ಗಣಪತಿಯವರ ಸಾರಥ್ಯದಲ್ಲಿ ನಡೆಯುತ್ತಿರುವ ‘ಚಿತ್ತಾರ’ಕ್ಕೆ ನಾನು ಬರೆಯುತ್ತಿರುವ FTII ದಿನಗಳ ಕುರಿತ ಅಂಕಣದ ಎರಡನೇ ಭಾಗ ಇಲ್ಲಿದೆ. ಇಷ್ಟರಲ್ಲೇ ಹೊಸ ಚಿತ್ತಾರವೂ ಹೊರಬಂದಿದೆ. ಅದನ್ನೂ ನೋಡುತ್ತೀರೆಂದು ಭಾವಿಸಿದ್ದೇನೆ. ಈಗ ಈ ಬಾರಿಯ ಅಂಕಣಕ್ಕೆ ನೇರ ಪ್ರವೇಶ…

[To read the previous episode, click here.]

ಮಂಗಳೂರಿನಲ್ಲಿ ಪದವಿಗಾಗಿ ಓದುತ್ತಿದ್ದಾಗ. ಗೆಳೆಯನೊಬ್ಬನ ಕುಮ್ಮಕ್ಕಿನಿಂದ ಸಾಕ್ಷ್ಯಚಿತ್ರವೊಂದನ್ನು ಮಾಡಬೇಕಾಯಿತು. ಅದರ ಓಡಾಟದಲ್ಲಿ ನನಗೆ ಸಿನೆಮಾ ಮಾಡುವ ಬಗ್ಗೆ ಆಸಕ್ತಿ ಆರಂಭವಾಗಿದ್ದು. ಯಾವುದೋ ಒಂದು ಪಾರ್ಟಿಯಲ್ಲಿ ಯಾರೋ ಒಬ್ಬ ಮ್ಯಾಜಿಕ್ ಪ್ರದರ್ಶನ ಕೊಟ್ಟರೆ ಅದರ ತಂತ್ರವನ್ನು ಅರಿಯುವವರೆಗೆ ಮನಸ್ಸಿಗೆ ತಹತಹ ಆಗುತ್ತಿರುತ್ತಲ್ಲಾ ಹಾಗಿತ್ತು ನನ್ನ ಪರಿಸ್ಥಿತಿ. ಸಿನೆಮಾ ಎನ್ನುವ ಮ್ಯಾಜಿಕ್ ಏನು? ಅದನ್ನು ಹೇಗೆ ಮಾಡುವುದು ಇತ್ಯಾದಿ ಕಲಿಯಬೇಕಿತ್ತು ನನಗೆ. ಅದನ್ನು ಕಲಿಸಲು ಇರುವ ಅತ್ಯಂತ ಒಳ್ಳೆಯ ಶಾಲೆ ಯಾವುದು ಎಂದು ಹುಡುಕಾಡುತ್ತಿರಬೇಕಾದರೆ, ಸಿಕ್ಕಿದ್ದು ಪೂನಾದಲ್ಲಿನ Film and Television Institute of India (FTII). ಕನ್ನಡ ನಿರ್ದೇಶಕ ಗಿರೀಶ್ ಕಾಸರವಳ್ಳಿಯವರು ಇದೇ ಸಿನೆಮಾ ಶಾಲೆಯಲ್ಲಿ ಕಲಿತದ್ದು ಎಂಬ ಅರಿವು ಇತ್ತು ನನಗೆ. ಅಂಥಾ ಸ್ಥಳದಲ್ಲಿ ನನಗೆ ಪ್ರವೇಶ ಸಿಕ್ಕೀತೇ ಎಂದು ಬಹಳ ಹೆದರಿದ್ದೆ ನಾನು. ಆದರೆ ಕನಸು ಕಾಣಲು ನನಸಿನ ಭಯವೇಕೆ ಅಲ್ಲವೇ? ಆ ವರ್ಷದ ಪ್ರವೇಶ ಪರೀಕ್ಷೆ ಬರೆದೇ ಬಿಟ್ಟೆ. ಹೇಗೂ ಪ್ರವೇಶ ಸಿಗುವುದಿಲ್ಲ. ಕನಿಷ್ಟ ಆ ನೆಪದಲ್ಲಿ ಪೂನಾದ ಆ ಪುಣ್ಯಭೂಮಿಯನ್ನು ನೋಡಿಯಾದರೂ ಬರುತ್ತೇನೆ ಎಂದು ಅಲ್ಲಿಯೇ ಪ್ರವೇಶ ಪರೀಕ್ಷೆ ಬರೆಯೋದಕ್ಕೆ ಹೋಗಿದ್ದೆ.

