ಕನ್ನಡ ಶಾಲೆಗಳನ್ನು ಮುಚ್ಚುವ ಕುರಿತಾಗಿ ಇತ್ತೀಚೆಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ನಾನು ಎಫ಼್.ಟಿ.ಐ.ಐನಲ್ಲಿ ಇದ್ದಾಗ ಅನೇಕ ವರುಷಗಳಿಂದ ಆಗಾಗ ಅದನ್ನು ಮುಚ್ಚಲು ಮಾಡುತ್ತಿದ್ದ ಪ್ರಯತ್ನಗಳನ್ನೂ ಕಂಡಿದ್ದೆನೆ. ಕಾರಣ ಎರಡಕ್ಕೂ ಒಂದೇ ಈ ಸಂಸ್ಥೆಗಳು ಲಾಭದಾಯಕವಲ್ಲ ಎನ್ನುವುದು. ಶಿಕ್ಷಣದಲ್ಲಿ ಲಾಭ ಹುಡುಕುವುದು ಒಂದು ವಿಚಿತ್ರ ಪರಿಸ್ಥಿತಿಯಲ್ಲವೇ?
ಇಂದಿನ ಶಿಕ್ಷಣದ ಪರಿಸ್ಥಿತಿಯೂ ತುಂಬಾ ಬದಲಾಗಿದೆ. ಇತ್ತೀಚೆಗೆ ನಮ್ಮ ಮನೆಗೆ ಬಂದಿದ್ದ ಗೆಳೆಯ ವಸಂತ ಕಜೆಯೊಡನೆ ಇದೇ ಮಾತು ಬಂತು. ಮಾತಾಡುತ್ತಾ ವಸಂತ ಹೇಳಿದ, “ನಾವು ಶಾಲೆಗೆ ಹೋಗುವಾಗ ದಾರಿಯಲ್ಲಿ ಬಿದ್ದು ಸಿಗುತ್ತಿದ್ದ ಹೂವನ್ನು ಎತ್ತಿ ಆಡುತ್ತಿದ್ದೆವು. ಅದರ ರೂಪರೇಷೆಗಳು ನಮಗೆ ಗೊತ್ತಿಲ್ಲದೆಯೇ ನಮ್ಮೊಳಗೆ ಕೂರುತ್ತಿತ್ತು.” ಹೌದು… ಹೀಗೆ ಬಾಲ್ಯದಲ್ಲಿ ನಮ್ಮೊಳಗೆ ಕುಳಿತ ಅನೇಕಾನೇಕ ವಿಷಯಗಳೇ ಮುಂದೆ ಶಾಸ್ತ್ರೀಯ ಅಧ್ಯಯನದ ಸಂದರ್ಭದಲ್ಲಿ ನಮ್ಮನ್ನು ‘ಜಾಣ’ ವಿದ್ಯಾರ್ಥಿಗಳನ್ನಾಗಿಸುತ್ತಿದ್ದ ವಿಷಯಗಳು. ನಾನು ಮಂಗಳೂರಿನಲ್ಲಿ ಓದುತ್ತಿದ್ದ ಕಾಲದ ನೆನಪಾಗುತ್ತದೆ. ನಾನು ಓದಿದ್ದು ಅದ್ಯಾವುದೋ ಸರಕಾರೀ ಶಾಲೆಯಲ್ಲಿ ಅಲ್ಲ. ಸಂತ ಅಲೋಷಿಯಸ್ ಎನ್ನುವ ಒಂದು ಖಾಸಗಿ ಶಾಲೆಯಲ್ಲಿ, ಕಾಲೇಜಿನಲ್ಲಿ. ಆದರೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಂದಿನ ನಮ್ಮ ಶಿಕ್ಷಣ ಇದೇ ರೀತಿ ಇತ್ತು.

ನಾನು ಕನ್ನಡ ಮಾಧ್ಯಮದಲ್ಲೇ ಹತ್ತನೆಯ ತರಗತಿಯವರೆಗೂ ಓದಿದೆ. ಮನೆಯಲ್ಲಿ ಕನ್ನಡ ಮಾತನಾಡುತ್ತಿದ್ದದ್ದರಿಂದ, ಶಾಲೆಯಲ್ಲಿ ಕಲಿಸುತ್ತಿದ್ದುದನ್ನು ಕಲಿಯಲು ಭಾಷೆ ಒಂದು ತೊಡಕಾಗಿಯೇ ಇರಲಿಲ್ಲ. ನಮ್ಮ ಮನೆ ಶಾಲೆಯಿಂದ ಕೇವಲ ಹದಿನೈದು ನಿಮಿಷ ನಡಿಗೆಯ ದೂರದಲ್ಲಿದೆ. ಹೀಗಾಗಿ ಕೆಲವು ಪ್ರಾಥಮಿಕ ಶಾಲೆಯ ವರುಷಗಳನ್ನು ಬಿಟ್ಟರೆ, ಮಧ್ಯಾಹ್ನ ಊಟಕ್ಕೆ ಸದಾ ಮನೆಗೆ ಬರಲಾಗುತ್ತಿತ್ತು. ಬೆಳಗ್ಗೆ ಸಮಯಕ್ಕೆ ಸರಿಯಾಗಿ ಹೊರಟರೆ ಅಪ್ಪನೊಂದಿಗೆ ಶಾಲೆಯವರೆಗೆ ಬೈಕಿನಲ್ಲಿ ಸವಾರಿ ಇಲ್ಲವಾದರೆ ಓಡೋಡಿ ಶಾಲೆ ಸೇರುವ ತುರಾತುರಿ. ಮತ್ತೆ ಉಳಿದ ಸಮಯದಲ್ಲಿ ಕಾಲ್ನಡಿಗೆಯೇ ಗತಿ. ದಾರಿಯಲ್ಲಿ ಬರುವಾಗ, ಒಂದು ಒಳದಾರಿ ಹಿಡಿಯುತ್ತಿದ್ದೆವು. ಅಲ್ಲಿ ಬೆಕ್ಕು ಮರಿಹಾಕಿದ್ದನ್ನು ನೋಡಿದ್ದೇವೆ. ಯಾರದೋ ಮನೆಯ ದೊಡ್ಡ ನಾಯಿಯೊಂದು ಓಡಿಸಿಕೊಂಡು ಬಂದು ಓಡಿ ಬಚಾವಾಗಿದ್ದೇವೆ. ಗಲ್ಲಿಯಲ್ಲಿ ಕ್ರಿಕೆಟ್ ಆಡಿ ಕನ್ನಡಿ ಒಡೆದಿದ್ದೇವೆ. ಚೆಂಡು ಹುಡುಕಲು ಹೋಗಿ ಪೊದೆಯಲ್ಲಿದ್ದ ಜೇನುನೊಣದಿಂದ ಕಡಿಸಿಕೊಂಡು ಓಡಿದ್ದೇವೆ. ತರಗತಿಯಲ್ಲಿ ಅಕಸ್ಮತ್ತಾಗಿ ನುಗ್ಗಿ ಒದ್ದಾಡುತ್ತಿದ್ದ ಪಾರಿವಾಳವನ್ನು ಹಿಡಿದು ಗೋಣಿಯಲ್ಲಿಟ್ಟು ಸಂತೋಷ ಪಟ್ಟಿದ್ದೇವೆ. ಪಕ್ಕದ ಮನೆಯ ಕರೆಂಟ್ ಮೀಟರಿನ ಗೂಡಿನ ಮೇಲೆ ರಾಬಿನ್ ಹಕ್ಕಿ (ಬಾಲ ಕುಸುಕ) ಗೂಡು ಕಟ್ಟಿ, ಮೊಟ್ಟೆ ಇಟ್ಟು, ಮರಿಮಾಡಿ ಅದಕ್ಕೆ ಹಾರಲು ಹೇಳಿಕೊಟ್ಟದ್ದನ್ನು ನೋಡಿದ್ದೇವೆ. ಹೀಗೆ ಸಾಕಷ್ಟು ಸುಂದರ ಹಾಗೂ ಸಮೃದ್ಧ ಬಾಲ್ಯವನ್ನೇ ಕಳೆದಿದ್ದೇನೆ. ನಾನು ಇಂದು ಏನಾಗಿದ್ದೇನೆ (ಏನೋ ಕಡಿದು ಹಾಕಿದ್ದೇನೆ ಎಂದಲ್ಲ) ಅದಕ್ಕೆ ಈ ಸಮೃದ್ಧ ಬಾಲ್ಯ ಕಾರಣ ಎಂದು ನನ್ನ ಅಚಲವಾದ ನಂಬಿಕೆ.
