ಸತ್ಯವೇ ಶಿವನಂತೆ. ಶಿವನಿಗೆ ಎರಡೇ ಕಣ್ಣಂತೆ. ಒಂದು ಈ ಪಕ್ಷ ಇನ್ನೊಂದು ಆ ಪಕ್ಷ. ಮೂರನೇ ಕಣ್ಣು ಸದಾ ಮುಚ್ಚಿರುತ್ತಂತೆ. ನನ್ನ ಇಂದಿನ ಸಮಸ್ಯೆ ಆ ವಿಷಯಕ್ಕೇ ಸಂಬಂಧಿಸಿದ್ದು. ಇಂದಿನ ಸಮಾಜದಲ್ಲಿ ಹೇಗೆ ನಾವು ಸತ್ಯದ ಮೂರನೇ ಕಣ್ಣನ್ನು ಮರೆಯುತ್ತಿದ್ದೇವೆ ಎನ್ನುವುದೇ ನನ್ನ ಸಮಸ್ಯೆ. ಪಬ್ ಧಾಳಿಯ ಸಮಯದಲ್ಲಿ ಮದಿರಾಪಾನದಲ್ಲಿ ವ್ಯಸ್ಥರಾಗಿದ್ದವರಿಗೆ ಹೊಡೆದದ್ದು ತಪ್ಪು ಎಂದು ಎಲ್ಲೋ ಮಾತನಾಡುತ್ತಾ ಹೇಳಿದೆ. ಹೋ! ಹಾಗಾದರೆ ಮದಿರಾಪಾನದ ಬೆಂಬಲಿಗರೋ ನೀವು ಎಂದು ಎದುರಿನವರು ಕೇಳಿದರು. ಇನ್ಯಾವುದೋ ಸಂದರ್ಭದಲ್ಲಿ ಮದಿರಾಪಾನ ಸರಿಯಲ್ಲ ಎಂದು ನನ್ನ ಅಭಿಪ್ರಾಯ ಎಂದು ನಾನು ಹೇಳಿದಾಗ ಹೋ! ಅಂದರೆ ನೀವು ರಾಮಸೇನೆಯ ಬೆಂಬಲಿಗರೋ ಎಂದು ಎದುರಿನವರು ಕೇಳಿದರು! ಇತ್ತೀಚೆಗೆ ಮತ್ತೆ ಇಂಥಾದ್ದೊಂದು ಘಟನೆ ನಡೆದಿದೆ. ಉಡುಪಿಯ ಬಳಿ ಚಾರ್ಲೀಚಾಪ್ಲಿನ್ ವಿಗ್ರಹ ನಿರ್ಮಿಸುವುದನ್ನು ವಿರೋಧಿಸಲಾಯಿತು. ಅದು ಹಿಂದೂ ಭಾವನೆಗಳಿಗೆ ವಿರುದ್ಧ ಎಂದು ಅದನ್ನು ವಿರೋಧಿಸಲಾಯಿತು ಎಂದರು. ಕಲಾ ಸಾಮ್ರಾಟ ಚಾರ್ಲಿ ಚಾಪ್ಲಿನನನ್ನು ಒಬ್ಬ ಕ್ರಿಶ್ಚನ್ ಎಂದು ಗುರುತಿಸುವುದು ತೀರಾ ಕುಬ್ಜ ಮನೋಭಾವ. ಆದರೆ ಹಾಗೆಂದು ಅಲ್ಲಿ ಚಾಪ್ಲಿನ್ ವಿಗ್ರಹ ನಿರ್ಮಿಸುವ ಪರವೂ ನಾನಲ್ಲ! ಅಂದರೆ ನಾನು ಈ ಕಡೆಯವನೋ? ಆ ಕಡೆಯವನೋ? ಯಾವ ಕಡೆ ನಾನು ಎಂದು ನಿರ್ಧಾರ ಮಾಡಲಾಗದೇ ಇಲ್ಲಿ ಬರೆಯುತ್ತಿದ್ದೇನೆ. ಇಲ್ಲಿ ಒಂದು ವಿಚಿತ್ರ ಸಮಸ್ಯೆ ನನಗೆ ಎದುರಾಗಿದೆ.
