Shakuntala

ಕನ್ನಡದ ಪ್ರಮುಖ ಲೇಖಕಿಯರಲ್ಲೊಬ್ಬರಾದ ವೈದೇಹಿಯವರ ಕಥೆಯೊಂದನ್ನು ಆಯ್ದುಕೊಂಡು ಕೃಷ್ಣ ಮೂರ್ತಿ ಕವತ್ತಾರರು ನಿರ್ದೇಶಿಸಿ, ಸೀತಾ ಕೋಟೆಯವರು ಅಭಿನಯಿಸಿರುವ ಅಲೆಗಳಲ್ಲಿ ಅಂತರಂಗ ಇತ್ತೀಚೆಗೆ ಬೆಂಗಳೂರಿನ ಕೆ.ವಿ.ಸುಬ್ಬಣ್ಣ ಆಪ್ತ ಕಲಾಮಂದಿರದಲ್ಲಿ ಪ್ರದರ್ಶನಗೊಂಡಿತು. ಪ್ರದರ್ಶನ ತುಂಬಾ ಮುದನೀಡಿತು. ಎಲ್ಲಾ ವಿಭಾಗಗಳಲ್ಲೂ ನಾಟಕವು ಯಶಸ್ವಿಯಾಗಿತ್ತು. ದುಶ್ಯಂತ ಹಾಗೂ ಶಕುಂತಲೆ ಪ್ರಕರಣವನ್ನು ಶಕುಂತಲೆ ಕವಿಗೆ ಹೇಳಿದಂತೆ ಈ ಇಡೀ ಏಕವ್ಯಕ್ತಿ ನಾಟಕ ಅನಾವರಣಗೊಳ್ಳುತ್ತದೆ. ಇಲ್ಲಿ ಇವರ ನಡುವಿನ ಸಂಬಂವನ್ನು ವಿಭಿನ್ನ ಆಯಾಮದಿಂದ ನೋಡಲಾಗಿದೆ. ಶಕುಂತಲೆ ಕೇವಲ ಅಬಲೆ ಹೆಣ್ಣಾಗದೆ, ಕೇವಲ ಪರಿಶುದ್ಧ, ಮುಗ್ಧ ಆಶ್ರಮದ ಹೆಣ್ಣಾಗಿರದೆ ದಿಟ್ಟ, ಹೆಣ್ಣಾಗಿದ್ದಾಳೆ. ಅಂತೆಯೇ ದುಶ್ಯಂತ ಮರ್ಯಾದಾ ಪುರುಷೋತ್ತಮನಾಗಿ ಕಾಣಿಸಿಕೊಳ್ಳದೆ, ಕೇವಲ ಒಬ್ಬ ರಾಜಕಾರಿಣಿಯಾಗಿ ಕಾಣಿಸುತ್ತಾನೆ (ರಾಜಕಾರಣದ ಮುಂದೆ ರಾಜಕಾರಿಣಿಯ ಒಳಗಿನ ಮನುಷ್ಯ ಅಡಗುತ್ತಾನೆ ಎಂಬ ಋಣಾತ್ಮಕ ಭಾವ ಇಲ್ಲಿ). ಈ ಕಥಾನಕದಲ್ಲಿ ಶಾಪ, ಮಾಯ, ಮಂತ್ರ ಇತ್ಯಾದಿಗಳಿಂದ ದೂರಹೋಗಿ ಕೇವಲ ಮನುಷ್ಯಮಾತ್ರರನ್ನಾಗಿ ಪಾತ್ರಗಳನ್ನು ನೋಡುವ ಪ್ರಯತ್ನ ಇದೆ. ಹೀಗಾಗಿ ಅಭಿಜ್ಞಾನ ಶಾಕುಂತಲೆಯ ಶಕುಂತಲೆ, ಇಲ್ಲಿ ಕೇವಲ ಒಬ್ಬ ಹೆಣ್ಣಾಗಿ, ದುಶ್ಯಂತ ಕೇವಲ ಒಬ್ಬ ರಾಜಕಾರಿಣಿಯಾಗಿ ಕಾಣಿಸಿಕೊಳ್ಳುತ್ತಾರೆ.


ವೈದೇಹಿಯವರ ಅಧ್ಬುತ ರಚನೆಯನ್ನು ಸಂಗೀತ ಸಂಯೋಜನೆ ಮಾಡಿ, ನಿರ್ದೇಶಿಸಿ ರಂಗಕ್ಕೆ ನಿರ್ದೇಶಿಸಿದವರು ಕೃಷ್ಣಮೂರ್ತಿ ಕವತ್ತಾರ್‍ರವರು. ನಟನೆಯಲ್ಲಿ ಚಲನೆಯ ಮೂಲಕ ಸ್ಪೇಸ್‍ಗಳನ್ನು ಸೃಷ್ಟಿಮಾಡುವಲ್ಲಿ ನಿರ್ದೇಶಕರು ತುಂಬಾ ಸಂತೋಷಕೊಡುತ್ತಾರೆ. ನಟಿಯೊಡನೆ, ಪ್ರೇಕ್ಷಕರಿಗೂ ಕೆಲವೆಡೆ ಮನ ಅರಳಿದರೆ, ಮತ್ತು ಕೆಲವೆಡೆ ಮುದುಡಿ, ಅಚಾನಕ್ಕಾಗಿ ಪಾತ್ರದೊಂದಿಗೆ ನಮ್ಮನ್ನು ಇಟ್ಟುಬಿಡುವಲ್ಲಿ ನಿರ್ದೇಶಕರು ಸಫಲರಾಗುತ್ತಾರೆ.

ಭರತನಾಟ್ಯದಲ್ಲಿ ತುಂಬಾ ಪರಿಶ್ರಮ ಹೊಂದಿರುವ, ಟಿ.ವಿ, ಸಿನೆಮಾ ಮಾಧ್ಯಮಗಳಲ್ಲಿ ನಟನೆಯ ಅನುಭವ ಪಡೆದಿರುವ ಸೀತಾಕೋಟೆಯವರು ಶಕುಂತಲೆಯಾಗಿ ನಟಿಸಿದ್ದರು. ಇವರ ಅಭಿನಯ ಶುದ್ಧಿ ನೋಡಿಯೇ ಮನತಣಿಯುವಂಥಾದ್ದು. ಸುಮಾರು ಒಂದು ಗಂಟೆಯಷ್ಟು ಸಮಯ, ಇವರು ರಂಗವನ್ನು ತುಂಬುವ ಬಗೆ, ಎಳೆದುತರುವ ಲವಲವಿಕೆ ನಾಟಕವನ್ನು ಬೇರೆಯೇ ಸ್ಥರಕ್ಕೆ ಒಯ್ಯುತ್ತದೆ. ಒಟ್ಟಿನಲ್ಲಿ ಶಕುಂತಲೆಯನ್ನು ಮತ್ತೆ ಜೀವಿತಗೊಳಿಸುವಲ್ಲಿ ಸೀತಾಕೋಟೆಯವರು ಸಮರ್ಥರಾಗಿದ್ದಾರೆ.

ನಾಟಕದ ಬಗ್ಗೆ ಹೆಚ್ಚಿನ ಅರಿವಿಲ್ಲದಿದ್ದರೂ ಈ ನಾಲ್ಕು ಮಾತುಗಳನ್ನು ಬರೆಯದಿದ್ದರೆ, ನೋಡಿದ ನಾಟಕ, ಮನಕೆ ನೀಡಿದ ಸಂತೋಷಕ್ಕೆ ಅನ್ಯಾಯ ಬಗೆದಂತೆ ಎಂದು ಈ ಬರಹ ನಿಮ್ಮ ಮುಂದಿಟ್ಟಿದ್ದೇನೆ. ಮುಂದಿನ ಅವಕಾಶ ಸಿಕ್ಕಿದಾಗ, ಅಲೆಗಳಲ್ಲಿ ಅಂತರಂಗವನ್ನು ತಪ್ಪಿಸಿಕೊಳ್ಳದೇ ನೋಡಿ.

