ಕಥೆಯ ಕಟ್ಟುವ ಸಮಯ

ಗೆಳೆಯರಾದ ಇಸ್ಮಾಯಿಲ್, ಪರಮೇಶ್ ಒಂದು ದಿನ ಒಟ್ಟಿಗೆ ಕುಳಿತು ಅದ್ಯಾವುದೋ ಸಿನೆಮಾ ಕುರಿತು ಚರ್ಚೆ ನಡೆಸುತ್ತಿದ್ದೆವು. ಇಸ್ಮಾಯಿಲ್ ಅದೇ ವರ್ಷ ರಾಜ್ಯ ಚಲನ ಚಿತ್ರ ಪ್ರಶಸ್ತಿಯ ಆಯ್ಕೆ ಮಾಡುವ ಸಮಿತಿಯಲ್ಲಿ ಇದ್ದು ಬಂದಿದ್ದರು. ಅವರಿಗೆ ನಾವೂ ಒಂದು ಮಕ್ಕಳ ಚಿತ್ರ ಮಾಡಬೇಕೆಂದು ಅನ್ನಿಸಿತ್ತು. ಅದಕ್ಕೆ ಒಂದು ಕಥೆಯೂ ಅವರ ಬಳಿ ಸಿದ್ಧವಾಗಿತ್ತು. ಅದನ್ನು ಅವರಾಗಲೇ ಪರಮೇಶ್ ಬಳಿ ಹೇಳಿಕೊಂಡಿದ್ದರು. ನನ್ನ ಬಳಿ ಅಂದು ಹೇಳಿಕೊಂಡರು. ಇಬ್ಬರು ಮಕ್ಕಳಿಗೆ ಛಾಯಾಚಿತ್ರ ಸ್ಪರ್ಧೆಯಲ್ಲಿ ಭಾಗವಹಿಸಬೇಕೆಂದಿರುತ್ತದೆ, ಅಲ್ಲಿ ವಿಷಯ ‘ಗುಬ್ಬಚ್ಚಿಗಳು’ ಆಗಿರುತ್ತದೆ. ಆದರೆ ಅವರಿಗೆ ಚಿತ್ರತೆಗೆಯಲು ಆ ಪಕ್ಷಿ ಸಿಗದೇ ಹೋಗಿ ಅವರು ಅದನ್ನು ಹುಡುಕಲಾರಂಭಿಸುತ್ತಾರೆ ಎಂದು ಇಸ್ಮಾಯಿಲರ ಕಥೆ ಆರಂಭವಾಗುತ್ತಿತ್ತು. ಅಲ್ಲಿ ಕಾಣೆಯಾದ ಗುಬ್ಬಚ್ಚಿಗಳು ಕೂಡಲೇ ನನ್ನನ್ನು ಕುತೂಹಲಿಯನ್ನಾಗಿಸಿತು! ಹೌದಲ್ಲಾ! ಗುಬ್ಬಚ್ಚಿಗಳು ಎಷ್ಟೊಂದು ಕಡಿಮೆಯಾಗಿವೆ. ಯಾಕಿರಬಹುದು? ಹೀಗಾಗಿ ಕಥೆಯನ್ನು ಸಿನೆಮಾ ಕಥೆ ಮಾಡೋಣ ಎಂದು ಇಸ್ಮಾಯಿಲರಿಗೆ ಗಂಟು ಬಿದ್ದೆ. ಇಸ್ಮಾಯಿಲ್ ಅಂತೂ ತಮ್ಮ ಕಥೆಯನ್ನು ಪೂರ್ಣಗೊಳಿಸಿಕೊಟ್ಟರು.

