ಕರ್ನಾಟಕದಲ್ಲಿ ಕಳೆದ ವರ್ಷ ನೂರಕ್ಕೂ ಹೆಚ್ಚು ಚಲನ ಚಿತ್ರಗಳು ನಿರ್ಮಿಸಲ್ಪಟ್ಟವು. ಹಾಗೇ ತಮಿಳು, ತೆಲುಗು, ಮಲಯಾಳ, ಹಿಂದಿ, ಭೋಜ್ ಪುರಿ, ಪಂಜಾಬಿ, ಅಸ್ಸಾಮಿ ಹೀಗೆ ಅನೇಕಾನೇಕ ಭಾಷೆಗಳಲ್ಲೂ ಚಿತ್ರಗಳು ನಿರ್ಮಿಸಲ್ಪಟ್ಟಿರುತ್ತವೆ. ಇನ್ನು ದೇಶ ವಿದೇಶಗಳಲ್ಲೂ ಸೇರಿಸಿದರೆ ಒಟ್ಟು ಒಂದು ವರ್ಷಕ್ಕೆ ಕನಿಷ್ಟ ಹತ್ತಾರು ಸಾವಿರ ಸಿನೆಮಾಗಳಾದರೂ ನಿರ್ಮಿಸಲ್ಪಡಬಹುದಷ್ಟೇ? ಪುಸ್ತಕಗಳಿಗೆ ಇರುವಂತೆ ಇವುಗಳಿಗೂ ಒಂದು ಸಂಗ್ರಹಾಲಯ (ಲೈಬ್ರರಿ ರೀತಿಯದ್ದು) ಇರಬೇಕು ತಾನೇ? ಇವತ್ತು ಅವುಗಳ ಕುರಿತಾಗಿ ಒಂದಷ್ಟು ಮಾತು. ಪ್ರತಿಯೊಂದು ದೇಶವೂ ತನ್ನಲ್ಲಿ ರೂಪುಗೊಳ್ಳುವ ಉತ್ತಮ ಚಿತ್ರಗಳ ಸಂಗ್ರಹವನ್ನು ಕಾಯ್ದುಕೊಳ್ಳಲು ರಾಷ್ಟ್ರೀಯ ಚಲನಚಿತ್ರ ಸಂಗ್ರಹಾಲಯವನ್ನು ನಡೆಸುತ್ತದೆ. ಭಾರತವೂ ಇಂಥಾದ್ದೊಂದನ್ನು ಪೂನಾದಲ್ಲಿ ನಡೆಸುತ್ತಿದೆ.

National Film Archive of India ಎಂಬ ಹೆಸರಿನ ಈ ಸಂಸ್ಥೆಯಲ್ಲಿ ಭಾರತದಲ್ಲಿ ರೂಪುಗೊಂಡ ಅತ್ಯುತ್ತಮ ಚಿತ್ರಗಳು ಹಾಗೂ ಇತರ ದೇಶಗಳ ಆಯ್ದ ಕೆಲವು ಶ್ರೇಷ್ಟ ಕೃತಿಗಳ ಪ್ರತಿಗಳು ಇರುತ್ತವೆ. ಭಾರತದಲ್ಲಿ ರೂಪುಗೊಂಡ ಉತ್ತಮ ಚಿತ್ರಗಳಿಗೆ ಮಾನದಂಡ ಯಾವುದು? ಪ್ರತಿವರುಷ ಕೇಂದ್ರ ಸರಕಾರ ನಡೆಸುವ ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಭಾರತೀಯ ಪನೋರಮಾಕ್ಕೆ ಆಯ್ಕೆಯಾದ ಚಿತ್ರಗಳು, ರಾಷ್ಟ್ರಪ್ರಶಸ್ತಿ ಪಡೆದ ಚಿತ್ರಗಳು ಹೀಗೆ ಕೇಂದ್ರ ಸರಕಾರದಿಂದ ಆಯ್ಕೆಯಾದ, ಗಮನಿಸಲ್ಪಟ್ಟ ಚಿತ್ರಗಳನ್ನು ಈ ಸಂಗ್ರಹಾಲಯದಲ್ಲಿ ಇಡಲಾಗುತ್ತದೆ. ಜೊತೆಗೆ ಇಂಥಾ ಯಾವುದೇ ಮನ್ನಣೆ ಇಲ್ಲದೆಯೂ, ಚಾರಿತ್ರಿಕ ಅಗತ್ಯಗಳಿಗಾಗಿಯೂ ಅನೇಕ ಚಿತ್ರಗಳನ್ನು ಗುರುತಿಸಿ ಸಂಗ್ರಹಿಸಿಡಲಾಗುತ್ತದೆ ಇಲ್ಲಿ.