ನಾಟಕದ ಮೊದಲಲ್ಲಿ ಕೊಟ್ಟ ನಾಟಕ ಪರಿಚಯ, ನಟಿ ಪರಿಚಯ ಹೀಗಿದೆ…

“ಅಲೆಗಳಲ್ಲಿ ಅಂತರಗ”
(ಶ್ರೀಮತಿ ವೈದೇಹಿಯವರ ಶಕುಂತಲೆಯೊಂದಿಗೆ ಒಂದು ಅಪರಾಹ್ನ)

ಪ್ರಣಯೋತ್ಕರ್ಷತೆಯ ಸುಂದರ ಮಹಾಕಾವ್ಯವಾಗಿ ಬಿಂಬಿತವಾಗಿರುವ ದುಶ್ಯಂತ ಶಕುಂತಲೆಯರ ಪ್ರಣಯ ಪ್ರಸಂಗವನ್ನು ನಮ್ಮ ನಾಡಿನ ಹೆಮ್ಮೆಯ ಸಮರ್ಥ ಕವಿಯತ್ರಿ ಶ್ರೀಮತಿ
ವೈದೇಹಿಯವರು ಶಂಕುತಲೆಯ ಮೂಲಕ ಅನಾವರಣಗೊಳಿಸಿದ “ಶಕುಂತಲೆಯೊಂದಿಗೆ ಒಂದು ಅಪರಾಹ್ನ” ಎಂಬ ಕತೆಯೇ ಇಲ್ಲಿ “ಅಲೆಗಳಲ್ಲಿ ಅಂತರಂಗ”ವಾಗಿದೆ (ಇದು ಅವರ ಸಮಗ್ರ ಕತೆಗಳ ಸಂಪುಟದ ಶೀರ್ಷಿಕೆಯೂ ಹೌದು). ಶಂಕುತಲೆಯನ್ನು ಸ್ತ್ರೀಯ ವಿವಿಧ ಆಯಾಮಗಳಲ್ಲಿ ಸಮಾಜಮುಖಿಯಾಗಿಸುವ ಸೂಕ್ಷ್ಮತೆಯೇ ಇಲ್ಲಿನ ವೈಶಿಷ್ಟ್ಯ. ಆಶ್ರಮದ ಗಿಡದಲ್ಲಿ ಅರಳಿದ ಹೂವಿನಂತೆ, ಕಣ್ವರ ಕಣ್ಣಳತೆಯಲ್ಲಿಯೇ ಬೆಳೆಯುತ್ತಾ ನಾರುಮಡಿಯಡಿಯಲ್ಲೇ ಅರಳಿದ ಹದಿಹರೆಯದಲ್ಲಿ ವ್ಯವಸ್ಥೆಯ, ಅರ್ಥಾತ್ ನಾಗರೀಕತೆಯ ಪ್ರತೀಕ ದುಶ್ಯಂತನ ಪ್ರೀತಿಯ ಬಾಹುಗಳಲ್ಲಿ ಬಂಧಿಯಾಗುವ ಈ ಕಾಡಿನ ಬಾಲೆ ಬೆಳದಿಂಗಳಲ್ಲಿ ಅವನಲ್ಲಿ ಒಂದಾಗುತ್ತಾಳೆ. ಮಿಲನದ ನಂತರದ ಅಗಲಿಕೆಯ ಗಳಿಗೆಯಲ್ಲಿ ಅವನುಡಿದ “ಗಟ್ಟಿಯಾಗು” ಎಂಬ ಮಾತಿನಡಿ ತಾನು