ಇತ್ತೀಚೆಗೆ ಅವತಾರ್ ಎಂಬ ಸಿನೆಮಾವನ್ನು ನೋಡಿದೆ. ಈ ಕುರಿತು ಸ್ವಲ್ಪ ಚರ್ಚೆ ಮಾಡೋಣ ಎಂದು ಬರೆಯುತ್ತಿದ್ದೇನೆ. ಈ ಮೂರು ಆಯಾಮದ ಅಥವಾ ಸ್ಟೀರಿಯೋಸ್ಕೋಪಿಕ್ ಎಂದು ಕರೆಯಲ್ಪಡುವ ಚಿತ್ರದ ರಹಸ್ಯ ಏನು? ಈ ತಂತ್ರದ ಬಳಕೆ ಹಾಗೂ ಅವತಾರ್ ಚಿತ್ರದ ಕುರಿತಾಗಿ ಒಂದಷ್ಟು ಮಾತುಗಳು ಇಲ್ಲಿ. ನೀವು ಚಿತ್ರ ನೋಡಿದ್ದೀರಾ? ಇಲ್ಲವಾದರೆ, ಬೇಗನೇ ನೋಡಿ. ಇದು ಖಂಡಿತಾ ಒಂದು ಒಳ್ಳೆಯ ಅನುಭವ. ನನ್ನ ಪ್ರಾಯದ ಅನೇಕರಿಗೆ ಮೈ ಡಿಯರ್ ಕುಟ್ಟಿಚ್ಚಾತನ್ ಚಿತ್ರವನ್ನು ನೋಡಿದ ಅಸ್ಪಷ್ಟ ನೆನಪಾದರೂ ಇರಬಹುದು. ಆದರೆ ನನಗಿಂತ ಸಣ್ಣ ಪ್ರಾಯದವರಿಗೆ ಈ ಮಜಾ ಸಿಗದಿರುವ ಸಾಧ್ಯತೆಯೇ ಹೆಚ್ಚು.

ಮೊದಲಿಗೆ ಏನಿದು ಈ ಮೂರು ಆಯಾಮದ ಚಿತ್ರ? ನಾವು ಸಾಮಾನ್ಯವಾಗಿ ಎರಡು ಆಯಾಮದ ಚಿತ್ರಗಳನ್ನೇ ಸ್ವಾಭಾವಿಕ ಎಂದು ಚಲನ ಚಿತ್ರದ ಮಟ್ಟಿಗೆ ಒಪ್ಪಿಕೊಂಡು ಬಿಟ್ಟಿದ್ದೇವೆ. ಆದರೆ ನಾವು ನಿತ್ಯ ಜೀವನದಲ್ಲಿ ವ್ಯವಹರಿಸುವಾಗ ಒಂದು ವಸ್ತು ನಮ್ಮಿಂದ ಎಷ್ಟು ದೂರದಲ್ಲಿದೆ, ಯಾವ ಗಾತ್ರದಲ್ಲಿ ಕಾಣಿಸುತ್ತಿದೆ ಮತ್ತು ನಮ್ಮ ನಡುವಿನ ದೂರದಿಂದಾಗಿ ಅದರ ನಿಜ ಗಾತ್ರ ಎಷ್ಟಿರಬಹುದು ಎಂದೆಲ್ಲಾ ಲೆಕ್ಕ ಹಾಕುತ್ತೇವೆ. ಇದು ನಮ್ಮ ನಿತ್ಯ ಜೀವನದಲ್ಲಿ ನಡೆಯುವುದು, ವ್ಯವಹರಿಸುವುದು ಇತ್ಯಾದಿಗಳಿಗೆ ಸಹಕಾರಿಯಾಗಿರುತ್ತದೆ. ಆದರೆ ಎರಡು ಆಯಾಮದ ಚಿತ್ರಗಳಲ್ಲಿ ಈ ಸೌಲಭ್ಯ ನಮಗೆ ಇಲ್ಲ. ಏಕೆಂದರೆ, ಅಲ್ಲಿ ಎಲ್ಲಾ ಚಿತ್ರಗಳೂ ಒಂದೇ ಚಪ್ಪಟೆ ಪರದೆಯ ಮೇಲೆ ಕಾಣಿಸುತ್ತವೆ. ಈ ಕೊರತೆಯನ್ನು ನೀಗಲು ಕಣ್ಣಿನ ವಿಧಾನವನ್ನೇ ಅನುಕರಿಸಲು ವಿಜ್ಞಾನಿಗಳು ಪ್ರಯತ್ನಿಸಿದ್ದರ ಫಲವೇ ಈ ಮೂರು ಆಯಾಮದ ಚಿತ್ರಗಳು.

