ಸಿನೆಮಾ ಒಂದು ದೃಶ್ಯ ಮಾಧ್ಯಮ ಎಂದು ಹೇಳಿದಾಗಲೆಲ್ಲಾ ನನಗೆ ಕಸಿವಿಸಿಯಾಗುತ್ತದೆ. ಸಿನೆಮಾ ಒಂದು ದೃಶ್ಯ ಹಾಗೂ ಶ್ರವ್ಯ ಮಾಧ್ಯಮ. ಧ್ವನಿ ಸಂಯೋಜನೆ ಎನ್ನುವುದನ್ನು ವಿಶೇಷವಾಗಿ ಕಲಿಸುವಂಥಾ ಒಂದು ಶಾಸ್ತ್ರವೇ ಇದೆ. ಕನ್ನಡ ಚಿತ್ರಗಳಲ್ಲಿ ಧ್ವನಿ ಸಂಯೋಜನೆ ಹೆಚ್ಚಿನ ಕಡೆ ಉಪೇಕ್ಷಿತವಾಗಿದೆ. ಒಂದು ಚಿತ್ರವನ್ನು ನೊಡುವಾಗ ಪಾತ್ರಗಳು ನಡೆದಾಡಿದಾಗ ಹೆಜ್ಜೆಯ ಸಪ್ಪಳ, ಗಾಜು ಒಡೆದಾಗ ಅದರ ಶಬ್ದ ಇತ್ಯಾದಿಗಳನ್ನು ಧ್ವನಿ ಸಂಯೋಜನೆ ಎಂದು ಅನೇಕರು ಭಾವಿಸುತ್ತಾರೆ. ಆದರೆ ನಿಜಕ್ಕೂ ಇವುಗಳು ಧ್ವನಿ ಸಂಯೋಜನೆಯ ಪ್ರಾಥಮಿಕ ಹಂತ ಮಾತ್ರ.

ನಮ್ಮೆಲ್ಲಾ ಅನುಭವಗಳು ಪಂಚೇಂದ್ರಿಯಗಳಿಂದಾಗುತ್ತವೆ ಎನ್ನುವುದು ಸರಿಯಷ್ಟೇ. ಸಿನೆಮಾವೊಂದಕ್ಕೆ ಕಣ್ಣು ಹಾಗೂ ಕಿವಿ ಈ ಎರಡು ಇಂದ್ರಿಯಗಳ ಮೂಲಕ ನಮ್ಮನ್ನು ತಟ್ಟಲು ಸಾಧ್ಯವಿದೆ. (ಸಧ್ಯಕ್ಕೆ) ಇವೆರಡೂ ನಮ್ಮಲ್ಲಿ ಉಂಟುಮಾಡುವ ತಾತ್ಕಾಲಿಕ ಅನುಭವಗಳ ಸರಣಿಯೆ ಒಂದು ಸಿನೆಮಾ ಆಗಿದೆ. ಕೆಲವು ಚಿತ್ರಗಳು ಕೇವಲ ಕಣ್ಣುಗಳ ಮೂಲಕ ನಮ್ಮನ್ನು ತಟ್ಟಿದರೆ, ಇನ್ನು ಕೆಲವು ಕೇವಲ ಧ್ವನಿಯ ಮೂಲಕ. ಒಬ್ಬ ಸಮರ್ಥ ನಿರ್ದೇಶಕ ಇವುಗಳ ಸಂಯೊಜನೆಯನ್ನು ಜಾಣ್ಮೆಯಿಂದ ಮಾಡಿಕೊಂಡಾಗ, ಇವೆರಡೂ ನಿರ್ದಿಷ್ಟ ಅನುಭವಗಳನ್ನು ಕೊಡುವುದರಿಂದಾಗಿ ಚಿತ್ರವು ಕೆಲವೆಡೆ ಕಿವಿಗಳ ಮೂಲಕವೂ ಇನ್ನು ಇತರೆಡೆ ದೃಶ್ಯದ ಮೂಲಕವೂ ನಮ್ಮನ್ನು ತಟ್ಟುತ್ತದೆ. ಇವೆರಡರ ಪ್ರಯೋಗದಿಂದಲೂ ಉತ್ಪನ್ನವಾಗುವ ಭಾವನೆಗಳು, ಅದರ ತೀವ್ರತೆ ಭಿನ್ನವಾದದ್ದರಿಂದ ನಿರ್ದೇಶಕ ತಾನು ಹೇಳಬಯಸುವ ಭಾವನೆಯನ್ನು ಸಮರ್ಥವಾಗಿ ಹೇಳುವ ಮಾಧ್ಯಮವನ್ನು ಆಯಾ ಸಂದರ್ಭದಲ್ಲಿ ಪ್ರಮಾಣಾನುಸಾರ ಬಳಸಿಕೊಳ್ಳುತ್ತಾನೆ.

