generation-gap-1ಇತ್ತೀಚೆಗೆ ನನ್ನ ನಿರ್ದೇಶನದ ಮೊದಲ ಚಿತ್ರ, ‘ಗುಬ್ಬಚ್ಚಿಗಳು’ ಭಾರತೀಯ ಅಂತರ್ರಾಷ್ಟ್ರೀಯ ಚಲನ ಚಿತ್ರೋತ್ಸವದ, ಭಾರತೀಯ ಪನೋರಮಾ ವಿಭಾಗಕ್ಕೆ ಆಯ್ಕೆಯಾಯಿತು. ಭಾರತ ಸರಕಾರ ನಡೆಸುವ ಅತಿ ದೊಡ್ಡ ಚಿತ್ರೋತ್ಸವ ಇದು. ಸರಕಾರದ ವತಿಯಿಂದ ಚಿತ್ರದ ನಿರ್ದೇಶಕ ಹಾಗೂ ನಿರ್ಮಾಪಕರಿಗೆ ಚಿತ್ರೋತ್ಸವದ ಸ್ಥಳಕ್ಕೆ ಬರುವ-ಹೋಗುವ ಖರ್ಚು, ಐಶಾರಾಮಿ ಹೋಟೇಲಿನ ವ್ಯವಸ್ಥೆ ಇತ್ಯಾದಿಗಳನ್ನು ಏರ್ಪಡಿಸಲಾಗಿತ್ತು. ನಾನು ಗೋವಾ ತಲುಪಿದಾಗ ‘ಸನ್ ಅಂಡ್ ಸ್ಯಂಡ್’ ಎನ್ನುವ ಹೋಟೇಲಿನಲ್ಲಿ ವಾಸ್ತವ್ಯ ಏರ್ಪಡಿಸಿದ್ದರು. ಮರುದಿನ ಬೆಳಗ್ಗೆ ನನ್ನ ತಂದೆ ಮಂಗಳೂರಿನಿಂದ ನನ್ನ ಹೆಂಡತಿಯನ್ನು ಕರೆದುಕೊಂಡು ಗೋವಾ ತಲುಪಿದರು. ತಂದೆ ಒಂದೇ ದಿವಸದ ಮಟ್ಟಿಗೆ ನಮ್ಮೊಂದಿಗಿರಲು ಗೋವಾಕ್ಕೆ ಬಂದಿದ್ದರು. ಬೆಳಗ್ಗೆ ಬಂದಾಗ ಸ್ವಾಭಾವಿಕವಾಗಿ ಹೋಟೇಲ್ ಕೋಣೆಗೆ ಬಂದರು. ಅವರಿಗೆ ಇದು ಪಂಚತಾರಾ ಹೋಟೇಲಿನಲ್ಲಿ ಮೊದಲ ವಾಸ್ತವ್ಯ. ಅಲ್ಲಿನ ಕಾಫಿಗೆ ಎಷ್ಟು ಬೆಲೆ ಇದ್ದೀತು? ಇಲ್ಲಿ ಉಳಿದುಕೊಳ್ಳುವುದು ನಿಜಕ್ಕೂ ಅಗತ್ಯವೇ ಇತ್ಯಾದಿಯಾಗಿ ಪರಿಪರಿ ಮಾತುಗಳಲ್ಲಿ ಈ ವ್ಯವಸ್ತೆಯ ಬಗ್ಗೆ ತಮ್ಮ ನಿರಾಸಕ್ತಿಯನ್ನು ತೋರಿಸುತ್ತಿದ್ದರು. ನನಗೆ ಇದು ವಿಚಿತ್ರ ಅನಿಸಿತು. ಇದು ಯಾಕೆ ಹೀಗೆ ಎಂದು ಯೋಚಿಸುತ್ತಾ ನೆನಪಿನ ರೀಲು ಹಿಂದಕ್ಕೋಡಿತು…

