ಭಾರತೀಯ ಚಿತ್ರರಂಗದ ಒಂದು ಮೈಲುಗಲ್ಲು ಎಂದೆಲ್ಲಾ ಹೊಗಳಿಸಿಕೊಂಡ ಚಿತ್ರ, ‘ಗಾಂಧಿ ಮೈ ಫಾದರ್’ ಬಿಡುಗಡೆಯಾಗಿದೆ. ಸದಭಿರುಚಿಯ ನಿರ್ಮಾಪಕನೊಬ್ಬ ಸಿಗುವುದು ನಿರ್ದೇಶಕನೊಬ್ಬನ ಶಾಶ್ವತ ಕನಸು. ಒಂದು ಒಳ್ಳೆಯ ಚಿತ್ರ ನಿರ್ಮಾಣಕ್ಕೆ ಹಣದ ಕೊರತೆ ಬರದೇ ಇರುವುದು ಇಂಥದ್ದೇ ಇನ್ನೊಂದು ಕನಸು. ಇವೆರಡೂ ಕನಸುಗಳು ‘ಗಾಂಧಿ ಮೈ ಫಾದರ್’ ಚಿತ್ರದ ಮಟ್ಟಿಗೆ ಸಾಕಾರವಾಗಿದ್ದಾವೆ. ಮುಗ್ಧ ಮುಖದ ನಟ ಎಂದೇ ಖ್ಯಾತರಾಗಿರುವ ಅನಿಲ್ ಕಪೂರ್ ತಮ್ಮ ನಿರ್ಮಾಪಕನ ಪಾತ್ರದ ಮೊದಲ ಚಿತ್ರವಾಗಿ ‘ಗಾಂಧಿ ಮೈ ಫಾದರ್’ ನಿರ್ಮಿಸಿದ್ದಾರೆ. ಇದೇ ಹೆಸರಿನ ನಾಟಕವನ್ನು ನಿರ್ದೇಶಿಸಿ ಅನೇಕ ಪ್ರದರ್ಶನಗಳಿಂದ ಕೀರ್ತಿ ಸಾಧಿಸಿದ ಫಿರೋಸ್ ಅಬ್ಬಾಸ್ ಖಾನ್ ಈ ಚಿತ್ರದ ನಿರ್ದೇಶಕರು. ಗಾಂಧಿಯ ಜೀವನದ ಬಗ್ಗೆ ಇವರು ಮಾಡಿರುವ ಸಂಶೋಧನೆ ಚಿತ್ರದುದ್ದಕ್ಕೂ ಧಾರಾಳವಾಗಿ ಕಾಣುತ್ತದೆ. ಡೇವಿಡ್ ಮೆಕೆನ್ಲೀಯವರ ಛಾಯಾಗ್ರಹಣ ದೃಶ್ಯಗಳನ್ನು ಸಮೃದ್ಧಗೊಳಿಸುತ್ತದೆ. ಇವರ ಚಿತ್ರೀಕರಣದಲ್ಲಿ ಕಾಣುವ ವರ್ಣ ಹಾಗೂ ಬೆಳಕಿನ ಸಂಯೋಜನೆ ಒಂದು ಕಾಲಘಟ್ಟವನ್ನು ಯಶಸ್ವಿಯಾಗಿ ರೂಪಿಸಿಕೊಡುತ್ತದೆ. ಪೀಯುಶ್ ಕನೋಜಿಯವರ ಸಂಗೀತ ನಿರ್ದೇಶನ ಮತ್ತು ಶ್ರೀಕರ್ ಪ್ರಸಾದ್ ಸಂಕಲನ ಈ ಚಿತ್ರಕ್ಕೆ ಇದೆ. ಪ್ರತಿಯೊಂದು ಕ್ಷೇತ್ರದಲ್ಲೂ ಮೆಚ್ಚತಕ್ಕ ಕೆಲಸ ಆಗಿ ಚಿತ್ರ ಒಟ್ಟಿನಲ್ಲಿ ತುಂಬಿ ಬಂದಿದೆ.

