ಚಿತ್ರ ವಿಮರ್ಶೆ ಹಾಗೂ ಚಿತ್ರ ಪತ್ರಿಕೋದ್ಯಮದ ಕುರಿತಾಗಿ ನನ್ನ ಅನಿಸಿಕೆಗಳನ್ನು ದಾಖಲಿಸಬೇಕೆಂದು ಬಹಳ ಸಮಯದಿಂದಲೂ ಅನಿಸುತ್ತಿತ್ತು. ಇಂದು ನನ್ನ ಕೆಲವು ಅನಿಸಿಕೆಗಳನ್ನು ಇಲ್ಲಿ ದಾಖಲಿಸಿದ್ದೇನೆ. ಸುಮಾರು ಆರು ವರುಷಗಳ ಹಿಂದಿನ ಮಾತು. ನಾನು ಆಗ ಮಂಗಳೂರಿನಲ್ಲಿ ಪತ್ರಿಕೋದ್ಯಮ ಓದುತ್ತಿದ್ದೆ. ಅದರಲ್ಲಿ ಒಂದು ಭಾಗವಾಗಿ ಸಿನೆಮಾ ವಿಮರ್ಶೆಯ ಭಾಗವೂ ಬಂತು. ಅಷ್ಟೇನೂ ಆಳವಾಗಿ ಹೋಗದೇ, ಪುಸ್ತಕ ವಿಮರ್ಶೆಯಂತೆಯೇ ಇದೂ ಒಂದು ವಿಮರ್ಶೆ ಎಂದು ಹೇಳಿಕೊಂಡು ಸುಮ್ಮನೆ ಮುಂದೆ ಹೋಗಿದ್ದೆವು. ಆದರೆ ಇಂದು ಸ್ವತಃ ನಾನೇ ಸಿನೆಮಾ ಮಾಧ್ಯಮದಲ್ಲಿ ಇದ್ದು, ಸಿನೆಮಾ ವಿಮರ್ಶೆಯನ್ನು ಗಮನಿಸುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಹೇಳುವುದಾದರೆ, ಕನ್ನಡ ಪತ್ರಿಕೆಗಳಲ್ಲಿ ಸಿನೆಮಾ ವಿಮರ್ಶೆ ಹೇಗೆ ಬರುತ್ತಿವೆ? ಒಂದು ಚಿತ್ರದ ನಿಜವಾದ ಸತ್ವವನ್ನು ಅವು ಒರೆಹಚ್ಚುವಲ್ಲಿ ಸಾಮರ್ಥವಾಗಿವೆಯೇ? ಬಹುಷಃ ಇಲ್ಲ. ಒಂದೋ ಸಿನೆಮಾವನ್ನು ಹೀಗಳೆಯುವುದೇ ವಿಮರ್ಶೆ ಆಗಿದೆ ಅಥವಾ ಹೊಗಳು ಸಾಹಿತ್ಯವೇ ವಿಮರ್ಶೆ ಎಂಬ ಹೆಸರನ್ನು ಪಡೆಯುತ್ತಿವೆ. ಆದರೆ ನಿಜಕ್ಕೂ ವಿಮರ್ಶೆ ಎಂದರೆ ಗುಣಾವಗುಣಗಳ ಪರಾಮರ್ಶೆ ಅಷ್ಟೇ ಅಲ್ಲವೇ? ಅವುಗಳು ನಿರ್ಧಾರಗಳು ಯಾಕೆ ಆಗಿವೆ? ಇಂಗ್ಲೀಶ್ ಪತ್ರಿಕೆಗಳು ಆರಂಭಿಸಿದ ‘ಸ್ಟಾರ್’ ಕ್ರಮಾಂಕ ನಮ್ಮಲ್ಲೂ ಯಾಕೆ ಬಂದಿದೆ? ಒಂದು ಸಿನೆಮಾಕ್ಕೆ ಎರಡು ಮತ್ತೊಂದಕ್ಕೆ ನಾಲು ಸ್ಟಾರ್ ಏಕೆ ಬರುತ್ತದೆ ಇತ್ಯಾದಿ ಚಿಂತನೆಗಳು ನನ್ನನ್ನು ಈ ಬರವಣಿಗೆಗೆ ಪ್ರೇರಿಸಿವೆ.

