ಪೂನಾ ಚರಿತೆಯ ಮೂರನೇ ಕಂತು ಇಲ್ಲಿದೆ. ಚಿತ್ತಾರದಲ್ಲಿ ಇದು ಪ್ರಕಟವಾಗುತ್ತಿರುವುದು ತಮಗೆಲ್ಲರಿಗೂ ಗೊತ್ತೇ ಇದೆ. ಕಳೆದ ತಿಂಗಳಿಡೀ ನಾಲ್ಕೈದು ಪ್ರಾಜೆಕ್ಟ್ ಕೆಲಸ ಒಟ್ಟಿಗೇ ನಡೆಯುತ್ತಿದ್ದು ಬೇರೇನೂ ಬರೆಯಲಿಕ್ಕೇ ಆಗಿರಲಿಲ್ಲ. ಹಾಗಾಗಿ ಇದನ್ನೇ ನೇರವಾಗಿ ಹಾಕುತ್ತಿದ್ದೇನೆ. ಓದಿ ಅಭಿಪ್ರಾಯ ತಿಳಿಸಿರಿ…

ಪೂನಾದಲ್ಲಿರುವ Film and Television Institute of Indiaದ ಒಳಗೆ ಹೋದಾಗ ಅಲ್ಲೊಂದು ದೊಡ್ಡ ಮಾವಿನ ಮರ ಕಾಣಿಸುತ್ತದೆ. ಆ ಮರ ಸಂಸ್ಥೆಯಲ್ಲಿರುವವರಿಗೆಲ್ಲಾ ಬಹಳ ಪ್ರೀತಿಯ ಮರ. ಅದನ್ನು ಕ್ಯಾಂಪಸ್ಸಿನಲ್ಲಿ ಎಲ್ಲರೂ ಪ್ರೀತಿಯಿಂದ ಕರೆಯುವುದೇ Wisdom Tree ಎಂದು. ಬಹಳ ವರುಷಗಳ ಹಿಂದೆ ಭಾರತೀಯ ಚಿತ್ರರಂಗದ ಒಂದು ಪ್ರಖರ ಹೆಸರು, ಹೃತ್ವಿಕ್ ಘಟಕ್. ಮೂಲತಃ ಬಂಗಾಲೀ ಚಿತ್ರ ನಿರ್ದೇಶಕರಾದ ಇವರು ಭಾರತದ ಅನೇಕ ಯುವ ಚಿತ್ರ ನಿರ್ದೇಶಕರಿಗೆ ಪ್ರೇರಣೆಯನ್ನು ಒದಗಿಸಿದ್ದಾರೆ, ಅವರದ್ದೇ ಆದ ಒಂದು ನಿರ್ದೇಶನ ವಿಧಾನವನ್ನು ರೂಢಿಸಿಕೊಂಡ ವಿಶಿಷ್ಟ ವ್ಯಕ್ತಿ ಇವರು. ಇವರು ಎಫ್.ಟಿ.ಐ.ಐನಲ್ಲಿ ಇದೇ ಮರದ ಕೆಳಗೆ ಕುಳಿತು ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತಿದ್ದರಂತೆ. ಅದರಿಂದಾಗಿ ಈ ಮರ ಹಾಗೂ ಅದರ ಕೆಳಗೆ ಕೂರುವುದು ಇಂದಿಗೂ ಒಂದು ವಿಚಿತ್ರ ಅನುಭವ!

ಹೊಸ ಕಥೆಯ ಶೋಧನೆಗೆ ಕುಳಿತ ನಿರ್ದೇಶನ ವಿದ್ಯಾರ್ಥಿ, ಮರದ ಎಲೆಗಳೆಡೆಯಿಂದ ಇಣುಕುವ ಸೂರ್ಯನ ಬೆಳಕಿನ ಗುಣಗಳ ಕುರಿತು ಯೋಚಿಸುತ್ತಾ ಆಕಳಿಸುತ್ತಿರುವ ಕ್ಯಾಮರಾ ವಿದ್ಯಾರ್ಥಿ, ಅತ್ತಿತ್ತ ನಡೆಯುತ್ತಿರುವ ಎಲ್ಲಾ ಘಟನೆಗಳ ಶಬ್ದ ಗ್ರಹಣೆಯನ್ನೇ ಮಾಡುತ್ತಿರುವ ಧ್ವನಿ ಶಾಸ್ತ್ರದ ವಿದ್ಯಾರ್ಥಿ, ಇವೆಲ್ಲವನ್ನೂ ಎಡಿಟ್ ಮಾಡಿ ಅದಕ್ಕೆ ಅರ್ಥ ತರುತ್ತಿರುವ ಸಂಕಲನ ವಿದ್ಯಾರ್ಥಿ ಮತ್ತೆ ಅನೇಕ ವರುಷಗಳಿಂದ ಇಂಥಾ ಅನೇಕರನ್ನು ನೋಡಿದ್ದೇನೆ ತಾನು ಎಂದು ಹೆಮ್ಮೆಯಿಂದ ಬೀಗುತ್ತಾ ಕಾಲು ನೀಡಿ ಮಲಗಿರುವ ಎಲ್ಲರ ಪ್ರೀತಿಯ ನಾಯಿ, ಮೋಹನ್! ಹೀಗೆ ಕ್ಯಾಂಪಸ್ಸಿನ ಎಲ್ಲರಿಗೂ Wisdom Tree ಒಂದು ಪ್ರೀತಿಯ ತಂಗುದಾಣ. ಇದು ಕ್ಯಾಂಪಸ್ಸಿನಲ್ಲಿ ನಡೆಯುವ ಇನ್ನೊಂದು ಮಹತ್ತರ ಕಾರ್ಯದ ಸ್ಥಾನ ಕೂಡಾ ಆಗಿದೆ. ಅದು ರ್ಯಾಗಿಂಗ್ ! ಅಲ್ಲಲ್ಲಾ… ಸತ್ಸಂಗ!

