Billions of blue blistering barnacles! ಟಿನ್ ಟಿನ್ ಕಥೆ ಆಧರಿತ ಆನಿಮೇಟೆಡ್ ಚಿತ್ರ ಬರ್ತಾ ಇದೆ ಅಂತ ನಾನು ರೋಮಾಂಚನಗೊಂಡೆ. ನನ್ನ ಬಾಲ್ಯದ ಆಪ್ತ ಗೆಳೆಯ, ಬೆಲ್ಜಿಯಂ ದೇಶದ ಟಿನ್ ಟಿನ್ ಒಂದು ಹಾಲಿವುಡ್ ಚಿತ್ರವಾಗಿ ಬಿಡುಗಡೆಯಾಗುತ್ತಿರುವುದು ಈಗ ಅನೇಕ ತಿಂಗಳುಗಳ ಹಿಂದೆ ಈ ಚಿತ್ರದ ಮೊದಲ ಪೋಸ್ಟರ್ ನೋಡಿದಾಗಲೇ ನನಗೆ ತಿಳಿದದ್ದು. ಸುಮಾರು ನಲವತ್ತು-ಐವತ್ತು ಪುಟಗಳಲ್ಲಿ ಹರ್ಜೆ ರೂಪಿಸಿದ ಚಿತ್ರ ಕಥೆಯ ನಾಯಕನೇ ಈ ಬೆಲ್ಜಿಯಂ ದೇಶದ ಅತಿ ಉತ್ಸಾಹಿ ಪತ್ರಕರ್ತ ಟಿನ್ ಟಿನ್. ಪತ್ರಿಕೆಗೆ ಬರೆಯಲು ಕುತೂಹಲಕರವಾದ ಸುದ್ದಿಗಳನ್ನು ಹುಡುಕುವ ಉತ್ಸಾಹದಲ್ಲಿ ಟಿನ್ ಟಿನ್ ಯಾವುದೇ ಸಾಹಸವನ್ನು ಎದುರಿಸಲು ಸಿದ್ಧ. ಇವನಿಗೆ ಫ್ಯಾಂಟಂಥರದ ಮುಖವಾಡ ಇಲ್ಲ. ಸೂಪರ್ ಮ್ಯಾನ್‍ಥರದ ಅತೀಂದ್ರಿಯ ಶಕ್ತಿಗಳಿಲ್ಲ. ಜೇಮ್ಸ್ ಬಾಂಡ್ ರೀತಿ ಇವನ ಸುತ್ತ ಹುಡುಗಿಯರಿಲ್ಲ ಆದರೂ ಮುದ್ದು ಮುಖದ ಟಿನ್ ಟಿನ್ ಮಾಡದಿರುವ ಸಾಹಸವಿಲ್ಲ. ಇಂಥಾ ವಿಶೇಷ ನಾಯಕನ ಕಥೆಯನ್ನು ಹೇಳಲು ಹೊರಟದ್ದು ಜಗತ್ತು ಕಂಡ ಅಪರೂಪದ ನಿರ್ದೇಶಕ ಸ್ಟೀವನ್ ಸ್ಪಿಲ್ಬರ್ಗ್ ಎನ್ನುವುದು ನನ್ನ ಕಾಯುವಿಕೆಯನ್ನು ಇನ್ನಷ್ಟು ಅಸಹನೀಯವಾಗಿಸಿತು. ಆದರೆ ಕೊನೆಗೂ ಈ ಚಿತ್ರ ಭಾರತದಲ್ಲಿ ಬಿಡುಗಡೆಯಾಗಿ ನಾನು ನೋಡಿದ್ದಾಯ್ತು!


