ಗೆಳೆಯ ವಿಕಾಸ್ ನೇಗಿಲೋಣಿ ದೂರವಾಣಿಸಿ ಅವರು ಕೆಲಸ ಮಾಡುತ್ತಿರುವ ‘ಸಖಿ’ ಎಂಬ ಮ್ಯಾಗಝೀನಿಗೆ ಸ್ತ್ರೀ ಹಾಗೂ ಸಿನೆಮಾ ಬಗ್ಗೆ ಒಂದು ಲೇಖನ ತಯಾರು ಮಾಡ್ತಾ ಇದೇನೆ ಎಂದರು. ದೂರವಾಣಿ ಇಟ್ಟ ಮೇಲೂ ಅದರ ಕುರಿತು ಬಹಳ ಹೊತ್ತು ನನ್ನ ತಲೆಯಲ್ಲಿ ಯೋಚನೆಗಳು ಬರುತ್ತಲೇ ಇದ್ದುವು. ಇದರ ಕುರಿತಾದ ಸ್ವಾರಸ್ಯಕರ ಘಟನೆಯೊಂದನ್ನು ಮುಂದೆ ಹೇಳುತ್ತೇನೆ. ಆದರೆ ಹೆಣ್ಣನ್ನು ಚಲನ ಚಿತ್ರದಲ್ಲಿ ನೋಡುವ ಬಗೆ ಬಹಳ ಕುತೂಹಲಕರವಾದದ್ದು. ಸಿನೆಮಾ ಒಂದು ಜನಪ್ರಿಯ ಮಾಧ್ಯಮ ಎಂದು ಕರೆಸಿಕೊಳ್ಳುವ ಹಿನ್ನೆಲೆಯಲ್ಲಿ ಈ ಜನಪ್ರಿಯತೆಯ ಅಂಶಗಳಲ್ಲಿ ಒಂದು ಸಿದ್ಧ ಸೂತ್ರ ಹೆಣ್ಣಿನ ಬಳಕೆಯೂ ಆಗಿದೆ. ಪುರುಷ ಪ್ರಧಾನವಾಗಿರುವ ನಮ್ಮ ಸಮಾಜದಲ್ಲಿ ಸಿನೆಮಾ ಎನ್ನುವುದೂ ಒಂದು ಪುರುಷ ಪ್ರಧಾನ ಮಾಧ್ಯಮವೇ ಆಗಿದೆ. ಇಲ್ಲಿನ ನೋಟ (gaze) ಪುರುಷರ ನೋಟವಾಗಿದೆ. ನಮ್ಮ ‘ಕಮರ್ಷಿಯಲ್’ ಚಿತ್ರಗಳಲ್ಲಿ ಬಳಸುವ ಹೆಣ್ಣಿನ ಬಿಂಬ ಒಂದು ಆಕರ್ಷಣೆಯ ಬಿಂಬವಾಗಿ ಉಳಿಯುತ್ತದೆಯೇ ಹೊರತು ಅದಕ್ಕೆ ಹೆಚ್ಚಿನ ಜವಾಬ್ದಾರಿಯೇನೂ ಇರುವುದಿಲ್ಲ. ಹಾಂ… ಮೊದಲು ನಾನು ಹೇಳುತ್ತೇನೆ ಎಂದ ಕಥೆ…
ನಾನು ಎಫ್. ಟಿ. ಐ. ಐ ನಲ್ಲಿ ಇರಬೇಕಾದರೆ ನನ್ನ ಸಹಪಾಠಿ ನಿರ್ದೇಶನ ವಿದ್ಯಾರ್ಥಿಯೊಬ್ಬನಿಗೆ ನಮ್ಮ ಜೂನಿಯರ್ ಆಗಿದ್ದ ನಟನೆಯ ವಿದ್ಯಾರ್ಥಿನಿಯೊಬ್ಬಳೊಂದಿಗೆ ಪ್ರೇಮವಾಯಿತು. ಇಂದು ಅವರಿಬ್ಬರೂ ಹಿಂದಿ ಚಿತ್ರೋದ್ಯಮದಲ್ಲಿ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡುತ್ತಿದ್ದಾರೆ ಹಾಗೂ ಇಂದಿಗೂ ನನ್ನ ಒಳ್ಳೆಯ ಮಿತ್ರರೇ ಆಗಿದ್ದಾರೆ. ಈ ಕಥೆ ಅವರಿಗೆ ಮುಜುಗರ ಉಂಟು ಮಾಡಬಹುದಾಗಿದ್ದರಿಂದ ಅವರ ಹೆಸರನ್ನು ನಾನಿಲ್ಲಿ ಬಳಸುವುದಿಲ್ಲ. ನನ್ನ ಸಹಪಾಠಿ ಸ್ವಲ್ಪ ತೋರಿಕೆ ಸ್ವಭಾವದವನು. ತಾನೊಬ್ಬ ಬುದ್ಧಿ ಜೀವಿ ಎಂದು ತೋರಿಸಿಕೊಳ್ಳುವ ಆಸೆ ಅವನಿಗೆ ಸದಾ. ಯಾವಾಗಲೂ ಕುರುಚಲು ಗಡ್ಡ ಬಿಟ್ಟು ನಾಲ್ಕುವಾರಗಳಿಂದ ತೊಳೆಯದೇ ಇದ್ದ ಮಾಸಲು ಜುಬ್ಬ ಧರಿಸಿ, ಹೊಟ್ಟೆಯಲ್ಲಿ ಹಿಡಿಯಲಾಗದಿದ್ದರೂ ಕೈಯಲ್ಲಿ ಸದಾ ಹೆಂಡದ ಗ್ಲಾಸ್ ಹಿಡಿದು “ವಾಟ್ ಕರ್ಲ್ ಮಾರ್ಕ್ಸ್ ಸೆಡ್…” ಎನ್ನುವಾತ ಅವನು. ಆದರೆ ಮೂಲತಃ ಮನುಷ್ಯ ಒಳ್ಳೆಯವನು, ಸಾದು. ಹಾಗೂ ಸಾಕಷ್ಟು ಪ್ರತಿಭಾಶಾಲಿಯೇ. ಇನ್ನು ಹುಡುಗಿಯೋ ನಟನೆಯ ವಿದ್ಯಾರ್ಥಿ. ಅಂದಗಾತಿ. ಬಳಕುವ ದೇಹ ಎನ್ನಲಾರೆನು. ಆದರೆ ಕೃಷ್ಣ ಸುಂದರಿ ಎನ್ನಲಡ್ಡಿಯಿಲ್ಲ. ಅವರಿಬ್ಬರ ಪ್ರೀತಿಯ ಪ್ರಕರಣ ಕೇವಲ ೩೦೦ ಜನ ಇರುವ ಕ್ಯಾಂಪಸ್ಸಿನಲ್ಲಿ ದೆಹಲಿಯಲ್ಲಿ ಭೂಕಂಪ ಆದಷ್ಟೇ ಪ್ರಮುಖ ವಾರ್ತೆಯಾಗಿತ್ತು. ಆಕೆ ