ನೆನಪಿನ ರೀಲಿನಲ್ಲಿ ವೆಂಕಟನ ಲೌ ಸೀನ್!

ಬಹಳ ಕಾಲ ಹಿಂದಿನ ಮಾತು. ಹೈಸ್ಕೂಲಿನಲ್ಲಿ ಓದುತ್ತಿದ್ದೆ ಆಗ. ಕನ್ನಡ ಮಾಧ್ಯಮದ ಬಡ ಮಕ್ಕಳು ನಾವು! ಆದರೆ ಮಂಗಳೂರಿನ ಶಾಂತ-ನಿರ್ಮಲ ವಾತಾವರಣದಲ್ಲಿ ಬೆಳೆಯುತ್ತಿದ್ದೆವು. ಮಂಗಳೂರೇ ನಮಗೆ ಸ್ವರ್ಗ. ಅದೊಂದು ದೊಡ್ಡ ಪಟ್ಟಣ ನಮಗೆ. ಆಗಿನ್ನೂ ನಾನು ಬೆಂಗಳೂರು, ಮುಂಬೈ, ಹೈದರಾಬಾದ್, ಮದರಾಸ್ ನೋಡಿರಲಿಲ್ಲ. ನಾವು ಹತ್ತನೇ ಕ್ಲಾಸಿನಲ್ಲಿ ಇರಬೇಕಾದರೆ ನನ್ನ ಸಹಪಾಠೀ ವೆಂಕಟರಮಣನಿಗೆ (ಹೆಸರು ಬದಲಿಸಿದ್ದೇನೆ) ಒಬ್ಬಾಕೆ ಗರ್ಲ್ ಫ್ರೆನ್ಡ್ ಇದ್ದಳು ಎಂದು ಕ್ಲಾಸಿನಲ್ಲೆಲ್ಲಾ ಗುಸುಗುಸು. ಅವನೋ ಮೂಗು ಮೇಲೆ ಮಾಡಿ ಆ ಸುದ್ದಿಗಳೆಲ್ಲಾ ತೀರಾ ಮಾಮೂಲು ಎನ್ನುವಂತೆ ನಡೆದಾಡುತ್ತಿದ್ದ. ಹುಡುಗಿಯರನ್ನು ಕಂಡರೆ ನಾಚಿ ನೀರಾಗುತ್ತಿದ್ದ ನಾವೆಲ್ಲಾ ಅವನಂತೆ ನಾವಿರಬಾರದಿತ್ತೇ ಎಂದು ನಮ್ಮ ಅದೃಷ್ಟ ಹಳಿದುಕೊಳ್ಳುತ್ತಿದ್ದೆವು. ಅದೊಂದು ದಿನ ವೆಂಕಟರಮಣ ಹೈಸ್ಕೂಲಿನ ಹಿಂದಿನ ಕೆಳಗೆ ಇಳಿಯುವ ಮೆಟ್ಟಿಲುಗಳ ಬದಿಯಲ್ಲಿ ತನ್ನ ಪ್ರೇಮಿಕೆಯೊಂದಿಗೆ ಕುಳಿತಿದ್ದಾನೆ ಎಂದು ನಮ್ಮಲ್ಲಿ ಕೆಲವರಿಗೆ ಸುದ್ದಿ ತಿಳಿಯಿತು. ಕುತೂಹಲ ತಡೆಯಲಾರದೇ ಅತ್ತ ಓಡಿದೆವು. ಅಲ್ಲೇ ಸ್ವಲ್ಪ ದೂರದಲ್ಲಿ ಒಂದಷ್ಟು ಹುಡುಗರು ನಿಂತು ಇಣುಕುತ್ತಿದ್ದದ್ದು ಕಂಡು ಬಂತು. ಅದನ್ನು ನೋಡಿ ನಾವೇ ಇಲ್ಲಿಗೆ ಮೊದಲು