ಕಲ್ಕತ್ತದ ಹೌರಾ ರೈಲ್ವೇ ನಿಲ್ದಾಣದಲ್ಲಿ ನಾನು ಮೊದಲ ಬಾರಿಗೆ ಇಳಿದದ್ದು ೨೦೦೪ರಲ್ಲಿ. ಆವರೆಗೆ ಕಲ್ಕತ್ತಾ ದೂರದ ಒಂದು ಊರಾಗಿತ್ತು ನನಗೆ. ರೈಲ್ವೇ ಸ್ಟೇಷನ್ನಿನಿಂದ ಹೊರಗೆ ಬರುತ್ತಲೇ ಅಲ್ಲೇ ಸಮೀಪದಲ್ಲಿ ಕಾಣುತ್ತಿತ್ತು ಹೌರಾ ಸೇತುವೆ. ಕಲ್ಕತ್ತದ ಮೊದಲ ದರ್ಶನ ನನಗೆ ಆಗಿದ್ದು ಹೀಗೆ. ಅಂದಿನಿಂದ ಇಂದಿನವರೆಗೆ ಅನೇಕ ಬಾರಿ ಕಲ್ಕತ್ತಾಗೆ ನಾನು ಹೋಗಿದ್ದೇನೆ. ಆಲ್ಲಿನ ಜನ, ಕ್ರಮಗಳನ್ನು ಒಂದಷ್ಟು ನೋಡಿದ್ದೇನೆ. ಹಾಗಾಗಿ ಕಲ್ಕತ್ತ ನನ್ನ ಮನಸ್ಸಿನಲ್ಲಿ ಒಂದು ವಿಶೇಷ ಸ್ಥಾನವನ್ನು ಪಡೆದಿದೆ. ಹಿಂದೆ ಒಬ್ಬ ಕಲ್ಕತ್ತಾದ ಗೆಳೆಯ ಹೇಳಿದ್ದು ನೆನಪಾಗುತ್ತದೆ ಇಲ್ಲಿ. ಅವನು ಬರೆದ ಕವನವೊಂದನ್ನು ನನಗೆ ತೋರಿಸಿದ. ಹೋ! ಪರವಾಗಿಲ್ಲ ನೀನು ಕವನ ಬೇರೆ ಬರೆಯುತ್ತೀಯಾ ಎಂದು ನಾನು ಅಚ್ಚರಿ ಪಟ್ಟೆ. ಆತ ಸರಳವಾಗಿ, “ಹೌದು… ನಾನೊಬ್ಬ ಬೆಂಗಾಲಿ. ಕವನ ಬರೆಯಲೇ ಬೇಕಲ್ಲಾ..?” ಎಂದು ಉತ್ತರ ಕೊಟ್ಟ. ಅಂದು ನಾನು ನಕ್ಕು ಬಿಟ್ಟಿದ್ದೆ.

ಆದರೆ ಒಮ್ಮೆ ಕಲ್ಕತ್ತಾದ ಗಲ್ಲಿಗಳಲ್ಲಿ ಸುತ್ತಿ ಬಂದರೆ ಅವನ ಮಾತು ತೀರಾ ಸುಳ್ಳಲ್ಲ ಎನಿಸುತ್ತದೆ. ಗಲ್ಲಿ ಗಲ್ಲಿಗಳಲ್ಲಿ ಜನ ಸಾಹಿತ್ಯ, ಸಿನೆಮಾ ಚಿತ್ರಕಲೆ ಹೀಗೆ ಒಂದಲ್ಲ ಒಂದು ಹುಚ್ಚು ಇರುವವರೇ ಸರಿ. ಗೆಳೆಯ ಪರಮೇಶ್ವರರೊಂದಿಗೆ ಕಲ್ಕತ್ತಾದ ಗಲ್ಲಿಗಳನ್ನು ಅಲೆದದ್ದು, ಸುಂದರಬನ ನೋಡಿದ್ದು, ಯಾವುದೋ ಗಲ್ಲಿಯಲ್ಲಿ ಮಣ್ಣಿನ ಕುಡಿಕೆಯಲ್ಲಿ ಚಾ ಕುಡಿದು ಮಣ್ಣಿನ ಕುಡಿಕೆ ಒಡೆದು ಸಂತೋಷ ಪಟ್ಟದ್ದು, ಮತ್ತೆ ಇನ್ಯಾರೋ ಗೆಳೆಯನ ಮದುವೆಗೆ ಹೋಗಿ ಟ್ರಾಮ್‍ನಲ್ಲಿ ಓಡಾಡಿದ್ದು, ಯಾವುದೋ ಹುಡುಗಿಯನ್ನು ನೋಡಲೆಂದು ಬಸ್ಸಿನಿಂದ ಹಾರಿ ಹೌರಾ ಸ್ಟೇಷನ್ನಿಗೆ ಗೆಳೆಯರೊಡನೆ ದೌಡಾಯಿಸಿದ್ದು ಇವೆಲ್ಲ ಕಲ್ಕತ್ತಾಕ್ಕೆ ನನ್ನ ಭಿನ್ನ ಭಿನ್ನ ಭೇಟಿಯ ಮಧುರ ನೆನಪುಗಳು. ಹೀಗೆ ಹಲವು ರೀತಿಗಳಲ್ಲಿ ಕಲ್ಕತ್ತ ತನ್ನ ಸೌಂದರ್ಯದಿಂದ, ತನ್ನ ಕೊಳಕಿನಿಂದ ನೆನಪಿಗೆ ಬರುತ್ತಾಳೆ.

