ಹಿಂದೆ ಚಿತ್ರದಲ್ಲಿ ಧ್ವನಿ ಬಳಕೆಯ ಕುರಿತಾಗಿ ಬರೆದಿದ್ದೆ. ಇತ್ತೀಚೆಗೆ ಧ್ವನಿಯಲ್ಲಿ ಪ್ರಯೋಗಗಳನ್ನು ಮಾಡುತ್ತಿರುವವರ ಬಗ್ಗೆ ಅಂತರ್ಜಾಲದಲ್ಲಿ ಹುಡುಕುತ್ತಿರಬೇಕಾದರೆ, ಒಂದು ಕುತೂಹಲಕಾರೀ ಪ್ರಯೋಗದ ಕುರಿತಾಗಿ ತಿಳಿದು ಬಂತು. eepeepeepep ಎಂಬ ಒಂದು ವೆಬ್ ಸೈಟ್ ಇದೆ. (ಅದನ್ನು ನೋಡಲು ಇಲ್ಲಿ ಕ್ಲಿಕ್ಕಿಸಿ) ದಿನ ನಿತ್ಯ ಕೇಳಿಬರುವ ಅನೇಕ ಬಗೆಯ ಅಲಾರಾಂ ಧ್ವನಿಗಳನ್ನೇ ಬಳಸಿಕೊಂಡು ಸಂಗೀತ ಸಂಯೋಜನೆ ಮಾಡಿರುವ ಪ್ರಯೋಗಗಳಿವು. ಸಾಧಾರಣವಾಗಿ ಯಾವುದೋ ಕೆಲಸ ನೆನಪಿಸಿ ಹೆದರಿಸುವ, ಈ ಶಬ್ದಗಳನ್ನೇ ಕುಳಿತು ಕೇಳುವ ಒಂದು ಸಂಗೀತವಾಗಿ ರೂಪಿಸಿದ್ದು ಕುತೂಹಲಕಾರಿಯಾಗಿದೆ. ಎ. ಆರ್. ರೆಹಮಾನ್ ಕೂಡಾ ತನ್ನ ಅನೇಕ ಸಂಗೀತ ಸಂಯೋಜನೆಯಲ್ಲಿ ಸೈಕಲ್ ಬೆಲ್, ಕಾರಿನ ಹಾರ್ನ್ ಇತ್ಯಾದಿಗಳನ್ನು ಬಳಸಿದ್ದಾರೆ. ಅರ್ಥಪೂರ್ಣವಾಗಿ ಬಳಸುವ ಈ ಶಬ್ದಗಳಿಂದ ಸಂಗೀತಸಂಯೋಜನೆಯ ಮೂಲಕವೂ ಒಂದು ಕಥೆ ಹೇಳುವುದು ಸಾಧ್ಯವಾಗುತ್ತದೆ. ಸಿನೆಮಾ ಸಂಗೀತವಾದಾಗಲಂತೂ, ಈ ರೀತಿಯ ವಿಶೇಷ ಅರ್ಥ ಹುಟ್ಟಿಸುವ ಶಬ್ದಗಳ ಬಳಕೆ ಕಥೆಗೆ ಪೂರಕವಾಗಿ ಕೆಲಸ ಮಾಡುತ್ತದೆ.
ಇದೇ ಲಹರಿಯಲ್ಲಿ ಇತ್ತೀಚೆಗೆ ’ನೀರಿನ ನಿಲುತಾಣ’ ಎಂಬ ನೀನಾಸಂ ಮರುತಿರುಗಾಟದ ನಾಟಕವನ್ನು ನೋಡಿದೆ. ಅವಧಿಯಲ್ಲಿ ಆ ನಾಟಕದ ಕುರಿತಾಗಿ ಸಾಕಷ್ಟು ಚರ್ಚೆಯೂ ಆಯಿತು. ನನಗೆ ಆ ನಾಟಕದಲ್ಲಿ ಖುಷಿಕೊಟ್ಟ ಎನೇಕ ವಿಷಯಗಳಲ್ಲಿ ಒಂದು ಮುಖ್ಯವಾದದ್ದು ನಾಟಕದಲ್ಲಿ ಶಬ್ದಗಳ ಬಳಕೆ. ಇಡೀ ನಾಟಕವೇ ಸ್ಲೋ ಮೋಷನ್ನಿನಲ್ಲಿ ನಡೆಯುತ್ತದೆ. ಸುತ್ತಲೂ ದಟ್ಟ ಮೌನ. ವೇದಿಕೆಯ ಮಧ್ಯದಲ್ಲಿ ಇಟ್ಟಿರುವ ಒಂದು ಕೊಳಾಯಿಯಿಂದ ಇಡೀ ನಾಟಕದುದ್ದಕ್ಕೂ ನಿಧಾನವಾಗಿ ಒಂದು ನೀರಧಾರೆ ಸುರಿಯುತ್ತಿರುತ್ತದೆ. ಅದು ಉಂಟು ಮಾಡುವ ಶಬ್ದವು ನಾಟಕದ ಅನೇಕ ಪಾತ್ರಗಳ ಒಳತೋಟಿಗೆ ಸರಿಯಾಗಿ ಆಗೀಗ ಕತ್ತರಿಸುತ್ತದೆ. ಇಡೀ ನಾಟಕದ ಚಲನೆಯ ವೇಗಕ್ಕೆ ಒಂದು ಶೃತಿಹಿಡಿದಂತೆ ಇರುವ ಈ ನೀರಧಾರೆ ಕತ್ತರಿಸಿದಾಗ ಉಂಟಾಗುವ ವಿರಾಮಗಳೂ ದಾರಿಯಲ್ಲಿ ಸಂಚರಿಸುತ್ತಿದ್ದಾಗ ಆಗೀಗ ಕಾಣಿಸಿಕೊಳ್ಳುವ ಮೈಲುಗಲ್ಲಿನಂತೆ ಮುದನೀಡುತ್ತದೆ, ಚಲನೆಯ ಭಾಸವನ್ನುಂಟು ಮಾಡುತ್ತದೆ. ನಾಟಕದಲ್ಲಿ ಇಂಥಾ ಪ್ರಯೋಗ ಮಾಡಿದವರು ಅನೇಕರಿರಬಹುದು. ಆದರೆ ನನಗೆ ಇದು ಮೊದಲ ಅನುಭವ. ಬಹಳ ಸಂತೋಷವಾಯಿತು.
