ಸಂತ ಅಲೋಷಿಯಸ್ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ನಿವೃತ್ತಿ ಹೊಂದಿದ ನಾ. ದಾಮೋದರ ಶೆಟ್ಟಿ ಸರ್ ಬಗ್ಗೆ ಅವರ ಶಿಷ್ಯರಾದ ನಾನು ಮತ್ತು ನನ್ನ ಹೆಂಡತಿ ರಶ್ಮಿಯ ಒಂದಷ್ಟು ನೆನಪುಗಳು. ನಮ್ಮಿಬ್ಬರ ಗುರುಗಳಾದ ನಾದಾರಿಗೆ ಇತ್ತೀಚೆಗೆ ಮಂಗಳೂರಿನಲ್ಲಿ ಒಂದು ಅಭಿನಂದನಾ ಸಮಾರಂಭ ನಡೆಯಿತು. ಗಿರೀಶ್ ಕಾಸರವಳ್ಳಿ, ಬಿ. ಜಯಶ್ರೀ, ಸೇತುರಾಮ್, ಟಿ.ಪಿ. ಅಶೋಕ, ಸಿ.ಎನ್. ರಾಮಚಂದ್ರನ್, ವಿವೇಕ ರೈ, ನಾಗತಿಹಳ್ಳಿ ಚಂದ್ರ ಶೇಖರ್ ಹೀಗೆ ದೊಡ್ಡ ಗುಂಪಿನಲ್ಲಿ ಗಣ್ಯಾತಿಗಣ್ಯರು ಸೇರಿ ನಮ್ಮ ಗುರುಗಳ ಕುರಿತಾಗಿ ಮಾತನಾಡಿದರು ಹಾಗೂ ಅವರ ನೆಪಮಾಡಿಕೊಂಡು ಮಂಗಳೂರಿನ ಹಾಗೂ ಒಟ್ಟಿನಲ್ಲಿ ಇವತ್ತಿನ ಸಾಂಸ್ಕೃತಿಕ ಕ್ಷೇತ್ರಗಳ ಕುರಿತಾಗಿ ಗೋಷಿಗಳಲ್ಲಿ ಮಾತನಾಡಿದರು. ಸಂಜೆಯನ್ನು ಅಂದಗಾಣಿಸಿಕೊಡಲು ಜೀವನ್ ರಾಮ್ ಸುಳ್ಯರು ಆಳ್ವಾಸ್ ಶಿಕ್ಷಣ ಸಂಸ್ಥೆಯ ಮಕ್ಕಳಿಂದ ಆಡಿಸಿದ ಅದ್ಭುತ ನಾಟಕ ಏಕದಶಾನನದ ಪ್ರದರ್ಶನವೂ ನಡೆಯಿತು. ಈ ಸಂದರ್ಭದಲ್ಲಿ ಬಿಡುಗಡೆಯಾದ ಅಭಿನಂದನಾ ಗ್ರಂಥಕ್ಕೆಂದು ಬರೆದ ನನ್ನ ಹಾಗೂ ರಶ್ಮಿಯ ಗುರುವಂದನೆ ಇಲ್ಲಿದೆ…

`ನಾದಾ’ನಂದ 
– ಅಭಯ ಸಿಂಹ
ನನ್ನ ಶಾಲಾ ಕಾಲೇಜು ದಿನಗಳೆಲ್ಲವೂ ಕಳೆದದ್ದು ಮಂಗಳೂರಿನ ಸಂತ ಅಲೋಷಿಯಸ್ ಕಾಲೇಜಿನಲ್ಲಿ. ತಂದೆ-ತಾಯಿಗೆ ಸಾಹಿತ್ಯ, ಕಲೆ ಆಸಕ್ತಿ ಇದ್ದದ್ದರಿಂದ ನನಗೆ ಬಾಲ್ಯದಿಂದಲೇ ಮಂಗಳೂರಿನ ಸಾಂಸ್ಕೃತಿಕ ವಲಯದ ಹೆಚ್ಚಿನ ಕಾರ್ಯಕ್ರಮ ದಕ್ಕುತ್ತಿತ್ತು. ಅಲ್ಲೆಲ್ಲಾ ಸಾಮಾನ್ಯವಾಗಿದ್ದ ಒಂದು ಮುಖವಾಗಿ ಪರಿಚಯವಾದವರು ದಾಮೋದರ ಶೆಟ್ಟಿಯವರದ್ದು. ನನ್ನ ನೆಚ್ಚಿನ ನೀನಾಸಂ ತಂಡದವರು ಮಂಗಳೂರಿಗೆ ಬರಬೇಕಾದರೆ, ಅದು ದಾಮೋದರ ಶೆಟ್ಟಿಯವರ ಮೂಲಕವೇ ಆಗಬೇಕಿತ್ತು. ಸಿನೆಮಾದವರು ಯಾರಾದರೂ ಮಂಗಳೂರಿಗೆ ಬಂದರೆ, ಅವರಿಗೆ ಸ್ಥಳೀಯ ಮಾರ್ಗದರ್ಶಿ, ಸಂಪನ್ಮೂಲವ್ಯಕ್ತಿ ದಾಮೋದರ ಶೆಟ್ಟಿಯವರೇ. ಹೀಗೆಲ್ಲಾ ಅವರನ್ನು ನೋಡಿದ ನನಗೆ ಅವರು ನಾನು ಕಲಿಯುತ್ತಿದ್ದ ಶಾಲೆಯಲ್ಲೇ ಕನ್ನಡ ಕಲಿಸುತ್ತಿದ್ದರು ಎಂದು ತಿಳಿದದ್ದು ಬಹಳ ವರ್ಷಗಳ ನಂತರ.