ಚಿತ್ರಕಥೆಯ ವಿಚಿತ್ರ ಕಥನ

ಇಸ್ಮಾಯಿಲರಿಂದ ಕಥೆ ಬಂದ ಮೇಲೆ ಹಲವಾರು ನಿಶೇಧಾಕ್ಷರಗಳನ್ನು ಇಟ್ಟುಕೊಂಡು ಗುಬ್ಬಚ್ಚಿಗಳು ಚಿತ್ರದ ಚಿತ್ರಕಥೆ ಆರಂಭವಾಯಿತು. ಮಕ್ಕಳಿಗಾಗಿ ನಾವು ಚಿತ್ರ ಮಾಡುವಾಗ ಏನೆಲ್ಲಾ ಜಾಗ್ರತೆ ವಹಿಸಬೇಕು ಎಂದು ಯೋಚಿಸಲಾರಂಭಿಸಿದೆವು. ಮೊದಲಿಗೆ, ನಮ್ಮ ಚಿತ್ರ, ದೊಡ್ಡವರು ಮಕ್ಕಳನ್ನು ನೋಡಿದಂತಿರಬಾರದು, ಮಕ್ಕಳೇ ಮಕ್ಕಳನ್ನು ನೋಡಿದಂತೆ ಇರಬೇಕು ಎಂದು ನಿರ್ಧರಿಸಿದೆವು. ಆಗ ಹುಟ್ಟಿದ್ದು, ವಿಗ್ರಹ, ಮಾತನಾಡುವ ಚಿತ್ರ ಇತ್ಯಾದಿ ಕಲ್ಪನೆಗಳು. ಅಂದರೆ, ಮಕ್ಕಳಿಗೇನು ಹುಚ್ಚೇ? ಮಕ್ಕಳು ಚಿತ್ರದೊಡನೆ ಮಾತನಾಡುವುದು ಅಸಂಬದ್ಧವಲ್ಲವೇ ಎಂಬಿತ್ಯಾದಿ ಪ್ರಶ್ನೆ ನಿಮಗೆ ಉಂಟಾಗಬಹುದಲ್ಲವೇ? ಆದರೆ ನಮಗೆ ಮಾರ್ಗದರ್ಶಕನಾಗಿದ್ದದ್ದು ಅಸಾಧ್ಯ ಕಲ್ಪನೆಗಳ ಸರದಾರ, ಪುಟ್ಟ ‘ಕ್ಯಾಲ್ವಿನ್’ (ಕ್ಯಾಲ್ವಿನ್ ಅಂಡ್ ಹೋಬ್ಸ್ ಸರಣಿಯ ನಾಯಕ) ಮಾತನಾಡುವ ವಿಗ್ರಹ, ಫೋಟೋ, ಮಕ್ಕಳಿಗೆ ಮಾತ್ರ ಸಾಧ್ಯವಾಗಿರುವ ಅಸಾಧ್ಯ ಕಾಲ್ಪನಿಕ ಶಕ್ತಿಯ ಪ್ರತೀಕ ಅಷ್ಟೇ. ಮತ್ತೆ ಕಥನ ಶೈಲಿಯ ಹುಡುಕಾಟದಲ್ಲಿ, ‘ಆಲಿಸ್ ಇನ್ ವಂಡರ್ ಲ್ಯಾಂಡ್’, ನಮ್ಮ ಜನಪದ ಕಥೆಗಳು, ಅಜ್ಜಿ ಕಥೆಗಳು ಇತ್ಯಾದಿ ಯೋಚಿಸುತ್ತಾ ಸಾಗಿದೆವು. ಇವೆಲ್ಲವುಗಳ ಮಿಶ್ರಣ ತರಬೇಕೆಂದು ಪ್ರಯತ್ನಿಸುತ್ತಾ ಸಾಗಿದೆವು. ಹೀಗಾಗಿ ನಮ್ಮ ಚಿತ್ರಕಥೆ, ಪಟ್ಟಣದಲ್ಲೇ ನಡೆಯುವ ಅಜ್ಜಿ ಕಥೆಯಾಗಿ ವಂಡರ್ ಲ್ಯಾಂಡಿನ ಮಾಂತ್ರಿಕ ಸಾಧ್ಯತೆಗಳನ್ನೂ ಒಳಗೊಂಡು ರೂಪಿತವಾಗುತ್ತಾ ಸಾಗಿತು. ಪೇಟೆಯೊಳಗೇ ಮಾಂತ್ರಿಕ ಬಾಗಿಲುಗಳು, ಅದರಾಚೆಗೆ ನಾವು ನೋಡಿರದ ಲೋಕ, ಕಣ್ಣಿಗೆ ನಿಲುಕದ ಎತ್ತರದಲ್ಲಿರುವ ಗೋಡೆಯಾಚೆಗೊಂದು ಮಾಯಾ ಲೋಕ ಇತ್ಯಾದಿ ರೂಪುಗೊಳ್ಳುತ್ತಾ ಹೋದವು. ಈ ಪ್ರಯತ್ನದಲ್ಲಿ ಎರಡು ಪ್ರಪಂಚಗಳ ನಿರ್ಮಾಣವಾಗಿತ್ತು ನಮ್ಮ ಚಿತ್ರಕಥೆಯಲ್ಲಿ. ಒಂದು ನಮಗೆ ಗೋಚರವಾಗುವ ಸಾಮಾನ್ಯ ಲೋಕ. ಮತ್ತೊಂದು ನಮ್ಮೊಳಗೇ ಇರುವ ಆದರೆ ಗೋಡೆ ಕಟ್ಟಿ ಆಚೆಗಿಟ್ಟುರುವ ಮಾಯಾ ಲೋಕ (ಮಕ್ಕಳ ಲೋಕ) ಹೀಗೆ ಸಂಬದ್ಧ, ಅಸಂಬದ್ದಗಳ ಕ್ರೋಢೀಕರಣವಾಗುತ್ತಾ ‘ಗುಬ್ಬಚ್ಚಿಗಳು’ ಚಿತ್ರಕಥೆ ರೂಪವನ್ನು ಪಡೆಯಿತು.

ನಿರ್ದೇಶಕನ ಬಿಸಿ ಕುರ್ಚಿ (hot seat?)

ಪೂನಾದಲ್ಲಿನ ಫಿಲಂ ಆಂಡ್ ಟೆಲಿವಿಷನ್ ಸಂಸ್ಥೆಯಿಂದ ನಿರ್ದೇಶನ ತರಬೇತಿಹೊಂದಿ ಬಂದಾಗ ಇಂಥದ್ದೇ ಚಿತ್ರ ನಿರ್ದೇಶನ ಮಾಡಬೇಕೆಂದು ಗುರಿ ಇರಲಿಲ್ಲ. ಬಂದದ್ದನ್ನು ಬಂದಂತೆ ಎದುರಿಸುವುದೆಂದಷ್ಟೇ ನಿರ್ಧಾರವಾಗಿತ್ತು ಮನಸಲ್ಲಿ. ಅಂಥದ್ದರಲ್ಲಿ ಅಕಸ್ಮತ್ತಾಗಿ ‘ಗುಬ್ಬಚ್ಚಿಗಳು’ ಕಥೆ ಎದುರಾದಾಗ, ಚಿತ್ರಕಥೆ ತಯಾರಾದಾಗ ನಿರ್ದೇಶನಕ್ಕೆ ತಯಾರಾಗಬೇಕಾಯಿತು. ಮೊದಲ ಚಿತ್ರ ‘ಜನಪ್ರಿಯ’ ಧಾಟಿಯಲ್ಲಿ ಇರಬೇಕೇ? ಅಥವಾ ‘ಜನಪರ’ವಾಗಿರಬೇಕೇ? ಎಂಬ ಗೊಂದಲ ಆರಂಭವಾಯಿತು. ಹಿರಿಯ ಮಿತ್ರ ಇಸ್ಮಾಯಿಲರೂ ಒಂದೆರಡು ಬಾರಿ ಕಾಳಜಿಯಿಂದಲೇ ಕೇಳಿದರು, ನಿಮ್ಮ ಮೊದಲ ಚಿತ್ರ ಮಕ್ಕಳ ಚಿತ್ರವಾದರೆ ಮುಂದೆ ವೃತ್ತಿ ಜೀವನಕ್ಕೆ ತೊಂದರೆಯಾಗದೇ? ಆದರೆ ನನಗೆ ನನ್ನ ಅಜ್ಜ (ಜಿ.ಟಿ. ನಾರಾಯಣ ರಾವ್) ಹಾಗೂ ತಂದೆ – ತಾಯಿ (ಅಶೋಕ ವರ್ಧನ – ದೇವಕಿ) ಸದಾ ಹೇಳುತ್ತಿದ್ದ ಮಾತು ಗಟ್ಟಿಯಾಗಿ ಮನಸಲ್ಲಿ ನೆಲೆಸಿತ್ತು. “ಮಾಡುವ ಕೆಲಸವನ್ನು ಹೆದರದೇ, ಒಂದೇ ಮನಸ್ಸಿನಿಂದ ಮಾಡು, ಪರಿಣಾಮಗಳ ಕುರಿತಾಗಿ ಯೋಚಿಸಬೇಡ. ಕೆಲಸ ಕೆಟ್ಟರೆ ಅದು ಅನುಭವ. ಫಲಕೊಟ್ಟರೆ ಅದೂ ಅನುಭವ ಎಂದಿರು” ಹೀಗಾಗಿ ಹೆಚ್ಚಿನದ್ದೇನನ್ನೂ ಯೋಚಿಸದೇ ‘ಗುಬ್ಬಚ್ಚಿಗಳು’ ಚಿತ್ರಕ್ಕಾಗಿ ಮಾನಸಿಕವಾಗಿ ತಯಾರಾಗಲಾರಂಭಿಸಿದೆ.