ಅಂದು ರಾತ್ರಿ ಅಪ್ಪ ಅಂಗಡಿ ಮುಚ್ಚಿ ಬರಬೇಕಿದ್ದರೇ ಮನೆಯಲ್ಲಿ ೧೦ ವರುಷದ ನನಗೆ ಹಬ್ಬದ ವಾತಾವರಣ. ಅಮ್ಮ ಅಡಿಗೆಯನ್ನು ಸರಿಯಾದ ಸಮಯದಲ್ಲಿ ಮುಗಿಸಿದಿದ್ದರೆ ಎಂಬ ಆತಂಕ, ಇಡೀ ಮನೆಯಲ್ಲಿ ಏನೇ ಸಣ್ಣ ತೊಂದರೆ ಆದರೂ, ಅಯ್ಯೋ! ಎನ್ನುವ ಭಾವ ನನ್ನಲ್ಲಿ. ಅಪ್ಪ ಅಂತೂ ಬಂದರು. ಊಟ ಗಡಿಬಿಡಿಯಲ್ಲಿ ನಡೆಯಿತು, ಅಪ್ಪ ಈ ದಿನದ ಸಮಯದ ತುರ್ತಿನಿಂದಾಗಿ ಹಿತ್ತಿಲಿನಲ್ಲಿ ಪಾತ್ರೆ ತೊಳೆಯಲಾರಂಭಿಸಿದರೆ, ಅಮ್ಮ ಹಾಲಿಗೆ ಹೆಪ್ಪುಹಾಕುವುದು, ಉಳಿದ ಅನ್ನವನ್ನು ಬರಗಿ ಸಣ್ಣಪಾತ್ರೆಗಳಿಗೆ ವರ್ಗಾಯಿಸಿ ಒಳಗಿಡುವುದು ಇತ್ಯಾದಿಗಳನ್ನು ಮುಗಿಸುತ್ತಿರಬೇಕಾದರೆ, ಎಂದೂ ಮನೆಕೆಲಸ ಮಾಡದ ನಾನು ಅಂದು ಊಟ ಮಾಡಿದ ಸ್ಥಳದಲ್ಲಿ ನೆಲ ಒರಸಿ ಕೆಲಸ ಮುಗಿಸಲು ಸಹಕರಿಸುತ್ತಿದ್ದೆ. ಮತ್ತೆ ಅಂದವಾಗಿ ಸಿಂಗರಿಸಿಕೊಂಡ ಪುಟ್ಟ ನಾನು, ಅಪ್ಪ-ಅಮ್ಮ ನಮ್ಮ ಬೈಕಿನಲ್ಲಿ ಕುಳಿತು ಮಂಗಳೂರಿನ ನ್ಯೂಚಿತ್ರ ಸಿನೆಮಾ ಮಂದಿರಕ್ಕೆ ಹೋಗುತ್ತಿದ್ದೆವು. ಅಂದು ‘ಬಡ್ ಸ್ಪೆನ್ಸರ್’ನ ಹೊಸ ಚಿತ್ರ ಬಂದಿತ್ತು. ಮನೆಯಲ್ಲಿ ಇನ್ನೂ ಟಿ.ವಿ ಇಲ್ಲದ ದಿನಗಳವು ನನಗೆ. ಒಂದು ಚಿತ್ರ ನೋಡುವುದೆಂದರೆ ಅದ್ಯಾವುದೋ ಗುಹೆಯೊಳಗೆ ಕುಳಿತು ದೇವರ ದರ್ಶನವೇ ಸರಿ. ಆ ಸಿನೆಮಾ ಮಂದಿರದಲ್ಲೇ ಒಮ್ಮೆ ನನ್ನ ಕಾಲಕೆಳಗೆ ಹೆಗ್ಗಣವೊಂದು ಓಡಿಹೋಗಿ ನಾನು ಗಾಬರಿಯಾದದ್ದು ಇನ್ನೂ ನೆನಪಿದೆ. ಆ ಚಿತ್ರದುದ್ದಕ್ಕೂ ಪರದೆಯನ್ನು ಬಿಟ್ಟು ಕುರ್ಚಿಯಡಿಯ ಕತ್ತಲಲ್ಲೆಲ್ಲೋ ಕರಗಿಹೋದ ಹೆಗ್ಗಣದ ದಾರಿ ಕಾಯುತ್ತಿದ್ದೆ ನಾನು!