ಮೊದಲ ಬಾರಿಗೆ FTII ಗೇಟಿನಲ್ಲಿ ನಿಂತಾಗ ಅದೇನೋ ಒಂಥರಾ ರೋಮಾಂಚನವಾಗಿತ್ತು. ಕನಿಷ್ಟ ಇಲ್ಲಿವರೆಗಾದರೂ ಬಂದೆನಲ್ಲಾ ಎಂಬ ಸಂಭ್ರಮ. ಅಂತೂ ಪ್ರವೇಶ ಪರೀಕ್ಷೆ ಬರೆದದ್ದಾಯ್ತು. ಮತ್ತೆ ಸಂಜೆಯವರೆಗೆ ಸಮಯವಿತ್ತು. ಹಾಗೇ ಶಾಲೆಯ ವಠಾರದಲ್ಲಿ ಒಮ್ಮೆ ಠಳಾಯಿಸಿಕೊಂಡು ಬರುವ ಎಂದು ಅಲ್ಲಿ ಪರಿಚಯವಾದ ಒಂದಿಬ್ಬರೊಡನೆ ಸುತ್ತಾಡಲಾರಂಭಿಸಿದೆ. ಅದು ಸುಮಾರು ಹದಿನಾಲ್ಕು ಎಕರೆ ವಿಸ್ತೀರ್ಣದ ವಠಾರ. ಅದರೊಳಗೆ ಎರಡು ಸಿನೆಮಾ ಚಿತ್ರೀಕರಣವಾಗುವ ಸ್ಟೂಡಿಯೋ ಫ್ಲೋರ್, ಎರಡು ಟಿ.ವಿ ಚಿತ್ರೀಕರಣ ನಡೆಯುವ ಸ್ಟೂಡಿಯೋ ಫ್ಲೋರ್ ಹಾಗೂ ಮೂರು ಸಿನೆಮಾ ಮಂದಿರ ಇದ್ದವು. ಅತ್ಯಂತ ಹಳೆಯದರಿಂದ ಹಿಡಿದು ಅತ್ಯಂತ ಹೊಸದಾದ ಕ್ಯಾಮರಾಗಳ ಸಂಗ್ರಹವೇ ಅಲ್ಲಿದೆ. ಮತ್ತೆ ಹಾಸ್ಟೆಲ್ಲು, ಈಜುಕೊಳ ಇತ್ಯಾದಿ ನೋಡುತ್ತಾ, ನಾನು ಇಲ್ಲಿಗೆ ಬರುವುದು ಸಾಧ್ಯವೇ ಇಲ್ಲ ಎನ್ನುವುದು ಮನದಟ್ಟಾಗುತ್ತಾ ಸಾಗಿತ್ತು. ಹಾಗೆ ಭಾರದ ಮನಸ್ಸು ಹೊತ್ತು ಮಂಗಳೂರಿಗೆ ಮರಳಿದೆ. ಜೀವನ ಎಂದಿನಂತೆಯೇ ಸಾಗಲಾರಂಭಿಸಿತು.