ನಾನು ಪದವಿ ಶಿಕ್ಷಣದ ಹಂತಕ್ಕೆ ಬರುವಷ್ಟರಲ್ಲಿ ನನ್ನ ತಂದೆಯ ಬಹಳ ಒಳ್ಳೆಯ ಸ್ನೇಹಿತರಾಗಿದ್ದ ದಾಮೋದರ ಶೆಟ್ಟಿಯವರ ಪರಿಚಯ ಸಾಕಷ್ಟು ಚೆನ್ನಾಗಿಯೇ ಆಗಿತ್ತು. ಅವರ ಮಗ ಗೌತಮ ನನ್ನ ಸಹಪಾಠಿಯೂ ಆಗಿದ್ದ. ಇದರೊಂದಿಗೆ ಪದವಿಯಲ್ಲಿ ಕನ್ನಡ ಸಾಹಿತ್ಯ ಒಂದು ಆಯ್ಕೆಯಾಗಿ ತೆಗೆದುಕೊಳ್ಳುವ ನಿರ್ಧಾರಕ್ಕೂ ನಾನು ಬಂದಿದ್ದೆ. ಹೀಗೆ ಪದವಿ ಶಿಕ್ಷಣದ ಮೂರುವರ್ಷ ನಾನು ನೇರ ನಾದಾ ಸರ್ ಶಿಷ್ಯನೂ ಆದೆ. ಅವರು ಒಬ್ಬ ಉತ್ತಮ ಗುರುಗಳಾಗಿದ್ದರು. ಹೀಗೆಂದು ಅವರು ಮಾಡುತ್ತಿದ್ದ ಪಾಠಗಳು ನನಗೆ ಇಂದಿಗೂ ನೆನಪಿದೆ ಎನ್ನಲಾರೆ. ಕಾರಣ ಇಷ್ಟೇ, ಅವರು ಎಂದೂ ಶಿಕ್ಷಣವನ್ನು ಕೇವಲ ಪಠ್ಯಕ್ಕೆ ಸೀಮಿತಗೊಳಿಸಿದವರಲ್ಲ. ಪಾಠದ ನೆಪದಲ್ಲಿ ಅವರು ನಮ್ಮ ತಲೆಯಲ್ಲಿ ತುಂಬುತ್ತಿದ್ದ ಸಾಹಿತ್ಯ ಪ್ರೀತಿ ನಮಗೆ ನಿಜಶಿಕ್ಷಣ ನೀಡಿದ್ದು.
ಸಂತ ಅಲೋಷಿಯಸ್ ಕಾಲೇಜಿನಲ್ಲಿ ಅದೆಷ್ಟೋ ವರುಷಗಳಿಂದ ನಾಟಕ ಸಂಘವನ್ನು ನಾದಾ ಸರ್ ಯಶಸ್ವಿಯಾಗಿ ನಡೆಸಿಕೊಂಡು ಬಂದಿದ್ದರು. ಆದರೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿದ ಒತ್ತಡದಿಂದ ಅವರು ಆ ಜವಾಬ್ದಾರಿಯನ್ನು ಬಿಟ್ಟಿದ್ದರು ಜೊತೆಗೆ ನಾಟಕ ಸಂಘವೂ ತನ್ನ ಮೆರುಗನ್ನು ಕಳೆದುಕೊಂಡಿತ್ತು. ಆದರೆ ನಾಟಕ ಸಂಘ ನಾದಾ ಸರ್ ಅಕ್ಕರೆಯ ಕೂಸು. ಅದನ್ನು ಹೀಗೆ ಸಾಯಗೊಡಲು ಅವರಿಂದಾದೀತೇ? ಅವರು ಕನ್ನಡ ವಿಭಾಗದ ಇನ್ನೊಬ್ಬರು ಸಮರ್ಥ ಉಪನ್ಯಾಸಕಿ ಸರಸ್ವತಿಯವರ ಹೆಗಲಿಗೆ ನಾಟಕ ಸಂಘದ ಜವಾಬ್ದಾರಿಯನ್ನು ಹೊರಿಸಿದರು. ನಾನು ಆಗ ಮೊದಲನೆ ವರ್ಷದ ಪದವಿ ವಿದ್ಯಾರ್ಥಿ. ನಾಟಕ ಸಂಘದ ಕಾರ್ಯದರ್ಶಿಯಾದೆ. ಸರಸ್ವತಿಯವರು ಬಹಳ ಉತ್ಸಾಹದ ಉಪನ್ಯಾಸಕಿ. ಅವರ ಮಾರ್ಗದರ್ಶನದಲ್ಲಿ ನಾಟಕ ಸಂಘ ಮತ್ತೆ ಜೀವತಳೆಯಿತು. ಇದರಿಂದ ಅತ್ಯಂತ ಸಂತೋಷಪಟ್ಟವರು ನಾದಾ ಸರ್. ಅವರು ಸದಾ ಸಲಹೆ ಸೂಚನೆಗಳನ್ನು ಕೊಡುತ್ತಾ, ಬೇಕಾದಾಗ ನಮಗೆ ನಾಟಕ ಪಾಠವನ್ನು ಮಾಡುತ್ತಾ, ನಾಟಕವಾಡಿಸುತ್ತಾ ಪ್ರೋತ್ಸಾಹಿಸಿದರು. ಇವರ ನಿರ್ದೇಶನದಲ್ಲಿ ಪದವಿ ಶಿಕ್ಷಣದ ಮೂರೂ ವರ್ಷಗಳಲ್ಲಿ ಮೂರು ನಾಟಕ ಪ್ರಯೋಗ ಮಾಡಿ ಗಳಿಸಿದ ಅನುಭವ ಅನನ್ಯವಾದದ್ದು.
