‘ಗುಬ್ಬಚ್ಚಿಗಳು’ ಮಾತಿನ ಮನೆಯನ್ನು ತಲಪಿದೆ. ಮಾತು ಜೋಡಣೆಯಾಗುತ್ತಿದ್ದಂತೆ, ಎಂದೋ ಯೋಚಿಸಿದ ಚಿತ್ರಗಳಿಗೆ ಜೀವ ಬರುತ್ತಿದೆ! ಚಿತ್ರ ಮಾಡುವುದು ಇದಕ್ಕೇ ಇರಬೇಕು ಇಷ್ಟೊಂದು ವಿಶೇಷ. ಮನಸ್ಸಿನಲ್ಲಿ ಯೋಚಿಸಿದ ಒಂದು ‘ಇಮೇಜ್’ ಅನೇಕ ಆವೃತ್ತಿಗಳನ್ನು ಪಡೆಯುತ್ತಾ ಕೊನೆಗೆ ತೆರೆಯ ಮೇಲೆ ಬರುವ ಪ್ರಕ್ರಿಯೆ ಎಂಥಾ ವಿಚಿತ್ರವಾದದ್ದು. ಮತ್ತೆ ಆ ಚಿತ್ರ ಮಾರಲ್ಪಡುತ್ತದೆ, ಜನ ನೋಡುತ್ತಾರೆ, ಇಷ್ಟಪಡುತ್ತಾರೆ, ತಿರಸ್ಕರಿಸುತ್ತದೆ. ಇದೆಲ್ಲಾ ಆದರೂ ಒಂದು ‘ಇಮೇಜ್’ ನನ್ನದು ಎನ್ನುವ ನಿರ್ದೇಶಕನ ಅಹಂ ಎಂಥಾ ಸುಖಕರವಾದದ್ದು ಎಂದು ಇತ್ತೀಚೆಗೆ ನನಗೆ ಅನಿಸುತ್ತಿದೆ.

ಇನ್ಸ್ಟಿಟ್ಯೂಟಿನಲ್ಲಿ ಓದುತ್ತಿದ್ದಾಗಲೂ ಕಾಡುತ್ತಿದ್ದ ಒಂದು ಪ್ರಶ್ನೆಯೆಂದರೆ, ಚಿತ್ರ ನಿರ್ಮಾಣದಲ್ಲಿ ನಿರ್ದೇಶಕನ ಕೆಲಸ ಏನು? ಕಥೆಯನ್ನು ಕಥೆಗಾರ ಬರೆಯುತ್ತಾನೆ. ನಟರು ಅದನ್ನು ಅಭಿನಯಿಸುತ್ತಾರೆ. ಚಿತ್ರೀಕರಣವನ್ನು ಕ್ಯಾಮರಾಮನ್ ಮಾಡುತ್ತಾನೆ. ಧ್ವನಿಯನ್ನು ಧ್ವನಿಸಂಯೋಜಕ ಆಯೋಜಿಸುತ್ತಾನೆ. ಸಂಕಲನಕಾರ ಎಲ್ಲವನ್ನೂ ಮೇಳೈಸಿ ಒಂದು ಚಿತ್ರ ನಿರ್ಮಿಸುತ್ತಾನೆ. ನಿರ್ದೇಶಕ ನಿಂತು ಇವೆಲ್ಲವನ್ನೂ ನೋಡುತ್ತಾನೆ. ಹಾಗಾದರೆ ಆತನ ಕೆಲಸ ಏನು? ಇದು ತೀರಾ ಸಿಲ್ಲಿ ಎಂದು ನಿಮಗೆ ಅನ್ನಿಸಬಹುದು. ಆದರೆ ಇನ್ಡಿಯಾನಾ ಜೋನ್ಸ್ ಚಿತ್ರದ ಮೇಕಿಂಗ್-ವೀಡಿಯೋ ಇತ್ತೀಚೆಗೆ ನೋಡುತ್ತಿದ್ದೆ. ಅದರಲ್ಲಿ ಸ್ಕ್ರಿಪ್ಟ್ ಯಾರೋ ಬರೆದಿರುತ್ತಾರೆ, ಅದನ್ನು ವಿಶುವಲೈಸ್ ಮಾಡಲೆಂದೇ ಇನ್ನೊಂದು ತಂಡ ಇರುತ್ತದೆ. ಹಾಗೆ ಮಾಡಿರುವ ವಿಶುವಲೈಸೇಷನ್ ಸ್ಟೋರಿ ಬೋರ್ಡ್ ಆಗಿ ಬಂದು ಒಂದು ಕೋಣೆಯ ಗೋಡೆಯಿಡೀ ತುಂಬಿಕೊಳ್ಳುತ್ತದೆ. ಅಲ್ಲಿಗೆ ಬರುವ ಸ್ಪಿಲ್‍ಬರ್ಗ್ ಅವನ್ನು ನೋಡಿ ಕೆಲವು ಬದಲಾವಣೆ ಸೂಚಿಸಿ ಹೋಗುತ್ತಾನೆ. ಹಾಗಾದರೆ ನಮ್ಮಲ್ಲಿ ಇರುವ ಸಾಮಾನ್ಯ ಕಲ್ಪನೆಯಂತೆ ಹೇಗೆ ಶಾಟ್ ಇಡುತ್ತಾನೆ ಎಂಬ ಕಲ್ಪನೆಯೂ ಸುಳ್ಳು ಎಂದಾಗುತ್ತದೆ. ಹಾಗಾದರೆ ಒಬ್ಬ ನಿರ್ದೇಶಕ ಸಿನೆಮಾದಲ್ಲಿ ಮಾಡುವ ಕೆಲಸವಾದರೂ ಏನು?

