ಅದ್ಯಾವುದೋ ಒಂದು ಕೆಲಸಕ್ಕಾಗಿ ಒಮ್ಮೆ ಕಲ್ಕತ್ತಾದಿಂದ ರಾತ್ರಿ ಬಸ್ಸಿನಲ್ಲಿ ತುರ್ತಾಗಿ ಡಾರ್ಜಲಿಂಗ್ ಡಿಸ್ಟ್ರಿಕ್ಟಿಗೆ ನಾನು ಹಾಗೂ ನನ್ನ ಮೂವರು ಗೆಳೆಯರು ಹೋಗಬೇಕಾಗಿತ್ತು. ಅವತ್ತು ರಾತ್ರಿಯ ಬಸ್ಸನ್ನು ಬುಕ್ ಮಾಡಲು ಹೋದರೆ, ಯಾವ ಬಸ್ಸೂ ಸಿಗದೇ, ನಾನು ಸದಾ ದ್ವೇಷಿಸುವ ಸ್ಲೀಪರ್ ಬಸ್ಸು ಬುಕ್ ಮಾಡಬೇಕಾಯಿತು. ಕಲ್ಕತ್ತಾದಲ್ಲಿ ಆಗ ಬೇಸಿಗೆಯ ಝಳ ಜೋರಾಗಿತ್ತು. ಬೆವರು ಕಿತ್ತುಕೊಂಡು ಬರುತ್ತಿತ್ತು. ಆದರೆ ನಮ್ಮ ಕೆಲಸ ತೀರಾ ತುರ್ತಿನದ್ದಾಗಿತ್ತು. ನಾವು ಬಸ್ಸ್ ಏರಿ ಕುಳಿತೆವು. ಆಗಲೇ ತುಂಬಿದ್ದ ಬಸ್ಸು ಬಾಕಿ ಇದ್ದ ಇನ್ನೆರಡು ಸೀಟುಗಳನ್ನೂ ತುಂಬುವ ಪ್ರಯತ್ನದಲ್ಲಿ ೮ ಗಂಟೆಗೆ ಹೊರಡಬೇಕಿದ್ದದ್ದು ರಾತ್ರಿ ೧೦ಕ್ಕೆ ಹೊರಟಿತು! ಆಗಲೇ ಸೆಕೆಯ ಧಗೆ ತಡೆಯಲಾಗದೇ ನಾವು ಬಸ್ಸಿನೊಳಗಿನ ಏಸಿಯನ್ನು ಅನುಭವಿಸಲೆಂದು ಕೇವಲ ಮಲಗಬಹುದಾಗಿದ್ದ ನಮ್ಮ ಬಸ್ಸಿನ ಸೀಟಿನಲ್ಲಿ ಮಲಗಿ ಅತ್ತ ನಿದ್ರೆ ಬರದೆ, ಇತ್ತ ಬಸ್ಸ್ ಹೊರಡದ ಸಿಟ್ಟು ಎಲ್ಲಾ ಸೇರಿ ಆಗಲೇ ಬುದ್ಧಿ ಕೈಗೆ ಬಂದಿತ್ತು. ಅಂತೂ ಇಂತೂ ರಾತ್ರಿ ೧೦ಕ್ಕೆ ಬಸ್ಸ್ ಹೊರಟಿತು. ಅದೆಷ್ಟೋ ಹೊತ್ತು ಹೊರಳಿ, ಹೊರಳಿ ಕೊನೆಗೆ ಅದೇನೋ ಎಂಬಂತೆ ನಿದ್ರೆ ಆವರಿಸಿತು.