ಸೀಕ್ರೆಟ್ ಆಫ್ ಯೂನಿಕಾರ್ನ್ ಎನ್ನುವ ಕಥೆಯನ್ನು ಮೂಲವಾಗಿಟ್ಟುಕೊಂಡು ಅದಕ್ಕೆ ಟಿನ್ ಟಿನ್ ಸರಣಿಯ ಕೆಲವು ಇತರ ಕಥೆಗಳಿಂದ ಒಂದಷ್ಟು ಅಂಶಗಳನ್ನು ಸೇರಿಸಿಕೊಂಡು ಈ ಸಿನೆಮಾ ಕಥೆಯನ್ನು ರೂಪಿಸಲಾಗಿದೆ. ಕೆಲವು ಶತಮಾನಗಳ ಹಿಂದೆ ಕಡಲ್ಗಳ್ಳರಿಂದಾಗಿ ಮುಳುಗಿಹೋದ ಹಡಗಿನೊಂದಿಗೆ ದೊಡ್ಡದೊಂದು ಖಜಾನೆಯೂ ಕಳೆದುಹೋಗಿರುತ್ತದೆ. ಆ ಹಡಗಿನ ಸ್ಥಳಾದ ಕುರಿತಾದ ಒಂದು ರಹಸ್ಯ ಟಿನ್ ಟಿನ್ ಕೈಗೆ ಅಕಸ್ಮತ್ತಾಗಿ ಸಿಗುತ್ತದೆ. ಇದೇ ಸಂದರ್ಭದಲ್ಲಿ ಆ ರಹಸ್ಯವನ್ನು ಅರಿಯುವ, ಖಜಾನೆಯನ್ನು ಹೊಡೆಯುವ ಇತರ ಶಕ್ತಿಗಳು ನಮ್ಮ ನಾಯಕನನ್ನು ಸುತ್ತುವರೆಯುತ್ತವೆ. ಇಲ್ಲಿಂದ ಟಿನ್ ಟಿನ್ ಹೊಸ ಸಾಹಸ ಆರಂಭವಾಗುತ್ತದೆ. ಎಂದಿನಂತೆ ಈ ಸಾಹಸದಲ್ಲೂ ನಮಗೆ ಚಿರಪರಿಚಿತ ಕೆಲವು ಪಾತ್ರಗಳು ಕಾಣಿಸುತ್ತವೆ. ಕ್ಯಾಪ್ಟನ್ ಹೆಡಕ್ ಎನ್ನುವ ಕುಡುಕ ನಾವಿಕ, ಸ್ನೋಯಿ ಎನ್ನುವ ಟಿನ್ ಟಿನ್‍ನ ನಿಷ್ಟಾವಂತ ನಾಯಿ, ಥಾಂಸನ್ ಹಾಗೂ ಥಾಂಸನ್ ಎನ್ನುವ ಮುಟ್ಠಾಳ, ಮುಗ್ಧ ಅವಳಿ ಪತ್ತೇದಾರಿಗಳು ಹೀಗೆ. ಅಧ್ಬುತ ಎನ್ನುವಂಥಾ ಸ್ಥಳಗಳಲ್ಲಿ ಪಯಣಿಸುತ್ತಾ, ನಂಬಲು ಕಷ್ಟವಾಗುವಂಥಾ ಸಾಹಸಗಳನ್ನು ಲೀಲಾಜಾಲವಾಗಿ ಎದುರಿಸುತ್ತಾ ಟಿನ್ ಟಿನ್ ರಹಸ್ಯವನ್ನು ಬಯಲು ಮಾಡಿ ಗೆಲ್ಲುತ್ತಾನೆ.

