ಯಾವುದೇ ಚಿತ್ರದ ವಿಮರ್ಷೆ ಮಾಡುವಾಗಲೂ ಆ ಚಿತ್ರದ ಚಿತ್ರೀಕರಣ ಹೇಗಾಗಿದೆ ಎನ್ನುವುದನ್ನು ನೀವು ನೋಡಿಯೇ ಇರುತ್ತೀರಿ. ಸಾಧಾರಣವಾಗಿ ಚಿತ್ರೀಕರಣ ಅಂದವಾಗಿದೆ, ಕೆಲಸ ಚೆನ್ನಾಗಿ ಮಾಡಿಲ್ಲ ಎಂಬ ನಿರ್ಣಾಯಕ ಮಾತುಗಳಷ್ಟೇ ವಿಮರ್ಷೆಯಲ್ಲಿರುತ್ತವೆಯೇ ಹೊರತು, ಅದಕ್ಕಿಂತ ಹೆಚ್ಚಿನ ತಾಂತ್ರಿಕ ಅಂಶಗಳನ್ನು ವಿಮರ್ಷೆಗಳು ಮುಟ್ಟುವುದೇ ಇಲ್ಲ! ಈ ಚಿತ್ರೀಕರಣಕ್ಕೆ ಕಾರಣವಾದ ಕ್ಯಾಮರಾಮನ್ ಕೆಲಸದ ಬಗ್ಗೆ ಒಂದಿಷ್ಟು ಮಾತನಾಡೋಣ ಇವತ್ತು. ಸಿನೆಮಾ ನಿರ್ಮಾಣದಲ್ಲಿ ಇವನ ಕೆಲಸ ವೈಖರಿ, ಜವಾಬ್ದಾರಿಗಳೇನು? ಅವನೆದುರಿಗೆ ಬರುವಂಥಾ ಕೆಲವು ಸಮಸ್ಯೆಗಳು, ಸವಾಲುಗಳೇನು?
ಚಿತ್ರ ಕಥೆ ಬರೆಯುವ ಸಂದರ್ಭದಲ್ಲಿ ಹೇಗೆ ಕಥೆಯ ನಿರೂಪಣೆಗೆ ಸೂಕ್ತವಾದ ದೃಶ್ಯಗಳನ್ನು ಬರೆಯಲಾಗುತ್ತದೆಯೋ ಅದನ್ನು ಚಿತ್ರೀಕರಿಸುವಾಗ ದೃಶ್ಯದೊಳಗಿನ ಭಾವಗಳನ್ನು ಪ್ರಚೋದಿಸುವ, ಭಾವನೆಗಳಿಗೆ ತಕ್ಕನೆಯ ಚಿತ್ರೀಕರಣ ನಡೆಸುವುದು ಅಗತ್ಯ. ಈ ಜವಾಬ್ದಾರಿ ಕ್ಯಾಮರಾಮನ್ನಿನದ್ದಾಗಿರುತ್ತದೆ. ನಿರ್ದೇಶಕನೊಡನೆ ಕುಳಿತು ಚರ್ಚಿಸಿ, ತನ್ನ ಸಲಹೆಗಳನ್ನೂ ನೀಡಿ ಪ್ರತಿಯೊಂದು ದೃಶ್ಯಕ್ಕೂ, ಸಾಕಷ್ಟು ಪೂರ್ವ ತಯಾರಿಯನ್ನು ಮಾಡಿಕೊಳ್ಳಬೇಕಾಗುತ್ತದೆ. ಬಣ್ಣಗಳ ಬಳಕೆ, ಬೆಳಕಿನ ಬಳಕೆ ಹಾಗೂ ಇವೆರಡರ ಮಿಶ್ರಣದಿಂದ ಹುಟ್ಟುವ ಅಭಿವ್ಯಕ್ತಿಯ ಬಗ್ಗೆ ಕ್ಯಾಮರಾಮನ್ ಸದಾ ಚಿಂತಿಸುತ್ತಿರಬೇಕಾಗುತ್ತದೆ. ಒಂದೆರಡು ಸರಳ ಉದಾಹರಣೆಗಳನ್ನು ಕೊಡುತ್ತೇನೆ.
