್ನು ಜೋಡಿಸಿಕೊಟ್ಟರು ಮತ್ತು ನಮ್ಮ ಪ್ರವಾಸದುದ್ದಕ್ಕೂ ಅವುಗಳ ಜವಾಬ್ದಾರಿಯನ್ನು ಅವರೇ ಹೊತ್ತರು.ರಾತ್ರಿ ಎಷ್ಟು ಹೊತ್ತಿಗೋ ಬಂಧು ರಾಮಗೋಪಾಲ ಹೈಡಲ್ ಬರ್ಗ್ ನಿಂದ ಫೋನ್ ಮಾಡಿದ್ದ,ನಿದ್ದೆಯಲ್ಲಿ ಯೇ ಅವನು ಮತ್ತು ಅವನ ಪತ್ನಿ ವಂದನಳೊಂದಿಗೆ ಮಾತನಾಡಿದ್ದೆ.

ಪ್ರೇಮನಗರಿಯ ದಾರಿಯಲ್ಲಿ

ಮರುದಿನ ೫.೪೫ಕ್ಕೆ ಸಿಧ್ಧರಾಗಿ ಹೊಟೆಲ್ ನಿಂದ ಹೊರಬಿದ್ದೆವು.ಆಗಲೇ ಬೆಳ್ಳಗೆ ಬೆಳಕಾಗಿತ್ತು.ಅಸಾಧ್ಯವಾದ ಚಳಿ,ನನ್ನಿಂದಂತೂ ವೇಗವಾಗಿ ನಡೆಯಲು ಸಾಧ್ಯವಿರಲಿಲ್ಲ.ಚಳಿ ಹಣ್ಣುಗಾಯಿ,ನೀರುಗಾಯಿ ಮಾಡುತ್ತಿತ್ತು.ಮೈ ಮುದುರಿಕೊಂಡು ಹೆಜ್ಜೆ ಎತ್ತಿಡುತ್ತಿದ್ದೆ,ಪತಿ,ಮಕ್ಕಳಿಗೆ ಇಷ್ಟು ಕಷ್ಟ ಎನಿಸಲಿಲ್ಲ,ಬಹುಷ: ನನ್ನ ಭೌತಿಕ ಸಂವೇದನೆಯು ಬಹಳ ಸೂಕ್ಷ್ಮಮಟ್ಟದ್ದಿರಬೇಕು. ಹೊಟೆಲ್ ನಿಂದ ಒಂದು ಫರ್ಲಾಂಗಿನಷ್ಟು ದೂರವಿದ್ದ ಫಯರ್ಬಾಕ್ ಕ್ರಾಂಕನ್ ಹೌಸ್ ರೈಲು ನಿಲುಗಡೆಗೆ ಹೋಗಿ,ಸ್ವಯಂಚಾಲಿತ ಯಂತ್ರದಿಂದ ಟಿಕೆಟ್ ಕೊಂಡು,ರೈಲಿಗೆ ಕಾದೆವು.೭ ನಿಮಿಷಗಳಲ್ಲಿ ರೈಲು ಬರಲಿದೆ ಎನ್ನುವುದು ಅಲ್ಲಿ ಫಲಕದಲ್ಲಿ ಕಾಣಿಸುತ್ತಿತ್ತು.ಕರಾರುವಾಕ್ಕು ಸಮಯಕ್ಕೆ ರೈಲು ಹಾಜರ್!ಸ್ವಯಂಚಾಲಿತ ಬಾಗಿಲುಗಳು ತೆರೆದುಕೊಂಡು ಸ್ವಾಗತ ಕೋರಿದವು.ಮುಖ್ಯನಿಲ್ದಾಣ(Haubtbohnof)ಕ್ಕೆ ಬಂದು ಪ್ಯಾರಿಸ್ ಗೆ ಹೊರಡುವ ರೈಲನ್ನೇರಿದೆವು.ಮೊದಲೇ ಸೀಟು ಕಾದಿರಿಸಲಾಗಿತ್ತು.೬.೫೪ರ ರೈಲು ಸರಿಯಾದ ಸಮಯಕ್ಕೇ ಹೊರಟಿತು.ಎಲ್ಲಿಯಾದರೂ ಸಮಯ ಮೀರಿ ಹೊರಟು ನನಗೆ ಆಡಿಕೊಳ್ಳುವ ಅವಕಾಶ ಸಿಗಬಹುದೇ ಎಂದು ಕಾಯುತ್ತಿದ್ದೆ..ಊಹುಂ!ನಿರಾಶೆಯಾಯಿತು.ಪ್ರಯಾಣಿಕರು ತುಂಬಿದ್ದರೂ ಗದ್ದಲ,ಗೌಜಿಯಿಲ್ಲ,ಚಿಕ್ಕಮಕ್ಕಳಿದ್ದರೂ ಅವರ ಅಳು,ಕಿಟಿಕಿಟಿ ನಗು,ಕೇಕೆ,ಚೀರಾಟವಿಲ್ಲ ತಾವರೆಯೆಲೆಯ ಮೇಲಿನ ನೀರಿನಂತಿರುವುದು ಎಂದರೆ ಇದೇ ಏನೋ,ಜನರಿದ್ದರು,ಆದರೆ ಇರದಂತಿದ್ದರು.ಬ್ರೆಡ್ದು,ಹಣ್ಣು ಕೊಂಡು ತಿಂದೆವು.ಕೈಯ್ಯಲ್ಲಿದ್ದ ಕಾಗದದ ಚೀಲವನ್ನು ಎಸೆಯಬೇಕಿತ್ತು.ರೈಲಿನಲ್ಲಿ ಸುತ್ತಮುತ್ತ ಹುಡುಕಿದೆ,ಕಸದ ಡಬ್ಬಿ ಸಿಗಲಿಲ್ಲ..ಆಹಾ!ಖುಷಿಯಾಯಿತು,ವಿಜಯದ ನಗುವನ್ನು ಗಂಡನೆಡೆಗೆ ಬೀರಿದರೆ ಅವರು ಸೋಲೊಪ್ಪಲು ತಯಾರಿಲ್ಲ.ಜರ್ಮನರನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದರು,ಸುತ್ತಲೂ ಇರದಿದ್ದರೇನಾಯಿತು,ಕೆಳಗೆ ನೋಡೆಂದರು,ಹೌದು!ಸೀಟಿಗೆ ಸೀಟಿನ ಬಣ್ಣಕ್ಕೆ ಹೊಂದುವಂತೆ ಕಸದ ಡಬ್ಬಿಯನ್ನಳವಡಿಸಿದ್ದರು,ಅವ್ಯವಸ್ಥೆಯೆಂಬುದು ನೀನೆಷ್ಟು ತಡಕಿದರೂ ಸಿಗದೆಂಬಂತೆ ವಿಜಯದ ನಗು ಬೀರುವ ಸರದಿ ಅವರದಾಗಿತ್ತು.ರೈಲಿನ ಶೌಚಾಲಯದಲ್ಲಿ ಪರಿಮಳಯುಕ್ತ ನೀರಿನ ವ್ಯವಸ್ಥೆ,ಕುಡಿಯಲಿಕ್ಕಲ್ಲ ಎಂಬರ್ಥದ ಜರ್ಮನ್ ಫಲಕವೂ ಇತ್ತು!! ಸ್ಟುಟ್ ಗಾರ್ಟ್ ನಿಂದ ಪ್ಯಾರಿಸ್ ನ ದಾರಿಯಲ್ಲಿ ಉದ್ದಕ್ಕೂ ಸುಂದರವಾದ ಮನಸೂರೆಗೊಳ್ಳುತ್ತಿದ್ದ ಹಸಿರು,ದೂರದಿಂದ ನುಣ್ಣಗೆ,ಹಸಿರುಗಂಬಳಿಯಂತೆ ಕಾಣುತ್ತಿದ್ದ ಗುಡ್ಡಗಳೂ,ಅಲ್ಲಲ್ಲಿ ಮೇಯುತ್ತಿದ್ದ ತುರು-ಕುರಿ ಮಂದೆಗಳು,ಚರ್ಚೊಂದನ್ನು ಕೇಂದ್ರವಾಗಿಸಿ,ಅದರ ಸುತ್ತ ವ್ಯವಸ್ಥಿತವಾಗಿ ಕಟ್ಟಲಾದ ಹಳ್ಳಿ,ಅಲ್ಲಿನ ಮನೆಗಳು,ಆ ಮನೆಗಳ ಹಿತ್ತಿಲಿನಲ್ಲಿ ಒಟ್ಟಿಕೊಂಡಿರುತ್ತಿದ್ದ ಸೌದೆಗಳ ರಾಶಿಯಲ್ಲಿ ನಮ್ಮ ಹಳ್ಳಿಮನೆಗಳ ಛಾಯೆಯನ್ನು ಕಂಡೆ.ಅಲ್ಲಲ್ಲಿ ಕಾಣುತ್ತಿದ್ದ ನದೀಪಾತ್ರ,ಕಿರಿದಾದ ತೋಡುಗಳು,ಸ್ವಚ್ಛತೆ-ಗ್ಲೋಬಲ್ ವಾರ್ಮಿಂಗ್ ಎಂಬುದು ನಿಜವೆ?

ದಾರಿ ಕಾಣದಾಗಿದೆ

ಟಿಜಿವಿ ರೈಲು ಕಾರ್ಲ್ಸ್ ರುಹೆ,ಸ್ಟ್ರಾಸ್ ಬರ್ಗ್ ನ್ನು ಹಾದು ಸ್ಟುಟ್ ಗಾರ್ಟ್ನಿಂದ ಸುಮಾರು ೭೦೦ ಕಿಮೀಗಳಷ್ಟು ದೂರದ ಪ್ಯಾರಿಸನ್ನು ತಲುಪಿದಾಗ ಬೆಳಿಗ್ಗೆ ೧೦.೧೫!ಬೆಚ್ಚನೆಯ ವ್ಯವಸ್ಥೆಯಿದ್ದ ರೈಲಿನಿಂದ ಹೊರಗಿಳಿದಾಗ…ಓಹ್! ಆ ಛಳಿ!ಮೈ ಮೂಳೆಗಳೆಲ್ಲ ಕೊರೆದು ಬಾಗಿ  ಬೆಂಡಾಗುತ್ತವೆ ಅನಿಸಿತು.ಇಡೀ ಮೈ ಯನ್ನು ಮುದುರಿಸಿಕೊಂಡೆ.ಈ ಪ್ಯಾರಿಸ್ ಚಳಿಗೆ ನಾನು ತಯಾರಾದದ್ದು ಸಾಕಾಗಿರಲಿಲ್ಲ.ಮಕ್ಕಳು,ಪತಿ ಚಳಿಯಿಂದ ನನ್ನಷ್ಟು ಬಾಧಿತರಾಗಲಿಲ್ಲ ಎಂಬುದು ಸಮಾಧಾನಕರ ಅಂಶ.ಹಲ್ಲುಗಳು ಕಟಕಟಿಸುತ್ತಾ ಚಳಿಯ ಮೇಲೆ ಕೋಪ ಕಾರುವಂತೆ ತೋರುತ್ತಿದ್ದವು.ನಮ್ಮೆಲ್ಲರ ಕೆನ್ನೆ ಮೂಗುಗಳು ಚಳಿಯ ಬಾಧೆಗೆ ಕೆಂಪಾಗಿದ್ದವು.ಬ್ರೆಡ್ ತಿಂದು ನೀರಡಿಕೆಯೆನಿಸುತ್ತಿದ್ದುದು ಪ್ಯಾರಿಸ್ ನ ರಸ್ತೆಗೆ ಕಾಲಿರಿಸಿದ್ದೇ ತಡ,ಇಂಗಿಹೋಯಿತು.ಇಡೀ ವಾತಾವರಣಕ್ಕೆ ಆವರಿಸಿದ್ದ ತೆಳುಮೋಡದ ಸ್ನಿಗ್ಧತೆಯ ಪರದೆ ಮಡಿಕೇರಿಯನ್ನು ನೆನಪಿಗೆ ತರುತ್ತಿದ್ದರೂ ನಮ್ಮೂರ ಚಳಿಯಷ್ಟು ಆಪ್ಯಾಯಮಾನವಗಿರಲಿಲ್ಲ ಈ ಚಳಿ,ಇದು ಕಠೋರ!ಕೈಗಳನ್ನು ಜೋಬಿನೊಳಗೆ ತೂರಿಸಿಕೊಂಡು ಒಬ್ಬರನ್ನೊಬ್ಬರು ಹಾಸ್ಯಮಾಡಿಕೊಂಡು ನಡೆಯತೊಡಗಿದೆವು,ಎಷ್ಟು ನಡೆದರೂ ಮೈ ಬಿಸಿಯಾಗುವ ಸೂಚನೆಯೇ ಇರಲಿಲ್ಲ. ಸ್ಟುಟ್ ಗಾರ್ಟಿನ ಶುಭ್ರಾತಿಶುಭ್ರ ರಸ್ತೆಗಳಿಗೆ ಹೋಲಿಸಿದರೆ ಪ್ಯಾರಿಸ್ ಕೊಳಕೋ ಕೊಳಕು.ರಸ್ತೆಯಲ್ಲಿ ಅಲ್ಲಲ್ಲಿ ನಾಯ ಹೊಲಸು,ಕಸಕಡ್ಡಿಗಳನ್ನು ನೋಡಿ ಖುಶಿಯಾಯಿತು.ಮಹಿಳೆಯೊಬ್ಬಳ ನಾಯಿ ರಸ್ತೆಯನ್ನೇ ಶೌಚಾಲಯವಾಗಿ ಮಾಡಿಕೊಂಡಿತ್ತು, ಆಕೆ ಇನ್ನೊಬ್ಬಳೊಂದಿಗೆ ಹರಟೆ ಹೊಡೆಯುತ್ತಿದ್ದಳು, ನಮಗೆ ನೋರ್ಡ್ ಎಟ್ ಶೆಂಪಾನಿ ಎಂಬ ಹೊಟೆಲ್ನಲ್ಲಿ ಕೋಣೆ ಕಾದಿರಿಸಲಾಗಿತ್ತು.ಆದರೆ ಆ ಹೊಟೆಲನ್ನು ಹುಡುಕಲು ಸ್ವಲ್ಪ ಕಷ್ಟಪಟ್ಟೆವು, ಕೆಲವು ದಾರಿಹೋಕರನ್ನು ಕೇಳಿದೆವು, ಅವರು ಅಂದಾಜಿನಿಂದ ಹೇಳಿದ ದಾರಿಯಲ್ಲಿ ಹೋಗಿ ಹುಡುಕಿದೆವು. ಸಿಗಲಿಲ್ಲ. ಇನ್ನೋರ್ವ ಸುಂದರ ಯುವತಿ ಯಾವುದೋ ಭಾವಲಹರಿಯಲ್ಲಿ ತೇಲಿಬರುತ್ತಿರುವಂತೆ ಬರುತ್ತಿದ್ದಳು, ಆಕೆಯನ್ನು ತಡೆದು ನಿಲ್ಲಿಸಿ ಕೇಳಿದೆವು, ಆಕೆ ನಗುಮೊಗದಿಂದಲೇ ನಮಗೆ ಸ್ಪಂದಿಸಿ ತಾನೂ ಹುಡುಕತೊಡಗಿದಳು.ಆಕೆಯೊಡನೆ ಈ ತುದಿಯಿಂದ ಆ ತುದಿಯವರೆಗೂ ಅಡ್ಡಾಡಿದೆವು. ನಮ್ಮನ್ನು ಒಂದೆಡೆ ನಿಲ್ಲಿಸಿ ರಸ್ತೆದಾಟಿ ಹೋಗಿ ಯಾವುದೋ ಅಂಗಡಿಯಲ್ಲಿ ವಿಚಾರಿಸಿ ಬಂದು ತನಗೆ ತಿಳಿಯಲಿಲ್ಲ, ಸೋತೆನೆಂದು ಹೇಳಿ ಕೈ ಚೆಲ್ಲಿದಳು. ಆಕೆಗೆ ಸಮಾಧಾನ ಹೇಳಿ,ಆಕೆಯ ಗಲ್ಲಕ್ಕೆ ಚುಚ್ಹಿದ ಸೂಜಿಯಂಥ ಆಭರಣವನ್ನೇ ಅಚ್ಚರಿಯಿಂದ ನೋಡುತ್ತಾ ಅವಳಿಗೆ ವಿದಾಯ ಹೇಳಿದೆವು. ಅಂತೂ ಇಂತೂ ರೈಲ್ವೆಸ್ಟೇಶನ್ ಗೆ ಮತ್ತೆ ಬಂದು ಅಲ್ಲಿದ್ದ ಸೆಕ್ಯೂರಿಟಿಗಾರ್ಡನ್ನು ಕೇಳಿ,ಆತ ನಕ್ಷೆಯ ಸಹಾಯದಿಂದ ನಮ್ಮನ್ನು ಸರಿದಾರಿಗೆ ಹಚ್ಚಿದ.ಹೊಟೆಲ್ ನ ಸ್ವಾಗತಕಾರಿಣಿ ಮುಗುಳ್ನಗು ಬೀರಿ ನಮ್ಮನ್ನು ವಾಗತಿಸಿ ನಾವು ಫ್ರೆಂಚ್ ಮಾತನಾಡಬಲ್ಲೆವ ಅಂತ ಕೇಳಿದಳು,ಶೇಖರ್ ತಾನು ಅಲ್ಪಸ್ವಲ್ಪ ಜರ್ಮನ್ ಭಾಷೆಯನ್ನು ಮಾತನಾಡಬಲ್ಲೆ ಎಂದರು,ಆದರೆ ಆಕೆ ಆ ಭಾಷೆಯನ್ನು ಮಾತನಾಡಲು ನಿರಾಕರಿಸಿ ತಾನು ಇಂಗ್ಲಿಶ್ನಲ್ಲಿ ಸುಧಾರಿಸುವುದಾಗಿ ತಿಳಿಸಿದಳೂ.೨ ಘಂಟೆಯ ಮೊದಲು ಕೋಣೆ ಸಿಗಲಾರದು,ನಿಮ್ಮ ಲಗ್ಗೇಜನ್ನು ಅಲ್ಲಿರಿಸಿ ಹೊರಗೆ ತಿರುಗಿ ಬನ್ನಿ ಎಂದು ಸೂಚಿಸಿದಳು, ಆಕೆ ತೋರಿದ ಸ್ಥಳದಲ್ಲಿ ಲಗ್ಗೇಜನ್ನಿರಿಸಿ,ಆಕೆಯಿಂದ ಐಫೆಲ್ ಟವರ್ ಗೆ ಹೋಗುವ ಮಾರ್ಗವನ್ನು,ದೂರವನ್ನು ತಿಳಿದುಕೊಂಡು ಹೊರಬಂದೆವು.