ಬಂದವರಲ್ಲ ಎಂದು ಸ್ವಲ್ಪ ಬೇಸರವಾಯಿತು. ಆದರೂ ಕುತೂಹಲದಿಂದ ಅಲ್ಲೇ ನಿಂತು ಕತ್ತು ಉದ್ದ ಮಾಡಿ ದೂರದಲ್ಲಿ ಕುಳಿತಿದ್ದ ಪ್ರೇಮಿಗಳನ್ನು ನೋಡಿದೆವು. ಹೌದು! ಅದು ವೆಂಕಟರಮಣನೇ! ಅವನ ಬಳಿ ಒಬ್ಬ ಸುಂದರ ಹುಡುಗಿ! ಅವಳಿಗೂ ಬಹುಷಃ ಅವನದೇ ಪ್ರಾಯ ಇರಬೇಕು. ನಾವು ನೋಡುತ್ತಿದ್ದೇವೆ ಎಂದು ವೆಂಕಟರಮಣನಿಗೆ ಅರಿವಾಯಿತೋ ಏನೋ ಅವನು ಇನ್ನಷ್ಟು ಆಕೆಯ ಬಳಿಗೆ ಹೋಗಿ ಅವಳ ಹೆಗಲ ಮೇಲೆ ಕೈ ಇಟ್ಟ ತನ್ನ ಆತ್ಮೀಯತೆಯ ಪ್ರದರ್ಶನಕ್ಕೆ. ನಾವೆಲ್ಲಾ ನಿಟ್ಟುಸಿರು ಬಿಡುತ್ತಿರಲು ಅಲ್ಲಿಗೆ ಪ್ರಾಂಶುಪಾಲರು ಬಂದರು. ಅವರು ಈ ದೃಷ್ಯವನ್ನು ಕಂಡು ಕೆಂಡ ಮಂಡಲವಾದರು. ಮುಂದಿನ ಒಂದು ತಿಂಗಳು ವೆಂಕಟರಮಣನ ಹೆತ್ತವರು ಶಾಲೆಗೆ ಬರುವುದು, ಪ್ರಾಂಶುಪಾಲರ ಕಛೇರಿಗೆ ಹೋಗುವುದು ಇತ್ಯಾದಿ ನಡೆದು ಕೊನೆಗೆ ವೆಂಕಟರಮಣನನ್ನು ಶಾಲೆಯಿಂದ ಹೊರಗೆ ಹಾಕಲಾಯಿತು. ಆದರೆ ವೆಂಕಟರಮಣ ತಗ್ಗಿಸಿದ ತಲೆಯನ್ನು ನಮ್ಮತ್ತ ತಿರುಗಿಸಿ ನಕ್ಕ ಹೆಮ್ಮೆಯ ನಗೆಯನ್ನು ಇಂದಿಗೂ ನನಗೆ ಮರೆಯಲಾಗಿಲ್ಲ. ಹೆಳೆಯ ಗೆಳೆಯರು ಸೇರಿದಾಗ ಒಮ್ಮೊಮ್ಮೆ ಈ ಮಾತು ಮತ್ತೆ ಬರುವುದಿದೆ. ಮತ್ತೆ ಮುಂದೆ ವೆಂಕಟರಮಣ ಅನೇಕ ಬಾರಿ ಸಿಕ್ಕಿದ, ತನ್ನ ಹುಡುಗಾಟಿಕೆಗೆ ನಕ್ಕಿದ್ದ… ಆದರೂ ಆ ಘಟನೆ ಇನ್ನೂ ನನ್ನ ನೆನಪಲ್ಲಿ ಹಸಿರಾಗಿದೆ. ಎಲ್ಲಾ ಎಷ್ಟು ಚೆನ್ನಾಗಿತ್ತು. ಮಕ್ಕಳಾಟ ಅವೆಲ್ಲಾ…