‘ಬೇಡ’ ಎನ್ನುವುದು! ಇದು ಇತ್ತೀಚೆಗೆ ನನಗೆ ನಿರ್ದೇಶನಕ್ಕೆ ಸಿಕ್ಕಿರುವ ಅರ್ಥ. ನನ್ನ ಯೋಚನೆಯ ಕಥೆಗೆ ನಟರು, ಕ್ಯಾಮರಾಮನ್, ಧ್ವನಿ ಸಂಯೋಜಕ, ಸಂಗೀತ ನಿರ್ದೇಶಕ, ಸಂಕಲನಕಾರ ಇವರೆಲ್ಲರೂ ತಮ್ಮ ಕೊಡುಗೆಯ ಧಾರೆ ಎರೆಯುತ್ತಿರುತ್ತಾರೆ. ಈ ಪ್ರಕ್ರಿಯೆಯಲ್ಲಿ ಚಿತ್ರವನ್ನು ಅವರು ತಮ್ಮದನ್ನಾಗಿಸಿಕೊಳ್ಳುತ್ತಿರುತ್ತಾರೆ. ಆದರೆ ಎಲ್ಲದಕ್ಕೂ ನನ್ನ ಒಪ್ಪಿಗೆ ಪಡೆಯುತ್ತಿರುತ್ತಾರೆ. ಇಲ್ಲಿ ಒಂದಷ್ಟು ಜಾಗರೂಕನಾಗಿದ್ದು ಇದು ನನ್ನ ಕಥೆಗೆ ಸರಿಹೊಂದುತ್ತದೆ. ಇದು ‘ಬೇಡ’ ಎಂದು ಹೇಳುವುದಷ್ಟೇ ನನ್ನ ಕೆಲಸ! ಇದು ನನ್ನ ಕೆಲಸವನ್ನು ಸಾಕಷ್ಟು ಹಗುರಗೊಳಿಸುತ್ತದೆ ಮತ್ತು ಹೆಚ್ಚು ಸೃಜನಾತ್ಮಕ ಅವಕಾಶವನ್ನು ಕಲ್ಪಿಸುತ್ತದೆ ಎಂದು ನನ್ನ ಅನಿಸಿಕೆ.

ಹೌದು ಆಗಲೇ ನೂರು ಸಿನೆಮಾ ಮಾಡಿದ ಬುದ್ಧಿವಂತನಂತೆ ಮಾತನಾಡಬೇಡ ಎಂದು ನೀವು ಅನ್ನುತ್ತಿರಬಹುದು. ಆದರೆ ನನಗೋ ಈ ಒಂದು ಯೋಚನೆ ನೂರುಸಿನೆಮಾ ಮಾಡಲು ಒಂದು ಹೊಸ ದೃಷ್ಟಿಕೋನವನ್ನು ಕೊಟ್ಟಿದೆ. ಇನ್ನು ನೋಡುವ ಪಾಡು ನಿಮ್ಮದು.

🙂

Share This