ಪಕ್ಕದ ರಾಜ್ಯದಲ್ಲಿ ಒಂದು ಕಾಲೇಜು ಮಟ್ಟದ ಬೀದಿ ನಾಟಕ ಸ್ಪರ್ಧೆ ಏರ್ಪಟ್ಟಾಗ ನಾನು ಒಂದು ಬೀದಿ ನಾಟಕವನ್ನು ಬರೆದೆ. ಅದನ್ನು ನಾದಾ ಸರ್ಗೆ ತೋರಿಸಿದಾಗ ಅವರು ಕೊಟ್ಟ ಸಲಹೆ ಸೂಚನೆಗಳನ್ನು ಅಳವಡಿಸಿಕೊಂಡೆ. ಮುಂದೆ ಅದನ್ನು ನನ್ನ ಸಹಪಾಠಿಗಳು ಅಭಿನಯಿಸಿದಾಗ ಸರ್ ಬಂದು ನೋಡಿ ಅದರಲ್ಲೂ ಕೆಲವು ತಿದ್ದುಪಡಿಗಳನ್ನು ಮಾಡಿದರು. ಇದರಿಂದಾಗಿ ತಂಡ ಸ್ಪರ್ಧೆಯಲ್ಲಿ ಪ್ರಶಸ್ತಿಯನ್ನೂ ಪಡೆಯಿತು. ಹೀಗೆ ನನ್ನ ಬರವಣಿಗೆಯ ಮೊದಲ ನಾಟಕದ ಯಶಸ್ಸಿನ ಹಿಂದೆ ನಾದಾ ಸರ್ ನಿಂತಿದ್ದರು. ಇದರಿಂದ ಸ್ಪೂರ್ತಿಗೊಂಡು ನಾನು ಚದುರಂಗರ ಶವದ ಮನೆ ಕಥೆಯನ್ನು ನಾಟಕ ರೂಪಕ್ಕೆ ಇಳಿಸಿದೆ. ನಾದಾ ಸರ್ ಅದನ್ನು ತಿದ್ದಿ-ತೀಡಿದ್ದಲ್ಲದೆ ಕಾಲೇಜು ವಾರ್ಷಿಕೋತ್ಸವಕ್ಕೆ ನಮ್ಮ ಗೆಳೆಯರ ಬಳಗದಿಂದಲೇ ಅದನ್ನು ಆಡಿಸಿದರು ಕೂಡಾ. ನಾಟಕ ಮಾಡಿಸಿ ಸರ್ ಎನ್ನುತ್ತಾ ಅವರ ಬೆನ್ನು ಬೀಳುವ ಶಿಷ್ಯರು ಅವರಿಗೆ ಎಷ್ಟೋವರ್ಷಗಳಿಂದ ಸಾಮಾನ್ಯರಾಗಿದ್ದರು. ಮತ್ತೆ ತನ್ನ ಶಕ್ತಿಯ ತಾನೇ ಮರೆತ ಹನುಮನಂತೆ ಇರುವ ನಾದಾ ಸರ್ಗೆ ನಾಟಕ ಮಾಡಿಸಿ ಎಂದು ದುಂಬಾಲು ಬೀಳುವ ಶಿಷ್ಯರೇ ಚೈತನ್ಯ. ಕೂಡಲೇ ತಮ್ಮೆಲ್ಲಾ ಕೆಲಸಗಳನ್ನು ಹೊಂದಿಸಿಕೊಂಡು ಸರ್ ನಾಟಕ ಅಭ್ಯಾಸಕ್ಕೆ ಹಾಜರ್! ಹಾಗೆ ಅಭ್ಯಾಸದಲ್ಲಿ ನಾವು ಕಳೆದ ದಿನಗಳು ಎಂದಿಗೂ ಮರೆಯಲಾಗದ ಸಿಹಿದಿನಗಳು.
ಅವರೊಂದಿಗೆ ನಾಟಕ ಸಂಘದ ನೆಪದಲ್ಲಿ ಒಡನಾಡಿದ ದಿನಗಳಲ್ಲೇ ನನಗೆ ಅವರ ಸಾಹಿತಿಯ ಮುಖದ ಬಗ್ಗೆ ತಿಳಿದಿದ್ದು. ಅವರಾಗಲೇ ಕಾದಂಬರಿಗಳನ್ನು ಬರೆದಿದ್ದರು ಎಂದು ನನಗೆ ತಿಳಿದದ್ದು ಆಗಲೇ. ನಿಗೂಢವಾಗಿ ಕಾಫೀ ತೋಟವೊಂದರಲ್ಲಿ ನಡೆಯುವ ಘಟನೆಯ ಸುತ್ತ ಹೆಣೆದಿರುವ ಅವರ ಕಾದಂಬರಿಯನ್ನು ನಾನು ಆಗಲೇ ಓದಿದ್ದು. ಅವರ ಅನೇಕ ಕವಿತೆಗಳನ್ನೂ ನಾನು ಕನ್ನಡ ವಿಭಾಗದಲ್ಲೇ ಕುಳಿತು ಓದಿದ್ದೆ. ಆ ಸುಮಾರಿಗೆ ನಾದಾ ಸರ್ ಗೆಳೆಯರಾದ ಸತ್ಯನಾರಾಯಣ ಮಲ್ಲಿಪಟ್ಟಣ, ನಾಗರಾಜ ಜವಳಿಯವರು, ನರಸಿಂಹ ಮೂರ್ತಿ ಜೊತೆಗೂಡಿ ತಮ್ಮ ಹೆಸರಿನ ಒಂದೊಂದು ಅಕ್ಷರಗಳನ್ನು ಸೇರಿಸಿ ’ದಾಸಜನ’ ಎಂಬ ಹೆಸರಿನ ಅನೌಪಚಾರಿಕ ಬಳಗವೊಂದನ್ನು ಕಟ್ಟಿಕೊಂಡರು. ಇದರ ಮೂಲಕ ತಮ್ಮ ಸಾಹಿತ್ಯ ಸೇವೆಗೆ ಇವರೆಲ್ಲರೂ ಇನ್ನೊಂದು ಆಯಾಮವನ್ನು ತಂದುಕೊಂಡರು. ಅದೆಷ್ಟೋ ನಾಟಕಗಳನ್ನು, ಸಂಗೀತ ಕಾರ್ಯಕ್ರಮಗಳನ್ನು, ವಿದ್ವತ್ಪೂರ್ಣ ಭಾಷಣಗಳನ್ನು ಈ ನಾಲ್ವರು ಆಗ ಮಂಗಳೂರಿನ ಜನತೆಗೆ ತಂದುಕೊಟ್ಟರು. ವಿದ್ಯಾರ್ಥಿಗಳಾಗಿದ್ದ ನಮಗೆಲ್ಲರಿಗೂ ಇವರೆಲ್ಲರೂ ಅಂದು ಹೀರೋಗಳಾಗಿದ್ದರು. ಇಂದು ಹಿಂದಿರುಗಿ ನೋಡಿದಾಗಲೂ ಅವರು ಮಂಗಳೂರಿನಂಥಾ ಸ್ಥಳದಲ್ಲಿ ನಡೆಸಿದ ಸಾಹಸಗಳು ಅವರನ್ನು ಹೀರೋ ಸ್ಥಾನದಲ್ಲೇ ನಿಲ್ಲಿಸುತ್ತವೆ.
