ಅಫ್ಘಾನಿಸ್ಥಾನದಲ್ಲಿ ನಡೆದ ಯುದ್ಧದ ಕಹಿನೆನಪುಗಳು ಆ ಯುದ್ಧದಲ್ಲಿ ಭಾಗಿಯಾದ
ಅನೇಕ ರಾಷ್ಟ್ರಗಳಿಗೆ ದಟ್ಟವಾದ ಅನುಭವವಾಗಿದೆ. ಅದನ್ನು ಅನೇಕ ಚಿತ್ರಗಳಲ್ಲಿ ನಾವು ಈಗಾಗಲೇ ನೋಡಿಯೂ ಇದ್ದೇವೆ. ಅಲ್ಲಿನ ಯೋಧರ ಸಾಹಸಮಯ ಚಿತ್ರಣದಿಂದ ಹಿಡಿದು, ಸ್ಥಳೀಯರ ಜೀವನದ
ಕುರಿತ ಅನೇಕ ಚಿತ್ರಗಳು ಆಗಲೇ ಬಂದಿವೆ. ಏಳನೇ ಬೆಂಗಳೂರು ಅಂತರರಾಷ್ಟ್ರೀಯ
ಚಲನ ಚಿತ್ರೋತ್ಸವದಲ್ಲಿ ಮೊದಲನೇ ದಿನ ಇದೇ ಧಾಟಿಯ ಮತ್ತೊಂದು ಚಿತ್ರ, ಇನ್
ಬಿಟ್ವೀನ್ ವರ್ಲ್ಡ್ಸ್ ಪ್ರದರ್ಶಿತವಾಯಿತು. ಫಿಯೋ ಅಲಡಾಗ್ ನಿರ್ದೇಶನದ ಜರ್ಮನ್
ಭಾಷೆಯ ಚಿತ್ರ ಇದಾಗಿದೆ.
ತನ್ನ ಸಹೋದರನನ್ನು ಕಳೆದು ಕೊಂಡಿರುವ ಜಸ್ಪರ್ ಎನ್ನುವ ಕಮಾಂಡರ್ ಎರಡನೇ
ಬಾರಿಗೆ ಅಫಾನಿಸ್ಥಾನಕ್ಕೆ ಬರುವುದರೊಂದಿಗೆ ಚಿತ್ರ ಆರಂಭವಾಗುತ್ತದೆ. ಆತ ಯುದ್ಧ ಭೂಮಿಯಲ್ಲಿ ತನ್ನೊಳಗಿನ ಹೆದರಿಕೆಗಳನ್ನು
ಎದುರಿಸಿ, ಅವುಗಳನ್ನು ಮೆಟ್ಟಿ ಬೆಳೆದು ನಿಲ್ಲಲು ಪ್ರಯತ್ನಿಸುತ್ತಿರುವುದು
ಕಾಣಿಸುತ್ತದೆ. ಆದರೆ ಅನಿರೀಕ್ಷಿತವಾಗಿ ಅವನಿಗೆ ಒದಗಿ ಬರುವ ದ್ವಿಭಾಷಿ,
ತಾರೀಖ್ ಹಾಗೂ ಅವನ ಪ್ರಪಂಚದ ಮೂಲಕ ತೆರೆದುಕೊಳ್ಳುವ ಭಾವನೆಗಳ ಕಥನವೇ ಇನ್ ಬಿಟ್ವೀನ್
ವರ್ಲ್ಡ್ಸ್.

ಯುದ್ಧಕ್ಕೆ ಸಂಬಂಧಿಸಿದ ಚಿತ್ರಗಳೆಂದರೆ, ಧೀರ ನಾಯಕರು, ಎಂಥದ್ದೇ ಪರಿಸ್ಥಿತಿಗಳನ್ನು
ಎದುರಿಸಿ ನಿಲ್ಲುವ ಸೈನ್ಯದ ಕಥನ ಇಂಥವುಗಳು ಸಾಮಾನ್ಯವಾಗಿರುವಾಗ, ಇನ್ ಬಿಟ್ವೀನ್
ವರ್ಲ್ಡ್ಸ್ ಅಂಥದ್ದನ್ನು ಅಷ್ಟೇನೂ ತೋರಿಸುವುದಿಲ್ಲ. ಚಿತ್ರದ ಆರಂಭದಲ್ಲೇ
ರೈಲ್ವೇ ಕ್ರಾಸಿಂಗ್ ಒಂದರಲ್ಲಿ ತಾರೀಖ್ ತನ್ನ ಬೈಕಿನಲ್ಲಿ ನಿಂತು ಕಾಯುತ್ತಿರಬೇಕಾದರೆ, ಆತನನ್ನು ಹಾದು ಹೋಗುವ ದೈತ್ಯ ಯುದ್ಧ ಸನ್ನಧ ಟ್ರಕ್, ಅದು ಹಾರಿಸಿದ
ಧೂಳನ್ನು ಕೊಡವಿ ಮುನ್ನಡೆಯುವ ತಾರೀಖ್ ಚಿತ್ರದ ಜೀವಾಳವನ್ನು ಹಿಡಿದಿಡುತ್ತವೆ. ಲೆವೆಲ್ ಕ್ರಾಸಿಂಗಿನ ಅತ್ತ ಒಂದು ಪ್ರಪಂಚ, ಇತ್ತ ಇನ್ನೊಂದು ಪ್ರಪಂಚ.
ಯುದ್ಧ ನಡೆಯುವಾಗ ಎರಡೂ ಪಕ್ಷಗಳ ನಡುವೆ, ದ್ವಿಭಾಷಿಯಾಗಿಯೂ,
ಅದರ ಮೂಲಕ ಮನಸ್ಸಿನ ಕೊಂಡಿಯಾಗಿಯೂ ತಾರೀಖ್ ಮೂಡಿ ಬರುತ್ತಾನೆ. ಒಂದು ಉತ್ತಮ ಜೀವನದ ಆಸೆಯಲ್ಲಿ, ತಾರೀಖ್ ಹಾಗೂ ಅವನ ತಂಗಿ ಅಫ್ಘಾನಿಸ್ಥಾನವನ್ನು
ಬಿಡಲು ಸತತ ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ, ತಪ್ಪು ಕಡೆಯವರೊಂದಿಗೆ ಹೋರಾಟದಲ್ಲಿ ಭಾಗಿಯಾಗಿದ್ದೀಯ ಎಂದು ಅವನ ಓರಗೆಯವರು ಇವರನ್ನು ಹಿಂಸಿಸುತ್ತಿರುತ್ತಾರೆ.
ಚಿತ್ರದುದ್ದಕ್ಕೂ ಜರ್ಮನ್ ಸೇನೆಯ ಅಗೋಚರ ಧ್ವನಿಗಳು ತಾರೀಖ್ ತಮಗೆ ಕೆಲಸಕ್ಕೆ ಬೇಕು
ಆದರೆ ಅವನ ಜವಾಬ್ದಾರಿ ಬೇಡ ಎನ್ನುವ ನಿಲುವನ್ನೇ ಹೊಂದುತ್ತಾ ಹೋಗುತ್ತಾರೆ. ಆದರೆ ಜಸ್ಪರ್ ಮನಸ್ಸಿ ಕಲಕಿ, ಆತ ಯುದ್ಧ ನುಂಗಿದ ತನ್ನ ಸಹೋದರನನ್ನು
ಇವನಲ್ಲಿ ಕಾಣುತ್ತಾನೆ. ಅದೇ ಯುದ್ಧದಲ್ಲಿ ತನ್ನ ಸಹೋದರನನ್ನೂ ಕಳೆದುಕೊಂಡ,
ಜರ್ಮನ್ ಸೇನೆಯ ಜೊತೆಯಲ್ಲಿರುವ ಸ್ಥಳೀಯ ನಾಯಕನೂ ತಾರೀಖ್‍ನಲ್ಲಿ ತನ್ನ ಸಹೋದರನನ್ನೂ ಕಾಣುತ್ತಾನೆ. ತಾರೀಖ್ ಎರಡೂ ಪ್ರಪಂಚಗಳ
ನಡುವೆ ಸಂಚರಿಸುತ್ತಾ, ಎಲ್ಲೂ ಅಸ್ಥಿತ್ವ ಕಾಣದೇ ತೊಳಲಾಡುತ್ತಾನೆ.
ಆದರೆ ದುರಂತಮಯವಾಗಿ ಕೊನೆಗೂ ಎಲ್ಲೂ ನೆಲೆ ಕಾಣದಾಗುತ್ತಾನೆ.
