ಕೊನೆಗೂ ನಿಮ್ಮೊಂದಿಗೆ ಸಂತೋಷದ ಸುದ್ದಿ ಹಂಚಿಕೊಳ್ಳುವ ಸಮಯ ಬಂದಿದೆ ಗೆಳೆಯ-ಗೆಳತಿಯರೆ, ಗುಬ್ಬಚ್ಚಿಗಳು ಚಿತ್ರ ಮಾಡಿ ಬಹಳ ಸಮಯದ ನಂತರ ಒಂದು ಕಥೆ ಮನಸ್ಸಿನಲ್ಲಿ ರೂಪುಗೊಂಡು ಅದು ನಿಧಾನಕ್ಕೆ ರೆಕ್ಕೆ-ಪುಕ್ಕಗಳನ್ನು ಪಡೆಯುತ್ತಾ ಚಿತ್ರಕಥೆ ಆರಂಭವಾಗಿತ್ತು. ಈಗ, ಮಲಯಾಳದ ದೊಡ್ಡ ನಟ, ಮಮ್ಮುಟ್ಟಿಯವರು ನನ್ನ ಚಿತ್ರಕಥೆಯನ್ನು ಓದಿ ಅದರಲ್ಲಿ ಕೆಲಸ ಮಾಡಲು ಒಪ್ಪಿದ್ದಾರೆ. ಮುಂದಿನ ಕೆಲಸಗಳು ಸದ್ಯದಲ್ಲೇ ಆರಂಭವಾಗಲಿದೆ. ತಮಗಾಗಿ ಮಮ್ಮುಟ್ಟಿಯವರೊಂದಿಗೆ ನನ್ನದೊಂದು ಚಿತ್ರ ಇಲ್ಲಿ ಕೊಟ್ಟಿದ್ದೇನೆ. 🙂
ನಾನು ಹುಟ್ಟಿದಾಗಲೇ ಈ ವ್ಯಕ್ತಿ ಮಲಯಾಳದಲ್ಲಿ ಸೂಪರ್ ಸ್ಟಾರ್ ಆಗಿದ್ದರು! ಅಂದಿನಿಂದ ನಾನು ಅವರ ಅನೇಕ ಚಿತ್ರಗಳನ್ನು ನೋಡುತ್ತಾ ಬೆಳೆದಿದ್ದೇನೆ. ಸದಾ ಅವರ ನಟನೆಯ ಕೌಶಲ್ಯವನ್ನು ಮೆಚ್ಚಿದ್ದವನು ನಾನು. ಕಲಾತ್ಮಕ, ವಾಣಿಜ್ಯ ಚಿತ್ರ ಎನ್ನದೇ ಎಲ್ಲಾ ರೀತಿಗಳಲ್ಲೂ ಯಶಸ್ಸನ್ನು ಗಳಿಸಿರುವ ನಟ ಇವರು. ಮೂವತ್ತು ವರುಷಕ್ಕೂ ಮಿಕ್ಕಿ ಒಂದು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ನೆಲೆನಿಲ್ಲುವುದು ಸಾಮಾನ್ಯ ವಿಷಯವಲ್ಲ. ಇವರು ಸುಮಾರು ೩೦೦ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ನಟಿಸಿದ್ದಾರೆ, ಮಲಯಾಳ, ತಮಿಳು, ತೆಲುಗು, ಹಿಂದಿ ಹೀಗೆ ವಿವಿಧ ಭಾಷೆಗಳಲ್ಲಿ ನಟಿಸಿರುವ ಇವರ ದೊಡ್ಡ ಅಭಿಮಾನಿಗಳಲ್ಲಿ ನಾನೂ ಒಬ್ಬ. ಹೆದರುತ್ತಲೇ ಅವರನ್ನು ಸಂಪರ್ಕಿಸಿದ್ದೆ. ಇಂಥಾ ದೊಡ್ಡ ನಟನನ್ನು ಮಾತನಾಡಿಸುವುದಾದರೂ ಹೇಗೆ ಎಂಬ ಅಳುಕು ನನ್ನದು. ಆದರೆ ಬಹುಷಃ ದೊಡ್ಡ ವ್ಯಕ್ತಿಗಳು ಅಂದರೆ ಹೀಗೇ ಇರಬೇಕು. ಅವರೇ ನೇರ ನನ್ನೊಂದಿಗೆ ಮಾತನಾಡಿದರು ಮತ್ತು ಕಥೆ ಕಳಿಸಿಕೊಡಲು ಹೇಳಿದರು. ಮತ್ತೆ ಕಥೆಯ ಬಗ್ಗೆ ಸಂತೋಷ ವ್ಯಕ್ತಪಡಿಸಿ ನನ್ನನ್ನು ತಮ್ಮ ಬಳಿಗೆ ಕರೆಸಿಕೊಂಡರು.
ಅಂದು ಕೊಚ್ಚಿನ್ನಿನಲ್ಲಿ ಅವರ ಚಿತ್ರೀಕರಣ ಸ್ಥಳಕ್ಕೆ ಹೋಗಿದ್ದೆ. ‘ಈ ಪಟ್ಟಣತ್ತಿಲ್ ಒರು ಭೂತನ್’ ಚಿತ್ರೀಕರಣ ನಡೆಯುತ್ತಿತ್ತು. ಅವರ ಬಳಿಯಲ್ಲೇ ಕೂರಿಸಿ ಕನ್ನಡ ಚಿತ್ರೋದ್ಯಮದ ಬಗ್ಗೆ, ನನ್ನ ಪ್ರಯಾಣದ ಬಗ್ಗೆ ಆತ್ಮೀಯವಾಗಿ ಮಾತನಾಡಿದರು. ತಾನೊಬ್ಬ ಸೂಪರ್ ಸ್ಟಾರ್ ಎನ್ನುವ ಯಾವ ಭಾವವೂ ಇಲ್ಲದೇ, ಸಿನೆಮಾದ ಒಬ್ಬ ನಮ್ರ ವಿದ್ಯಾರ್ಥಿ ನಾನು ಎನ್ನುವಂತೆ ನಡೆದುಕೊಂಡರು. ನನ್ನಂಥಾ ಕಿರಿಯನ ಬೆನ್ನು ತಟ್ಟುವ ಪ್ರೀತಿಯ ಅಣ್ಣನಂತೆ ಅವರು ವರ್ತಿಸಿದರು ಅಂದು. ಅದು ವಿವರಿಸಲಾಗದ ಸಂತೋಷವನ್ನು ನನ್ನಲ್ಲಿ ತುಂಬಿತು.
ಬಹುಷಃ ದೊಡ್ಡ ವ್ಯಕ್ತಿಗಳೇ ಹೀಗೆ ಎಂದು ಕಾಣುತ್ತದೆ. ಇಂಥಾ ದೊಡ್ಡತನಕ್ಕೆ ಕನ್ನಡದಲ್ಲಿ ಮೊದಲನೆಯದಾಗಿ ನೆನಪಿಗೆ ಬರುವವರು ನಮ್ಮ ಗಿರೀಶ ಕಾಸರವಳ್ಳಿಯವರು. ಅದೆಷ್ಟೋ ರಾಷ್ಟ್ರಪ್ರಶಸ್ತಿಗಳು, ದೇಶ-ವಿದೇಶದ ಗೌರವಗಳು ಇವರಿಗೆ ಸಂದಿವೆ. ಆದರೂ ಅವರು ಇವೆಲ್ಲವೂ ತನಗಲ್ಲ ಎನ್ನುವಂತೆ ಸದಾ ನಮ್ರರಾಗಿ ಇರುವ ಸಜ್ಜನ. ನಾನು ಮೊದಲ ಬಾರಿಗೆ ಏನೋ ಚಿತ್ರಕಥೆ ಬರೆದಾಗ ಸಲಹೆಗಳಿಗಾಗಿ ಅವರ ಬಳಿಗೆ ಹೋಗಿದ್ದೆ. ಮನೆಗೆ ಕರೆಸಿಕೊಂಡು, ಗಮನವಿಟ್ಟು ಕೇಳಿ, ಸಲಹೆಗಳನ್ನು ಕೊಟ್ಟಿದ್ದರು. ಅಂದಿನಿಂದ ಇಂದಿನವರೆಗೂ ಅನೇಕ ವಿಧಗಳಲ್ಲಿ ನನಗೆ ಸಲಹೆ, ಸೂಚನೆಗಳನ್ನು ಕೊಡುತ್ತಾ ನಮ್ಮ ಹುಡುಗ ಎಂಬ ಪ್ರೀತಿಯಿಂದ ನೋಡಿದ್ದಾರೆ. ಮತ್ತೆ ಇದು ಕೇವಲ ನನ್ನ ಬಗ್ಗೆ ಅಲ್ಲ, ಅವರ ಬಳಿಗೆ ಬರುವ ಪ್ರತಿಯೊಬ್ಬ ಹುಡುಗ-ಹುಡುಗಿಗೂ ತೋರಿಸುವ ಪ್ರೀತಿ-ಆದರ. ದೊಡ್ಡವರ ದೊಡ್ಡತನ ಬಹುಷಃ ಹೀಗೆಯೇ…. 🙂