(‘ದೇಶ ಕಾಲ’ದಲ್ಲಿ ಪ್ರಕಟಿತ ನನ್ನ ಲೇಖನ ಇಲ್ಲಿದೆ. ಇದೇ ವಿಷಯದ ಮೇಲೆ ಅನೇಕ ಗಣ್ಯರು ತಮ್ಮ ಅಭಿಪ್ರಾಯಗಳನ್ನು ಬರೆದಿದ್ದಾರೆ. ದೇಶಕಾಲವನ್ನು ಕೊಂಡು, ಓದಿ ಪ್ರೋತ್ಸಾಹಿಸಿ)
ಸಿನೆಮಾ ಮಾಧ್ಯಮಕ್ಕೆ ನಾನಿನ್ನೂ ಕಣ್ಣು ತೆರೆಯುತ್ತಿರುವ ಕಿರಿಯ. ನನ್ನ ಮಾಧ್ಯಮವನ್ನು ಅರ್ಥಮಾಡಿಕೊಳ್ಳುವುದು, ನನ್ನ ಪ್ರಯೋಗಗಳನ್ನು ಮಾಡುವುದರೊಂದಿಗೆ ಅದರಲ್ಲಿ ಒಂದು ಜೀವನವನ್ನೂ ಕಟ್ಟಿಕೊಳ್ಳುವ ಹೋರಾಟದಲ್ಲಿ ಎದುರಿಸಬೇಕಾಗುವ ಒಂದು ಪ್ರಮುಖ ವಿಚಾರ ಈ ‘ಜನಪ್ರಿಯ’ ಸಿನೆಮಾ. ಹಾಕಿದ ದುಡ್ಡನ್ನು ಮರಳಿ ಪಡೆಯುವ, ನಿರ್ಮಾಪಕನ ಆಸಕ್ತಿಯನ್ನು ಗಮನದಲ್ಲಿ ಇಟ್ಟುಕೊಂಡು, ಅವನ ‘ಜನಪ್ರಿಯ’ ಎಂಬುದರ ಕುರಿತಾಗಿ ಇರುವ ಕಲ್ಪನೆಗಳನ್ನು ಅರ್ಥೈಸಿಕೊಂಡು ಚಿತ್ರ ನಿರ್ದೇಶಿಸುವ ಪ್ರಯತ್ನದಲ್ಲಿ ನನ್ನೊಂದಿಷ್ಟು ಯೋಚನೆಗಳನ್ನು ಸವಿನಯ ಚರ್ಚೆಗೆ ತೆರೆದಿಡುತ್ತಿದ್ದೇನೆ.
ಸಿನೆಮಾ ಎನ್ನುವುದು ಭಾರೀ ಹಣ ಹೂಡಿಕೆಯಿರುವ, ಅನೇಕ ಮಂದಿ ಒಟ್ಟಾಗಿ ಸೇರಿ ಸೃಷ್ಟಿಸುವ ಕೃತಿಯಾಗಿದೆ. ಇದರಿಂದಾಗಿ ದಕ್ಕುವ ಯಶಸ್ಸು ಅಥವಾ ಪ್ರತಿಫಲ ಅಷ್ಟೇ ದೊಡ್ಡದಾಗಿರಬೇಕಾಗುತ್ತದೆ. ಹೀಗಾಗಿ ಕೃತಿ ‘ಜನಪ್ರಿಯ’ವಾಗುವುದು ಅಗತ್ಯವಾಗಿರುತ್ತದೆ. ಜನಪ್ರಿಯ ಎಂದರೆ ಅತ್ಯಂತ ಹೆಚ್ಚು ಜನ ವೀಕ್ಷಿಸುವ ಚಿತ್ರ (ಇದರಿಂದಾಗಿ ಹೆಚ್ಚು ಹಣ ಸಂಗ್ರಹಿಸಿದ ಚಿತ್ರ) ಎಂದು ಸಾಮಾನ್ಯವಾಗಿ ಚಿತ್ರೋದ್ಯಮದಲ್ಲಿ ಅರ್ಥೈಸಲಾಗುತ್ತದೆ. ಆದರೆ ಸಿನೆಮಾವನ್ನು ‘ಜನಪ್ರಿಯ’ ಎಂದು ಕರೆಯುವುದು ಹೇಗೆ ಎನ್ನುವುದು ಸ್ವಲ್ಪ ಗೊಂದಲದ ವಿಚಾರ. ಏಕೆಂದರೆ, ಇದನ್ನು ‘ಜನಪ್ರಿಯಗೊಳಿಸುವ’ ಪ್ರಕ್ರಿಯೆಯಲ್ಲಿ ಪಾಲುಗೊಳ್ಳುವ ಜನ ಸಮುದಾಯ ತುಂಬಾ ಹಿರಿದಾದದ್ದು ಮತ್ತು ಅಷ್ಟೇ ವಿಭಿನ್ನವಾದದ್ದು. ಸಿನೆಮಾದಲ್ಲಿ ಆಡು ಭಾಷೆ, ನೃತ್ಯ, ಗೀತ, ನಾಟಕಗಳೆಲ್ಲವೂ ಇದ್ದರೂ, ಸಿನೆಮಾಕ್ಕೆ ಅದರದೇ ಆದ ಭಾಷೆಯೊಂದು ಇರುವುದರಿಂದ ಅದರ ಪ್ರಭಾವ ಯಾವುದೇ ಗಡಿಗಳಿಲ್ಲದೇ ಎಲ್ಲಾ ಪ್ರೇಕ್ಷಕರ ಮೇಲೆಯೂ ಆಗಲು ಸಾಧ್ಯ. ಹೀಗಾಗಿ ಸಿನೆಮಾ ಕುರಿತಾಗಿ ಮಾತನಾಡುವಾಗ ‘ಜನಪ್ರಿಯ’ ಎನ್ನುವ ಶಬ್ದವೇ ಪ್ರಶ್ನಾರ್ಹವಾಗುತ್ತದೆ. ಒಂದು ಕಾಲದಲ್ಲಿ ಜಪಾನಿನಲ್ಲಿ ಗಲ್ಲಾಪೆಟ್ಟಿಗೆ ಲೂಟಿ ಮಾಡಿದ ಅಕಿರಾ ಕುರೋಸಾವಾನ ಅನೇಕ ಚಿತ್ರಗಳನ್ನು ಇಂದು ಜಗತ್ತಿನಾದ್ಯಂತ ಚಿತ್ರ ಪ್ರೇಮಿಗಳು ಒಂದು ‘ಕ್ಲಾಸಿಕ್’ ಎಂದು ನೋಡುತ್ತಾರೆ. ಅಂದು ಅದನ್ನು ವಾಣಿಜ್ಯಿಕ ಚಿತ್ರವೆಂದೇ ಪರಿಗಣಿಸಲಾಗಿದ್ದರೂ ಇಂದು ಜನ ಅದನ್ನು ನೋಡುವ ರೀತಿಯೇ ಭಿನ್ನವಾಗಿದೆ. ಅಂತೆಯೇ ಮುಂದೆ ಆಗಬಹುದಾದ ವಿಚಾರಗಳನ್ನು ಇಂದೇ ಮಾತನಾಡುವ ಚಿತ್ರಗಳನ್ನೂ ಚಿತ್ರೋದ್ಯಮದ ಜನ ‘ಕ್ಲಾಸ್’ ಅಥವಾ ಕಲಾತ್ಮಕ ಎಂದು ಪರಿಗಣಿಸುತ್ತಾರೆ.
ನಮ್ಮ ಚಿತ್ರೋದ್ಯಮದಲ್ಲಿ ಈ ‘ಜನಪ್ರಿಯ’ ಎಂಬ ಕಲ್ಪನೆಗೆ ‘ಕ್ಲಾಸ್’ (ಉತ್ಕೃಷ್ಟ) ಹಾಗೂ ‘ಮಾಸ್’ (ಜನಪ್ರಿಯ) ಎಂಬ ಎರಡು ಪದಗಳನ್ನು ಬಳಸುತ್ತಾರೆ. ‘ಕ್ಲಾಸ್’ ಆಗಿದ್ದು ‘ಮಾಸ್’ ಆಗುವುದಿಲ್ಲ ಹಾಗೂ ‘ಮಾಸ್’ ಆಗಿದ್ದು ‘ಕ್ಲಾಸ್’ ಅಲ್ಲ ಎಂಬ ನೇರ ಮಾತು ನಮ್ಮ ಉದ್ಯಮದಲ್ಲಿ ಇದೆ! ಹಾಗಾದರೆ ಈ ‘ಮಾಸ್’ ಅಥವಾ ಜನಪ್ರಿಯ ಚಿತ್ರದ ಅಂಶಗಳೇನು? ಅವು ಸಾರ್ವಕಾಲಿಕ ಸತ್ಯಗಳೇ? ಜನಪ್ರಿಯತೆಯನ್ನು ಒಂದು ನಿರ್ದಿಷ್ಟ ಮಾನದಂಡದಿಂದ ಅಳೆಯುವುದು ಸಾಧ್ಯವೇ? ಇಲ್ಲ ಎನಿಸುತ್ತದೆ. ಒಂದು ಕಾಲದಲ್ಲಿ ಡಾ| ರಾಜ್ ಕುಮಾರ್ ಅಭಿನಯಿಸುತ್ತಿದ್ದ ಚಿತ್ರಗಳನ್ನು ನೋಡಿದರೆ, ಅವುಗಳು ಸಾಮಾಜಿಕ ಕಳಕಳಿಯನ್ನು ಹೊಂದಿದ್ದ, ಆ ಕಾಲದ ಸಾಮಾಜಿಕ ಮೌಲ್ಯಗಳನ್ನು ಗಟ್ಟಿಯಾಗಿ ಪ್ರತಿಪಾದಿಸುತ್ತಿದ್ದ ಚಿತ್ರಗಳಾಗಿದ್ದವು. ದೇಶಭಕ್ತಿ, ಉದಾತ್ತ ಪ್ರೇಮ, ನೆಲದೊಡನೆ ನೇರ ಸಂಪರ್ಕದಲ್ಲಿರುವ ನಾಯಕ ಇತ್ಯಾದಿ ಅಂಶಗಳು ಡಾ| ರಾಜ್ ಕುಮಾರರನ್ನು ಅವರೇರಿದ ಎತ್ತರಕ್ಕೆ ಏರಿಸಿದವು. ಹಾಗಾದರೆ ಈ ಅಂಶಗಳು ಜನಪ್ರಿಯತೆಗೆ ಸೂತ್ರವೇ? ಇಲ್ಲ ಎಂದು ಮತ್ತೆ ಉತ್ತರ ಸಿಗುತ್ತದೆ. ಏಕೆಂದರೆ, ಈ ಸೂತ್ರಗಳನ್ನು ಡಾ| ರಾಜ್ ಕುಮಾರ್ ನಂತರ ಅನೇಕ ನಾಯಕ ನಟರು ಅನುಸರಿಸಿದರೂ ಹೆಚ್ಚೇನೂ ಸಫಲರಾಗಲಿಲ್ಲ. ಇದರಿಂದ ಸ್ಪಷ್ಟವಾಗುವುದೆಂದರೆ ಚಿತ್ರವನ್ನು ಜನಪ್ರಿಯಗೊಳಿಸುವ ಕಾರಣಗಳು ಕಾಲದಿಂದ ಕಾಲಕ್ಕೆ ಪರಿಷ್ಕೃತವಾಗುತ್ತಾ ಸಾಗಿವೆ. ಹೀಗಿರುವಾಗ ಸಿನೆಮಾ ಒಂದರ ಜನಪ್ರಿಯತೆಯೂ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಸಾಗುವುದೂ ಸಹಜ. ಹಾಗಾದರೆ ಯಾವುದೇ ಸಿನೆಮಾವನ್ನು ‘ಜನಪ್ರಿಯ’ ಎನ್ನುವುದು, ಒಂದು ಕಾಲಘಟ್ಟಕ್ಕೆ ಸಂಬಂಧಿಸಿದಂತೆ, ಒಂದು ನಿರ್ದಿಷ್ಟ ವರ್ಗದ ಜನರಿಗೆ ಸಂಬಂಧಿಸಿದಂತೆ ಮಾತ್ರ ಹೇಳುವ ಹೇಳಿಕೆಯಾಗುತ್ತದೆ ಹಾಗೂ ಇದರಿಂದ ಅನೂರ್ಜಿತ ಎಂದು ನನಗೆ ಅನಿಸುತ್ತದೆ.
