ಗೆಳೆಯರೇ, ಪೂನಾದ FTII ಪದವಿ ಗಳಿಸಿ ಬೆಂಗಳೂರಿಗೆ ಬಂದ ಮೇಲೆ ಹಲವು ಜನ ಕಿರಿಯರು, ಗೆಳೆಯರು ನಾವೂ ಅಲ್ಲಿಗೆ ಸೇರುವುದಿದ್ದರೆ ಹೇಗಿರುತ್ತೆ? ಅಲ್ಲಿ ಏನೇನಾಯಿತು? ಇತ್ಯಾದಿ ಅನೇಕ ಪ್ರಶ್ನೆ ಕೇಳುತ್ತಿದ್ದರು. ಇವತ್ತಿಗೂ ಹೊಸತಾಗಿ ಪರಿಚಯವಾದವರು ಅನೇಕರು ಅದನ್ನು ಕೇಳುತ್ತಾರೆ. ಹೀಗೆ ಬಹಳ ದಿನಗಳಿಂದ ಬರೆಯಬೇಕು ಎಂದು ಕೊಂಡಿದ್ದ ಚಿತ್ರ ಶಾಲೆಯ ನೆನಪುಗಳನ್ನು ಈಗ ಆರಂಭಿಸುತ್ತಿದ್ದೇನೆ. ಅದಕ್ಕೆ ಕಾರಣ ಚಿತ್ತಾರ ಎಂಬ ಅಂದದ ಪತ್ರಿಕೆಯನ್ನು ತರುತ್ತಿರುವ ಬಿ. ಗಣಪತಿಯವರು ಎಂದರೆ ತಪ್ಪಲ್ಲ. ಅವರನ್ನು ಇತ್ತೀಚೆಗೆ ಭೇಟಿಯಾದಾಗ, ಅವರು ಇಂಥಾ ಒಂದಷ್ಟು ಬರವಣಿಗೆ ಕೊಡಬಹುದೇ ಎಂದು ಕೇಳಿ, ಗಾಳಿ ಹಾಕಿದರು. ಹಾಗೆ ಅವರಿಗೊಮ್ಮೆ ಥ್ಯಾಂಕ್ಸ್ ಹೇಳಿ, ಅವರ ಪತ್ರಿಕೆಯಲ್ಲಿ ಪ್ರಕಟವಾದ ನಂತರ ಬ್ಲಾಗಿಗೂ ಅದನ್ನು ಹಾಕುತ್ತಿದ್ದೇನೆ. ಅಂದ ಹಾಗೆ, ಚಿತ್ತಾರದಲ್ಲಿ ಇನ್ನೂ ಅನೇಕ ರಸವತ್ತಾದ ಬರವಣಿಗೆಗಳಿವೆ. ಓದಿ ನೋಡಿ ಒಮ್ಮೆ… ಇನ್ನು ಮೊದಲ ಅಧ್ಯಾಯಕ್ಕೆ ನಿಮಗೆ ನೇರ ಪ್ರವೇಶ.

ಸಿನೆಮಾಕ್ಕೊಂದು ಶಾಲೆಯೇ?

ಪ್ರತಿ ಶುಕ್ರವಾರ ಬಿಡುಗಡೆಯಾಗುತ್ತದಲ್ಲಾ, ಅಷ್ಟು ಹಾಡು, ಇಷ್ಟು ಹೊಡೆದಾಟ ಒಂದಷ್ಟು ಸಂಭಾಷಣೆ ಮತ್ತೆ ಒಂದಷ್ಟು ಮಜಾ ಕೊಡುವ ಸಿನೆಮಾಗಳು, ಅದನ್ನು ಮಾಡೋದನ್ನು ಕಲಿಯೋದಕ್ಕೂ ಒಂದು ಶಾಲೆ ಮಾಡಿದರೆ ಅದು ಹೇಗಿರಬಹುದು ಎಂದು ಯೋಚನೆ ಮಾಡಿದರೇ ಮಜಾ ಅಲ್ವಾ? ಅಲ್ಲಿ ಸಿನೆಮಾಗಳೇ ಪಾಠ ಪುಸ್ತಕ. ಮಾಸ್ಟರುಗಳು ಬಂದು ಸಿನೆಮಾ ನೋಡ್ರಲೇ… ಎಂದು ಹೇಳುವುದು! ಅರೆ! ಎಂಥಾ ಮಜಾ ಅಲ್ವಾ? ಹೀಗಿರುತ್ತಾ ಸಿನೆಮಾ ಕಲಿಸುವ ಶಾಲೆ? ಹೌದು. ಹೀಗೇ ಇರುತ್ತೆ ಸಿನೆಮಾ ಕಲಿಸುವ ಶಾಲೆ.