ಒಂದು ಗೋಪುರ

ಫ್ರೆಂಚರಿಗೂ ಜರ್ಮನ್ನರಿಗೂ ಒಳಗೊಳಗೇ ದ್ವೇಷವಿರುವುದರಿಂದ ಇವರು ತಮಗೆ ತಿಳಿದಿದ್ದರೂ ಆ ಭಾಷೆಯನ್ನು ಮಾತನಾಡಲಿಚ್ಚಿಸುವುದಿಲ್ಲ ಎಂದು ಪತಿ ತಿಳಿಸಿದರು.ಮೆಟ್ರೊ ರೈಲು  ನಿಲ್ದಾಣಕ್ಕೆ ನಡೆದುಕೊಂಡು ಹೋದೆವು.ಅಲ್ಲಿ ದಪ್ಪ ಗಾಜಿನ ಗೋಡೆಯಾಚೆಗಿನ ಕೌಂಟರ್ ನಲ್ಲಿ ಇರುತ್ತಿದ್ದ ಟಿಕೆಟ್ ಕೊಡುವವರು ಹೊರಗಿನವರೊಂದಿಗೆ ಮೈಕ್ ಮೂಲಕ ಮಾತನಾಡುತ್ತಿದ್ದರು.ಹೋಗಿ ಬರುವ ಟಿಕೆಟನ್ನು ಅಲ್ಲೇ ಕೊಳ್ಳಲಾಯಿತು.ನೀಡಲಾದ ೪ ಟಿಕೆಟ್ ಗಳನ್ನು ಅವರವರು ಪಡೆದುಕೊಂಡು ಡಬ್ಬಿಯೊಂದರ ತೂತಿನೊಳಗೆ ತೂರಿಸಿದರೆ ಆ ಡಬ್ಬಿಯು ಮತ್ತೊಂದು ತೂತಿನ ಮೂಲಕ ನಾವು ತೂರಿಸಿದ ಟಿಕೆಟನ್ನುಹೊರದಬ್ಬುತ್ತಿತ್ತು.ಆಗ ರೈಲ್ವೆ ಪ್ಲಾಟ್ ಫಾರ್ಮಿನ ಗೇಟು ನಮಗಾಗಿ ತೆರೆದುಕೊಳ್ಳುತ್ತಿತ್ತು!ಇವೆಲ್ಲ ನೋಡಿದಾಗ ನಾವು ಯಾವುದೋ ಕಥೆಯ ಪಾತ್ರಗಳಾದಂತೆ ಅನಿಸುತ್ತಿತ್ತು.ಪ್ಯಾರಿಸ್ ನ ಲೋಕಲ್ ರೈಲುಗಳೂ ಅಷ್ಟೆ,ಸ್ಟುಟ್ಗಾರ್ಟ್ ನ ರೈಲುಗಳಷ್ಟು ಚೊಕ್ಕಟವಿರಲಿಲ್ಲ ಅಲ್ಲಿನ ನೀರವತೆಯೂ ಇಲ್ಲಿರಲಿಲ್ಲ.ಸುಮಾರು ೨೦ ನಿಮಿಷ ಪ್ರಯಾಣ ಮಾಡಿದ ಬಳಿಕ ನಾವಿಳಿಯಬೇಕಾದ ನಿಲ್ದಾಣ ಬಂದಿತು.ಸುರಂಗಮಾರ್ಗದಲ್ಲಿ ಚಲಿಸುವ ರೈಲಿನಿಂದ ಹೊರಗಿಳಿದಕೂಡಲೇ ಕಾಡಿಸಿ ಪೀಡಿಸುವ ಚಳಿ!ನಡೆಯುವ ಕೊರಡಿನಂತಾಗಿದ್ದ ದೇಹ,ಬಾಯಾರಿಕೆಯಾಗದು ಎಂಬುದೊಂದು ದೊಡ್ಡ ಸಮಾಧಾನ.ಸುರಂಗದ ಬಾಯಿಯಿಂದ ಹೊರಬಂದು ಸ್ವಲ್ಪದೂರ ನಡೆದರೆ ಐಫೆಲ್ ಟವರಿರುವ ತಾಣ. ದಾರಿಯಲ್ಲಿ ಅಲ್ಲಲ್ಲಿ ಭಿಕ್ಷುಕರಿದ್ದರು, ಅವರು ಸೂಟುಬೂಟುಧಾರಿಗಳಾಗಿದ್ದರು.ಸ್ಮರಣಿಕೆಗಳನ್ನು ಮಾರುತ್ತಿದ್ದ ದೈತ್ಯಾಕೃತಿಯ ಕರಿಯರಿದ್ದರು, ಪತಿ ನನಗೆ ಬಹಳ ಜಾಗರೂಕತೆಯಿಂದಿರಲು ಹೇಳಿದ್ದರು.ಆ ಎತ್ತರೆತ್ತರದ ಮನುಷ್ಯರು ಸ್ಮರಣಿಕೆಗಳನ್ನು ಕೊಳ್ಳುವಂತೆ ಫ್ರೆಂಚೋ,ಸ್ವಹೇಲಿಯೋ ಆಫ್ರಿಕನ್ನೋ-ಯಾವುದೋ ಭಾಷೆಯಲ್ಲಿ ಒತ್ತಾಯಿಸುತ್ತಿದ್ದರು,ನಾನು ಅಚ್ಚಕನ್ನಡದಲ್ಲಿ ‘ನನಗೆ ಬೇಡ,ಸುಮ್ಮನೆ ಕಾಡಬೇಡಿ,ಹಾದಿಗೆದುರಾಗಬೇಡಿ,ಅತ್ತ ಸರಿಯಿರಿ’ ಎಂದು ಹೇಳುತ್ತಿದ್ದರೆ ಮಗಳಿಗೆ ನಗುವೋ ನಗು.ದೂರದಿಂದ ಕಂಡ ಐಫೆಲ್ ಟವರ್(೩೧೨ ಮೀ.ಎತ್ತರ)ಪ್ಯಾರಿಸ್ ನಗರದ ಹಿನ್ನೆಲೆಯಲ್ಲಿ,ಎತ್ತರೆತ್ತರ ಚಿಮ್ಮುತ್ತಿದ್ದ ಕಾರಂಜಿಗಳ ಹಿಂದಿನಿಂದ ಭವ್ಯವಾಗಿ ಕಾಣುತ್ತಿತ್ತು.೧೮೮೯ ರಲ್ಲಿ ಫ್ರೆಂಚ್ ಕ್ರಾಂತಿಯ ನೆನಪಿಗೆ ಏರ್ಪಡಿಸಿದ್ದ ವಸ್ತುಪ್ರದರ್ಶನದ ಪ್ರವೇಶ ದ್ವಾರವಾಗಿ ಗುಶ್ಟೆವ್ ಐಫೆಲ್ ಎಂಬಾತ ಇದನ್ನು ನಿರ್ಮಿಸಿದನಂತೆ.ಈ ಗೋಪುರವು ಪ್ಯಾರಿಸ್ ನಗರದ ಸೌಂದರ್ಯಪ್ರಜ್ಞೆಗೆ,ಫ್ರೆಂಚ್ ಜನರ ಕಲಾವಂತಿಕೆಗೆ,ಅಭಿರುಚಿಗೆ ವಿರುಧ್ಧವಾಗಿ ಇದೆ ಎಂಬ ವಿರೋಧವೂ ವ್ಯಕ್ತವಾಗಿತ್ತಂತೆ.ಐಫೆಲ್ ಟವರ್ ನ ಮೂರುಅಂತಸ್ತುಗಳಲ್ಲಿ ಸ್ಮರಣಿಕೆಗಳನ್ನು ಮಾರುವ ಅಂಗಡಿಗಳು,ಗೋಪುರದ ಚರಿತ್ರೆಯನ್ನು ಹೇಳುವ ಸಾಕ್ಷ್ಯಚಿತ್ರಗಳು,ಇಂಟರ್ ನೆಟ್ ಸ್ಟೇಶನ್ ಗಳು,ಟಿವಿ,ರೆಡಿಯೋ ಸ್ಟೇಶನ್ ಗಳು ಇವೆಯೆಂದು ತಿಳಿಯಿತು.ಆದರೆ ರಿಪೇರಿಯ ಕಾರಣದಿಂದಾಗಿ ಮೇಲಿನಂತಸ್ತಿಗೆ ಪ್ರವೇಶವನ್ನು ನಿಶೇಧಿಸಿದ್ದರು,ಮತ್ತು ಟಿಕೆಟ್ ಗಾಗಿ ನಿಂತಿದ್ದ ಗೋಪುರದಂಥಾ ಜನಸಂದಣೀಯನ್ನು ನೋಡಿ ನಮಗೆ ಮೇಲೇರಬೇಕೆನಿಸಲಿಲ್ಲ.ಬಳಿಯಲ್ಲಿ ಹರಿಯುತ್ತಿದ್ದ ಸೈನ್ ನದಿಯನ್ನು ವೀಕ್ಷಿಸಿ ಅಲ್ಲಿ ಸುತ್ತಮುತ್ತಲ ಪ್ರದೇಶಗಳನ್ನು,ಜನರನ್ನು ಅವಲೋಕಿಸುತ್ತಾ ತಿರುಗಾಡಿ ಹೊಟೆಲ್ ಗೆ ಹೊರಟೆವು.ದಾರಿಯಲ್ಲೆಲ್ಲೋ ತರಕಾರಿ ಬರ್ಗರ್ ತಿಂದು ಕೋಣೆಗೆ ಬಂದೆವು.ಹರಟೆ ಹೊಡೆಯುತ್ತಾ ಮಕ್ಕಳ ಆಟಗಳನ್ನು ನೋಡುತ್ತಾ ಅದರಲ್ಲಿ ಪಾಲ್ಗೊಳ್ಳುತ್ತಿದ್ದೆವು,ಸಂಜೆ ಹೊರಗೆ ಸುಮ್ಮನೆ ತಿರುಗಾಡಿ ಬರೋಣ ಎಂದು ನಿರ್ಧರಿಸಿದೆವು,ಆದರೆ ಆಟವಾಡುತ್ತಾ ಆಡುತ್ತಾ ಮಕ್ಕಳು ನಿದ್ರಾವಶರಾದರು.ನಾನೇನೋ ಓದುತ್ತಾ ಕುಳಿತೆ.ಶೇಖರ್ ಹೊರಗೆ ಸುತ್ತಾಡಿ ಬಂದರು,ಹೊರಗೆಲ್ಲೂ ಹೋಗಲು ಸಾಧ್ಯವಾಗಲಿಲ್ಲ,ಚಳಿಯೂ ಹೆದರಿಸುತ್ತಿತ್ತು.

ಹಾ! ಪ್ಯಾರಿಸ್ ದೇಖೋ!

ಬೆಳಿಗ್ಗೆ ೮ ಘಂಟೆಗೆ ಮೆಟ್ರೋ ರೈಲು ಹಿಡಿದು ಚ್ಯಾಂಪ್ಸ್ ಎಲಿಸಿಸ್ ಎಂಬ ಸ್ಥಳವನ್ನು ನೋಡಹೊರಟೆವು.ಈ ರಸ್ತೆ ಪ್ಯಾರಿಸ್ ನ ಪ್ರಸಿಧ್ಧ ರಸ್ತೆ,ಬೆಂಗಳೂರಿನ ಹಳೆಯ ಮಹಾತ್ಮಾ ಗಾಂಧಿ ರಸ್ತೆಯನ್ನು ನೆನಪಿಗೆ ತರುವಂಥದ್ದು.ಹದಿನಾಲ್ಕನೇ ಲೂಯಿ ಈ ರಸ್ತೆಯನ್ನು ನಿರ್ಮಿಸಿದನಂತೆ. ಬಹಳ ಅಗಲವಾದ ರಸ್ತೆ,ರಾತ್ರಿಯಲ್ಲಿ ಬಹಳ ಸುಂದರವಾಗಿ ತೋರಬಹುದೆನಿಸಿತು. ರಸ್ತೆಯುದ್ದಕ್ಕೂ ವಿಶಾಲವಾದ ಮರಗಳು,ಪಾದಚಾರಿಗಳಿಗೆ,ಸೈಕಲ್ ಸವಾರರಿಗೆ ನಡಿಗೆ, ಸವಾರಿ ಸುಗಮವೆನಿಸಲು ನಿರ್ಮಿಸಿದ ಕಲ್ಲಿನ ಹಾದಿ! (ಗ್ರಾನೈಟ್) ಅಕ್ಕಪಕ್ಕದಲ್ಲಿದ್ದ ಪುರಾತನ ವಾಸ್ತುಶೈಲಿಯ ಕಟ್ಟಡಗಳು,ಒಟ್ಟಿನಲ್ಲಿ ಖುಷಿಯೆನಿಸುವ ವಾತಾವರಣ.ಅಲ್ಲಿ ನಮ್ಮ ಗೇಟ್ ವೇ ಆಫ್ ಇಂಡಿಯಾವನ್ನು ಜ್ಞಾಪಿಸುವಂಥ ಮಹಾದ್ವಾರವಿತ್ತು.ಹೊಸವರ್ಷದ ಆಮೋದ ಪ್ರಮೋದ,ಜುಲೈ ೧೪ ರ ಮಿಲಿಟರಿ ಪಥಸಂಚಲನ,ಜುಲೈ ಕೊನೆಗೆ ಆಗಮಿಸುವ ಟೂರ್ ಡಿ ಫ್ರಾನ್ಸ್ ಸೈಕಲ್ ರೇಸಿಗೆ ಈ ಮಹಾದ್ವಾರವು ಸಾಕ್ಷಿಯಾಗುತ್ತದಂತೆ.ಇಲ್ಲಿ ಹಾಸಿದ್ದ ಕಲ್ಲುಬೆಂಚಿನ ಮೇಲೆ ಕೂರೋಣವೆನಿಸಿದರೂ ಆ ತಣ್ಣಗಿನ ಸ್ಪರ್ಶಕ್ಕೆ ಹೆದರಿ,ಕೂರಲೂ ಇಷ್ಟು ಯೋಚಿಸಬೇಕೆ ಎಂದು ನಗುವೂ ಬಂದಿತು,ಅಂತೂ ಜಾಗ್ರತೆಯಿಂದ ಕುಳಿತು ಸುಮ್ಮನೇ ಸುತ್ತಲೂ ನಿರುಕಿಸುತ್ತಾ ಸಮಯ ಕಳೆದು ಮತ್ತೆ ಬಂದ ದಾರಿಯಲ್ಲೇ ಹಿಂದಿರುಗಿದೆವು.