ಲೌ in the time of ಕಾಲೇಜ್!

ಮುಂದೆ ಕಾಲೇಜು ದಿನಗಳಲ್ಲಿ ಅನೇಕ ಗೆಳೆಯರು ಪ್ರೇಮದಲ್ಲಿ ಬಿದ್ದರು, ಎದ್ದರು. ಅತ್ತರು, ಅಳಿಸಿದರು. ನಮಗೆ ಪ್ರಾಯ ಬರುತ್ತಲೂ ಸುತ್ತ ಮುತ್ತ ಸಿನೆಮಾ, ಟಿ.ವಿ, ಜಾಹೀರಾತು ಎಲ್ಲವೂ ಗಂಡು ಹೆಣ್ಣಿನ ಸಂಬಂಧದ ಬಗ್ಗೆಯೇ ಇರುವುದು ಎಂದು ಅನಿಸತೊಡಗಿತು. ಯಾವುದೇ ಪ್ರಸಿದ್ಧ ಲೇಖಕರ ಪುಸ್ತಕ ಹಿಡಿದರೂ ಅವರು ಶೃಂಗಾರ ರಸದ ಧಾರಾಳ ಬಳಕೆಯನ್ನು ಮಾಡುತ್ತಿದ್ದದ್ದು ಗಮನಕ್ಕೆ ಬರಲಾರಂಭಿಸಿತು. ಒಂದಷ್ಟು ದಿನ ಕುತೂಹಲ, ಆಸಕ್ತಿ ಮತ್ತೆ ಇದು ಜೀವನದ ಕ್ರಮ. ಬದುಕು ಇರುವುದೇ ಹೀಗೆ ಎಂದು ಅರ್ಥವಾಗುತ್ತಾ ಹೋಯಿತು. ಬಾಲ್ಯಾವಸ್ಥೆಯಿಂದ ತೊಡಗಿ ಬುದ್ಧಿ ಬೆಳೆಯುವವರೆಗೆ ಹೆದರುತ್ತಿದ್ದದ್ದು, ಗೌರವಿಸುತ್ತಿದ್ದದ್ದು ಹೆತ್ತವರಿಗೆ, ಸಮಾಜಕ್ಕೆ ಮತ್ತು ಪೋಲೀಸರಿಗೆ! ಬುದ್ಧಿ ಬೆಳೆದ ನಂತರ ಗೌರವಿಸಿದ್ದು ನಾವೇ ನಂಬಿರುವ ಮೌಲ್ಯಗಳಿಗೆ ಮಾತ್ರ. ನಮ್ಮ ಮನಸ್ಸಿಗೆ ನಾವೇ ತಾನೇ ಮಾಲಿಕರು? ಇತರರ ಸ್ವಾತಂತ್ರ್ಯಕ್ಕೆ ಧಕ್ಕೆ ಬರದಂತೆ, ಇನ್ನೊಬ್ಬರ ಜೀವನಕ್ಕೆ ಯಾವುದೇ ರೀತಿ ಕೆಟ್ಟ ಪ್ರಭಾವ ಬೀರದಂತೆ ನಮ್ಮ ಜೀವನವನ್ನು ಹೇಗೆ ಬೇಕಾದರೂ ಜೀವಿಸುವ ಹಕ್ಕು ಪ್ರತಿಯೊಬ್ಬರಿಗೂ ಇದೆ ಎಂದೇ ತಿಳಿದಿದ್ದ ದಿನಗಳವು…

ಪ್ರಳಯದ ಹಿಂದಿನ ರಾತ್ರಿ

ಅದೊಂದು ದಿನ ಪೂನಾದಲ್ಲಿ ನಾನು ಓದುತ್ತಿದ್ದ ದಿನಗಳಲ್ಲಿ ಒಂದು ರಾತ್ರಿ ಮನೆಗೆ ದೂರವಾಣಿಸಿದ್ದೆ. ಆಗ ಅತ್ತಣಿಂದ (ಮಂಗಳೂರಿನಿಂದ) ಅಮ್ಮ ಸುದ್ದಿ ಹೇಳುತ್ತಿದ್ದಳು. ಇವತ್ತು ಇಲ್ಲಿ ಯಾರೋ ಇಬ್ಬರು ಕಾಲೇಜು ಹುಡುಗ-ಹುಡುಗಿ ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಒಂದಷ್ಟು ಜನ ಬಂದು ವಿನಾಕಾರಣ ಹೊಡೆದರಂತೆ. ಹುಡುಗನ ಮತ ಮತ್ತು ಹುಡುಗಿಯದ್ದು ಬೇರೆಯಾಗಿದ್ದ ಕಾರಣ ಈ ಧಾಳಿಯಂತೆ ಎಂದರು ಅಮ್ಮ. ಹೌದಾ. ಹೊಡೆದದ್ದು ಅವರ ಸಂಬಂಧಿಗಳೇ ಎಂದು ಕೇಳಿದೆ. ಇಲ್ಲ ಅದ್ಯಾರೋ ಎಂತದ್ದೂ ದಳವಂತೆ ಎಂದರು ಅಮ್ಮ. ಹೌದಾ! ಛೆ! ಎಂಥಾ ಅವಸ್ಥೆ ಎಂದು ಮಾತು ಮುಂದೆ ಬೇರೆ ವಿಷಯಕ್ಕೆ ಹೋಯಿತು. ದಿನಗಳು ಉರುಳುತ್ತಾ ಸಾಗಿತು. ಮಂಗಳೂರಿನಲ್ಲಿ ಹುಟ್ಟಿದ ಅನೇಕರು ಕೇಂದ್ರ ಸರಕಾರದಲ್ಲಿ ಭಾಗಿಗಳಾದರು, ವಿಧಾನ ಸಭೆಯಲ್ಲಿ, ಸಿನೆಮಾದಲ್ಲಿ, ಪೋಲೀಸಿನಲ್ಲಿ ಹೆಸರು ಮಾಡಿದರು. ನಾಟಕ, ಹಾಡುಗಾರಿಕೆ, ಚಿತ್ರಕಲೆಯಲ್ಲಿ ಹೆಸರು ಮಾಡಿದರು. ವಿಶ್ವ ಮಟ್ಟದಲ್ಲಿ ಪ್ರಸಿದ್ಧಿ ಹೊಂದಿದರು. ಮಂಗಳೂರು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಲೇ ಇತ್ತು ಆದರೆ ಅಂದು ಆರಂಭವಾಗಿದ್ದ ವಿಷದ ಹರಿವು ತೊಟ್ಟಿಗೆ ತೊಟ್ಟು ಸೇರುತ್ತಾ ಮಂಗಳೂರಿನಲ್ಲಿ ಮಡುಗಟ್ಟಿತ್ತು. ಅದರ ಇತ್ತೀಚಿನ ಅವತಾರ ಮಂಗಳೂರಿನಲ್ಲಿ ನಡೆದ ‘ಪಬ್’ ಧಾಳಿ.