ಅರುವತ್ತೇಳಡಿ ಎತ್ತರದ ಚಾರ್ಲಿ ಚಾಪ್ಲಿನ್ ವಿಗ್ರಹವನ್ನು ಉಡುಪಿಯ ಬಳಿ ನಿರ್ಮಿಸಿದ್ದರಿಂದ ಏನಪ್ಪಾ ಲಾಭ ಇದೆ? ಅದೊಂದು ಪ್ರವಾಸೀ ತಾಣವಾಗಲಿದೆ ಎಂಬ ಉತ್ತರ ಇದೆ ಇದಕ್ಕೆ. ಆದರೆ ಇದರ ದೂರಗಾಮಿ ಪರಿಣಾಮಗಳನ್ನೊಮ್ಮೆ ಯೋಚಿಸೋಣ. ನಾನು ಇಲ್ಲಿ ಚಾಪ್ಲಿನ್ ಭಾರತಕ್ಕೆ ಏನೂ ಕೊಡುಗೆ ಕೊಟ್ಟಿಲ್ಲ ಇತ್ಯಾದಿ ಅತಾರ್ಕಿಕ ವಿಷಯಗಳ ಬಗ್ಗೆ ಮಾತನಾಡುತ್ತಿಲ್ಲ ಎನ್ನುವುದನ್ನು ಮತ್ತೆ ನೆನಪು ಮಾಡುತ್ತಲೇ ಮುಂದುವರೆಯುತ್ತೇನೆ. ಇಂಥಾ ಒಂದು ಪ್ರವಾಸೀ ತಾಣವನ್ನು ನಿರ್ಮಾಣ ಮಾಡುವುದೆಂದರೆ, ನಿಧಾನವಾಗಿ ಅಲ್ಲಿಗೆ ಜನ ಬರಲಾರಂಭಿಸುತ್ತಾರೆ. ಅಲ್ಲಿ ಐಸ್ಕ್ರೀಮ್ ಮಾರುವವರು, ಬಲೂನ್ ಮಾರುವವರು ಬರುತ್ತಾರೆ. ಸಮುದ್ರ ದಂಡೆಯಲ್ಲಿ ಆದಿತ್ಯವಾರ ಕಳೆಯಲು ಯುವ ಪ್ರೇಮಿಗಳು ಬರಲಾರಂಭಿಸುತ್ತಾರೆ. ಚಾಪ್ಲಿನ್ ಮಾಮ ನೋಡು ಎಂದು ಕಾರಿನೊಳಗೆ ಕುಳಿತ ಕುಟುಂಬಸ್ಥರು ತಮ್ಮ ಮಕ್ಕಳಿಗೆ ತೋರಿಸಲಾರಂಭಿಸುತ್ತಾರೆ. ನೋಡುತ್ತಾ ನೋಡುತ್ತಾ ಆ ಇಡೀ ಸ್ಥಳದಲ್ಲಿ ಒಂದು ಉದ್ಯಮ ರೂಪಗೊಳ್ಳುತ್ತಾ ಸಾಗುತ್ತದೆ. ಮುಂದೆ ಅಲ್ಲಿ ಇರುವ ಜನರ ಜೀವನಾಧಾರವೇ ಈ ಚಾಪ್ಲಿನ್ ವಿಗ್ರಹವಾಗುತ್ತದೆ. ಇಂದು ಆಗಾಗ್ಗೆ ಸಂಭವಿಸುವ ಅಂಬೇಡ್ಕರ್ ವಿಗ್ರಹ ಅವಮಾನದ ಪ್ರಕರಣಗಳಂತೆಯೇ ಇದು ಇನ್ನೊಂದು ಅವಕಾಶವನ್ನು ತೆರೆದು ಕೊಟ್ಟಂತಾಗುತ್ತದೆ. ಒಟ್ಟಿನಲ್ಲಿ ಇಡೀ ವ್ಯವಹಾರವೇ ಅನಗತ್ಯ ತಲೆಶೂಲೆಗಳಿಗೆ ಆಹ್ವಾನ. ಪ್ರವಾಸೋದ್ಯಮ ಎಂದರೆ ಪ್ರವಾಸೀ ತಾಣಗಳ ನಿರ್ಮಾಣ ಎನ್ನುವ ಕಲ್ಪನೆಯೇ ವಿಚಿತ್ರ. ಇರುವುದನ್ನು ನೋಡಲು ಜನ ಬರುವ ಬದಲು ಜನ ಬರಲೆಂದು ಏನನ್ನೋ ನಿರ್ಮಿಸುವುದು ನನಗೆ ಸದಾ ವಿಚಿತ್ರ ಎನಿಸುತ್ತದೆ. ಯಾವುದೋ ಕಾಡು, ಬೆಟ್ಟ ನೋಡಲು ಜನ ಹೋಗುವುದಕ್ಕೂ ಚಾಪ್ಲಿನ್ ನೋಡಲು ಉಡುಪಿಗೆ ಬರುವುದಕ್ಕೂ ವ್ಯತ್ಯಾಸವಿಲ್ಲವೇ?