ಮೂಲತಃ ಕಣ್ಣು ಈ ಮೂರು ಆಯಾಮವನ್ನು ಪಡೆಯುವುದು ಎರಡು ಕಣ್ಣುಗಳ ನಡುವಿನ ಅಂತರದಿಂದಾಗಿ. ಈ ಅಂತರದಿಂದಾಗಿ ಎರಡೂ ಕಣ್ಣುಗಳು ಸಣ್ಣ ಮಟ್ಟಿನ ಭಿನ್ನ ಕೋನಗಳಿಂದ ಒಂದೇ ವಸ್ತುವನ್ನು ನೋಡುತ್ತವೆ. ಈ ಭಿನ್ನ ಬಿಂಬಗಳನ್ನು ಮೆದುಳು ಸಂಸ್ಕರಿಸುವಾಗ ವಸ್ತುವಿನ ಮೂರನೇ ಆಯಾಮದ ಕಲ್ಪನೆಯನ್ನು ಮೂಡಿಸುತ್ತದೆ. ಮೂರನೇ ಆಯಾಮದ ಚಲನಚಿತ್ರಗಳನ್ನು ನೋಡಲು ಬಳಸುವ ಕನ್ನಡಕಗಳೂ ಇದೇ ವಿಧಾನವನ್ನು ಅನುಕರಿಸುತ್ತವೆ. ಆ ಕನ್ನಡಕವನ್ನು ಒಮ್ಮೆ ತೆಗೆದು ಚಿತ್ರವನ್ನು ನೋಡಿದರೆ ನಿಮಗೆ ತೆರೆಯ ಮೇಲೆ ಕಾಣಿಸುವುದು ಒಂದು ಮಬ್ಬಾದ, ವಿಚಿತ್ರ ಚಿತ್ರವಾಗಿರುತ್ತದೆ. ಚಿತ್ರದ ಎರಡು ಬಿಂಬವನ್ನು ಪರದೆಯ ಮೇಲೆ ಸಣ್ಣದಾದ ಭಿನ್ನ ಕೋನದಲ್ಲಿ ಪ್ರದರ್ಶಿಸಲಾಗುತ್ತದೆ. ಅದರಲ್ಲಿ ಭಿನ್ನ ವರ್ಣಗಳನ್ನೂ ಬಳಸಿಕೊಳ್ಳಲಾಗುತ್ತದೆ. ನಾವು ಧರಿಸುವ ವಿಶೇಷ ಕನ್ನಡಕಕ್ಕೆ ಈ ಭಿನ್ನ ವರ್ಣವನ್ನು ಸೋಸುವ ಗುಣ ಇರುತ್ತದೆ. ಹೀಗಾಗಿ ಒಂದು ಕೋನದ ಬಿಂಬ ಒಂದು ಕಣ್ಣನ್ನಷ್ಟೇ ಪ್ರವೇಶಿಸುವಂತೆ ಮಾಡುತ್ತದೆ. ಹೀಗಾಗಿ ಎರಡೂ ಕಣ್ಣುಗಳಿಗೆ ಸಣ್ಣ ಅಂತರದಿಂದ ತೋರಿಸಲ್ಪಡುತ್ತಿರುವ ಭಿನ್ನ ಬಿಂಬಗಳೇ ಕಾಣಿಸಿಕೊಂಡು ಇದರಿಂದಾಗಿ ಮೂರನೇ ಆಯಾಮದ ಕಲ್ಪನೆ ನಮ್ಮ ಮೆದುಳಿನಲ್ಲಿ ಉಂಟಾಗುತ್ತದೆ. (ಈ ಕುರಿತಾದ ಹೆಚ್ಚಿನ ಮಾಹಿತಿಗಾಗಿ ವಿಕಿ ಪೀಡಿಯಾದ ಈ ಪುಟವನ್ನು ನೋಡಿ)