ಸಂಸ್ಕೃತಿಯ ತವರು ಮನೆ

ತಮ್ಮದೊಂದು ನಿರ್ವಾತದಲ್ಲಿ ಶೇಖರಿಸಿ ಇಡಬಹುದಾದ ಸಂಸ್ಕೃತಿ ಎನ್ನುವ ವಿಷಯವೊಂದುಂಟು ಅದರ ರಕ್ಷಣೆ ಮಾಡಬೇಕು ಎನ್ನುವ ಉಗ್ರಗಾಮಿಗಳು ಹುಟ್ಟಿಕೊಂಡಿದ್ದಾರೆ. ಇಂಥದ್ದೊಂದು ಉಗ್ರ ಧೋರಣೆ ಹೊಂದಿದ ಯುವಕರು-ಯುವತಿಯರು ಮಾನಸಿಕವಾಗಿ ತೀರಾ ಸುಲಭವಾಗಿ ದಕ್ಕುವಂಥಾ ವಸ್ತುಗಳು ಎನ್ನುವುದು ನಮ್ಮಲ್ಲಿನ ರಾಜಕೀಯದವರಿಗೆ, ಮಾಧ್ಯಮಗಳಿಗೆ ಗೊತ್ತಿದೆ. ಅಂಥದ್ದೊಂದು ಬೆಳವಣಿಗೆ ನಡೆಯುತ್ತಿದೆ ಎಂದು ತಿಳಿಯುತ್ತಿದ್ದಂತೆಯೇ ಅದರ ಸಂಪೂರ್ಣ ಲಾಭಪಡೆಯಲು ಅವರು ತಯಾರಿರುತ್ತಾರೆ. ಸಮೂಹ ಸನ್ನಿಯ ಕಾರ್ಯ ಸುಲಭವಾಗಿರುತ್ತದೆ. ಕುರುಡರ ಮೆರವಣಿಗೆಯನ್ನು ದಾರಿತಪ್ಪಿಸಲು ಮುಂಚೂಣಿಯಲ್ಲಿರುವವರನ್ನು ದಾರಿತಪ್ಪಿಸಿದರೆ ಸಾಕೆಂದು ಇವರಿಗೆ ಚೆನ್ನಾಗಿ ಗೊತ್ತಿದೆ. ಇನ್ನು ದರೋಡೆ ಮಾಡಿಯಾದರೂ ಪೇಪರಿನಲ್ಲಿ ಹೆಸರು ಮಾಡಬೇಕು ಎನ್ನುವ ಅನೇಕರು ಸಾಧಾರಣವಾಗಿ ಇಂಥಾ ಮೆರವಣಿಗೆಯ ನೇತೃತ್ವವನ್ನು ವಹಿಸಿರುತ್ತಾರೆ. ಎಲ್ಲಾ ಗೊತ್ತಿದ್ದೂ ಗೊತ್ತಿದ್ದೂ ಸಮಾಜದೊಳಗೆ ಇಂಥಾ ಕಲ್ಮಶಗಳು ಹುಟ್ಟಿಕೊಳ್ಳುತ್ತವೆ.