ಶಾಲೆಯಲ್ಲಿ ಎಂದೂ ಪ್ರಥಮ ರ‍್ಯಾಂಕ್ ಬರಬೇಕು ಎಂದು ಒತ್ತಾಯಿಸಿದ ಗುರುಗಳು ನನಗೆ ಇರಲಿಲ್ಲ. ನಾನು ಓದುವುದರಲ್ಲಿ ಸಾಕಷ್ಟು ಚೆನ್ನಾಗಿಯೇ ಇದ್ದೆ. ಪ್ರಾಥಮಿಕ ತರಗತಿಗಳಲ್ಲಿ ರ‍್ಯಾಂಕು ಬರುತ್ತಿತ್ತು. ಡಿಗ್ರಿಯಲ್ಲಿ ಕ್ಲಾಸಿನಲ್ಲಿ ಹೆಚ್ಚು ಅಂಕ ಪಡೆದವರಲ್ಲಿ ಐದರೊಳಗೆ ಇರುತ್ತಿದ್ದೆ. ಹಾಗೆಯೇ ಪಿಯೂಸಿಯಲ್ಲಿ ಅಕಸ್ಮತ್ತಾಗಿ ಇಂಗ್ಲೀಷ್ ಮಾಧ್ಯಮ ಆರಂಭವಾದಾಗ ತತ್ತರಿಸಿ ಅನುತ್ತೀರ್ಣವಾಗಿ ಒಂದು ವರುಷ ಮನೆಯಲ್ಲಿ ಕುಳಿತದ್ದೂ ಆಗಿದೆ. ಆದರೆ ನನ್ನ ಹೆತ್ತವರು ಎಂದೂ ಯಾಕೆ ರ‍್ಯಾಂಕು ಬರಲಿಲ್ಲ ಅಂತ ಕೇಳಿದವರಲ್ಲ, ಅನುತ್ತೀರ್ಣನಾದಾಗ ಆಕಾಶ ತಲೆಮೇಲೆ ಬಿದ್ದವರಂತೆ ಆಡಿದವರೂ ಅಲ್ಲ. ನಾನು ನಾಟಕ, ಶಿಬಿರ, ಸ್ಕೌಟು ಅಂತ ತಿರುಗಿದಾಗ ಎಂದೂ ತಡೆದವರಲ್ಲ.
ಇಂದು ಬೆಂಗಳೂರಿನಲ್ಲಿ ನನ್ನ ಹಿರಿಯ ಗೆಳೆಯ ಪ್ರದೀಪ್ ಪೈ (ಅವರು ಸಾಗರದಿಂದ ಬೆಂಗಳೂರಿಗೆ ಬಂದು ಇಲ್ಲಿ ಸಾಕ್ಷ್ಯಚಿತ್ರ ನಿರ್ದೇಶಕರಾಗಿ ಹಲವು ವರುಷಗಳಿಂದ ಕೆಲಸ ಮಾಡುತ್ತಿದ್ದಾರೆ) ತಮ್ಮ ಮಗಳು ದೀಪಾಲಿಯನ್ನು ಕನ್ನಡ ಶಾಲೆಗೆ ಸೇರಿಸಿದ್ದಾರೆ. ಎಲ್ಲೇ ಸಂಗೀತ, ನಾಟಕ, ಉತ್ತಮ ಸಿನೆಮಾ ಪ್ರದರ್ಶನಗಳಿದ್ದರೂ ಅವಳನ್ನು ಕರೆದುಕೊಂಡು ಹೋಗಿ ಅವಳಿಗೆ ಅವುಗಳು ದೊರೆಯುವಂತೆ ಮಾಡುತ್ತಾರೆ. ಚುರುಕು ಮತಿಯ ಆ ಹುಡುಗಿಯೊಡನೆ ಮಾತನಾಡುವುದೇ ಸಂತೋಷ. ಒಮ್ಮೆ ಅವರೊಡನೆ ಮಾತನಾಡುತ್ತಾ ಅವರ ಬಾಲ್ಯದ ಕುರಿತಾಗಿ ಮಾತು ಬಂತು. ಅವರೂ ಸಾಗರದಂಥಾ ಸಣ್ಣ ಊರಿನಿಂದ ಬಂದವರಾದ್ದರಿಂದ ಅನುಭವಿಸಿದ ಸಮೃದ್ಧ ಬಾಲ್ಯವನ್ನು ನೆನಪಿಸಿಕೊಂಡರು. ಅಂಥಾದ್ದೊಂದು ಬಾಲ್ಯ ಮಗಳಿಗೆ ಸಿಗಬೇಕು ಎಂಬಂಥಾ ಅದಮ್ಯ ಆಸೆ ಅವರದ್ದು.