appa-book-20ಮುಂದೆ ನೆಲದಲ್ಲಿ ಕುಳಿತು ಊಟ ಮಾಡುತ್ತಿದ್ದ ಸ್ಥಳದಲ್ಲಿ ಡೈನಿಂಗ್ ಟೇಬಲ್ ಬಂತು, ನೆಲದಿಂದ ಮೇಜಿಗೆ ಬಂದರೂ ಒಟ್ಟಿಗೆ ಕುಳಿತು ಊಟ ಮಾಡುವುದು ಕಡಿಮೆಯಾಗುತ್ತಾ ಬಂತು. ೨೦೦೩ರಲ್ಲಿ ನಾನು ಮೊದಲಬಾರಿಗೆ ಮಂಗಳೂರು ಬಿಟ್ಟು ಪೂನಾ ಸೇರಿದೆ. ಮಂಗಳೂರೇನೂ ಸಣ್ಣ ಹಳ್ಳಿಯಲ್ಲ. ಆದರೂ ಅದು ದೊಡ್ಡ ಪಟ್ಟಣವಲ್ಲ ಎಂದು ನನಗೆ ಅರಿವಾಗಿದ್ದು ಪೂನಾ ಸೇರಿದಾಗಲೇ. ಒಂದು ದಿನ ಅಲ್ಲಿ ಗೆಳೆಯರು ಅದೇನೋ ಮಲ್ಟಿಪ್ಲೆಕ್ಸ್ ಅಂತ ತೋರಿಸೋದಕ್ಕೆ ಕರೆದುಕೊಂಡು ಹೋದರು. ಅದು ಏನು ಎಂದೇ ನನಗೆ ಗೊತ್ತಿರಲಿಲ್ಲ. ಅಲ್ಲಿ ಒಂದೇ ಕಟ್ಟಡದಲ್ಲಿ ನಾಲ್ಕು ಚಿತ್ರಮಂದಿರಗಳಿರುತ್ತವೆ ಎಂದು ಕೇಳಿ ನನಗೆ ಅಚ್ಚರಿಯಾಗಿತ್ತು. ಆಗಲೇ ಬೆಂಗಳೂರಿನಲ್ಲೂ ಇದು ಇತ್ತು. ಆದರೆ ನನಗೆ ಗೊತ್ತಿರಲಿಲ್ಲ ಅಷ್ಟೇ. ಬಿಟ್ಟ ಕಣ್ಣುಗಳಿಂದ ಅಲ್ಲಿನ ಮಾಯಾಲೋಕವನ್ನು ನೋಡಿದೆ. ಚಿತ್ರವೊಂದನ್ನು ನೋಡಿ ಬಂದೆ. ಅದೇ ದಿನ ರಾತ್ರಿ ಅಪ್ಪ-ಅಮ್ಮನಿಗೆ ದೂರವಾಣಿಸಿದ್ದೆ. ಮಂಗಳೂರಿನಲ್ಲಿ ಅಂದು ಜೋರು ಮಳೆ. ಧ್ವನಿ ಅಸ್ಪಷ್ಟವಾಗಿತ್ತು. ಅವರಿಗೆ ನನ್ನ ವರದಿ ಎಷ್ಟು ತಿಳಿಯಿತೋ ಇಲ್ಲವೋ ಗೊತ್ತಿಲ್ಲ. ಆದರೆ ನನ್ನ ಧ್ವನಿಯಲ್ಲಿನ ಉತ್ಸಾಹವನ್ನು ಕೇಳಿ ಅವರು ಸಂತೋಷಪಟ್ಟರು ಎಂದಷ್ಟು ನನಗೆ ನೆನಪಿದೆ. ಅದಾಗಿ ಒಂದು ವರ್ಷದ ನಂತರ ಮೊದಲಬಾರಿಗೆ ನಾನು ಓದುತ್ತಿರುವ ಸಂಸ್ಥೆಯನ್ನು ನೋಡಲೆಂದು ಅಪ್ಪ-ಅಮ್ಮ ಬಂದಿದ್ದರು. ಅಪ್ಪನಿಗೆ ಇದ್ದ ಕಾರು ಬಿಡುವ ಉತ್ಸಾಹದಿಂದಾಗಿ ಮಂಗಳೂರಿನಿಂದ ಪೂನಾದವರೆಗೂ ಕಾರು ಓಡಿಸಿಕೊಂಡು ಬಂದುಬಿಟ್ಟಿದ್ದರು