ಬೆಂಗಳೂರು ಅಂತರ ರಾಷ್ಟ್ರೀಯ ಚಲನ ಚಿತ್ರೋತ್ಸವದಲ್ಲಿ ಪ್ರದರ್ಶಿತವಾದ ಪೋಲ್ಯಾಂಡಿನ ಸಿನೆಮಾ ಫೀಲ್ಡ್
ಆಫ್ ಡಾಗ್ಸ್ ಚಿತ್ರ ನನಗೆ ತಟ್ಟಿದ ಸಿನೆಮಾ. ಈ ಸಿನೆಮಾವನ್ನು
ನಿರ್ದೇಶಿಸಿದವರು ಲೇಹ್ ಮೆಜೆವ್ಸ್ಕಿ.
ಆಡಮ್ ಎನ್ನುವ ಕವಿ, ಸಾಹಿತ್ಯದ ಉಪನ್ಯಾಸಕ ಒಂದು ಭೀಕರ ಅಪಘಾತದಲ್ಲಿ ತನ್ನವರನ್ನೆಲ್ಲಾ
ಕಳೆದುಕೊಳ್ಳುತ್ತಾನೆ. ಅವನು ಮಾತ್ರ ಅಚ್ಚರಿಯೆಂಬಂತೆ ಬದುಕಿ ಉಳಿಯುತ್ತಾನೆ.
ಅವನಿಗೆ ಬದುಕು, ಸಾವು ಇವೆಲ್ಲದರ ಅನಿಶ್ಚಿತತೆಗಳು ಕಾಡಲಾರಂಭಿಸುತ್ತದೆ.
ಆಡಮ್ ತನ್ನ ಕೆಲಸವನ್ನು ಬಿಟ್ಟು ಸೂಪರ್ ಮಾರ್ಕೆಟ್ ಒಂದರಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ
ಕೂರುವ ಕೆಲಸವನ್ನು ಆರಂಭಿಸುತ್ತಾನೆ. ಆದರೆ ಅವನಿಗೆ ಭೀಕರ ವಾಸ್ತವದಿಂದ
ತಪ್ಪಿಸಿಕೊಳ್ಳಲು ಆಗಾಗ್ಗೆ ನಿದ್ರೆಗೆ ಜಾರುವ, ಮುರುಟಿ ಮಲಗುವ ಆಸೆ ಒತ್ತಿ
ಬರುತ್ತಿರುತ್ತದೆ. ನಿದ್ರೆಗೆ ಜಾರಿದಾಗಲೆಲ್ಲಾ, ಅಸಾಧಾರಣ ಕನಸುಗಳು ಅವನನ್ನು ಅಸ್ತಿತ್ವದ ಬಗ್ಗೆ ಇನ್ನಷ್ಟು ಪ್ರಶ್ನೆಗಳನ್ನು ಎಬ್ಬಿಸುವಂತೆ
ಮಾಡುತ್ತವೆ. ಪೋಲ್ಯಾಂಡ್ ದೇಶಕ್ಕೆ ಆ ವರ್ಷ ಅನೇಕ ರಾಷ್ಟ್ರೀಯ ದುರಂತಗಳನ್ನು
ನೀಡಿತ್ತು. ಪ್ರವಾಹ, ಅಗ್ನಿ ದುರಂತ ಎಲ್ಲದರ ಜೊತೆಗೆ
ಸರಕಾರದ ವರಿಷ್ಠರನ್ನೊಳಗೊಂಡ ವಿಮಾನದ ಪತನ ಹೀಗೆ ರಾಷ್ಟ್ರದ ಜನತೆ ಭಯದ ವಾತಾವರಣದಲ್ಲಿ ಜೀವಿಸುತ್ತಿರುವಾಗ,
ಆಡಮ್‍ನ ಖಾಸಗೀ ದುರಂತಗಳು, ರಾಷ್ಟ್ರೀಯ
ದುರಂತಗಳೊಂದಿಗೆ ತಾಳೆ ಹೋಗುತ್ತಾ, ಇಡೀ ರಾಷ್ಟ್ರದ ಯೋಜನೆಗಳು,
ಗೊಂದಲಗಳು ಆಡಮ್ ವರ್ತನೆಯಲ್ಲಿ, ಕನಸುಗಳಲ್ಲಿ ಪ್ರತಿಧ್ವನಿಸುತ್ತಾ
ಹೋಗಲಾರಂಭಿಸುತ್ತದೆ. ನೀರವತೆ, ಏಕಾಂಗಿತನಗಳನ್ನು
ಬಯಸುವ ಮನಸ್ಸು, ದಹಿಸುತ್ತಿರುವ ಮನಸ್ಸಿಗೆ ಆಗಸದಿಂದ ನೀರು ಸುರಿಯಬಾರದೇ
ಎನ್ನುವ ಆಸೆ ಇವೆಲ್ಲವೂ, ಅಸಂಗತ ದೃಶ್ಯಗಳ ರೂಪದಲ್ಲಿ ಚಿತ್ರದಲ್ಲಿ ಕಾಣಲಾರಂಭಿಸುತ್ತದೆ.

ಧ್ವನಿಯ ನಿರ್ವಹಣೆ ಹಾಗೂ ದೃಶ್ಯಗಳ ನಿರ್ವಹಣೆಯಲ್ಲಿ ಈ ಸಿನೆಮಾವು ನನ್ನನ್ನು ಬಹಳ ಹಿಡಿದಿಟ್ಟಿತು. ಅಸಂಗತ ದೃಶ್ಯಗಳನ್ನು ರೂಪಿಸುವಾಗ ಅವು ಕೈ ಮೀರಿ ಹೋಗಿಬಿಡುವ,
ದೃಶ್ಯ ವೈಭವ ಮಾತ್ರ ಎದ್ದು ಕಂಡು ಬಿಡುವ ಅಪಾಯ ಸದಾ ಇರುತ್ತದೆ. ಆದರೆ ಫೀಲ್ಡ್ ಆಫ್ ಡಾಗ್ಸ್, ಇಲ್ಲಿ ಯಶಸ್ವಿಯಾಗುತ್ತದೆ.
ಶಾಂತಿ ಸೂಚಕ ಪಾರಿವಾಳ, ಅದರ ಮೊಟ್ಟೆ – ಶಾಂತಿಯ ಬೀಜ, ಮರಣದಲ್ಲಿ ಮತ್ತೆ ಶಾಂತಿಯ ಜನನ ಹೀಗೆ ಸಾಹಿತ್ಯ,
ಚಿತ್ರಕಲೆ ಎಲ್ಲವುಗಳಿಂದಲೂ ಫೀಲ್ಡ್ ಆಫ್ ಡಾಗ್ಸ್ ಸಿನೆಮಾ ಪ್ರತಿಮೆಗಳನ್ನು ದೃಶ್ಯ,
ಶ್ರವ್ಯ ಮಾಧ್ಯಮಕ್ಕೆ ಇಳಿಸಿಕೊಳ್ಳುತ್ತಾ, ಬದುಕು,
ಮರಣ, ಅಸ್ತಿತ್ವಗಳ ಕುರಿತು ಸುಂದರ ವ್ಯಾಖ್ಯಾನವನ್ನು ಮಾಡುತ್ತಾ
ಹೋಗುತ್ತದೆ.
Share This