ದಿನ ದಿನವೂ ಕಣ್ಣೆದುರಿಗೆ ಸಾವಿರ ಚಿತ್ರಗಳು ಓಡುತ್ತಿರುತ್ತವೆ. ಆದರೆ ಅವುಗಳನ್ನು ಪದಗಳಲ್ಲಿ ಬಂಧಿಸಿಡುವುದು ಹೇಗೆ? ಬರವಣಿಗೆಯೆಂಬ ಭೂತ ನನ್ನೆದುರು ಬಂದು ನಿಂತದ್ದು ಚಿತ್ರ ಶಾಲೆಯ ಮೊದಲ ದಿನವೇ. ಹಿಂದಿನ ಕಂತಿನಲ್ಲಿ ಹೇಳಿದಂತೆ ಮಾರುಕಟ್ಟೆಯಲ್ಲಿ ಒಂದು ಸಂಜೆ ಕಳೆದು ವಾಪಾಸಾದಾಗ, ಅದನ್ನು ಮರುದಿನದ ತರಗತಿಗಾಗಿ ಬರೆದುಕೊಂಡು ಹೋಗಬೇಕಾಗಿತ್ತು. ಆದರೆ ಬರೆಯಲು ಕುಳಿತರೆ, ಮನದಲ್ಲಿ ಮೂಡಿ ಬರುತ್ತಿದ್ದ ಭಾವನೆಗಳಿಗೆ ಪದಗಳೆಲ್ಲಾ ಸಾಲದೆ, ತಿಣುಕಾಡಬೇಕಾಯಿತು. ಒಬ್ಬ ನಿರ್ದೇಶಕನಿಗೆ ತಕ್ಕಮಟ್ಟಿನ ಬರವಣಿಗೆಯಾದರೂ ಸಿದ್ಧಿಸಿದರೆ ಒಳ್ಳೆಯದು. ಜಗತ್ತಿನಾದ್ಯಂತ ಅನೇಕ ನಿರ್ದೇಶಕರು ತಮ್ಮ ಚಿತ್ರಕ್ಕೆ ಬೇಕಾದ ಕಥೆಗಳನ್ನು, ಚಿತ್ರಕಥೆಗಳನ್ನು ಸ್ವತಃ ತಾವೇ ಬರೆಯುತ್ತಾರೆ. ಅದಕ್ಕೆ ಉತ್ತಮವಾದ ಬರವಣಿಗೆಯ ಶಿಸ್ತು ಇರಲೇ ಬೇಕು. ಇನ್ನೊಬ್ಬರ ಚಿತ್ರಕಥೆಯನ್ನು ಬಳಸುತ್ತೇವೆ ಎಂದರೂ, ಅದನ್ನು ಸಮರ್ಥವಾಗಿ ಅರ್ಥೈಸಿಕೊಳ್ಳಲಾದರೂ ಒಂದು ಮಟ್ಟಿನ ಬರವಣಿಗೆಯ ಶಿಸ್ತು ಇರಲೇ ಬೇಕು. ಬರವಣಿಗೆಯಲ್ಲಿ ಸ್ವಂತದ್ದೇ ಆದ ಶಿಸ್ತು, ಶೈಲಿ ಒಬ್ಬ ನಿರ್ದೇಶಕನ ಆಸ್ತಿಯೇ ಸರಿ.