ಪದವಿಯ ಎರಡನೇ ವರ್ಷ ಮುಗಿಯುತ್ತಿರಬೇಕಾದರೆ, ನನಗೆ ಸಿನೆಮಾ ಜಗತ್ತಿನೆಡೆಗೆ ಒಲವು ಮೂಡತೊಡಗಿತ್ತು. ನನ್ನ ಅಚ್ಚರಿಗೆ ನಾದಾರಿಗೆ ಸಿನೆಮಾ ಕ್ಷೇತ್ರದಲ್ಲೂ ಸಾಕಷ್ಟು ಪರಿಚಯವಿತ್ತು! ಅವರನ್ನು ಆಗಲೇ ಪಿ. ಶೇಷಾದ್ರಿಯವರ ಮುನ್ನುಡಿಯ ಮೂಲಕ ತೆರೆಯ ಮೇಲೆ ನೋಡಿದ್ದೆ. ನಾಗತಿಹಳ್ಳಿಯವರ ವಠಾರ ದಾರವಾಹಿ ಮಂಗಳೂರಿಗೆ ಚಿತ್ರೀಕರಣಕ್ಕೆ ಬಂದಾಗ ದಾಮೋದರ ಶೆಟ್ಟಿಯವರ ಮೂಲಕ ಅವರ ಗೆಳೆಯ ರಾಜಶೇಖರ್ ಅವರನ್ನು ಮಾತನಾಡಿಸಿ ಒಂದು ಸಣ್ಣ ಪಾತ್ರವನ್ನೂ ನಾನು ಗಿಟ್ಟಿಸಿದ್ದೆ. ಹೀಗೆ ಗೊಂದಲಮಯವಾಗಿ ಆರಂಭವಾದ ನನ್ನ ಚಿತ್ರರಂಗದ ಪಯಣದ ಆರಂಭದಲ್ಲಿ ಗಟ್ಟಿ ಬೆಂಬಲಕ್ಕೆ ನಾದಾ ಸರ್ ನಿಂತರು. ಹೀಗೆಲ್ಲಾ ಆಡುತ್ತಾ, ಬೀಳುತ್ತಾ, ಹಾಡುತ್ತಾ, ಕಿರಿಚುತ್ತಾ ನೂರಾರು ನೆನಪುಗಳನ್ನು ಕೊಟ್ಟ ಪದವಿ ಹಂತದ ಕಾಲೇಜು ಮುಗಿದೇ ಬಿಟ್ಟಿತು. ನಾನೂ ಮಂಗಳೂರು ಬಿಟ್ಟು ಸಿನೆಮಾ ವ್ಯಾಸಂಗಕ್ಕಾಗಿ ಪೂನಾ ಸೇರಿಕೊಂಡೆ. ಮಂಗಳೂರಿನ ಸಂಪರ್ಕ ಸಾಕಷ್ಟು ಕಡಿಮೆಯೇ ಆಯಿತು. ಮಂಗಳೂರಿಗೆ ಬಂದಾಗ ತಂದೆ-ತಾಯಿಯರೊಂದಿಗೆ ಸಮಯ ಕಳೆಯುವುದಲ್ಲದೇ ಒಂದು ಗಳಿಗೆಗೆ ಕಾಲೇಜಿಗೆ ಹೋಗುವುದು, ಹಳೆಯ ಉಪನ್ಯಾಸಕರನ್ನೆಲ್ಲ ಕಂಡು ಮಾತನಾಡಿಸಿಕೊಂಡು ಬರುವುದು ಇತ್ತು. ಆದರೆ ಮೊದಲಿನ ಬಳಕೆ ಇರಲಿಲ್ಲ ಆಮೇಲೆ.