ಒಮ್ಮೆ ನಮ್ಮ ಕೈಯಲ್ಲಿ ಒಂದು ಹೊಸಾ ಸಾಧ್ಯತೆ ಬಂದ ಮೇಲೆ ಅದರ ಬಳಕೆಯ ಬಗ್ಗೆ ಮಾತಾಡೋಣ. ಮೂರನೇ ಆಯಾಮದಿಂದ ಚಿತ್ರ ಮಾಧ್ಯಮಕ್ಕೆ ಉಂಟಾಗುವ ಒಂದು ಪ್ರಮುಖ ಉಪಯೋಗ ಎಂದರೆ, ಈ ವಿಧಾನವು ಪ್ರೇಕ್ಷಕನನ್ನು ನೇರ ಘಟನಾ ಸ್ಥಳಕ್ಕೇ ಕರೆದೊಯ್ದ ಅನುಭವವನ್ನು ಕೊಡುತ್ತದೆ. ಇದರಿಂದಾಗಿ ಚಿತ್ರ ನಿರ್ಮಿಸಲು ಪ್ರಯತ್ನಿಸುತ್ತಿರುವ ಭ್ರಮೆ ಇನ್ನಷ್ಟು ಸುಲಭವಾಗಿ ರೂಪುಗೊಳ್ಳುತ್ತದೆ. ಹಾಗಾದರೆ ಈ ತಂತ್ರವನ್ನು ಸಿನೆಮಾಕ್ಕೆ ಬಳಸಿಕೊಳ್ಳುವುದು ಹೇಗೆ? ಕಥೆ ಹೇಳುವ ಹೊಸ ಸಾಧನವೊಂದರ ಸಾಧ್ಯತೆಯನ್ನು ಚೆನ್ನಾಗಿ ಬಳಸಿಕೊಳ್ಳುವಂಥಾ ಕಥೆಯನ್ನು ಆಯ್ಕೆ ಮಾಡುವಲ್ಲಿ ಜಾಣ್ಮೆಯನ್ನು ತೋರಿಸಬಹುದು ಅಲ್ವಾ? ಅವತಾರ್ ಅಂಥಾ ಒಂದು ಕಥೆಯನ್ನು ತೆಗೆದುಕೊಳ್ಳುವಲ್ಲಿ ತಕ್ಕ ಮಟ್ಟಿಗೆ ಸಫಲವಾಗಿದೆ ಎನ್ನಬಹುದು. ನಿಜವಾದ ಜನರ ಒಡನೆ ಇರುತ್ತಲೇ, ಫಕ್ಕನೇ ಇನ್ನೊಂದು ಅಜ್ಞಾತ ಜಗತ್ತಿಗೆ ಕರೆದೊಯ್ಯುವ ಮತ್ತೆ ಅಲ್ಲೂ ಅಷ್ಟೇ ನಂಬಿಕರ್ಹವಾಗಿ ಪ್ರಪಂಚವನ್ನು ರೂಪಿಸುವಲ್ಲಿ ಮೂರನೇ ಆಯಾಮದ ಬಳಕೆಯನ್ನು ಸಾಕಷ್ಟು ಚೆನ್ನಾಗಿಯೇ ಬಳಕೆ ಮಾಡಿಕೊಳ್ಳಲಾಗಿದೆ. ಅಲ್ಲದೇ ಅನೇಕ ಬಾರಿ ಪರದೆಯಿಂದ ಪುಟಿದೇಳುವ ಕಲ್ಲಿನ ಚೂರೋ… ಬಾಂಬೋ ನಮ್ಮೆಡೆಗೆ ನುಗ್ಗಿ ಬಂದು ನಮ್ಮನ್ನು ಸೀಟಿನಿಂದ ಹಾರುವಂತೆ ಮಾಡುವಲ್ಲೂ ಸಫಲವಾಗುತ್ತದೆ. ‘ಥ್ರಿಲ್’ಕೊಡುತ್ತದೆ.