ಇಲ್ಲಿ ಸಿನೆಮಾ ಮಾಧ್ಯಮಕ್ಕೆ ಇರುವ ಇನ್ನೊಂದು ಸಮಸ್ಯೆಯನ್ನು ಹೇಳಬೇಕು. ವ್ಯಾನ್ ಗಾಗ್‍ನ ಒಂದು ಕೃತಿಯನ್ನು ನೋಡಿದರೆ, ಅದರಲ್ಲಿನ ಧ್ವನಿಗಳು ನಮಗೆ ಅರ್ಥವಾಗದಿದ್ದರೆ, ಆ ಚಿತ್ರದಲ್ಲಿ ಏನೋ ಗಹನವಾದದ್ದು ಇದೆ, ನನ್ನ ಮಿತಿಗೆ ಅದು ಮೀರಿದ್ದು ಎನ್ನುವ ಭಾವ ನೋಡುಗನಲ್ಲಿ ಮೂಡುತ್ತದೆ. ಸಾಹಿತ್ಯ ಅರ್ಥವಾಗದೇ ಹೋದರೆ, ಅದು ತನ್ನ ಅರಿವಿಗೆ ಮೀರಿದ್ದು ಎಂದು ಓದುಗ ಅಂದುಕೊಳ್ಳುತ್ತಾನೆ. ಸಂಗೀತ, ನಾಟಕಗಳಲ್ಲೂ ಇದು ಸತ್ಯವಾಗುತ್ತದೆ. ನಾಟಕದಲ್ಲಿ ನಟನೊಬ್ಬ ಮೇಜಿನ ಮೇಲೆ ಇಲ್ಲದ ಲೋಟವೊಂದನ್ನು ಎತ್ತಿ ನೀರು ಕುಡಿದಂತೆ ನಟಿಸಿದರೂ ಅಲ್ಲಿ ಲೋಟ ಇದ್ದದ್ದು ಹೌದು ಎಂದು ಒಪ್ಪಿಕೊಳ್ಳಲು ಪ್ರೇಕ್ಷಕ ಸಿದ್ಧನಿರುತ್ತಾನೆ. ಇಲ್ಲೆಲ್ಲಾ ಅಮೂರ್ತಗಳನ್ನು ಒಪ್ಪಿಕೊಳ್ಳುವಂತೆ ಸಿನೆಮಾ ಮಾಧ್ಯಮದಲ್ಲಿ ಜನ ಅಮೂರ್ತಗಳನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಏಕೆಂದರೆ ಇಲ್ಲಿ ನಾವು ನೈಜ ಬಿಂಬಗಳನ್ನು ಜೋಡಿಸುತ್ತಾ ಅಮೂರ್ತವನ್ನು ಕಟ್ಟ ಬೇಕಾಗುತ್ತದೆ. ಇದರಿಂದಾಗಿ ಎದುರಾಗುವ ದೊಡ್ಡ ಸಮಸ್ಯೆ ಎಂದರೆ, ಆ ಅಮೂರ್ತ ನೋಡುಗನನ್ನು ತಲುಪದೇ ಹೋದರೆ, ಸಾಹಿತ್ಯದಲ್ಲಿ ಹೇಳುವಂತೆ reading between the lines ಆ ಸಿನೆಮಾದ ಮಟ್ಟಿಗೆ ಆಗುವುದೇ ಇಲ್ಲ! ಅದು ಬರೇ ಒಂದು ಕಥೆಯ ನಿರೂಪಣೆಯಷ್ಟೇ ಆಗಿ ಉಳಿದು ಬಿಡುತ್ತದೆ. ಆದರೆ ಸಿನೆಮಾ ಮಾಧ್ಯಮಕ್ಕೆ ಪ್ರವೇಶವೇ ಇಲ್ಲದವನೂ ಇದು ತನ್ನ ಮಿತಿ ಎಂದು ಭಾವಿಸದೇ ಇದು ಕೃತಿಯ ಮಿತಿ ಎಂದು ದೂರುವ ಅಪಾಯ ಇದೆ. ಹೀಗಾಗಿ ‘ಜನಪ್ರಿಯ’ ಕೃತಿಯ ಸೃಷ್ಟಿಯ ಪ್ರಯತ್ನದಲ್ಲಿ, ಅತ್ಯಂತ ಹೆಚ್ಚು ಜನರಿಗೆ ನನ್ನ ಕಥೆಯಲ್ಲಿನ ಎಲ್ಲಾ ವಿಷಯಗಳನ್ನು ಅರ್ಥ ಮಾಡಿಸಿಯೇ ಸಿದ್ಧ ಎಂಬ ಹಠಕ್ಕೆ ಬೀಳುವ ಚಿತ್ರ ನಿರ್ದೇಶಕ, ವಾಚಾಳಿ, ಅತಿರಂಜಿತ ಕಥೆಗಳನ್ನು ಹೇಳಲು ಹೊರಡುತ್ತಾನೆ. ಇದು ‘ಜನಪ್ರಿಯವಾಗುವ’ ಪ್ರಯತ್ನದಲ್ಲಿ ನಮ್ಮ ಚಿತ್ರರಂಗ ಎದುರಿಸುತ್ತಿರುವ ಸಮಸ್ಯೆ.
ವಿಚಿತ್ರವೆಂದರೆ, ಇದೇ ಪ್ರೇಕ್ಷಕ ವರ್ಗದಲ್ಲಿ ಒಂದು ಹಿರಿಯದಾಗ ವರ್ಗ ಇತರ ದೇಶಗಳ ಚಿತ್ರಗಳನ್ನು ಬೇರೆಯೇ ಮಾನದಂಡದಲ್ಲಿ ನೋಡುವುದು! ಕರ್ನಾಟಕದ ಪ್ರೇಕ್ಷಕನಿಗೆ, ಹಿಂದಿ ಸಿನೆಮಾದಲ್ಲಿ ಒಪ್ಪಿಗೆಯಾಗುವ (ಹಾಗೂ ಅದರಿಂದ ಜನಪ್ರಿಯವೂ ಆಗುವ) ಎಷ್ಟೋ ವಿಚಾರಗಳು ಕನ್ನಡ ಸಿನೆಮಾದಲ್ಲಿ ತೋರಿಸಿದರೆ ಒಪ್ಪಿಗೆಯಾಗುವುದಿಲ್ಲ. ಒಂದು ಉದಾಹರಣೆಯನ್ನು ಗಮನಿ: ರಾಮಾಯಣ ಮಹಾಭಾರತದಂಥಾ ಕೃತಿಗಳಲ್ಲಿ ಎದುರಾಗುವ Digression ನಮ್ಮ ಸಿನೆಮಾಗಳಲ್ಲೂ ಹಾಡು, ಕುಣಿತ ಅಥವಾ ಹಾಸ್ಯ ಸರಣಿಗಳಲ್ಲಿ ಕಂಡು ಬರುತ್ತವೆ. ಮೂಲ ಕಥೆಯ ಓಟಕ್ಕೆ ನೇರ ಸಂಬಂಧ ಇಲ್ಲದೇ ನಮ್ಮ ಚಿತ್ರಗಳಲ್ಲಿ `Comedy track’ ಇರುತ್ತವೆ. ಆದರೂ ಪ್ರೇಕ್ಷಕನಿಗೆ ಸಿನೆಮಾದ ಅನುಭವದಲ್ಲಿ ಯಾವ ತೊಂದರೆಯೂ ಆಗುವುದಿಲ್ಲ. ಇದು ನಮ್ಮ ಚಿತ್ರೋದ್ಯಮದಲ್ಲಿ ಜನಪ್ರಿಯತೆಯ ಒಂದು ಸೂತ್ರವೇ ಆಗಿಬಿಟ್ಟಿದೆ. ಆದರೆ ಇದೇ ಪ್ರೇಕ್ಷಕನಿಗೆ ಹಿಂದಿಯ ರಾಮ್ ಗೋಪಾಲ್ ವರ್ಮಾರ ಹಾಡುಗಳೇ ಇಲ್ಲದ, ಭೂತ-ಪ್ರೇತದ ಕಥೆಗಳಿರುವ, ಹಾಸ್ಯ ತುಣುಕುಗಳಿಲ್ಲದ ಚಿತ್ರಗಳನ್ನು ತೋರಿಸಿದರೆ ಅದೂ ಬೇರೆಯೇ ಕಾರಣಗಳಿಂದ ಒಪ್ಪಿಗೆಯಾಗುತ್ತವೆ. ಇದು ‘ಜನಪ್ರಿಯ’ ಎಂಬ ಕಲ್ಪನೆ ಅಥವಾ ಅದಕ್ಕೆ ಇರುವ ಸಿದ್ಧ ಸೂತ್ರಗಳ ಸುಳ್ಳನ್ನು ಮತ್ತೊಮ್ಮೆ ತೋರಿಸುತ್ತದೆ. ಹಾಗಾದರೆ ‘ಜನಪ್ರಿಯ’ ಎನ್ನುವುದು ನಿಜಕ್ಕೂ ಒಂದು ಸೃಜನಾತ್ಮಕ (Aesthetic) ಗುಣವೇ? ಅಥವಾ ಮಾರುಕಟ್ಟೆ ಪ್ರೇರಿತವೇ?