ಕೊಟ್ಟು ಪಡೆದುದರ ಬಗ್ಗೆ ತನ್ನಂತರಂಗದಲ್ಲೇ ವಿಶ್ಲೇಷಿಸುತ್ತಾ ಅವನು ತೊಡಿಸಿ ಹೋದ ಸ್ಮೃತಿಯ ಸಂಕೇತ ಉಂಗುರದ ಪರಿಧಿಯಲ್ಲೆ ಇರದೆ …. ಅದರ ನೆರಳಲ್ಲೇ ಕರಗದೆ… ಅದನ್ನೇ ಶೂನ್ಯವಾಗಿಸಿಕೊಂಡು ಬಯಲಾಗುತ್ತಾಳೆ. ಪುರುಷ ಪ್ರಧಾನದ ಸಮಾಜಕ್ಕೆ, ಕವಿಗೆ, ಅವಕಟ್ಟಿದ ಪುರುಷಲಂಪಟತನದ ಮರೆಮಾಡುವ ವಿಸ್ಮೃತಿಯ ಕಾವ್ಯಕ್ಕೆ ಪ್ರಬಲ ಸಂವಾದಿಯಾಗುತ್ತಾ ಹೆಣ್ತನಕ್ಕೆ ಮರು ವ್ಯಾಖ್ಯಾನ ನೀಡುತ್ತಾಳೆ. ದುಶ್ಯಂತನ ತಿರಸ್ಕಾರಕ್ಕೆ ಪ್ರತಿಯಾಗಿ ಪ್ರತೀಕಾರದ ಸ್ಫೋಟವಾಗದೆ ಬದುಕಿನಿಂದ ವಿಮುಖಳಾಗದೆ ಪಡೆದುಕೊಂಡ ಖುಶಿಯನ್ನು ಕಳೆದುಕೊಂಡಾಗಲೂ ಕಾಪಾಡಿಕೊಳ್ಳುತ್ತಾ ದೌಷ್ಯಂತಿಯ ತಾಯಿಯಾಗಿ ಪ್ರತೀ ಸೂರ್ಯೋದಯವನ್ನು ಅಂತರಂಗದ ಬೆಳಕಾಗಿಸಿಕೊಂಡು ಭರತವರ್ಷಕ್ಕೆ ಭಾವೀ ಚಕ್ರವರ್ತಿಯನ್ನು ನೀಡಿ ಪ್ರಕೃತಿಯ ಮಡಿಲಮಾತೆಯಾಗುತ್ತಾಳೆ. ಬದುಕಿನ
ವಾಸ್ತವತೆಗೆ ಸಹಜ ಮುಖಾಮುಖಿಯಾಗುತ್ತಾಳೆ. ತನ್ನ ಅವಲೋಕನದಲ್ಲಿ ತನ್ನೊಳಗಿನ ಪ್ರೀತಿಯ ದುಷ್ಯಂತನ ಬಿಂಬಕ್ಕೆ ಖಳನ ಕಳಂಕ ತಟ್ಟದಂತೆ ಜೋಪಾನ ಮಾಡುವ ಈಕೆ “ಅದು ಇರಬೇಕಾದದ್ದು ಹೀಗೆಯೇ ಏನೋ?” ಎನ್ನುವಂತೆ ತನನ್ನು ತಾನು ದೂರನಿಂತು ನೋಡುವಷ್ಟು ಪಕ್ವವಾಗುತ್ತಾಳೆ.