ನನ್ನ ಶಿಕ್ಷಣಕ್ಕೆ ಎಂದೂ ಡೊನೇಷನ್ ಕೊಟ್ಟದ್ದಿಲ್ಲ. ಸಾಧಾರಣವಾದ ಫೀಸು ಕಟ್ಟಿದ್ದಷ್ಟೇ. ಹೀಗೆ ಹೆತ್ತವರ ಕಿಸೆಗೆ ಭಾರವಾಗದಂತೆ ಶಿಕ್ಷಣ ಮುಗಿದೇ ಹೋಯಿತು. ಇಂದು ಬೆಂಗಳೂರಿನಲ್ಲಿ ಒಂದೊಂದು ಶಾಲೆಗಳ ವಿಚಾರ ಕೇಳಿದಾಗ ಗಾಬರಿಯಾಗುತ್ತದೆ. ಒಂದನೇ – ಎರಡನೇ ತರಗತಿಗಳಿಗೆ ಡೊನೇಷನ್ ಕೊಡಬೇಕಾಗಿದೆ! ಅದೂ ಲಕ್ಷಗಳಲ್ಲಿ. ಹಾ! ಲಾಭದಾಯಕ ಧಂದೆಯಾಗಿದೆ ಶಿಕ್ಷಣ! ಇನ್ನು ಸರಕಾರ ಏಕೆ ಹಿಂದೆ ಬೀಳುತ್ತದೆ ಶಿಕ್ಷಣ ಉದ್ಯಮದಿಂದ ಲಾಭ ಪಡೆಯಲು?! ಲಾಭಕ್ಕಾಗಿ ಶಾಲೆಯನ್ನು ನಡೆಸುವುದು ಎನ್ನುವ ಸರಕಾರದ ಧೋರಣೆ ಭಾರೀ ತಮಾಷೆಯಾಗಿದೆ. ಇಂದು ನಮ್ಮ ಸರಕಾರ ಒಂದೋ ಕಾರ್ಪೊರೇಟ್ ಸಂಸ್ಥೆಗಳ ಹಂಗಿನಲ್ಲಿ ಜೀವಿಸುತ್ತದೆ ಅಥವಾ ಸ್ವತಃ ಕಾರ್ಪೊರೇಟ್ ಸಂಸ್ಥೆಯಂತೆ ವರ್ತಿಸುತ್ತದೆ. ಸರಕಾರ ಎನ್ನುವುದು ನಾಗರಿಕರಿಂದ ಸಂಗ್ರಹಿಸುವ ಹಣದಿಂದ ಸಾರ್ವಜನಿಕ ಒಳಿತಿಗೆ ಕೆಲಸಗಳನ್ನು ಮಾಡಬೇಕು ಎನ್ನುವ ಐಡಿಯಲಿಸಂ ಕಾಲ ಎಂದೋ ಮುಗಿದಾಯ್ತು. ಸರಕಾರ ಎನ್ನುವುದು ಒಂದು ಕಾರ್ಪರೇಟ್ ಬಾಡಿಯ ಥರಾ ವರ್ತಿಸುವುದು ಭಾರೀ ವಿಚಿತ್ರ ಸಂದರ್ಭ. ಆದರೆ ಇದು ದುರಾದೃಷ್ಟವಶಾತ್ ಕರ್ನಾಟಕ ಮಾತ್ರವಲ್ಲ, ಭಾರತದಾದ್ಯಂತ ನಡೀತಿದೆ.