ಕೋಣೆಯನ್ನು ಖಾಲಿ ಮಾಡಿ ನಮ್ಮ ವಸ್ತುಗಳನ್ನು ಹೊರಗಿಟ್ಟು ಪ್ಯಾರಿಸ್ ನ ರಸ್ತೆಗಳಲ್ಲಿ ಉದ್ದಾನುದ್ದಕ್ಕೆ ನಡೆಯತೊಡಗಿದೆವು.ಅಂಗಡಿಗಳನ್ನು ಗಮನಿಸಿದರೆ ಶ್ವೇತವರ್ಣದ ನಾನಾರೀತಿಯ ಗೌನುಗಳು, ಅವುಗಳ ಮೇಲೆ ಚಿತ್ರವಿಚಿತ್ರವಾದ ಕುಸುರಿ, ಹರಳಿನ ಕೆಲಸಗಳು,ಸಿಂಡರೆಲಾ ಕಥೆಯಲ್ಲಿ ಸಿಂಡರೆಲಾ ತೊಟ್ಟಂತಹ ಕಿರೀಟಗಳು,ಮುದ್ದಾದ ಪಾದರಕ್ಷೆಗಳು-ಇವುಗಳನ್ನೆಲ್ಲ ಪ್ರದರ್ಶಿಸುತ್ತಿದ್ದರು.ಎಲ್ಲ ಅಂಗಡಿಗಳೂ ಸುಮಾರು ಹೀಗೇ ಇದ್ದವು.ಆಗ ತಿಳಿಯಿತು,ಇದು ನವವಧುವೆಗೆ ಬೇಕಾಗುವ ಉಡುಗೆ ತೊಡುಗೆಗಳನ್ನು ಮಾರುವ ಅಂಗಡಿಬೀದಿ ಎಂದು.ನಮ್ಮೂರ ಚಿಕ್ಕಪೇಟೆಯ ರೇಶ್ಮೆ ಸೀರೆಗಳ ಅಂಗಡಿಗಳು ನೆನಪಾದವು.ದಾರಿ ಎಳೆದಲ್ಲಿಗೆ ನಡೆಯುತ್ತಿದ್ದೆವು.ಬಸ್ ಹತ್ತಿ ಸೈಟ್ ಸೀಯಿಂಗ್ ಎಂದು ಹೋಗುವುದಕ್ಕಿಂತ ಇದೇ ಖುಷಿ ಎನಿಸಿತು.ದಾರಿಬದಿಯಲ್ಲಿ ರಸ್ತೆ ತೊಳೆದ ನೀರು ಹರಿಯುತ್ತಾ ಇತ್ತು,ಅಪ್ಪನ ಕೈ ಹಿಡಿದು ಮುಂದೆ ನಡೆಯುತ್ತಿದ್ದ ಆದಿತ್ಯ follow the water ಅಂದ,ನಾವೂ ಹಾಗೆಯೇ ಮಾಡಿದೆವು,ಎಷ್ಟು ವಿಧದ ಅಂಗಡಿಗಳು, ಚಪ್ಪಲಿ ಅಂಗಡಿಗಳು,ದಿನಬಳಕೆಯ ಸಾಮಗ್ರಿಗಳ ಅಂಗಡಿಗಳು(ಇವರು ಬ್ರೆಡ್ ಮಾಂಸ ಬೇಯಿಸೋ ಅಡುಗೆಮನೆಗೆ ಇಷ್ಟು ಸಾಮಾನುಗಳು ಬೇಕೆ?)ಬ್ಯೂಟಿ ಸಲೂನುಗಳು,ಬಟ್ಟೆ ಅಂಗಡಿಗಳು…ನಮ್ಮ ಗಾಂಧೀ ಬಜಾರ್ ನೆನಪಾಗುತ್ತಿತ್ತು.ಆದರೆ ಹೂ,ತರಕಾರಿ ಮಾರುವ ಅಂಗಡಿಗಳು ಕಾಣಿಸಲಿಲ್ಲ.ಬ್ರೆಡ್,ಮಾಂಸ ಮಾರುವ ಅಂಗಡಿಗಳೇ ಕಾಣಿಸುತ್ತಿದ್ದವು,ಅಲ್ಲಿ ಮಾಂಸವನ್ನು ಗೋಪುರಾಕಾರದ ಹಲ್ಲೆಗಳಾಗಿ ನೇತು ಹಾಕಿದ್ದರು!ಭವ್ಯಾಕಾರದ ಪುರಾತನ ಮನೆಗಳು,ಸೆಕ್ಸ್ ಶಾಪ್ ಎಂದು ಬೋರ್ಡು ತಗುಲಿಸಿಕೊಂಡ ವೇಶ್ಯಾವಾಟಿಕೆಗಳು,ರಸ್ತೆ,ಜನರ ಪರಿವೆಯಿಲ್ಲದೆ ಚುಂಬನಾಲಿಂಗನಗಳಲ್ಲಿ ಮತ್ತರಾದ ಜೋಡಿಗಳು-ಸಾಂಸ್ಕೃತಿಕ ಆಘಾತಕ್ಕೆ ಒಳಗಾಗಿದ್ದ ಮನಸ್ಸು ಲೆಕ್ಕ ಹಾಕಿತು-ಇನ್ನೆಷ್ಟು ದಿನ ವಾಪಸ್ ಹೋಗಲಿಕ್ಕೆ?ನಮ್ಮನ್ನು ಕರೆದೊಯ್ದ ದಾರಿ ದೂರದಲ್ಲಿ ಬೆಟ್ಟದ ಮೇಲೆ ಎದ್ದು ನಿಂತ ಚರ್ಚ್ ಒಂದನ್ನು ತೋರಿಸಿತು.ಅದುವೇ ಸಾಕರ್ ಸಿಯರ್ ಬೆಸಿಲಿಕ .ಬಂದ ದಾರಿಯನ್ನೊಮ್ಮೆ ಹಿಂದಿರುಗಿ ನೋಡಿ ನೆನಪಿಟ್ಟುಕೊಂಡು ಬೆಟ್ಟವೇರಲು ಆರಂಭಿಸಿದೆವು.ಸುತ್ತಲೂ ಕಣ್ಮನ ತುಂಬುವಂತಿದ್ದ ಹಸಿರು,ಬೆಟ್ಟವೇರಲು ಮೆಟ್ಟಿಲುಗಳೂ ಇದ್ದವು,ರಸ್ತೆಯೂ ಇತ್ತು.ನಾವು ಮೆಟ್ಟಿಲು ಮೆಟ್ಟಿಲಾಗಿ ಏರಿದೆವು.ಮೆಟ್ಟಿಲಿನ ಬದಿಗಳಲ್ಲಿದ್ದ ಅರಮನೆಯಂಥಾ ಭವ್ಯ ಮನೆಗಳು, ಏನಿರಬಹುದು, ಯಾರಿರಬಹುದು ಈ ಮನೆಗಳೊಳಗೆ! ಹೇಗಿರಬಹುದು ಅವರ ಜೀವನಕ್ರಮ,ಇಷ್ಟು ದೊಡ್ಡ ಮನೆಯಲ್ಲಿದ್ದೂ ಕೇವಲ ಬ್ರೆಡ್ಡು,ಮಾಂಸ ತಿಂದುಕೊಂಡಿರುತ್ತಾರೆಯೆ?ಅವರ ನಂಬಿಕೆಗಳೇನು ಎಂದು ವಿಚಿತ್ರವಾಗಿ ಯೋಚಿಸುತ್ತಾ ಮೆಟ್ಟಿಲುಗಳನ್ನು ಹತ್ತುತ್ತಿದ್ದೆ, ಜೀವಕ್ಕಿನಿತೂ ಆಯಾಸವೆನಿಸಲಿಲ್ಲ.ಏರುವ ಹಾದಿಯೂ ಇಷ್ಟು ಸುಗಮವಾಗಿರಬಲ್ಲುದೆ?

ಬೆಟ್ಟವೇರಿ ಸಾಕ್ರ್ ಸಿಯರ್ ನ ಅಂಗಳಕ್ಕೆ ತಲುಪಿ ಸುತ್ತಲೂ ನೋದಿದರೆ ಪ್ಯಾರಿಸ್ ನಗರದ ವಿಹಂಗಮ ನೋಟ ಕಾಣಿಸಿ ಆ ಬೃಹತ್ತಿನ ಮುಂದೆ ನಮ್ಮ ನೆಲೆ ಎಷ್ಟು ಕಿರಿದೆಂತೆನಿಸುವಂತಾಯಿತು.ಹೈದ್ರಾಬಾದಿನ ಬಿರ್ಲಾ ಮಂದಿರದ ಅಂಗಳದಿಂದ ಕಾಣುವ ಹೈದರಾಬಾದಿನ ನೋಟ ನೆನಪಾಯಿತು,ಅಲ್ಲಿ ಜನರು ದಟ್ಟೈಸಿದ್ದರು,ಪವಿತ್ರ ಬೆಸಿಲಿಕದ ಅಂಗಳದಲ್ಲೂ ಕಟ್ಟಕಡು ಸಿಗರೇಟು ನಾತವಾಗಿ,ಧೂಮವಾಗಿ ಹರಡಿತ್ತು.ಪ್ರಾರ್ಥನಾಮಂದಿರದ ಒಳಹೊರಗೆ ಜನರು ಓಡಾದುತ್ತಿದ್ದರು.ಚಪ್ಪಲಿಗಳನ್ನು ಕಳಚಬೇಕಾದ ಪ್ರಮೇಯವಿರಲಿಲ್ಲ.ನಾವೂ ಒಳಹೋದೆವು.ಚರ್ಚ್ ಕಾಯರ್ ಎನಿಸುತ್ತದೆ,ಹಾಡುತ್ತಿದ್ದರು,ಆಲಿಸಿದೆ,ಮೌನವಾಗಿ ಕಣ್ಣುಮುಚ್ಚಿ ನಿಂತೆ.ಆ ಸ್ಥಳದ ಬಗ್ಗೆ ಇದ್ದ ಸ್ಮರಣಿಕೆಯನ್ನು ತೆಗೆದುಕೊಂಡು ಹೊರಬಂದೆವು.ಈ ಬೆಸಿಲಿಕವು ಪ್ಯಾರಿಸಿನ ಅತಿ ಎತ್ತರದ ಬೆಟ್ಟ ಮೌಂಟ್ ಮಾರ್ಟರ್ನ ಮೇಲೆ ನಿಂತಿದೆ.ಡೆನಿಸ್ ಎಂಬ ಸಂತನ ಸ್ಮರಣಾರ್ಥವಾಗಿ ಕಟ್ಟಲ್ಪಟ್ಟಿದೆ ಮತ್ತು ೧೮೭೩ರ ನಂತರ ಪ್ರಸಿಧ್ಧಿಗೆ ಬಂದ ಸೇಕ್ರೆಡ್ ಹಾರ್ಟ್ ಆಫ್ ಜೀಸಸ್ ಎಂಬ ಪಂಥಕ್ಕೆ ಇದನ್ನು ಸಮರ್ಪಿಸಲಾಗಿದೆ ಎಂದು ತಿಳಿಯಿತು.ಕೆಲವು ಮಕ್ಕಳಿಗೆ ಅಲ್ಲಿ ನೆರೆದಿದ್ದ ಪಾರಿವಾಳಗಳ ಹಿಂಡಿನ ಒಕ್ಕಲೆಬ್ಬಿಸುವುದು ಒಂದು ಆಟವಾಗಿತ್ತು.ಅವೋ,ಬಲುಮೊಂಡು,ಈ ಮಕ್ಕಳ ಬೆದರಿಕೆಗೆ ಜಗ್ಗುತ್ತಿರಲಿಲ್ಲ.ನಮ್ಮನೆಯಲ್ಲಿ ಹಿತ್ತಲ ಬಾಗಿಲು ತೆರೆದರೆ [ಪಟಪಟನೆ ರೆಕ್ಕೆ ಕೊಡವಿ ಹಾರುತ್ತಾ ನಮ್ಮನ್ನು ಬೆಚ್ಚಿಬೀಳಿಸುತ್ತಿದ್ದ ಪಾರಿವಾಳಗಳೂ ನೆನಪಾದವು.ಬೆಟ್ಟವಿಳಿಯುತ್ತಾ ನಡೆಯುತ್ತಾ ಬಂದ ಹಾದಿಯಿಂದ ಹೊಸ ಹೊಸ ಹಾದಿಗಳ ಜಾಡು ಹಿಡಿತು ಜನರನ್ನು ನೋಡುತ್ತಾ ಸಾಗಿದೆವು. ಹಿಂದೆಂದೋ ಓದಿದ್ದ ಅನುಪಮಾ ನಿರಂಜನರ ‘ಅಂಗೈಯಲ್ಲಿ ಯೂರೊ ಅಮೆರಿಕಾ’ ನೆನಪಾಯಿತು.ಪ್ಯಾರಿಸ್ ಕಲಾವಿದರು,ಸಂಗೀತಕಾರರು,ಚಿಂತಕರ ಸ್ವರ್ಗವೆಂದು ಗಣಿಸಲ್ಪಟ್ಟಿದೆ, ಇದು ಫ್ಯಾಶನ್ ಗೆ ಜಗತ್ಪ್ರಸಿಧ್ಧವಾದ ಸ್ಥಳ,ಇಲ್ಲಿನ ಜನರು ಹೊಸಹೊಸ ಉಡುಗೆ-ತೊಡುಗೆಗಳಿಗೆ ಮತ್ತು ರುಚಿರುಚಿಯಾದ ತಿನಿಸುಗಳಿಗೆ ಎಷ್ಟು ಬೇಕಾದರೂ ಹಣ ಸುರಿಯಬಲ್ಲರು.ಸುಗಂಧದ್ರವ್ಯಗಳೆಂದರೆ ಈ ಜನರಿಗೆ ಬಹಳ ಪ್ರೀತಿ.ನಾಟಕ,ಬ್ಯಾಲೆಗಳು,ಒಪೆರಾಗಳು,ಸಿನಿಮಾಗಳೆಂದರೆ ಜನ ಮುಗಿಬೀಳ್ತಾರೆ ಎಂದು ಅವರು ಬರೆದಿದ್ದರು.ಜೀವನವೆಂದರೆ ಮೋಜು ಮಾತ್ರವೆ? ನಮ್ಮ ಭಾರತೀಯ ಚಿಂತನೆಗಳು ನಮ್ಮೊಳಗನ್ನು ಶೋಧಿಸುವ ಮಾರ್ಗಕ್ಕೆ ನಮ್ಮನ್ನು ಹಚ್ಚುತ್ತವೆ,ಆ ನಿಟ್ಟಿನಲ್ಲಿ ಇವರ ಚಿಂತನೆಗಳೇನಿರಬಹುದು ಎಂಬ ಕುತೂಹಲ ಮೂಡಿತು.ಇನ್ನೂ ಕೆಲವು ಮ್ಯುಸಿಯಂಗಳು,ಅವರ ಕಲಾಕೃತಿಗಳು ನೋಡಿದ್ದರೆ ಆ ಬಗ್ಗೆ ಏನಾದರೂ ತಿಳಿಯಬಹುದಿತ್ತೇನೋ,ಆದರೆ ಅದಕ್ಕೆ ಅವಕಾಶ ಇರಲಿಲ್ಲ.ದಾರಿಯಲ್ಲಿ ಭಾರತೀಯ ರೆಸ್ಟೊರೆಂಟ್ ಕಾಣಿಸಿತು,ಹೊರಗೆ ಕೊರೆಯುವ ಚಳಿ,ಒಳಗೆ ಸುಡುವ ಹಸಿವಿನ ಬೆಂಕಿ-ಈ ಹೊಟೆಲ್ ಕಂಡ ಕೂಡಲೇ ನಮ್ಮೆಲ್ಲರ ಮೊಗಗಳೂ ಅರಳಿದುವು.ಒಳಹೋಗಿ ನೋಡಲು ಅದು ತಮಿಳರದ್ದೆಂದು,ಮಾಂಸಾಹಾರ,ಸಸ್ಯಾಹಾರ ಎರಡೂ ಇರುವ ಹೊಟೆಲ್ ಎಂದೂ ತಿಳಿಯಿತು.ಸದ್ಯ,ಬರ್ಗರ್,ಬ್ರೆಡ್ ತಿನ್ನುವುದು ತಪ್ಪಿತಲ್ಲ ಎಂದು ಖುಷಿಯಲ್ಲಿ ರೊಟ್ಟಿ,ಪಲ್ಯಗಳೊಂದಿಗೆ  ಊಟ ಮುಗಿಸಿದೆವು.ಸಪ್ಪೆಯೂಟ ಮಾಡುವ ನನಗೇ ಆ ಊಟ ತೀರಾ ಸಪ್ಪೆಯಾದರೂ ಅಮೃತಸಮಾನವೆನಿಸಿತು.೪ ಘಂಟೆಯ ರೈಲಿನಲ್ಲಿ ಸ್ಟುಟ್ ಗಾರ್ಟಿಗೆ ಹೊರಟು,ಹೊಟೇಲ್ ಸೇರಿದಾಗ ಸಂಜೆ ೮ ಘಂಟೆಯಾದರೂ ನಮ್ಮೂರಲ್ಲಿ ಸಂಜೆ ೫ ಗಂಟೆಗಿರುವಷ್ಟೇ ಸ್ಫುಟತೆ.

ಮತ್ತೆ ಸ್ಟುಟ್ ಗಾರ್ಟ್

ನಮಗೆ ಸ್ಯೂಟ್ ನ್ನು ಅಣಿಗೊಳಿಸಿ ನಾವು ಹಿಂದಿನ ದಿನ ಕೋಣೆಯಲ್ಲಿರಿಸಿ ಹೋದ ಸಾಮಾನುಗಳನ್ನು ತಾನೇ ಅಲ್ಲಿಗೆ ಸಾಗಿಸಿರುವುದಾಗಿ ಸ್ವಾಗತಕಾರಿಣಿಯು ತಿಳಿಸಿದಳು. ನಮ್ಮಲ್ಲಿರುವಂತೆ ಹೊಟೆಲ್ಗಳಲ್ಲಿ, ರೆಸ್ಟುರಾಂಟ್ಗಳಲ್ಲಿ ನೌಕರರನ್ನು ನಿರೀಕ್ಷಿಸುವುದು ಇಲ್ಲಿ ಸಾಧ್ಯವಿಲ್ಲ. ಮಾಲೀಕರೇ ಅಡಿಗೆಯಾತ, ಸ್ವಾಗತಕಾರ, ನೌಕರ…ಹೀಗೆ ಅನೇಕ ಪಾತ್ರಗಳನ್ನು ನಿರ್ವಹಿಸಬೇಕಾಗುತ್ತದೆ, ಆದರೂ ನಮ್ಮ ಹೋಟೆಲ್ ನಲ್ಲಿ ೩-೪ ಸಹಾಯಕರಿದ್ದರು.ನಮಗೆ ನೀಡಲಾದ ಸ್ಯೂಟ್ ಸುಂದರವಾಗಿ ಅಚ್ಚುಕಟ್ಟಾಗಿತ್ತು. ಕೆಳಗೆ ಹಾಲ್ ಮತ್ತು ಅಡಿಗೆಮನೆ, ವಿಶಾಲವಾದ ಕಿಟಕಿಗಳು, ದುಂಡುಮೇಜು, ಕುರ್ಚಿಗಳು, ಫ್ರಿಜ್, ೨ ಮಂಚಗಳು, ಅದರ ಮೇಲೆ ಕುಳಿತರೆ ಹುದುಗಿಸಿಕೊಳ್ಳುವ ಹಾಸಿಗೆಗಳು,ನೀಳವಾದ ಏಣಿಯನ್ನೇರಿ ಮೇಲೆ ಹೋದರೆ ಅಲ್ಲಿಯೂ ಒಂದು ಕೋಣೆ, ೨ ಮಂಚಗಳು, ಅವುಗಳಿಗೆ ಉಗುರಿನಿಂದ ಮುಟ್ಟಿದರೆ ಉರಿಯುವ ಬೆಡ್ ಲ್ಯಾಂಪ್ ಗಳು,ಅಲ್ಲಿಗೆ ಹೊಂದಿಕೊಂಡಂತೆ ಸ್ನಾನ,ಶೌಚದ ಕೋಣೆಗಳು,ಕಿಟಕಿಯಿಂದ ಕಾಣುತ್ತಿದ್ದ ಸುಂದರ ಬೀದಿಗಳು,ಚಿಕ್ಕ-ದೊಡ್ಡ ಹಂಚಿನ ಮನೆಗಳು,—ಹಿಂದೆ ಓದಿ ಹೆಸರು ಮರೆತಿರುವ ಯುರೋಪಿಯನ್ ಕಥೆಯೊಂದರ ನೆನಪು, ಅದರಲ್ಲಿ ಬರುವ ಪುಟ್ಟ ಹುಡುಗಿಯ ನೆನಪು ಮಾಡಿಕೊಳ್ಳುತ್ತಾ ಇವನ್ನೆಲ್ಲ ವೀಕ್ಷಿಸಿದೆ.ಇವರೆಷ್ಟು ಚೆನ್ನಾಗಿ ಪ್ಲಾನ್ ಮಾಡುತ್ತಾರೆ, ಇವರಿಗೆ ಜೀವನದಲ್ಲಿ ಕೊರತೆ ಎಂಬುದಿಲ್ಲವೆ,ಇದ್ದರೆ ಯಾವ ಸ್ತರದ್ದು, ಒಂದೂ ಅರ್ಥವಾಗಲಿಲ್ಲ. ಇಲ್ಲಿನ ಜನರು ಕಪಟ, ಅಶಿಸ್ತು, ಕೊಟ್ಟ ಮಾತನ್ನು ಮುರಿಯುವಿಕೆ, ಬೇಜವಾಬ್ದಾರಿಗಳನ್ನು ಸಹಿಸರು, ಯಾವ ಕೆಲಸವನ್ನೇ ಆಗಲಿ, ಅದರಲ್ಲಿ ನೂರಕ್ಕೆ ನೂರರಷ್ಟು ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ ಎಂದು ಶೇಖರ್ ಹೇಳುತ್ತಾ ಹೋದರು.