ನಾನು ಪೂನಾಕ್ಕೆ ಹೋಗುವಾಗ ಅಲ್ಲಿನ ರ್ಯಾಗಿಂಗ್ ಬಗ್ಗೆ ಕೇಳಿದ್ದೆ. ನಾನೋ ಮೊದಲ ಬಾರಿಗೆ ಹಾಸ್ಟೆಲ್ ಬದುಕಿಗೆ ಒಗ್ಗಿಕೊಳ್ಳಬೇಕಿತ್ತು. ಅದರ ಮೇಲೆ ಮನೆಯಿಂದ ಮೊದಲ ಬಾರಿಗೆ ಇಷ್ಟು ದೂರ ಹೋಗಿದ್ದೆ. ಹಿಂದಿ ಬೇರೆ ಸರಿಯಾಗಿ ಬರುತ್ತಿರಲಿಲ್ಲ. ಅದರ ಮೇಲೆ ಈ ರ‍್ಯಾಗಿಂಗ್ ಹೇಗಪ್ಪಾ ಸಹಿಸೋದು ಎಂದು ಯೋಚಿಸಿ ಗಾಬರಿಯಾಗಿದ್ದೆ. ಹೆದರುತ್ತಾ ಹಾಸ್ಟೆಲ್ ಪ್ರವೇಶಿಸಿದರೆ, ಅಲ್ಲಿ ಸುಮಾರು ಮೂವತ್ತು ವರ್ಷದ ಒಬ್ಬರು ಪುಸ್ತಕ ಹಿಡಿದು ನಿಂತಿದ್ದರು. ಅವರು ಬಹುಷಃ ವಿದ್ಯಾರ್ಥಿಗಳ ನೋಂದಣಿ ಮಾಡಿಕೊಳ್ಳುತ್ತಿರಬೇಕು ಅಥವಾ ಸೀನಿಯರ್ ಇರಬೇಕು ಎಂದು ಹೆದರುತ್ತಾ, ನನ್ನ ಹೆಸರು ಅಭಯ ಎಂದೆ. ಅವರು ನನ್ನನ್ನು ನೋಡಿ, ಸರಿ, ನನ್ನ ಹೆಸರನ್ನೂ ರಿಜಿಸ್ಟರಲ್ಲಿ ಹುಡುಕುತ್ತಿದ್ದೇನೆ ಎಂದರು! ಅರೆ! ನೋಡಿದರೆ, ಅವನು ನನ್ನ ಕ್ಲಾಸ್ ಮೇಟ್ ಆಗಲಿದ್ದವನು. ನನಗೂ ಅವನಿಗೂ ಕನಿಷ್ಟ ಆರು ವರ್ಷ ವ್ಯತ್ಯಾಸ! ಹಾಂ! ನಮ್ಮ ಸಿನೆಮಾ ಶಾಲೆಗೆ ಪ್ರಾಯದ ಮಿತಿ ಇಲ್ಲ. ಯಾರು ಬೇಕಾದರೂ ಬಂದು ಕಲಿಯ ಬಹುದು ಎಂದು ಆಗ ನೆನಪಾಯಿತು. ಅವನ ಹೆಸರು ವಿಕ್ರಂ. ಕ್ಯಾಮರಾ ಕಲಿಯಲೆಂದು ಬಂದಿದ್ದ. ಅವನಿಗೂ ಸಿಗರೇಟು, ಮಾಂಸಾಹಾರ, ಹೆಂಡ ಆಗುವುದಿಲ್ಲ ಎಂದು ಕೇಳಿ ನಾವಿಬ್ಬರೂ ರೂಮ್‌ಮೇಟ್ಸ್ ಆಗೋಣವೇ ಎಂದು ಕೇಳಿದೆ. ಅವನೂ ಸಂತೋಷದಲ್ಲೇ ಒಪ್ಪಿದ. ಹಾಗೆ ನಾವು ಡಿ-೧೪ನೇ ಕೋಣೆಯನ್ನು ಪ್ರವೇಶಿಸಿದೆವು. ಅವನಿಗೆ ಆಗಲೇ ಒಂದಷ್ಟು ಸೀನಿಯರ್ಸ್ ಪರಿಚಯ ಇದ್ದದ್ದರಿಂದ ರ‍್ಯಾಗಿಂಗಿನಿಂದ ಸ್ವಲ್ಪ ಬಿಡುಗಡೆ ಸಿಗಬಹುದು ಎಂದು ಆಸೆಯೂ ನನಗಿತ್ತು. ತುಂಬಾ ಸಭ್ಯ ನನ್ನ ರೂಮ್ ಮೇಟ್ ವಿಕ್ರಂ.

ಆದರೆ ಮರುದಿನದಿಂದಲೇ ಆರಂಭವಾಯಿತು ನಮ್ಮ ಸತ್ಸಂಗ! ವಿಸ್ಡಂ ಟ್ರೀ ಅಡಿಯಲ್ಲಿ ರಾತ್ರಿ ಹತ್ತು ಗಂಟೆಗೆಲ್ಲಾ ಸೇರಿದರೆ ಬೆಳಗ್ಗಿನ ಜಾವ ಮೂರುಗಂಟೆಯವರೆಗೆಲ್ಲಾ ನಡೆಯುತ್ತಿತ್ತು. ಎಲ್ಲೂ ತೀರಾ ಅಶ್ಲೀಲವಾದದ್ದಾಗಲೀ, ತೀರಾ ಅಸಭ್ಯವಾದದ್ದಾಗಲೀ ನಡೆಯುತ್ತಿರಲಿಲ್ಲ. ರ‍್ಯಾಗಿಂಗ್ ಬಗ್ಗೆ ಹೆದರಿದ್ದ ನನಗೆ ಅದು ಅಷ್ಟೇನೂ ಕೆಟ್ಟ ಅನುಭವವಾಗಲಿಲ್ಲ. ಸೀನಿಯರ್ಸ್ ಪರಿಚಯವಾಯಿತು, ಸಿನೆಮಾ ಶಾಲೆಯ ಆಗುಹೋಗುಗಳ ಬಗ್ಗೆ, ಅಲ್ಲಿನ ಜೀವನದ ಬಗ್ಗೆ ಸಾಕಷ್ಟು ಪರಿಚಯವಾಗುತ್ತಾ ಸಾಗಿತು. ನಮ್ಮ ಸೀನಿಯರ್ಸ್ ಒಂದು ಮುಶ್ಚರ ಮಾಡಿದ್ದರಿಂದ ಐದುವರ್ಷಗಳಾಗಿದ್ದರೂ ಅವರಿನ್ನೂ ಕ್ಯಾಂಪಸ್ಸಿನಲ್ಲೇ ಇದ್ದರು. ಅವರಿಗೂ ಹೊಸ ಮುಖ ಕಂಡು ಕೆಲವು ವರುಷಗಳೇ ಆಗಿ ಹೋಗಿದ್ದವು. ಹೀಗಾಗಿ ನಮ್ಮನ್ನು ಬಹಳ ಚೆನ್ನಾಗಿ ನೋಡಿಕೊಂಡರು.

ಸುಮಾರು ಮೂರು ಸಾವಿರ ಪ್ರವೇಶ ಪರೀಕ್ಷೆ ಎದುರಿಸಿದವರಲ್ಲಿ ನಾವು ಮೂವತ್ತೈದು ಜನರು ಆಯ್ಕೆಯಾಗಿದ್ದೆವು! ಅದರಲ್ಲೂ ನನಗೆ ಹೆಮ್ಮೆಯ ವಿಷಯ ಎಂದರೆ, ನಾನು ಮೊದಲ ರ‍್ಯಾಂಕ್ ಗಳಿಸಿದ್ದೆ! ಅಚ್ಚರಿಯ ಮೇಲೆ ಅಚ್ಚರಿ ನನಗೆ! ನಿರ್ದೇಶನದ ಕ್ಲಾಸಿನಲ್ಲಿ ಬೇರೆ ಬೇರೆ ರಾಜ್ಯಗಳಿಂದ ಬಂದ ನಾವು ಒಂಭತ್ತು ಜನರು. ಒಬ್ಬೊಬ್ಬರದ್ದೂ ಒಂದೊಂದು ಹಿನ್ನೆಲೆ. ಕ್ಲಾಸಿನಲ್ಲಿ ವಯಸ್ಸಿನಿಂದ ಅತಿ ಸಣ್ಣವರ ಪಟ್ಟಿಯಲ್ಲಿ ನಾನು ಮೂರನೆಯವನು! ಅತಿ ಹಿರಿಯ ಮೂವತ್ತೈದು ವರುಷದವನು. ಜೀವನದಲ್ಲಿ ಏನೇನೋ ಕೆಲಸ ಮಾಡಿ, ಅನುಭವಗಳಿಸಿ ಬಂದವರೆಲ್ಲರೂ ಒಂದೆಡೆ ಸಿನೆಮಾ ಕಲಿಯಲು ಸೇರಿದ್ದೆವು. ಅದೊಂದು ವಿಚಿತ್ರ ಅನುಭವ. ಜುಲೈ 14, 2003ರಂದು ನಮ್ಮ ಮೊದಲ ಕ್ಲಾಸ್ ಆರಂಭವಾಯಿತು. ಇಡೀ ತರಗತಿಯನ್ನು ಐದು ಗುಂಪುಗಳನ್ನಾಗಿ ವಿಂಗಡಿಸಿ ಒಬ್ಬೊಬ್ಬರಿಗೂ ಒಂದೊಂದು ವಿಷಯದ ಕ್ಲಾಸ್ ಹಾಕಿದ್ದರು. ಅಂದು ನನಗೆ ನಿರ್ದೇಶನದ ಕ್ಲಾಸ್.

ಈ ತರಗತಿ ವಿನ್ಯಾಸ, ಪಾಠ ಕ್ರಮ ಇತ್ಯಾದಿಗಳ ಕುರಿತಾಗಿ ಮುಂದಿನ ಸಂಚಿಕೆಯಲ್ಲಿ ಹಂಚಿಕೊಳ್ಳುವೆ ಗೆಳೆಯರೇ. ಸಿಗೋಣ ಸಧ್ಯದಲ್ಲೇ ಮತ್ತೆ ಹೀಗೆ… ಮಾಮರದಡಿಯಲ್ಲಿ!

Share This