ಆಹಾ! ಹಿಂದಿ ಸಿನೆಮಾರಂಗದ ರಾಖೀ ಸಾವಂತಿಗೆ ಮದುವೆಯಂತೆ! ಅವಳಿಗೆ ಸರಿಯಾದ ವರನ ಆಯ್ಕೆ ಟಿ.ವಿ ಕಾರ್ಯಕ್ರಮದ ಮೂಲಕ ನಡೆಸಲಾಗುತ್ತದಂತೆ! ಪ್ರಚಾರದಲ್ಲಿ ಇರಲು ಯಾರಿಂದಲೋ ಸಾರ್ವಜನಿಕವಾಗಿ ಮುತ್ತು ಕೊಡಿಸಿಕೊಂಡು, ಇರುವ ಕಾರ್ಯಕ್ರಮಗಳಲ್ಲೆಲ್ಲಾ ಆದಷ್ಟು ಕಡಿಮೆ ಬಟ್ಟೆಯನ್ನೂ, ಆದಷ್ಟು ಕಡಿಮೆ ಬುದ್ಧಿಯನ್ನೂ ಪ್ರದರ್ಶಿಸಿ ತನ್ನದೇ ಛಾಪು ಮೂಡಿಸಿರುವ ಈ ನಟಿಗೆ ಸಾರ್ವಜನಿಕ ವೇದಿಕೆಯಲ್ಲಿ ಸ್ವಯಂವರವಂತೆ. ಭಾರತೀಯ ಟೆಲಿವಿಷನ್ ಹಿಂದೆಂದೂ ಇಳಿಯದ ಆಳಕ್ಕೆ ಇಳಿಯುವ ಭಾಸ ನನಗಾಗುತ್ತಿದೆ. ಇದಕ್ಕಿಂತ ಸಾಸ್ ಬಹೂ ದಾರವಾಹಿಗಳೇ ಪರವಾಗಿಲ್ಲ ಎನಿಸುವಷ್ಟರ ಮಟ್ಟಿಗೆ ಹೀನ ಕೆಲಸ ಇದು.

ನಾನು ಈ ಕಾರ್ಯಕ್ರಮದ ಹಿಂದಿನ ನೈತಿಕತೆಯ ಬಗ್ಗೆ ಪ್ರಶ್ನಿಸುತ್ತಲೇ ಇಲ್ಲ! ಏಕೆಂದರೆ ಈ ನೈತಿಕತೆ ಎನ್ನುವುದು ಈಗಲ್ಲ ಸುಮಾರು ಹಿಂದೆಯೇ ನಮ್ಮ ಮಾಧ್ಯಮಗಳಲ್ಲಿ ಕಳೆದು ಹೋಗಿದೆ. ಹಿರಿಯ ನಿರ್ದೇಶ, ನಾಟಕಕಾರ, ಕನ್ನಡ ಟೆಲಿವಿಷನ್ ಮಾಧ್ಯಮದ ಪ್ರಮುಖರಲ್ಲೊಬ್ಬರಾದ ಬಿ. ಸುರೇಶ ಎಷ್ಟೋ ಬಾರಿ ದುಃಖಃದಲ್ಲಿ ಹೇಳುವುದನ್ನು ಕೇಳಿದ್ದೇನೆ, “…ನಾವು ಈಗ ಟೆಲಿವಿಷನ್ನಿನಲ್ಲಿ ಕಥೆಗಳನ್ನು ಹೇಳುವುದನ್ನು ಬಿಟ್ಟುಬಿಟ್ಟಿದ್ದೇವೆ. ಈಗ ಏನಿದ್ದರೂ ಸಾಬೂನು, ಶಾಂಪೂ, ಹೆಲ್ತ್ ಡ್ರಿಂಕ್ಸ್ ಮಾರುತ್ತಿದ್ದೇವೆ ಅಷ್ಟೇ..” ಆದರೆ ಈಗ ಈ ಮಾರಾಟಕ್ಕಾಗಿ ಬಳಸುತ್ತಿರುವ ತಂತ್ರ ಹಿಂದೆಂದಿಗಿಂತಲೂ ಪ್ರಪಾತಕ್ಕಿಳಿದಿರುವುದು ದುರಂತ. ಮದುವೆಯಂಥಾ ವೈಯಕ್ತಿಕ ಕಾರ್ಯಕ್ರಮವನ್ನು ಟೆಲಿವಿಷನ್ನಿನಲ್ಲಿ ಸಾರ್ವಜನಿಕ ಕರ್ಯಕ್ರಮ ಮಾಡಿದ ಮೇಲೆ ಇನ್ನು ಮುಂದೆ ಏನೇನು ಈ ಮಾಧ್ಯಮದಲ್ಲಿ ನೋಡಬೇಕಾಗುತ್ತದೋ ಎಂಬುದು ನಮ್ಮ ಚಿತ್ತವಿಕಾರಗಳಿಗೆ ಬಿಟ್ಟ ವಿಷಯ.

ಇಷ್ಟರಲ್ಲಿ ನಮ್ಮಲ್ಲಿ ಇನ್ನೊಂದು ನಾಟಕ ಬಹಿರಂಗವಾಗುತ್ತಿದೆ. ಕನ್ನಡದ ನಟಿ ಶ್ರುತಿಯವರು ವಿವಾಹ ವಿಛೇದನಕ್ಕೆ ಅರ್ಜಿ ಸಲ್ಲಿಸಿದ್ದು ಅದ್ಯಾವುದೋ ಟೆಲಿವಿಷನ್ ಚ್ಯಾನೆಲ್ ಬಹಿರಂಗಗೊಳಿಸಿತು. ತಗೋ… ಆರಂಭವಾಯಿತು ಮಾಧ್ಯಮಗಳ ಮೇಲಾಟ ಈ ಸುದ್ದಿಯನ್ನು ತಮ್ಮ ಲಾಭಕ್ಕಾಗಿ ಬಳಸಿಕೊಳ್ಳಲು. ವಿವಾಹ ವಿಛೇದನದಂಥಾ ಸೂಕ್ಷ್ಮ ಸಮಯದಲ್ಲಾದರೂ ವ್ಯಕ್ತಿಗಳನ್ನು ಅವರಷ್ಟಕ್ಕೆ ಇರಲು ಬಿಡಬಾರದೇ? ಅನೇಕರು ಹೇಳುವ ಪ್ರಕಾರ, ಇಲ್ಲಿ ಮಾಧ್ಯಮದವರ ತಪ್ಪಿಲ್ಲ, ಈ ಬಿಟ್ಟಿ ಪ್ರಚಾರಕ್ಕಾಗಿಯೇ ಎಲ್ಲವನ್ನೂ ಮಾಧ್ಯಮಕ್ಕೆ ಗುಪ್ತವಾಗಿ ತಳ್ಳಲಾಗುತ್ತಿದೆಯಂತೆ. ಆದರೆ ಇಂಥಾ ಬಿಟ್ಟಿ ಪ್ರಚಾರವನ್ನು ಕೊಡದಿರುವಷ್ಟು ಬೆನ್ನುಹುರಿ ನಮ್ಮ ಮಾಧ್ಯಮಗಳಿಗೆ ಯಾಕಿಲ್ಲ? ಕೇವಲ ಸ್ಕೂಪ್ ಎನ್ನುವ ಮಟ್ಟಕ್ಕೆ ಯಾವುದೇ ವಿಚಾರವನ್ನು ಬಳಸಿಕೊಳ್ಳುವುದು ಎಷ್ಟು ಸರಿ? ಇಲ್ಲಿ ದೋಷಾರೋಪಣೆ ಯಾರ ಮೇಲೆ ಮಾಡುವುದೂ ನನ್ನ ಉದ್ದೇಶವಲ್ಲ. ಇಡೀ ಮಾಧ್ಯಮದ ಸ್ಥಿತಿಯ ಬಗ್ಗೆ ಒಂದು ದೀರ್ಘ ನಿಟ್ಟುಸಿರು ನನ್ನದು ಅಷ್ಟೆ. ನಮ್ಮ ಶ್ರುತಿ ಹಾಗೂ ಮಹೇಂದರವರ ಸಮಸ್ಯೆಗಳು ಆದಷ್ಟು ಬೇಗ ಪರಿಹಾರವಾಗಲಿ, ಇಬ್ಬರಿಗೂ ಮನಃಶಾಂತಿ, ಜೀವನದಲ್ಲಿ ನೆಮ್ಮದಿ ಆದಷ್ಟು ಬೇಗ ಮರಳಿ ಸಿಗಲಿ ಎಂದು ಹಾರೈಸಿ ಮುಂದುವರೆಯುತ್ತೇನೆ.