’ನೀರಿನ ನಿಲುತಾಣ’ ನಾಟಕ ನೋಡುತ್ತಿರುವಾಗ ಜಪಾನೀಸ್ ಗಾರ್ಡನ್ನುಗಳ ನೆನಪಾಯಿತು. ಒಂದು ಟಿಪಿಕಲ್ ಜಪಾನೀಸ್ ಗಾರ್ಡನ್ ಒಂದು ಹರಿಯುವ ನೀರಿನ ಮೂಲವನ್ನು ಹೊಂದಿರುತ್ತದೆ. ಉದ್ಯಾನದ ವಿಸ್ತಾರವನ್ನು ಅವಲಂಬಿಸಿ ಅದರಲ್ಲಿ ಹರಿಯುತ್ತಿರುವ ನೀರಿನ ಮೂಲವನ್ನು ಇಟ್ಟಿರುತ್ತಾರೆ. ಇದು ಮೌನವಾಗಿರುವ ಉದ್ಯಾನದ ಪರಿಸರದಲ್ಲಿ ಹರಿಯುವ ನೀರಿನ ಶೃತಿಯನ್ನುಂಟುಮಾಡುತ್ತದೆ. ಈ ಶಾಂತ ಹರಿಯುವಿಕೆ ಮನಸ್ಸಿಗೆ ಶಾಂತಿಯನ್ನುಂಟು ಮಾಡುತ್ತದೆ. ಇದೇ ತಂತ್ರವನ್ನು ಅನೇಕ ಮನೆಗಳಲ್ಲಿ ಇಡುವ ಹರಿಯುವ ನೀರಿನ ಆಟಿಕೆಗಳಲ್ಲೂ ಕಾಣಬಹುದು. ನಿತ್ಯಜೀವನದಲ್ಲೂ ಶಬ್ದದ ಬಳಕೆಯಿಂದ ಮನಸ್ಸಿನ ನಿಯಂತ್ರಣವನ್ನು ಮಾಡುವ ಈ ತಂತ್ರಗಳನ್ನು ಸಿನೆಮಾದಲ್ಲಿಯೂ ಯಶಸ್ವಿಯಾಗಿ ಬಳಸಿಕೊಳ್ಳಲಾಗಿದೆ.
ಕುರೋಸಾವಾನ ’ಶಿಂಜಿರೋ’ ಸಿನೆಮಾದಲ್ಲಿ ವಿರೋಧೀ ಪಕ್ಷದವರಿಬ್ಬರ ಮನೆಗಳು ಅಕ್ಕಪಕ್ಕದಲ್ಲಿರುತ್ತವೆ. ಇಬ್ಬರ ಮನೆಯಲ್ಲೂ ಜಪಾನೀಸ್ ಗಾರ್ಡನ್! ಒಬ್ಬನ ಮನೆಯಲ್ಲಿ ಹರಿಯುವ ನೀರು ಬೇಲಿಯಡಿಯಿಂದಾಗಿ ಇನ್ನೊಬ್ಬನ ಮನೆಯನ್ನೂ ಹಾದು ಮುಂದುವರೆಯುತ್ತದೆ. ಯುದ್ಧದ ಗೊಂದಲಮಯ ಶಬ್ದ ಸಂಯೋಜನೆಯ ನಡುವಿನಲ್ಲಿ, ಅಬ್ಬರದ ಸಂಗೀತದ ಮಧ್ಯದಲ್ಲಿ ಫಕ್ಕನೆ ಈ ನೀರನ್ನು ಕುರೋಸಾವಾ ತೋರಿಸುತ್ತಾನೆ. ಹರಿಯುವ ನೀರಿನ ಮೃದುತ್ವವನ್ನೇ ಮೈವೆತ್ತಂಥಾ ಇಬ್ಬರು ಹೆಣ್ಣುಮಕ್ಕಳು ಅದರ ಪಕ್ಕದಲ್ಲಿ ಕುಳಿತು ನೀರಿನಲ್ಲಿ ತೇಲಿಬರುವ ಹೂವುಗಳನ್ನು ಎತ್ತಿ ಪರಿಸರ ಸೌಂದರ್ಯವನ್ನು ಆಸ್ವಾದಿಸುತ್ತಾರೆ. ಇಲ್ಲಿ ಕುರೋಸಾವಾ ಈ ಹರಿಯುವ ನೀರನ್ನು ಯುದ್ಧದ ಗೊಂದಲದ ಪಕ್ಕದಲ್ಲಿಟ್ಟು ಯುದ್ಧದ ಘೋರತೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗುತ್ತಾರೆ. ದೃಶ್ಯದಲ್ಲಿ ಹೇಗೆಯೋ ಹಾಗೆಯೇ, ಶಬ್ದ ಸಂಯೋಜನೆ ಮತ್ತು ಸಂಗೀತ ಸಂಯೋಜನೆಯಲ್ಲೂ ಈ ಹರಿಯುವ ನೀರು ‘ಶಿಂಜಿರೋ’ ಚಿತ್ರದಲ್ಲಿ ಕೆಲಸ ಮಾಡುತ್ತದೆ.