ಸಿನೆಮಾ ಭಾರತದಲ್ಲಿ ಒಂದು ಧರ್ಮವೇ ಆಗಿದೆ. ವಾರ ಅಥವಾ ನಿತ್ಯಭವಿಷ್ಯ ಬಿಟ್ಟರೆ ಪತ್ರಿಕೋದ್ಯಮದಲ್ಲಿ ಬಹುಶಃ ಅತ್ಯಂತ ಹೆಚ್ಚು ಓದಲ್ಪಡುವುದು ಸಿನೆಮಾ ವಿಷಯ. ಜನರಿಗೆ ಸಿನೆಮಾದ ಕುರಿತು, ಸಿನೆಮಾದವರ ಕುರಿತು ಓದುವುದಕ್ಕೆ ಅದೇನೋ ಒಂದು ಕುತೂಹಲ. ಇದಕ್ಕೆ ಸರಿಯಾಗಿ ನಮ್ಮಲ್ಲಿ ಅನೇಕ ಸಿನೆಮಾ ಸಂಬಂಧೀ ಪತ್ರಿಕೆಗಳು, ದಿನಪತ್ರಿಕೆಯಲ್ಲಿ ಸಿನೆಮಾ ಪುಟಗಳು ಬರುತ್ತವೆ. ಇದರಲ್ಲಿ ಪ್ರಕಟವಾಗುವ ವಿಷಯಗಳು ಸಾಧಾರಣವಾಗಿ ಸಿನೆಮಾ ಗಾಳಿ ಸುದ್ದಿ, ಸಿನೆಮಾ ವಿಮರ್ಶೆ ಹಾಗೂ ಸಿನೆಮಾ ಸಂಬಂಧೀ ಪ್ರಕಟಣೆ ಮಟ್ಟದ ವರದಿಗಳು ಆಗಿರುತ್ತವೆ.

ಅನೇಕ ಬಾರಿ ಚಿತ್ರೋದ್ಯಮದಲ್ಲಿ ಬಂದ ಹೊಸ ತಂತ್ರಜ್ಞಾನದ ಕುರಿತಾಗಿ ಬರೆಯಲಾಗುತ್ತದೆ. ಆದರೆ ಹೆಚ್ಚಿನ ಬಾರಿ ತಂತ್ರಜ್ಞಾನ ಏನು, ಅದರ ಮಹತ್ವ ಏನು ಎಂಬ ಸರಿಯಾದ ಅರಿವಿಲ್ಲದೇ ವರದಿ ಮಾಡುವುದನ್ನು ಕಾಣುತ್ತೇವೆ. ಕನ್ನಡ ಚಿತ್ರರಂಗದಲ್ಲಿ Digital Intermediate ಅಥವಾ ಹೃಸ್ವವಾಗಿ DI ಪ್ರಯೋಗವಾಗುವುದು ಇಂದಿಗೂ ಕಡಿಮೆ ಪ್ರಮಾಣದ ಚಿತ್ರಗಳಲ್ಲಿ. ಆಗ ಚಿತ್ರ ತಂಡದವರು ತಮ್ಮ ಪತ್ರಿಕಾ ಗೋಷ್ಟಿಯಲ್ಲಿ ಇದನ್ನು ಹೇಳಿಕೊಳ್ಳುವುದು ಸಹಜ. ಆದರೆ ಮೊದಮೊದಲು ಇಂಥಾ ವರದಿಗಳನ್ನು ಓದಿದರೆ, ಅದೇನೋ ಅಂತರಿಕ್ಷ ವಿಜ್ಞಾನ ಎಂಬಂತೆ ಅದರ ಚಿತ್ರಣ ದೊರೆಯುತ್ತಿತ್ತು. ನಮ್ಮ ಶಾಲಾ ಪಠ್ಯದಲ್ಲಿ ಕಂಪ್ಯೂಟರುಗಳನ್ನು ಮೊದಲು ಪರಿಚಯಿಸುತ್ತಿದ್ದದ್ದು ನೆನಪಾಗುತ್ತೆ ನನಗೆ ಇಂಥಾ ಸಂದರ್ಭದಲ್ಲಿ. Computer is a calculating device. It follows each command given by the user and executes it step by step. ಎಂಬ ವಿವರಣೇ ಇರುತ್ತಿತ್ತು ಸುಮಾರಿಗೆ ಕಂಪ್ಯೂಟರ್ ಪಾಠದ ಆರಂಭದಲ್ಲಿ. ಇದು ಒಂದು ಆಧುನಿಕ ಕ್ಯಾಲ್ಕುಲೇಟರ್ ಅಥವಾ ಟೈಪ್‍ರೈಟರ್ ಎನ್ನುವ ಭಾವನೆ ಬರುವ ಸಾಧ್ಯತೆಯೇ ಹೆಚ್ಚು ಇಲ್ಲಿ! ಆದರೆ ಇಂದು ಕಂಪ್ಯೂಟರ್ ಬಳಕೆ ಹೆಚ್ಚಾದ ಮೇಲೆ ಇದು ಏನು ಎಂಬ ಅರಿವು ಜನರಿಗೆ ಮೂಡಿರುವುದು. ಒಂದು ತಂತ್ರಜ್ಞಾನವನ್ನು ಜನರಿಗೆ ವರದಿ ಮಾಡುವಾಗ, ಅದನ್ನು ಆದಷ್ಟು ಸಹಜ ರೀತಿಯಲ್ಲಿ ಬಿಂಬಿಸುವ ಕೆಲಸ ಚಿತ್ರರಂಗದ ವರದಿಗಳಲ್ಲಿ ನಡೆಯುತ್ತಿಲ್ಲ.

ಈ ತಂತ್ರಜ್ಞಾನದ ವಿವರಗಳು ಅಗತ್ಯವಿಲ್ಲ. ಅವರಿಗೆ ಕಠಿಣ ವೈಜ್ಞಾನಿಕ ವಿವರಣೆಗಳನ್ನು ಕೊಟ್ಟು ಏಕೆ ತೊಂದರೆಕೊಡಬೇಕು ಎಂಬ ಪ್ರಶ್ನೆ ಏಳುತ್ತದೆ. ಆದರೆ, ತಂತ್ರಜ್ಞಾನದ ಪರಿಚಯ ಮಾಡುವುದು ಎಂದಾಕ್ಷಣ ಅದನ್ನು ಸಾಪೇಕ್ಷತಾವಾದ ವಿವರಿಸಿದಂತೆ ವಿವರಿಸುವ ಅಗತ್ಯವಿಲ್ಲ. ಕೇವಲ ಈ ತಂತ್ರಜ್ಞಾನ ಏನು ಮಾಡುತ್ತದೆ ಮತ್ತು ಇದರಿಂದ ಸಿನೆಮಾಗಳಲ್ಲಿ ಯಾವ ಬದಲಾವಣೆಗಳನ್ನು ಪ್ರೇಕ್ಷಕ ನಿರೀಕ್ಷಿಸಬಹುದು