ನಿರ್ಮಾಪಕದ್ವಯರು

ಇಸ್ಮಾಯಿಲ್ ಹಾಗೂ ನನ್ನ ಸ್ನೇಹಿತರಾದ ಸುಬ್ರಹ್ಮಣ್ಯರು ನಮ್ಮ ಕಥೆ ಕೇಳಿ ತಮ್ಮ ಸ್ನೇಹಿತರಾದ ಬಿ. ಸುರೇಶರಿಗೆ ನಮ್ಮನ್ನೂ ನಮ್ಮ ಕಥೆಯನ್ನೂ ಪರಿಚಯಿಸಿದರು. ಸುರೇಶರಿಗೆ ಎರಡು ದಶಕಕ್ಕೂ ಮೀರಿದ ರಂಗಭೂಮಿ, ಸಿನೆಮಾ ಅನುಭವ ಇದೆ. ಅವರು ಅರ್ಥ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದಾರೆ ಹಾಗೂ ಹಲವಾರು ಯಶಸ್ವೀ ಧಾರವಾಹಿಗಳ ನಿರ್ದೇಶನವನ್ನೂ ಮಾಡಿದ್ದಾರೆ. ಅವರು ಅವರ ಪತ್ನಿ ಶೈಲಜಾ ನಾಗ್ (ಇವರು ಅನೇಕ ಯಶಸ್ವೀ ಧಾರವಾಹಿಗಳಾ ನಿರ್ಮಾಪಕರೂ ಹೌದು) ಸೇರಿಕೊಂಡು ಗುಬ್ಬಚ್ಚಿಗಳು ಚಿತ್ರವನ್ನು ನಿರ್ಮಿಸುವ ಹೊಣೆಯನ್ನು ಹೊತ್ತರು. ಅಲ್ಲಿಂದ ಆರಂಭವಾಯಿತು ಚಿತ್ರದ ನಿರ್ಮಾಣದ ಕೆಲಸ.

ಲೈಟ್ – ಕ್ಯಾಮರಾ – ಸೌಂಡ್ – ಆಕ್ಷನ್!

ಕ್ಯಾಮರಾ ಕೆಲಸಕ್ಕೆ ನನ್ನ FTII ಸಹಪಾಠೀ ಡಾ. ವಿಕ್ರಂ ಸಿದ್ಧನಾದರೆ, ಸಂಗೀತ ಹಾಗೂ ಧ್ವನಿ ಸಂಯೋಜನೆಗೆ ಇನ್ನೊಬ್ಬ FTII ಸಹಪಾಠೀ ಅನ್ಮೋಲ್ ಸಿದ್ಧನಾದ, ಮತ್ತೆ ಸಂಕಲನ ಜವಾಬ್ದಾರಿ ನರಹಳ್ಳಿ ಜ್ಞಾನೇಶ್, ಕಲೆ, ಚೇತನ್, ನಿರ್ಮಾಣ ನಿರ್ವಹಣೆ ಅಶೋಕ್ ಹೀಗೆ ತಂಡ ಸಿದ್ಧವಾಗುತ್ತಾ ಸಾಗಿತು. ಚಿತ್ರೀಕರಣ ಸ್ಥಳ ಹೊಂದಾಣಿಕೆ ಇತ್ಯಾದಿಗಳಲ್ಲಿ ಇನ್ನೊಬ್ಬ ಮಿತ್ರರಾದ ವಿಜಯ್ ಕುಮಾರ್ ಒಂದಷ್ಟು ಸಹಕರಿಸಿದರು. ಅಂತೂ ಒಂದೆಡೆ ಚಿತ್ರ ಕಥೆಯ ಪರಿಷ್ಕರಣೆ, ಸ್ಥಳಗಳ ಆಯ್ಕೆ ಇತ್ಯಾದಿ ತಯಾರಿ ನಡೆಯುತ್ತಿದ್ದಂತೆಯೇ, ಅಧಿಕೃತ ಪರವಾನಗಿಗಳು, ವಸ್ತ್ರಾಭರಣಗಳು ಇತ್ಯಾದಿಗಳು ಸಿದ್ಧವಾಗುತ್ತಾ, ಬನಶಂಕರಿಯಲ್ಲಿರುವ ಮೀಡಿಯಾ ಹೌಸ್ ಸ್ಟೂಡಿಯೋ ಕಟ್ಟಡದಲ್ಲಿ ಹಬ್ಬದ ವಾತಾವರಣ. ನಮ್ಮಲ್ಲಿ ಹೆಚ್ಚಿನವರಿಗೆ ಇದು ಮೊದಲ ಚಿತ್ರದ ಅನುಭವ.