ಇನ್ನು ಚಿತ್ರದ ನಿರೂಪಣೆಯೆಡೆಗೆ ಬರೋಣ. ಟಿನ್ ಟಿನ್ ಸುಮಾರು ಎಂಭತ್ತಕ್ಕೂ ಹೆಚ್ಚು ಭಾಷೆಗಳಿಗೆ ಭಾಷಾಂತರಗೊಂಡು ಮುನ್ನೂರೈವತ್ತು ಮಿಲಿಯಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿರುವಂಥಾ ಜನಪ್ರಿಯ ಚಿತ್ರ ಕಥೆ. ಈ ಕಥಾನಕದ ಪ್ರತಿಯೊಂದು ಚಿತ್ರವೂ ಟಿನ್ ಟಿನ್ ಪ್ರಿಯರಾದ ನಮಗೆಲ್ಲರಿಗೂ ಸುಲಭವಾಗಿ ಗುರುತಿಸಬಲ್ಲಂಥಾ ಛಾಪನ್ನು ಹೊಂದಿರುತ್ತದೆ. ಪಾತ್ರಗಳ ಗುಣ ನಮಗೆಲ್ಲರಿಗೂ ಚಿರಪರಿಚಿತ. ಅವರ ಶಬ್ದ ಭಂಡಾರ ನಮಗೆಲ್ಲರಿಗೂ ಗೊತ್ತಿರುವಂಥಾದ್ದು. ಹೀಗಿರುವಾಗ ಅದನ್ನು ಚಿತ್ರಕ್ಕೆ ಇಳಿಸುವಾಗ ಟಿನ್ ಟಿನ್ ಯಾವುದೋ ಹಾಲಿವುಡ್ ನಟನಂತೆ ಕಂಡರೆ ಖಂಡಿತವಾಗಿಯೂ ಸಹಿಸುವುದು ಅಸಾಧ್ಯವಾಗುತ್ತಿತ್ತು. ಇದನ್ನು ಮನಗಂಡ ಸ್ಪಿಲ್ಬರ್ಗ್ ಹೊಸ ತಂತ್ರಜ್ಞಾನವಾಗ ಮೋಷನ್ ಕ್ಯಾಪ್ಚರ್ ಮೊರೆಹೋಗಿದ್ದಾರೆ. ಕಳೆದ ಹತ್ತು ವರ್ಷಗಳಲ್ಲಿ ಬೆಳೆದು ಬಂದ ಈ ತಂತ್ರಜ್ಞಾನದಲ್ಲಿ ಮೈಮೇಲೆಲ್ಲಾ ಸಂವೇದನಾಗ್ರಾಹಿಗಳನ್ನು ತೊಟ್ಟಿರುವ ನಟನೊಬ್ಬ ಅಭಿನಯಿಸುತ್ತಿದ್ದರೆ, ಕಂಪ್ಯೂಟರಿನಲ್ಲಿ ರೂಪಿಸಿರುವ ಬಿಂಬದಲ್ಲಿನ ದೇಹದ ನಾನಾ ಭಾಗಗಳು ನಟನ ಮೈಯಲ್ಲಿನ ಅದೇ ಭಾಗಕ್ಕೆ ಸಂವೇದಿಯಾಗಿ ಚಲನೆಯನ್ನು ಗ್ರಹಿಸಿಕೊಳ್ಳುತ್ತಾ ಹೋಗುವುದು ಮೇಲ್ಮಟ್ಟದಲ್ಲಿ ಈ ತಂತ್ರಜ್ಞಾನದ ವಿಧಾನ. ಇನ್ನು ಚಲನೆಯನ್ನು ಗ್ರಹಿಸಿದ ನಂತರ ಕಂಪ್ಯೂಟರ್ನಲ್ಲಿನ ಬಿಂಬಕ್ಕೆ ಬಟ್ಟೆ, ಕೂದಲು, ಅವುಗಳು ಪರಿಸರದ ಶಕ್ತಿಗಳಾದ, ಇತರ ಪಾತ್ರಗಳ ಸ್ಪರ್ಶ, ಗಾಳಿ, ಬೆಳಕು ಇತ್ಯಾದಿಗಳೊಂದಿಗೆ ಸಂವೇದಿಸುವ ಕ್ರಮ ಇತ್ಯಾದಿಗಳೆಲ್ಲವನ್ನೂ ಕೃತಕವಾಗಿ ರೂಪಿಸಬೇಕಾಗುತ್ತದೆ. ಹೀಗೆ ಅಪಾರ ತಂತ್ರಜ್ಞಾನವನ್ನು ಬಳಸಿ ರೂಪಿಸಿದ ಚಿತ್ರವೇ ಟಿನ್ ಟಿನ್‍ನ ಹೊಸ ಸಾಹಸ, ‘ಸೀಕ್ರೆಟ್ ಆಫ್ ಯೂನಿಕಾರ್ನ್’ ಇದರಿಂದಾಗಿ ನಮಗೆ ಚಿರಪರಿಚಿತವಾಗಿರುವ ಪಾತ್ರಗಳು ಮೂಲಕ್ಕೆ ಯಾವುದೇ ಕೊರತೆಯಿಲ್ಲದಂತೆ ತೆರೆಯ ಮೇಲೆ ರೂಪುಗೊಂಡಿವೆ. ಇನ್ನು ಈ ಚಿತ್ರವು ಮೂರು ಆಯಾಮ ಅಂದರೆ ೩ಡಿ ತಂತ್ರಜ್ಞಾನವನ್ನೂ ಬಳಸಿಕೊಂಡಿರುವುದರಿಂದ ಪಾತ್ರಗಳು ಹಾಗೂ ಅವುಗಳ ಪರಿಸರ ಹೆಚ್ಚು ನೈಜವಾಗಿ ಮೂಡಿ ಬಂದಿವೆ.

ಖಜಾನೆಯನ್ನು ಹುಡುಕುವ, ರಹಸ್ಯವನ್ನು ಭೇದಿಸುವ ಮನುಷ್ಯನ ಅದಮ್ಯ ಉತ್ಸಾಹವನ್ನೇ ಬಂಡವಾಳವನ್ನಾಗಿಸಿಕೊಂಡು ಸಾಕಷ್ಟು ಚಿತ್ರಗಳನ್ನು ನಿರ್ದೇಶಿಸಿರುವ ಸ್ಪಿಲ್ ಬರ್ಗ್ ಇಲ್ಲೂ ಅದನ್ನು ಬಹಳ ಯಶಸ್ವಿಯಾಗಿ ನಿರ್ವಹಿಸುತ್ತಾರೆ. ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುವ ಕಥಾನಕ, ಮೋಜುತುಂಬಿದ ಪಯಣ, ವಿಚಿತ್ರ ಪಾತ್ರಗಳು ಹೀಗೆ ಎಲ್ಲವೂ ಸೇರಿಬಂದು ಟಿನ್ ಟಿನ್ ಒಂದು ಅಪರೂಪದ ಅನುಭವವಾಗುತ್ತದೆ. ನೀವು ಟಿನ್ ಟಿನ್ ಪ್ರಿಯರಾಗಿದ್ದರೆ, (ಆಗಿರದಿದ್ದರೂ) ಒಳ್ಳೆಯ ಮನರಂಜನೆಯ ಚಿತ್ರವೊಂದನ್ನು ನೋಡುವ ಆಸಕ್ತಿಯಿದ್ದಲ್ಲಿ, ಟಿನ್ ಟಿನ್ ಚಿತ್ರವನ್ನು ನೋಡಲು ಮರೆಯದಿರಿ. ಅದರಲ್ಲೂ ಸಾಧ್ಯವಾದಷ್ಟೂ ೩ಡಿ ಪ್ರದರ್ಶನ ಸಾಧ್ಯವಿರುವಲ್ಲೇ ಹೋಗಿ ನೋಡಿ. ಈ ಅನುಭವವನ್ನು ತಪ್ಪಿಸಿಕೊಳ್ಳದಿರಿ.

var _gaq = _gaq || [];
_gaq.push([‘_setAccount’, ‘UA-27089044-1’]);
_gaq.push([‘_trackPageview’]);

(function() {
var ga = document.createElement(‘script’); ga.type = ‘text/javascript’; ga.async = true;
ga.src = (‘https:’ == document.location.protocol ? ‘https://ssl’ : ‘https://www’) + ‘.google-analytics.com/ga.js’;
var s = document.getElementsByTagName(‘script’)[0]; s.parentNode.insertBefore(ga, s);
})();

Share This