‘ಜನಪ್ರಿಯ’ ಎನ್ನುವ ಕಲ್ಪನೆಯ ಹುಟ್ಟಿನಲ್ಲಿ ಕೇವಲ ಜನರ ನಿರ್ಧಾರ ಇರುತ್ತದೆಯೇ? ಅತ್ಯಂತ ಪ್ರಜಾಸತ್ತಾತ್ಮಕ ಎಂದು ತನ್ನನ್ನು ತಾನೇ ಹೊಗಳಿಕೊಳ್ಳುವ ಅಮೇರಿಕಾದಲ್ಲಿ ಸಾಮಾನ್ಯವಾಗಿ Action ಸಿನೆಮಾಗಳನ್ನು ‘ಜನಪ್ರಿಯ’ ಎಂದು ಗುರುತಿಸುತ್ತಾರೆ. ಇದು ರಾಷ್ಟ್ರ ನಿರ್ಮಾಣದ ಬಗ್ಗೆ ಅಲ್ಲಿನ ಸರಕಾರದ ನೀತಿಯ ಪ್ರತಿಬಿಂಬವಾಗಿಯೂ ಕಂಡು ಬರುತ್ತದೆ. ಅತ್ಯಂತ ಬಲಾಡ್ಯರು, ಅತ್ಯಂತ ಉನ್ನತರು ಹಾಗೂ ಅತ್ಯಂತ ವೇಗವುಳ್ಳವರು ಅಮೇರಿಕನ್ನರು ಎಂದು ಪ್ರತಿಬಿಂಬಿಸುವ ಚಿತ್ರಗಳು ಅಲ್ಲಿ ಜನಪ್ರಿಯತೆ ಪಡೆಯುತ್ತವೆ. Ramboನಂಥಾ ಚಿತ್ರಗಳು, Star warsನಂಥಾ ಚಿತ್ರಗಳು ಇದರಿಂದಾಗಿಯೇ ಮಹತ್ವ ಪಡೆಯುತ್ತವೆ. ಹಾಗಾಗಿ ಒಂದು ಆಡಳಿತವೂ ಈ ‘ಜನಪ್ರಿಯ’ ಎಂದು ಬಿಂಬಿತವಾಗುವ ಚಿತ್ರಗಳ ನಿರ್ಧಾರದಲ್ಲಿ ಪಾಲುದಾರನಾಗುವ ಸಾಧ್ಯತೆ ಇದೆ. ಅಲ್ಲಿಗೆ ಕೇವಲ ಜನರ ಅಭಿರುಚಿ ಅಥವಾ ವಾಣಿಜ್ಯಿಕ ಅಂಶಗಳಲ್ಲದೇ ಇನ್ನೂ ಅನೇಕ ಅಂಶಗಳು ಈ ‘ಜನಪ್ರಿಯ’ ಎನ್ನುವ ಕಲ್ಪನೆಯನ್ನು ಮೂಡಿಸುವಲ್ಲಿ ಕಾರಣಗಳಾಗುವ ಸಾಧ್ಯತೆ ನಮಗೆ ಕಂಡು ಬರುತ್ತವೆ.
ಇಲ್ಲಿ ಸಿನೆಮಾದ ಇತಿಹಾಸವನ್ನೇ ನಾವು ಇನ್ನೊಮ್ಮೆ ನೋಡಬಹುದು ಎನಿಸುತ್ತದೆ. ಲೂಮಿಯರ್ ಸಹೋದರರು ತಮ್ಮ ಚಿತ್ರಗ್ರಹಣ, ಸಂಸ್ಕರಣ, ಪ್ರದರ್ಶನದ ಯಂತ್ರಗಳನ್ನು ತಯಾರಿಸಿದ ಸಮಯದಲ್ಲಿ ಅವರು ಇದು ಕೈಗಾರಿಕಾ ಕ್ರಾಂತಿಯ ಒಂದು ಅನಗತ್ಯ ಅನ್ವೇಷಣೆ. ಇದಕ್ಕೆ ಭವಿಷ್ಯವಿಲ್ಲ ಎಂದು ಹೇಳಿದ್ದರು. ಪರದೆಯ ಮೇಲೆ, ರೈಲು ಬಂದು ರೈಲು ನಿಲ್ದಾಣದಲ್ಲಿ ನಿಲ್ಲುವ ದೃಶ್ಯವನ್ನು ಕಂಡು ಜನ ಬೆರಗಾಗಿದ್ದರು. ಈ ಬೆರಗಿನ ಅಂಶವನ್ನು ಆರ್ಥಿಕ ಲಾಭಕ್ಕೆ ಬಳಸಬಹುದು ಎಂದು ಅರಿವಿಗೆ ಬಂದಾಕ್ಷಣ, ಲೂಮಿಯರ್ ಸಹೋದರರು ತಮ್ಮ ಅನೇಕ ಮಂದಿ ಕೆಲಸದವರನ್ನು ಜಗತ್ತಿನಾದ್ಯಂತ ಕಳುಹಿಸಿ, ಅಲ್ಲಿನ ಚಿತ್ರಗಳನ್ನು ತೆಗೆದು ಅಲ್ಲಿನ ಜನರಿಗೆ ತೋರಿಸಿ, ಬೆರಗು ಉಂಟು ಮಾಡಿ ಅದರಿಂದ ಸಾಧ್ಯವಾದಷ್ಟು ಹಣ ಸಂಪಾದಿಸುವ ಯೋಜನೆ ಮಾಡಿದರು. ಹೀಗಾಗಿ ಅವರ ಯಂತ್ರದ ತಯಾರಿಕೆಯ ಕೆಲವೇ ಕಾಲದೊಳಗೆ ಜಗತ್ತಿನಾದ್ಯಂತ ಈ ಯಂತ್ರದ ಪರಿಚಯವಾಯಿತು. ಚಿತ್ರ ನಿರ್ಮಾಣ ಆರಂಭವಾಯಿತು. ಮುಂದೆ ಈ ಬೆರಗನ್ನು ಪ್ರೇಕ್ಷಕ ಮೀರುವ ಸಮಯಕ್ಕಾಗಲೇ ಸಂಕಲನದ ಉಗಮವಾಯಿತು. ಈಗ ಬೇರೆ ರೀತಿಯ ಬೆರಗು ಪ್ರೇಕ್ಷಕನಿಗೆ ಮೋಡಿ ಮಾಡಿತು. ಮತ್ತೆ ಧ್ವನಿ, ವರ್ಣ ಹೀಗೆ ತಂತ್ರಜ್ಞಾನದ ಜೋಡಣೆಗಳೆಲ್ಲವೂ ಪ್ರೇಕ್ಷಕನ ಬೆರಗನ್ನೇ ಗುರಿಯನ್ನಾಗಿಸಿದವು. ಇದೇ ‘ಜನಪ್ರಿಯ’ವಾಯಿತು. ಆದರೆ ಈ ಉದ್ದಕ್ಕೂ ಈ ಬೆರಗನ್ನು ಮೀರಿದ ಕಲಾತ್ಮಕ ಸಾಧ್ಯತೆಗಳ ಕುರಿತಾಗಿ ಅನೇಕರು ಯೋಚಿಸಿ ಆ ದಾರಿಯಲ್ಲಿ ಕೆಲಸ ಮಾಡುತ್ತಲೇ ಇದ್ದರು. ಹೀಗಾಗಿ ಅಂದಿನಿಂದಲೇ ‘ಜನಪ್ರಿಯ’ ಹಾಗೂ ‘ಕಲಾತ್ಮಕ’ ಅಥವಾ ‘ಗಂಭೀರ’ ಚಿತ್ರ ಎಂಬ ಭೇದ ಆರಂಭವಾಗಿ ಬಿಟ್ಟಿತ್ತು. ವಿಚಿತ್ರವೆಂದರೆ, ಇಂದಿಗೂ ‘ಜನಪ್ರಿಯ’ ಎನಿಸಿಕೊಳ್ಳುವ ಚಿತ್ರಗಳು ಪ್ರೇಕ್ಷಕನ ಬೆರಗನ್ನೇ ಬಂಡವಾಳವನ್ನಾಗಿ ಇಟ್ಟುಕೊಂಡಿರುವುದು! ನಮ್ಮ ಚಿತ್ರೋದ್ಯಮದಲ್ಲಿ “ನಮ್ಮ ಚಿತ್ರ ಭಿನ್ನವಾಗಿದೆ” ಎಂದು ಹೇಳಿದಾಗಲೆಲ್ಲಾ ಅವರ ಮಾತಿನ ಹಿಂದಿನ ಅರ್ಥ ಹೊಸ ಬೆರಗನ್ನು ಹೊತ್ತು ತಂದಿರುವ ಭರವಸೆಯೇ ಆಗಿರುತ್ತದೆ. ಇನ್ನು ಈ ಬೆರಗಿನ ಅಂಶದಲ್ಲಿ ಸಾಮಾಜಿಕ ಮೌಲ್ಯಗಳ ಮೂಲಕ ಒದಗುವ ಬೆರಗು, ಹೊಸ ಸಂಸ್ಕೃತಿಯನ್ನು ನೋಡುವುದರಿಂದ ಆಗುವ ಬೆರಗು ಇತ್ಯಾದಿಗಳು ಮೇಳೈಸಿರುವುದರಿಂದ ಸಾಮಾಜಿಕ ಮೌಲ್ಯಗಳಲ್ಲಿ ಬದಲಾವಣೆಗಳನ್ನು, ವಿನಿಮಯವನ್ನೂ ಸಿನೆಮಾ ತಂದಿತು. ಹೀಗಾಗಿ ಒಂದು ರೀತಿಯಲ್ಲಿ ಸಿನೆಮಾ ಆಗಲೇ ಜಾಗತೀಕರಣವನ್ನು ಕಂಡಿತ್ತು ಎನ್ನಬಹುದು.
ಈ ‘ಜನಪ್ರಿಯ’ಗೊಳಿಸುವ ಅಥವಾ ಹೊಸ ಬೆರಗನ್ನು ಸೃಷ್ಟಿಸುವ ಪ್ರಕ್ರಿಯೆಯಲ್ಲಿ ಚಿತ್ರ ನಿರ್ಮಾಣದ ಎಲ್ಲಾ ಭಾಗಗಳೂ ತೊಡಗಿಕೊಳ್ಳುತ್ತವೆ. ಮೊದಲನೆಯದಾಗಿ ಚಿತ್ರದ ಕಥೆಯ ಆಯ್ಕೆಯೇ ಎಂಥಾ ಜನ ನಮ್ಮ ಚಿತ್ರವನ್ನು ನೋಡಲಿದ್ದಾರೆ ಎಂದು ಊಹಿಸಿಕೊಂಡು ಆಗುವ ನಿರ್ಧಾರವಾಗಿರುತ್ತದೆ. ಇವತ್ತಿನ ಕನ್ನಡ ಚಿತ್ರರಂಗವನ್ನೇ ನೋಡಿದರೆ, ಕನ್ನಡದ ಸಿನೆಮಾ ವೀಕ್ಷಕನಲ್ಲಿ ಸ್ವಲ್ಪ ದುಡ್ಡಿದ್ದರೆ, ಅವನು ಅಂತಸ್ತಿನ ಕಾರಣಗಳಿಂದಾಗಿ (ಅಥವಾ ಹೆಚ್ಚಿನ ಬೆರಗಿನ ಅಪೇಕ್ಷೆಯಲ್ಲಿ) ಹಿಂದಿ ಅಥವಾ ಇಂಗ್ಲೀಷ್ ಸಿನೆಮಾವನ್ನು ನೋಡಬಯಸುತ್ತಾನೆ. ಇನ್ನು ದೂರದರ್ಶನದಲ್ಲಿ ಹೊಸ ಸಿನೆಮಾಗಳನ್ನು ತೋರಿಸುವ ಪರಿಪಾಠ ಬಂದಾಗಿನಿಂದ, ಚಿತ್ರ ಮಂದಿರಗಳ ದರ ವಿಪರೀತವಾಗುತ್ತಿರುವುದರಿಂದ, ಒಂದು ಚಿತ್ರವನ್ನು ನೋಡಲು ಹೋಗಬೇಕಾದರೆ, ಬೆಂಗಳೂರಿನಂಥಾ ಊರಿನಲ್ಲಿ ಎದುರಾಗುವ ವಾಹನ ಸಂದಣಿಯಂಥಾ ಇತರ ತೊಂದರೆಗಳಿಂದ, ಕನ್ನಡ ಚಿತ್ರರಂಗದ ಮೇಲೆ ಇತರ ಚಿತ್ರರಂಗಗಳಿಂದ ಇರುವ ಒತ್ತಡದಿಂದ – ಹೀಗೆ ಒಟ್ಟಾಗಿ ಕನ್ನಡ ಚಿತ್ರಗಳನ್ನು ಚಿತ್ರ ಮಂದಿರಕ್ಕೇ ಹೋಗಿ (ಪಾರಂಪರಿಕ ಏಕ-ಪರದೆ ಚಿತ್ರಮಂದಿರಗಳಲ್ಲಿ) ವೀಕ್ಷಿಸುವುದು ಶ್ರಮಿಕ ವರ್ಗ ಎನ್ನುವ ಲೆಕ್ಕಾಚಾರ ಹುಟ್ಟಿದೆ. ಇವರಿಗೆ ಒಂದೋ ಅತಿರಂಜಿತ ಪ್ರೇಮ ಕಥೆಗಳನ್ನು ಕೊಡಿ ಇಲ್ಲವೇ ಜನರನ್ನು ಹೊಡೆದು, ಕೊಚ್ಚಿ ಹಾಕುವ ಚಿತ್ರಗಳನ್ನು ಕೊಡಿ ಎಂಬ ಸಿದ್ಧ ಸೂತ್ರ ಸಧ್ಯದಲ್ಲಿ ಚಾಲ್ತಿಯಲ್ಲಿದೆ. ಕೇಳಲು ತೀರಾ ನಂಬಿಕಾರ್ಹ ಸೂತ್ರದಂತೆ ಕಂಡರೂ, ಚಿತ್ರಮಂದಿರಗಳಲ್ಲಿ ಸೋಲುತ್ತಿರುವ ಚಿತ್ರಗಳ ಸಂಖ್ಯೆಯನ್ನು ಗಮನಿಸಿದರೆ ಸೂತ್ರದ ಮೇಲೆ ಸಂಶಯ ಹುಟ್ಟುತ್ತದೆ.