ಮೊದಲನೆಯದಾಗಿ ಇತ್ತೀಚೆಗಷ್ಟೇ ಬಂದ ಚಲನ ಚಿತ್ರ “Inglorious Bastards”ನಿಂದ ಒಂದು ಫ್ರೇಮನ್ನು ನೋಡಿ. ಈ ಇಡೀ ಚಿತ್ರ ಸುಮಾರು ೧೯೪೦ರಿಂದ ೪೫ರೊಳಗೆ ನಡೆಯುತ್ತದೆ. ಹೀಗಾಗಿ ಇಡೀ ಚಿತ್ರಕ್ಕೆ ಒಂದು ವಿಶಿಷ್ಟವಾದ ವರ್ಣ ಕೊಡುವ ಅಗತ್ಯವಿರುತ್ತದೆ. ಅದು ಏನಾಗಿರಬೇಕು? ಕಪ್ಪು-ಬಿಳುಪು ತೋರಿಸುವುದೇ? ಇಡೀ ಚಿತ್ರವನ್ನು ಹಾಗೆ ಚಿತ್ರೀಕರಿಸಿದರೆ, ವರ್ಣಬಳಕೆಯನ್ನೇ ಅಲ್ಲಗಳೆದಂತಾಗುತ್ತದೆ. ಮತ್ತು ಆ ಕಾಲದಲ್ಲೂ ಬಣ್ಣಗಳಿದ್ದುವಷ್ಟೇ? ಹೀಗಾಗಿ ಕ್ಯಮರಾಮನ್ ಹಾಗೂ ನಿರ್ದೇಶಕರು ಜೊತೆಗೂಡಿ ಆ ಕಾಲಕ್ಕೆ ಕಂದು ಬಣ್ಣದ ಅಕ್ಕಪಕ್ಕದಲ್ಲಿ ತಮ್ಮ ಬಣ್ಣಗಳನ್ನಿಡಲು ನಿರ್ಧರಿಸಿದರು. ಹೀಗಾಗಿ ಈ ಚಿತ್ರಿಕೆಯನ್ನು ಗಮನಿಸಿದರೆ ತಮಗೆ ಎಲ್ಲಾ ಬಣ್ಣಗಳು ಸ್ವಾಭಾವಿಕ ಎನಿಸಿದರೂ, ಕೆಲವು ಬಣ್ಣಗಳ ಬಳಕೆಯನ್ನು ಉದ್ದೇಶಪೂರ್ವಕವಾಗಿ ಬಿಡಲಾಗಿದೆ.
ಇದಕ್ಕೆ ಮತ್ತೊಂದು ಉದಾಹರಣೆಯಾಗಿ ನಮ್ಮದೇ ಆದ “ಲಗಾನ್” ಚಿತ್ರವನ್ನೂ ನೀವು ಗಮನಿಸಬಹುದಾಗಿದೆ. ಇಲ್ಲಿ ಆಯ್ಕೆ ಮಾಡಲಾದ ವರ್ಣಶೈಲಿ ಸ್ವಲ್ಪ ಭಿನ್ನವಾಗಿದೆ. ಇದು ಭಾರತದಲ್ಲಿನ ಬೆಳಕಿನ ಗುಣ, ವಸ್ತ್ರಗಳ ಶೈಲಿ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಮಾಡಿರುವ ಆಯ್ಕೆಯಾಗಿರುತ್ತದೆ. ಹೀಗೆ ಕ್ಯಾಮರಾಮನ್ ಕಾಲಧರ್ಮಕ್ಕೆ ಅನುಗುಣವಾಗಿ, ದೃಶ್ಯದೊಳಗಿನ ಭಾವಕ್ಕನುಗುಣವಾಗಿ ತನ್ನ ಕೆಲಸವನ್ನು