ಆದರೆ ಈ ಮೂರನೇ ಆಯಾಮದ ಬಳಕೆ ಮಾಡಿಕೊಳ್ಳುತ್ತಿರುವಾಗ ಎರಡು ಆಯಾಮದ ಸಿನೆಮಾ ನಿರ್ಮಾಣದ ವ್ಯಾಕರಣವನ್ನೇ ಬಳಸುವುದು ಸರಿಯೇ ಎಂಬ ಪ್ರಶ್ನೆ ನನ್ನನ್ನು ಸಿನೆಮಾದುದ್ದಕ್ಕೂ ಕಾಡುತ್ತಿತ್ತು. ಸಾಧಾರಣವಾಗಿ ಹಾಲಿವುಡ್ ಚಿತ್ರಗಳಲ್ಲಾಗಲೀ ಭಾರತೀಯ ಚಿತ್ರಗಳಲ್ಲಾಗಲೀ (ಸಾಮಾನ್ಯವಾಗಿ ಎಂದರೆ ಪ್ರತಿ ಬಾರಿ ಅಲ್ಲ ಎನ್ನುವುದನ್ನು ಗಮನಿಸಿ) ನಾವು ನೋಡುವ ನಾಟಕಗಳಂತೆ ಕ್ಯಾಮರಾ ಪ್ರೇಕ್ಷಕರ ಸ್ಥಾನದಲ್ಲಿ ಇದ್ದು ಎದುರಿನಲ್ಲಿ ಇರುವ ವೇದಿಕೆಯ ಮೇಲೆ ಒಂದಿಷ್ಟು ದೂರದಲ್ಲಿ ನಾಟಕವಾಗುತ್ತಿರುವುದನ್ನು ನೋಡುವಂತೆ ಚಿತ್ರಿಸಿರುವುದನ್ನು ನೋಡುವುದು ನಮಗೆ ಅಭ್ಯಾಸ. ಇನ್ನು ಓಝೂವಿನಂಥವರ ಚಿತ್ರಗಳನ್ನು ನೋಡಿದವರಿಗೆ ಅವನ ಭಿನ್ನವಾದ ಚಿತ್ರೀಕರಣ ವಿಧಾನದ ಅರಿವೂ ಇರಬಹುದು. ಇಲ್ಲೆಲ್ಲ ಕಡೆಯಲ್ಲೂ ನಾವು ಇರುವುದು ಕೇವಲ ಎರಡು ಆಯಾಮದ ಚಿತ್ರಗಳೊಂದಿಗೆ ಮಾತ್ರ. ಆದರೆ ಈಗ ನಾವು ವ್ಯವಹರಿಸುತ್ತಿರುವುದು ಮೂರನೇ ಆಯಾಮವನ್ನೂ ಹೊಂದಿರುವ ಮಾಧ್ಯಮದೊಂದಿಗೆ. ಹೀಗಾಗಿ… ಪ್ರೇಕ್ಷಕನಿಗೆ ತಾನೂ ವೇದಿಕೆಯ ಮೇಲೆ ನಿಂತು ನಟರೊಡನೆ ಇದ್ದುಕೊಂಡೇ ಇಡೀ ಕಥನವನ್ನು ಗಮನಿಸುವಂಥಾ ಅನುಭವವನ್ನು ಈ ಮಾಧ್ಯಮ ಕೊಡುತ್ತಿರುವಾಗ ಅಲ್ಲಿ ಚಿತ್ರೀಕರಣ ವಿಧಾನ, ಸಂಕಲನ ವಿಧಾನ ಹೇಗೆ ಭಿನ್ನವಾಗಿರಬೇಕು ಎನ್ನುವುದರ ಕುರಿತಾಗಿ ಸಾಕಷ್ಟು ಯೋಚನೆಗಳು ನಡೆದಿಲ್ಲ ಎಂದು ನನಗೆ ಅವತಾರ್ ಚಿತ್ರವನ್ನು ನೋಡಿದಾಗ ಅನಿಸಿತು.