ಅಪ್ಪ! ಹಿಂದಿರುಗುವಾಗ ನನಗೂ ಕಾರುಬಿಡಲು ಸಿಗಲಿದ್ದ ಕಾರಣ ನಾನು ಅದನ್ನು ವಿರೋಧಿಸಿರಲಿಲ್ಲ. ನನಗೆ ನನ್ನ ಸಣ್ಣ ಪ್ರಪಂಚವನ್ನು, ಹೊಸಪ್ರಪಂಚವನ್ನು ತೋರಿಸುವ ಆಸೆ. ಸರಿ, ಮಲ್ಟಿಪ್ಲೆಕ್ಸಿನಲ್ಲಿ ಒಂದು ಚಿತ್ರ ತೋರಿಸಲು ಅಪ್ಪ-ಅಮ್ಮಂದಿರನ್ನು ಕರೆದುಕೊಂಡು ಹೋದೆ.

ಇತ್ತೀಚೆಗೆ ಅವರು ಚಿತ್ರಮಂದಿರಕ್ಕೆ ಹೋಗಿ ಚಿತ್ರಗಳನ್ನು ನೋಡುವುದನ್ನು ನಿಲ್ಲಿಸಿಯೇ ಬಿಟ್ಟಿದ್ದರು. ಮಲ್ಟಿಪ್ಲೆಕ್ಸಿನ ಮೆಟ್ಟಿಲುಗಳನ್ನೇರುವಾಗ ಇದೆಲ್ಲಾ ನನಗೆ ಮಾಮೂಲು ಎನ್ನುವಂತೆ ನನ್ನ ವರ್ತನೆ ನನಗರಿವಿಲ್ಲದೆ ಮಾರ್ಪಾಡಾಗಿ ಕೃತಕವಾಗುತ್ತಾ ಹೋಯಿತು. ಆದರೆ ಅಪ್ಪ-ಅಮ್ಮನೊಡನೆ ಅಲ್ಲಿ ತಿರುಗಾಡುತ್ತಿರಬೇಕಾದರೆ, ಅಪ್ಪ-ಅಮ್ಮ ನನ್ನನ್ನು ಬೈಕಿನಲ್ಲಿ ಮಧ್ಯದಲ್ಲಿ ಕೂರಿಸಿಕೊಂಡು ಸಿನೆಮಾ ನೋಡಲು ಹೋಗುತ್ತಿದ್ದದ್ದು ನೆನಪಾಯಿತು. ಅಂತೂ ಸಿನೆಮಾ ಮಂದಿರದೊಳಗೆ ಹೋದೆವು. ಅಲ್ಲಿ ಅದೇನೋ ಕಾರಣಕ್ಕಾಗಿ ಅಮ್ಮನ ಶೂಸ್ ವಾಸನೆ ಬರತೊಡಗಿತು. ಚಿತ್ರ ಆರಂಭವಾಯಿತು. ಶಾರುಖ್ ಖಾನರ ‘ಮೆ ಹೂ ನಾ’ ಚಿತ್ರ ಅದು. ಸುತ್ತ ಮುತ್ತ ಕುಳಿತವರೆಲ್ಲಾ ಒಮ್ಮೆ ತಿರುಗಿ ಅಮ್ಮನೆಡೆಗೆ ನೋಡಿದರು. ಯಾರ ಕಾಲಿನಿಂದ ಬರುತ್ತಿರುವುದು ಈ ವಾಸನೆ ಎನ್ನುವಂತೆ. ಅಮ್ಮ ಬಹಳ ಬೇಸರಗೊಂಡಳು. ನಾನು ಛೇ! ಅದೇನಾಗುವುದಿಲ್ಲ ಬಿಡು ಎಂದು ಎಷ್ಟು ಹೇಳಿದರೂ ಕೇಳದೇ ಚಿತ್ರಮಂದಿರದಿಂದ ಎದ್ದು ಕಾಲು ತೊಳೆದು ಬರುತ್ತೇನೆ ಎಂದು ಹೊರಗೆ ಹೋದಳು. ಎಷ್ಟೋ ಹೊತ್ತು ಕಳೆದು ಮರಳಿ ಬಂದಳು. ಅಂದು ಇದೇನು ಹೀಗೆಲ್ಲಾ ಎಂದು ನಾನು ಅಂದುಕೊಂಡೆ. ಆದರೆ ಅಮ್ಮನಿಂದ ನಿಧಾನಕ್ಕೆ ದೂರವಾಗುತ್ತಾ ಸಾಗಿದ್ದ ನನಗೆ ಕಳೆದ ಕೇವಲ ಐದು ವರುಷಗಳಲ್ಲಿ ನನ್ನ ಪ್ರಪಂಚ ಬದಲಾಗಿದ್ದರ ಅರಿವೇ ಇರಲಿಲ್ಲ.