ಸರ್ವಶಿಕ್ಷಣ ಅಭಿಯಾನದ ಸಂದರ್ಭದಲ್ಲಿ ಶಿಕ್ಷಣದ ಮಹತ್ವವನ್ನು ತಿಳಿಸುತ್ತಾ ಸರಕಾರಿ ಜಾಹಿರಾತುಗಳೇ, ಜಾಗೃತ ಪ್ರಜೆಗಳೇ ಸಧೃಡ ನಾಳೆಯ ರೂವಾರಿಗಳು ಎನ್ನುತ್ತವೆ. ಆದರೆ ಕ್ರಮಪ್ರಕಾರವಾಗಿ ಶಿಕ್ಷಣದ ಮೇಲೆ ಅಧಿಕಾರಶಾಹಿಯ ಉತ್ಸಾಹ ಕಡಿಮೆಯಾಗುತ್ತಿರುವುದೂ, ಅದನ್ನು ಒಂದು ವ್ಯವಹಾರವಾಗಿ ಗ್ರಹಿಸುತ್ತಿರುವುದೂ ಕಂಡು ಬರುತ್ತಿದೆ. ಇದು ತೀರಾ ಕಳವಳಕಾರಿ ಬೆಳವಣಿಗೆ. ಜನ ಅಜ್ಞಾನಿಗಳಾಗಿದ್ದಷ್ಟೂ ಅವರನ್ನು ‘ಮಾಸ್’ ಆಗಿ ನಿಯಂತ್ರಿಸುವುದು ಸುಲಭ. ಅಂಧ ವಿಶ್ವಾಸಗಳು, ವಿಚಾರಶೂನ್ಯ ವ್ಯವಹಾರಗಳನ್ನು ಮಾಡುವ ಜನರಿದ್ದಾಗ ಅವರನ್ನು ಜಾತಿ, ಮತ, ರಾಜಕೀಯ ಬಣ್ಣಗಳಿಂದ ಒಡೆದು ನಿಯಂತ್ರಿಸುವುದು ಸುಲಭ. ಅದೇ ಸಂದರ್ಭದಲ್ಲಿ ಹಣಕೊಟ್ಟು ಶಿಕ್ಷಣವನ್ನು ಪಡೆಯಬಲ್ಲ ವರ್ಗದವರ ಯೋಚನೆಯನ್ನು ಒಂದೇ ರೀತಿಯಾಗಿಸುವುದೂ ಸುಲಭವಾಗುತ್ತದೆ. ಈ ಅವ್ಯಕ್ತ ಹೂಟ ಎಲ್ಲೋ ನಮ್ಮ ಸಮಾಜದ ವಿರುದ್ಧ ತೀವ್ರವಾಗಿ ಕೆಲಸ ಮಾಡುತ್ತಿರುವುದು ಇಂದು ಕಾಣುತ್ತಿದೆ. ಮೊನ್ನೆ ಆಂಧ್ರದಲ್ಲಿ ಅದ್ಯಾವುದೋ ಒಂದು ಸಣ್ಣ ಊರಲ್ಲಿ ಪೋಸ್ಟ್ ಆಫೀಸಿನಲ್ಲಿ ಒಂದು ಖಾತೆ ತೆರೆದರೆ ಅದಕ್ಕೆ ಸಾಯಿಬಾಬಾ ಸಂಸ್ಥೆಯಿಂದ ಹಣ ಹಾಕಲಾಗುತ್ತದೆ ಎಂದು ಗಾಳಿಸುದ್ದಿ ಹರಡಿದ್ದೇ ತಡ, ಆ ಊರಿನ ಜನರು ಮುಗಿಬಿದ್ದು ಖಾತೆ ತೆರೆದದ್ದರ ಬಗ್ಗೆ ಒಂದು ವರದಿ ಟಿ.ವಿ೯ನಲ್ಲಿ ಬಂದಿತ್ತು. ಜನ ಹೀಗೆ ಮುಟ್ಠಾಳರಾಗುವುದನ್ನು ನೋಡುವಾಗ, ಮೊಬೈಲ್, ಇಂಟರ್ನೆಟ್, ಟಿ.ವಿ ಮೂಲಕ ಜನರನ್ನು ಹೆಚ್ಚು ಸುಲಭವಾಗಿ ತಲುಪಿ ಅವರ ಮನಸ್ಸುಗಳನ್ನು ಪ್ರಭಾವಿಸಲು ಸಾಧ್ಯವಿರುವಾಗ ಸ್ವತಂತ್ರವಾಗಿ ಯೋಚಿಸುವ ಶಕ್ತಿಯನ್ನು ಕಳೆದುಕೊಂಡ ಸಮುದಾಯ ‘ಮಾಸ್’ ತೀರಾ ಅಪಾಯಕಾರಿ.