ಮೇ.೧೪, ಕೊರೆಯುವ ಚಳಿ ಸಾಲದೆಂದು ಬೆಳಿಗ್ಗೆಯಿಂದಲೇ ಹನಿಯುತ್ತಿದ್ದ ಮಳೆ, ನೆಂದುಕೊಂಡು ಪ್ರಾಣಿಸಂಗ್ರಹಾಲಯ ನೋಡಲು ಹೊರಟೆವು. ಇಲ್ಲಿನ ರೈಲುಗಳೀಗ ನಮಗೆ ಪರಿಚಿತವಾಗಿದ್ದವು.ಮಕ್ಕಳಿಗೆ Cannstatt,Mohringen,Feierbauch…ಇಂಥಾ ಹೆಸರುಗಳೆಲ್ಲ ಪರಿಚಿತವಾಗಿದ್ದವು, ನನಗೆ ಅಷ್ಟು ಬೇಗ ನಾಲಗೆ ಮಗುಚುತ್ತಿರಲಿಲ್ಲ. ವಿಲ್ಹೆಲ್ಮ ಪ್ರಾಣಿಸಂಗ್ರಹಾಲಯ ಮತ್ತು ಸಸ್ಯೋದ್ಯಾನ ಬಹಳ ವಿಶಾಲವಾಗಿತ್ತು. ನೋಡಲು ಕಡಿಮೆಯೆಂದರೂ ೫ ಗಂಟೆ ಬೇಕಿತ್ತು. ಒಳಪ್ರವೇಶಿಸುತ್ತಿದ್ದಂತೆಯೇ ಟ್ಯುಲಿಪ್ ಹೂಗಳು, ಅವುಗಳಷ್ಟೇ ಸುಂದರವಾದ ಫ್ಲೆಮಿಂಗೋ ಹಕ್ಕಿಗಳು ಸ್ವಾಗತಿಸಿದುವು. ಎಷ್ಟು ವಿಧದ ಹಕ್ಕಿಗಳು, ಅದೇನು ಅದ್ಭುತವಾದ ವರ್ಣಸಂಯೋಜನೆ, ಕೆಂಪು, ನೀಲಿ, ಹಸಿರು ಮಿಶ್ರಿತ ಮೈಗೆ ಹಸಿರು, ಕೆಂಪು ಕೊಕ್ಕುಳ್ಳ ಗಿಳಿಯಂತಹ ಪಕ್ಷಿ, ಮೈಯಿಡೀ ಗುಲಾಬಿ ಬಣ್ಣದ ಹಕ್ಕಿ, ಮಣ್ಣಿನ ಬಣ್ಣದ ತುಪ್ಪಳದಂಥಾ ಮೈಯುಳ್ಳ ಹಕ್ಕಿ,ಇವೆಲ್ಲ ನಿಜವಾದ ಬಣ್ಣವೋ ಅಥವಾ ಸವರಿದ ಬಣ್ಣವೋ! ಬ್ಯೂಟಿಪಾರ್ಲರ್ ಗಳಿಗೆ ಹೋಗಿ ತಲೆಗೂದಲನ್ನು ನಾನಾವಿಧವಾದ ಬಣ್ಣಗಳಿಂದ ಅಲಂಕರಿಸಿಕೊಳ್ಳುವ ಹೆಂಗಸರನ್ನು ನೆನಪಿಸಿಕೊಂಡೆ. ಅವುಗಳ ಠೀವಿ, ನಡೆಯುವ ಗತ್ತು ನೋಡಿದಾಗ ಆ ಪಕ್ಷಿ ಸಂಕುಲದಲ್ಲಿ ಮಹಿಳಾ ಪ್ರಾಬಲ್ಯವೇ ಜಾಸ್ತಿಯೆನಿಸುತ್ತಿತ್ತು. ನೋಡಿದಷ್ಟೂ ಮುಗಿಯದ ಹಕ್ಕಿಗಳ ವೈವಿಧ್ಯವನ್ನಲ್ಲಿ ನೋಡಿದೆವು.ಅವುಗಳೆಲ್ಲ ಸ್ವಾಭಾವಿಕವಾಗಿ ಸ್ವಚ್ಛಂದವಾಗಿ ವಿಹರಿಸುತ್ತಿದ್ದವು. ಯಾವೊಬ್ಬ ಪ್ರವಾಸಿಯೂ ಅವುಗಳಿಗೆ ತೊಂದರೆಯನ್ನು ಕೊಡುತ್ತಿರಲಿಲ್ಲ. ಬಂಧನದಲ್ಲಿದ್ದರೂ ಸ್ವತಂತ್ರವಾಗಿರುವಂತೆ ತೋರುವ ಗೊರಿಲ್ಲಾಗಳು ಮತ್ತು ಅವುಗಳ ಕುಲಬಾಂಧವರು ಇದ್ದರು.ಅವುಗಳಿಗೆ ಲಾಗ ಹೊಡೆಯಲು ಉಯ್ಯಾಲೆ, ಏರಲು ಮರಗಳೂ, ತಿನ್ನಲು ಕಾಳು, ಹಣ್ಣು,ತರಕಾರಿಗಳು, ತಬ್ಬಿಕೊಂಡು ಮುತ್ತಿಟ್ಟು, ಪ್ರೀತಿ ತೋರಲು ಮನುಕುಲದ ಮಹಿಳೆಯರು–ಏನುಂಟು, ಏನಿಲ್ಲ! ತಾವು ಬಂಧಿತರೆಂಬ ಅರಿವು ಇವುಗಳಿಗಿರಬಹುದೆ? ಕಾಡಿನಲ್ಲಿ ಬಿಟ್ಟರೆ ತಮ್ಮ ಮೂಲಪ್ರವೃತ್ತಿ ನೆನಪಾಗಬಲ್ಲುದೆ?ಜರ್ಮನ್ನರಿಗೆ ಆ ಪ್ರಾಣಿಗಳ ಮೇಲಿರುವ ಕಾಳಜಿ, ಅವುಗಳ ಬಗಿಗಿನ ಶ್ರಧ್ಧೆ, ಅವುಗಳ ವಾಸಸ್ಥಾನಗಳನ್ನು ಶುಭ್ರವಾಗಿಡುವುದರ ಬಗೆಗಿನ ನಿಷ್ಠೆ ಶ್ಲಾಘನೀಯ. ಪ್ರಾಣಿಗಳಲ್ಲೂ ವೈವಿಧ್ಯ,ಜಿರಾಫೆಗಳಿಂದ ಹಿಡಿದು ಮಂಗೋಲಿಯನ್ ಕುದುರೆಗಳ ತನಕವೂ ನೋಡಿದೆವು. ನಮ್ಮ ದೇಶದಿಂದ ಕರೆದೊಯ್ದ ಆನೆಗಳೂ ಇದ್ದವು, ಅವುಗಳಲ್ಲಿ ಕೆಲವಕ್ಕೆ ಭಾರತೀಯ ಹೆಸರುಗಳೂ ಇದ್ದವು, ಗಣೇಶನ ಕತೆಯನ್ನು ಜರ್ಮನ್,ಇಂಗ್ಲಿಷ್ ಭಾಷೆಗಳಲ್ಲಿ ಮುದ್ರಿಸಿ ಅಂಟಿಸಿದ್ದರು.ಈ ಉಷ್ಣದೇಶದ ಪ್ರಾಣಿಗಳಿಗೆ ಶೀತಪ್ರದೇಶದಲ್ಲಿ ಬದುಕಲು ಕೃತಕವಾಗಿ ಬೆಚ್ಚಗಿನ ವಾತಾವರಣವನ್ನು ನಿರ್ಮಾಣ ಮಾಡಿದ್ದರು. ನೀರಾನೆ, ಘೇಂಡಾಮೃಗಗಳನ್ನೂ ನೋಡಿದೆವು, ಆದರೆ ನಮಗೆ ಹಿಮಕರಡಿ ಪ್ರಮುಖ ಆಕರ್ಷಣೆಯಾಗಿತ್ತು. ಜಿನುಗು ಮಳೆಯಿಂದ ತೊಂದರೆ ಇದ್ದರೂ ಅಲ್ಲಿನ ಪ್ರಶಾಂತ ವಾತಾವರಣ, ಹಸಿರಿನ ಸೊಬಗು, ಹಕ್ಕಿಗಳ ಕಲರವ ಆ ತೊಂದರೆಯನ್ನು ಮರೆಸಿತು. ಏರು-ತಗ್ಗುಗಳಿಂದ ಕೂಡಿದ ಆ ಪ್ರದೇಶದಲ್ಲಿ ನಡೆಯುವ ವ್ಯಾಯಾಮವೂ ಖುಷಿಯೆನಿಸುತ್ತಿತ್ತು. ಹಸಿರು ಮನೆಯಲ್ಲಿ ಸಸ್ಯಶಾಸ್ತ್ರದ ಅಧ್ಯಯನಕ್ಕೆ ಬೇಕಾದ ಗಿಡ ಮರಗಳನ್ನು ಸಂರಕ್ಷಿಸಿದ್ದರು. ಆದರೆ ನಾವು ಅತ್ತ ಹೋಗಲಿಲ್ಲ. ಪ್ರಾಣಿಗಳನ್ನು ನೋಡುವುದು ಕುತೂಹಲಕಾರಿಯಾದರೂ ಕಾಡಲ್ಲಿರಬೇಕಾದ ಇವು ನಮಗಾಗಿ  ಇಲ್ಲಿವೆಯಲ್ಲ ಅಂತ ತಪ್ಪಿತಸ್ಥ ಭಾವನೆಯೂ ನಮ್ಮಲ್ಲಿತ್ತು. ಸಾಕಷ್ಟು ಹೊತ್ತನ್ನು ಅಲ್ಲಿ ಕಳೆದು ಮನಸ್ಸಿಲ್ಲದ ಮನಸ್ಸಿನಿಂದ ಹೊರಗೆ ಸಿಟಿಯೊಳಗೆ ಬಂದು ಬರ್ಗರನ್ನು ತಿಂದು ಪೇಟೆ ಬೀದಿಗಳಲ್ಲಿ ಅಡ್ಡಾಡಿ ಪುರಾತನ ಕಟ್ಟಡಗಳನ್ನು, ಹಲವು ರೀತಿಯ ಜನರನ್ನು ವಿಸ್ಮಯದಿಂದ ನಿರುಕಿಸುತ್ತಿದ್ದೆವು. ಈ ನಡುವೆ ನಮ್ಮ ಮೈದಾ ದೋಸೆಯಂಥ ತಿಂಡಿ-ಕ್ರೇಪೆ-ಸಿಗುತ್ತೆ ಅಂದರು ಪತಿರಾಯರು. ಹಾದಿಬದಿಯಲ್ಲಿ ನಮ್ಮಲ್ಲಿ ಭೇಲ್ಪುರಿ,ಪಾನಿಪೂರಿಗಳನ್ನು ಮಾರುವಂತೆ ಆ ದೋಸೆ ಮತ್ತು ಇನ್ನೇನೋ ತಿನಿಸುಗಳನ್ನು ಮಾರುತ್ತಿದ್ದರು.ಆ ಮಹಿಳೆ ಹಿಟ್ಟನ್ನು ಹಂಚಿನಮೇಲೆ ಸುರಿದು,ತಿರುವಿ ಅದಕ್ಕೆ ಹುರಿದ ನೀರುಳ್ಳಿ ತುಂಡುಗಳನ್ನು ಹಾಕಿ,ಅದರ ಮೇಲೆ ಒಂದಿಷ್ಟು ಉಪ್ಪು,ಕಾಳುಮೆಣಸಿನ ಪುಡಿಯನ್ನು ಸುರಿದು ಕೈಗಿತ್ತಳು, ರುಚಿಯಾಗಿತ್ತು, ನಮ್ಮ ಹಿಂದಿದ್ದ ಮಹಿಳೆಗೆ ಅದೇ ರೀತಿ ದೋಸೆ ಎರೆದು ಹುರಿದ ನೀರುಳ್ಳಿಗೆ ಬದಲಾಗಿ ಮಾಂಸದ ತುಣುಕುಗಳು,ಬಾಳೇಹಣ್ಣಿನ ತುಂಡುಗಳನ್ನಿಟ್ಟು ಕೊಟ್ಟಳು……ತೀರಾ ಆಳಕ್ಕೆ ಇಳಿಯಬಾರದು!!

ಒಂದೆಡೆ ನೆಲದಲ್ಲಿ ಬೇರೆಬೇರೆ ದೇಶಗಳ ಪ್ರಮುಖ ನಗರಗಳು ಎಷ್ಟು ದೂರದಲ್ಲಿವೆ ಎಂದು ಸೂಚಿಸುವ ಚಿತ್ರಗಳನ್ನು ಬಿಡಿಸಿದ್ದರು.ನಮ್ಮ ಮುಂಬೈ ನಗರದ ಹೆಸರು ಅದು ೬,೦೦೦ ಕಿಮೀ ದೂರದಲ್ಲಿದೆ ಎಂದು ಚಿತ್ರಿಸಿರುವುದು ನೋಡಿ ಏನೋ ಖುಷಿಯಾಯಿತು. ಇನ್ನೊಂದೆಡೆ ಒಬ್ಬಾಕೆ ವಾದ್ಯ ನುಡಿಸುತ್ತಿದ್ದಳು,ಜನರು ಆಕೆಯ ಮುಂದಿನ ಡಬ್ಬಿಗೆ ಹಣ ಹಾಕುತ್ತಿದ್ದರು. ಅವಳನ್ನು ನೋಡಿದರೆ ಅಂದವಾಗಿ ಸಿಂಗರಿಸಿಕೊಂಡ ಕಾಲೇಜು ಹುಡುಗಿಯಂತಿದ್ದಳು. ಹೀಗೆ ಆ ನಗರದ ಕೆಲವು ಜೀವನಚಿತ್ರಗಳನ್ನು ನೋಡಿ ಸಂಜೆ ಹೊಟೆಲನ್ನು ಸೇರಿದೆವು. ನಮ್ಮ ಬಟ್ಟೆಗಳನ್ನು ಒಗೆದುಕೊಳ್ಳಲು ನೆಲಮಾಳಿಗೆಯಲ್ಲಿದ್ದ ವಾಶಿಂಗ್ ಮೆಶಿನ್ನನ್ನು ಹಿಂದಿನ ದಿನವೇ ಕಾದಿರಿಸಲಾಗಿತ್ತು,ಅದಕ್ಕೆ ಬಟ್ಟೆಗಳನ್ನು ತುಂಬಿಸಿ ತೆಗೆಯುವ ಹೊಣೆಯನ್ನೆಲ್ಲ ಪತಿಯೇ ಹೊತ್ತರು.