ಅಂತೂ ಇಂತೂ ಆ ದಿನ ಕಂಡದ್ದನ್ನೆಲ್ಲಾ ಬರವಣಿಗೆಗೆ ಇಳಿಸಿದ್ದಾಯ್ತು. ಮರುದಿನ ತರಗತಿಯಲ್ಲಿ ಅದನ್ನು ಓದಲಾರಂಭಿಸಿದೆವು. ನಾವು ಗುಂಪಿನಲ್ಲಿ ಇದ್ದದ್ದು ಸುಮಾರು ಎಂಟು ಜನ. ಒಬ್ಬೊಬ್ಬರದೂ ಒಂದೊಂದು ಕಥೆ. ನಾವೆಲ್ಲರೂ ಹೋಗಿದ್ದು ಒಂದೇ ಸ್ಥಳಕ್ಕೆ, ಆದರೆ ನೋಡಿದ್ದು ಬೇರೆ ಬೇರೆ ವಿಷಯಗಳನ್ನು. ಎಂಥಾ ಸೋಜಿಗವಿದು. ನಮ್ಮೆದುರು ಹಾದು ಹೋಗುವ ಸಾವಿರ ಬಿಂಬಗಳಲ್ಲಿ ನಮ್ಮನ್ನು ಸೆಳೆಯುವ ಆ ಒಂದು ಬಿಂಬಕ್ಕೆ ಏನಿದೆ ಅಂಥಾ ವಿಶೇಷ? ಯಾಕೆ ನಾವು ಒಂದು ಕಥೆಯನ್ನು ಹೇಳಲು ಬಯಸುತ್ತೇವೆ ಮತ್ತೊಂದನ್ನಲ್ಲಾ? ನಮ್ಮ ಗುಂಪಿನವರ ಕಥೆಗಳನ್ನು ಕೇಳುತ್ತಾ ಕೇಳುತ್ತಾ, ಮಾರುಕಟ್ಟೆಯಲ್ಲಿನ ಕಥಾ ಸಾಗರದ ಅರಿವಾಗುತ್ತಾ ಸಾಗಿತು ನಮಗೆ. ನಿರ್ದೇಶಕನ ಜಗತ್ತಿಗೆ ಮೊದಲ ನೋಟ ಸಿಕ್ಕಿತ್ತು ನಮಗೆ.

ಅಂದು ಸಂಜೆ ನಮ್ಮ ಮೊದಲ ಚಿತ್ರ ಪ್ರದರ್ಶನ. ಎಫ್.ಟಿ.ಐ.ಐ ಸಮೀಪದಲ್ಲೇ ನ್ಯಾಷನಲ್ ಫಿಲಂ ಆರ್ಖೈವ್ ಇದೆ. ಅಲ್ಲಿ ಅಂದಿನ ಸಂಜೆಯ ಚಿತ್ರ ಪ್ರದರ್ಶನ. ಈ ಆರ್ಖೈವ್ ವಿಚಾರ ಮುಂದಿನ ಸಂಚಿಕೆಯಲ್ಲಿ ಹೇಳುತ್ತೇನೆ. ಆದರೆ ಅಂದು ನಾವು ನೋಡಿದ ಮೊದಲ ಚಿತ್ರ, ಅಖಿರಾ ಕುರೋಸಾವಾರ ಥಾರ್ನ್ ಆಫ್ ಬ್ಲಡ್ ಚಿತ್ರ. ನನಗೋ ಸಬ್-ಟೈಟಲ್ ನೋಡುತ್ತಾ ಚಿತ್ರ ನೋಡುವ ಮೊದಲ ಅನುಭವ. ಚಿತ್ರದುದ್ದಕ್ಕೂ ಇಂಗ್ಲೀಷ್ ವಿವರಣೆಯನ್ನು ಪರದೆಯ ಮೇಲೆ ಓದುತ್ತಾ ಚಿತ್ರ ನೋಡಬೇಕಾದರೆ ಸಾಕು ಸಾಕಾಗಿ ಹೋಯಿತು. ಅನೇಕ ಬಾರಿ ವಿವರಣೆ ಓದಿ ಚಿತ್ರ ನೋಡುವಷ್ಟರಲ್ಲಾಗಲೇ ಚಿತ್ರ ಮುಂದೆ ಹೋಗಿಯಾಗಿರುತ್ತಿತ್ತು. ಅದೊಂಥರಾ ತಮಾಶೆಯಾಗಿತ್ತು. ಆದರೆ ಅದೇ ಸಮಯದಲ್ಲಿ, ಇದು ಹೀಗಾದರೆ, ನಾವು ಚಿತ್ರವನ್ನು ಅನುಭವಿಸುವುದಾದರೂ ಹೇಗೆ ಎಂದು ಬೇಸರವಾಗುತ್ತಿತ್ತು. ಮುಂದೆ ಈರೀತಿ ಚಿತ್ರಗಳನ್ನು ನೋಡುವುದು ಅಭ್ಯಾಸವಾಗಿ ಬಿಟ್ಟಿತು ಬಿಡಿ. ಎಷ್ಟು ಅಭ್ಯಾಸವಾಯಿತು ಎಂದರೆ, ಅನೇಕ ಬಾರಿ ಚಿತ್ರದ ನಿಜವಾದ ಭಾಷೆ ಯಾವುದಿತ್ತು ಎಂದು ಯೋಚಿಸಿದರೆ, ಇಂಗ್ಲೀಷ್ ಎನ್ನುವಷ್ಟು ಮನಸ್ಸಿನಲ್ಲಿ ಈ ಕ್ರಮ ಸರಾಗವಾಗಿ ಬಿಟ್ಟಿತ್ತು! ಸಿನೆಮಾ ಶಾಲೆಯಲ್ಲಿನ ಮುಂದಿನ ಮೂರುವರುಷಗಳ ಕಾಲ ಹೀಗೇ ನಡೆಯಲಿದ್ದವು. ದಿನವಿಡೀ ಪಾಠ, ಪ್ರಯೋಗಗಳು. ಸಂಜೆ ಆರುವರೆಯಿಂದ ಒಂದು ಚಿತ್ರ ಪ್ರದರ್ಶನ. ನಾವು ಈ ಶಾಲೆಯಲ್ಲಿ ಮಾಡಿ, ಓದಿ ಕಲಿಯುವುದೆಷ್ಟು ಇತ್ತೋ ಅಷ್ಟೇ ನೋಡಿಯೂ ಕಲೆಯಲಿತ್ತು. ವಿಶ್ವದ ಅನೇಕ ನಿರ್ದೇಶಕರ ಚಿತ್ರಗಳನ್ನು ನೋಡಿ, ಅವರ ಅಭಿವ್ಯಕ್ತಿಯ ವಿಧಾನವನ್ನು ಗ್ರಹಿಸಿಕೊಂಡು ನಮ್ಮದೇ ಆದ ಅಭಿವ್ಯಕ್ತಿಯನ್ನು ರೂಪಿಸಿಕೊಳ್ಳಬೇಕು ನಾವು ಎನ್ನುವುದೇ ಈ ಚಿತ್ರ ಪ್ರದರ್ಶನಗಳ ಉದ್ದೇಶ.

ಹಾಗಾದರೆ ಕೇವಲ ಚಿತ್ರಗಳನ್ನು ನೋಡುವುದರ ಮೂಲಕ ಅಥವಾ ಯಾವುದಾದರೂ ನಿರ್ದೇಶಕನ ಕೈ-ಕೆಳಗೆ ಕೆಲಸ ಮಾಡುವುದರಿಂದ ಚಿತ್ರ ನಿರ್ದೇಶಕರಾಗಲು ಸಾಧ್ಯವೇ? ಖಂಡಿತಾ ಸಾಧ್ಯ. ಅಭಿವ್ಯಕ್ತಿಯನ್ನು ಯಾರೂ ನಿಮಗೆ ಕಲಿಸಲು ಸಾಧ್ಯವಿಲ್ಲವಲ್ಲವೇ? ಹಾಗಾದರೆ ಸಿನೆಮಾ ಶಾಲೆಯ ಲಾಭ ಏನು ಎನ್ನುತ್ತೀರಾ? ಇಲ್ಲಿ ನಮ್ಮ ಯೋಚನೆಗಳಿಗೆ ಒಂದು ಶಿಸ್ತನ್ನು ಕೊಡುತ್ತದೆ. ನಾವು ನೋಡುವ ಚಿತ್ರಗಳನ್ನು ವಿಶ್ಲೇಶಿಸಿ, ಅದರಲ್ಲಿ ಅರ್ಥ ಹುಡುಕುವ ದಾರಿಯನ್ನು ತೋರಿಸುತ್ತದೆ. ನಮ್ಮ ಅಭಿವ್ಯಕ್ತಿಯಲ್ಲಿ ನಮ್ಮದೇ ಆದ ಶೈಲಿಯನ್ನು ಗುರುತಿಸಿ ಅದನ್ನು ಬೆಳೆಸಿಕೊಳ್ಳಲು ಪ್ರಯೋಗಶಾಲೆಯಾಗಿ ನಿಲ್ಲುತ್ತದೆ. ಹೀಗೆ ಅನೇಕ ಉಪಯೋಗಗಳನ್ನು ಸಿನೆಮಾ ಶಾಲೆ ಒದಗಿಸುತ್ತದೆ.