ಮುಂದುವರೆದ ನೆನಪುಗಳು…

ಅದ್ಯಾವುದೋ ಚಿತ್ರೀಕರಣಕ್ಕೆ ಎಂದು ಪಾಟ್ನಾಗೆ ಹೋಗಿದ್ದೆ. ಬಿಹಾರದ ರಾಜಧಾನಿ! ಸರಿ… ಇಡೀ ರಾಜ್ಯವೇ ಕೆಟ್ಟ ಆಡಳಿತಕ್ಕೆ, ಅರಾಜಕತೆಗೆ ಹೆಸರಾಗಿದೆ ಆದರೆ ರಾಜಧಾನಿಯಲ್ಲಾದರೂ ಪರಿಸ್ಥಿತಿ ಚೆನ್ನಾಗಿರಬಹುದು ಎಂದು ಕೊಂಡಿದ್ದೆ. ನಮ್ಮ ಸಾಕ್ಷ್ಯಚಿತ್ರದ ಚಿತ್ರೀಕರಣ ನಡೆದಿತ್ತು. ಸಂಜೆ ಗಂಟೆ ಐದು ಆಗುತ್ತಿರಬೇಕಾದರೆ ಜನ ಸಂದಣೆ ಕಡಿಮೆಯಾಗುತ್ತಾ ಹೋದಂತೆ ಅನಿಸಿತು. ನಮ್ಮೊಂದಿಗೆ ಇದ್ದ ಅಲ್ಲಿನ ಮಿತ್ರನನ್ನು ಇದ್ಯಾಕೆ ಹೀಗೆ ಎಂದು ಕೇಳಿದೆ. ಅಯ್ಯೋ! ಇಲ್ಲಿ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷ ಯಾವುದೇ ಇದ್ದರೂ ಅವರ ಗೂಂಡಾಗಳು ಸಂಜೆಯ ಹೊತ್ತಿಗೆ ಇಲ್ಲೆಲ್ಲಾ ಸುತ್ತಾಡಲಾರಂಭಿಸುತ್ತಾರೆ. ಅವರು ಹುಡುಗಿಯರ ಮೇಲೆ ಕೈ ಮಾಡುವುದು ತೀರಾ ಸಹಜ. ಅವರನ್ನು ಇಲ್ಲಿ ಯಾರೂ ತಡೆಯಲು ಸಾಧ್ಯವಿಲ್ಲ. ಹೀಗಾಗಿ ಸ್ತ್ರೀಯರು ಸಂಜೆಯಾಗುತ್ತಲೇ ಮನೆ ಸೇರಿಕೊಳ್ಳುತ್ತಾರೆ. ಇನ್ನು ಮರ್ಯಾದಸ್ತ ಗಂಡಸರು ಇಂಥಾ ಅನ್ಯಾಯವನ್ನು ನೋಡಲೂ ಆರದೇ ತಡೆಯಲೂ ಆರದೇ ಅವರೂ ಮನೆ ಸೇರಿಕೊಂಡು ಬಿಡುತ್ತಾರೆ. ಹೀಗೆ ಇಡೀ ಪಾಟ್ನಾದಲ್ಲೇ ಒಂದೇ ಒಂದು ನೈಟ್ ಕ್ಲಬ್ ಇಲ್ಲ, ರಾತ್ರಿ ಊಟದ ಹೋಟೇಲುಗಳು ತುಂಬಾ ಕಡಿಮೆ ಮತ್ತು ನಾವು ಸಹಾ ಆದಷ್ಟು ಬೇಗ ಹೋಟೇಲ್ ತಲುಪೋಣ ಎಂದ ನಮ್ಮ ಗೆಳೆಯ. ನನಗೆ ಆದ ಅಚ್ಚರಿ ಅಷ್ಟಿಷ್ಟಲ್ಲ. ಒಂದು ರಾಜ್ಯದ ರಾಜಧಾನಿಯಲ್ಲಿ ಈ ಪರಿಸ್ಥಿತಿ ಇದ್ದರೆ ಇನ್ನು ಇತರ ಹಳ್ಳಿಗಳಲ್ಲಿ ಏನು ಪರಿಸ್ಥಿತಿ ಇರಬಹುದು? ಅಬ್ಬಾ! ಸಭ್ಯರ ನಾಡಿನಲ್ಲಿ ಹುಟ್ಟಿ ನಾನು ಬಚಾವಾದೆ ಎಂದು ಒಂದು ಕ್ಷಣ ಅನಿಸಿದ್ದು ಹೌದು.