ಇನ್ನು ಚಿತ್ರದ ಕಥೆಯ ಕಡೆಗೆ ಬಂದರೆ, ಮೂಲ ಅಮೇರಿಕನ್ನರನ್ನು ದಮನಿಸಿ ಅಭಿವೃದ್ಧಿಯ ಹೆಸರಿನಲ್ಲಿ ಅಮೇರಿಕಾವನ್ನು ಕಟ್ಟಿದ ಕಥೆಯದ್ದೇ ಅಥವಾ ಮತ್ತೆ ಅಭಿವೃದ್ಧಿಯ ಹೆಸರಿನಲ್ಲಿ ಆಫ್ರಿಕಾವನ್ನು ದಮನಿಸಿದ, ಅಭಿವೃದ್ಧಿಯ ಹೆಸರಿನಲ್ಲಿ ಹುಚ್ಚಾಪಟ್ಟೇ ಕಾಡನ್ನು ಕಡಿಯುವ ಕಥೆಯ ಒಂದು ರೂಪ ಈ ಚಿತ್ರದ ಕಥೆ. ಜಗತ್ತಿನಲ್ಲಿ ಎಲ್ಲದರಲ್ಲೂ ಒಂದು ಸಮತೋಲನವಿದೆ, ಅದೊಂದು ದೊಡ್ಡ ಜಾಲ ನಾವು ಇದರ ಒಂದು ಭಾಗ ಅಷ್ಟೇ ಎನ್ನುವ ಅರಿವಿರುವ ಮೂಲನಿವಾಸಿಗಳನ್ನು ತಮ್ಮ ಯಂತ್ರಶಕ್ತಿಯ ಮೇಲೆ ಭರವಸೆಯಿರುವ ಇನ್ನೊಂದು ಆಧಿನಿಕ (!) ಜನಾಂಗ ನಾಶ ಮಾಡುವ ಕಥೆ ಹಾಗೂ ಅದರ ನಡುವೆ ಒಂದು ಪ್ರೇಮ ಸಂಬಂಧ, ಅದರ ಮೂಲಕ ಸಮತೋಲನದ ಪ್ರಯತ್ನ… ಮತ್ತೆ ಅದೇ ಅಮೇರಿಕನ್ ಸಿನೆಮಾದ ಹಳಸಲು ಫಾರ್ಮ್ಯುಲಾ! ತುಂಬಾ ಬಾಂಬು, ಕೋವಿಗಳ ನಡುವೆ ಒಂದು ಕಥೆ ಇದು. ತಂತ್ರಜ್ಞಾನದ ದರ್ಪವನ್ನು ಉದ್ದಕ್ಕೂ ಮೆರೆಯುವ ಚಿತ್ರ ಕೊನೆಗೆ ಎಲ್ಲೂ ತಟ್ಟದೇ ಸುಳಿದು ಹೋಗುವುದು, ಇಂಥಾ ಚಿತ್ರಗಳ ಕಥಾವಸ್ತುವಿನ ಪುನರಾವರ್ತನೆಯ ದೋಷ ಎಂದು ನನಗೆ ಅನಿಸುತ್ತದೆ.

ಒಟ್ಟಿನಲ್ಲಿ ಇದೊಂದು ಸಾಧಾರಣ ಸಿನೆಮಾ. ಆದರೆ ಮೂರನೇ ಆಯಾಮದಲ್ಲಿ ಚಿತ್ರವನ್ನು ನೋಡಿ ಅರಿವಿಲ್ಲದವರು ಖಂಡಿತಾ ಆ ಅನುಭವಕ್ಕಾಗಿಯಾದರೂ ಚಿತ್ರವನ್ನು ನೋಡಲೇ ಬೇಕು.

[polldaddy poll=2529578]

Share This