ಅತುಲ್ ಕುಲಕರ್ಣಿ ನಟಿಸಿರುವ, ಮರಾಠೀ ‘ನಟರಂಗ್’ ಎಂಬ ಚಿತ್ರದ ಪ್ರದರ್ಶನವನ್ನು ಅದರ ನಿರ್ಮಾಪಕರಾದ ಝೀ ಮರಾಠೀ ವಾಹಿನಿಯವರು ಇತ್ತೀಚೆಗೆ ಬೆಂಗಳೂರಿನಲ್ಲಿ ಏರ್ಪಡಿಸಿದ್ದರು. ಅದನ್ನು ನೋಡಲು ಗೆಳೆಯರಾದ ಪರಮೇಶ್ವರ್ ಕರೆದಿದ್ದರು (ಇವರು ಝೀ ಕನ್ನಡವಾಹಿನಿಯಲ್ಲಿ ಕಥಾ ವಿಭಾಗದ ಮುಖ್ಯಸ್ಥರು). ಅಂದು ನಟರಾದ ಅತುಲ್ ಕುಲಕರ್ಣಿ ಹಾಗೂ ನಾನಾ ಪಾಟೇಕರ್ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದರು. ಚಿತ್ರ ಮಹಾರಾಷ್ಟ್ರದ ಜನಪದ ಕಲೆ ತಮಾಷಾ ಹಿನ್ನೆಲೆಯಲ್ಲಿ ಬಂದಿರುವ ಈ ಚಿತ್ರ ಮಹಾರಾಷ್ಟ್ರದ ಖ್ಯಾತ ಲೇಖಕ ಆನಂದ್ ಯಾದವ್ ಅವರ ಕಾದಂಬರಿ ಆಧಾರಿತವಾಗಿದೆ. ಈ ಚಿತ್ರವನ್ನು ಸ್ವತಃ ಅತುಲ್ ಕುಲಕರ್ಣಿ, ನಾನಾ ಪಾಟೇಕರರಂಥಾ ದಿಗ್ಗಜರೊಡನೆ ನೋಡುವ ಅವಕಾಶ ನನಗೆ ಒದಗಿ ಬಂತು. ಪ್ರದರ್ಶನಕ್ಕೆ, ಕನ್ನಡ ಚಿತ್ರರಂಗದ, ರಮೇಶ್ ಅರವಿಂದ್, ಚೇತನ್, ಯೋಗೇಶ್ ಹೀಗೆ ಹಲವು ಪ್ರಸಿದ್ಧರು ಬಂದಿದ್ದರು.

ಈ ಸಿನೆಮಾ ತಮಾಷಾ ಎನ್ನುವ ಜನಪದ ಕಲೆಯ ಸುತ್ತ ತಿರುಗುತ್ತದೆ. ಗುಣ ಎನ್ನುವ ಹಿಂದುಳಿದ ಸಮಾಜದ ವ್ಯಕ್ತಿಯೊಬ್ಬನ ಸಾಹಸಗಾಥೆ ಈ ಸಿನೆಮಾ. ಆತ ವೃತ್ತಿಯಲ್ಲಿ ಏನೇ ಆಗಿದ್ದರೂ ಪ್ರವೃತ್ತಿ ಮತ್ತು ಹೃದಯದಲ್ಲಿ ಅಪ್ಪಟ ಕಲಾವಿದ. ಊರಿನಲ್ಲಿ ಬಾವಿಯಿಂದ ನೀರೆತ್ತುವ ಕೆಲಸ ಮಾಡುವ ಈತ ಹಾಗೂ ಇವನಂತೆಯೇ ಇನ್ನೊಂದಷ್ಟು ಜನರು ಬಾವಿಗೆ ಮೋಟಾರ್ ಪಂಪ್ ಬಂದು ಕೆಲಸ ಕಳೆದು ಕೊಂಡು ಹತಾಷರಾಗಿ ಕುಳಿತಿರಲು, ಒಬ್ಬ ಊಟಕ್ಕೆ ದುಡ್ಡಿಲ್ಲ, ಇನ್ನೊಬ್ಬ ಬಟ್ಟೆಗೆ ದುಡ್ಡಿಲ್ಲ, ಮತ್ತೊಬ್ಬ ಮನೆ ರಿಪೇರಿಗೆ ದುಡ್ಡಿಲ್ಲ ಎಂದು ಹಲುಬುತ್ತಿರಲು, ಗುಣ ಅಯ್ಯೋ! ದುಡ್ಡಿಲ್ಲದೇ ನಾನು ತಮಾಷಾ ನೋಡಲು ಹೇಗೆ ಹೋಗಲಿ ಎಂದು ಕೊರಗಿ ಊರವರ ಅಚ್ಚರಿಯ ದೃಷ್ಟಿಗೆ ಗುರಿಯಾಗುವುದು ಅವನೊಳಗಿನ ಕಲಾವಿದನಿಗೊಂದು ಕನ್ನಡಿ. ಈ ಗುಣ ಊರಿನ ಕುಸ್ತಿಪಟುಗಳಲ್ಲು ಒಬ್ಬ. ದೇಹದಾರ್ಢ್ಯ ಹಾಗೂ ತನ್ನ ಹುರಿಮೀಸೆಗೆ ಪ್ರಸಿದ್ಧ ಈತನಿಗೆ ಕೆಲಸ ಕಳೆದುಕೊಂಡಾಗ ಅದಕ್ಕೆ ಒಂದೇ ಪರ್ಯಾಯ ಕಾಣುವುದು, ತನ್ನದೇ ಆದ ತಮಾಷಾ ತಂಡವನ್ನು ಕಟ್ಟುವುದು! ಕೆಲವು ಹತಾಷ ಗೆಳೆಯರಿಂದ ಅವನಿಗೆ ಪ್ರೋತ್ಸಾಹವೂ ಸಿಕ್ಕೇ ಬಿಡುತ್ತದೆ. ಅವರನ್ನೆಲ್ಲಾ ಸೇರಿಸಿಕೊಂಡು ಒಂದು ತಂಡ ಕಟ್ಟಲು ಗುಣ ಹೊರಟೇ ಬಿಡುತ್ತಾನೆ! ತಂಡ ಕಟ್ಟುವ, ಅವರು ಅಭ್ಯಾಸ ಮಾಡುವ ಚಿತ್ರಣವೆಲ್ಲಾ ಮುದನೀಡುವಂತೆ ಚಿತ್ರಿಸಲಾಗಿದೆ. ಇಷ್ಟರಲ್ಲಿ ಚಿತ್ರ ಒಂದು ಮುಖ್ಯ ತಿರುವನ್ನು ಪಡೆಯುತ್ತದೆ. ತಂಡದಲ್ಲಿ ಆಕರ್ಷಣೆಯಾಗಿ ನಪುಂಸಕನೊಬ್ಬನ ಪಾತ್ರವಿದ್ದರೇ ತಮಾಷಾಕ್ಕೆ ನಿಜವಾದ ಕಳೆ ಅದಿಲ್ಲದೇ ಪ್ರದರ್ಶನ ಸಾಧ್ಯವಿಲ್ಲ ಎನ್ನುವ ತಂಡದ ಅಭಿಪ್ರಾಯಕ್ಕೆ, ಗುಣನೇ ಬಲಿಯಾಗಬೇಕಾಗುತ್ತದೆ. ರಾಜ ನಟನಾಗಬೇಕು ಎಂದು ಆಸೆ ಪಟ್ಟಿದ್ದ ಗುಣನಿಗೆ ಈಗ ನಪುಂಸಕನ ಪಾತ್ರ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ!