ಯುದ್ಧ ಸಂಬಂಧೀ ಸಿನೆಮಾಗಳಲ್ಲಿ ಸಾಮಾನ್ಯವಾಗಿ ಕಾಣದಂಥಾ, ಧ್ವನ್ಯಾತ್ಮಕ ದೃಶ್ಯಗಳು ಈ ಚಿತ್ರದಲ್ಲಿ ಉದ್ದಕ್ಕೂ
ಸಾಕಷ್ಟು ಕಾಣುತ್ತಾ ಹೋಗುತ್ತದೆ. ಎಂದೂ ಜೊತೆಗೂಡದ ರೈಲು ಹಳಿಗಳನ್ನು ಸದಾ
ದಾಟುತ್ತಾ ಹೋಗುವ ತಾರೀಖ್‍ನ ಚಿತ್ರಣ, ಜಸ್ಪರ್‍
ತಂಡ ಹಾಗೂ ಸ್ಥಳೀಯ ನಾಯಕ ಹರ್ಲೂಂನ್ ತಂಡದ ನಡುವೆ ಒಮ್ಮೆ ಸುತ್ತಾಡಿ ಬರುವ ತಾರೀಖ್,
ಸೈನ್ಯ ನೆಲೆ ನಿಂತಲ್ಲಿಂದ ತನ್ನ ತಂಗಿ ಇರುವ ಸ್ಥಳಕ್ಕೆ ರಾತ್ರಿಹೊತ್ತಿನಲ್ಲಿ ಕದ್ದ
ಬೈಕಿನಲ್ಲಿ ಹೋಗಿ ಬರುವ ತಾರೀಖ್ ಇವೆಲ್ಲಾ ಚಿತ್ರಣಗಳೊಂದಿಗೇ, ಯುದ್ಧದ ಘೋರತೆಯ
ನಡುವೆಯೂ, ಮೊಬೈಲ್ ನೆಟ್ವರ್ಕಿಗೆ ಹಪಹಪಿಸುವ ತಾರೀಖ್ ಹೀಗೆ ಬೇರೆ ಬೇರೆಯದೇ
ಆದ ಪ್ರಪಂಚಗಳ ನಡುವೆ ಹರಿದು ಹೋಗಿರುವ ಅನೇಕ ಪಾತ್ರಗಳ ಚಿತ್ರಣ ಇನ್ ಬಿಟ್ವೀನ್ ವರ್ಲ್ಡ್ಸ್ ಮೂಲಕ
ಆಗುತ್ತದೆ.
ಯುದ್ಧ ಸಂಬಂಧೀ ಚಿತ್ರಗಳಲ್ಲಿ ಹಾಲಿವುಡ್ ಒಂದು ವ್ಯಾಕರಣವನ್ನೇ ರೂಪಿಸಿದೆ
ಎನ್ನಬಹುದು. ಹೀಗಿದ್ದಾಗ್ಯೂ, ಇನ್ ಬಿಟ್ವೀನ್ ವರ್ಲ್ಡ್ಸ್ ಚಿತ್ರದಲ್ಲಿ ಹೊಸದೊಂದು ರೀತಿಯ ಸೂಕ್ಷ್ಮ ನಿರೂಪಣಾ ಶೈಲಿ ನನಗೆ
ಬಹಳ ಮುದ ನೀಡಿತು. ನೇರ ಸಂಬಂಧವಿಲ್ಲ, ಕೇವಲ ಕಥೆಯ
ಮುನ್ನಡೆಯ ದೃಷ್ಟಿಯಿಂದ ಅಗತ್ಯವಿಲ್ಲ ಎನ್ನಿಸುವ ಅನೇಕ ಚಿತ್ರಿಕೆಗಳು ಚಿತ್ರದುದ್ದಕ್ಕೂ ಬಂದು ಹೋಗುತ್ತವೆ.
ಇದರಿಂದ ಒಂದು ಪರಿಸರವನ್ನು ಈ ಚಿತ್ರ ಕಟ್ಟಿ ಕೊಡುತ್ತದೆ. ದನದ ಹಾಲನ್ನು ಕರೆಯಲು ಪ್ರಯತ್ನಿಸುವ ಜರ್ಮನ್ ಸೈನಿಕ, ಆಗ ಅವನಿಗೆ
ದನ ಒದೆಯದಿರಲು ದನದ ಮುಖವನ್ನೇ ತನ್ನ ಪ್ರೇಯಸಿಯ ಮುಖದಂತೆ ನೋಡುತ್ತಾ, ಅದನ್ನು
ಒಲಿಸಿಕೊಳ್ಳುತ್ತಿರುವ ಇನ್ನೊಬ್ಬ ಸೈನಿಕ, ಮುಂದೆ ಇನ್ಯಾವುದೋ ದನಕ್ಕೆ ಅನಿವಾರ್ಯವಾಗಿ
ಗುಂಡು ಹೊಡೆದು ಕೊಲ್ಲಬೇಕಾದಾಗ ಅದಕ್ಕೆ ಪರಿಹಾರವನ್ನು ಜರ್ಮನ್ ಸೈನಿಕರೇ ಒಟ್ಟು ಮಾಡಿ ಕೊಡುವುದು
ಹೀಗೆ ಎರಡು ಪ್ರಪಂಚಗಳ ನಡುವೆ ಚಾಚಿರುವ ಕೈಯ್ಯನ್ನು ತೋರಿಸುವಲ್ಲಿ ಚಿತ್ರ ಯಶಸ್ವಿಯಾಗಿ ನಿರ್ವಹಿಸುತ್ತದೆ.
ಕಥೆಯನ್ನು ಮೀರಿ, ಭಾವನೆಗಳೊಂದಿಗೆ ಮಾತನಾಡುವ ಸಾಮರ್ಥ್ಯದಿಂದಾಗಿ
ಇನ್ ಬಿಟ್ವೀನ್ ವರ್ಲ್ಡ್ಸ್ ನನಗೆ ಸಂತೋಷ ನೀಡಿತು.
Share This