ಇಷ್ಟೆಲ್ಲಾ ರಾಮಾಯಣ ಯಾಕಪ್ಪಾ ಅಂದರೆ, ಇತ್ತೀಚೆಗೆ ನಾನು ನೋಡಿದ ಒಂದು ಸಾಕ್ಷ್ಯಚಿತ್ರದ ಕುರಿತಾಗಿ ನಿಮಗೆ ಹೇಳೋದಕ್ಕಾಗಿ. ೨೦೦೪ರಲ್ಲಿ ನಿರ್ಮಿಸಲಾದ ಈ ಚಿತ್ರ ಆಸ್ಕರ್ ಸೇರಿದಂತೆ, ಅನೇಕ ಪ್ರತಿಷ್ಟಿತ ಪ್ರಶಸ್ತಿಗಳನ್ನು ಪಡೆದ ‘ಬಾರ್ನ್ ಟು ಬ್ರಾಥೆಲ್ಸ್’ ಎಂಬ ಸಾಕ್ಷ್ಯಚಿತ್ರದ ಬಗ್ಗೆ ನಾನು ಹೇಳುತ್ತಿರುವುದು. ಕಲ್ಕತ್ತಾದ ಇನ್ನೊಂದು ಮಗ್ಗುಲನ್ನು ಪರಿಚಯಿಸುವ ಚಿತ್ರ ಇದು. ಎಲ್ಲಾ ಮಹಾನಗರಿಗಳಂತೆ ಕಲ್ಕತ್ತಕ್ಕೂ ಸಹ ಸೂಳೆಗಾರಿಕೆ ಅವಿಭಾಜ್ಯ ಅಂಗ. ಮಾನವನ ಅನಾದಿ ಕಾಲದ ವೃತ್ತಿಗಳಲ್ಲಿ ಇದು ಒಂದಂತೆ! ಸತ್ಯಜಿತ್ ರೇ, ಹೃತ್ವಿಕ್ ಘಟಕ್ ಸೇರಿದಂತೆ ಕಲ್ಕತ್ತಾದ ಚಿತ್ರ ನಿರ್ದೇಶಕರೆಲ್ಲರೂ ಇದರ ಬಗ್ಗೆ ಕಾಲದಿಂದ ಕಾಲಕ್ಕೆ ಮಾತನಾಡಿದ್ದಾರೆ. ವೇಶ್ಯಾಟಿಕೆಯ ಮೂಲಕ ತಮ್ಮ ಸಮಾಜವನ್ನು ಅರ್ಥೈಸುವ ಪ್ರಯತ್ನ ಮಾಡಿದ್ದಾರೆ. ಬಾರ್ನ್ ಟು ಬ್ರಾಥೆಲ್ಸ್ ಇಂಥದ್ದೇ ಇನ್ನೊಂದು ಪ್ರಯತ್ನ. ಆದರೆ ಇಲ್ಲಿ ಒಂದು ವಿಶೇಷತೆ ಇದೆ.