ಕೊಬ್ಬಿದ್ದ ತನ್ನ ದೇಹವನ್ನಿಳಿಸಿಕೊಂಡು ಹೆಂಗಸರ ನಡೆ-ನುಡಿಗಳನ್ನು ಅನುಸರಿಸಿ ಗುಣ – ಅರ್ಧನಾರಿಯಾಗುತ್ತಾನೆ! ಹೀಗೆ ಕಲೆಗಾಗಿ ನಪುಂಸಕನ ವೇಷ ಹೊತ್ತವನಿಗೆ, ಕಲೆಯ ಕಡೆಗಿನ ನಿಷ್ಟೆ, ಸಮಾಜದಿಂದ ಅವನ ಕಲೆಗೆ ಸಿಗುವ ತಿರಸ್ಕಾರಗಳೆರಡರ ನಡುವೆ ಜೀವನ ಛಿದ್ರವಾಗುತ್ತಾ ಸಾಗುವುದು ಕಣ್ಣೆದುರಿನ ತಮಾಷಾದಂತೆ ನಡೆಯುತ್ತಾ ಸಾಗುತ್ತದೆ. ಈ ಸಿನೆಮಾ ನೋಡುತ್ತಿದ್ದಂತೆಯೇ,ನನಗೆ ನಮ್ಮಲ್ಲಿನ ಯಕ್ಷಗಾನದ ನೆನಪಾಯಿತು. ಹಿಂದೆ ಯಕ್ಷೋತ್ತಮ ಎಂಬ ಸಣ್ಣ ಚಿತ್ರ ನಿರ್ಮಾಣಕ್ಕಾಗಿ ಅನೇಕ ಹಿರಿಯ ಯಕ್ಷಗಾನ ಕಲಾವಿದರು, ಗುರುಗಳು, ಪಂಡಿತರೊಡನೆ ಮಾತನಾಡಿದಾಗ ತಿಳಿದ ಅನೇಕ ನೆನಪುಗಳು ಮರುಕಳಿಸಿತು. ಯಕ್ಷಗಾನದಂಥಾ ಕಲೆಗಳಲ್ಲಿ ಹೆಣ್ಣಿನ ಪಾತ್ರವನ್ನು ಇಂದಿನವರೆಗೂ ಪುರುಷರೇ ವಹಿಸುತ್ತಿರುವುದು. ಇತ್ತೀಚೆಗೆ ಕೆಲವು ಮಹಿಳಾ ಕಲಾವಿದರು, ಮಹಿಳಾ ತಂಡಗಳು ಚಾಲ್ತಿಗೆ ಬಂದಿದ್ದರೂ, ಅವುಗಳಲ್ಲಿ ಬಹುತೇಕ ಎಲ್ಲವೂ ಪ್ರಯೋಗ ರಂಗಭೂಮಿಯ ನೆಲೆಯಲ್ಲೇ ನಿಂತು ಬಿಟ್ಟಿವೆ. ಹಿಂದೆ ಪುರುಷರೇ ಹೆಣ್ಣಾಗಿ ನಟಿಸುತ್ತಿರಲು, ಅವರ ಹಾವ-ಭಾವ-ಭಂಗಿಗಳು ನಿಧಾನಕ್ಕೆ ಮೃದುವಾಗುತ್ತಾ ಅವರು ಹೆಣ್ಣುಗಳಂತೆಯೇ ಜೀವಿಸಲಾರಂಭಿಸುತ್ತಿದ್ದರು. ಊರಿನ ಧನಿಕರು ಅವರನ್ನು ತಮ್ಮ ವಿಕೃತ ಕಾಮಕ್ಕೆ ಬಳಸಿಕೊಂಡ ಕಥೆಗಳು ಇತ್ಯಾದಿಗಳು, ಜನಪದ ಕಲಾವಿದರ ಕುರಿತಾಗಿ ಸಮಾಜದವರಿಗಿದ್ದ ಉಪೇಕ್ಷೆಗೆ ಕಾರಣವಾಗುತ್ತಾ ಸಾಗಿತ್ತು. ಯಕ್ಷಗಾನವನ್ನೋ ಅಥವಾ ಕಂಪನಿ ನಾಟಕವನ್ನೋ ನೋಡಲು ಊರವರೆಲ್ಲಾ ಬರುತ್ತಿದ್ದರೂ, ದುಡ್ಡಿನ ಹೊಳೆ ಹರಿಸುತ್ತಿದ್ದರೂ, ಆ ಕಲಾವಿದರನ್ನು ಸಮಾಜದಲ್ಲಿ ತಮ್ಮ ಮನೆಯವರನ್ನಾಗಿ ನೋಡಲು ಯಾರೂ ಬಯಸುತ್ತಿರಲಿಲ್ಲ! ಅನಿವಾರ್ಯತೆಯಿಂದಲೋ, ಕಲೆಯ ಮೇಲಣ ಪ್ರೇಮದಿಂದಲೋ ಹೆಣ್ಣಾಗಿ ಅಭಿನಯಿಸುವ ಪುರುಷನ ಪ್ರಪಂಚದ ಪತನವನ್ನು ಯಕ್ಷಗಾನ, ತಮಾಷಾದಂಥಾ ಕಲೆಗಳ ಹಿರಿಯ ಕಲಾವಿದರು ನೋವಿನಿಂದಲೇ ನೆನಪಿಸುತ್ತಾರೆ.

ನಟರಂಗದಲ್ಲಿ, ಗುಣ ತನ್ನ ತಂಡವನ್ನು ಕಟ್ಟಿ, ತಾನೇ ನಪುಂಸಕನಾಗಿ ನಟಿಸಿ ತನ್ನ ಕುಟುಂಬದಿಂದ, ಸಮಾಜದಿಂದ ಬಹಿಷ್ಕಾರಗೊಂಡರೂ, ಚಿತ್ರದ ಕೊನೆಯಲ್ಲಿ ಕಲಾವಿದನಾಗಿಯೇ ಬಾಳುವ ಕನಸುಹೊತ್ತು ಮುನ್ನಡೆಯುತ್ತಾನೆ. ಒಂದು ಹಂತದಲ್ಲಿ ಅವನ ಆ ಬಾಳನ್ನು ಕಂಡು, ಹೆದರಿ ಅವನನ್ನು ತಿರಸ್ಕರಿಸಿದ್ದ ಅವನದೇ ತಮಾಷಾ ತಂಡದ ನಾಯಕಿ ಈಗ ಅವನೊಡನೆ ಜೀವನ ಸಾಗಿಸುವ ಆಸೆಯಲ್ಲಿ ಅವನ ಹಿಂದೆ ನಡೆಯುತ್ತಾಳೆ. ಚಿತ್ರ ಆರಂಭವಾಗುವುದು ಮತ್ತು ಕೊನೆಯಾಗುವುದು ಗುಣ ಒಂದು ಉನ್ನತ ಪ್ರಶಸ್ತಿಗೆ ಪಾತ್ರನಾಗುವ ಸನ್ನಿವೇಷದಲ್ಲಿ. ಜೀವನ ಸಾಧನೆಗೆ ಸಿಗುವ ಪ್ರಶಸ್ತಿ ಆತನಿಗೆ, ಅವನ ಕಲೆಗೆ, ಜೀವನ ಸಾಧನೆಗಾಗಿ ಸಿಕ್ಕಿರುತ್ತದೆ.

ಕಲಾವಿದನಾಗಿ ಅತುಲ್ ಕುಲಕರ್ಣಿ ಈ ಚಿತ್ರಕ್ಕಾಗಿ ಹಾಕಿರುವ ಶ್ರಮ ಅಪಾರ. ಅವರು ದೇಹವನ್ನು ಬೆಳೆಸಿ ಎಂಭತ್ತೈದು ಕೆ.ಜಿವರೆಗೆ ಬೆಳೆಸಿಕೊಂಡು ಮತ್ತೆ ಚಿತ್ರದಲ್ಲಿ ಅವರು ಹೆಣ್ಣಾಗಿ ಪರಿವರ್ತಿತರಾದಾಗಿನ ನಟನೆಗಾಗಿ ಹದಿನೈದು ಕೆ.ಜಿ ಇಳಿಸಿಕೊಂಡಿರುವುದು ಇವೆಲ್ಲಾ ಒಂದು ಭಾಗವಾದರೆ, ಹೆಣ್ಣಿನ ಹಾವಭಾವಗಳ ಅಧ್ಯಯನ, ನಟನೆಯ ಶೈಲಿ ಬದಲಾವಣೆ ಇತ್ಯಾದಿ ಕಲಾವಿದನಾಗಿ ಅತುಲ್ ರಿಗೆ ಇರುವ ಶ್ರದ್ಧೆಯನ್ನು ಎತ್ತಿತೋರಿಸುತ್ತದೆ. ಇನ್ನು ಇತರ ಕಲಾವಿದರೂ ಒಬ್ಬರಿಗಿಂತ ಒಬ್ಬರು ಪೈಪೋಟಿಯಲ್ಲಿ ನಟಿಸಿ ಚಿತ್ರಕ್ಕೆ ಅಂದವನ್ನು ತಂದುಕೊಟ್ಟಿದ್ದಾರೆ. ಒಟ್ಟಿನಲ್ಲಿ ಒಂದು ಅಪರೂಪದ ಚಿತ್ರವನ್ನು ನೋಡುವ ಅವಕಾಶವಾಯಿತು ‘ನಟರಂಗ್’ ಮೂಲಕ.

Share This