ಆದರೆ ಅಚ್ಚರಿಯೆಂಬಂತೆ ನನಗೆ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣವಾಗಿರುವುದೂ ಸಂದರ್ಶನಕ್ಕೆ ಬರಲು ಸೂಚನೆಯೂ ಬಂದೇ ಬಂತು! ಅಬ್ಬಾ! ಮತ್ತೆ FTIIಗೆ ಹೋಗುವ ನೆನಪೇ ಸಂತೋಷದಾಯಕವಾಗಿತ್ತು. ಹೋದೆ. ಅಲ್ಲಿ ಮೊದಲ ಮೂರು ದಿನ ಸಿನೆಮಾ ಶಾಲೆಗೆ ಸಿದ್ಧತೆ ಒದಗಿಸುತ್ತಾರೆ. ಇದರ ನಂತರವೇ ಕೊನೆಯ ಹಂತದ ಸಂದರ್ಶನ ಆರಂಭವಾಗುವುದು. ಈ ಸಿದ್ಧತಾ ಕಾರ್ಯಕ್ರಮದಲ್ಲಿ ಮತ್ತೆ ನನ್ನ ಒಡನಾಡಿಗಳ ಸಾಮರ್ಥ್ಯ ತಿಳಿಯುತ್ತಾ ನಾನು ಕುಗ್ಗಲಾರಂಭಿಸಿದೆ. ಅವರಲ್ಲಿ ಅನೇಕರು ಮುಂಬೈ ಸಿನೆಮಾ ಜಗತ್ತಿನಲ್ಲಿ ಕೆಲಸ ಮಾಡಿ ಬಲ್ಲವರು. ಮತ್ತೆ ಅನೇಕರು ಕುರೋಸಾವಾ, ಫೆಲಿನಿ ಅಂತ ಅದೇನೇನೋ ಮಾತನಾಡುತ್ತಿದ್ದರು. ನನಗೆ ಇವ್ಯಾವುದರ ಪರಿಚಯವೂ ಇರಲಿಲ್ಲ. ಹೆಚ್ಚೆಂದರೆ ಹೊರದೇಶದ ಚಿತ್ರಗಳಲ್ಲಿ ಚಾರ್ಲ್ಸ್ ಚ್ಯಾಪ್ಲಿನ್ ಗೊತ್ತಿತ್ತು ನನಗೆ! ನನ್ನಂಥಾ ದಡ್ಡನಿಗೆ ಜಾಗವೇ ಅಲ್ಲ ಇದು ಎಂದು ಬಹಳವೇ ಕುಗ್ಗಿದೆ. ಆದರೆ ಇಲ್ಲಿವರೆಗೆ ಬಂದಾಗಿತ್ತು. ಹೆದರುವುದೇನಿದೆ? ನನ್ನ ಕೈಲಾದ ಪ್ರಯತ್ನ ಮಾಡಿಯೇ ಸಿದ್ಧ ಎಂದು ಮುಂದುವರೆದೆ. ಸಿದ್ಧತಾ ಕಾರ್ಯಕ್ರಮ ಮುಗಿದು ಸಂದರ್ಶನಗಳು ಆರಂಭವಾದವು.

ಹದಿನಾಲ್ಕು ಜನರ ಒಂದು ಸಂದರ್ಶನಾ ಸಮಿತಿಯ ಎದುರಿಗೆ ಯಾವುದೇ ಭಯವಿಲ್ಲದೇ ಕುಳಿತೆ! ಸೋತು ಹೋಗಿರುವೆ ಎಂದು ಗೊತ್ತಿದ್ದ ಮೇಲೆ ಭಯವೇಕೆ ಅಲ್ಲವೇ? ಆದರೆ ಆ ಹದಿನಾಲ್ಕು ಮಂದಿಯೂ ಸಂಯಮದಿಂದ ನನ್ನ ಮಾತುಗಳನ್ನು ಕೇಳಿಸಿಕೊಂಡರು. ತಪ್ಪಿದರೆ ಬೆನ್ನುತಟ್ಟಿ ಸಮಾಧಾನ ಪಡಿಸಿದರು. ಸರಿಯಾಗಿ ಮಾತನಾಡಿದರೆ ಪ್ರೋತ್ಸಾಹಿಸಿದರು. ಹೀಗೆ ಸುಮಾರು ನಲವತ್ತೈದು ನಿಮಿಷ ನಡೆಯಿತು ನನ್ನ ಸಂದರ್ಶನ. ಮತ್ತೆ ಅದೇ ದಿನ ಸಂಜೆ ಮಂಗಳೂರಿಗೆ ಮರಳಿದೆ. ನನ್ನ ಸಿನೆಮಾ ಶಾಲೆಯ ಕನಸಿಗೆ ಅಂದು ವಿರಾಮ ಚಿಹ್ನೆ ಬಿದ್ದಿದೆ ಎಂದು ನನಗೆ ಅರಿವಾಗಿತ್ತು.

ಆದರೆ ಅದೃಷ್ಟವಶಾತ್ ನಾನು ತಪ್ಪಾಗಿದ್ದೆ! ಅಂದರೆ ನಾನು ಸಿನೆಮಾ ಶಾಲೆಗೆ ಸ್ವೀಕೃತನಾಗಿದ್ದೆ! ಪೂನಾದಿಂದ ಹಿಂದಿರುಗಿದ ಕೆಲವೇ ದಿನಗಳಲ್ಲಿ ನನಗೆ ಸ್ವೀಕೃತಿ ಪತ್ರ ದೊರೆಯಿತು. ನನಗಾದ ಅಚ್ಚರಿಗೂ ಸಂತಸಕ್ಕೂ ಸೀಮೆಯೇ ಸಿಗದಂತಾಗಿತ್ತು. ಅಂದ ಹಾಗೆ ಮೊದಲಬಾರಿಗೆ ನಾನು ಹಾಸ್ಟೆಲ್ಲಿನಲ್ಲಿ, ಮನೆಯಿಂದ ಅಷ್ಟು ದೂರ ಇರಬೆಕಾಗಿತ್ತು. ಹೀಗಾಗಿ ಏನೇನೋ ಆತಂಕಗಳು, ಸಂಭ್ರಮಗಳು. ಮತ್ತೆ ಉಳಿದಿದ್ದ ಕೆಲವೇ ದಿನಗಳಲ್ಲಿ ಹಾಸ್ಟೆಲ್ ಸಾಮಾನುಗಳನ್ನು ಒಟ್ಟು ಮಾಡಿದ್ದಲ್ಲದೇ, ಮಾನಸಿಕವಾಗಿಯೂ ಹೊಸ ಜಗತ್ತಿಗೆ ಸಿದ್ಧನಾಗಬೇಕಿತ್ತು. ಆದರೆ ನನ್ನೆದುರಿಗೆ ಒಂದು ಹೊಸ ಪ್ರಪಂಚದ ಅನಾವರಣ ಆಗಲೇ ಆರಂಭವಾಗಿತ್ತು.

ಮಂಗಳೂರಿನ ಗೆಳೆಯರೆಲ್ಲಾ ಸೇರಿ ನನ್ನನ್ನು ಪೂನಾಕ್ಕೆ ಕಳಿಸಿಕೊಡಲು ಸಿದ್ಧರಾದರು. ನನ್ನ ಹೊಸ ಬದುಕಿಗೆ, ಪ್ರವೇಶಿಸುತ್ತಿರುವ ಹೊಸ ಪ್ರಪಂಚಕ್ಕೆ ಶುಭ ಹಾರೈಸಿದರು. ಅಪ್ಪ-ಅಮ್ಮ ತುಸು ಆತಂಕ, ಬಹಳ ಹರುಷ ಪಟ್ಟರೆ; ಸಂಬಂಧಿಕರೆಲ್ಲರೂ, ಸಿನೆಮಾ ಜಗತ್ತಿಗೆ ಹೋಗಿ ಹಾಳಾಗಲಿರುವ ತಮ್ಮವನೊಬ್ಬನನ್ನು ಕನಿಕರದಲ್ಲಿ ನೋಡಬೇಕೋ, ಹರುಷದಲ್ಲೋ ಎಂದು ತುಸು ಗೊಂದಲದಲ್ಲೇ ಹಾರೈಸಿ ಬೀಳ್ಕೊಟ್ಟರು. ಪೂನಾ! ಇದೋ ಬಂದೆ ನಾನು!

[To read the previous episode, click here.]

Share This