ಇದೇ ಸಂದರ್ಭದಲ್ಲಿ ಇವತ್ತಿನ ದಕ್ಷಿಣ ಕನ್ನಡದ ಕನ್ನಡ ಶಾಲೆಯೊಂದನ್ನೇ ತೆಗೆದುಕೊಳ್ಳೋಣ, ನನ್ನ ಮಾವ ದಕ್ಷಿಣ ಕನ್ನಡದ ಒಂದು ಸಣ್ಣ ಹಳ್ಳಿಯಲ್ಲಿ ಏಕೋಪಾಧ್ಯಾಯ ಶಾಲೆಯ ಮುಖ್ಯೋಪಾಧ್ಯಾಯರು (!) ಕಳೆದ ಸುಮಾರು ಮೂವತ್ತು ವರ್ಷದಿಂದ ಅಲ್ಲಿನ ಪರಿಸ್ಥಿತಿ ಹೀಗೆಯೇ ಇದೆಯಂತೆ. ಅಲ್ಲಿ ಒಂದರಿಂದ ಏಳನೆಯ ತರಗತಿಯವರೆಗಿನ ವಿದ್ಯಾರ್ಥಿಗಳಿದ್ದರೂ, ಉಪಾಧ್ಯಾಯರು ಇವರೊಬ್ಬರೇ. ಉಪಾಧ್ಯಾಯ ಮಾತ್ರವಲ್ಲ, ಶಾಲೆಯಲ್ಲಿನ ಗುಮಾಸ್ತ, ಹಮಾಲಿ ಎಲ್ಲವೂ ಇವರೇ! ಸರಕಾರದ ಕಡೆಯಿಂದ ಶಾಲೆಯನ್ನು ನಡೆಸಲು ಬರುವ ಇತರ ಖರ್ಚುಗಳನ್ನೂ ಸಮರ್ಥವಾಗಿ ಒದಗಿಸುತ್ತಿಲ್ಲವಂತೆ. ಮಕ್ಕಳ ಕಷ್ಟ ಸಹಿಸಲಾಗದೇ, ಇವರೇ ತಮಗೆ ಬರುವ ಅಲ್ಪ ಸಂಬಳದಲ್ಲಿ ಇನ್ನಿಬ್ಬರು ಉಪಾಧ್ಯಾಯರುಗಳನ್ನು ನೇಮಿಸಿಕೊಂಡು ಶಾಲೆಯನ್ನು ನಿಭಾಯಿಸುತ್ತಿದ್ದಾರೆ. ಮತ್ತೆ ಶಾಲೆಯ ಮಕ್ಕಳಿಗೆ ಕುಡಿಯಲು ನೀರಿನ ವ್ಯವಸ್ಥೆಗೆಂದು ಐವತ್ತು ಸಾವಿರದಷ್ಟು ಖರ್ಚುಮಾಡಿ ಟ್ಯಾಂಕಿನವ್ಯವಸ್ಥೆ ಮಾಡಿದರು. ಹಣ, ಮತ್ತೆ ಮುಖ್ಯೋಪಾಧ್ಯಾಯರ ಕಿಸೆಯಿಂದ!