ಕೆಲವು ವರುಷ ನಂತರ ನಾನು ಸ್ವತಂತ್ರ ನಿರ್ದೇಶಕನಾಗಿ ’ಗುಬ್ಬಚ್ಚಿಗಳು’ ಎಂಬ ನನ್ನ ಮೊದಲ ಚಿತ್ರವನ್ನು ನಿರ್ದೇಶಿಸಿದೆ. ಅದಕ್ಕೆ ರಾಷ್ಟ್ರಪ್ರಶಸ್ತಿ ಸೇರಿದಂತೆ ಅನೇಕ ಗೌರವಗಳು ಸಿಕ್ಕಿದವು. ಆಗ ನಾನು ನೆನೆಸಿಕೊಂಡ ಕೆಲವು ಮಹನೀಯರಲ್ಲಿ ನಾದಾ ಸರ್ ಕೂಡಾ ಒಬ್ಬರು. ಅಸಂಪ್ರದಾಯಿಕ ಕ್ಷೇತ್ರದಲ್ಲೂ ಬದುಕು ಕಟ್ಟಬಹುದು ಎಂದು ನನಗೆ ಸ್ಪೂರ್ತಿ ನೀಡಿದವರಲ್ಲಿ ನಾದಾ ಸರ್ ಒಬ್ಬ ಪ್ರಮುಖರು. ನಾನು ಮಾಡಿದ ಚಿತ್ರವನ್ನು ಸರ್ ಎಂದಿನ ಉತ್ಸಾಹದಲ್ಲೇ ತಮ್ಮ ಅಂದಿನ ವಿದ್ಯಾರ್ಥಿಗಳಿಗೆ ತೋರಿಸಿ ತಮ್ಮ ಶಿಷ್ಯ ಎಂದು ಹೆಮ್ಮೆಯಿಂದ ಹೇಳಿಕೊಂಡಾಗ ನನ್ನಲ್ಲಿ ಒಂದು ಸಾರ್ಥಕ್ಯ ಮೂಡಿದ್ದರಲ್ಲಿ ಏನು ಆಶ್ಚರ್ಯ? ಅನೇಕ ವರುಷಗಳ ನಂತರ ಆಗ ಕನ್ನಡ ವಿಭಾಗ ಸಾಕಷ್ಟು ಬದಲಾಗಿತ್ತು. ನನಗೆ ಪರಿಚಯದ ಅನೇಕ ಮುಖಗಳು ಕಾಲೇಜನ್ನು ಬಿಟ್ಟಿದ್ದವು. ಆದರೆ ಕನ್ನಡ ವಿಭಾಗದಲ್ಲಿ ನಾದಾ ಸರ್ ಸೇರಿದಂತೆ ಕೆಲವು ಉಪನ್ಯಾಸಕರು ಇನ್ನೂ ನಮ್ಮನ್ನು ಆದರದಿಂದ ಬರಮಾಡಿಕೊಳ್ಳುತ್ತಿದ್ದರು. ಅದೇ ಹಳೆಯ ಪ್ರೀತಿ ವಿಶ್ವಾಸ ಧಾರೆ ಎರೆಯುತ್ತಿದ್ದರು.
ಇನ್ನು ನನ್ನ ಮದುವೆಯ ಸಂದರ್ಭದಲ್ಲಿ ನಾದಾ ಸರ್ ಶಿಷ್ಯೆಯೊಬ್ಬಳನ್ನೇ ನಾನು ಮದುವೆಯಾಗುವ ಸಂದರ್ಭ ಬಂದಾಗ ನಾದಾರಿಗೆ ಎಲ್ಲಿಲ್ಲದ ಸಂಭ್ರಮ. ನನ್ನ ಪತ್ನಿಯಾಗಲಿದ್ದ ರಶ್ಮಿ ನೇರವಾಗಿ ನಾದಾ ಸರ್ ಶಿಷ್ಯೆಯಲ್ಲ. ಆಕೆ ಬಿ.ಬಿ.ಎಂ ವಿದ್ಯಾರ್ಥಿನಿ. ಆದರೆ ನಾಟಕ ಸಂಘದ ಮೂಲಕ ಮತ್ತೆ ನಾದಾ ಸರ್ ಅವಳ ಅಚ್ಚುಮೆಚ್ಚಿನ ಗುರುಗಳಾಗಿದ್ದರು. ತಮ್ಮ ಇಬ್ಬರು ಶಿಷ್ಯಂದಿರು ಬಾಳಿನಲ್ಲಿ ಒಂದಾಗುವುದು ನಾದಾರಿಗೆ ಬಹಳ ಸಂಭ್ರಮದ ವಿಷಯ. ತಮ್ಮ ಮಕ್ಕಳ ಮದುವೆಯಂತೆಯೇ ಅವರು ನಮ್ಮ ಮದುವೆಯ ಸಂಭ್ರಮವನ್ನು ಆನಂದಿಸಿದರು. ಮದುವೆಯ ದಿನ ತಮ್ಮೊಂದಿಗಿದ್ದ ನಾಗಾಭರಣರನ್ನೂ ಪುಸಲಾಯಿಸಿ ನಮ್ಮ ಮದುವೆಗೆ ಕರೆದುಕೊಂಡು ಬಂದದ್ದು ನನಗೂ ರಶ್ಮಿಗೂ ಅಚ್ಚರಿ, ಸಂತೋಷ ಎಲ್ಲವನ್ನೂ ತಂದುಕೊಟ್ಟಿತು. ನಾದಾರನ್ನು ಹತ್ತಿರದಿಂದ ಬಲ್ಲ ಎಲ್ಲರಿಗೂ ಅವರ ಈ ಸೀಮಾತೀತ ಪ್ರೀತಿ, ವಿಶ್ವಾಸದ ಅರಿವು ಇದ್ದದ್ದೇ. ನಮ್ಮ ಮದುವೆಯಾದ ನಂತರದ ದಿನಗಳಲ್ಲಿ ನಾದಾ ಸರ್ ಬೆಂಗಳೂರಿಗೆ ನಮ್ಮ ಮನೆಗೂ ಬಂದು ಹರಸಿದ್ದನ್ನು ನಾವು ಎಂದಿಗೂ ಮರೆಯಲಾರೆವು. ಹೀಗೆ ದೀರ್ಘಕಾಲ ಸಾಮರ್ಥ ಸಾಹಿತ್ಯಸೇವೆ, ಕಲಾಸೇವೆ ಹಾಗೂ ಗುರುವೃತ್ತಿಯನ್ನು ಮಾಡಿದ ಶೆಟ್ಟರನ್ನು ನಾಡಿನಾದ್ಯಂತ ಎಷ್ಟೋ ಮನಸ್ಸುಗಳು, ನೆನೆಯುತ್ತವೆ, ನಮಿಸುತ್ತವೆ.