ಅದಂತಿರಲಿ… ನನ್ನ ಮುಖ್ಯ ಸಮಸ್ಯೆಗೆ ಬರುತ್ತೇನೆ. ನಾನು ಚಾಪ್ಲಿನ್ ವಿಗ್ರಹವನ್ನು ವಿರೋಧಿಸುತ್ತಿದ್ದೇನೆ ಎಂದಾಕ್ಷಣ ನಾನು ಮತಾಂಧ ಎಂದು ಹಣೆ ಪಟ್ಟಿ ಕಟ್ಟುವಂಥಾ ಪರಿಸ್ಥಿತಿ ಹಲವು ವರುಷಗಳಲ್ಲಿ ಬೆಳೆದು ಬಂದಿರುವುದು ಆತಂಕಕಾರಿ ಬೆಳವಣಿಗೆ. ಅಭಿಪ್ರಾಯಗಳು ಕೇವಲ ಕಪ್ಪು-ಬಿಳುಪಿನಲ್ಲಿ ಇರಬೇಕು. ಒಂದೋ ಈ ಪಕ್ಷ ಇಲ್ಲಾ ಆ ಪಕ್ಷ ಎನ್ನುವಂಥಾ ಮನೋಭಾವ ನಮ್ಮಲ್ಲಿ ಬೆಳೆದು ಬಂದಿದೆ ಇತ್ತೀಚೆಗೆ. ಮೂರನೆಯ ದೃಷ್ಟಿ ಕೋನ ಎನ್ನುವುದು ಇಲ್ಲದಂತೆ ಆಗಿದೆ. ಮತ್ತು ಈ ಇಡೀ ಪರಿಸ್ಥಿತಿಯ ಲಾಭವನ್ನು ಮೂಲಭೂತವಾದಿಗಳು ಪಡೆಯುತ್ತಿದ್ದಾರೆ! ಇದರಿಂದ ಒಂದು ಯುದ್ಧ ಸನ್ನಿವೇಶ ಮೂಡಿ ಬಂದಿದೆ. ನೀನು ವೈರಿ ಪಕ್ಷದವನೋ ಇಲ್ಲ ಮಿತ್ರ ಪಕ್ಷದವನೋ? ಇದೆರಡಕ್ಕೂ ಸೇರಿಲ್ಲ ಎಂದಾದರೆ ನಿನಗೆ ಅಸ್ತಿತ್ವವೇ ಇಲ್ಲ ಎನ್ನುತ್ತದೆ ಇಂದು ಹುಟ್ಟಿಕೊಳ್ಳುವ, ಕಾಣಿಸಿಕೊಳ್ಳುವ ಪ್ರಕರಣಗಳು. ಇದರಿಂದಾಗಿ ಯಾವುದೇ ಪ್ರಕರಣಕ್ಕೆ ಪ್ರತಿಕ್ರಿಯಿಸುವಾಗಲೂ ಇದು ಮೂಲಭೂತವಾದಿಗಳ ಪರವಾಗಿದೆಯೋ ಇಲ್ಲಾ ಅದಕ್ಕಿಂತ ಹೆಚ್ಚಿನ ಅಪಾಯವನ್ನು ತರುವ ಮೂಲ ಸಮಸ್ಯೆಯ ಕುರಿತಾಗಿದೆಯೋ ಎಂದು ಯೋಚಿಸಿ ಅತ್ಯಂತ ಕಡಿಮೆ ನಷ್ಟತರುವಂಥಾ ಸಂದರ್ಭ ಇಂದು ಸೃಷ್ಟಿಯಾಗಿದೆ. ಇದು ಮತ್ತೆ ಮೂಲಭೂತವಾದಿಗಳ ವಾದವನ್ನು ಸಬಲಗೊಳಿಸುವುದರಿಂದ ಇಡೀ ಒಂದು ಪ್ರಕ್ರಿಯೆ ಹಾಗೂ ಪ್ರತಿಕ್ರಿಯೆಯ ಅಭ್ಯಾಸವೇ ನನಗೆ ವಿಚಿತ್ರ ಎನಿಸುತ್ತಿದೆ. ಇದರಿಂದಾಗಿ ಒಂದು ಸಮಸ್ಯೆಯ ಸರಳೀಕರಣವಾಗುತ್ತದೆ ಮತ್ತು ಆ ಸಮಸ್ಯೆಯ ನಿಜ ಮಗ್ಗುಲುಗಳನ್ನು ನೋಡುವಲ್ಲಿ ನಾವು ಹೆಚ್ಚಿನಂಶ ಸೋಲುತ್ತಲೇ ಇರುವುದಕ್ಕೆ ಚಾಪ್ಲಿನ್ ವಿಗ್ರಹ ಪ್ರಕರಣವೂ ಒಂದು ಉದಾಹರಣೆ.
ಇಂಥಾ ಸಂದರ್ಭದಲ್ಲಿ ಜಾಗೃತ ಸಮಾಜದ ಪ್ರಜೆ ನಾವಾಗಿರುವುದಾದರೂ ಹೇಗೆ ಸ್ವಾಮಿ…? ಉತ್ತರ ನನಗೆ ಹೊಳೆಯುತ್ತಿಲ್ಲ. ನಿಮಗೆ ಹೊಳೆದರೆ ದಯವಿಟ್ಟು ತಿಳಿಸಿ. ಶಿವನ ಮೂರನೇ ಕಣ್ಣು ಎಂದು ತೆರೆದೀತು ಸ್ವಾಮಿ? ಶಿವನ ಮೂರನೇ ಕಣ್ಣನ್ನು ಮರೆಯದಿರಲು ನಾವು ಪ್ರಯತ್ನಿಸುತ್ತಿರಬೇಕು ಎಂಬ ಭಾವದೊಡನೆ ನನ್ನೊಳಗಿನ ತೊಳಲಾಟವನ್ನು ನಿಮ್ಮೊಂದಿಗೆ ಹಂಚಿಕೊಂಡೆ.