ಇನ್ನು ಶಾಲೆಯಲ್ಲಿ ಬಿಸಿಯೂಟ ಆರಂಭಿಸಿಯಾದ ಮೇಲೆ ಇವರುಗಳಿಗೆ ಇನ್ನೊಂದು ತೊಂದರೆ! ಸರಕಾರದಿಂದ ನೇಮಕಗೊಂಡ ಅಡಿಗೆಯವರು ಬರದಿದ್ದರೆ, ಅಂದಿನ ಅಡಿಗೆಯ ವ್ಯವಸ್ಥೆಯೂ ಈ ಉಪಾಧ್ಯಾಯರುಗಳದ್ದೇ! ಅಂದು ಊಟ ಹಾಕದಿದ್ದರೆ ಎಷ್ಟೋ ಮಕ್ಕಳಿಗೆ ದಿನದ ಏಕೈಕ ಊಟವೂ ಸಿಗುವುದಿಲ್ಲ ಮಾತ್ರವಲ್ಲ, ಸರಕಾರದ ಕಡೆಯಿಂದ ಉಪಾಧ್ಯಾಯರುಗಳ ಮೇಲೆ ವಿಚಾರಣೆ ನಡೆಯುತ್ತಂತೆ! ಮತ್ತೆ ಉಪಾಧ್ಯಾಯರು ತಮ್ಮ ಸಂಬಳದ ಕುರಿತಾಗಿಯೋ, ಇನ್ಯಾವುದೋ ಶಾಲೆಗೆ ಸಂಬಂಧಿಸಿದ ವ್ಯವಹಾರವೋ ಬಂದರೆ, ತಿಂಗಳಿಗೆ ಕನಿಷ್ಟ ಎರಡು-ಮೂರು ಬಾರಿ ಸುಮಾರು ೩೦ ಕಿ.ಮಿ ದೂರದ ಬಿ.ಸಿ.ರೋಡಿಗೋ ಇನ್ನೂ ದೂರದ ಮಂಗಳೂರಿಗೋ ಹೋಗಲೇ ಬೇಕು. ಅಂದು ಶಾಲೆಯ ಗತಿ?!
ಮತ್ತೆ ಜನಗಣನೆ, ಸರಕಾರೀ ಯೋಜನೆಗಳ ಬಿತ್ತರಣೆ ಇತ್ಯಾದಿಗಳಿಗೆ ಈ ಉಪಾಧ್ಯಾಯರುಗಳು ಸದಾ ಸರಕಾರದ ಕಾಲಾಳುಗಳು ಎಂಬ ಭಾವನೆ. ಸಿಗುವ ಎಲ್ಲಾ ಸಾರ್ವಜನಿಕ ರಜೆಗಳಲ್ಲೂ ಇವರು ಸರಕಾರದ ಕೆಲಸಕ್ಕೇ ಮುಡಿಪು. ನನ್ನ ಅತ್ತೆ ಕೇರಳಾದ ಹಳ್ಳಿಯೊಂದರಲ್ಲಿ ಶಿಕ್ಷಕಿ. ಆದರೂ ಮಾವ ವಾರದಲ್ಲಿ ಒಂದೆರಡು ಬಾರಿ ಅಲ್ಲಿಗೆ ಹೋಗಿ ಅವರೊಂದಿಗಿದ್ದು ಮತ್ತೆ ಬೆಳಗ್ಗೆ ನಲವತ್ತು ಕಿ.ಮಿ ಬೈಕಲ್ಲಿ ತಮ್ಮ ಶಾಲೆಗೆ ಹಾಜರಾಗುತ್ತಾರೆ. ಇದನ್ನೆಲ್ಲಾ ನನ್ನೊಂದಿಗೆ ಹಂಚಿಕೊಂಡಾಗ, ಇಷ್ಟೆಲ್ಲಾ ಆದಮೇಲೆ ನಿಮಗೆ ಸಂಬಳ ಏನಾದರೂ ಕೈಯಲ್ಲಿ ಉಳಿಯುತ್ತಾ ಎಂದು ಕೇಳಿದೆ. ಇಲ್ಲ ಹೆಚ್ಚಿನ ಬಾರಿ ಸಂಬಳ ಮಾತ್ರವಲ್ಲ, ಸ್ವಂತ ದುಡ್ಡೂ ಕೈಬಿಡುತ್ತೆ. ಮತ್ತೆ ಅನೇಕ ಬಾರಿ ತೀರಾ ದೊಡ್ಡ ಖರ್ಚು ಎದುರಾದರೆ, ಊರಿನ ಜನ ಒಂದಷ್ಟನ್ನು ತುಂಬು ಹೃದಯದಿಂದ ಕೊಡುತ್ತಾರೆ ಎಂದರು. ಮಾವನಿಗೆ ಸ್ವಂತ ತೋಟ ಇರುವುದರಿಂದ ಮನೆ ನಡೆಸುವುದು ಕಷ್ಟವಾಗುವುದಿಲ್ಲ. ತೋಟವನ್ನು ನೋಡಿಕೊಳ್ಳಲು ಸಮಯ ಸಾಲುವುದಿಲ್ಲ ಎನ್ನುವ ಕೊರಗು ಇದೆ.
ಯಾಕೆ ಈ ಶಾಲೆಯ ಸಹವಾಸ ನಿಮಗೆ, ವಿ.ಆರ್.ಎಸ್ ತೆಗೆದುಕೊಳ್ಳಬಹುದಲ್ಲಾ ಎಂದು ನಾನು ಕೇಳಿದರೆ, ಇಲ್ಲ ನಲವತ್ತರ ಹತ್ತಿರ ಮಕ್ಕಳಿದ್ದಾರೆ ನಮ್ಮ ಶಾಲೆಯಲ್ಲಿ (ಒಂದರಿಂದ ಏಳರವರೆಗೆ ಸೇರಿಸಿ) ನಾನು ಬಿಟ್ಟರೆ, ಮತ್ತೆ ಈ ಶಾಲೆಗೆ ನೇಮಕಾತಿ ಆಗುವುದಿಲ್ಲ. ಮತ್ತೆ ಈ ಮಕ್ಕಳ ಶಿಕ್ಷಣದ ಗತಿ ಏನು? ಅವರ ಮುಖ ನೋಡಿದಾಗ, ಊರವರ ವಿಶ್ವಾಸ ನೋಡಿದಾಗ ಎಲ್ಲ ಕಷ್ಟ ಮರೆಯುತ್ತದೆ ಎನ್ನುತ್ತಾರೆ. ಇವರು ನನ್ನ ಮಾವ ಎಂದು ನಾನು ಎತ್ತಿ ಆಡುತ್ತಿಲ್ಲ. ಬುದ್ಧಿವಂತರ ನಾಡು ಎಂದು ಬೀಗುವ ದಕ್ಷಿಣ ಕನ್ನಡದಲ್ಲೇ ಮಕ್ಕಳ ಶಿಕ್ಷಣದ ಗತಿ ಇಷ್ಟು ಅಧ್ಬುತವಾಗಿದ್ದರೆ, ಇನ್ನು ಕರ್ನಾಟಕದ ಇತರ ಕಡೆಗಳಲ್ಲಿ ಏನು ಕಥೆ?!
ಭಾಷೆಯ ಹೆಸರಿನಲ್ಲಿ ಇನ್ನೊಬ್ಬರನ್ನು ಹೊಡೆಯುವ, ಕೊಲ್ಲುವ ಹೀನ ಕೆಲಸವನ್ನು ಬಿಟ್ಟು ಮಕ್ಕಳಿಗೆ ಸಾಧ್ಯವಾದಷ್ಟು ಅವರದೇ ಭಾಷೆಯಲ್ಲಿ ಶಿಕ್ಷಣ ದೊರೆಯುವಂತೆ ಮಾಡುವ ಕಡೆ ನಮ್ಮ ಪ್ರಯತ್ನ ಬೇಕು ಎಂದು ನನಗೆ ಅನಿಸುತ್ತದೆ.
Share This