ಒಬ್ಬ ನಿರ್ದೇಶಕನ ಕೈ-ಕೆಳಗೆ ಕೆಲಸ ಮಾಡಿದರೆ ವಿದ್ಯಾರ್ಥಿ ಖಂಡಿತಾ ಸಾಕಷ್ಟು ಅನುಭವಗಳನ್ನು ಗಳಿಸಬಹುದು. ಆದರೆ, ಅವನ ಹೆಚ್ಚಿನ ಕಲಿಕೆ ಆ ನಿರ್ದೇಶಕನ ಕಾರ್ಯವಿಧಾನದ ಕುರಿತಾಗಿಯೇ ಇರುತ್ತದೆಯೇ ಹೊರತು, ಸ್ವಂತದ ಶೈಲಿಯ ಶೋಧನೆಗೆ ಅಲ್ಲಿ ಅವಕಾಶ ಕಡಿಮೆ. ಹೀಗಾಗಿ ಸಿನೆಮಾ ಶಾಲೆಯಲ್ಲಿ ಚಿತ್ರಗಳನ್ನು ವಿಕ್ಷಿಸುವ ಕ್ರಮ ಸ್ವಲ್ಪ ಭಿನ್ನವಾಗಿರುತ್ತದೆ. ಅಲ್ಲಿ ಚಿತ್ರವನ್ನು ನೋಡಿದ ನಂತರ ಹಿಂದಿರುಗಿ ಬಂದು ಸವಿಸ್ತಾರವಾದ ಚರ್ಚೆಗಳು ವಿದ್ಯಾರ್ಥಿಗಳ ನಡುವೆ ನಡೆಯುತ್ತವೆ. ವಿದ್ಯಾರ್ಥಿಗಳು, ಅನೇಕ ಹಿನ್ನೆಲೆಯಿಂದಲೂ, ಭಿನ್ನ ವಯೋವರ್ಗದವರೂ ಆಗಿರುವುದರಿಂದ ಈ ಚರ್ಚೆಗಳು ರಸವತ್ತಾಗಿ, ಅರ್ಥಪೂರ್ಣವಾಗಿ ನಡೆಯುತ್ತವೆ. ಹೀಗೆ ಒಂದು ಚಿತ್ರವನ್ನು ನೋಡುವುದೂ ಅದನ್ನು ಅನುಭವಿಸುವುದೂ, ಒಬ್ಬ ನಿರ್ದೇಶಕನಿಗೆ ಅಗತ್ಯ ಸರಕನ್ನು ಕಟ್ಟಿಕೊಡುವಲ್ಲಿ ಸಹಕಾರಿಯಾಗಿರುತ್ತವೆ.

ಮುಂದಿನ ಬಾರಿ ಭಾರತೀಯ ಚಿತ್ರ ಸಂಗ್ರಹಾಲಯದ ವಿಷಯದೊಂದಿಗೆ ಮತ್ತೆ ಹಾಜರಾಗುವೆ. ಅಲ್ಲಿಯವರೆಗೆ… ನಮಸ್ಕಾರ.

Share This