ಅನೇಕ ಸಹಸ್ರ ಚಿತ್ರಗಳನ್ನು ಒಂದೆಡೆ ಸಂಗ್ರಹಿಸಿಡುವಾಗ ಅದಕ್ಕೆ ಹವಾನಿಯಂತ್ರಣ ವ್ಯವಸ್ಥೆ, ವ್ಯವಸ್ಥಿತವಾದ ವಿಂಗಡಣೆ ಹಾಗೂ ದಾಖಲೀಕರಣ ಇತ್ಯಾದಿಗಳನ್ನು ನಡೆಸಲಾಗುತ್ತದೆ. ಕೆಲವು ಅಪರೂಪದ ಚಿತ್ರಗಳನ್ನು ಹುಡುಕಿ ಬರುವ ಸಂಶೋಧಕರ ಅನುಕೂಲಕ್ಕೆ ಈ ಸಂಗ್ರಹಾಲಯಗಳು ಸದಾ ತೆರೆದಿರುತ್ತವೆ. ಪೂನಾದಲ್ಲಿರುವ ಸಂಗ್ರಹಾಲಯದಲ್ಲಿ ಒಂದು ದೊಡ್ಡದಾದ ಹಾಗೂ ಮತ್ತೊಂದು ಸಣ್ಣ ಚಿತ್ರ ಪ್ರದರ್ಶನ ಪರದೆಗಳಿವೆ. ಇಲ್ಲಿ ನಿಯಮಬದ್ಧ ಹಣವನ್ನು ಪಾವತಿಸಿ ಚಿತ್ರ ನೋಡುವ ವ್ಯವಸ್ಥೆ ಮಾಡಿಕೊಳ್ಳಬಹುದಾಗಿದೆ. ಭಾರತೀಯ ಚಲನ ಚಿತ್ರಗಳ ಇತಿಹಾಸವನ್ನು ಶೋಧಿಸುವವರಿಗೆ ಇದೊಂದು ಪ್ರಮುಖ ಆಕರ.

ಇನ್ನು Film and Television Institute of Indiaದ ವಿದ್ಯಾರ್ಥಿಗಳಾಗಿದ್ದ ನಮಗೆ ಚಲನ ಚಿತ್ರಗಳನ್ನು ನೋಡುವುದೂ ಪಠ್ಯದ ಒಂದು ಅಂಗವೇ ತಾನೇ? ನಮ್ಮ ಶಾಲೆಯ ಪಕ್ಕದಲ್ಲೇ ಈ ಚಲನ ಚಿತ್ರ ಸಂಗ್ರಹಾಲಯ ಇರುವುದು. ಅನೇಕ ವರುಷಗಳ ಹಿಂದೆ ಈ ಎರಡೂ ಸಂಸ್ಥೆಗಳೂ ಒಂದೇ ಆಡಳಿತಕ್ಕೆ ಒಳಪಟ್ಟಿತ್ತಂತೆ. ಆದರೆ ಇಂದು ಇವೆರಡೂ ಸ್ವತಂತ್ರ ಸಂಸ್ಥೆಗಳೇ ಆಗಿವೆ. ಆದರೂ ಇವೆರಡರ ನಡುವಿನ ಬಾಂಧವ್ಯ ತೀರಾ ಆಪ್ತವಾದದ್ದೇ ಆಗಿದೆ. ವಿದ್ಯಾರ್ಥಿಗಳಿಗೆ ವಾರದ ನಾಲ್ಕು ದಿನ ಈ ಸಂಗ್ರಹಾಲಯದಲ್ಲೂ ಮತ್ತೆ ಮೂರು ದಿನ ನಮ್ಮದೇ ಪ್ರದರ್ಶನಾಲಯದಲ್ಲೂ ಸಂಜೆಯ ಚಿತ್ರ ಪ್ರದರ್ಶನ ನಡೆಯುತ್ತವೆ. ವಿಶ್ವದ ಮೂಲೆ ಮೂಲೆಗಳ ಅಧ್ಬುತ ಚಿತ್ರಗಳನ್ನು ನೋಡಿ ಕಲಿಯುವ ಪರಿ ಅನನ್ಯವಾದದ್ದು. ಈ ಅವಕಾಶ ನಮ್ಮ ಚಿತ್ರಶಾಲೆಯ ವಿದ್ಯಾರ್ಥಿಗಳಿಗೆ ಉಚಿತವಾಗಿ ಲಭ್ಯವಿರುತ್ತದೆ!

ಇನ್ನು ಈ ಸಂಸ್ಥೆ, ಚಿತ್ರಶಾಲೆಯ ಒಡಗೂಡಿ ಅನೇಕ ವರುಷಗಳಿಂದ ಚಲನ ಚಿತ್ರ ರಸಗ್ರಹಣ ಶಿಬಿರವನ್ನು ಪ್ರತಿ ಬೇಸಿಗೆಯಲ್ಲಿ ನಡೆಸುತ್ತದೆ. ಇದರ ಫಲವನ್ನು ನಮ್ಮ ದೇಶದಾದ್ಯಂತ ಅನೇಕ ಜನರು ಪಡೆದಿದ್ದಾರೆ. ಈ ವರುಷದ ರಸಗ್ರಹಣ ಶಿಬಿರ ಇನ್ನೇನು ಆರಂಭವಾಗಲಿದೆ. ಇಲ್ಲಿಗೆ ದೇಶದ ಮೂಲೆ ಮೂಲೆಗಳಿಂದ ಚಿತ್ರ ತಜ್ಞರು, ಕಲಾವಿದರು ಬರುತ್ತಾರೆ. ಅನೇಕ ಉತ್ತಮ ಚಿತ್ರಗಳನ್ನು ತೋರಿಸಲಾಗುತ್ತದೆ ಮತ್ತು ಅವುಗಳ ಕುರಿತಾಗ ಸುದೀರ್ಘ ಚರ್ಚೆ ನಡೆಯುತ್ತದೆ. ದೇಶದಲ್ಲಿ ಚಲನ ಚಿತ್ರಗಳ ಕುರಿತಾಗಿ ಜಾಗೃತಿ ಮೂಡಿಸುವ ಪ್ರಯತ್ನ ಇದು. ಆದರೆ ವರುಷಕ್ಕೊಮ್ಮೆ ಪೂನಾದಲ್ಲಿ ನಡೆಯುವ ಈ ಶಿಬಿರವೊಂದೇ ನಮ್ಮ ದೇಶದ ಉದ್ದಗಲಗಳಿಗೆ ತಲುಪುವುದು ಕಷ್ಟ ಸಾಧ್ಯ ತಾನೇ? ಹೀಗಾಗಿ ಪೂನಾದಲ್ಲಿನ ಶಿಬಿರದಲ್ಲಿ ಪಾಲುಗೊಳ್ಳುವವರು ಮರಳಿ ತಮ್ಮ ಕ್ಷೇತ್ರಕ್ಕೆ ಹೋದ ಮೇಲೆ ಅಲ್ಲಿ ತಾವೇ ಸ್ವತಂತ್ರವಾಗಿ ಕಲಿಕಾ ಕೇಂದ್ರಗಳಾಗಬೇಕು ಎನ್ನುವುದು ಈ ಶಿಬಿರದ ಉದ್ದೇಶವಾಗಿದೆ. ಹೀಗಾಗಿ ಶಿಬಿರಾರ್ಥಿಗಳ ಆಯ್ಕೆಯ ಸಂದರ್ಭದಲ್ಲಿ ಶಿಕ್ಷಕರಿಗೆ, ಮಾಧ್ಯಮ ವಿದ್ಯಾರ್ಥಿಗಳಿಗೆ, ಚಿತ್ರ ಕಲಾವಿದರಿಗೆ ಸ್ವಲ್ಪ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. www.nfaipune.nic.in ಎಂಬ ಇ-ತಾಣಕ್ಕೆ ತಾವು ಭೇಟಿ ಇತ್ತಲ್ಲಿ ಈ ಸಂಗ್ರಹಾಲಯದ ಕುರಿತಾಗಿ ಮತ್ತು ಅದರ ಚಟುವಟಿಕೆಗಳ ಕುರಿತಾಗಿ ನೀವು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದಾಗಿದೆ ಮತ್ತು ಅವುಗಳಲ್ಲಿ ಭಾಗಿಗಳಾಗಬಹುದಾಗಿದೆ.

Share This