ಬೆಳಗ್ಗಿನ ಜಾವ ಸುಮಾರು ಮೂರು ಗಂಟೆಗೆ ಬಸ್ಸು ಮುಖ್ಯದಾರಿ ಬಿಟ್ಟು ಮಣ್ಣುದಾರಿಗೆ ಇಳಿದಂತೆ ಅನಿಸಿ ಎಚ್ಚರಿಕೆ ಆಯಿತು. ನೋಡಿದರೆ ನನ್ನ ಗೆಳೆಯರು ಆಗಲೇ ನಿದ್ರೆ ಹರಿದು ಅರೆ ಎದ್ದು ಕೂತಿದ್ದರು. ಬಸ್ಸ್ ಭೀಕರ ಕುಲುಕಾಟದೊಡನೆ ಅದ್ಯಾವುದೋ ಮಣ್ಣು ದಾರಿಯಲ್ಲಿ ಹೋಗುತ್ತಿತ್ತು. ಮುಖ್ಯದಾರಿಯಲ್ಲಿ ವಾಹನ ಸಂದಣೆ ಜಾಸ್ತಿ ಇದೆಯಂತೆ ಹಾಗಾಗಿ ಆಗಬಹುದಾದ ಬ್ಲಾಕ್ ತಪ್ಪಿಸಲು ಈ ದಾರಿಯಲ್ಲಿ ಬಸ್ಸ್ ಹೋಗುತ್ತಿದೆಯಂತೆ ಎಂದು ತಿಳಿಯಿತು. ಆದರೆ ಸುಮಾರು ಅರ್ಧ ಗಂಟೆಯ ಕುಲುಕಾಟದ ನಂತರ ಬಸ್ಸ್ ನಿಂತೇ ಬಿಟ್ಟಿತು. ನಾವೆಲ್ಲಾ ಕೆಳಗಿಳಿದು ಹೋಗಿ ನೋಡಿದರೆ, ನಮ್ಮಂತೆಯೇ ಬಂದಿರುವ ಇನ್ನೊಂದು ಬಸ್ಸ್ ನಮಗಿಂತ ಮುಂದೆ ಹೋಗಿ ದಾರಿಗೆ ಅಡ್ಡವಾಗಿದ್ದ ದೊಡ್ಡ ಹೊಂಡವೊಂದರಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಇದರಿಂದ ಇಡೀ ದಾರಿ ಬ್ಲಾಕ್ ಆಗಿತ್ತು! ಹಿಂದೆ ಹೋಗೋಣವೆಂದರೆ, ನಮ್ಮ ಹಿಂದೆಯೂ ಅನೇಕ ವಾಹನಗಳು ಬಂದು ಬ್ಲಾಕ್ ಆಗಿತ್ತು ಮತ್ತು ಹಿಂದೆ ಹೋಗುವುದಕ್ಕೆ ಅರ್ಥವಿಲ್ಲದಷ್ಟು ನಾವು ಮುಂದೆ ಬಂದಾಗಿತ್ತು. ಸರಿ ಇನ್ನೇನು ಆ ಬಸ್ಸನ್ನು ಎತ್ತುವ ಕೆಲಸ ಸಾಗಿತ್ತು. ಅದರ ನಂತರ ಮುಂದೆ ಹೋದರಾಯ್ತು ಎಂದು ಕಾದೆವು. ಬಸ್ಸಿನಿಂದ ಹೊರಗೆ ಬಂದಾಗ ಹವೆ ಸ್ವಲ್ಪ ಸಹಿಸುವಷ್ಟು ತಂಪಾಗಿತ್ತು. ಆದರೂ ನಿಧಾನಕ್ಕೆ ಬೆಳಗಾಗುತ್ತಿತ್ತು ಹಾಗೂ ಬಿಸಿಯ ಕಾವು ಏರುತ್ತಿತ್ತು. ಅಲ್ಲೇ ದಾರಿ ಬದಿಯಲ್ಲಿ ಒಂದು ನದಿ ಹರಿಯುತ್ತಿತ್ತು. ನಾವು ಅದರ ಬಳಿಗೆ ಹೋಗಿ ನಿಂತೆವು. ಗಂಟೆ ನಾಲ್ಕಾಯಿತು, ಐದಾಯಿತು. ಎದುರಿನ ಬಸ್ಸಿನ ಗುದ್ದಾಟ ನಡೆದೇ ಇತ್ತು. ಸೆಕೆಯ ಝಳ ಏರಿಯಾಗಿತ್ತು. ಸೂರ್ಯ ಮೂಡದಿದ್ದರೂ, ಬೆಳಕು ಹರಿದಿತ್ತು. ನಮ್ಮ ಸಿಟ್ಟು, ದುಃಖ ಆಗಲೇ ಏರಿತ್ತು. ಮುಂದೆ ನಮ್ಮ ಕೆಲಸಗಳಿಗಾಗಿರುವ ತೊಂದರೆ, ಹಸಿವು, ಸೆಕೆ ಇತ್ಯಾದಿಗಳಿಂದ ನಾವು ಹೈರಾನಾಗಿದ್ದೆವು. ಮಾತನಾಡಿದರೆ ಸಿಟ್ಟು ಬರುತ್ತಿತ್ತು. ಅಡ್ಡ ದಾರಿ ಹಿಡಿದ ಬಸ್ಸ್ ಚಾಲಕನಿಗೆ ಶಾಪ ಹಾಕುತ್ತಾ ನಿಂತಿದ್ದೆವು.