ಸಿನೆಮಾ ಹಿನ್ನೆಲೆಯೇ ಇಲ್ಲದ ಮಂಗಳೂರಿನ ಒಂದು ಮಧ್ಯಮ ವರ್ಗದ ಕುಟುಂಬದಿಂದ ಬಂದ ನಾನು ಸಿನೆಮಾ ರಂಗಕ್ಕೆ ಬರಬೇಕು ಎಂದು ಆಶಿಸಿದಾಗ ನನ್ನ ಮುಂದಿದ್ದ ಆಯ್ಕೆಗಳು ಎರಡು. ಒಂದೋ ನೇರ ರಂಗಕ್ಕೆ ಧುಮುಕಿ ಯಾವುದಾದರೂ ನಿರ್ದೇಶಕರ ಕೈಕೆಳಗೆ ಕೆಲಸ ಮಾಡಿ, ಅನುಭವಗಳಿಸಿ ತರುವಾಯ ಸ್ವತಂತ್ರ ನಿರ್ದೇಶನ ಆರಂಭಿಸುವುದು. ಅಥವಾ ಯಾವುದಾದರೂ ಸಿನೆಮಾ ಶಾಲೆ ಸೇರಿ ಅಲ್ಲಿ ಸಿನೆಮಾ ನಿರ್ಮಾಣವನ್ನು ಕಲಿತು ರಂಗಕ್ಕೆ ಬರುವುದು. ನಾನು ಸಿನೆಮಾ ಶಾಲೆಗೆ ಸೇರುವ ನಿರ್ಧಾರ ಮಾಡಿದೆ. ಇಂದು ಒಂದು ಸಿನೆಮಾ ನಿರ್ದೇಶಿಸಿ ಎರಡನೆಯದರ ತಯಾರಿಯಲ್ಲಿದ್ದೇನೆ. ಇಂದಿಗೂ ನನ್ನ ಊರಿಗೆ, ಕಾಲೇಜಿಗೆ ಹೋದಾಗ ಸಿಗುವ ಗೆಳೆಯರು ಬಂಧುಗಳು ಅನೇಕ ಕಿರಿಯ ಮಿತ್ರರು ಸಿನೆಮಾ ನಿರ್ದೇಶನ ಕಲಿಯುವುದು ಹೇಗೆ ಎಂದು ನನ್ನ ಬಳಿ ಕೇಳುತ್ತಾರೆ. ಸಿನೆಮಾ ಕಲಿಯಲು ಶಾಲೆಗೆ ಹೋಗಲೇ ಬೇಕೆ? ಯಾವುದಾದರೂ ನಿರ್ದೇಶಕರ ಕೈಕೆಳಗೆ ಕೆಲಸ ಮಾಡಿದರೆ ಸಾಲದೇ? ಹೀಗೆ ಮತ್ತೆ ಮತ್ತೆ ಪ್ರಶ್ನೆಗಳು ಅವರಿಂದ ಬರುತ್ತವೆ. ಹೀಗಾಗಿ ನನ್ನ ಒಂದಷ್ಟು ಅನುಭವಗಳನ್ನು, ಎರಡೂ ದಾರಿಗಳ ಗುಣಾವಗುಣಗಳ ಕುರಿತಾಗಿ ನನಗೆ ತೋಚಿದ ಒಂದಷ್ಟು ವಿಷಯಗಳನ್ನು ‘ಚಿತ್ತಾರ’ದ ಮೂಲಕ ನಿಮ್ಮೊಂದಿಗೆ ಹಂಚಿಕೊಳ್ಳುವ ಪ್ರಯತ್ನ ನನ್ನದು. ಇಂದಿನದೇ ಮೊದಲ ಅಧ್ಯಾಯ.

ಸಿನೆಮಾವನ್ನು ಕಲಿಸಲು ಜಗತ್ತಿನಾದ್ಯಂತ ಹಲವು ಶಾಲೆಗಳಿವೆ. ನಮ್ಮ ದೇಶದಲ್ಲೂ ಅನೇಕ ಇವೆ. ಬೆಂಗಳೂರಲ್ಲೂ ಇವೆ. ಕೆಲವು ಇತರ ಊರುಗಳಲ್ಲೂ ಇವೆ. ನಾನು ಸಿನೆಮಾ ಕಲಿತ ಶಾಲೆ ಪೂನಾದಲ್ಲಿ ಇರುವ Film and Television Institute of India (FTII) ಇದು ಕೇಂದ್ರ ಸರಕಾರದ ಆಡಳಿತದಲ್ಲಿ ಇರುವ ಒಂದು ಸಂಸ್ಥೆಯಾಗಿದೆ. ಇಲ್ಲಿ ಮೂರು ವರುಷದ ತರಬೇತಿಯನ್ನು ಸಿನೆಮಾದ ನಾಲ್ಕು ಮುಖ್ಯ ವಿಭಾಗಗಳಲ್ಲಿ ಕೊಡಲಾಗುತ್ತದೆ. ನಿರ್ದೇಶನ (Direction), ಛಾಯಾಗ್ರಹಣ (Cinematography), ಸಂಕಲನ (Editing), ಧ್ವನಿಗ್ರಹಣ (Sound recording) ಇದಲ್ಲದೆ ನಟನೆ, ಚಿತ್ರಕಥೆ ಬರವಣಿಗೆ ಇತ್ಯಾದಿ ಅನೇಕ ಸಣ್ಣ  ಉಪ-ತರಬೇತಿಗಳೂ ಅಲ್ಲಿವೆ. ಇಲ್ಲಿ ನಮಗೆ ಸಿನೆಮಾವೇ ಪಾಠ. ಅದುವೇ ಪಠ್ಯಪುಸ್ತಕ. ದಿನಕ್ಕೆ ಕನಿಷ್ಟ ಒಂದು ಸಿನೆಮಾ ನೋಡುವುದು ಅದರ ಕುರಿತಾದ ಚರ್ಚೆಗಳು ಮತ್ತೆ ಪಾಠ ಹೀಗೆ ಮೂರು ವರ್ಷದ ನಮ್ಮ ಅಲ್ಲಿನ ಅವಧಿ ಕಳೆಯುತ್ತದೆ. ನಾನು ಕಲಿತ ಶಾಲೆಯಲ್ಲೇ ಕನ್ನಡದ ಹೆಮ್ಮೆಯ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಖ್ಯಾತ ಛಾಯಾಗ್ರಾಹಕರಾದ ಎಚ್. ಎಂ ರಾಮಚಂದ್ರ, ಎಸ್. ರಾಮಚಂದ್ರ, ಭಾಸ್ಕರ‍್ಜೀಯಂಥಾ ಕಲಾವಿದರು, ಹಿಂದಿಯಲ್ಲಿ  ಜಯಾ ಬಚ್ಚನ್, ಸಂಜಯ್ ಲೀಲಾ ಬನ್ಸಾಲಿ, ಡೇವಿಡ್ ಧವನ್, ರಾಜ್ ಕುಮಾರ್ ಹಿರಾನಿ ಹೀಗೆ ಅನೇಕಾನೇಕ ಇಂದಿನ ಭಾರತೀಯ ಸಿನೆಮಾದ ದಿಗ್ಗಜರು ಕಲಿತಿರುವುದು ಮಹತ್ವದ ವಿಷಯ. ಸಿನೆಮಾವೇ ಅಶನ, ವಸನ, ವ್ಯಸನವಾಗಿದ್ದ ಈ ಜಾಗದಲ್ಲಿ ನನ್ನ ಕಲಿಕೆ, ವಿದ್ಯಾರ್ಥಿ ಜೀವನದ ದುಃಖಃ, ಸಂತೋಷದ ದಿನಗಳು ಹೀಗೆ ಒಂದಷ್ಟನ್ನು ನಾನು ನಿಮ್ಮೊಂದಿಗೆ ಈ ಮೂಲಕ ಹಂಚಿಕೊಳ್ಳಲಿದ್ದೇನೆ. ಮನವಿಟ್ಟು ಪರಾಂಬರಿಸುವಿರಿ ಎಂದು ನಂಬಿದ್ದೇನೆ.

ಅಂದ ಹಾಗೆ, ಈ ಇಡೀ ಲೇಖನ ಸರಣಿಯನ್ನು ‘FTII diaries’ ಎಂಬ ಹೆಸರಿನಿಂದ ಒಟ್ಟುಗೂಡಲಿದ್ದೇನೆ. ಹಾಗಾಗಿ ಎಲ್ಲಾ ಲೇಖನಗಳನ್ನು ಒಟ್ಟಿಗೆ ಓದಲು ಬಲಬದಿಯಲ್ಲಿರುವ ಲಿಂಕ್ ಬಳಸಿರಿ. ಮತ್ತೆ ಚಿತ್ತಾರ ತಿಂಗಳಿಗೊಮ್ಮೆ ಬರುವುದರಿಂದ, ಈ ಅಂಕಣವೂ ತಿಂಗಳಿಗೊಮ್ಮೆಯೇ ಬರುತ್ತದೆ.

Share This