resize-of-dsc_7682ಜನರೇಷನ್ ಗ್ಯಾಪ್ ಎಂಬ ಶಬ್ದದ ಅರಿವಿದ್ದರೂ ನನ್ನ ಅನುಭವಕ್ಕೆ ಅದು ಬಂದದ್ದು ಈಗಲೇ ಆಗಿತ್ತು. ಜನರೇಷನ್ ಗ್ಯಾಪ್ ಎನ್ನುವುದು ತಂದೆ-ತಾಯಿ ಹಾಗೂ ಮಕ್ಕಳ ನಡುವೆ ಜಗಳವೇ ಆಗಬೇಕಿಲ್ಲ. ತಮ್ಮ ನಡುವಿನ ಯೋಚನಾ ವ್ಯತ್ಯಾಸಗಳನ್ನು ಗುರುತಿಸುವುದೂ ಆಗಬಹುದು ಎಂದು ನನಗೆ ಅರಿವಿಗೆ ಬಂದದ್ದು ಈಗಲೇ. ನಮ್ಮ ಮನೆಗೆ ಮೊದಲು ಕಂಪ್ಯೂಟರ್ ಬಂದಾಗ ನಾನು ಇನ್ನೂ ಹತ್ತನೇ ಕ್ಲಾಸ್ ಮುಗಿಸುತ್ತಿದ್ದೆ. ಅದರಲ್ಲಿ ‘ಎಂ.ಎಸ್. ಡಾಸ್’ ಹಾಗೂ ‘ವಿಂಡೋಸ್ ೩.೧’ ಇತ್ತು. ಕಂಪ್ಯೂಟರ್ ಬರುವ ಒಂದು ತಿಂಗಳ ಮೊದಲಿನಿಂದಲೇ ನನ್ನ ಅಮ್ಮ ತರಗತಿಗೆ ಹೋಗಿ ಕಂಪ್ಯೂಟರ್ ಬಳಕೆಯನ್ನು ಕಲಿತು ಬಂದಿದ್ದಳು. ಮುಂದೆ ಕಂಪ್ಯೂಟರ್ ಕಲಿಕೆಗೆ ನನಗೆ ಅಮ್ಮನೇ ಗುರು. ಆದರೆ ನನ್ನ ಪ್ರಾಯದ ವೇಗಕ್ಕೆ ಸರಿಯಾಗಿ ಅಮ್ಮ ಹೇಳಿಕೊಡದೇ ಇದ್ದಾಗ, ನಿನಗೆ ಹೇಳಿಕೊಡಲಿಕ್ಕೇ ಬರುವುದಿಲ್ಲ ಎಂದು ನಾನು ಅಸಡ್ಡೆ ಹೊಡೆಯಲು ಪಾಠಗಳು ನಿಂತವು! ಇಂದು ಕಂಪ್ಯೂಟರ್ ನನ್ನ ನಿತ್ಯದ ಉಸಿರಾಗಿದೆ. ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಬೆಂಗಳೂರಿನಿಂದ ಮಂಗಳೂರಿನಲ್ಲಿರುವ ಅಪ್ಪ-ಅಮ್ಮನೊಡನೆ ನಿತ್ಯ ಮಾತು ನಡೆಯುತ್ತದೆ. ಇದೆಲ್ಲಾ ಅಮ್ಮನಿಗೆ ಇನ್ನೂ ಬೆರಗು. ಆಗೀಗ ಅಮ್ಮ ತಮಾಷೆಯಾಗಿ ಇದೆಲ್ಲ ಏನಿದ್ದರೂ ನಿನಗೆ ಕಂಪ್ಯೂಟರ್ ಹೇಳಿಕೊಟ್ಟಿದ್ದು ನಾನೇ ತಾನೇ ಎಂದು ನಗುತ್ತಾಳೆ.

