ಮೋನೋ – ಸ್ಟೀರಿಯೋ – ಸರೌನ್ಡ್ ಇತ್ಯಾದಿ ಪದಗಳನ್ನು ನೀವು ಸಿನೆಮಾದ ಧ್ವನಿಯ ಸಂದರ್ಭದಲ್ಲಿ ಕೇಳಿರಬಹುದು. ಕೆಲವೊಮ್ಮೆ ಅದು ತಪ್ಪು ಬಳಕೆಯಲ್ಲಿರುವುದೂ ಉಂಟು. ಕಾರಿನಲ್ಲಿರುವ ಟೇಪ್-ಪ್ಲೇಯರ್ ಹೆಚ್ಚಿನ ಸಂದರ್ಭದಲ್ಲಿ ಸ್ಟೀರಿಯೋ ಎಂದೇ ಕರೆಸಿಕೊಳ್ಳುತ್ತದೆ. ಆದರೆ ಅದು ನಿಜವಾಗಿ ಸರೌನ್ಡ್ ಆಗಿರಬಹುದು. ಇತ್ಯಾದಿ. ಹಾಗಾಗಿ ಇವತ್ತಿನ ಚಿತ್ರ-ಧ್ವನಿ ಕಂತಿನಲ್ಲಿ ಈ ಪದಗಳ ಬಗ್ಗೆ ಒಂದಿಷ್ಟು ಮಾತು. ಹೀಗೆಂದರೆ ಏನು? ಅದು ಹೇಗೆ ಕೆಲಸ ಮಾಡುತ್ತದೆ? ಅದರ ಸೃಜನಾತ್ಮಕ ಬಳಕೆ ಹೇಗೆ ಸಾಧ್ಯ ಮತ್ತು ಅದರ ಗುಣ-ಅವಗುಣ ಏನು ಎನ್ನುವುದು ನಮ್ಮ ಕುತೂಹಲ.
ಯಾವುದೇ ಶಬ್ದವನ್ನು ನಮ್ಮ ಮೆದುಳು ಹೇಗೆ ಗ್ರಹಿಸುತ್ತದೆ ಎನ್ನುವುದನ್ನು ಮೊದಲು ಗಮನಿಸೋಣ. ನಮ್ಮ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಯಾವುದೇ ಶಬ್ದ ಉಂಟಾದಲ್ಲಿ, ಮೆದುಳು ಮೊದಲು ಆ ಶಬ್ದವು ಎಡಗಿವಿಗೆ ಹತ್ತಿರವಾಗಿದೆಯೇ, ಬಲಗಿವಿಗೆ ಹತ್ತಿರವಾಗಿದೆಯೇ ಎಂದು ನೋಡುತ್ತದೆ. ಶಬ್ದವು ಈ ಎರಡೂ ಕಿವಿಗಳಿಂದ ಎಷ್ಟು ದೂರದಲ್ಲಿ ಮತ್ತು ಯಾವ ತೀವ್ರತೆಯಲ್ಲಿ ಇದೆ ಎನ್ನುವುದನ್ನು ಅರ್ಥೈಸಿಕೊಳ್ಳುತ್ತದೆ. ಇದರಿಂದಾಗಿ ಒಂದು ಶಬ್ದದ ದಿಕ್ಕು ಹಾಗೂ ದೂರ ನಮಗೆ ತಿಳಿಯುತ್ತದೆ. ಇದನ್ನೇ ಕೃತಕವಾಗಿ ಸೃಷ್ಟಿಸಿದರೆ, ಮೆದುಳಿನಲ್ಲಿ ಶಬ್ದದ ಮೂಲಕ ಒಂದು ಹೊಸ ಪ್ರಪಂಚವನ್ನೇ ಕಟ್ಟುವುದು ಸಾಧ್ಯವಾಗುತ್ತದೆ. ಇದೇ ತಂತ್ರಜ್ಞಾನ ಈ ಸ್ಟೀರಿಯೋ-ಸರೌನ್ಡ್ ಇತ್ಯಾದಿಗಳದ್ದು.