ತಮ್ಮ ವೃತ್ತಿರಂಗಕ್ಕೆ ವಿದಾಯ ಹೇಳುತ್ತಿರುವ ನಾದಾ ಸರ್ರಿಗೆ ಈಗ ತಮ್ಮ ಆಸಕ್ತಿಗಳಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಸಿಕೊಳ್ಳುವ ಅವಕಾಶ. ಅವರ ನೂರಾರು ಆಸಕ್ತಿಗಳು ಇದರಿಂದ ಫಲಪಡೆದು, ಸಾಹಿತ್ಯರಂಗಕ್ಕೆ, ರಂಗಭೂಮಿಗೆ, ಸಿನೆಮಾ ಕ್ಷೇತ್ರಕ್ಕೆ ಉಪಯುಕ್ತ ಕೊಡುಗೆಗಳು ದೊರೆಯುವಂತಾಗಲಿ ಎಂದು ಅವರ ಶಿಷ್ಯಕೋಟಿಯ ಹಂಬಲ, ಹಾರೈಕೆ. ಇಂಥಾ ಗುರುಗಳು ಅದಕ್ಕೂ ಮಿಗಿಲಾಗಿ ಮಾರ್ಗದರ್ಶಿ ದೊರೆತ ನಾನೇ ಧನ್ಯ ಎನ್ನುತ್ತಾ ವಿರಮಿಸುತ್ತೇನೆ.
ಕಲಿಸದೆಯೂ ಕಲಿಸಿದ ಗುರುವು..
– ರಶ್ಮಿ
ಹಾಗೆ ನೋಡಿದರೆ ಅವರು ನನಗೆ ನೇರ ಗುರುಗಳೇ ಅಲ್ಲ! ಒಮ್ಮೆಯೂ ಅವರ ತರಗತಿಯಲ್ಲಿ ಕುಳಿತದ್ದೇ ಇಲ್ಲ!! ಆದರೂ ಗುರುಗಳು ಎಂದಾಗ ನೆನಪಾಗುವ ಮೊದಲ ವ್ಯಕ್ತಿ ನಾದಾ ಸರ್. ಅದ್ಯಾಕೋ ಅವರಿಗೆ ಪ್ರತಿಯೊಬ್ಬರ ಮೇಲೂ, ಪ್ರತಿಯೊಂದರ ಮೇಲೂ ಕಾಳಜಿ, ಬಹಳವಾದ ಪ್ರೀತಿ. ನಾನೂ ಕೂಡ ಅವರ ಪ್ರೀತಿ-ಕಾಳಜಿಗೆ ಒಳಪಟ್ಟವಳು ಎಂದು ಖುಶಿಯಾಗುತ್ತದೆ.
ಸೈಂಟ್ ಎಲೋಶಿಯಸ್ ಎಂಬ ದೈತ್ಯ ಕಾಲೇಜಿನೊಳಗೆ ಹಲವು ಪ್ರಪಂಚಗಳಿವೆ. ಅದರಲ್ಲೊಂದು ಕನ್ನಡ ವಿಭಾಗ, ಇದರೊಳಗೆ ತು.ಕ.ನಾ.ಸಂ (ತುಳು-ಕನ್ನಡ-ನಾಟಕ ಸಂಘ) ಇದಕ್ಕೆಲ್ಲ ರೂವಾರಿ ನಮ್ಮ ನಾದಾ ಸರ್.. ಮೊದ ಮೊದಲು ಅವರೊಂಥರಾ ಸ್ಟಾರ್ ಗುರುಗಳು ಎನಿಸುತ್ತಿತ್ತು. ನಾಟಕ ಹೇಳಿಕೊಡ್ತಾರೆ, ಸಿನೆಮಾ ಬಗ್ಗೆ ಮಾತಾಡ್ತಾರೆ, ಸಿನೆಮಾ ನಟರು-ನಿರ್ದೇಶಕರು, ನಾಟಕಕಾರರು, ಸಾಹಿತಿಗಳು ಒಟ್ಟಿನಲ್ಲಿ ಸಿಲೆಬ್ರಿಟಿ ಎನಿಸಿಕೊಂಡವರೆಲ್ಲ ಇವರ ಜೊತೆಗಿರುತ್ತಾರೆ, ಮಂಗಳೂರಿಗೆ ಬಂದಾಗ ಇವರ ಮನೆಯಲ್ಲೇ ಉಳಿಯುತ್ತಾರೆ. ಬಹಳ ಚೋದ್ಯವೆನಿಸುತ್ತಿದ್ದ  ವಿಷಯ ಇದು. ಯಾರಿವರು ಇವರ ವ್ಯಾಪ್ತಿ ಎಂಥದ್ದು ಹಾಗಾದ್ರೆ ಇವರ್ಯಾಕೆ ಇಲ್ಲೇ ಪಾಠ ಮಾಡಿಕೊಂಡಿದ್ದಾರೆ ಅಂತ ಅಚ್ಚರಿಯಾಗ್ತಿತ್ತು. ಹಾಗೆ ಅವರನ್ನು ಹತ್ತಿರದಿಂದ ನೋಡುತ್ತಲೇ ಅರಿವಾದದ್ದು ಅವರೊಬ್ಬ ಅಪ್ಪಟ ಸಹೃದಯಿ, ಅವರಿಗೆ ಎಲ್ಲರೂ ಅಂದ್ರೆ ಎಲ್ಲರೂ ಬೇಕಾದವರೆ ಅಂತ. ಇವರನ್ನು ಸಮೀಪದಿಂದ ನೋಡಿದ ಪ್ರತಿಯೊಬ್ಬರಿಗೂ ಗೊತ್ತಿರುವ ಸಂಗತಿಯಿದು. 