ಗಿರಿನಗರಿ ಸ್ವಿಟ್ಜರ್ ಲ್ಯಾಂಡ್

ಮೇ ೧೫ಕ್ಕೆ ಬೆಳಿಗ್ಗೆ ಸ್ವಿಟ್ಜರ್ ಲ್ಯಾಂಡಿಗೆ ರೈಲಿನಲ್ಲಿ ಹೊರಟೆವು, ಸ್ಟುಟ್ ಗಾರ್ಟಿನಿಂದ ಸ್ವಿಟ್ಜರ್ ಲ್ಯಾಂಡಿನ ಜ್ಯೂರಿಕ್ ಗೆ (Zurich) ಸುಮಾರು ೪ ಘಂಟೆಗಳ ಪಯಣ, ದಾರಿಯುದ್ದಕ್ಕೂ ನದಿಗಳು, ಉದ್ದಾನುದ್ದದ ಸುರಂಗ ಮಾರ್ಗಗಳು, ಚೆಂದಚೆಂದದ ಇಳೀಜಾರು ಹಂಚಿನ ಮನೆಗಳು, ಸ್ವಚ್ಚ, ಸುಂದರ ರಸ್ತೆಗಳು.ನೀರಿನ ಸಮಸ್ಯೆ, ವಿವಾದಗಳಂಥವು ಇವರನ್ನು ಕಾಡಲಾರವು.ಭೂತಾಯಿಗೆ ಎಷ್ಟೊಂದು ಮಗ್ಗುಲುಗಳು, ಎಷ್ಟು ವಿಸ್ತಾರ! ಜೀವನದ ಅನುಭವಗಳು,ಭೂಮಿಯ ಮಗ್ಗುಲುಗಳನ್ನು ಬೆಸೆಯುವ ರೂಪಕಕ್ಕೆ ಮನಸ್ಸನ್ನು ಮಥಿಸುತ್ತಾ ಮಥಿಸುತ್ತಾ ಪಕ್ಕದಲ್ಲಿ ಕಾಣುತ್ತಿದ್ದ ದೃಶ್ಯವೈಭವದಲ್ಲಿ ನನ್ನೆಲ್ಲಾ ಯೋಚನೆಗಳು ಸೇರಿಹೋದವು. ಜ್ಯೂರಿಕ್ನಲಿಳಿದು ನಮ್ಮ ಗುರಿಯಾದ ಊರು ಲ್ಯೂಸರ್ನ್ ಗೆ ಮಹಡಿರೈಲಿನಲ್ಲಿ ೪೫ ನಿಮಿಷ ಪ್ರಯಾಣಿಸಿದೆವು.ಯುರೋಪಿನ ಚಳಿ ಆ ವೇಳೆಗೆ ತಕ್ಕಮಟ್ಟಿಗೆ ಅಭ್ಯಾಸವಾಗಿದ್ದ ಕಾರಣ ಲ್ಯೂಸರ್ನನ ಚಳಿ ನನ್ನನ್ನು ಹೆದರಿಸಲಿಲ್ಲ, ಬೆದರಿಸಲಿಲ್ಲ, ಮೈ ಮುದುಡಿಸಿತಷ್ಟೆ. ಸ್ವಿಟ್ಜರ್ ಲ್ಯಾಂಡ್ ಆಲ್ಪ್ಸ್ ಪರ್ವತಗಳ ತವರು-ಶರ್ಟುಗಳ ಮೇಲೆ ಶರ್ಟುಗಳನ್ನು ಧರಿಸಿ,ಸ್ವೆಟರನ್ನೂ ಧರಿಸಿ ಮೇಲೆ ಜಾಕೆಟನ್ನು ತೊಟ್ಟಿದ್ದೆವು. ಚಳಿಯನ್ನು ಊಹಿಸುವಲ್ಲಿ ನನ್ನ ಗಂಡ ಎಡವಿದ್ದರು, ಹಾಗಾಗಿ ಥರ್ಮಲ್ ಉಡುಪನ್ನು ತಂದಿರಲಿಲ್ಲ. ಲ್ಯೂಸರ್ನ್ ಸುಂದರ ಊರು, ಸ್ವಿಟ್ಜರ್ ಲ್ಯಾಂಡಿನಲ್ಲಿ ಬಹಳ ಪ್ರಸಿಧ್ದವಾದ ಊರು, ಲ್ಯೂಸರ್ನ್ ಸರೋವರದಿಂದಾಗಿ ಈ ಹೆಸರು, ಅಂತೆಯೇ ಹೆಚ್ಚಿನ ಜನಸಂಖ್ಯೆ ಇರುವ ಊರು. ಟ್ಯಾಕ್ಸಿಯಲ್ಲಿ ನಾವಿಳಿದುಕೊಳ್ಳಬೇಕಿದ್ದ ಹೊಟೆಲನ್ನು ತಲುಪಿದೆವು.ಅಲ್ಲಿ ಕೋಣೆಯನ್ನು ಶುಚಿಗೊಳಿಸುತ್ತಿದ್ದ ಸುಂದರ ಮಹಿಳೆಯನ್ನು ನಮ್ಮ ಕೋಣೆಯ ಬಗ್ಗೆ ಕೇಳಲಾಗಿ, `sorry, I can’t speak English’ ಎಂದು ಹೇಳಿ ತಡವರಿಸಿಕೊಂಡು ವಿಶಿಷ್ಟ ಹಾವಭಾವಗಳೊಡನೆ ನಿಮ್ಮ ಕೋಣೆಯನ್ನು ಶುಚಿಗೊಳಿಸಲು ಸ್ವಲ್ಪ ಸಮಯ ಕೊಡಿ,ಲಗ್ಗೇಜನ್ನು ಆ ಕೋಣೆಯಲ್ಲಿರಿಸಿ ಊರುನೋಡಿ ಬನ್ನಿ’ ಎಂದಳು. ಸಾಮಾನುಗಳನ್ನು ಕೋಣೆಯಲ್ಲಿಡಲು ಹೋದ ನಮಗೆ ಅಲ್ಲಿ ಶುಚಿಗೊಳಿಸಲೇನಿದೆ ಎಂದು ಅಚ್ಚರಿಯಾಯಿತು. ಮುದ್ದಾದ, ಪುಟ್ಟ ಕೋಣೆ, ಚೆನ್ನಮ್ಮ ಮತ್ತು ಮೂರುಕರಡಿಗಳ (Goldilocks and three bears) ಕತೆಯಲ್ಲಿ ಬರುವಂಥಾ ಮಂಚಗಳು,ಅಲ್ಲಿಂದ ಹೊರಬಂದು ಆ ಮಹಿಳೆಯಿಂದ ಬೀಳ್ಕೊಳ್ಳುವಾಗ ಪುಟಪುಟನೆ ಓಡಿ,ನಮಗೊಂದು ಛತ್ರಿಯನ್ನು ತಂದುಕೊಟ್ಟು ‘bad weather’ ತುಟಿಯುದ್ದ ಮಾಡಿದಳು. ಆಕೆಯ ಸೌಜನ್ಯಪೂರಿತ ವರ್ತನೆ ಬಹಳ ಹಿತವೆನಿಸಿತು.

ಬೆಟ್ಟಗಳ ನಡುವಿನ ಸುಂದರ ರಸ್ತೆಗಳಲ್ಲಿ ನಡೆಯುವುದು ಚೇತೋಹಾರಿಯಾಗಿತ್ತು. ವಿರಳ ಜನಸಂದಣಿಯ ರಸ್ತೆಗಳು, ಜಿನುಗುಮಳೆ, ಕುಳಿರ್ಗಾಳಿಯನ್ನು ಸವಿಯುತ್ತಾ ಯಾವುದೋ ರಾಗವನ್ನು ಗುನುಗುತ್ತಾ ನಡೆದು, ದಾರಿಯಲ್ಲೆಲ್ಲೋ pizza ತಿಂದು ಮತ್ತೆ ನಡೆದು ಲ್ಯೂಸರ್ನ್ ಸರೋವರದ ಬಳಿ ಬಂದೆವು, ಹಸಿರಿನ ವಿಜೃಂಭಣೆಯನ್ನು ನೋಡಿ ನಮ್ಮ ಪಂಪಾಸರೋವರವೂ ಹೀಗಿದ್ದಿರಬಹುದೆ ಎಂದು ಯೋಚಿಸಿದೆ.ಲ್ಯೂಸರ್ನ್ ಸರೋವರ ಸುಮಾರು ೧೨೦ ಚದರ ಕಿಮೀ ನಷ್ಟಿರಬಹುದು ಎಂದು ಯಾರೋ ಹೇಳಿದರು.ಅಲ್ಲಿ ಸ್ಟೀಮರ್ ಗಳು ಸಿಧ್ಧವಾಗಿ ನಿಂತಿದ್ದುವು.ನೆಲದ ಮೇಲಿನ ಪ್ರಯಾಣ ಜಾಸ್ತಿ ಸಮಯ ತೆಗೆದುಕೊಳ್ಳುವುದರಿಂದ ಈ ಸರೋವರದ ಆಸುಪಾಸಿನ ಹಳ್ಳೀಯವರು ಸ್ಟೀಮರುಗಳಲ್ಲಿ ಪ್ರಯಾಣಿಸುತ್ತರೆ. ಲ್ಯೂಸರ್ನ್ ನಿಂದ ಆಲ್ಪ್ನಾಟ್ ಸ್ಟಡ್ ಗೆ ನಾವು ಹತ್ತಿದ ಸ್ಟಿಮರ್ ಹೊರಟಿತ್ತು.ಆ ಊರನ್ನು ತಲುಪಿ ಮರಳಿ ಲ್ಯೂಸರ್ನ್ ಗೆ ಬರಲು ಒಟ್ಟು ಕಾಲಾವಧಿ ಮೂರು ಘಂಟೆ ಅಂದರು. ೩ ಗಂಟೆ ಸುತ್ತಲಿನ ಹಸುರು ನೋಡುತ್ತಾ ಸರೋವರದಲ್ಲಿ ಪ್ರಯಾಣಿಸುವುದು ಆಕರ್ಷಣೀಯವೆನಿಸಿತು.ನಮ್ಮಂತೆ ಭಾರತೀಯ ಪ್ರವಾಸಿಗರೂ ಹಲವರಿದ್ದರು ಅಲ್ಲಿ.ಟಿಕೆಟ್ ಕೊಂಡು ಒಳಪ್ರವೇಶಿಸಿದೆವು. ಕುರ್ಚಿ,ಮೇಜುಗಳ ವ್ಯವಸ್ಥೆ,ತಿಂಡಿ ತೀರ್ಥದ ವ್ಯವಸ್ಠೆ ಎಲ್ಲವೂ ಇತ್ತು. ಸ್ಟೀಮರುಹೊರಡುವ ಮುನ್ನ ನಾವೆಲ್ಲ ಮೇಜುಗಳ ಸುತ್ತ ಕುಳಿತರೂ ಅದು ಹೊರಟಾಗ ನಾವೂ ಮೇಲೆದ್ದು ಹೊರಬಂದು ಸ್ಟೀಮರಿನ ಜಗುಲಿಯಲ್ಲಿ ಅಡ್ಡಾಡತೊಡಗಿದೆವು, ಮಳೆ ಹನಿಯುತ್ತಿದ್ದರೂ ಹೊರಗೆ ಕುಳಿತು ಪ್ರಕೃತಿಯ ಸೊಬಗು ಸವಿಯುವುದಕ್ಕೆ ತೊಂದರೆಯಾಗಲಿಲ್ಲ. ಆ ಸೌಂದರ್ಯ ನೋಡಿ ಉಂಟಾದ ಆನಂದವನ್ನು ಬಣ್ಣಿಸಲಾದರೂ ನಾನು ಕವಯತ್ರಿಯಾಗಬೇಕಿತ್ತು. ದೂರದ ಬೆಟ್ಟದಲ್ಲಿ ಚಂದದ, ಪುಟ್ಟ ಪುಟ್ಟ ಮನೆಗಳು, ಹಿಂದೆ ಗುಡ್ಡವನ್ನು ಆವರಿಸಿರುವ ಮಂಜಿನ ಹೊದಿಕೆ, ಆ ಗುಡ್ಡದ ಆಚೆ ಮಂಜಿನ ಮನೆಯಿದೆಯೆ? ಇದೆ ಎಂದೆ ಮಗನ ಬಳಿ.ಲ್ಯುಸರ್ನ್ ಸರೋವರದ ಸುತ್ತ ಕಾಣುತ್ತಿದ್ದ ರೆಗಿ ಮತ್ತು ಪಿಲಾಟಸ್ ಬೆಟ್ಟಗಳನ್ನು ನೋಡುತ್ತಾ ನೋಡುತ್ತ ೩ ಘಂಟೆಗಳು ಕಳೆದದ್ದೇ ತಿಳಿಯಲಿಲ್ಲ. ಮರುದಿನ ಬೆಳಿಗ್ಗೆ ಹೊಟೆಲನ್ನು ಖಾಲಿಮಾಡಿ, ಲಗ್ಗೇಜನ್ನು ರೈಲ್ವೆಸ್ಟೇಶನ್ನಿನ ಲಾಕರಿನೊಳಗಿರಿಸಿ ಮೌಂಟನ್ ಟೈನ್ ಹತ್ತಿ ಕುಳಿತೆವು, ಹೊಟೆಲ್ ನಿಂದ ಹೊರಡುವ ಮುನ್ನ ನಿನ್ನೆ ನಮಗೆ ಕೊಡೆ ಕೊಟ್ಟು, ಇಂದು ನಮಗೆ ಸೋಡಾ ನೀರು ಕುಡಿಯಲಾಗುವುದಿಲ್ಲವೆಂದು ಬಾಟಲಿಗೆ ಕುಡಿಯುವ ನೀರು ತುಂಬಿಸಿ ಕೊಟ್ಟ ಆ ಮಹಿಳೆಗೆ ಹಸ್ತಲಾಘವವನ್ನಿತ್ತು, ನಂತರ ಕೈ  ಜೋಡಿಸಿ ಕೃತಜ್ಞತೆ ಸಲ್ಲಿಸಿದೆ.

ಮಂಜಿನಮನೆಗೆ ಎಷ್ಟೊಂದು ದಾರಿ

ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯ ತನಕ ಲ್ಯೂಸರ್ನ್ ಮತ್ತು ಐಂಗೆಲ್ ಬರ್ಗ್ ನಡುವೆ, ಘಂಟೆಗೊಂದರಂತೆ ರೈಲುಗಳು ಓಡಾಡುತ್ತವೆ.ನಮ್ಮ ರೈಲು ಸುರಂಗಮಾರ್ಗಗಳನ್ನು ಹಾದು ಬೆಟ್ಟವೇರತೊಡಗಿತು. ದೂರದಲ್ಲಿ ಲ್ಯೂಸರ್ನ್ ಸರೋವರ,ಹಿಂದಿನ ದಿನ ನಾವು ಸ್ಟಿಮರ್ ನಲ್ಲಿ ಕುಳಿತು ಕಂಡಿದ್ದ ಊರುಗಳು ಕಾಣಿಸುತ್ತಿದ್ದವು.ರೈಲಿನಲ್ಲಿ ಬೆಟ್ಟವೇರುವುದನ್ನು ನೋಡಲು ನನ್ನ ಕಣ್ಣುಗಳು ಕಿಟಿಕಿಗೆ ಒತ್ತಿಕೊಂಡಿದ್ದವು, ಹೀಟರ್ ಇದ್ದ ಕಾರಣ ಬಹಳ ಹಿತವಾಗಿತ್ತು.ಕಣ್ಣು ಕೆಳಗೆ ನೋಡುತ್ತಿತ್ತು,ಮನಸ್ಸು ಭಾವವಿಮಾನದಲ್ಲಿ ಹಾರುತ್ತಿತ್ತು, ಕೆಳಗೆ ಕಾಣಿಸುತ್ತಿದ್ದ ಘಾಟಿ ನಮ್ಮ ಸಂಪಾಜೆ ಮಡಿಕೇರಿ ಘಾಟಿಯನ್ನು ನೆನಪಿಸುತ್ತಿತ್ತು. ಮೇಲೇರುತ್ತಿದ್ದಂತೆಯೆ ರೋಚಕದೃಶ್ಯಕ್ಕೆ ಮೈ ಜುಮ್ಮೆಂದಿತು.ಆಲ್ಪ್ಸ್ ಪರ್ವತಶ್ರೇಣಿಗಳ ಬುಡದಲ್ಲಿರುವ ಐಂಗೆಲ್ಬರ್ಗ್ ಗೆ ಲ್ಯೂಸರ್ನ್ ನಿಂದ ೪೫ ನಿಮಿಷಗಳ ಪಯಣ.ಐಂಗೆಲ್ ಬರ್ಗ್ ರೈಲ್ವೆಸ್ಟೇಶನ್ನಿನಲ್ಲಿಳಿದು ನೋಡಿದರೆ ಸ್ಟೇಶನ್ ಖಾಲಿ ಖಾಲಿ. ಕೌಂಟರ್ನೊಳಗಿದ್ದ ಓರ್ವ ವ್ಯಕ್ತಿಯನ್ನು ಮತ್ತು ಆಗಷ್ಟೇ ರೈಲಿನಿಂದಿಳಿದ ನಾವು ಕೆಲ ಪ್ರವಾಸಿಗರನ್ನು ಬಿಟ್ಟರೆ ಇನ್ಯಾರೂ ಇರಲಿಲ್ಲ. ಆ ವ್ಯಕ್ತಿಯಿಂದಲೇ ಕೇಬಲ್ ಕಾರಿನಲ್ಲಿ ಮೇಲೇರಲು ಟಿಕೆಟ್ ಪಡೆದೆವು. ಮಳೆ ಮತ್ತು ವಿಪರೀತ ಚಳಿಯ ಕಾರಣದಿಂದಾ (೭೦ ವರ್ಷಗಳಲ್ಲಿ ಅಸಹಜವಾಗಿ ಇದು ಅತ್ಯಂತ ಚಳಿಯಿರುವ ಬೇಸಿಗೆಯಂತೆ) ಮಂಜಿನ ಗುಹೆಗಳಿಗೆ ಪ್ರವೇಶವನ್ನು ನಿಷೇಧಿಸಲಾಗಿತ್ತು. ಆಲ್ಪ್ಸ್ ಪರ್ವತಶ್ರೇಣಿಗಳನ್ನು ನೋಡಿದೆ, ಬೆಟ್ಟ ಹತ್ತಬೇಕು ಎಂದು ಮನುಷ್ಯನಿಗೆ ಅನ್ನಿಸುವುದೇಕೆ? ‘ಅದು ಅಲ್ಲಿರುವುದಕ್ಕೆ’ ಎಂದು ದೊಡ್ಡಪ್ಪ ತೆನ್ಸಿಂಗರನ್ನು ಉದ್ಧರಿಸುತ್ತಿದ್ದದ್ದು ನೆನಪಿಗೆ ಬಂತು. ಇವುಗಳೆತ್ತರಕ್ಕೆ ಏರಲು ಸಾಧ್ಯವೆ……..ಹೀಗೆ ಯೋಚನೆಗಳು, ನಮ್ಮ ಹಿಮಾಲಯವನ್ನೇ ನೋಡಿರದ ನಾನು ಇಷ್ಟು ದೂರದಲ್ಲಿರುವ ಆಲ್ಪ್ಸ್ ನ್ನು ನೋಡುತ್ತಿದ್ದೇನೆ,ಆದರೆ ಆಲ್ಪ್ಸ್ ಹಿಮಾಲಯಕ್ಕೆ ಸಾಟಿಯೆ? ಹಿಮಾಲಯ ಎಂಬ ಹೆಸರು ಕೇಳಿದರೆ ಮೂಡುವ ಪೂಜ್ಯ,ಪುಳಕಿತಭಾವ ಇಲ್ಲಿ ಯಾಕೆ ಮೂಡುತ್ತಿಲ್ಲ? ಸೌಂದರ್ಯದ ಪರದೆಯ ಆಚೆ ಹಬ್ಬಿರುವ ‘ಸತ್ಯ’ ಭಾವಗೋಚರವಾಗ್ತಾ ಇಲ್ವಲ್ಲ ಅನಿಸಿತು.