ಇತ್ತೀಚಿನ ಟೆಲಿವಿಷನ್ ವಾರ್ತೆಗಳಲ್ಲಿ ಹೊಸಬೆಳವಣಿಗೆ ಆಗಿರುವುದನ್ನು ತಮ್ಮಲ್ಲಿ ಬಹಳಷ್ಟು ಜನ ಗಮನಿಸಿರಬಹುದು. ವಾರ್ತಾ ಪ್ರಸಾರದಲ್ಲೂ ತೋರಿಸುವ ದೃಶ್ಯಗಳಿಗೆ ಹಿನ್ನೆಲೆ ಸಂಗೀತದ ಬಳಕೆ ಆಗುತ್ತಿರುವುದನ್ನು ತಾವು ಗಮನಿಸಿರಬಹುದು. ದೃಶ್ಯ ಮಾಧ್ಯಮದಲ್ಲಿ ಸಂಗೀತದ ಬಳಕೆಯ ಬಗ್ಗೆ ಒಂದಿಷ್ಟು ಯೋಚಿಸೋಣ. ಒಂದು ಚಿತ್ರಕ್ಕೆ ಒಂದು ಪ್ರಕಾರದ ಸಂಗೀತ ಬಳಸಿದರೆ ಒಂದು ಪರಿಣಾಮ ಉಂಟಾಗುತ್ತದೆ. ಅಂತೆಯೇ ಅದೇ ಚಿತ್ರಕ್ಕೆ ಇನ್ನೊಂದು ಸಂಗೀತವನ್ನು ಜೋಡಿಸಿದರೆ ಅದರ ಪರಿಣಾಮವೇ ಭಿನ್ನವಾಗಿರುತ್ತದೆ. ಉದಾಹರಣೆಗೆ, ಒಂದು ಸಣ್ಣ ಅಳುತ್ತಿರುವ ಮಗುವಿನ ದೃಶ್ಯಕ್ಕೆ ಸಂತೋಷದ ಸಂಗೀತ ಜೋಡಿಸಿದರೆ, ಅಯ್ಯೋ! ಮಗು ಎಷ್ಟು ಮುದ್ದಾಗಿದೆ ಅನಿಸಿದರೆ, ಅದೇ ದೃಶ್ಯಕ್ಕೆ ದುಃಖಃದ ಸಂಗೀತ ಜೋಡಿಸಿದರೆ, ಅಯ್ಯೋ! ಪಾಪ ಮಗು ಎಷ್ಟು ದುಃಖಃದಲ್ಲಿ ಇದೆ ಎನಿಸುತ್ತದೆ ನಮ್ಮ ಮನಸ್ಸಿಗೆ. ಹೀಗೆ ಕಾಣುವ ಬಿಂಬಕ್ಕೆ ಒಂದು ಅರ್ಥವನ್ನು ಆರೋಪಿಸುವಲ್ಲಿ, ಅದಕ್ಕೊಂದು ಪರಿಸರವನ್ನು ಕಟ್ಟಿಕೊಡುವಲ್ಲಿ ದೃಶ್ಯಮಾಧ್ಯಮದಲ್ಲಿ ಸಂಗೀತದ ಬಳಕೆ ಅನೇಕಬಾರಿ ನಡೆಯುತ್ತದೆ. ಹೀಗಿದ್ದ ಮೇಲೆ ನಿಷ್ಪಕ್ಷವಾಗಿರಬೇಕಾದ ವರದಿಗಳಿಗೆ ಸಂಗೀತದ ಬಳಕೆ ಎಷ್ಟು ಸರಿ? ಇದು ವಾಸ್ತವವನ್ನು ತಿರುಚಿದಂತಾಗುವುದಿಲ್ಲವೇ? ವಾಸ್ತವಕ್ಕೆ ಒಂದು ಬಣ್ಣವನ್ನು ಕೊಟ್ಟಂತಾಗುವುದಿಲ್ಲವೇ? ಇಲ್ಲಿ ಮತ್ತೆ ನೈತಿಕತೆಯ ಮಾತೇಳುವುದಿಲ್ಲವೇ?

ಏನೇ ಇರಲಿ… ರಾಖಿ ಸಾವಂತ್ ಹಾಗೂ ಶ್ರುತಿ-ಮಹೇಂದರ್ ವಿಷಯ ನನ್ನನ್ನು ಇಷ್ಟು ಬರೆಯಲು ಪ್ರೇರೇಪಿಸಿತು. ಟೆಲಿವಿಷನ್ ಬಗ್ಗೆ ಇನ್ನೂ ಹೆಚ್ಚು ವಿಸ್ತಾರದಲ್ಲಿ ಮುಂದೆ ಮಾತನಾಡೋಣ.

Share This