ಎಂಬ ಮಟ್ಟಿಗಾದರೂ ಅರ್ಥವಾಗುವಂತೆ ವಿವರಿಸುವಲ್ಲಿ ಅಸಡ್ಡೆಯೋ ಉಪೇಕ್ಷೆಯೋ ನಮ್ಮಲ್ಲಿ ಇದೆ. ಅದಕ್ಕೆ ನನ್ನ ಅಭ್ಯಂತರವಿರುವುದು. ಮತ್ತೆ ಅನೇಕ ಬಾರಿ ಕ್ಯಾಮರಾ ಸಂಬಂಧೀ ವಿವರಣೆಗಳು ಪ್ರಕಟವಾಗುತ್ತವೆ. ಉದಾಹರಣೆಗೆ ಸೂಪರ್ ೩೫ ಕ್ಯಾಮರಾ ಎನ್ನುತ್ತಾರೆ, ೪೩೫ ಕ್ಯಾಮರಾ ಎನ್ನುತ್ತಾರೆ. ಇಡೀ ಹಾಡನ್ನು ೯೦ ಫ್ರೇಮಿನಲ್ಲೇ ಚಿತ್ರೀಕರಿಸಿದ್ದಾಗಿ ಹೇಳುತ್ತಾರೆ. ಇವನ್ನೆಲ್ಲಾ, ಒಂದು ಕಲಾಪ್ರಕಾರದ ಅಂಗವೆಂದು ಅದರ ಸೌಂದರ್ಯ ವಿಮರ್ಶೆ ಮಾಡಿ ಬರೆಯುವಲ್ಲಿ ಇಂದಿನ ಪತ್ರಿಕಾ ವರದಿಗಳು ಬಹುತೇಕ ವಿಫಲವಾಗುತ್ತಿದೆ. ಉದಾಹರಣೆಗೆ, ೪೩೫ ಕ್ಯಾಮರಾ ಒಂದು ಅಪರೂಪದ ಕ್ಯಾಮರಾ. ಈ ಅತ್ಯಾಧುನಿಕ ತಂತ್ರಜ್ಞಾನದ ಕ್ಯಾಮರ ಬೆಂಗಳೂರಿನಲ್ಲಿ ಎರಡೇ ಇರುವುದು ಎಂದು ಪತ್ರಿಕೆಯೊಂದು ಇತ್ತೀಚೆಗೆ ವರದಿ ಮಾಡಿತ್ತು. ಆದರೆ, ತಾಂತ್ರಿಕವಾಗಿ ೪೩೫ ಸ್ವಲ್ಪ ಮಟ್ಟಿಗೆ ಹಳೆಯ ಕ್ಯಾಮರವೇ ಸರಿ. ಅದಾದ ನಂತರ ೫೩೫ ಎ ಹಾಗೂ ಬಿ ಎಂಬ ಎರಡು ಕ್ಯಾಮರಾಗಳು ಬಂದವು ಮತ್ತೆ ೨೩೫ ಎಂಬ ಕ್ಯಾಮರಾವೂ ಬಂತು. ಇವೆಲ್ಲವೂ ಕೇವಲ ಆರಿಫ್ಲೆಕ್ಸ್ ಎಂಬ ಕಂಪನಿಯೇ ತಯಾರಿಸಿದ ಕ್ಯಾಮರಾಗಳು. ಈ ಕಂಪನಿ ಅಲ್ಲದೇ ಇತರ ಕಂಪನಿಗಳೂ ಹೊಸ ಮಾಡೆಲ್ ತಯಾರಿಸಿವೆ, ಡಿಜಿಟಲ್ ತಂತ್ರಜ್ಞಾನ ಬಂದಿದೆ. ಇತ್ಯಾದಿ ಸುದ್ದಿಗಳ ನಡುವೆ, ೪೩೫ ಒಂದು