ಮುಂದೆ ನನಗೆ ಮದುವೆ ನಿಶ್ಚಯವಾದ ಸಂದರ್ಭ. ಮುಂದೆ ಹೆಂಡತಿಯಾಗಲಿರುವವಳನ್ನು ಒಂದೆರಡು ಸಲ ಮದುವೆಗೆ ಮೊದಲೇ ಭೇಟಿ ಮಾಡಿ ಮಾತನಾಡಿದ್ದೆ. ಭೇಟಿಯಾಗಿ ಕುಳಿತು ಮಾತನಾಡಲು ಯಾವುದೋ ಕಾಫೀಡೇಗೆ ಹೋಗಿದ್ದೆವು. ಇನ್ಯಾವುದೋ ಐಸ್ಕ್ರೀಮ್ ಪಾರ್ಲರಿಗೆ ಹೋಗಿದ್ದೆವು. ಆದರೆ ಮನಸ್ಸಿನಾಳದಲ್ಲಿ ಕೆಲವೇ ದಿನಗಳ ಹಿಂದೆ ನಮ್ಮಂತೆಯೇ ಹೊಸ ಜೀವನದ ಕನಸುಗಳನ್ನು ಕಟ್ಟುತ್ತಿದ್ದ ಜೋಡಿಯ ಮೇಲೆ ಬರ್ಬರವಾಗಿ ಹಲ್ಲೆ ಮಾಡಿ ಹುಡುಗ ಸತ್ತೇ ಹೋಗಿದ್ದದ್ದು ಮತ್ತೆ ಮತ್ತೆ ನೆನಪಾಗದೇ ಇರುತ್ತಿರಲಿಲ್ಲ. ನಮ್ಮಿಬ್ಬರನ್ನೂ ಜೊತೆಯಾಗಿ ಕಳಿಸಲು ನಮ್ಮ ಹೆತ್ತವರೇ ಹೆದರುತ್ತಿದ್ದರು. ನನಗೆ ಬಿಹಾರ ನೆನಪಾಗುತ್ತಿತ್ತು…