ಯೋಚನೆಗಳಲ್ಲಿ ಕಳೆದುಹೋಗುವಷ್ಟು ಸಮಯವಿರಲಿಲ್ಲ. ಟಿಟ್ಲಿಸ್ ಪರ್ವತದ ಬುಡಕ್ಕೆ ನಮ್ಮನ್ನು ಬಸ್ ನಲ್ಲಿ ಕರೆದೊಯ್ದರು. ಕೇಬಲ್ ಕಾರಿನಲ್ಲಿ ೩ ಹಂತಗಳಲ್ಲಿ ಪಯಣಿಸಿದೆವು.ಮೊದಲು ಚಿಕ್ಕದಾಗಿ ೪ ಜನರು ಮಾತ್ರವೇ ಕೂರಬಲ್ಲಂಥ ಕೇಬಲ್ ಕಾರು,ಇದರಲ್ಲಿ ಗೆರ್ ಶಿನ್ ಆಲ್ಪ್ಸ್ ತನಕ(೧,೨೬೨ ಮೀ),ನಂತರ ೩೬೦* ಸುತ್ತುತ್ತಿದ್ದ ದೊಡ್ಡ ಕೇಬಲ್ ಕಾರಿನಲ್ಲಿ ಚೈನಾ ದೇಶದ ಪ್ರವಾಸಿಗರೊಂದಿಗೆ ಟ್ರಬ್ ಸೀ ತನಕ್(೧,೭೯೬ ಕಿ.ಮೀ),ಅಲ್ಲಿಂದ ಟಿಟ್ಲಿಸ್ ತನಕ(೩,೦೨೦ ಮೀಟರ್)ಪಯಣಿಸಿದೆವು.ಮೊದಲ ಹಂತದ ಪಯಣದಲ್ಲಿ ಕೆಳಗೆ ನೋಡುವಾಗ ರುದ್ರಭೀಕರ ಸೌಂದರ್ಯಕ್ಕೆ ಮಾರುಹೋದರೂ ಜೀವಭಯದಿಂದ ತತ್ತರಿಸುವಂತಾಯಿತು. ಕೆಳಗೆ ನೋಡ್ಬೇಡ ಎಂದು ಪತಿ ಹೇಳ್ತಾ ಇದ್ದರೂ ನೋಡದೇ ಇರಲಾಗಲಿಲ್ಲ. ಮಂಜುಗೆಡ್ಡೆಯಿಂದ ಮೈ ಮುಚ್ಚಿಕೊಂಡ ಕ್ರಿಸ್ಮಸ್ ಮರಗಳು,ಎತ್ತನೋಡಿದರೂ ಮಂಜುಗೆಡ್ಡೆಗಳ ಸಾಮ್ರಾಜ್ಯ, ಸೂರ್ಯಕಿರಣಗಳು ತಾಗಿದರೂ ಜಗ್ಗಲಾರೆವೆಂಬಂತೆ ಘನೀಕರಿಸಿ ನಿಂತ ಮಂಜಿನ ಸಾಮ್ರಾಜ್ಯದಲ್ಲಿ ಜೀವ-ದೇಹಗಳೆರಡೂ ಗಡಗಡ ನಡುಗಿದವು. ವಿಮಾನದಲ್ಲಿ ಪ್ರಯಾಣಿಸುವಾಗ ಕೆಳಗೆ ಕಾಣದಂತೆ ಮಾಡಿದ್ದಾರಲ್ಲ ಸಧ್ಯ ಅಂತ ಹೇಳಿಕೊಂಡೆ.ನಂತರದ ೨ ಹಂತಗಳ ಪಯಣದಲ್ಲಿ ಹೊರಗೆಲ್ಲ ಮಂಜು ಕವಿದಿರುವುದು ಬಿಟ್ಟರೆ ಬೇರೇನೂ ಕಾಣುತ್ತಿರಲಿಲ್ಲವಾದ ಕಾರಣ ಭಯದ ನಡುಕ ನಿಂತಿತು.ಮೌಂಟ್ ಟಿಟ್ಲಿಸ್ನಲ್ಲಿಳಿದು ಒಂದು ಕಟ್ಟಡದ ಟೆರೇಸಿನಲ್ಲಿ ಬಂದು ನಿಂತೆವು. ಅಲ್ಲಿ ಚಳಿಯಿಂದ ಹಲ್ಲುಗಳು ಮೃದಂಗದ ಉರುಟುಗಳಂತೆ ನುಡಿಯುತ್ತಿದ್ದವು, ಮಾತು ಹೊರಡುವುದು ಕಷ್ಟವಿತ್ತು. ಬೆಂಗಳೂರಿನ ಸೆಕೆಯನ್ನು ಬಯ್ಯುತ್ತಿದ್ದೆನಲ್ಲ, ಅದೇ ಸ್ವರ್ಗ ಎನಿಸಿತು. ಸು.ರಂ.ಎಕ್ಕುಂಡಿಯವರ ಇಕ್ಕಳ ಪದ್ಯ ನೆನಪಾಯಿತು. ಅಲ್ಲಿಗೆ ಬಂದಿದ್ದ ಪ್ರವಾಸಿಗರಲ್ಲಿ ಅರ್ಧದಷ್ಟು ಮಂದಿ ಭಾರತೀಯರಾದರೆ ಉಳಿದರ್ಧ ಚೈನೀಯರು (ಬೀಳ್ಕೊಳ್ಳುವಾಗ ಇಂಡೋ ಚೀನಾ bye bye ಎಂದುಕೊಂಡೆವು) ನಮ್ಮ ಸಿನಿಮಾ ನಟರಾದ ಶಾರೂಕ್ ಖಾನ್ ಕಾಜೋಲರ ಪ್ರತಿಕೃತಿಗಳನ್ನು ನಿಲ್ಲಿಸಿದ್ದರು ಅಲ್ಲಿ.ಮಂಜುಗಡ್ಡೆಯ ತುಂಡುಗಳನ್ನು ಸ್ಟೈಲ್ ಆಗಿ ಹಿಡಿದು ಫೋಟೊ ಕ್ಕೆ ಪೋಸ್ ಕೊಟ್ಟೆವು, ನಂತರ ಕೈ ಕಾಲುಗಳಿಗೆ ಆವರಿಸಿದ ಬೇನೆಯಿಂದ ಬೇಕಿತ್ತಾ ಐಸ್ ಹಿಡಿಯುವ ಪೋಸ್ ಅಂತ ಅನಿಸಿತು,ಕೈಬೆರಳುಗಳು, ಕಾಲ್ಬೆರಳುಗಳು ನೋವಿನಿಂದ ಚಲನೆಯೇ ಇಲ್ಲದಂತೆ, ನೋವೇ ಇವುಗಳ ಸ್ಥಾಯೀ ಭಾವ ಎಂಬಂತಾಗಿದ್ದವು. ನಾವು ತೊಟ್ಟ ಕೈಗವಸು, ಬೆಚ್ಚಗಿನ ಬಟ್ಟೆಗಳು ದೈತ್ಯನಿಗೆ ತೊಡಿಸಿದ ಚಿಂದಿ ಎಂಬಂತಾಗಿದ್ದವು, ಆದರೂ ತಾಳಿಕೊಂಡು ಆ -೭ ಡಿಗ್ರಿ ಚಳಿಯನ್ನು ಹೃತ್ಪೂರ್ವಕವಾಗಿ ಅನುಭವಿಸಿ ಹೊರಟೆವು. ಕೆಳಗೆ ಬೆಟ್ಟದ ಬುಡದಲ್ಲಿ Gourmet India ಹೆಸರಿನ  ವ್ಯಾನೊಂದರಲ್ಲಿ ನಮಗಾಗಿಯೇ ತಯಾರಿಸಲಾಗಿದೆ ಎಂದನಿಸುತಿದ್ದ ಬಿಸಿಬಿಸಿ ಇಡ್ಲಿ,ಚಟ್ನಿಯನ್ನು ಸವಿದಮೇಲೆ ಸ್ವಲ್ಪ ಹುರುಪು ಬಂದಂತಾಯಿತು.ಐಂಗೆಲ್ ಬರ್ಗ್ ನಿಂದ ಲ್ಯೂಸರ್ನ್ ಗೆ ಹಿಂದಿರುಗಿ ಹುತಾತ್ಮ ಯೋಧರ ಸ್ಮಾರಕವೆಂದು ನಿರ್ಮಿಸಲಾದ Lion Monument ನೋಡಿದೆವು.ಅಲ್ಲಿ ಹೊರಗೆ ಕೆಲವು ಮಹಿಳೆಯರ ಗುಂಪು ರೇಷ್ಮೆ ಸೀರೆ ಉಟ್ಟು ಧಾವಿಸುತ್ತಿದ್ದರು,ಹಿಂದೆ ರೇಶ್ಮೆ ಲಂಗ ತೊಟ್ಟ ಪುಟ್ಟ ಮಕ್ಕಳಿದ್ದರು, ಬಹಳ ದಿನಗಳ ನಂತರ ನಮ್ಮ ಸಾಂಪ್ರದಾಯಿಕ ಉಡುಪನ್ನು ನೋಡಿ ಎಷ್ಟು ಸಂತೋಷವಾಯಿತೋ ಹೇಳಲರಿಯೆ.

ಸ್ಟುಟ್ ಗಾರ್ಟಿಗೆ ಮರಳುವ ರೈಲನ್ನೇರಿ ಕುಳಿತವರಿಗೆ ದಾರಿಯಲ್ಲಿ ಕೆಲವರು ಪ್ಯಾರಾಗ್ಲೈಡಿಂಗ್ ಕ್ರೀಡೆಯಲ್ಲಿ ತೊಡಾಗಿರುವುದನ್ನು ಕಂಡು ಅಬ್ಬಾ! ಎನಿಸಿತು.

೧೭ ರಂದು ಬೆಳಿಗ್ಗೆ ಬಿಸಿಲು ಕಂಡು ಖುಷಿಯೆನಿಸಿತು. ಚಳಿಯ ಪೀಡನೆಯಿರದೆಂದು ಭಾವಿಸಿದೆ, ನನ್ನ ಭಾವನೆಗೆ ಅರ್ಥವಿಲ್ಲವೆಂದು ಹೊರ ಬಂದಾಗ ತಿಳಿಯಿತು. ಇಂದು ಪ್ರಸಿಧ್ಧವಾದ ಟಿವಿ ಟವರ್ ಇರುವಲ್ಲಿಗೆ ಪತಿ ನಮ್ಮನ್ನು ಒಯ್ದರು. ಸ್ಟುಟ್ ಗಾರ್ಟಿನ ದಕ್ಷಿಣ ಭಾಗದಲ್ಲಿರುವ ಹೋವರ್ ಬಾಪ್ಸರ್ (Hoer Bopser) ಎಂಬ ಗುಡ್ಡದಲ್ಲಿ ಈ ಟಿವಿ ಟವರ್ ನ್ನು ಸ್ಥಾಪಿಸಲಾಗಿದೆ (Fernsehturn Stuttgart), ಹಲವು ಎಫ್ ಎಂ ರೇಡಿಯೋ ಸ್ಟೇಶನ್ಗಳು, ARD TV  Network ಇಲ್ಲಿಂದ ಪ್ರಸಾರ ಆಗುತ್ತಿತ್ತಂತೆ, ಈಗ ಡಿಜಿಟಲ್ ಸೇವೆಗಳು ಬಂದ ನಂತರ ಇವೆಲ್ಲ ಪಕ್ಕದ ಫೆರ್ನ್ ಮೆಲ್ ಡೆ ಟರ್ಮ್ ನಿಂದ ನಡೆಯುತ್ತಿವೆಯಂತೆ, ಈ ಟಿವಿ ಟವರ್ ಪ್ರಪಂಚದ ಮೊಟ್ಟ ಮೊದಲ ಟಿವಿ ಟವರ್ ಅಂತೆ. ಇದರ ಹೊರಭಾಗದಲ್ಲಿ ನಿಂತರೆ ಇಡೀ ಸ್ಟುಟ್ ಗಾರ್ಟ್ ನಗರವು ಕಾಣಿಸುತ್ತದೆ, ಬಹಳ ಚಂದದ ದೃಶ್ಯವದು. ಅಲ್ಲಿ ಸಾಕಷ್ಟು ಹೊತ್ತಿದ್ದೆವು. ಕೆಳಗೆ ಚಿಕ್ಕ ಪಾರ್ಕಿನಲ್ಲಿ ಮಕ್ಕಳು ಆಡಿಕೊಂಡರು, ಅಲ್ಲೇ ಪಕ್ಕದಲ್ಲಿ ದಟ್ಟವಾಗಿ ಬೆಳೆಸಿದ ಕಾಡಿತ್ತು. ಮನಸ್ಸು, ದೇಹ ದಣಿಯುವವರೆಗೂ ಆ ಕಾಡಿನಲ್ಲಿ ಓಡಾಡಿದೆವು. ಮತ್ತೆ ಸ್ಟುಟ್ ಗಾರ್ಟ್ ಪುರಪ್ರವೇಶಿಸಿ ಕಟ್ಟಡಗಳ ಮಧ್ಯೆ, ಹಸಿರು ಕಂಡಲ್ಲೆಲ್ಲ ನೋಡಿ, ಕುಳಿತು, ತಣಿದು ಸಂಜೆ ಕೋಣೆಗೆ ಹಿಂತಿರುಗಿದೆವು.

ಮರುದಿನ ಬೆಳಿಗ್ಗೆ ಕೋಣೆ ಖಾಲಿ ಮಾಡಿ ಸ್ಟುಟ್ ಗಾರ್ಟ್ ನಿಂದ ನಮ್ಮ ಸಂಬಂಧಿ ರಾಮಗೋಪಾಲ್-ವಂದನ ದಂಪತಿ ಮನೆಗೆ ಹೋಗುವುದೆಂದು ತೀರ್ಮಾನಿಸಿದ್ದೆವು. ಆದರೆ ಮರ್ಸಿಡಿಸ್ ಬೆಂಜ್ ಮ್ಯೂಸಿಯಂ ನೋಡೋಣ ಎಂದು ಪತಿದೇವರ ಅಭಿಪ್ರಾಯವಾಗಿತ್ತು, ಅದಕ್ಕೆ ಎದುರುಂಟೆ, ಬೃಹದಾಕಾರದ ಕಟ್ಟಡ ಅದು, ಮರ್ಸಿಡಿಸ್ ಬೆಂಜ್ ಕಾರುಗಳ ಉಗಮ, ವ್ಯಾಪ್ತಿ, ಅಗಾಧತೆಯನ್ನು ಬರವಣಿಗೆಗಳ ಮೂಲಕ, ನೈಜ ಮಾದರಿಗಳ ಮೂಲಕ ಕಲಾತ್ಮಕವಾಗಿ ಪ್ರದರ್ಶಿಸಿದ್ದರು. ಗೋಡೆಗಳ ಮೇಲೆ ಪ್ರಪಂಚದ ಪ್ರಮುಖ ಐತಿಹಾಸಿಕ ಕಾಲಘಟ್ಟಗಳನ್ನು ವಿವರಿಸುವ ಭಿತ್ತಿಚಿತ್ರಗಳನ್ನು ಅಂಟಿಸಿ,ಇಂಗ್ಲಿಷ್ ಭಾಷೆಯ ವಿವರಣೆಗಳನ್ನೂ ನೀಡಿದ್ದರು,ಅವರೆಲ್ಲ ಕಾರುಗಳ ಮಾದರಿಗಳನ್ನು ಕುತೂಹಲದಿಂದ ವೀಕ್ಷಿಸುತ್ತಿದ್ದರೆ ನನಗೆ ಈ ಚಿತ್ರಗಳನ್ನು ನೋಡಿ, ಓದುವುದೇ ಹೆಚ್ಚು ಆಸಕ್ತಿದಾಯಕವೆನಿಸಿತು.