ಅಂತರಂಗದ ಅನುಭವದ ಹೂಗಳನ್ನು ನೆನಪಿನ ದಾರದಲ್ಲಿ ಪೋಣಿಸುತ್ತಾ ‘ಪ್ರೇಮಿಯಾಗಿ’, ‘ವಿರಹಿಣಿಯಾಗಿ’, ‘ತಿರಸ್ಕೃತ ಹೆಣ್ಣಾಗಿ’ ದುಷ್ಯಂತನನ್ನು ಕಾವ್ಯಕ್ಕೆ ಬಿಟ್ಟುಕೊಟ್ಟು ಅದನ್ನು ಆಸ್ವಾದಿಸುವ ನಮ್ಮ ನಿಮ್ಮೆಲ್ಲರ ಮನದಂಗಳದಲ್ಲಿ ವಿಚಾರಗಳ ಹಣತೆಯಾಗುತ್ತಾಳೆ. ಪ್ರಸ್ತುತ ಪ್ರಯೋಗ ಭರತ ನೃತ್ಯದ ಆಂಗಿಕ ಭಾಷೆಯ ಜೊತೆಗೆ ವಾಸ್ತವ ನಟನೆಯ ಸೂಕ್ಷ್ಮತೆಯನ್ನೂ ಮೇಳೈಸಿಕೊಂಡು ಕಥಾವಾಚನದ ಸ್ವರೂಪಕ್ಕೊಂದಿಷ್ಟು ದೃಶ್ಯ ಹೆಣೆಯುವ ಒಂದು ವಿಭಿನ್ನ ಪ್ರಯತ್ನ. – ಕೃಷ್ಣಮೂರ್ತಿ ಕವತ್ತಾರ್

ಶ್ರೀಮತಿ ಸೀತಾಕೋಟೆ
ನಟನೆಯನ್ನೇ ವೃತ್ತಿಯಾಗಿಸಿಕೊಂಡು ಕಿರುತೆರೆಯ ಹೆಸರಾಂತ ನಿರ್ದೇಶಕರ ಸಾಕಷ್ಟು ಜನಪ್ರಿಯ ಧಾರವಾಹಿಗಳಲ್ಲಿ ತನ್ನ ಪ್ರಬುದ್ಧ ಅಭಿನಯದ ಮೂಲಕ ನಾಡಿನಾದ್ಯಂತ ಪರಿಚಯವಾದ ಪ್ರತಿಭೆ ಸೀತಾಕೋಟೆ, ಪಿ. ಶೇಷಾದ್ರಿಯವರ ‘ಬೇರು’, ಭರಣರ ‘ಕಲ್ಲರಳಿ ಹೂವಾಗಿ’ ಸದ್ಯ ಬಿಡುಗಡೆಯಾಗಲಿರುವ ಟಿ.ಎನ್.ಸೀತಾರಾಮ್ ಅವರ ‘ಮೀರಾ ಮಾಧವ ರಾಘವ’ ಚಿತ್ರದಲ್ಲೂ ನಟಿಸಿ ಹಿರುತೆರೆಯ್ಲಲೂ ಸೈ ಎನಿಸಿಕೊಂಡಿದ್ದಾರೆ. ಈ ಎಲ್ಲದಕ್ಕೂ ಅಡಿಗಲ್ಲಾದದ್ದು ಬಾಲ್ಯದಿಂದಲೂ ಬಂದ ಸಾಂಸ್ಕೃತಿಕ ಸಂಸ್ಕಾರ, ನಾಲ್ಕನೇ ವಯಸ್ಸಿನಲ್ಲಿಯೇ ಗೆಜ್ಜೆಕಟ್ಟಿ ಭರತನಾಟ್ಯ ಕ್ಷೇತ್ರ ಪ್ರವೇಶಿಸಿ ಬದ್ಧತೆ ಮತ್ತು ಸತತ ಅಭ್ಯಾಸದ ಮೂಲಕ ಸಾಂಸ್ಕೃತಿಕ ಸಂಸ್ಥಾನದಲ್ಲಿ ಬೆಳೆದರು ಸೀತಾಕೋಟೆ. ಮಡಿಕೇರಿಯಲ್ಲಿ ಜನಿಸಿದ ಇವರು ತನ್ನ ಅಮ್ಮ ವಿದ್ಯಾ ಹೆಬ್ಬಾರರ ಅಪಾರ ನೃತ್ಯಾಸಕ್ತಿಯ ಫಲವಾಗಿ ನೃತ್ಯ ಶಿಕ್ಷಣವನ್ನು ಅಂಬಳೆ ರಾಜೇಶ್ವರಿ ಹಾಗೂ ಮುರಳೀಧರ್ ರಾವ್ ಅವರಲ್ಲಿ ಪಡೆದಿದ್ದಲ್ಲದೆ ವಿಶೇಷ ಮಾರ್ಗದರ್ಶನವನ್ನು ಅಂತರಾಷ್ಟ್ರೀಯ ಖ್ಯಾತಿಯ ಡಾ|| ಪದ್ಮಾ ಸುಬ್ರಹ್ಮಣ್ಯಂ ಹಾಗೂ ಕಲಾನಿಧಿ ನಾರಾಯಣ್‌ರಲ್ಲಿ ಪಡೆದಿದ್ದಾರೆ. ರಾಮಾಯಣ ದರ್ಶನಂ, ದಶಾವತಾರ, ದಾಸ ನಮನ ಅಭಿನಯ ಪ್ರಧಾನ ಏಕವ್ಯಕ್ತಿ ನೃತ್ಯ ಪ್ರಯೋಗಗಳನ್ನು ನಾಡಿನ ಉದ್ದಗಲಕ್ಕೂ ಸಾವಿರಕ್ಕಿಂತಲೂ ಹೆಚ್ಚು ಪ್ರದರ್ಶನ ನೀಡಿದ್ದು, ಅದು ಕಲಾರಸಿಕರ ಹಾಗೂ ವಿಮರ್ಶಕರ ಮೆಚ್ಚುಗೆಗಳಿಸಿರುವುದು ಇವರೊಳಗಿನ ಸಮರ್ಥ ಕಲಾವಿದೆಗೆ ಸಾಕ್ಷಿಯಾಗಿದೆ. ದೃಶ್ಯಮಾಧ್ಯಮದ ಮೂಲಬೇರು ರಂಗಭೂಮಿ ಎಂಬುದನ್ನು ಮನಗೊಂಡು ಅಲ್ಲಿ ಹೆಚ್ಚಿನ ಸಾಧನೆಗೈಯ್ಯಬೇಕೆಂಬ ಹಂಬಲ ಮೊಳೆತು ತನ್ನಲ್ಲಿರುವ ನಟಿಯನ್ನು ಪರಿಪಕ್ವಗೊಳಿಸಬೇಕೆಂಬ ಅಂತರಂಗದ ಬಯಕೆಯನ್ನು ನಿವೇದಿಸಿಕೊಂಡದ್ದು ಕನ್ನಡ ರಂಗಭೂಮಿಯ ಕ್ರಿಯಾಶೀಲ ಅನುಭವಿ ನಿರ್ದೇಶಕ ಕೃಷ್ಣಮೂರ್ತಿ ಕವತ್ತಾರ್‌ರಲ್ಲಿ ಅವರ ಮಾರ್ಗದರ್ಶನ ಹಾಗೂ ಸಮರ್ಥ ನಿರ್ದೇಶನದಲ್ಲಿ ವೈದೇಹಿಯವರ ‘ಶಕುಂತಲೆಯೊಂದಿಗೆ ಕಳೆದ ಅಪರಾಹ್ನ’ ಎಂಬ ಕತೆಯನ್ನು ‘ಅಲೆಗಳಲ್ಲಿ ಅಂತರಂಗ’ ವನ್ನಾಗಿಸಿಕೊಂಡು ಏಕವ್ಯಕ್ತಿ ಪ್ರಯೋಗ ನೀಡುವ ಮೂಲಕ ರಂಗಾಸಕ್ತರ ಮುಖಾಮುಖಿಯಾಗಲಿದ್ದಾರೆ. ಅಧ್ಯಯನ ಶೀಲ ಮನಸ್ಸಿನ ಇವರು ಕನ್ನಡ ಸಾಹಿತ್ಯದಲ್ಲಿ ಎಮ್.ಎ. ಪದವಿ ಪಡೆದು, ಸದ್ಯ ಬೆಂಗಳೂರು ವಿಶ್ವ ವಿದ್ಯಾನಿಲಯದ ಡಾ|| ಎಸ್.ಎನ್. ಸುಶೀಲರವರ ಮಾರ್ಗದರ್ಶನದಲ್ಲಿ “ಸಿಂಹ ಭೂಪಾಲನ ಲಾಸ್ಯರಂಜನ ಒಂದು ಅಧ್ಯಯನ” ಎಂಬ ವಿಷಯದಲ್ಲಿ  ಪಿ.ಹೆಚ್.ಡಿ. ಮಾಡುತ್ತಿದ್ದಾರೆ.

Share This