ಸ್ಟಾರ್ಸ್

ಇನ್ನು ಕಲಾವಿದರ ಆಯ್ಕೆಯ ಪ್ರಕ್ರಿಯೆ ನಡೆಯಲಾರಂಭಿಸಿತು. ಸುಮಾರು ಮೂವತ್ತಕ್ಕೂ ಮಿಕ್ಕಿ ಮಕ್ಕಳ ಸಂದರ್ಶನ ನಡೆಸಿ ಕೊನೆಗೆ ಬಿಂಬ ಮಕ್ಕಳ ನಾಟಕ ಶಾಲೆಯ ಅಭಿಲಾಶ್ ಕಶ್ಯಪ್ ಹಾಗೂ ಬಿ ಸುರೇಶರದ್ದೇ ಧಾರವಾಹಿಯಲ್ಲಿ ನಟಿಸುತ್ತಿದ್ದ ಪ್ರಕೃತಿಯನ್ನು ನಮ್ಮ ನಾಯಕ – ನಾಯಕಿಯಾಗಿ ಆಯ್ಕೆ ಮಾಡಿಕೊಂಡೆವು. ಇನ್ನು ಅವರ ಪೋಷಕರಾಗಿ ನಟಿಸಲು ಅನು ಪ್ರಭಾಕರ್, ರಾಜೇಶ್ ನಟರಂಗ ಒಪ್ಪಿದರೆ, ಮುಖ್ಯಮಂತ್ರಿ ಚಂದ್ರು, ಗಿರಿಜಾ ಲೋಕೇಶ್, ಅಚ್ಯುತ, ಮಂಡ್ಯ ರಮೇಶ್, ರಂಗಾಯಣ ರಘು ಹೀಗೆ ಅನೇಕ ನಟರು ತಮ್ಮ ಕೊಡುಗೆಯನ್ನು ಕೊಡಲು ತಯಾರಾದರು. ಒಂದು ಒಳ್ಳೆಯ ಪ್ರಯತ್ನಕ್ಕೆ ಇವರೆಲ್ಲಾ ಕೊಡುತ್ತಿದ್ದ ಸಹಕಾರ, ತೋರುತ್ತಿದ್ದ ಪ್ರೀತಿಗೆ ನಮ್ಮ ಚಿತ್ರ ತಂಡ ವಿಸ್ಮಿತವಾಗಿತ್ತು. ನೋಡುತ್ತಿದ್ದಂತೆಯೇ, ನಮ್ಮ ನಡುವೆ ಅನುಭವಿ ನಟರ ಒಂದು ದಂಡೇ ಸಿದ್ಧವಾಗಿತ್ತು.

ಶೂಟಿಂಗ್! ಶೂಟಿಂಗ್!

ಚಿತ್ರೀಕರಣದ ಮೊದಲ ದಿನ ಅದು! ಎಲ್ಲರೂ ಆತಂಕದಲ್ಲೇ ಕಳೆಯುತ್ತಿತ್ತು. ಮಕ್ಕಳು ಉದ್ಯಾನಕ್ಕೆ ಬರುವುದು ಅಲ್ಲಿ ಮಂತ್ರಿಗಳ ಕಾರ್ಯಕ್ರಮ ನಡೆಯುತ್ತಿರುವುದು ಇದು ಅಂದಿನ ಸಂದರ್ಭ. ಅಂತೂ ಇಂತೂ ಮೊದಲ ದಿನದ ಚಿತ್ರೀಕರಣ ಯಶಸ್ವಿಯಾಗಿ ನಡೆಯಿತು. ಇದಾಗುತ್ತಲೇ ನಮ್ಮ ಲಯ ಕಂಡುಕೊಂಡಿತ್ತು ಚಿತ್ರ ತಂಡ. ನನಗೆ ಸಹಕಾರ ನೀಡಲು ಸಾಗರ್ ಹಾಗೂ ಜಯದೇವ ಎಂಬ ಇಬ್ಬರು ಗೆಳೆಯರು ಸಹಾಯಕ ನಿರ್ದೇಶನ ಸ್ಥಾನದಲ್ಲಿ ಸಿದ್ಧರಾಗಿದ್ದರು. ದಿನದಿಂದ ದಿನಕ್ಕೆ ಒಂದೊಂದೇ ಸಮಸ್ಯೆ ಅದಕ್ಕೆ ಪರಿಹಾರ. ಚಿತ್ರೀಕರಣ, ದುಃಖಃ, ಸುಖ, ಸಂಭ್ರಮ, ಆತಂಕಗಳ ನಡುವೆ ಚಿತ್ರೀಕರಣ ಸತತ ೧೯ ದಿನಗಳ ಕಾಲ ನಡೆಯಿತು. ಚಿತ್ರದ ಕಥೆಯು ಹಳೆ ಬೆಂಗಳೂರಿನಲ್ಲಿ ಆರಂಭವಾಗಿ ಹೊಸ ಬೆಂಗಳೂರಿಗೆ ಬಂದು ಅಲ್ಲಿಂದ ಮತ್ತೆ ಹಳೇ ಬೆಂಗಳೂರಿಗೆ ಹೋಗಿ ಅಲ್ಲಿ ಅಂತ್ಯವಾಗುತ್ತಿತ್ತು. ಅದಕ್ಕೆ ಸರಿಯಾಗಿ ನಾವು ದಿನ ದಿನ ಬೆಂಗಳೂರಿನ ಒಳಗಡೆ ಹೊಸ ತಾಣಗಳಲ್ಲಿ ಚಿತ್ರೀಕರಣ ಮಾಡುತ್ತಾ ಸಾಗಿದೆವು. ಮಕ್ಕಳ ಮನಸ್ಸಿಗೆ ಸರಿಯಾಗಿ ವರ್ತಿಸುತ್ತಾ, ಅವರನ್ನು ಒಲಿಸಿಕೊಳ್ಳುತ್ತಾ, ದೃಶ್ಯಕ್ಕೆ ಬೇಕಾದ ಏಕಾಗ್ರತೆ ಮೂಡಿಸುತ್ತಾ ಚಿತ್ರೀಕರಣ ನಡೆಸುವುದು ಸವಾಲಾಗಿತ್ತು. ಆದರೆ ಬಹಳ ಸಂತೋಷದಾಯಿಯೂ ಆಗಿತ್ತು. ಅವರ ಮೂಲಕ ಅವರ ಪ್ರಪಂಚವನ್ನು ಅರಿಯುವುದು ಬಹಳ ಅನನ್ಯ ಅನುಭವ. ಕನ್ನಡದ ಅಪರೂಪದ ನಿರ್ದೇಶಕ ಪಿ ಶೇಷಾದ್ರಿಯವರ ಮಗ, ಪ್ರಥಮನೂ ನಮ್ಮ ಚಿತ್ರದಲ್ಲಿ ಒಂದು ಪ್ರಮುಖ ಪಾತ್ರ ಮಾಡುತ್ತಿದ್ದ. ಮುಖ್ಯ ಮಂತ್ರಿ ಚಂದ್ರು, ಗಿರಿಜಾ ಲೋಕೇಶ್ ರಂಥಾ ಹಿರಿಯ ಕಲಾವಿದರೂ ಬಂದು ನನ್ನಂಥಾ ಕಿರಿಯನೊಡನೆ ಕೆಲಸ ಮಾಡಿದ ರೀತಿ ನನಗೆ ನಿಜಕ್ಕೂ ಅಚ್ಚರಿಯನ್ನು ಉಂಟು ಮಾಡಿತ್ತು. ಹೀಗೆ ನಮ್ಮ ಚಿತ್ರೀಕರಣ ಮುಗಿಯಿತು.

ಕತ್ತರಿಸು, ಅಂಟಿಸು ಕೇಳಿ ನೋಡು

ಚಿತ್ರೀಕರಿಸಿದ್ದೆಲ್ಲಾ ಸಂಸ್ಕರಣೆಗೊಂಡು ಲ್ಯಾಬಿನಿಂದ ಸಂಕಲನ ಹಂತಕ್ಕೆ ಬಂದು ಕುಳಿತಿತ್ತು. ಚಿತ್ರೀಕರಿಸಿದ್ದಷ್ಟನ್ನೂ ನೋಡಿ ಒಮ್ಮೆ ನಿರಾಳ ಎನಿಸಿತ್ತು. ಎಲ್ಲೂ ಫೋಕಸ್ ತಪ್ಪಿರಲಿಲ್ಲ, ಚಿತ್ರೀಕರಿಸಿದ್ದು ನಷ್ಟವಾಗಿರಲಿಲ್ಲ, ತಾಂತ್ರಿಕವಾಗಿ ಸರಿಯಾಗಿತ್ತು! ಮತ್ತೆ ಆರಂಭವಾಗಿದ್ದು ಸಂಕಲನ. ಸುಮಾರು ಒಂದೂವರೆ ವಾರದಲ್ಲೇ ಸಂಕಲನ ಮುಗಿಸಿ ಧ್ವನಿಯ ಲೋಕಕ್ಕೆ ನುಗ್ಗಿದೆವು. ಡಬ್ಬಿಂಗ್ ಮಾಡುತ್ತಿರುವ ಸಂದರ್ಭದಲ್ಲೇ ಚಿತ್ರದ ಆರಂಭಕ್ಕಾಗಿ ಜಯಂತ್ ಕಾಯ್ಕಿಣಿಯವರು ಬರೆದು ಕೊಟ್ಟ ಅಂದದ ಪದ್ಯದ ರೆಕಾರ್ಡಿಂಗ್ ಕೂಡಾ ನಡೆಯಿತು. ಅದೇ ಸ್ಟೂಡಿಯೋದಲ್ಲಿ ರಮೇಶ್ ಅರವಿಂದ್ ಅವರ ಆಕ್ಸಿಡೆಂಟ್ ಚಿತ್ರದ ಧ್ವನಿ ಸಂಯೋಜನೆಯೂ ನಡೆಯುತ್ತಿತ್ತು. ಹೀಗೆ ಸ್ಟೂಡಿಯೋ ಹೆಚ್ಚಾಗಿ ರಾತ್ರಿಹೊತ್ತಿನಲ್ಲೇ ನಮಗೆ ಸಿಗುತ್ತಿದ್ದುದು. ಅಲ್ಲಿ ಧ್ವನಿಯ ಕೆಲಸಗಳನ್ನೆಲ್ಲಾ ಮುಗಿಸಿ ಮತ್ತೆ ಚೆನ್ನೈಗೆ ಹೋಗಿ ಅಲ್ಲಿ ಚಿತ್ರದ ಪ್ರಥಮ ಪ್ರತಿ ತಯಾರಾಯಿತು.