ಮತ್ತೆ ಕಥೆಯ ನಿರೂಪಣೆಯನ್ನೇ ನೋಡಿದರೆ, ಅಮೇರಿಕಾದ ಚಿತ್ರಗಳಲ್ಲಿ ಇರುವಂತೆ ಅಪರಿಮಿತ ವೇಗದ ನಿರೂಪಣೆಯನ್ನು ನಮ್ಮಲ್ಲಿ ‘ಜನಪ್ರಿಯತೆಯ’ ಸೂತ್ರವಾಗಿ ಬಳಸಲಾಗುತ್ತದೆ. ಈ ವೇಗ ನಮ್ಮ ಚಿತ್ರಗಳಲ್ಲಿ ನಿರ್ವಹಿಸಲ್ಪಡುವ ವಸ್ತುಗಳು, ಇಲ್ಲಿನ ಸಾಮಾಜಿಕ ಪರಿಸ್ಥಿತಿಗಳಿಗೆ ಎಷ್ಟೋಬಾರಿ ಹೊಂದಿಕೆಯಾಗದೇ ಚಿತ್ರಗಳು ಸೋಲುತ್ತವೆ. ಇನ್ನು ಸಿನೆಮಾ ನಿರ್ಮಾಣ ನಿರ್ಮಾಣದಲ್ಲಿ ಅಡಕವಾಗಿರುವ ತಾಂತ್ರಿಕ ಅಂಗಗಳೂ ಅಂದರೆ, ಸಂಗೀತ, ಸಂಭಾಷಣೆ, ಛಾಯಾಗ್ರಹಣ ಹೀಗೆ ಇತರ ಅಂಗಗಳೂ ಇಂದು ಪರದೆಯ ಮೇಲೆ ಒಂದು ಕಥೆ ಹೇಳುವುದನ್ನು ಬಿಟ್ಟು ‘ಜನಪ್ರಿಯ’ ಸೂತ್ರಗಳಿಗೆ ನೇತುಬೀಳುವ ಪ್ರಕ್ರಿಯೆಯಲ್ಲೇ ತೊಡಗಿವೆ. ಅಧ್ಬುತವಾದ ದೃಶ್ಯ ವೈಭವವನ್ನು ತೋರಿಸುವುದು, ಪ್ರೇಕ್ಷಕ ನೋಡಿರದ ಅದ್ಯಾವುದೋ ವಿದೇಶೀ ತಾಣಗಳಲ್ಲಿ ಕನಿಷ್ಟ ಬಟ್ಟೆಯಲ್ಲಿ ಕುಣಿಯುವ ತರುಣಿಯರು ಹೀಗೆ ಒಂದು ಮಾಯಾ ಲೋಕಕ್ಕೆ ಪ್ರೇಕ್ಷಕನನ್ನು ತಳ್ಳಿ ಅವನ ಜೋಬಿಗೆ ಕೈಹಾಕುವ ಪ್ರಯತ್ನ ಇಂದು ‘ಜನಪ್ರಿಯ’ವಾಗುವ ಪ್ರಯತ್ನದಲ್ಲಿ ನಮ್ಮ ಚಿತ್ರರಂಗ ಮಾಡುತ್ತಿದೆ. ಇದರಿಂದಾಗಿ ಎದುರಾಗಿರುವ ತೊಡಕು ಎಂದರೆ, ತಾಂತ್ರಿಕ ವಿಷಯಗಳೆಲ್ಲವೂ ಪ್ರತ್ಯೇಕವಾಗಿ ನಿಂತು ಸಿನೆಮಾ ಒಂದು ಸಮಗ್ರ ಅನುಭವವನ್ನು ಕೊಡಲಾರದೇ ಹೋಗುತ್ತಿರುವುದು. ತಲೆಯೇ ಇಲ್ಲದ ದೇಹಕ್ಕೆ ಬಂಗಾರದ ಚಪ್ಪಲಿ ಇದ್ದಂತೆ ನಮ್ಮ ಪರಿಸ್ಥಿತಿಯಾಗಿದೆ! ಇನ್ನು ಚಿತ್ರರಂಗ ಪ್ರೇಕ್ಷಕನ ಎದುರು ಇಡುತ್ತಿರುವುದೇ ಈ ಅಶನವನ್ನಾಗಿರುವುದರಿಂದ ಅವನೂ ಅದನ್ನೇ ಉಣ್ಣುತ್ತಿದ್ದಾನೆ. ಇದರಲ್ಲೇ ಒಂದು ಮಾರುಕಟ್ಟೆ ನಿರ್ಮಾಣವಾಗಿದೆ, ಅದರಲ್ಲೇ ಪರಿಷ್ಕರಣಗಳು ನಡೆಯುತ್ತಾ ಸಾಗುತ್ತವೆ. ಹೀಗಾಗಿ ‘ಜನಪ್ರಿಯ’ ಎನ್ನುವುದು ನಮ್ಮ ಕನ್ನಡ ಚಿತ್ರರಂಗದ ಮಟ್ಟಿಗಂತೂ ‘ಸದಭಿರುಚಿ’ ಆಗದೆ ಕೇವಲ ಒಂದು ತಾಂತ್ರಿಕ ಕಸರತ್ತಾಗುತ್ತಾ ಸಾಗಿದೆ.