ಸಿನೆಮಾಕ್ಕೆ ಧ್ವನಿ ಬಂದಾಗ ಮೊದಲು ಅದು ಕೇವಲ ಮೋನೋ ಆಗಿತ್ತು. ಮೋನೋ (Mono)ಎಂದರೆ ಒಂದೇ ದಿಕ್ಕಿನಿಂದ ಬರುವ ಧ್ವನಿ ಎಂದು ಅರ್ಥ. ಆಗ ಸ್ಕ್ರೀನಿನ ಹಿಂದೆ ಇಟ್ಟ ಒಂದೇ ಧ್ವನಿವರ್ಧಕದಿಂದ ಧ್ವನಿ ಕೇಳಿಸಿ ಬರುತ್ತಿತ್ತು. ಇದರಿಂದ ಚಿತ್ರಗಳೇ ಮಾತನಾಡಿದ ಅನುಭವವನ್ನು ಕೊಡುತ್ತಿತ್ತು. ಆದರೆ ಸಮಯ ಹೋಗುತ್ತಿದ್ದಂತೆಯೇ, ಧ್ವನಿಯ ಸಾಧ್ಯತೆಗಳನ್ನು ತಂತ್ರಜ್ಞರು ಗುರುತಿಸಲಾರಂಭಿಸಿದರು. ಇದರಿಂದಾಗಿ ಸಿನೆಮಾದ ಧ್ವನಿಯಲ್ಲಿ ಪರಿವರ್ತನೆ ಆರಂಭವಾಯಿತು. ಮೊದಲಿಗೆ ಸ್ಟೀರಿಯೋ ಬಂತು. ಇಲ್ಲಿ ಎರಡು ವಾಹಿನಿಗಳಲ್ಲಿ ಧ್ವನಿಯನ್ನು ಕೇಳಿಸಲಾಗುತ್ತಿತ್ತು. ಚಿತ್ರ ಪರದೆಯ ಎಡ-ಬಲದಲ್ಲಿ ಇಟ್ಟ ಧ್ವನಿವರ್ಧಕದ ಮೂಲಕ ಧ್ವನಿ ಕೇಳಿಸಿ ಅದನ್ನು ಎಡ-ಬಲಗಿವಿಗಳ ಅರ್ಥೈಸುವಿಕೆಗೆ ಬಿಟ್ಟು ಹೊಸ ಅನುಭವ ನೀಡಲಾಯಿತು. ಮುಂದೆ ಈ ಎಡ-ಬಲ ಧ್ವನಿವರ್ಧಕಗಳ ಜೊತೆಗೆ ಪರದೆಯ ಹಿಂದೆಯೂ ಒಂದು ವೂಫರ್ ಇಟ್ಟು ಕೆಲವು ತರಂಗಗಳು ಅಲ್ಲಿಂದ ಬರುವಂತೆ ಮಾಡಿ ಪರದೆಯ ಮೇಲಿನ ಚಿತ್ರಗಳಿಗೆ ಜೀವ ಹಚ್ಚುವಲ್ಲಿ ಇನ್ನಷ್ಟು ಹೆಚ್ಚು ಹತ್ತಿರ ಬಂದರು. ಮುಂದೆ ಡಿಜಿಟಲ್ ಯುಗ ಪ್ರವೇಶಿಸುತ್ತಿದ್ದಂತೆಯೇ, ಚಿತ್ರಮಂದಿರದೊಳಗೆ ಕುಳಿತ ಪ್ರೇಕ್ಷಕನಿಗೆ ಹೆಚ್ಚಿನ ಅನುಭವ ಕೊಡಲೆಂದು, ಸರೌನ್ಡ್ ಧ್ವನಿ ಪರಿಚಯಿಸಲ್ಪಟ್ಟಿತು. ಇದರಲ್ಲಿ ಮೂಲತಃ ಐದು ಧ್ವನಿವರ್ಧಕಗಳನ್ನು ಬಳಸಿ ಅವುಗಳನ್ನು ಪ್ರೇಕ್ಷಕನ ಸುತ್ತಲೂ ಇಟ್ಟು ಧ್ವನಿಯನ್ನು ಅವುಗಳಲ್ಲಿ ಪ್ರಮಾಣಾನುಸಾರ ಮಿಶ್ರಮಾಡಿ ಧ್ವನಿ ಪ್ರೇಕ್ಷಕನ ಸುತ್ತಲೂ ಸುತ್ತುವಂಥಾ ಅನುಭವವನ್ನು ಸೃಷ್ಟಿ ಮಾಡಲಾಗುತ್ತದೆ.

ಮೇಲೆ ವಿವರಿಸಲಾದ ಸ್ಟ್ರಿರಿಯೋ ಅನುಭವವನ್ನು ಕೊಡುವಂಥಾ ಒಂದು ವಿಶಿಷ್ಟ ಧ್ವನಿ ತುಣುಕು ಅಂತರ್ಜಾಲದಲ್ಲಿ ಸಿಕ್ಕಿದೆ. ಅದನ್ನು ಇಲ್ಲಿ ನಿಮಗಾಗಿ ಲಿಂಕ್ ಮಾಡಿದ್ದೇನೆ. ಇದನ್ನು ಕೇಳುವ ಮೊದಲು ಕೆಲವು ಸಿದ್ಧತೆಗಳು ಮಾಡಿಕೊಂಡರೆ ಒಳ್ಳೆಯದು.

೧. ಇದನ್ನು ನೀವು ಸರಿಯಾದ ಹೆಡ್-ಫೋನ್ ಹಾಕಿಯೇ ಅನುಭವಿಸಬೇಕು.
೨. ನಿಮ್ಮ ಸುತ್ತ-ಮುತ್ತ ಆದಷ್ಟು ಮೌನವಿರುವಂತೆ ಏರ್ಪಡಿಸಿಕೊಳ್ಳಿ.
೩. ಈ ಧ್ವನಿ ತುಣುಕು ಸುಮಾರು ೪ ನಿಮಿಷ ಉದ್ದಕ್ಕಿದೆ. ಇದು ನಡೆಯುವವರೆಗೂ ಕಣ್ಣುಮುಚ್ಚಿಕೊಂಡು ಧ್ವನಿಗೇ ಗಮನ ಹರಿಸಿರಿ.

[Click this text to hear the virtual hair cut]

ಇನ್ನು ಇದನ್ನು ಕೇಳಿಯಾದ ಮೇಲೆ, ಇದು ಕೊಟ್ಟ ಅನುಭವಕ್ಕೆ ಕಾರಣ ಯೋಚಿಸಿ ಆಗ ಸ್ಟೀರಿಯೋ ಅಧವಾ ಸರೌನ್ಡ್ ಶಬ್ದದ ಬಗ್ಗೆ ನಿಮ್ಮ ಕಲ್ಪನೆ ಸ್ಪಷ್ಟವಾಗುತ್ತದೆ ಎಂದು ನನ್ನ ನಂಬಿಕೆ… ಕೇಳಿ ಮಜಾ ಮಾಡಿ… (ಏನಿಲ್ಲಾಂದ್ರೂ ಒಂದು ಫ್ರೀ ಕ್ಷೌರ ಗ್ಯಾರೆಂಟಿ… ;-D )

… ಮುಂದುವರೆಯಲಿದೆ.

Share This