ಮಾಡಬೇಕಾಗುತ್ತದೆ. ಸಾಧಾರಣವಾಗಿ ಕ್ಯಾಮರಾಮನ್ ತಾವೇ ಸ್ವತಃ ಕ್ಯಾಮರಾ ಚಲಾಯಿಸುತ್ತಾರಾದರೂ, ಇಂದು ಈ ಕೆಲಸವೂ ಹೆಚ್ಚಿನ ಕೌಶಲಪೂರ್ಣವಾಗುತ್ತಾ ಸಾಗಿ, ಚಿತ್ರೀಕರಣ ನಿರ್ದೇಶಕ (Director of Photography) ಎಂಬ ಹುದ್ದೆಯೂ ಸೃಷ್ಟಿಯಾಗಿದೆ. ಇಲ್ಲಿ ಕ್ಯಾಮರಾವನ್ನು ಚಲಾಯಿಸುವವರು ಬೇರೆ ಆಗಿದ್ದು, ಕ್ಯಮರಾ ನಿರ್ದೇಶಕ ವರ್ಣ, ಬೆಳಕು, ಕಂಪೊಸಿಷನ್ ಇತ್ಯಾದಿಗಳನ್ನು ನಿರ್ದೇಶಿಸುತ್ತಾನೆ.
ಚಿತ್ರೀಕರಣದ ನಂತರವೂ ಚಿತ್ರಿಕೆಗಳ ಸಂಸ್ಕರಣೆಯ ಸಂದರ್ಭದಲ್ಲಿ ಕ್ಯಾಮರಾಮನ್ ತಾನು ಚಿತ್ರೀಕರಿಸಿದ ರೀತಿಗೆ ಸರಿಯಾಗಿ ಸಂಸ್ಕರಣಾ ಸೂಚನೆಗಳನ್ನು ಸಂಸ್ಕರಣಾಲಯಕ್ಕೆ ಕೊಡುವುದು, ಸಂಕಲನ ನಂತರ ನಡೆಯುವ ವರ್ಣ ಸಂಸ್ಕರಣ ಪ್ರಕ್ರಿಯೆಯಲ್ಲಿ ಭಾಗವಹಿಸಿ, ವರ್ಣಗಳ ಸುಸ್ಥಿತಿಯನ್ನು ನೋಡಿಕೊಳ್ಳುವುದೂ ಕ್ಯಾಮರಾಮನ್ ಕೆಲಸವಾಗಿರುತ್ತದೆ. ಎಲ್ಲಾ ತಂತ್ರಜ್ಞಾನಗಳಂತೆ ಇಂದು ಕ್ಯಾಮರಾ ತಂತ್ರಜ್ಞಾನವೂ ತೀವ್ರಗತಿಯಲ್ಲಿ ಬದಲಾಗುತ್ತಿರುವುದರಿಂದ, ಈ ಕೆಲಸವೂ ಹೆಚ್ಚು ತಾಂತ್ರಿಕ ಅಂಶಗಳನ್ನೊಳಗೊಳ್ಳುತ್ತಾ ಸಾಗಿದೆ. ಇಂದು ವಿದ್ಯುನ್ಮಾನ ಕ್ಯಾಮರಾಗಳು ಚಿತ್ರರಂಗಕ್ಕೆ ಆಗಮಿಸಿರುವ ಹಿನ್ನೆಲೆಯಲ್ಲಿ, ಇಡೀ ಮಾಧ್ಯಮವೇ ಬದಲಾಗುತ್ತಿದ್ದು, ಕ್ಯಮರಾಮನ್ಗಳಿಗೆ ಹೊಸ ಸವಾಲುಗಳು, ಸವಲತ್ತುಗಳು ಸೃಷ್ಟಿಯಾಗಿವೆ. ಈ ಬದಲಾವಣೆಯ ಕುರಿತಾಗಿ ಇನ್ನೊಮ್ಮೆ ಮಾತನಾಡೋಣ. ಇಂದಿಗೆ ಇಷ್ಟೇ ಗೆಳೆಯರೇ…