ಆದರೆ ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ. ಇಷ್ಟೆಲ್ಲಾ ಲೆಕ್ಕಾಚಾರಗಳ ನಂತರವೂ ಯಾವ ಚಿತ್ರವನ್ನು ಯಾವ ಪ್ರೇಕ್ಷಕ ಯಾಕೆ ನೋಡುತ್ತಾನೆ ಎಂಬುದರ ಅರಿವು ಅಥವಾ ಅದನ್ನು ಲೆಕ್ಕ ಹಾಕುವ ಸಾಧ್ಯತೆ ಇರುವುದಿಲ್ಲ. ಸಾಮಾನ್ಯವಾಗಿ ಮುಖ್ಯವಾಹಿನಿಯ ಚಿತ್ರಗಳನ್ನು ದೀಪಾವಳಿ, ಕ್ರಿಸ್ಮಸ್, ದಸರಾ ಸಮಯ ಹೀಗೆ ರಜಾ ಸಮಯಗಳನ್ನು ಹೊಂದಿಸಿಕೊಂಡು ಬಿಡುಗಡೆ ಮಾಡುವುದು, ವಿಧವಿಧ ಪ್ರಚಾರ ಕ್ರಮಗಳನ್ನು ಕೈಗೊಳ್ಳುವುದು ಇಷ್ಟೆಲ್ಲಾ ಮಾಡಿದರೂ, ನಾಡಿನ ಎಲ್ಲಾ ಕಡೆಗಳಲ್ಲಿ ನಡೆಯುತ್ತಿರುವ ವಿದ್ಯಮಾನಗಳು, ಅದರಿಂದಾಗಿ ಪ್ರಾದೇಶಿಕವಾಗಿ ಸಂಭವಿಸುವ ವಿಕ್ಷಕರ ಮನಪರಿವರ್ತನೆಗಳನ್ನು ಗ್ರಹಿಸುವುದು ಅಸಾಧ್ಯವೇ ಸರಿ. ಹೀಗಾಗಿ ಅನೇಕ ಬಾರಿ ಚಿತ್ರಗಳು ಅನಿರೀಕ್ಷಿತ ಪರಿಣಾಮಗಳನ್ನು ಕೊಡುವುದು ಸಹಜ. ಇಂಥಾ ಯಶಸ್ಸು ಅಥವಾ ಸೋಲು ತಕ್ಷಣ ಉದ್ಯಮಕ್ಕೆ ಸೂತ್ರ ಎನಿಸಿಬಿಡುತ್ತದೆ. ಆರ್ಥಿಕ ಹಿಂಜರಿತ, ಗಣ್ಯರೊಬ್ಬರ ಅನಿರೀಕ್ಷಿತ ಸಾವು, ಕೋಮು ಗಲಭೆಗಳು, ಅತಿವೃಷ್ಟಿ, ಅನಾವೃಷ್ಟಿ ಇತ್ಯಾದಿ ನೈಸರ್ಗಿಕ ಕಾರಣಗಳು ಹೀಗೆ ಅನೇಕ ಕಾರಣಗಳು ನಮ್ಮಲ್ಲಿ ಚಿತ್ರದ ಯಶಸ್ಸನ್ನು ನಿರ್ಧರಿಸುವಲ್ಲಿ ಪಾತ್ರವಹಿಸುತ್ತವೆ. ಹೀಗಾಗಿ ‘ಜನಪ್ರಿಯ’ ಚಿತ್ರಗಳೂ ಕಾಲದಿಂದ ಕಾಲಕ್ಕೆ, ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಾ, ಹೊಸ ಪ್ರೇಕ್ಷಕನ ಮನಸ್ಸನ್ನು ಅರ್ಥಮಾಡಿಕೊಳ್ಳುವ ಪ್ರಯತ್ನವನ್ನು ಮಾಡುತ್ತಾ ಸಾಗುತ್ತಿದೆ.
ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಚಿತ್ರಗಳ ಧಾಳಿಯಾಗುತ್ತಿರಬೇಕಾದರೆ, ಮೊದಲಿನ ಏಕ-ಪರದೆ ಚಿತ್ರಮಂದಿರಗಳು ಖಾಲಿ ಬೀಳತೊಡಗಿದವು. ಇಂಥಾ ಒಂದು ಚಿತ್ರಮಂದಿರಗಳಿಗಾಗಿ ಸಿದ್ಧವಾಗಿದ್ದ ಚಿತ್ರ-ಹಂಚಿಕಾ ವಿಧಾನ ಅಪ್ರಸ್ತುತವಾಯಿತು. ಅನೇಕ ಹಂಚಿಕೆದಾರರು ಕೆಲಸ ಕಳೆದುಕೊಂಡರು. ಚಿತ್ರಗಳು ಹೀನಾಯ ಸೋಲನ್ನನುಭವಿಸಿದವು. ಆದರೆ ನಮ್ಮ ‘ಜನಪ್ರಿಯ’ ಚಿತ್ರಗಳು ಮತ್ತೆ ಮೈಕೊಡವಿ ಎದ್ದವು. ಅವುಗಳು ತಮ್ಮ ನಿರ್ಮಾಣದ ಹಂತದಿಂದಲೇ, ಮಲ್ಟಿಪ್ಲೆಕ್ಸ್ ಪ್ರೇಕ್ಷಕರಿಗೆ ಬೇಕಾದ ಮಸಾಲೆಯನ್ನೇ ಅರೆಯಲಾರಂಭಿಸಿದವು. ಚಿತ್ರದಲ್ಲಿ ಬಿಂಬಿತವಾಗುತ್ತಿದ್ದ ಮೌಲ್ಯಗಳೂ, ನೈತಿಕತೆಯೂ ಬದಲಾಯಿತು. ತಂತ್ರಜ್ಞಾನವೂ ಪರಿಷ್ಕೃತವಾಯಿತು. ಅಂದರೆ ‘ಜನಪ್ರಿಯ’ದ ಕಲ್ಪನೆ ಮತ್ತೆ ಬದಲಾಗಿತ್ತು! ಹಾಗೂ ಚಿತ್ರರಂಗ ಅದರಲ್ಲಿ ‘ಜನಪ್ರಿಯತೆಗೆ’ ಹೊಸ ಸೂತ್ರಗಳ ಹುಡುಕಾಟದಲ್ಲಿ ನಿರತವಾಗಿತ್ತು.