ಆಧುನಿಕ ಕ್ಯಾಮರಾ ಎನ್ನುವ ಮಾತಿಗೆ ಅರ್ಥವೇ ಇರುವುದಿಲ್ಲ! ಹೀಗೆ ವರದಿ ಮಾಡಿ ಜನರ ತಾಂತ್ರಿಕ ತಿಳುವಳಿಕೆಯನ್ನು ಸೀಮಿತಗೊಳಿಸುವ ಬದಲಿಗೆ, “೪೩೫ ಎಂಬುದು ಆರಿಪ್ಲೆಕ್ಸ್ ಕಂಪನಿಯ ಒಂದು ಕ್ಯಾಮರಾವಾಗಿದೆ, ಇದು ಬೆಂಗಳೂರಿನಲ್ಲಿ ಕೇವಲ ಎರಡೇ ಇರುವುದರಿಂದಾಗಿ ಈ ಹೊಸ ಕ್ಯಾಮರಾದ ಸೇರ್ಪಡೆ ಮಹತ್ವ ಪಡೆದಿದೆ” ಎಂದಿದ್ದರೆ ಸಾಲದೇ?! ಇನ್ನು ನಾನು ಕೊಟ್ಟ ಇನ್ನೊಂದು ಉದಾಹರಣೆ, ‘೯೦ ಫ್ರೇಂ’ ಸಂಬಂಧೀ ವಿಚಾರ ಮಾತನಾಡೋಣ. ಒಂದು ಇಡೀ ಹಾಡನ್ನು ೯೦ ಫ್ರೇಮಿನಲ್ಲಿ ಚಿತ್ರೀಕರಿಸಿದರೆ ಏನಾಗುತ್ತದೆ? ಇಡೀ ಹಾಡು ಸ್ಲೋಮೋಷನ್ನಿನಲ್ಲಿ ಕಾಣಿಸಿಕೊಳ್ಳುತ್ತದೆ. ಮಾಮೂಲಾಗಿ ಪ್ರತಿ ಸೆಕೆಂಡಿಗೆ ೨೪ ಫ್ರೇಂ ಓಡುವ ಸಿನೆಮಾ ಕ್ಯಾಮರಾ ೯೦ ಫ್ರೇಂ ಓಡಿದರೆ, ಅದರ ಪ್ರದರ್ಶನ ಮತ್ತೆ ೨೪ ಫ್ರೇಮಿನಲ್ಲೇ ನಡೆದರೆ, ಚಿತ್ರಗಳು ನಿಧಾನವಾಗಿ ಸಾಗುತ್ತವಷ್ಟೇ? ಇದನ್ನು ಉದ್ದೇಶಪೂರ್ವಕವಾಗಿ ಒಂದು ಚಿತ್ರದಲ್ಲಿ ಮಾಡಿದ್ದರೆ, ಅದರ ಉದ್ದೇಶ ಏನಾಗಿತ್ತು? ಆ ಉದ್ದೇಶ ಈಡೇರಿತೇ? ಇದರಿಂದ ಇಡೀ ಚಿತ್ರದ ಹರಿವಿಗೆ ಯಾವ ರೀತಿಯ ಸಹಕಾರ ದೊರೆಯಿತು ಇತ್ಯಾದಿ ವಿಷಯಗಳನ್ನು ಪತ್ರಿಕಾ ವರದಿಯಲ್ಲಿ ಚರ್ಚಿಸಿದರೆ, ಓದುಗರಿಗೆ ವಿಷಯ ತಿಳಿಸುವುದರೊಂದಿಗೆ ಅವರ ತಾಂತ್ರಿಕ ತಿಳುವಳಿಕೆಯನ್ನು ಹೆಚ್ಚಿಸಿದಂತೂ ಆಗುತ್ತಿತ್ತಲ್ಲವೇ?