ಅಲ್ಲ ಇದು ಅಲ್ಲವೇ ಅಲ್ಲ

ಮಧ್ಯಪಾನ ಜೀವನ ಶೈಲಿಯಾಗಿ ಅಥವಾ ಖಯಾಲಿಯಾಗಿ ಯಾರಿಗೂ ಒಳ್ಳೆಯದಲ್ಲ ಇದು ಒಪ್ಪಬಹುದಾದ ಸತ್ಯ. ಆದರೆ ಇದರಿಂದ ಇತರರಿಗೆ ತೊಂದರೆಯಾಗದವರೆಗೆ, ವೈಯಕ್ತಿಕವಾಗಿರುವವರೆಗೆ ದೇವರಂತೆಯೇ ನಿರುಪದ್ರವಿ. ಆಸ್ತಿಕರನ್ನು ಹೇಗೆ ನಾಸ್ತಿಕರು ನಿಕೃಷ್ಟವಾಗಿ ಕಾಣುವುದು ತಪ್ಪೋ ಅಷ್ಟೇ ತಪ್ಪು ಇನ್ನೊಬ್ಬರು ನಂಬಿರುವ, ನೆಚ್ಚಿರುವ ಜೀವನ ಶೈಲಿಯನ್ನು ನಾವು ತಿದ್ದಲು ಹೋಗುವುದು. ಸಮಷ್ಟಿಯಲ್ಲಿ ಒಂದು ಸಮಾಜ ಆಯಾ ಕಾಲದ ನಿಯಮ, ನಂಬಿಕೆ, ಆರ್ಥಿಕತೆ ಇತ್ಯಾದಿಗಳ ಪ್ರೇರಣೆಯಿಂದ ಒಂದು ಹರಿವನ್ನು ಸಹಜವಾಗಿ ಹೊಂದಿಯೇ ಇರುತ್ತದೆ. ಇದರ ದಿಕ್ಕನ್ನು ಬದಲಾಯಿಸುವುದು ಮಳೆಗಾಲದಲ್ಲಿ ತುಂಬಿ ಹರಿಯುತ್ತಿರುವ ಗಂಗಾನದಿಗೆ ಮಣ್ಣಿನ ಅಣೆಕಟ್ಟೆ ಕಟ್ಟಿದಂತೆಯೇ ಸರಿ. ಸಮಾಜ ಎನ್ನುವುದು ಮಾನವನ ಇತಿಹಾಸದಲ್ಲಿ ಅನೇಕ ವರ್ಷಗಳ ಪ್ರಯೋಗದ ಪರಿಣಾಮ. ಅದು ಎಂದಿಗೂ ನಿಂತ ನೀರಲ್ಲ. ಸದಾ ಬೆಳೆಯುತ್ತಿರುವುದು, ಹೊಸ ಪ್ರಯೋಗಗನ್ನು ಮಾಡುತ್ತಿರುವುದು ಸಮಾಜದಲ್ಲಿ ನಡೆಯುತ್ತಲೇ ಇರುತ್ತದೆ. ಆಗ ಸಮಾಜದಲ್ಲಿ ಸಮಾಜ ಬಾಹಿರವಾದದ್ದನ್ನು ತ್ಯಜಿಸಲು ಸಮಾಜವೇ ಆಡಳಿತ, ರಾಜ, ಸೈನ್ಯ, ಪೋಲೀಸ್ ಇತ್ಯಾದಿಗಳನ್ನು ರೂಪಿಸುತ್ತಾ ಹೋಯಿತು. ಈ ವ್ಯವಸ್ಥೆಯ ಹೊರತಾಗಿ ಯಾವುದೇ ಕೆಲಸ ಸಮಾಜದ ಒಳಗೆ ನಡೆದರೂ ಅದು ಸಮಾಜ ಬಾಹಿರವೇ ಆಗಿರುತ್ತದೆ ತಾನೆ? ಅದೇ ರೀತಿ ‘ಪಬ್’ನಲ್ಲಿ ಇದ್ದ ಹುಡುಗ ಹುಡುಗಿಯರು ಮಧ್ಯಪಾನ ಮಾಡುತ್ತಿದ್ದದ್ದು ಸಮಷ್ಟಿಯಲ್ಲಿ ಸಮಾಜದ ಹಿತದಲ್ಲಿ ಇಲ್ಲದೇ ಇರಬಹುದು. ಆದರೆ ಅದನ್ನು ಸರಿಪಡಿಸುವ ಜವಾಬ್ದಾರಿ ಸಮಾಜ ಅದಕ್ಕಾಗಿಯೇ ನೇಮಕ ಮಾಡಿರುವ ಅಂಗದ್ದು (ಪೋಲೀಸ್, ಮಕ್ಕಳ ತಂದೆ-ತಾಯಿ ಇತ್ಯಾದಿ) ಹಾಗೂ ಆ ಸರಿ ಪಡಿಸುವ ಪ್ರಕ್ರಿಯೆಯೂ ಸಮಯ ಪರೀಕ್ಷೆಯಲ್ಲಿ ಗೆದ್ದಿರುವ ವಿಧಾನಗಳಿಂದ. ಇಲ್ಲವಾದರೆ ಸಮಾಜದ ನಿಯಮಗಳಿಗೇ ಅರ್ಥ ಇಲ್ಲದಾಗಿ ವ್ಯವಸ್ಥೆಯೇ ಕುಸಿಯುವ ಸಂಭವ ಇರುತ್ತದೆ. ಸಮಾಜವು ರೂಪುಗೊಂಡಿರುವುದು ಸಮಾಜದೊಳಗಿನ ಜೀವಿಗಳ ನೆಮ್ಮದಿಗೆ. ಆದರೆ ಅದರ ಸದಸ್ಯರು ಭಯದಲ್ಲಿ ಜೀವಿಸಲಾರಂಭಿಸಿದರೆ ಅಂಥಾ ಸಮಾಜ ತನ್ನ ಕೊನೆಗಾಲವನ್ನು ಎಣಿಸಲಾರಂಭಿಸಿದಂತೆಯೇ ಸರಿ.

ಸಂಸ್ಕಾರವೇ ಸಂಸ್ಕೃತಿಯೇ?