ಇದೇ ಜನರೇಷನ್ ಗ್ಯಾಪ್ ಎನ್ನುವ ಅರಿವಾದಾಗಿನಿಂದ ಅಪ್ಪ-ಅಮ್ಮ ಹಾಗೂ ನನ್ನ ನಡುವಿನ ಸಂಬಂಧಗಳನ್ನು ನೋಡುವ ಪರಿಯೇ ಬದಲಾಯಿತು. ಅವರು ತೆಗೆದು ಕೊಳ್ಳುವ ನಿರ್ಧಾರಗಳನ್ನು ನನ್ನ ಕಾಲದ ಪ್ರಸ್ತುತತೆಯ ಒರೆಗೆ ಹಚ್ಚಿ ನಿರ್ಧಾರಗಳನ್ನು ಮಾಡಿದಲ್ಲಿ, ಹಳೆ ಬೇರು ಹೊಸ ಚಿಗುರಿನ ಸಮಾಗಮವಾಗಿ ಮರ ಸೊಗಸಾಗುತ್ತದೆ. ಎಲ್ಲೋ ಓದಿದ ನೆನಪು, ಮಗು ಮೊದಲಿಗೆ ಮಾತನಾಡಲು ಕಲಿತಾಗ ನನ್ನ ಅಮ್ಮ ಏನು ಹೇಳ್ತಾಳೆ ಅಂದ್ರೆ… ಎಂದು ಹೇಳುತ್ತಂತೆ. ಮತ್ತೆ ಶಾಲೆಗೆ ಹೋಗಲಾರಂಭಿಸಿದಾಗ ಅಮ್ಮ ಅಪ್ರಸ್ತುತಳಾಗಿ, ನನ್ನ ಟೀಚರ್ ಏನು ಹೇಳ್ತಾರೆ ಅಂದ್ರೆ… ಎಂದು ಮಗು ಹೇಳುತ್ತದೆ. ಮತ್ತೆ ಕಾಲೇಜಿಗೆ ಬರುತ್ತಲೇ… ನನ್ನ ಫ್ರೆಂಡ್ಸ್ ಏನು ಹೇಳ್ತಾರೆ ಅಂದ್ರೆ ಎನ್ನುತ್ತದೆ ಮಗು. ಮುಂದೆ ಜೀವನವಿಡೀ ನಾನು ಏನು ಹೇಳುತ್ತೇನೆ ಎಂದರೆ ಎನ್ನುವ ಪ್ರಯತ್ನ ಮಾಡುತ್ತಾನೆ ಮಾನವ. ಅಷ್ಟರಲ್ಲಾಗಲೇ ಜಗತ್ತಿನಲ್ಲಿ ನನ್ನ ಅಪ್ಪ ಏನು ಹೇಳ್ತಾರೆ ಅಂದ್ರೆ ಎನ್ನುವ ಮಕ್ಕಳು ತುಂಬಿರುತ್ತಾರೆ!

Share This