ಯುದ್ಧದಿಂದ ಬಳಲಿರುವ ಪಾಲೆಸ್ತೇನಿಯಾದಿಂದ ಮೂಡಿ ಬಂದ ಪ್ಯಾರಡೈಸ್ ನೌ ಚಿತ್ರದ ಬಗ್ಗೆ ನೀವು ಕೇಳಿರಬಹುದು. ಮನಸ್ಪರ್ಷಿ ಆ ಚಿತ್ರದ ನಿರ್ದೇಶಕ ಹನಿ ಅಬು-ಅಸೆದ್‍ರ ೨೦೧೩ ಚಿತ್ರ ಒಮರ್ ಈ ಬಾರಿಯ ಬೆಂಗಳೂರು ಅಂತರರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶಿತವಾಯಿತು.
ಮನುಷ್ಯನಿಗೆ ಎಂಥದ್ದೇ ಸ್ಥಳದಲ್ಲಿದ್ದರೂ, ತನಗೊಂದು ನೆಲೆ
ರೂಪಿಸಿಕೊಂಡು ಬದುಕುವ ಛಲ, ಅಲ್ಲೇ ಸಂತೋಷಗಳನ್ನು ಕಂಡುಕೊಂಡು ಬದುಕುವುದನ್ನು
ಸಹ್ಯವನ್ನಾಗಿಸುವ ಅದಮ್ಯ ಗುಣ ಇರುವುದರಿಂದಲೇ ಮಾನವ ಪ್ರಜಾತಿ ಇತರ ಜೀವಿಗಳಿಗೆ ಹೋಲಿಸಿದರೆ,
ಇಷ್ಟು ಯಶಸ್ವಿಯಾಯಿತೇನೋ ಎಂದು ನನಗೆ ಅನೇಕ ಬಾರಿ ಯುದ್ಧ ಸಂಬಂಧೀ ಚಿತ್ರಗಳನ್ನು
ನೋಡಿದಾಗ ಅನಿಸಿದ್ದಿದೆ. ಒಮರ್ ಅಂಥದ್ದೇ ಭಾವನೆಯನ್ನು ಮತ್ತೆ ಮೂಡಿಸಿತು.

ದೈತ್ಯ ಗೋಡೆಯನ್ನು ಏರಿ ಇಳಿದು ಹೋಗುವ, ನಿತ್ಯವೂ ತನ್ನ
ನಡೆಗೆ, ಗೋಡೆಗಳನ್ನು ದಾಟುವುದು, ಬಾಗಿಲುಗಳನ್ನು
ಮುರಿದು ಪ್ರವೇಶಿಸುವುದು ಇತ್ಯಾದಿಗಳು ಮಾಮೂಲಾಗಿರುವ ಒಮರ್ ಜೀವನಕ್ಕಾಗಿ ಬ್ರೆಡ್ ಮಾಡುವ ಕೆಲಸದಲ್ಲಿ
ಹೇಗೆ ನಿರತನಾಗಿರುತ್ತಾನೆಯೋ, ಅಷ್ಟೇ ಸಹಜವಾಗಿ ಇನ್ನೊಂದೆಡೆ ಸ್ವತಂತ್ರ್ಯ
ಯುದ್ಧದಲ್ಲೂ ಭಾಗಿಯಾಗಿರುತ್ತಾನೆ. ಯುದ್ಧದಲ್ಲಿ ಮಾಮೂಲಾಗಿರುವಂತೆ,
ಮಿತ್ರರು, ಶತ್ರುಗಳು, ವಂಚಕರು
ಇಲ್ಲೂ ಕಾಣಸಿಗುತ್ತಾರೆ. ಆದರೆ ಚಿತ್ರ ವಿಶೇಷ ಅನಿಸುವುದು, ಇವೆಲ್ಲಾ ಗೊಂದಲಗಳನ್ನು ಕೇವಲ ಚಿತ್ರ ತನ್ನ ಪರಿಸರದಲ್ಲಿ ಹೊಂದಿಕೊಂಡಿದ್ದು, ಇವೆಲ್ಲವುಗಳ ಮಧ್ಯದಲ್ಲೇ ಒಂದು ಪ್ರೇಮ ಕಥೆಯನ್ನು ಹೇಳುವುದು. ಈ ಪ್ರೇಮ, ಸದಾ ಸಾವಿಗೆ ಸಿದ್ಧವಾಗಿರಬೇಕಾದ ಸಂದರ್ಭದಲ್ಲಿ ಬದುಕುವ
ಉತ್ಸಾಹ ನೀಡುವಂಥಾ ವಿಷಯ ಎಂದು ಈ ಚಿತ್ರ ನೋಡಿದಾಗ ಅನಿಸುತ್ತದೆ. ಯಾವುದೋ
ಥ್ರಿಲ್ಲರ್ ಸಿನೆಮಾ ನೋಡಿದಾಗ ಸಿಗುವಂಥಾ ಓಟ ಇಲ್ಲಿದೆ, ಮುಖ್ಯವಾಹಿನಿ ಸಿನೆಮಾದಂಥಾ
ಪ್ರೇಮ ಕಥಾನಕ ಇಲ್ಲಿದೆ. ಆದರೆ ಇವೆಲ್ಲವುಗಳ ನಡುವೆ ಅವೆಲ್ಲವನ್ನೂ ಮೀರಿದ
ಜೀವನ ಕಥಾನಕ ಈ ಸಿನೆಮಾದ ವೈಶಿಷ್ಟ್ಯ.
