[youtube=https://in.youtube.com/watch?v=nJXRnqiKVtg]

ಇತ್ತೀಚೆಗೆ ಆದಿತ್ಯನ ಮೇಲಿನ ಪ್ರೀತಿಯಿಂದ ರಬ್ ದೇ ಬನಾದಿ ಜೋಡಿ ಸಿನೆಮಾವನ್ನು ನೋಡಿದೆ. ಅದೇನೋ ಅಂತಾರಲ್ಲ ವಿಲ್ಲಿಂಗ್ ಸಸ್ಪೆನ್ಷನ್ ಆಫ್ ಡಿಸ್‍ಬಿಲೀಫ್ ಅದರೊಂದಿಗೇ ನೋಡಿದೆ. ಆದರೂ ಅದು ಒಂದಿಷ್ಟೂ ಹಿಡಿಸಲಿಲ್ಲ. ಒಬ್ಬ ಗಂಡ ಮೀಸೆ ಬೋಳಿಸಿಕೊಂಡು ಬಂದಾಕ್ಷಣ ಅವನ ಹೆಂಡತಿಗೇ ಗುರುತು ಸಿಗುವುದಿಲ್ಲ ಎನ್ನುವುದನ್ನು ನಂಬುವುದಾದರೂ ಹೇಗೆ? ಒಂದೋ ಇಡೀ ಮಾಯಾಲೋಕದಲ್ಲಿ ಚಲಿಸುವ ಇಲ್ಲವೇ ಸಂಪೂರ್ಣ ವಾಸ್ತವ ಲೋಕದಲ್ಲಿ ಸಂಚರಿಸುವ ಚಿತ್ರಗಳ ಕಾಲದಲ್ಲಿ ಇವೆರಡರ ಮಿಶ್ರಣ ಒಂದು ಉತ್ತಮ ಪ್ರಯೋಗವಾಗಬಹುದಿತ್ತು. ಆದರೆ ಇಲ್ಲಿ ಅದು ಸೋಲುತ್ತದೆ. ಕಾರಣಗಳೇನು…?

ಮೊದಲನೆಯದಾಗಿ ರಬ್ ದೇಯಲ್ಲಿ ನಿತ್ರಾಣಗೊಂಡಿರುವುದು ಅದರಲ್ಲಿನ ಪಾತ್ರಪೋಷಣೆ. ನಾನು ನಟನೆಯ ಬಗ್ಗೆ ಮಾತನಾಡುತ್ತಿಲ್ಲ. ಪಾತ್ರಗಳನ್ನು ಯೋಚಿಸಿಕೊಳ್ಳುವಾಗ ಅವುಗಳ ಹಿನ್ನೆಲೆ ಮುನ್ನೆಲೆಗಳ ಕುರಿತಾಗಿ ಒಂದಿಷ್ಟೂ ವಿವರಿಸದೇ ಅಥವಾ ಊಹಿಸಿಕೊಳ್ಳಲು ಅವಕಾಶವನ್ನೂ ಕೊಡದೆ ಕಥೆಯನ್ನು ಹೇಳಿದಾಗ ಆ ಪಾತ್ರಗಳು ನಮ್ಮವಾಗುವುದಿಲ್ಲ. ಅಮೃತ್‍ಸರಿನಲ್ಲಿ ವಾಸಿಸುವ ಪಂಜಾಬ್ ಪವರ್ ವಿದ್ಯುತ್ ಸಂಸ್ಥೆಯ ಕಾರ್ಮಿಕನೊಬ್ಬ ಭಾರೀ ದೊಡ್ಡ ಹವೇಲಿಯಲ್ಲಿ ತನ್ನ ಹೆಂಡತಿಯೊಂದಿಗೆ ಬದುಕುವುದು ಮೊದಲಿಗೆ ಸಂಶಯ ಹುಟ್ಟಿಸುತ್ತದೆ. ಅವನು ಯಾರು? ಇವರ ಮದುವೆ ಯಾಕಾಗಿದೆ? ಆ ಹುಡುಗಿಗೆ ಆಗಿರುವ ಸಮಸ್ಯೆ ಏನು? ಇತ್ಯಾದಿಗಳನ್ನು ಉತ್ತರಿಸದೇ ಶಾರುಖ್ ಖಾನ್ ಅಳುವವರನ್ನು ನಗಿಸುವ ನಾಯಕನಾಗಿ ಇರುವ ತನ್ನ ಇಮೇಜಿಗೆ ಸರಿಯಾಗಿ ನಟಿಸಲಾರಂಭಿಸಿದರೆ ಆ ಪಾತ್ರದೊಂದಿಗೆ ಎಲ್ಲೂ ಸಿಂಪಥಿ ಬರುವುದಿಲ್ಲ. ಅದಾಗದಿದ್ದಾಗ ಮುಂದಿನ ಕಥೆ ಮನಸ್ಸಿಗೆ ಇಳಿಯುವುದೇ ಇಲ್ಲ.

ಇನ್ನು ಪತ್ನಿಯನ್ನು ಸಂತೋಷಪಡಿಸಲು ಅವಳ ಮುಖದಲ್ಲಿ ಕಾಣೆಯಾಗಿರುವ ನಗುವನ್ನು ಮರಳಿ ತರಲು ವೇಷ ಬದಲಿಸಿ ಬರುವ ಗಂಡ ಬಳಸುವ ತಂತ್ರಗಳಾದರೋ ತೀರಾ ಬಾಲಿಶ ಎನಿಸುವಂತಿವೆ. ಇಡೀ ಪೇಟೆಯಲ್ಲಿ ದೀಪಗಳನ್ನು ಬಳಸಿ ಐ ಲವ್ ಯೂ ಬರೆಯುವುದು, ಡಾನ್ಸ್ ಕ್ಲಾಸಿನಲ್ಲಿ ಮಂದಬುದ್ಧಿಯವನಂತೆ ತುಟಿ ತಿರುಚಿ ಕೆಟ್ಟ ಬಟ್ಟೆಗಳಲ್ಲಿ ಅಶ್ಲೀಲವಾಗಿ ವರ್ತಿಸುವುದು ಇತ್ಯಾದಿಗಳಿಗಿಂತ ಭಾರತೀಯ ಸಿನೆಮಾ ಎಷ್ಟೋ ಮುಂದೆ ಹೋಗಿದೆ ಎಂದು ಅಂದುಕೊಂಡಿದ್ದೆ. ಆಗಲೇ ಬಂದದ್ದು ಈ ರಬ್ ದೇ ಬನಾದಿ!!! ಆದಿತ್ಯ ಜೋಪ್ರಾ ಬೇರೆ ನಿರ್ದೇಶಕರ ಚಿತ್ರಗಳನ್ನು ನೋಡುವುದೇ ಇಲ್ಲವೇ? ನೋಡಿದರೂ ಏನೂ ಕಲಿಯುವುದೇ ಇಲ್ಲವೇ? ಶೋಚನೀಯ!

ಇನ್ನು ಕಳೆದ ಅನೇಕ ಚಿತ್ರಗಳಿಂದ ಯಶ್ ರಾಜ್ ಚಿತ್ರಗಳಲ್ಲಿ ಕಾಣಿಸಿ ಬರುವ ಒಂದು ಸಾಮಾನ್ಯ ಸಮಸ್ಯೆಯೆಂದರೆ, ಗಡಿಬಿಡಿಯ ಅಡುಗೆ. ಈ ಸಿನೆಮಾದಲ್ಲೂ ಅದೇ ಸಮಸ್ಯೆ ಕಾಣಿಸುತ್ತಿದೆ. ಹಾಕಿರುವ ಸೆಟ್ಟಿನಲ್ಲಿ ಬಣ್ಣ ಒಣಗುವ ಮೊದಲೇ ಚಿತ್ರೀಕರಣ ಮಾಡಲಾಗಿದೆ, ಎಷ್ಟೋ ಸೆಟ್ಟಗಳಲ್ಲಿ ಬಣ್ಣ ಸಂಯೋಜನೆ, ವಸ್ತು ಸಂಯೋಜನೆ ತೀರಾ ಹೊಲಸಾಗಿದೆ. ಸಂಗೀತ ಎಲ್ಲೂ ತಾಗುವುದೇ ಇಲ್ಲ. ಅನಗತ್ಯ ಸಂಗೀತದ ಮೂಲಕ ಭಾವನೆಗಳ ಪ್ರಚೋದನೆಗೆ ವಿಫಲ ಪ್ರಯತ್ನ ಇತ್ಯಾದಿಗಳು ಧಾರಾಳವಾಗಿವೆ.

ಒಟ್ಟಿನಲ್ಲಿ ಆದಿತ್ಯ ಚೋಪ್ರಾ ಮೇಲಿನ ಭರವಸೆ ಹಾಗೂ ಶಾರುಖ್ ಖಾನ್ ಬಗ್ಗೆಗಿನ ಪ್ರೀತಿಯಿಂದ ಚಿತ್ರ ನೋಡಲು ಹೋಗಿ ಏನೋ ಕಳೆದುಕೊಂಡ ಭಾವದೊಂದಿಗೆ ಹೊರಬಂದೆ.
ಏನದು….? ಹಾ! ನೆನಪಾಯಿತು. ಕಳೇದುಕೊಂಡದ್ದು ದುಡ್ಡು!

Share This