ಈ ಚಿತ್ರ ವೇಶ್ಯಾಟಿಕೆನಿರತರ ಕುರಿತಾದದ್ದಲ್ಲ. ಇದು ಅವರ ಮಕ್ಕಳ ಕುರಿತಾದದ್ದು. ಅಲ್ಲ… ಅದೂ ಅಲ್ಲ. ಮಕ್ಕಳೆದುರು ತೆರೆದುಕೊಳ್ಳುವ ಒಂದು ಹೊಸಪ್ರಪಂಚದ್ದು. ದೇಹ ವ್ಯಾಪಾರದಿಂದ ಬದುಕುವ ಸಮಾಜದಲ್ಲಿ ಸಮಾಜ ಸೇವಾನಿರತರು ಅನೇಕರಿದ್ದಾರೆ. ಆದರೆ ಈ ಚಿತ್ರದಲ್ಲಿ ಒಂದು ವಿಶೇಷ ಸಂದರ್ಭ ನಿರ್ಮಾಣವಾಗುತ್ತದೆ. ಜಾನ ಎನ್ನುವ ಛಾಯಾಚಿತ್ರಗ್ರಾಹಕಿ ಕಲ್ಕತ್ತದ ಸೊನಗಾಚಿ ಎಂಬ ವೇಶ್ಯಾಟಿಕಾ ಕೇಂದ್ರಕ್ಕೆ ಹೋಗಿ ಅಲ್ಲಿನ ಮಕ್ಕಳ ಕೈಯಲ್ಲಿ ಕ್ಯಾಮರಾ ಕೊಡುತ್ತಾಳೆ. ನಿಮಗೆ ತೋಚಿದ್ದನ್ನು ತೋಚಿದ ರೀತಿಯಲ್ಲಿ ಕ್ಯಾಮರಾದಲ್ಲಿ ಹಿಡಿದಿಡುತ್ತಾ ಬನ್ನಿ ಎನ್ನುತ್ತಾಳೆ. ಮಕ್ಕಳು ಮೊದಲು ವಿಚಲಿತರಾದರೂ, ಹಿರಿಯರ ಮೂದಲಿಕೆಗೆ ಗುರಿಯಾದರೂ, ನಿಧಾನಕ್ಕೆ ಚಿತ್ರಗಳನ್ನು ಹಿಡಿಯಲಾರಂಭಿಸುತ್ತಾರೆ. ಅವರ ಭಾವನೆಗಳಿಗೆ, ಮನದಾಳದ ನೋವುಗಳಿಗೆ ಕ್ಯಾಮರಾ ಅಭಿವ್ಯಕ್ತಿಯ ಮಾಧ್ಯಮವಾಗುತ್ತದೆ. ಮಕ್ಕಳು ಜಾನಳ ಎದುರು ಒಂದು ಇದುವರೆಗೆ ಕಂಡು ಕೇಳರಿಯದ ಪ್ರಪಂಚವೊಂದನ್ನು ಬಿಚ್ಚಿಡುತ್ತಾ ಹೋಗುತ್ತಾರೆ. ಅದು ರೆಡ್ ಲೈಟ್ ಏರಿಯಾ ಎಂದೇ ಹೀಗಳೆಯಲಾಗುವ ಸ್ಥಳದಲ್ಲಿ ನಡೆಯುವ ನಿತ್ಯ ಜೀವನದ ಚಿತ್ರಣ. ಎಲೆಯಡಿಕೆಯ ಚಿತ್ತಾರದ ಗೋಡೆಗಳ ಹಿಂದಿನಿಂದ ಆಕ್ರಂದನಗಳ ಚಿತ್ರಣ. ಕೆಲವು ಭೀಭತ್ಸ ಇನ್ನು  ಕೆಲವು ಚೇತೋಹಾರಿ ಚಿತ್ರಗಳು.

ತಾವು ತೆಗೆದ ಚಿತ್ರಗಳಿಂದ ಈ ಮಕ್ಕಳು ಜಗತ್ತನ್ನು ಕಾಣುತ್ತಾ ಸಾಗುತ್ತಾರೆ. ಅವರಿಗೆ ಅವರ ಪ್ರೀತಿಯ ಗುರು ಜಾನಳಿಂದ ಕಂಪೊಸಿಷನ್, ಕಲರ್ ಹೀಗೆ ಪಾಠಗಳು ಸಿಗುತ್ತವೆ. ಮಕ್ಕಳು ತಮ್ಮ ಪ್ರತಿಭೆಯನ್ನು ತೋರಿಸುತ್ತಾ ಸಾಗುತ್ತಾರೆ. ಅವರ ನಿತ್ಯ ಜೀವನದಲ್ಲಿನ ವೈಪರಿತ್ಯಗಳು ಸಾಕ್ಷ್ಯ ಚಿತ್ರದ ಆಂತರ್ಯದಲ್ಲಿ ಕುದಿಯುತ್ತಿರಲು, ಮಕ್ಕಳ ಚಿತ್ರಗಳು ಅವುಗಳಿಗೆ ಭಾಷ್ಯ ನೀಡುತ್ತಾ ಸಾಗುತ್ತವೆ. ಈ ಚಿತ್ರಗಳ ಮೂಲಕವೇ ಆ ಮಕ್ಕಳ ಬದುಕನ್ನು ರೂಪಿಸಲು ಜಾನ ಪಡುವ ಪಾಡುಗಳು ಚಿತ್ರವನ್ನು ನೋಡಿಸಿಕೊಂಡು ಹೋಗುತ್ತವೆ. ಆ ಮಕ್ಕಳಲ್ಲಿ ಒಬ್ಬ ಹುಡುಗ ಹಾಲೆಂಡಿನಲ್ಲಿ ನಡೆಯುವ ವಿಶ್ವಮಟ್ಟದ ಛಾಯಾಚಿತ್ರಕಾರರ ಶಿಬಿರಕ್ಕೆ ಆಯ್ಕೆಯಾಗಿ ವಿದೇಶ ಪ್ರವಸವನ್ನೂ ಮಾಡುವಂಥಾ, ಕಾಲ್ಪನಿಕ ಎನ್ನಬಹುದಾದಂಥಾ ಕಥನ ಈ ಚಿತ್ರದಲ್ಲಿದೆ.

ಕಲ್ಕತ್ತದ ಸೊನಗಚಿಯಲ್ಲಿ ನಡೆದ ಈ ಚಿತ್ರ ನಾನು ಇತ್ತೀಚೆಗೆ ನೋಡಿದ, ಯೋಚನೆಗೆ ಹಚ್ಚಿದ ಚಿತ್ರ…

Share This