ನಾನು ಅವರಿಂದ ಪ್ರೀತಿ ಮಾತ್ರವಲ್ಲದೆ ಸಾಕಷ್ಟು ಪ್ರಯೋಜನಗಳನ್ನೂ ಪಡೆದಿದ್ದೇನೆ. ಎಲೋಶಿಯಸ್ ಗೆ ಬರುವವರೆಗೂ ನಾಟಕ ನೋಡಿರಲಿಲ್ಲ. ಮೊದಲ ವರ್ಷದಲ್ಲೇ ಭರ್ಜರಿಯಾಗಿ ನಾಟಕ ಪ್ರಪಂಚ ನೋಡುವ ಅವಕಾಶ ಸಿಕ್ಕಿತು- ಅದೂ ನೀನಾಸಂನಲ್ಲಿ! ಅಲ್ಲಿಂದ ಶುರುವಾಯ್ತು. ನಾನೂ ನಮ್ಮ ಗೆಳೆಯರ ಬಳಗ ನಾದಾ ಸರ್ ಹಿಂದೆ. “ಸರ್… ನಾಟಕ ಮಾಡ್ಸಿ..”  ಶಿಷ್ಯಂದಿರು ಹೀಗೆ ಹಿಂದೆ ಬಿದ್ರೆ ಸರ್ ಕರಗಿ ಹೋಗ್ತಾರೆ. ಅವರ ಕೆಲಸದೊತ್ತಡ, ಸಮಯದ  ಸಮಸ್ಯೆ ಏನಿತ್ತೋ ಇಲ್ವೋ ಒಂದನ್ನೂ ನಾವು ಯೋಚನೆ ಮಾಡದೆ ಬೆನ್ನು ಹತ್ತುತ್ತಿದ್ದೆವು. ಶಿಷ್ಯಂದಿರ ಇಂಥ ಬೇಡಿಕೆ ಈಡೇರಿಸಲು ಅವರು ಸದಾ ಸಿದ್ಧ. ನಮ್ಮ ಹಠ ಅವರ ಪಾಠದ ಫಲ- ಮೊದಲ ವರ್ಷ ’ಕಪಿಲ’, ಎರಡನೇ ವರ್ಷ ’ಸಾಯೋ ಆಟ’, ಮೂರನೇ ವರ್ಷ ’ಜಾನ್ ರೇ’. ಈ ಮೂರು ನಾಟಕಗಳು ಕ್ರಮವಾಗಿ ಐದು ಪ್ರದರ್ಶನಗಳನ್ನು ಕಂಡವು. ಸಾಯೋ ಆಟದ ಒಂದು ಶೋ ರಂಗಾಯಣದಲ್ಲಿ ನಡೆದದ್ದು ನಮ್ಮೆಲ್ಲರಿಗೂ ಹೆಮ್ಮೆ ಎನಿಸುವಂಥಾ ವಿಷಯ. ಕಾಲೇಜು ಆಡಿಟೋರಿಯಂಗಳು… ಕಾರಿಡಾರ್ಗಳು… ಡಿಪಾರ್ಟ್ ಮೆಂಟಿನ ಮೆಟ್ಟಿಲುಗಳು… ಇವೆಲ್ಲವೂ ನಮ್ಮ ರಿಹರ್ಸಲ್ ನೋಡಿವೆ, ನಾದಾ ಸರ್ ಪಾಠ ಕೇಳಿವೆ. 
ಸರ್ ನನ್ನನ್ನು ಕ್ಯಾಮರಾ ಮುಂದೆ ನಿಲ್ಲಿಸಿದ್ರು!  ಅದು ಸರ್ಕಾರದ  eಜu-sಚಿಣ ಠಿಡಿoರಿeಛಿಣ. ಪಾಠವನ್ನು ವಿಡಿಯೋ ಮೂಲಕ ಹೇಳುವುದು. ಅಲ್ಲಿ ನನ್ನನ್ನು ಟೀಚರಾಗಿಸಿದ್ರು ನಮ್ಮ ಸರ್! ನಾನು ಮೊದಲ ಬಾರಿಗೆ ಕ್ಯಾಮರ ಮುಂದೆ ಆಕ್ಟ್ ಮಾಡಿದ್ದೇ ಇಲ್ಲಿ. ಇದು ಇನ್ನೊಂದು ಹೊಸ ಪಾಠ ನಂಗೆ. ಹೀಗೆ ಶುರುವಾಗಿ ಮತ್ತೆರಡು ಬಾರಿ ಸರ್ ನನಗೆ ಇಂಥದ್ದೇ ಅವಕಾಶ ಕೊಡಿಸಿದ್ರು. ಈಟಿವಿ ಯ ’ದೇಗುಲದರ್ಶನ” ನಿರ್ವಹಣೆ ಮತ್ತು ’ಮುದ್ದಣ-ಮನೋರಮೆ’ ಕಿರುಚಿತ್ರದಲ್ಲಿ ಮನೋರಮೆಯ ಪಾತ್ರ. ವಿದ್ಯಾರ್ಥಿ ದೆಸೆಯಲ್ಲಿ ನನಗೆ ಹೊಸ ಹೊಸ ವಿಷಯಗಳನ್ನು ನೋಡಲು ಕಲಿಯಲು ಸಾಧ್ಯವಾದದ್ದು ಹೀಗೆ. ಕಾಲೆಜು ದಿನಗಳನ್ನು ಮೆಲುಕು ಹಾಕಿದರೆ ಹಲವು ಒಳ್ಳೆ ನೆನಪುಗಳಿವೆ. ಅವುಗಳಲ್ಲಿ ಬಹುಪಾಲು ಸಾಧ್ಯವಾದದ್ದು ನಾದಾ ಸರ್ ರಿಂದ.