ಧ್ವನಿ ಸಂಯೋಜನೆಯ ಕೆಲವು ಅಂಶಗಳು ಹೀಗಿವೆ:

ಧ್ವನಿ ಸಂಯೋಜನೆಯಲ್ಲಿ ಮುಖ್ಯವಾಗಿ ಎರಡು ವಿಭಾಗಗಳನ್ನು ಸಂಯೋಜಕರು ಅನುಸರಿಸುತ್ತಾರೆ.

೧) ಸಾಧ್ಯ ಧ್ವನಿಗಳು (Digetic Sounds)
೨) ಸಾಧಿತ ಧ್ವನಿಗಳು (Non-digetic Sounds)

ಸಾಧ್ಯ ಧ್ವನಿಗಳಲ್ಲಿ ಮುಖ್ಯವಾಗಿ ಚಿತ್ರ ಪರದೆಯ ಮೇಲೆ ಕಾಣುವ ಎಲ್ಲಾ ಧ್ವನಿಗಳೂ ಇಲ್ಲಿ ವರ್ಗೀಕರಿಸಲ್ಪಡುತ್ತವೆ. ಇಲ್ಲಿ ಬಾಗಿಲು ತೆರೆಯುವ ಶಬ್ದ, ಹಿನ್ನೆಲೆಯಲ್ಲಿ ಓದುತ್ತಿರುವ ಟಿ.ವಿ ಶಬ್ದ, ಪಾತ್ರೆ ತೊಳೆಯುವಾಗ ನೀರಿನ ಶಬ್ದ ಇತ್ಯಾದಿ ಪರದೆಯ ಮೇಲೆ ಕಾಣುವ ಕ್ರಿಯೆಗಳಿಂದ ಉತ್ಪತ್ತಿಯಾಗುವ ಶಬ್ದಗಳು ಇಲ್ಲಿರುತ್ತವೆ. ಸಾಧಿತ ಧ್ವನಿಗಳಲ್ಲೂ ಮೇಲಿನ ಧ್ವನಿಗಳು ಬರಬಹುದು. ಆದರೆ, ಇವುಗಳು ಪರದೆಯ ಮೆಲೆ ಕಾಣುವ ಕ್ರಿಯೆಗಳಲ್ಲದೇ ಇದ್ದರೂ ಬರೇ ಹೊರಗಿನಿಂದ ಕೆಳಿಸುವ ಧ್ವನಿಗಳು.

ಯಾವುದೇ ಚಿತ್ರವಾದರೂ, ಒಂದು ಫ್ರೇಮನ್ನೇ ತೋರಿಸುವುದು ಸಾಧ್ಯ. ಇತ್ತೀಚೆಗೆ ಸ್ಪ್ಲಿಟ್ ಸ್ಕ್ರೀನ್ ತಂತ್ರಜ್ಞಾನ ಎಲ್ಲಾ ಬಳಸಿದರೂ, ಮತ್ತೆ ಅವುಗಳು ಫ್ರೇಮ್ ಅಷ್ಟೇ. ಅವುಗಳು ಸೃಷ್ಟಿಸುವ ಆವರಣಕ್ಕೆ ಒಂದು ಪರಿಮಿತಿ ಇರುತ್ತದೆ. ಏಕೆಂದರೆ ಅವುಗಳು ಖಚಿತವಾದ ಚೌಕಟ್ಟಿನಿಂದ ಕಟ್ಟಲ್ಪಟ್ಟ ಒಂದು ಸೃಷ್ಟಿಯಾಗಿರುತ್ತದೆ. ಆದರೆ ಧ್ವನಿಗೆ ಆ ಮಿತಿ ಇಲ್ಲ. ಅದು ಮತ್ತೆ ಅಮೂರ್ತದ ಕಡೆಗೆ ಹೋಗುವ ಶಕ್ತಿಯನ್ನು ಅದು ಹೊಂದಿರುತ್ತದೆ. ಹೀಗಾಗಿ ಒಂದು ಧ್ವನಿ ಸೃಷ್ಟಿಸುವ ಆವರಣಕ್ಕೆ ಮಿತಿ ಇರುವುದಿಲ್ಲ ಹಾಗೂ ಇದರಿಂದಾಗಿ ಧ್ವನಿ ಸಂಯೋಜನೆಗೆ ಪರದೆಯ ಹಿಂದೆ, ಮುಂದೆ, ಅಕ್ಕ-ಪಕ್ಕದ ಎಲ್ಲಾ ಸ್ಪೇಸ್‌ಗಳನ್ನು ಬಳಸಿಕೊಂಡು ಕಥೆಯ ಭಾಗವನ್ನಾಗಿಸುವ ಸಾಮರ್ಥ್ಯ ಇರುತ್ತದೆ. ಹೀಗಾಗಿ ಯಾವುದೇ ಒಂದು ಸಿನೆಮಾಕ್ಕೆ, ಅದರ ಕಥೆಯ ಓಘಕ್ಕೆ ಸಮರ್ಥ ಧ್ವನಿ ಸಂಯೋಜನೆ ತೀರಾ ಅಗತ್ಯವಾಗಿರುತ್ತದೆ.

—- ಮುಂದುವರಿಯಲಿದೆ.

Share This