ಒಂದೆಡೆ ತಂತ್ರಜ್ಞಾನದ ಹೊಸ ಆವಿಷ್ಕಾರದಿಂದ ಹಿಡಿದು ಪ್ರೇಕ್ಷಕ ವರ್ಗವನ್ನು ಅರಿಯುವ ಪ್ರಯತ್ನದವರೆಗೆ ಪ್ರೇಕ್ಷಕನನ್ನು ಬೆರಗು ಪಡಿಸುವ ಪ್ರಯತ್ನದಲ್ಲೇ ಇರುವ ಚಿತ್ರರಂಗ ‘ಜನಪ್ರಿಯ’ವಾಗುವ ಪ್ರಯತ್ನ ನಡೆಸಿದರೆ, ಇವೇ ವಿಷಯಗಳ ಕಲಾತ್ಮಕ ಸಾಧ್ಯತೆಗಳನ್ನು ಶೋಧಿಸುತ್ತಿರುವ ಚಿತ್ರಗಳನ್ನು ‘ಗಂಭೀರ’ ಅಥವಾ ಕಲಾತ್ಮಕ ಚಿತ್ರಗಳು ಎಂದು ಸಾಮಾನ್ಯವಾಗಿ ಗುರುತಿಸುತ್ತಾರೆ. ಆದರೆ ಇಂದು, ನಮ್ಮಲ್ಲಿ ಕಲಾತ್ಮಕ ಚಿತ್ರಗಳು ಎಂದು ಕರೆಯಲ್ಪಡುವ ಚಿತ್ರಗಳಲ್ಲೂ, ಒಂದು ಸೂತ್ರವನ್ನು ಎಂದು ರೂಪಿಸಿ ಸೂತ್ರ ಬದ್ಧವಾಗಿರುವ ವಿಷಯಗಳೇ ಸಾಧು – ಎನ್ನುವ ಹಂಬಲ ಇಲ್ಲೂ ಕಂಡು ಬರುತ್ತಿದೆ. ಗಂಭೀರ ಚಿತ್ರಗಳು ಹೀಗೇ ಇರಬೇಕು ಎನ್ನುವ ಸಿದ್ಧ ಸೂತ್ರದ ಹುಡುಕಾಟ ಇಲ್ಲೂ ನಡೆದಿದೆ ಎಂದು ನನಗೆ ಅನಿಸುತ್ತಿದೆ. ಇದಕ್ಕೆ ಕಾರಣ, ಸರಕಾರದಿಂದ ‘ಸದಭಿರುಚಿಯ’ ಚಿತ್ರಗಳಿಗೆ ದೊರೆಯುವ ಆರ್ಥಿಕ ಸಹಾಯ, ಪ್ರಶಸ್ತಿ (ಇದರ ಜೊತೆಗಿನ ಧನಾಕರ್ಷಣೆ) ಇಂಥಾ ಚಿತ್ರಗಳಿಗಿರುವ ಇತರ ಸೌಲಭ್ಯ ಇತ್ಯಾದಿಗಳೇ ಮಾರಕವಾಗುತ್ತಿವೆಯೋ ಎಂದು ನನಗನಿಸುತ್ತಿದೆ. ಸಿನೆಮಾದ ‘ಜನಪ್ರಿಯ’ತೆಯ ಕುರಿತಾಗಿ ನಮ್ಮ ಸರಕಾರಕ್ಕೆ ಇರುವ ಕಲ್ಪನೆಯ ಕುರಿತೂ ಇದೊಂದು ಹೇಳಿಕೆ ಎಂದು ನನಗನಿಸುತ್ತದೆ. ಇದರಿಂದಾಗಿ ‘ಜನಪ್ರಿಯ’ ಸಿನೆಮಾ ಎಂದು ಬಿಂಬಿಸುವ ಚಿತ್ರಗಳಲ್ಲಿ ಆಡಳಿತದ ನೀತಿಗಳು ಬಿಂಬಿತವಾದರೆ ಅಚ್ಚರಿಯಿಲ್ಲ. ಅಷ್ಟಕ್ಕೂ ‘ಗಂಭೀರ’ ಚಿತ್ರಗಳು ಎನ್ನುವಲ್ಲೂ ಸಾಕಷ್ಟು ‘ಜನಪ್ರಿಯ’ ಅಂಶಗಳು ಇದ್ದೇ ಇರುತ್ತವೆ. ಒಂದು ಪಾತ್ರ ಸನ್ನಿವೇಶಕ್ಕೆ ಪ್ರತಿಕ್ರಿಯಿಸುವ ಕ್ರಮದಲ್ಲಿ ಅಥವಾ ಯಾವುದೋ ದೃಶ್ಯದಲ್ಲಿ ಚಿತ್ರೀಕರಣ ತಾಣವನ್ನು ತೋರಿಸುವ ವಿಧಾನದಲ್ಲಿ, ಹಾಡುಗಳಲ್ಲಿ ಹೀಗೆ ಅನೇಕ ಅಂಶಗಳಲ್ಲಿ ‘ಜನಪ್ರಿಯ’ ಹಾಗೂ ‘ಗಂಭೀರ’ ಚಿತ್ರಗಳ ನಡುವಿನ ಗೆರೆ ಮಾಯವಾಗುತ್ತವೆ.
ನಾಟಕ, ಸಂಗೀತ, ಚಿತ್ರಕಲೆ ಎಲ್ಲವನ್ನೂ ಒಳಗೊಂಡ ಕಲೆ ಸಿನೆಮಾ ನಿರ್ಮಾಣ ಎಂದು ಚಿತ್ರ ತಯಾರಕರಾದ ನಾವು ಹೆಮ್ಮೆ ಪಡಬಹುದಾದರೂ, ಇದರಿಂದಾಗಿ ‘ಜನಪ್ರಿಯ’ವಾಗಿರಬೇಕಾದ, ‘ಸಾಮಾಜಿಕ ಬದ್ಧತೆ’ಯ ಭಾರವನ್ನು ಹೊರಬೇಕಾಗಿರುವ ಮಾಧ್ಯಮವಾಗಿರುವುದು ಶೋಚನೀಯ. ಇದನ್ನು ಒಂದು ಸ್ವತಂತ್ರ ಕಲಾಪ್ರಕಾರ ಎಂದು ಗುರುತಿಸದೇ, ಮನರಂಜನಾ ಮಾಧ್ಯಮ, ಜನಪ್ರಿಯ ಮಾಧ್ಯಮ ಎಂದು ಪರಿಗಣಿಸುವುದು ನಮ್ಮ ಚಿತ್ರರಂಗದ ಇಂದಿನ ದುಸ್ಥಿತಿಗೆ ಕಾರಣ. ಈ ಕಾರಣದಿಂದಲೇ ಇಂದು ಚಿತ್ರೋದ್ಯಮವು, ಸಿನೆಮಾ ಮಾಧ್ಯಮಕ್ಕೆ ‘ಜನಪ್ರಿಯ’ ಮಾದರಿಗಳನ್ನು ಶೋಧಿಸುತ್ತಾ, ಸೃಷ್ಟಿಸುತ್ತಾ, ಮುರಿಯುತ್ತಾ ಸಾಗಿದೆ.