ಇನ್ನು ಚಿತ್ರ ವಿಮರ್ಶೆಯ ಕಡೆಗೆ ಬಂದರೆ, ಇಂದಿನ ಪತ್ರಿಕೋದ್ಯಮದಲ್ಲಿ ಒಂದು ಚಿತ್ರವನ್ನು ಒಳ್ಳೆಯದು ಅಥವಾ ಕೆಟ್ಟದ್ದು ಎನ್ನುವ ಮಟ್ಟಿಗೆ ವಿಮರ್ಶೆ ಬಂದು ನಿಲ್ಲುತ್ತಿವೆ. ಮತ್ತು ಹೆಚ್ಚಿನ ವಿಮರ್ಶೆಗಳ ಮುಕ್ಕಾಲು ಭಾಗ ಆ ಚಿತ್ರದ ಕಥೆಯೇ ಇರುತ್ತದೆ! ಅನೇಕ ಬಾರಿ ಈ ವಿಮರ್ಶೆಗಳು ವಿಮರ್ಶೆಯಾಗದೆ ನಿರ್ಣಯವಾಗಿಬಿಡುವುದೇ ಹೆಚ್ಚು. ಒಂದು ಚಿತ್ರ ವಿಮರ್ಶೆಯಂತೆಯೋ, ಸಂಗೀತ ವಿಮರ್ಶೆಯಂತೆಯೋ ಚಿತ್ರವಿಮರ್ಶೆಗಳು ಇರುವುದಿಲ್ಲ. ಇಂಥಾ ಚಿತ್ರದಲ್ಲಿ ಕ್ಯಾಮರಾ ಕೆಲಸ ಚೆನ್ನಾಗಿತ್ತು, ಸಂಕಲನ ಚುರುಕಾಗಿರಬಹುದಾಗಿತ್ತು, ನಿರ್ದೇಶನ ಕುಂಟುತ್ತಾ ಸಾಗಿತ್ತು ಇತ್ಯಾದಿ ಪ್ರಯೋಗಗಳನ್ನು ಬಹಳ ಬಾರಿ ಓದಿದ್ದೇವೆ ನಾವು. ಆದರೆ ಇವುಗಳ ಅರ್ಥ ಏನು? ಕ್ಯಾಮರಾ ಕೆಲಸ ಚೆನ್ನಾಗಿತ್ತು ಎಂದರೆ ಏನರ್ಥ? ಅದು ಏಕೆ ಚೆನ್ನಾಗಿತ್ತು ಎನ್ನುವ ಕ್ರಿಯಾತ್ಮಕ ವಿಮರ್ಶೆ ಇಂದು ಇಲ್ಲವಾಗಿದೆ. ಇಡೀ ಚಿತ್ರದ ಹರಿವಿಗೆ ಕ್ಯಾಮರಾ ಮ್ಯಾನ್ ಒದಗಿಸಿರುವ ಬೆಳಕಿನ ಸಂಯೋಜನೆ ಎಷ್ಟು ಪೂರಕವಾಗಿದೆ? ವರ್ಣಸಂಯೋಜನೆ ಹೇಗೆ ಪೂರಕವಾಗಿದೆ? ಬಳಸಿರುವ ಲೆನ್ಸ್ ಕೊಡುತ್ತಿರುವ ಕೊಡುಗೆ ಏನು ಎಂಬಿತ್ಯಾದಿಗಳ ವಿಮರ್ಶೆ ಇಂದು ಇಲ್ಲವಾಗಿದೆ. ಸಂಕಲನ ಎಂದರೆ ಭಾರತದಲ್ಲಿ ಇಂದು ಕೇವಲ ಕತ್ತರಿಸು-ಅಂಟಿಸು ಕೆಲಸವಾಗಿಬಿಟ್ಟಿದೆ. ಒಳ್ಳೆಯ ಸಂಕಲನಕಾರರು ಇಲ್ಲವೆಂದಲ್ಲ. ಆದರೆ ಅಂಥವರ ಕೆಲಸವನ್ನು ಎತ್ತಿ, ಅದರಲ್ಲಿನ ಗುಣಗಳನ್ನು ಓದುಗರಿಗೆ ವಿವರಿಸುವ ಸಾಮರ್ಥ್ಯ ದುರಾದೃಷ್ಟವಶಾತ್ ಇಂದಿನ ಪತ್ರಿಕೋದ್ಯಮ ತೋರಿಸುತ್ತಿಲ್ಲ. ನಿರ್ದೇಶನ ಕುಂಟುತ್ತಾ ಸಾಗುವುದು ಎಂದರೆ ಏನು? ನಿರ್ದೇಶಕ ತಾನು ಬಯಸಿದ್ದನ್ನು ಸಾಧಿಸುವಲ್ಲಿ ಏಲ್ಲಿ ಎಡವಿದ್ದಾನೆ, ಅದಕ್ಕೆ ಕಾರಣಗಳೇನಿರಬಹುದು ಇತ್ಯಾದಿ ವಿಮರ್ಶೆ, ಕೇವಲ ನಿರ್ಣಾಯಕ ಹೇಳಿಕೆಗಳಿಗಿಂತ ಆರೋಗ್ಯಪೂರ್ಣವೂ, ಜನಪರವೂ ಆಗಿರುತ್ತದೆ. ಇಂಥಾ ಚಿತ್ರ-ಪತ್ರಿಕೋದ್ಯಮ ನಮ್ಮಲ್ಲಿ ಇಂದು ಕಾಣುತ್ತಿಲ್ಲ.