‘ಮುದ್ದಣ-ಮನೋರಮೆ’ ಯ ಪಾತ್ರಧಾರಿಗಳು ಇನ್ನಿಬ್ಬರು ಗೆಳೆಯರಿದ್ರೂ  ನೀವು ಜೊತೆಗಿದ್ರೆ ಧೈರ್ಯ ಸರ್ .. ಎಂದಿದ್ದೆ.  ನನ್ನ ಕೋರಿಕೆಯಂತೆ ಶೂಟಿಂಗ್ ನ ಮೂರೂ ದಿನಗಳು ಸರ್ ಜೊತೆಗಿದ್ರು. ಅಂಬಾಸಿಡರ್ ಕಾರೊಂದು ಬೆಳಗ್ಗೆ ಆರು ಗಂಟೆಗೇ ಹಾಸ್ಟೆಲ್ ಗೆ ಬರುತ್ತಿತ್ತು. ಆಮೇಲೆ ಸರ್ ಮನೆಗೆ ಹೋಗಿ ಶಿಷ್ಯಂದಿರನ್ನು ಅವರಷ್ಟೇ ಪ್ರೀತಿಯಿಂದ ಕಾಣುವ ಅವರ ಸಹಧರ್ಮಿಣಿ ಸುಮಾ ಮ್ಯಾಮ್ ಕೊಡುತ್ತಿದ್ದ ಬಿಸಿ ಕಾಫಿ ಹೀರಿ ಶೂಟಿಂಗ್ ಲೊಕೇಶನ್ ಗೆ ಹೋಗುತ್ತಿದ್ದುದು.  ದಾರಿಯುದ್ದಕ್ಕೂ ಹರಟೆಗಳು.. ಅವರ ಅನುಭವಗಳು.. ನಮ್ಮ ಪ್ರಶ್ನೆಗಳು. ಇಂಥ ಸಂಧರ್ಭದಲ್ಲೆಲ್ಲ ಅವರು ಗುರು ಎಂಬುದನ್ನೂ ಮರೆಸಿ ಸ್ನೇಹಿತರಂತೆ ಇರುತ್ತಿದ್ದರು. ಆದರೆ ಎಲ್ಲಿ ಮೂಗು ದಾರ ಹಿಡಿಯಬೇಕೋ ಅಲ್ಲಿ ಬಿಗಿಯಾಗುತ್ತಿದ್ದರು.  ಇದಕ್ಕಾಗಿಯೇ ಏನೋ ಅವರು ಎಲ್ಲರಿಗೂ ಮೆಚ್ಚುಗೆಯಾಗುತ್ತಾರೆ.
ಕೇಳಿದವರಿಗೆ ತಮಾಷೆ ಎನಿಸಬಹುದೋ ಏನೋ.. ನನ್ನ ಗಂಡನ ಆಯ್ಕೆಯ ಹಿಂದೆ ಇದ್ದವರೂ ಕೂಡಾ ಸರ್. ಮದುವೆ ಮಾತು ಬಂದಾಗ ಹಿಂಜರಿದಿದ್ದೆ. ಬೇಡಾ ಅಂದಿದ್ದೆ. “ನಿನ್ನನ್ನೂ ಅದಕ್ಕೂ ಮೊದಲಿಂದಲೇ ಅಭಯನನ್ನೂ ಹತ್ತಿರದಿಂದ ಕಂಡಿದ್ದೇನೆ. ನೀವು ಮದುವೆ ಆದ್ರೆ ಬಹಳ ಸಂತೋಷ ಪಡ್ತೇನೆ” ಅಂದಿದ್ರು. ಹೇಳಿದ್ದು ಮಾತ್ರವಲ್ಲ, ಮದುವೆಯ ಎಲ್ಲಾ ಹಂತಗಳಲ್ಲೂ ಅವರು ಜೊತೆಗಿದ್ರು. ಪಬ್ಬಾಸ್ನಲ್ಲಿ ನಾನೂ ಅಭಯನೂ ಭೇಟಿಯಾಗುವಂತೆ ಮಾಡಿದ್ದು, ಮಂಗಳೂರಿಂದ ಸುಮಾರು ಅರುವತ್ತು ಕಿಲೋ ಮೀಟರ್ ದೂರದ ನನ್ನ ಮನೆ ಮಣಿಮುಂಡದಕ್ಕೆ ನಿಶ್ಚಿತಾರ್ಥ ಕಾರ್ಯಕ್ರಮಕ್ಕಾಗಿ ಸರ್ ಬಂದು ಮನೆಯವರಲ್ಲೊಬ್ಬರಂತೆ ಪಾಲ್ಗೊಂಡದ್ದು, ಕಾಲೇಜಿನ ದಿನವಾದರೂ ಮದುವೆಯನ್ನು ತಪ್ಪಿಸದೇ ಪೆರ್ಲದಲ್ಲಿ ನಡೆದ ಮದುವೆಗೆ ಬಂದು ಹರಸಿದ್ದು.. ಇದೆಲ್ಲವನ್ನೂ ನಾನು ಎಂದಿಗಾದರೂ ಮರೆಯಲು ಸಾಧ್ಯವೇ? ಅವರ ಹಾರೈಕೆ-ಆಶೀರ್ವಾದದಂತೆಯೇ ಅಭಯನೊಂದಿಗೆ ವಿವಾಹವಾಗಿ ಈಗ ಮೂರು ವರ್ಷಗಳಾಗಿವೆ. ಆಗೊಮ್ಮೆ ಈಗೊಮ್ಮೆ ಸರ್ ಜೊತೆಗೆ ಫೋನ್ ಮಾತು-ಕಥೆ ಇದ್ದೇ ಇದೆ. ನಾನು ತಪ್ಪಿದ್ರೂ ಮರೆಯದೆ ಅವರಂತೂ ಫೋನ್ ಮಾಡ್ತಾರೆ. ಅದೇ ಪ್ರೀತಿ, ಅದೇ ಕಾಳಜಿ ಇಂದಿಗೂ. ಸಣ್ಣ-ಪುಟ್ಟ ಆಸಕ್ತಿಗಳನ್ನೂ ಪ್ರೋತ್ಸಾಹಿಸಿದ್ದಾರೆ. ಕಳವಳಗೊಂಡಾಗ ಸಾಂತ್ವನ ನೀಡಿದ್ದಾರೆ. ತಪ್ಪಿದಲ್ಲಿ ತಿದ್ದಿದ್ದಾರೆ. ಒಂದೇ ಮಾತಲ್ಲಿ ಹೇಳಬೇಕೆಂದರೆ ನನ್ನನ್ನು ಮಗಳಂತೆಯೇ ಕಂಡಿದ್ದಾರೆ; ಕಾಣುತ್ತಿದ್ದಾರೆ ನಾದಾ ಸರ್. ಅವರಿಗೆ ಕೃತಜ್ಞತೆ ಹೇಳಬೇಕು ಎನಿಸುವ ಸಾವಿರ ಭಾವಗಳಿಗೆ ಕೇವಲ ನುಡಿ ರೂಪ ಹೇಗೆ ಕೊಡ್ಲಿ ನಾನು?
Share This