ಮಗು ಹೆತ್ತ ಸಂಭ್ರಮ!

ಚಿತ್ರದ ಮೊದಲ ಪ್ರತಿ ತಯಾರಾಗಿ ಹೊರಬಂದಾಗ ಕ್ಯಾಮರಾ ಮ್ಯಾನ್ ವಿಕ್ರಂ ಹಾಗೂ ನನ್ನ ಮೊದಲ ಚಿತ್ರ ಇದು. ಇಬ್ಬರಿಗೂ ಧನ್ಯತಾ ಭಾವ. ಒಂದನೇ ಸಿನೆಮಾದ ಒಂದೇ ಪ್ರತಿಯ ಒಂದೇ ಡಬ್ಬಿಯನ್ನು ಕಣ್ತುಂಬ ನೋಡಿ ಸಂತಸ ಪಟ್ಟೆವು. FTII ಗುರುಗಳಿಗೆಲ್ಲಾ ದೂರವಾಣಿ ಕರೆ ಮಾಡಿ ಸಂಭ್ರಮಿಸಿದೆವು. ಮತ್ತೆ ಅದೇ ಸಂಜೆ ಚೆನ್ನೈಯ ಪ್ರಸಾದ್ ಲ್ಯಾಬಿನಲ್ಲೇ ಕುಳಿತು ಚಿತ್ರವನ್ನು ವೀಕ್ಷಿಸಿದೆವು. ನಿರ್ಮಾಪಕ ಶೈಲಜಾ ನಾಗ್ ಮತ್ತೆ ನಿರ್ಮಾಣ ನಿರ್ವಾಹಕ ಅಶೋಕ ಜೊತೆಗಿದ್ದರು. ಅವರಿಗೂ ಸಂಭ್ರಮ. ಮತ್ತೆ ಅಲ್ಲಿಂದ ಬೆಂಗಳೂರಿಗೆ ಪಯಣ. ಹಾಂ! ಮತ್ತೆ ಸೆನ್ಸಾರ್… ಇತ್ಯಾದಿ ಕೆಲಸಗಳು ಮುಗಿದು ಚಿತ್ರ ತಯಾರಾಗಿ ನಿಂತಿದ್ದು ಸರಿಯಾಗಿ ಮಾರ್ಚ್ ೩೧ರಂದು!

ಗುಬ್ಬಚ್ಚಿ ಹಾರಲು ಕಲಿತದ್ದು

ಮೊದಲ ಬಾರಿಗೆ ನ್ಯೂಯಾರ್ಕಿನಿಂದ New York International Indipendent Film Festival ನಿಂದ ಕರೆ ಬಂದಾಗ ಬಹಳ ಸಂತೋಷವಾಗಿತ್ತು. ಅದೇ ನಮ್ಮ ಚಿತ್ರದ ಮೊದಲ ಪಯಣ. ಮುಂದೆ ಲಾಸ್ ಅಂಜಲಿಸ್, ಟೊರೆಂಟೋ, ದೆಹಲಿ, ಭಾರತೀದ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವದ ಪ್ಯಾನೋರಮಾ ವಿಭಾಗಕ್ಕೆ ಆಯ್ಕೆ, ರಾಜ್ಯ ಪ್ರಶಸ್ತಿಯಲ್ಲಿ ಪ್ರಕೃತಿಗೆ ಶ್ರೇಷ್ಟ ಬಾಲ ಕಲಾವಿದೆ ಪ್ರಶಸ್ತಿ, ಲಖ್ನೋ ಚಿತ್ರೋತ್ಸವದಲ್ಲಿ ಪ್ರದರ್ಶನ ಹೀಗೆ ಒಂದಾದ ಮೇಲೊಂದರಂತೆ ಗುಬ್ಬಚ್ಚಿಗಳು ಗೆಲ್ಲುಗಳನ್ನು ಹಾರುತ್ತಾ ಹಾರುವುದನ್ನು ಕಲಿಯಿತು. ಇಂದು ಎಲ್ಲವುಗಳಿಗೂ ಕಲಶವಿಟ್ಟಂತೆ ೨೦೦೮ರ ಸಾಲಿನ ಸ್ವರ್ಣ ಕಮಲ ಪುರಸ್ಕಾರವನ್ನೂ ಚಿತ್ರ ಪಡೆದು ಹೆತ್ತವರಿಗೆಲ್ಲ ಸಂತಸವನ್ನು ತಂದಿದೆ.