‘ಗಾಂಧಿ ಮೈ ಫಾದರ್’ ಚಿತ್ರದಲ್ಲಿ ಮೊದಲು ನನ್ನ ಗಮನ ಸೆಳೆದ ವಿಷಯವೆಂದರೆ, ಈ ಚಿತ್ರ ನಾಟಕದ ವ್ಯಾಕರಣವನ್ನು ಬಳಸುತ್ತಾ ಹೋಗುತ್ತದೆ. ಇಲ್ಲಿ ನಾನು ಮಾತನಾಡುತ್ತಿರುವುದು ನಾಟಕವೊಂದು ದೃಶ್ಯವನ್ನು ಕಟ್ಟಿ ಕೊಡುವ ವಿಧಾನಕ್ಕೂ ಚಿತ್ರವೊಂದು ದೃಶ್ಯ ಕಟ್ಟಿ ಕೊಡುವುದಕ್ಕೂ ಇರುವ ವ್ಯತ್ಯಾಸ. ರಂಗಭೂಮಿಯಲ್ಲಿ ಸ್ಥಳ-ಸಮಯ-ವಸ್ತುವಿನ (Time-Space-Matter) ಮಿತಿಗಳಿಂದಾಗಿ ಅನೇಕ ವಿಷಯಗಳು ನೋಡುಗರ ಕಲ್ಪನೆಯಲ್ಲೇ ನಡೆಯುತ್ತದೆ. ಇದು ಅದರ ಸಾಮರ್ಥ್ಯ ಕೂಡಾ. ಸಿನೆಮಾ ಖಚಿತ ಚಿತ್ರಗಳನ್ನು, ವಿವರಗಳನ್ನು ತೋರಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರಿಂದ ನೋಡುಗನ ಕಲ್ಪನೆಗೆ ಲಿಖಿತ ಸಾಹಿತ್ಯದಲ್ಲೋ ನಾಟಕದಲ್ಲೋ ಇರುವಷ್ಟು ಕಲ್ಪನೆಗೆ ಅವಕಾಶ ಇಲ್ಲ ಎಂಬಂತೆ ಕಾಣಿಸುತ್ತದೆ. ಆದರೆ ಕಲ್ಪನೆಗೆ ಇಂಬು ನೀಡಲು ಚಿತ್ರ ಮಾಧ್ಯಮವು ಅದರದೇ ಆದ ವಿಧಾನಗಳನ್ನು ಕಾಲಾನುಕ್ರಮದಲ್ಲಿ ಕಂಡುಕೊಂಡಿದೆ. ಧ್ವನಿಯ ಬಳಕೆ, ವಿವಿಧ ಗಾತ್ರಗಳ ಚಿತ್ರಗಳ ಬಳಕೆ, ಸಂಕಲನ ವಿಧಾನಗಳು ಇವುಗಳಲ್ಲಿ ಪ್ರಮುಖವಾದವು. ಒಂದು ಮಾಧ್ಯಮದ ವ್ಯಾಕರಣವನ್ನು ಇನ್ನೊಂದು ಮಾಧ್ಯಮಕ್ಕೆ ಇದ್ದಕ್ಕಿದ್ದಂತೆಯೇ ಅಳವಡಿಸಿದಾಗ ಬಳಸಿರುವ ಹೊಸ ಮಾಧ್ಯಮದ ಸಾಧ್ಯತೆಗಳನ್ನು ನಾವು ಅಲ್ಲಗಳೆದಂತಾಗುತ್ತದೆ. ವಸ್ತುವಿನ ಅಳವಡಿಕೆಗೆ ಕಟ್ಟೋಣ ಭಿನ್ನವಾಗಿರುವುದು ಅಗತ್ಯ. ‘ಗಾಂಧಿ ಮೈ ಫಾದರ್’ ಚಿತ್ರದಲ್ಲಿ ನನಗೆ ಕಂಡ ಪ್ರಮುಖ ವಿಷಯ ಇದು. ಖ್ಯಾತ ನಾಟಕವಾದ ಇದು ಅಂತೆಯೇ ಚಿತ್ರಕ್ಕೆ ಇಳಿದಂತೆ ಉದ್ದಕ್ಕೂ ಕಂಡುಬರುತ್ತದೆ. ಭಾಗಗಳಲ್ಲಿ ಈ ಚಿತ್ರವನ್ನು ನೋಡಿದರೆ, ಪ್ರತಿಯೊಂದು ಭಾಗವೂ ಚೆನ್ನಾಗಿದೆ ಹಾಗೂ ಪೂರ್ಣವಾಗಿದೆ. ಆದರೆ ಸಮಷ್ಟಿಯಲ್ಲಿ ಈ ಚಿತ್ರ ನೋಡುಗನಲ್ಲಿ ಏನನ್ನೂ ಪ್ರಚೋದಿಸುವುದಿಲ್ಲ. ಚಿತ್ರ ಉದ್ದಕ್ಕೂ ಬಿಡಿ ಘಟನೆಗಳ ಸಂಗ್ರಹವಾಗುತ್ತದೆ. ಮಾಧ್ಯಮಗಳ ನಡುವೆ ಪರಸ್ಪರ ವಸ್ತು ಅಳವಡಿಕೆ ಪ್ರಯೋಗದ ವಿರೋಧಿ ಖಂಡಿತಾ ನಾನಲ್ಲ. ಆದರೆ ಚಿತ್ರ ಮಾಧ್ಯಮದ ಸಾಧ್ಯತೆಗಳನ್ನು ಒಂದಷ್ಟು ಶೋಧಿಸಬಹುದಾಗಿತ್ತು ಎಂದು ಈ ಚಿತ್ರವನ್ನು ನೋಡಿದಾಗ ನನಗೆ ಅನಿಸಿತು. ಅನೇಕ ಸಂಭಾಷಣೆಗಳು ಇನ್ನೂ ನಾಟಕೀಯವಾಗಿಯೇ ಇವೆ. ಚಿತ್ರದುದ್ದಕ್ಕೂ ಮಾಹಿತಿ ಒದಗಿಸುವ ಸಂಭಾಷಣೆಗಳು ದೊರೆಯುತ್ತವೆ. ನಾಟಕದಲ್ಲಿ ಒಂದು ದೃಶ್ಯ ಅನೇಕ ಮಾಹಿತಿಗಳನ್ನು ಒದಗಿಸುವುದು ಅಗತ್ಯವಾಗುತ್ತದೆ ಏಕೆಂದರೆ ಅದಕ್ಕೆ ಸ್ಥಳದ (Space) ಮಿತಿ ಇರುತ್ತದೆ ಹಾಗಾಗಿ ಕಲ್ಪನೆಯ ಗರಿಕೆದರಲು ಅಗತ್ಯ ವಾತಾವರಣವನ್ನು ನಟ ತನ್ನ ಅಭಿನಯ ಹಾಗೂ ಸಂಭಾಷಣೆಯ ಮೂಲಕ ನಿರ್ಮಿಸುತ್ತಾನೆ. ಆದರೆ ಸಿನೆಮಾಕ್ಕೆ ಈ ಬಾಧ್ಯತೆ ಇಲ್ಲ. ದೃಶ್ಯ ದನದ ಹಟ್ಟಿಯಲ್ಲಿ ನಡೆಯಿತು ಎಂದಾದರೆ, ನಿಜವಾದ ದನದ ಹಟ್ಟಿಯನ್ನೇ ತೋರಿಸುವ ಸೌಕರ್ಯ ಸಿನೆಮಾಕ್ಕೆ ಇದೆ. ಈ ಸೌಕರ್ಯದೊಡನೆ, ಅದನ್ನು ಬಳಸುವ ಜವಾಬ್ದಾರಿಯೂ ನಿರ್ದೇಶಕನಿಗೆ ಬರುತ್ತದೆ. ಒಂದು ದೃಶ್ಯ ಇಂಥಾ ಸ್ಥಳದಲ್ಲಿ ನಡೆಯುತ್ತಿದೆ ಎಂದು ತೋರಿಸಿದರೆ, ಅದು ಅಲ್ಲಿ ನಡೆಯಲು ಯೋಗ್ಯವೇ, ಅಲ್ಲಿ ಆ ದೃಶ್ಯ ನಡೆದದ್ದರಿಂದ ಸಿನೆಮಾಕ್ಕೆ ಆದ ಗುಣ ಇತ್ಯಾದಿ ಅಂಶಗಳು ಪ್ರಶ್ನೆಗೆ ಒಳಗಾಗುತ್ತವೆ. ಇಂಥಾ ‘ಸ್ಥಳ’ ಹಾಗೂ ‘ಸಮಯ’ ಸಮಸ್ಯೆಗಳು ಗಾಂಧಿ ಮೈ ಫಾದರ್ ಚಿತ್ರದಲ್ಲಿ ಕಂಡುಬರುತ್ತದೆ. ಇದರ ಪರಿಣಾಮವಾಗಿ ದೃಶ್ಯಗಳ ಯಾದಿ ಮೇಲು-ಕೆಳಗಾದರೂ ತೊಂದರೆಯೇನೂ ಆಗುವುದಿಲ್ಲ. ತತ್ಕಾರಣ ಚಿತ್ರ ನೋಡಿದಾಗ ಒಂದು ಸಮಗ್ರ ಅನುಭವ ಉಂಟಾಗುವುದಿಲ್ಲ.

ಸಿನೆಮಾದಲ್ಲಿ ದೃಶ್ಯಗಳನ್ನು ತೋರಿಸುವಾಗ ನಿರಂತರವಾಗಿ ನಡೆಯುತ್ತಿರುವ ಸಮಯದ ಕೆಲವು ಆಯ್ದ ಭಾಗಗಳನ್ನು ತೋರಿಸುವುದು ಎಂಬ ಕಲ್ಪನೆ ಇರುತ್ತದೆ. ಹಾಗಾಗಿ ಪರದೆಯ ಮೇಲೆ ಬೀಳುವ ಚಿತ್ರದ ಕಾಲಘಟ್ಟ ವಿಶೇಷವಾಗಿ ಆಯ್ಕೆ ಮಾಡಿ ತೋರಿಸಿರುವ ನಿರಂತರ ಜೀವನದ ಒಂದು ಭಾಗ. ಹೀಗಿರುವುದರಿಂದಲೇ ಸಿನೆಮಾ ಚಿತ್ರಕಥೆಯನ್ನು ರೂಪಿಸುವಾಗ ನೋಡುಗರಿಗೆ ದೃಶ್ಯಕ್ಕೆ ತಡವಾಗಿ ಪ್ರವೇಶ ಕೊಟ್ಟು ಬೇಗನೇ ದೃಶ್ಯದಿಂದ ಹೊರಗೆ ಕರೆದುಕೊಂಡು ಹೋಗುವ ಕ್ರಮವನ್ನು ಸಾಧಾರಣವಾಗಿ ನಿರ್ದೇಶಕರು ಬಳಸುತ್ತಾರೆ. ಇದರಿಂದ ನೋಡುಗರಲ್ಲಿ ಮುಂದಿನ ದೃಶ್ಯದ ಕುರಿತು ಆಸಕ್ತಿ ಹಾಗೂ ಹಿಂದಿನ ದೃಶ್ಯದ ಬಗೆಗಿನ ಅರ್ಥವೂ ಮೂಡುತ್ತಾ ಇರುತ್ತವೆ. ಈ ಪ್ರಕ್ರಿಯೆಂದಾಗಿ ಸಿನೆಮಾವೊಂದು ಹತ್ತು ಹಲವು ಕಾಲಘಟ್ಟಗಳ ಮೂಲಕ ಓಡಿದರೂ, ಅನೇಕ ಸ್ಥಳಗಳನ್ನು ಹಾದು ಹೋದರೂ ನೋಡುಗನ ನಂಬಿಕೆಗೆ ಪಾತ್ರವಾಗುವುದು. ಗಾಂಧೀ ಮೈ ಫಾದರ್ ಚಿತ್ರದಲ್ಲಿ ಪ್ರತಿಯೊಂದು ದೃಶ್ಯವೂ ಅದರದೇ ಆದ, ಪೂರ್ಣವಾದ ಕಥೆಯನ್ನು ಹೇಳುತ್ತಿರುತ್ತದೆ. ದೃಶ್ಯದಲ್ಲಿನ ಪ್ರತಿಯೊಂದು ಭಾಗಕ್ಕೂ ಅದರದೇ ಆದ ಅಗತ್ಯ ಇರುತ್ತದೆ. ನಿತ್ಯ ಜೀವನದಲ್ಲಿ ಹೀಗೆ ಆಗುವುದಿಲ್ಲ ಹಾಗೂ ಇದರಿಂದಾಗಿ ಪರದೆಯ ಮೇಲಿನ ಚಿತ್ರಗಳು ಮನದಾಳದಲ್ಲಿ ಅಪನಂಬಿಕೆ ಮೂಡಿಸುತ್ತವೆ. ‘ಗಾಂಧೀ ಮೈ ಫಾದರ್’ ಚಿತ್ರವು ಇಂಥಾ ಸಮಸ್ಯೆಯನ್ನು ಅನುಭವಿಸುತ್ತದೆ.

ಅನೇಕ ಕಡೆಗಳಲ್ಲಿ ಕಪ್ಪು-ಬಿಳುಪು ಚಿತ್ರಗಳನ್ನು ಬಳಸಿ ಹಳೇ ದಾಖಲೀಕರಣಗಳಿಂದ ಆಯ್ದು ತೋರಿಸಿದಂಥಾ ಅನುಭವವನ್ನು ಈ ಚಿತ್ರ ಕೊಡುತ್ತದೆ. ನಮ್ಮ ನೆನಪಿನಲ್ಲಿ ಇರುವ ಗಾಂಧೀಜಿಯವರ ನೈಜ ಚಿತ್ರಗಳೆಂದರೆ, ಆ ಕಾಲದ ಕಪ್ಪು-ಬಿಳುಪು, ನಡುನಡುಗಿ ಸಾಗುವ ೧೬ಎಮ್.ಎಮ್ ಸಾಕ್ಷ್ಯಚಿತ್ರದ ತುಣುಕುಗಳೇ ಆಗಿವೆ. ಇದನ್ನು ಪ್ರಸ್ತುತ ಚಿತ್ರವು ತನ್ನ ಕಥಾನಕದಲ್ಲಿ ಚೆನ್ನಾಗಿ ಬಳಸಿಕೊಳ್ಳುತ್ತದೆ. ಚಿತ್ರದಲ್ಲಿ ಬಳಕೆಯಾಗಿರುವ ಧ್ವನಿ ಸಂಯೋಜನೆಯೂ ಚಿತ್ರದ ಒಂದು ಮಹತ್ವದ ಅಂಶ. ಒಟ್ಟಿನಲ್ಲಿ ಗಾಂಧೀ ಮೈ ಫಾದರ್ ಅನೇಕ ಮಿತಿಗಳ ನಡುವೆಯೂ ಭರವಸೆಯ ಒಂದು ಚಿತ್ರವಾಗಿ ಮೂಡಿಬಂದಿದೆ. ಗಾಂಧೀಜಿಯವರ ಜೀವನದ ಸುತ್ತ ಬಂದಿರುವ ಚಿತ್ರಗಳಲ್ಲಿ ಒಂದು ವಿಶಿಷ್ಟ ಸ್ಥಾನವನ್ನು ಇದು ಪಡೆದಿದೆ.

Share This