ಯಾವುದು ಈ ಸಂಸ್ಕೃತಿ ನಾವು ಉಳಿಸಲು ಹೊರಟಿರುವುದು? ಹೆಂಗಸಿಗೆ ಅಡುಗೆ ಮನೆ? ಉದ್ದ ಜಡೆ? ಗಂಡಸು ಇಡೀ ದಿನ ಕೆಲಸ ಮಾಡಿ ಸಂಜೆ ಹೆಂಡವನ್ನು ಹೊಟ್ಟೆಗೆ ಸುರಿದು ಮನೆ ಸೇರುವುದು? ಯಾವುದು? ಯಾವುದು? ಸಂಸ್ಕೃತಿ ಎನ್ನುವುದು ಕಾಲದಿಂದ ಕಾಲಕ್ಕೆ ಮಾರ್ಪಡುವ ವಿಷಯವಲ್ಲವೇ? ಆಯಾ ಕಾಲದಲ್ಲಿ ಮನುಷ್ಯ ಬದುಕಿದ ವಿಧಾನ ಅಂದಿನ ಸಂಸ್ಕೃತಿ ಅಲ್ಲವೇ? ಭಾರತೀಯ ಸಂಸ್ಕೃತಿ ಎನ್ನುವುದು ನಿಂತ ನೀರೇ? ಅದು ಚಲನಶೀಲವಲ್ಲವೇ? ಅದು ಲೋಕದ ಇತರರೊಂದಿಗೆ ಬೆರೆತು, ಕಲಿತು, ಕಲಿಸಿ ಬೆಳೆಯುವಂಥಾದ್ದಲ್ಲವೇ? ಸಂಸ್ಕೃತಿ ಹಾಗೂ ಸಂಸ್ಕಾರಗಳಿಗೆ ಈ ಉಗ್ರಗಾಮಿಗಳು ವ್ಯತ್ಯಾಸ ಕಾಣದೇ ಹೋಗುತ್ತಿದ್ದಾರೆಯೆ? ಸಂಸ್ಕಾರಗಳು ಅಂದಿನ ಸಮಾಜದ ಮೌಲ್ಯಗಳಿಂದ ಹುಟ್ಟುವುದಲ್ಲವೇ? ಸಂಸ್ಕೃತಿ ಬೆಳೆಯದೇ, ಬದಲಾಗದೇ ಹೋದರೆ ಆ ಸಮಾಜ ಮುಂದುವರೆಯುವುದಾದರೂ ಹೇಗೆ? ನಾವು ಮುಂದೆ ಹೋಗುವ ಬದಲು ಹಿಂದೆ ಹೆಜ್ಜೆ ಹಾಕುತ್ತಾ ನಡೆಯುತ್ತಿದ್ದೇವೆಯೇ? ಅಥವಾ ಈ ಇಡೀ ಪ್ರಕರಣಕ್ಕೆ ಇನ್ಯಾವುದೋ ದೊಡ್ಡ ಸಾಮಾಜಿಕ ಆಯಾಮ ಇದೆಯೇ ಯೋಚಿಸುತ್ತಾ ಕಳೆದ ಒಂದೆರಡು ದಿನಗಳಿಂದ ತಲೆ ಕೆಡುತ್ತಿದೆ. ದಯವಿಟ್ಟು ಈ ಪ್ರಕರಣದ ಕುರಿತಾಗಿ ನಿಮ್ಮ ಅನಿಸಿಕೆಗಳನ್ನು ಇಲ್ಲಿ ಬರೆಯಿರಿ. ಮಂಗಳೂರಿಗೆ ಹಿಡಿಯುತ್ತಿರುವ/ಹಿಡಿದಿರುವ ರೋಗ ಏನು ಎನ್ನುವುದನ್ನು ಇಲ್ಲಿ ಒಂದಿಷ್ಟು ಚರ್ಚಿಸುವ ಬನ್ನಿ…

…ಬರೆದು ಮುಗಿಸುತ್ತಿರಬೇಕಾದರೆ, ಹೈಸ್ಕೂಲಿನ ಹಿಂದಿನ ಮೆಟ್ಟಿಲುಗಳಲ್ಲಿ ವೆಂಕಟರಮಣ ಒಬ್ಬನೇ ಕುಳಿತಿರುವುದು ಕಾಣಿಸುತ್ತಿದೆ. ಅವನ ಮುಂದೆ ಸಮಾಜದ ಮುಗ್ಧತೆ ಸತ್ತು ಮಲಗಿರುವುದು ಕಾಣಿಸುತ್ತಿದೆ…

ಪೂರಕ ಓದು:

  1. ಕೆಂಡ ಸಂಪಿಗೆಯಲ್ಲಿನ ಲೇಖನ ಓದಲು ಇಲ್ಲಿ ಕ್ಲಿಕ್ ಮಾಡಿ
  2. ರೀಡಿಫ್‍ನಲ್ಲಿ ಬಂದ ಪ್ರತಿಕ್ರಿಯೆ ಮುಂಬೈನಿಂದ
Share This