ಮಧ್ಯಾಹ್ನ ಭಾರತೀಯ ತಿನಿಸುಗಳು ಸಿಕ್ಕುವ ರೆಸ್ಟುರಾಂಟಿನಲ್ಲಿ ಊಟ ಮುಗಿಸಿ ನಮ್ಮ ಸಾಮಾನು, ಸರಂಜಾಮುಗಳೊಂದಿಗೆ ಸ್ಟುಟ್ ಗಾರ್ಟಿಗೆ ವಿದಾಯ ಹೇಳಿ ಹೈಡೆಲ್ ಬರ್ಗ್ ರೈಲನ್ನೇರಿದೆವು. ೪೦ ನಿಮಿಷಗಳ ಪ್ರಯಾಣವಾಗಿತ್ತದು. ಹೈಡೆಲ್ ಬರ್ಗ್ ನಮ್ಮ ಮೈಸೂರನ್ನು ನೆನಪಿಸುವ ಊರು. ಇಲ್ಲಿನ ಮ್ಯಾಕ್ಸ್ ಪ್ಲಾಂಕ್ ಇನ್ಸ್ಟಿಟ್ಯೂಟ್ ನಲ್ಲಿ ರಾಮ, ವಂದನರು ವಿಜ್ಞಾನಿಗಳಾಗಿ ಕೆಲಸ ಮಾಡುತ್ತಾರೆ.ಎತ್ತರ ಪ್ರದೇಶದಲ್ಲಿ ಇನ್ಸ್ಟಿಟ್ಯೂಟ್ ಗೆ ಹತ್ತಿರದಲ್ಲಿಯೇ ಅವರ ಮನೆಯಿದೆ. ಅಲ್ಲಿ ವಂದನ ನಮ್ಮನ್ನು ಕಾಯುತ್ತಿದ್ದಳು. ಅವರ ಮನೆಗೆ ಹೋದಾಗ ನಮ್ಮ ಮನೆಯನ್ನೇ ಬಂದು ಸೇರಿದಂತೆನಿಸಿತು. ಹೋದ ಕೂಡಲೇ ಅವಳು ನಮಗೆ ಪುಟ್ಟಪರ್ತಿಯಲ್ಲಿರುವ ಅವಳ ಮಾವ (ಪತಿಯ ತಂದೆ) ಮತ್ತು ಅಜ್ಜಿಯೊಂದಿಗೆ ಇಂಟರ್ ನೆಟ್ ಸಂಪರ್ಕ ಏರ್ಪಡಿಸಿದಳು. ಕ್ಯಾಮೆರಾ ಮೂಲಕ ಪರಸ್ಪರ ನೋಡಿಕೊಂಡು ಸಾಕಷ್ಟು ಹರಟಿದೆವು. ಆ ವೇಳೆಗೆ ರಾಮನೂ ಬಂದ, ಊರ ಸುದ್ದಿಗಳನ್ನೆಲ್ಲ ಹೇಳಿ, ಅವರದನ್ನೂ ಕೇಳಿ, ರುಚಿರುಚಿಯಾದ, ಬಿಸಿಬಿಸಿಯಾದ ಸಾರು, ಪಲ್ಯ ರಾಯತದ ಊಟವನ್ನು ಮಾಡಿ, ಅವರ ಉಪಚಾರದಲ್ಲಿ ಮಿಂದು ಮಲಗಿದೆವು. ಮರುದಿನದ ತಿಂಡಿಯ ಜವಾಬ್ದಾರಿಯನ್ನು ನಾನು ವಹಿಸಿದೆ. ರಾಮನಿಗೆ ಇತ್ತೀಚೆಗಷ್ಟೆ ಪಿ.ಎಚ್.ಡಿ.ದೊರಕಿತ್ತು, ಆತನ ಸಂಶೋಧನೆಯ ಕುರಿತು ಅವನು ಅಂದು ಭಾಷಣ ಮಾಡಬೇಕಿತ್ತು,ಬೇಗನೆ ಹೋದ, ವಂದನ ರಜೆಯಲ್ಲಿದ್ದಳು, ನಾವೆಲ್ಲರೂ ಮನೆಯಿಂದ ಒಟ್ಟಿಗೆ ಟ್ರಾಮ್ ನಲ್ಲಿ ಹೊರಟೆವು, ದಾರಿಯಲ್ಲಿ ನಾವಿಳಿಯಬೇಕಿದ್ದ ಸ್ಥಳವನ್ನು ಸೂಚಿಸಿ ಅವಳು ಮುಂದೆ ಹೋದಳು. ನಾವು ಹೈಡಲ್ ಬರ್ಗ್ ಪಟ್ಟಣದ ಬೀದಿಗಳಲ್ಲಿ ಉದ್ದಕ್ಕೆ ನಡೆಯತೊಡಗಿದೆವು. ಈಗ ಚಳಿ ನಮ್ಮ ಆಪ್ತಮಿತ್ರನಂತೆ, ನಿಡುಗಾಲದ ಬಂಧುವಿನಂತೆ ಎನಿಸಿತ್ತು. ನಡೆಯುತ್ತಾ ನೆಕರ್ ನದಿಯ ಬಳಿ (Neckar) ತಲುಪಿದೆವು.ಅಲ್ಲಿಗೆ ಹೈಡಲ್ಬರ್ಗ್ ಕ್ಯಾಸಲ್ ಕಾಣಿಸುತ್ತಿತ್ತು.ಇಲ್ಲೂ ಹಸಿರಿನ ಮೆರವಣಿಗೆ.ಹಸಿರು ಉಳಿಸಿಕೊಂಡೇ ಎಷ್ಟು ಚೆನ್ನಾಗಿ ಪೇಟೆಯನ್ನು ಕಟ್ಟುತ್ತಾರೆ ಇವರು! ನದಿಯನ್ನು ಅವಲೋಕಿಸುತ್ತಾ ನಿಂತಿದ್ದೆವು,

ವಂದನ ನಮಗೆ ಫೋನ್ ಮಾಡಿ ತಾನು ಇಂಥಲ್ಲಿ ಕಾಯುತ್ತಿರುವುದಾಗಿ ಹೇಳಿದಳು. ಅವಳಿದ್ದ ಸ್ಥಳಕ್ಕೆ ನಡೆದು, ಅವಳನ್ನು ಕರೆದುಕೊಂಡು, ಆಕೆ ಹೇಳಿದ ಭಾರತೀಯ ಹೊಟೆಲ್ ನಲ್ಲಿ ಊಟ ಮಾಡಿದೆವು.ಮಕ್ಕಳಿಬ್ಬರೂ ಅವಳನ್ನು ಅಂಟಿಕೊಂಡರು. ಅವರನ್ನು ಅವಳೊಂದಿಗೆ ಮನೆಗೆ ಕಳಿಸಿ ನಾವಿಬ್ಬರೂ ಕ್ಯಾಸಲ್ ಕಡೆಗೆ ನಡೆದೆವು.ಮೇಲೆ ಹೋಗಲು ಕೇಬಲ್ ಕಾರಿನ ವ್ಯವಸ್ಥೆ, ರೈಲಿನ ವ್ಯವಸ್ಥೆ ಇದ್ದರೂ ಊಟ ಭಾರವಾಗಿತ್ತು ಎಂದು ನಾವು ಕಾಲ್ನಡಿಗೆಯಲ್ಲೇ ಮೇಲೇರಲಾರಂಭಿಸಿದೆವು, ಟಾರುಹಾದಿ  ಕಡಿದಾಗಿತ್ತು. ೧೭ನೆಯ ಶತಮಾನದ ಪಾಲಿಟೈನ್ ರಾಜರ ನಿವಾಸವಾಗಿತ್ತು ಆ ಕ್ಯಾಸಲ್, ಫ್ರೆಂಚರ ಧಾಳಿಗೆ ಮತ್ತು ಸಿಡಿಲಿನ ಹೊಡೆತಕ್ಕೆ ಸಿಲುಕಿ ಕ್ಯಾಸಲ್ ನ ಕೆಲಭಾಗ ನಾಶವಾಗಿದ್ದವು.ಮತ್ತು ಇದರ ಕೆಂಪು  ಕಲ್ಲನ್ನು ಬೇರೆ ಕಟ್ಟಡಗಳ ರಚನೆಗೂ ಬಳಸಿಕೊಳ್ಳಲಾಗಿತ್ತು..ಆದರೂ ಅದರ ಕಲಾವಂತಿಕೆ,ಸೌಂದರ್ಯವನ್ನು ರಕ್ಷಿಸುವ ಕಡೆಗೆ ವಿಶೇಷ ಗಮನ ಹರಿಸಿ ಅದನ್ನು ಮತ್ತೆ ಕಟ್ಟಲಾಗಿದೆ ಎಂದು ರಾಮ ತಿಳಿಸಿದ.ಅಲ್ಲಿದ್ದ ಬೃಹದಾಕಾರದ ವೈನ್ ಬ್ಯಾರೆಲ್ ಗಳು ಮಾತ್ರ ಯಾವ ಧಾಳಿಯಲ್ಲೂ ನಾಶವಾಗದೆ ಉಳಿದಿದ್ದವು,ಈ ವೈನ್ ಬ್ಯಾರಲ್ ಗಳೇ  ಇದರ ಪ್ರಮುಖ ಆಕರ್ಷಣೆಯೆನಿಸಿತು.ಅಲ್ಲಿನ ತೆರೆದ ಕಿಟಿಕಿಗಳಿಂದ ಹೈಡಲ್ ಬರ್ಗ್ ಕೆಂಪಗೆ ಭವ್ಯವಾಗಿ ಕಾಣಿಸುತ್ತಿತ್ತು.ಮಳೆಯಲ್ಲಿ ನೆನೆದುಕೊಂಡು,ಟ್ರಾಂ,ಬಸ್ಸುಗಳಲ್ಲಿ ಪಯಣಿಸಿ ಸಂಜೆ ಮನೆ ಸೇರಿದೆವು.ಮರುದಿನ ೨೦,ವಾಪಸ್ ಹೊರಡುವ ದಿನ ಎಂದು ಬಹಳ ಖುಷಿ,ಸಂಭ್ರಮದಿಂದ ಬೆಳಗಾಗುವುದನ್ನೇ ಕಾಯುತ್ತಿದ್ದೆ. ಬೆಳಿಗ್ಗೆ ೧೦.೩೦ಕ್ಕೆ ರಾಮ ವಂದನರಿಂದ ಬೀಳ್ಕೊಂಡು ಹೈಡಲ್ ಬರ್ಗ್ ನಿಂದ ಫ್ರಾಂಕ್ ಫರ್ಟ್,ಫ್ರಾಂಕ್ ಫರ್ಟ್ ನಿಂದ ದುಬೈ,ದುಬೈನಿಂದ ಬೆಂಗಳೂರು,ಬೆಂಗಳೂರು ವಿಮಾನನಿಲ್ದಾಣದಿಂದ ಮನೆ ಸೇರಿದಾಗ ೨೧ ರ ಬೆಳಿಗ್ಗೆ ೧೧ ಘಂಟೆಯಾಗಿತ್ತು.

ಫಲಶ್ರುತಿ

ನಾವು ಈ ಪ್ರವಾಸದಲ್ಲಿ ನೋಡಿದ ಸ್ಠಳಗಳು ಕಡಿಮೆ ಈ ದೇಶ ಹೇಗಿರಬಹುದು ಎಂಬುದರ ಸ್ಥೂಲ ಪರಿಚಯ ಸಿಕ್ಕಿತು. ಅಂದು ಜರ್ಮನಿಯಲ್ಲಿ ಇಳಿದಾಗೊಮ್ಮೆ ವಾಪಸ್ ಹೋಗಿಬಿಡೋಣ, ಈ ನೀರವತೆ ನನಗೆ ಒಗ್ಗದು ಅನಿಸಿತ್ತು. ಮರುದಿನ ಬೆಳಿಗ್ಗೆ ಪ್ಯಾರಿಸ್ ಗೆಂದು ಹೊರಟು ರೈಲ್ವೆ ಸ್ಟೇಶನ್ ಗೆ ನಡೆಯುತ್ತಿದ್ದಾಗ ಅಲ್ಲಿನ ಸ್ವಚ್ಛತೆಗೆ, ಸೌಂದರ್ಯಕ್ಕೆ, ಜನರ ಶಿಸ್ತಿಗೆ ಅಚ್ಚರಿಯೆನಿಸಿತು. ಇದು ಇವರಿಗೆ ಹೇಗೆ ಸಾಧ್ಯವೆನಿಸಿತು, ನಮಗೇಕೆ ಸಾಧ್ಯವಾಗದು ಎಂದು ಯೋಚಿಸಿದೆ. ಪ್ಯಾರಿಸ್ ಜರ್ಮನಿಯಷ್ಟು ಶುಭ್ರವಿಲ್ಲ ಎಂದು ಗಮನಿಸಿದಾಗ ಏನೋ ವಿಚಿತ್ರ, ಕೆಟ್ಟ ಖುಷಿ. ಪತಿಯು ನಿರೀಕ್ಷಿಸುವ ಅತೀ ಅಚ್ಚುಕಟ್ಟುತನ ಜರ್ಮನ್ ಕಂಪೆನಿಯಲ್ಲಿ ದುಡಿದುದರ ಫಲ ಎಂದು ಅರಿತುಕೊಂಡೆ. ಪ್ಯಾರಿಸ್ ನ ರೈಲುಗಳಲ್ಲಿ ಹಾಡುಹೇಳಿ, ವಾದ್ಯನುಡಿಸಿ ಆಮೇಲೆ ಜನರ ಬಳಿ ಪರ್ಸು ಮುಂದೆ ಮಾಡುವ ಸೂಟು-ಬೂಟುಧಾರೀ ಭಿಕ್ಷುಕರನ್ನು ಕಂಡೆ.ಅಲ್ಲಿಯೂ ಕೊಲೆ-ಸುಲೆಗೆ,ಕಿಸೆಗಳ್ಲತನಗಳಿವೆಯೆಂದು ತಿಳಿದಾಗ ಏನೋ ತೃಪ್ತಿ ಮನಸ್ಸಿಗೆ (ಲೋಕಾಃ ಸಮಸ್ತಾ ಸುಖಿನೋ ಭವಂತು). ಭಾರತದಲ್ಲಿ ವಿದೇಶೀಯರು ಕಂಡರೆ ಅವರನ್ನು ಮಾತನಾಡಿಸಲು, ಅವರಿಗೆ ಸಹಾಯ ಮಾಡಲು ನಾವು ಕಾತುರರಾಗುತ್ತೇವೆ, ಆದರೆ ಜರ್ಮನರಿಗೆ ಇನ್ನೊಬ್ಬ ವ್ಯಕ್ತಿ – ಆತ ಸ್ವದೇಶಿ ಇರಲಿ, ಪರದೇಶಿಯೇ ಆಗಲಿ….ಯಾವ ಆಸಕ್ತಿಯೂ ಇರುವುದಿಲ್ಲ. ಅವರ ಪ್ರತಿಯೊಂದು ನಡವಳಿಕೆಯಲ್ಲಿಯೂ ಅಚ್ಚುಕಟ್ಟುತನದ, ಗಾಂಭೀರ್ಯದ ಮುದ್ರೆ ಇರುತ್ತಿತ್ತು. ನಿಶ್ಚಿತ, ಪೂರ್ವನಿಯೋಜಿತ ಜೀವನವೋ, ಇವರ ಜೀವನದ ಶಿಲ್ಪಿಗಳು ಇವರೇ ಎಂಬಷ್ಟು ಕರಾರುವಾಕ್ಕಾದ ಜೀವನ.ಸಮಯಕ್ಕೆ ಬಹಳ ಗೌರವ, ಮರ್ಯಾದೆ ಕೊಡುವುದು ಇವರಿಗೆ ರಕ್ತಗತವೇ ಆಗಿದೆ. ರೈಲುಸ್ಟೇಶನ್ ಗಳಲ್ಲಿ ರೈಲಿನ ಬರ ಹೋಗುವ ಸಮಯ ಪ್ರಕಟ ಆಗುತ್ತಲೇ ಇರುತ್ತದೆ ಮತ್ತು ರೈಲು ಅದೇ ಸಮಯಕ್ಕೆ ಬಂದು ಹೋಗುತ್ತಿರುತ್ತದೆ. ಆ ಸಮಯದ ಯಂತ್ರ ನಿಂತರೆ, ಕರೆಂಟ್ ಹೋದರೆ, ರೈಲು ನಿಂತುಹೋದರೆ……..ಎಂಬ ಪ್ರಶ್ನೆಗಳೇ ಇವರನ್ನು ಕಾಡುವುದಿಲ್ಲವೇನೋ.ಯಾವ ಸಮಸ್ಯೆಗೂ ಇವರಲ್ಲಿ ಉತ್ತರವಿದೆ.