ಸ್ವಲ್ಪ ಹೊತ್ತಿನ ನಂತರ ನಾನೊಬ್ಬನೇ ನಡೆಯುತ್ತಾ ಒಂದಷ್ಟು ದೂರ ನದಿ ದಂಡೆಯಲ್ಲೇ ಹೋದೆ. ನಿಂತು ಕೋಪ ಶಮನ ಮಾಡಿಕೊಳ್ಳುತ್ತಾ ಇದ್ದೆ. ನದಿಯ ನೀರನ್ನೇ ನೋಡುತ್ತಿದ್ದೆ. ನದಿಯಲ್ಲಿ ಅಲೆಗಳು ಒಂದೇ ಸಮನೆ ಎದ್ದು, ಇಳಿಯುತ್ತಿದ್ದವು. ಅವುಗಳಿಗೆ ಪಕ್ಕದ ರಸ್ತೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳಲ್ಲಿ ಏನೂ ಆಸಕ್ತಿ ಇದ್ದಂತಿರಲಿಲ್ಲ. ಆದರೆ ಆ ಅಲೆಗಳಲ್ಲಿ ನನಗೆ ಅದೇನೋ ಆಕಾರಗಳು ಕಾಣಿಸುತ್ತಿದ್ದವು. ಮೇಲೆ ಅದ್ಯಾವುದೋ ಬೆಟ್ಟದಿಂದ ಮುರಿದು ಬಿದ್ದ ಮರದ ಕೊರಡು, ಒಣ ಎಲೆಯ ಗುಂಪು ಇವೆಲ್ಲವೂ ಹಾಯಾಗಿ ಹಾದು ಹೋಗುತ್ತಲೇ ಇದ್ದುವು. ಮನೆಯಿಂದ ಇಷ್ಟೊಂದು ದೂರ ಬಂದಿರುವ ನನಗೆ ಇರುವ ಯಾವುದೇ ದುಗುಡ, ದುಮ್ಮಾನಗಳು ಆ ನೀರಿಗಾಗಲೀ ಅದರ ಮೇಲಿನ ವಸ್ತುಗಳಿಗಾಗಲೀ ಇರಲಿಲ್ಲ. ಹಾ! ನಾನು ಹರಿಯುವ ನೀರಾಗಿದ್ದರೆ, ಎಂದು ಅನಿಸುತ್ತಿತ್ತು ನನಗೆ. ಹಾಗೇ ಹರಿಯುವ ನೀರನ್ನು ದಿಟ್ಟಿಸುತ್ತಿದ್ದೆ. ದೂರದಲ್ಲಿ ಮತ್ತೇನೋ ಕೊರಡು ತೇಲುತ್ತಾ ಬರುತ್ತಿತ್ತು. ಅದನ್ನೇ ದಿಟ್ಟಿಸುತ್ತಿದ್ದೆ. ಆಗಷ್ಟೇ ಎದ್ದಿದ್ದ ಒಂದು ಕಾಗೆ ಎಲ್ಲಿಂದಲೋ ಹಾರಿ ಬಂದು ಆ ಕೊರಡಿನ ಮೇಲೆ ಕುಳಿತು ಏನೋ ತಿನ್ನಲಾರಂಭಿಸಿತು. ಬೆಳಕು ಇನ್ನೂ  ಮಂದವಾಗಿಯೇ ಇತ್ತು. ಕಾಗೆ ಏನು ತಿನ್ನುತ್ತಿದೆ ಎಂದು ದಿಟ್ಟಿಸುತ್ತಾ ನಿಂತೆ. ಕೊರಡು ನಿಧಾನಕ್ಕೆ ತೇಲುತ್ತಾ ನನ್ನ ಬಳಿಗೇ ಬಂತು. ನೋಡಿದರೆ, ಅದು ನೀರು ತುಂಬಿಕೊಂಡಿರುವ ಆಕಾಶ ನೋಡುತ್ತಿರುವ, ಛಿದ್ರಗೊಂಡಿರುವ ಒಂದು ಮನುಷ್ಯನ ಹೆಣ. ನಾನು ದಂಗಾದೆ! ಅದರ ಕಣ್ಣುಗಳು ಆಗಲೇ ಮಾಯವಾಗಿದ್ದವು. ಕಾಗೆ ಖಾಲಿಯಾಗಿದ್ದ ಆ ಗುಳಿಯಲ್ಲಿ ತನ್ನ ಕೊಕ್ಕು ಹೊಕ್ಕಿಸಿ ಅದೇನೋ ಎಳೆಯುವ ಸಂತಸದಲ್ಲಿತ್ತು! ಆದರೆ ಹೆಣಕ್ಕೆ ನನಗಿದ್ದ ಯಾವುದೇ ದುಗುಡ ಇದ್ದಂತೆ ಕಾಣಲಿಲ್ಲ. ಅದು ಹಾಯಾಗಿ ಆಕಾಶವನ್ನೇ ದಿಟ್ಟಿಸುತ್ತಾ ನನ್ನನ್ನು ದಾಟಿ ತೇಲಿ ಹೋಯಿತು. ನಾನು ನಿಧಾನಕ್ಕೆ ಬಸ್ಸ್ ಕಡೆಗೆ ನಡೆದೆ. ನನ್ನೊಳಗಿನ ನದಿಯೊಂದು ಹರಿಯಲಾರಂಭಿಸಿದಂತೆ ಭಾಸವಾಗುತ್ತಿತ್ತು.

Share This