ಸದಾ ಅಸ್ಥಿರವಾದ ಕ್ಯಾಮರಾ ಕಣ್ಣುಗಳಲ್ಲೇ ಈ ಚಿತ್ರವನ್ನು ಚಿತ್ರೀಕರಿಸಲಾಗಿದೆ. ಚುರುಕಾದ ಸಂಕಲನ ಕಥನದ ವೇಗಕ್ಕೆ ಸಾಥ್ ನೀಡುತ್ತದೆ. ಅನೇಕ ಬಾರಿ ಚಿತ್ರದಲ್ಲಿ ಗುಂಡು ಹಾರಿದಾಗ, ಯಾರು ಹಾರಿಸಿದರು,
ಯಾಕೆ ಹಾರಿಸಿದರು, ಯಾರಿಗೆ ಹಾರಿಸಿದರು ಎನ್ನುವುದನ್ನು
ತೋರಿಸುವ ಗೋಜಿಗೇ ಚಿತ್ರ ಹೋಗುವುದಿಲ್ಲ. ಯುದ್ಧದ ನಿರರ್ಥಕತೆಗೆ ಇದು ಒಂದು
ವ್ಯಾಖ್ಯಾನವೇ ಎಂಬಂತೆ ಈ ಘಟನೆಗಳು ನಡೆಯುತ್ತವೆ. ಚಿತ್ರದುದ್ದಕ್ಕೂ,
ಅನೇಕ ಬಾರಿ ಶಬ್ದಗಳ ಅನುಪಸ್ಥಿತಿಯೇ, ಒಂದು ಅಸಹಜ ನೀರವತೆಯನ್ನು
ರೂಪಿಸಿ, ಕಥನಕ್ಕೆ ವಿಶೇಷ ಕೊಡುಗೆ ಕೊಡುತ್ತದೆ. ಬದಲಾಗುತ್ತಿರುವ ಕಾಲದ ಸೂಚಕವಾಗಿ ಬಳಸಿದ ಸಣ್ಣ ಸಣ್ಣ ಉಪಕರಣಗಳನ್ನು ಗಮನಿಸುವುದು ಈ ಚಿತ್ರದಲ್ಲಿ
ಪ್ರೇಕ್ಷಕರಿಗೆ ಮುದ ನೀಡಬಹುದಾದ ಇನ್ನೊಂದು ವಿಷಯ. ಉದಾಹರಣೆಗೆ,
ಮೊದಲು ಒಮರ್ ಕೈಯ್ಯಲ್ಲಿ ಹಿಟ್ಟು ಕಲಸಿ, ಲಟ್ಟಿಸಿ ಬ್ರೆಡ್
ಮಾಡುತ್ತಿರುತ್ತಾನೆ. ಚಿತ್ರದ ಕೊನೆಯ ಭಾಗಕ್ಕೆ ಬರುವಾಗ ಯಾಂತ್ರೀಕೃತ ಪ್ರಕ್ರಿಯೆಯಲ್ಲಿ
ಒಮರ್ ಅದೇ ಕೆಲಸವನ್ನು ಮಾಡುವುದನ್ನು ಚಿತ್ರ ವಿವರವಾಗಿ ತೋರಿಸುತ್ತದೆ. ಬದಲಾಗುತ್ತಿರುವ ಕಾಲದಲ್ಲಿ ಬದಲಾಗುತ್ತಿರುವ ಗೆಳೆತನ, ಪ್ರೇಮ,
ವಿಶ್ವಾಸ, ನಂಬಿಕೆಗಳ ಅರ್ಥ ಈ ಚಿತ್ರದ ನಂತರವೂ ಕಾಡುತ್ತದೆ.
Share This