ಒಬ್ಬ ಸಿನೆಮಾ ನಿರ್ದೇಶಕನಾಗಿ ಪತ್ರಿಕೋದ್ಯಮದಲ್ಲಿ ಈ ಕೊರತೆಯನ್ನು ನಾನು ಕಾಣುತ್ತಿದ್ದೇನೆ. ಆದರೆ ಇದೇ ಸಂದರ್ಭದಲ್ಲಿ ನನಗೆ ಚೆನ್ನಾಗಿ ಗೊತ್ತಿರುವ ವಿಚಾರವೆಂದರೆ, ನಮ್ಮಲ್ಲಿ ಹೆಚ್ಚಿನ ಪತ್ರಕರ್ತರು ನನ್ನ ಈ ಅಭಿಪ್ರಾಯವನ್ನು ಸ್ವತಃ ತಾವೇ ಹೊಂದಿದ್ದರೂ ಅನೇಕ ಬಾರಿ ಪತ್ರಿಕಾ ಧೋರಣೆಗಳಿಂದಾಗಿ, ಅನೇಕ ಬಾರಿ ಉದ್ಯಮದ ಒತ್ತಡಗಳಿಗೆ ಮಣಿಯಲೇ ಬೇಕಾದಂಥಾ ಪರಿಸ್ಥಿತಿ ಇದೆ ನಮ್ಮಲ್ಲಿ. ಒಂದು ಒಳ್ಳೆಯ ಸಿನೆಮಾ ನಿರ್ಮಿಸುವುದು ಎಷ್ಟು ಕಷ್ಟವೋ ಇಂದಿನ ಕಾಲದಲ್ಲಿ, ಅಷ್ಟೇ ಕಷ್ಟ ಒಂದು ಸರಿಯಾದ, ವಿಷಯನಿಷ್ಟ ವಿಮರ್ಶೆ ಬರೆಯುವುದು ಎನ್ನುವ ಸತ್ಯದ ಅರಿವೂ ನನಗಿದೆ. ಹೀಗಾಗಿ ಪತ್ರಿಕೋದ್ಯಮದ ಕೊರತೆಗೆ ಪತ್ರಕರ್ತರನ್ನು ದೂಷಿಗಳಾಗಿ ಕಾಣುವುದು ಖಂಡಿತಾ ಸಾಧುವಲ್ಲ.

ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಚಿತ್ರಗಳು ಬರುತ್ತಿಲ್ಲ ಎನ್ನುವ ಕೂಗು ಎಲ್ಲೆಡೆ ಕೇಳಿ ಬರುತ್ತಿದೆ. ಇದಕ್ಕೆ ಕಾರಣಗಳು ಅನೇಕ ಇರಬಹುದು. ಆದರೆ, ಸಶಕ್ತ ಪತ್ರಿಕಾ ಮಾಧ್ಯಮದ ಕಣ್ಗಾವಲು, ರಕ್ಷೆ ಇಲ್ಲದಿರುವುದೂ ಇದಕ್ಕೆ ಒಂದು ಕಾರಣ. ಈ ಕೊರತೆ ತುಂಬದಿದ್ದರೆ, ಚಿತ್ರರಂಗದ ಆರೋಗ್ಯಕ್ಕೆ ಅದು ಅಹಿತಕರ.

Share This