ಅಲ್ಲಿ ಜನರ ಆಹಾರ ಪಧ್ಧತಿ ವಿಚಿತ್ರ, ಅಷ್ಟು ಚಳಿಯಿದ್ದರೂ ಬಿಸಿ ಆಹಾರ ಬೇಕೆಂದಿಲ್ಲ ಅವರಿಗೆ! ಬ್ರೆಡ್ಡು, ಮತ್ತು ಬ್ರೆಡ್ಡಿನ ರೂಪಾಂತರಗಳೇ ಅವರ ಆಹಾರ! ಬ್ರೆಡ್ಡೊಳಗೆ ಮಾಂಸವಿಟ್ಟು ತಿಂದು ಕೋಕ್,ಕಾಫಿ ಕುಡಿದು ಸಿಗರೇಟು ಸೇದಿದರೆ ತೃಪ್ತರು.ನಮ್ಮ ಅವಲಕ್ಕಿ,ಪೂರಿ,ದೋಸೆಗಳ ರುಚಿ ತಿಳಿಯದೆ ಇವರೆಷ್ಟು ಮುಂದುವರಿದರೇನು ಫಲ? ಅಕ್ಕಿ ಉಂಡವ ಹಕ್ಕಿಯಾಗುವನು. ರಾಗಿ ಉಂಡವ ನಿರೋಗಿ, ಜೋಳ ಉಂಡವ ತೋಳನಾಗುವ ಎಂಬ ನಾಣ್ಣುಡಿ ನೆನಪಾಗುತ್ತಿತ್ತು.ನಾವಿಳಿದುಕೊಂಡಿದ್ದ ಹೋಟೆಲ್ ನಲ್ಲೇ ನಮ್ಮ ಬೆಳಗಿನ ಉಪಾಹಾರ ಮುಗಿಯುತ್ತಿತ್ತು,ನಾನಾ ತರಹದ ಬ್ರೆಡ್ ಗಳಿರುತ್ತಿದ್ದವು,ಅವುಗಳಿಗೆ ಜಾಮ್,ಬೆಣ್ಣೆ ಸವರಿ ತಿಂದರೆ ರುಚಿಯೆನಿಸುತ್ತಿತ್ತು. ಆದರೆ ಯಥೇಚ್ಚವಾಗಿ ಸಿಗುತ್ತಿದ್ದ ಹಣ್ಣುಗಳಂತೂ ಅತ್ಯಂತ ರಸಭರಿತವಾಗಿ ಇರುತ್ತಿದ್ದವು. ಅಲ್ಲಿಯ ಸೇಬು ಕಚ್ಚಿದರೆ ರಸ ಸಿಡಿಯುತ್ತಿತ್ತು.ಸೇಬು, ಕಿತ್ತಳೆ, ಸ್ಟಾಬೆರಿ, ರೆಂಬುಟಾನ್, ಕಲ್ಲಂಗಡಿ ಅಲ್ಲದೇ ನಮ್ಮ ಮಡಿಕೇರಿಯ ಅಪ್ಪಟ ದೇಸೀ ಹಣ್ಣಾದ ಗುಮ್ಮಟೆಹಣ್ಣು ಸಹಾ ಅಲ್ಲಿ ಸಿಕ್ಕಿತು. ತಿಂಡಿ ಊಟವು ಇವರ ಸಂಸ್ಕೃತಿಯ ಭಾಗವಲ್ಲವೋ ಏನೋ!ಬಚ್ಚಲಿನಲ್ಲಿ (ಇವರ ಶೌಚ ವ್ಯವಸ್ಥೆ ಬಿಡಿ,ನಮಗೆ ಒಗ್ಗಲಿಕ್ಕಿಲ್ಲ) ಬಳಸುವ ನೀರು ಸಂಸ್ಕರಿತ ನೀರು, ಕುಡಿಯುವುದು ಸೋಡಾನೀರು, ನಾವು ನೀರಡಿಕೆ ಆದಾಗೆಲ್ಲ ಅಡಿಗೆಮನೆಯ ನಲ್ಲಿಯಿಂದ ನೇರವಾಗಿ ಕುಡಿಯುತ್ತಿದ್ದೆವು. ಇಡೀ ಜರ್ಮನಿಗೆ thermostat ವ್ಯವಸ್ಥೆಯ ಮೂಲಕ ಬಿಸಿನೀರ ಸರಬರಾಜು! ನಲ್ಲಿ ತಿರುಗಿಸಿದರಾಯಿತು.ಬೇಕಾದ ಪ್ರಮಾಣದಲ್ಲಿ ಬಿಸಿನೀರು ಲಭ್ಯ.ಇವರಿಗೆ ಜೀವನ ಸರಾಗ,ಇವರಿಗೆದುರಾಗುವಂಥ ಸಮಸ್ಯೆಗಳೇನಿರಬಹುದೊ ತಿಳಿಯಲಿಲ್ಲ. ಇಳಿವಯಸ್ಸಿನಲ್ಲಿ ಮಕ್ಕಳು ದೂರಾಗುವುದು ಇವರಿಗೆ ಒಂದು ಸಮಸ್ಯೆಯೇ ಇರಲಾರದು.ಯಾಕೆಂದರೆ ತಂದೆ ತಾಯಿ ಮಕ್ಕಳು ಹದಿಹರೆಯಕ್ಕೆ ಕಾಲಿಡುತ್ತಿದ್ದಂತೇ ಅವರು ಮನೆಯಿಂದ ಹೊರಹೋಗಿ ಸ್ವತಂತ್ರವಾಗಿ ಜೀವಿಸುವುದನ್ನು ಪ್ರೋತ್ಸಾಹಿಸುತ್ತಾರೆ. ನಾವು ಪ್ಯಾರಿಸ್ ನಿಂದ ಸ್ಟುಟ್ ಗಾರ್ಟ್ ಗೆ ಹಿಂದಿರುಗುತ್ತಿದ್ದ ರೈಲಿನಲ್ಲ್ಲಿ ೫-೬ ತಿಂಗಳ ಮಗುವಿನೊಂದಿಗೆ ಅದರ ಅಜ್ಜ ಮತ್ತು ಅಮ್ಮ ಇದ್ದರು. ಆ ಮಗುವನ್ನು ತೊಟ್ಟಿಲಿನಂಥದ್ದರಲ್ಲಿರಿಸಿ ಸೀಟಿನಲ್ಲಿ ಮಲಗಿಸಿದರು. ಮಗು ಬೆಚ್ಚಗೆ ಸುಸಜ್ಜಿತವಾಗಿತ್ತು,ತಾಯಿ-ಅಜ್ಜ ಆ ಮಗುವನ್ನಲ್ಲಿರಿಸಿ ಸ್ವಲ್ಪ ಹೊತ್ತು ಅದನ್ನು ಮಾತನಾಡಿಸಿದ ಶಾಸ್ತ್ರ ಮಾಡಿ ತಾವು ತಮ್ಮಲ್ಲಿ ಮಗ್ನರಾದರು.ತನ್ನ ಪಾಡಿಗೆ ತಾನು ತನ್ನ ಭಾಷೆಯಲ್ಲಿ ಮಾತನಾಡುತ್ತಾ ತಾನೇ ನಿದ್ದೆಗೆ ಜಾರಿತು.ಎಚ್ಚರಾದ ಮೇಲೆ ಕಾಲಿನಿಂದ ಒದ್ದೂ ಒದ್ದೂ ಹೊದಿಕೆಯನ್ನು ಕೆಳಹಾಕಿತು.ತಾಯಿ ಆ ಮಗುವಿನತ್ತ ಪ್ರೀತಿಯಿಂದ ಏನೋ ಹೇಳಿ ಅದನ್ನು ಅದರ ಕಾಲಿಗೆ ಹೊದೆಸಿದಳು,ಮತ್ತೂ ೨-೩ ಬಾರಿ ಹಾಗೆಯೇ ಆಯಿತು,ಆಮೇಲೆ ಆಕೆ ಅದನ್ನೇನೋ ಮಾತನಾಡಿಸಿದಳು.ನಮ್ಮಲ್ಲಿ ಅಜ್ಜ ಅಜ್ಜಿಯರಿಗೆ ಮೊಮ್ಮಕ್ಕಳೆಂದರೆ ಸರ್ವಸ್ವ.ಇವರಿಗೆ? ಇವರಿಗೆ ಪ್ರೀತಿಯಿಲ್ಲ ಎಂದೆನಿಸಲಿಲ್ಲ ನನಗೆ….ಆದರೆ ಪ್ರೀತಿಯ ಅಭಿವ್ಯಕ್ತಿಯಲ್ಲಿ ಯೂ ಒಂದು ರೀತಿಯ ನಿಯಮಪಾಲನೆ.ತೋರಿಯೂ ತೋರದಂತಿರಬೇಕು ಎಂದೋ ಏನೋ, ನಿರ್ಮಮಕಾರವನ್ನು ಸಾಧಿಸಿದ್ದಾರೆಯೆ ಇವರು? ಎಳೆಮಗುವನ್ನು ಒಂದೇ ಒಂದು ತಂದೆತಾಯಿ ಎತ್ತಿರುವುದನ್ನು ಕಾಣಲಿಲ್ಲ. ಪ್ರಾಂ ನಲ್ಲಿ ಮಲಗಿಸಿ ತಳ್ಳಿಕೊಂಡು ಹೋಗುತ್ತಿದ್ದರು.ಬಿಸಿಲು,ಮಳೆಯಿಂದ ರಕ್ಷಿಸುವ ವ್ಯವಸ್ಠೆಯೂ ಆ ಪ್ರಾಂ ನಲ್ಲಿರುತ್ತಿತ್ತು.ಮಗು ತನ್ನ ಪಾಡಿಗೆ ತಾನು ನಿದ್ದೆ ಮಾಡುತ್ತಿತ್ತು,ಆಡುತ್ತಿತ್ತು. ತಾಯಿಗೆ ತನ್ನ ಮಗುವೇ ತನ್ನ ಜೀವನ ಎಂಬಂಥಾ ವಿಸ್ಮೃತಿ ಆವರಿಸುವುದಿಲ್ಲ ಎಂಬ ತೀರ್ಮಾನಕ್ಕೆ ಬಂದಿದ್ದೇನೆ.

ಈ ಜನರು ನಾಯಿಯನ್ನು ಸಾಕುತ್ತಾರೆ, ಅದರ ಬಾಯಿಗೆ ಪಟ್ಟಿಯನ್ನು  ಜಡಿಯುತ್ತಾರೆ, ಕಂಡ ಕಂಡಲ್ಲಿ ಬಾಯಿ ಹಾಕಬಾರದೆಂದೋ ಏನೋ! ಮಕ್ಕಳು  ಹಠ ಹಿಡಿದು ರಂಪಾಟ ಎಬ್ಬಿಸುವುದನ್ನಾಗಲೀ ನಾಯಿಗಳು ಬೊಗಳುವುದನ್ನಾಗಲೀ ಕಾಣಲಿಲ್ಲ…ಬಹುಶಃ ಅವು ಕಚ್ಚುವ ನಾಯಿಗಳಿರಬೇಕು.. ರೈಲುಗಳಲ್ಲಿ ನಾಯಿಗೂ ಮಕ್ಕಳಿಗೂ ಒಂದೇ ಟಿಕೆಟ್ ದರ!!!!!
ಅಂಗವಿಕಲರೂ ಸ್ವಾವಲಂಬಿಗಳಾಗಿ ವಿಶೇಷ ಕುರ್ಚಿಗಳಲ್ಲಿ ಕುಳಿತು ಎಲ್ಲಿಂದೆಲ್ಲಿಗೂ ಪ್ರಯಾಣಿಸುತ್ತಿದ್ದರು. ರಸ್ತೆಯನ್ನು ದಾಟಬೇಕಿದ್ದರೆ ನಾವು ಇಷ್ಟ ಬಂದಲ್ಲಿ ದಾಟಲಾಗುತ್ತಿರಲಿಲ್ಲ.ಝೀಬ್ರಾ ಪಟ್ಟಿ ಇರುವಲ್ಲೇ ದಾಟಬೇಕಿತ್ತು. ಪಾದಚಾರಿಗಳು ಆ ಪಟ್ಟಿಯಲ್ಲಿ ರಸ್ತೆ ದಾಟುವಾಗ ಯಾವನೇ ದೊಡ್ಡ ಮನುಷ್ಯನಾಗಲಿ,ತನ್ನ ವಾಹನವನ್ನು ನಿಲ್ಲಿಸಲೇಬೇಕಿತ್ತು, ಟ್ರಾಫಿಕ್ ನಿಯಮವನ್ನಾಗಲೀ,ಇನ್ಯಾವುದೇ ನಿಯಮವನ್ನಾಗಲೀ ಅವರು ಮುರಿಯಲಾರರು ಎಂದು ತಿಳಿಸಲು ಪತಿ ತಮಾಷೆಯ ಪ್ರಸಂಗವೊಂದನ್ನು ಹೇಳಿದರು.

ಜನರು ಒಬ್ಬರನ್ನೊಬ್ಬರು ಅಭಿವಂದಿಸುವಾಗ ನಾವು ನಮಸ್ಕಾರ,ಹೆಲೋ ಎನ್ನುವಂತೆ ಇವರೂ Hallo ಎಂದು ಒಂದು ಬಗೆಯ ರಾಗದಲ್ಲಿ ಒತ್ತಿ ಹೇಳುತ್ತಾರೆ, ಮಾತನಾಡುವಾಗ ಕೇವಲ ಇವರ ಬಾಯಿಯಲ್ಲ,ಕಣ್ಣುಗಳು,ಭುಜಗಳು ಎಲ್ಲವೂ ತಿರುಗಿ,ವಿಚಿತ್ರವಾಗಿ ಸುತ್ತಿ ಸಂವಹಿಸಬಲ್ಲುದು!ಸಿಗರೇಟೆಳೆಯುವುದರಲ್ಲಿ ಹೆಣ್ಣು-ಗಂಡೆಂಬ ತಾರತಮ್ಯ ಇರಲಿಲ್ಲ,ಹಾಗೆ ನೋಡಿದರೆ ಹೆಣ್ಣು ಗಂಡು ತಾರತಮ್ಯ ಯಾವುದರಲ್ಲಿಯೂ ಇರಲಿಲ್ಲ.

ಅವರು ಸೇದುವ ಸಿಗರೇಟು ಬಹಳ ಕಡುವಾದದ್ದಿರಬೇಕು, ಅದರ ಘಾಟು ನನ್ನ ಘ್ರಾಣೇಂದ್ರಿಯದೊಳಗೆ ಸೇರಿಹೋದಂತೆನಿಸುತ್ತದೆ. ಸಿಗರೇಟು, ಮಾಂಸ, ಮದ್ಯದ ಕಡುನಾತದಿಂದ ರೋಸಿಹೋಗಿ ಒಮ್ಮೆ ನನ್ನ ಗಂಡನ ಬಳಿ ‘ಇಲ್ಲಿ ಮಲ್ಲಿಗೆ, ಸೇವಂತಿಗೆ ಹೂ ಮಾರುವುದಿಲ್ವಾ?’ ಎಂದು ಅಸಹಜವಾಗಿ ಪ್ರಶ್ನಿಸಿ ನಗೆಪಾಟಲಿಗೀಡಾಗಿದ್ದೆ. ಇವರಿಗೆ ಇಂಗ್ಲಿಷ್ ಭಾಷೆಯ ಬಗ್ಗೆ ವಿಚಿತ್ರ ವ್ಯಾಮೋಹವಿಲ್ಲ, ಸರ್ಕಾರೀ ಶಿಕ್ಷಣವೆಲ್ಲ ಜರ್ಮನ್ ಮಾಧ್ಯಮದಲ್ಲಿ ಉಚಿತವಾಗಿ ನಡೆಯುತ್ತದೆ, ಇಂಗ್ಲಿಷ್ ಮಾಧ್ಯಮ ಶಾಲೆಗಳೂ ಇವೆ, ಆದರೆ ಅದರ ಶುಲ್ಕ ಬಹಳ ದುಬಾರಿ ಎಂದು ವಂದನ ತಿಳಿಸಿದಳು. ನನ್ನ ಪತಿಗೆ ಜರ್ಮನ್ ಭಾಷೆಯ ಸ್ವಲ್ಪ ಪರಿಚಯ ಇದೆ. ಅವರಿಂದ ನಾನೂ ಕೆಲಶಬ್ದಗಳನ್ನು ಕಲಿತೆ. ಪರಿಚಿತರೇ ಇರಲಿ, ಅಪರಿಚಿತರೇ ಇರಲಿ, ಹಲ್ಲೊ ಅಥವಾ ಗುಟೆನ್ ಟಾಗ್ ಅನ್ನುತ್ತಾರೆ. ಇಂಗ್ಲಿಷ್ ನಲ್ಲಿ ಮಾತನಾಡಲು ಹಿಂಜರಿಯಲಾರರು, ಆದರೆ ತಮ್ಮ ಭಾಷೆ ಅಷ್ಟು ಚೆನ್ನಾಗಿಲ್ಲ ಎಂದು ಹೇಳಿಯೇ ಮಾತಾಡುತ್ತಾರೆ. Seife-soap,wasser-water, Kalt-cold, Gemuse-fruits, Brot-bread, Strasse-street, Zucker-sugar, bitte-please, Chyus-bye ಹೀಗೆ ಕೆಲವು ಶಬ್ದಗಳನ್ನು ನಾನು ಕಲಿತುಕೊಂಡೆ. ಈ ಜನರು ಯಾವುದೇ ಕೆಲಸವಾಗಲಿ ಅದು ಎಷ್ಟೇ ಚಿಕ್ಕದಿರಲಿ, ದೊಡ್ಡದಿರಲಿ, ಅಖಂಡವಾದ ಪ್ಲಾನ್ ಮಾಡ್ತಾರೆ ಎಂಬುದು ಜ್ಞಾನ ಶೇಖರರು ಗಳಿಸಿದ ಜ್ಞಾನ. ಅಂಗಡಿಗಳಲ್ಲಿ ಎಷ್ಟೇ ಸಣ್ಣ ವಸ್ತುವನ್ನು ಕೊಂಡರೂ ಅದನ್ನು ಗೌರವಪೂರ್ವಕವಾಗಿ ಪ್ಲಾಸ್ಟಿಕ್ ಕವರ್ ಗೆ ಹಾಕಿಕೊಡುವ, ಇಲ್ಲದಿದ್ದರೆ ಅದನ್ನು ನಮ್ಮ ಹಕ್ಕೆಂಬಂತೆ ಕೇಳಿ ಪಡೆಯುವ ನಾವು ಈ ಜನರು ಎಷ್ಟೇ ದೊಡ್ಡ ವಸ್ತು ಕೊಂಡರೂ ಪ್ಲಾಸ್ಟಿಕ್ ಕವರ್ ಕೊಡುವುದಿಲ್ಲ, ಕೊಡುವುದಿದ್ದರೂ ಅದನ್ನು ಪುಕ್ಕಟೆಯಾಗಂತೂ ಕೊಡುವುದಿಲ್ಲ ಎಂಬುದನ್ನು ಮನಗಾಣಲೇಬೇಕಿದೆ.

ಒಟ್ಟು ಆ ದೇಶದ ಅಚ್ಚುಕಟ್ಟುತನಕ್ಕೆ, ನಿಯಮಪಾಲನೆಗೆ ಮಾರುಹೋದೆ. ಅಲ್ಲಿಯ ಒಳ್ಳೆಯ ಅಂಶಗಳನ್ನು ಮನಸ್ಸು ಗ್ರಹಿಸಿದರೂ ನಮ್ಮ ದೇಶದೊಂದಿಗೆ ತುಲನೆ ಮಾಡುತ್ತಿತ್ತು. ಇವುಗಳನ್ನೆಲ್ಲ ಮುಕ್ತಮನದಿಂದ ಶ್ಲಾಘಿಸಿದರೆ ನನ್ನ ದೇಶಾಭಿಮಾನ ಎಲ್ಲಿ ಘಾಸಿಗೊಳ್ಳುವುದೋ, ನನ್ನ ದೇಶಕ್ಕೆಲ್ಲಿ ದ್ರೋಹ ಬಗೆದಂತಾಗುವುದೋ ಎಂಬ ದ್ವಂದ್ವದಲ್ಲಿ ಹೈರಾಣಾಗಿದ್ದೆ. ಆದರೆ ಏನೇ ಭಿನ್ನತೆಯಿರಲಿ, ನಾವೆಲ್ಲ ವಿಶ್ವಮಾನವ ನಿಯಮಕ್ಕೆ ಬದ್ಧರು, ಪ್ರೇಮಸೂತ್ರದಲ್ಲಿ ಬಂಧಿತರು ಎಂಬ ಅರಿವನ್ನು ಮನಕ್ಕೆ ತಂದುಕೊಳ್ಳಲು ಯತ್ನಿಸುತ್ತಿದ್ದಾಗ ಈ ದ್ವಂದ್ವ ಮರೆಯಾಗುತ್ತಿತ್ತು.

Share This