ಹೆತ್ತಮ್ಮನ ಏಕಾಂತದ ಕ್ಷಣಗಳು

ಬಹಳ ಕನಸು ಹೊತ್ತು ಆರಂಭಿಸಿದ ನಮ್ಮ ಚಿತ್ರ, ನಾವು ಕಾಣದ ಬಹಳಷ್ಟು ಕನಸುಗಳನ್ನೂ ನನಸನ್ನಾಗಿಸಿದೆ, ಇನ್ನೆಷ್ಟೋ ಕೊರಗುಗಳನ್ನು ಉಳಿಸಿದೆ. ಯಾವುದೋ ದುರ್ಬಲ ಗಳಿಗೆಗಳಲ್ಲಿ ಕೈಗೊಂಡ ನಿರ್ಧಾರಗಳಿಂದಾಗಿ ಅನೇಕ ಪಾಠಗಳು ಕಲಿಯಲು ಸಿಕ್ಕಿವೆ. ಚಿತ್ರ ನಿರ್ಮಾಣದ ಪಾಠಗಳನ್ನು ಕಲಿಸುವಲ್ಲಿ, ಮಾಧ್ಯಮವನ್ನು ಇನ್ನಷ್ಟು ಅರ್ಥೈಸಿಕೊಳ್ಳುವಲ್ಲಿ ಈ ಚಿತ್ರ ನನ್ನ ಹಾಗೂ ನನ್ನ ತಂಡದ ಜೀವನದಲ್ಲಿ ಒಂದು ಪ್ರಮುಖ ಪ್ರಯತ್ನವಾಗಿದೆ. ಮುಂದಿನ ಚಿತ್ರಗಳನ್ನು ಮಾಡುವಾಗ ಈ ಅನುಭವ ಮಾರ್ಗದರ್ಶಕವಾಗಲಿದೆ. ಕಥೆಯಿಂದ ತೆರೆಯವರೆಗಿನ ಸುಮಾರು ಒಂಭತ್ತು ತಿಂಗಳ ಪಯಣದಲ್ಲಿ ನಮಗೆ ಹೆಗಲು ಕೊಟ್ಟು ನಿಂತವರು ನೂರಾರು ಜನರು. ಚಿತ್ರ ನೋಡಿ ಮಾರ್ಗದರ್ಶನ ಮಾಡಿದವರು ಇನ್ನೂ ಸಾವಿರಾರು. ಇವರೆಲ್ಲರಿಗೂ ಮನಸ್ಸಲ್ಲೇ ನಮಸ್ಕರಿಸುತ್ತಾ ಮುಂದಿನ ಹೆಜ್ಜೆ ಇಡಲು ಸನ್ನದ್ಧನಾಗುತ್ತಿದ್ದೇನೆ. ಈ ಪಯಣದ ಕಥೆ ಕೇಳಿದ್ದಕ್ಕೆ ಧನ್ಯವಾದಗಳು ನಿಮಗೆ. ಸಿಗಲಿ ನಿಮ್ಮ ಸಾಥ್ ಹೀಗೇ.. ಮುಂದಕ್ಕೂ…

(ಕೆಂಡ ಸಂಪಿಗೆಯಲ್ಲಿ ಪ್ರಕಟಣೆಗಾಗಿ ಬರೆದ ಲೇಖನ ಇದು)
(ಗುಬ್ಬಚ್ಚಿಗಳ ಕುರಿತಾಗಿ ಅವಧಿಯಲ್ಲಿ ಪ್ರಕಟವಾದ ವಿವೇಕ ರೈಯವರ ಸುಂದರವಾದ ಲೇಖನ ಇಲ್ಲಿ ಓದಿ)

Share This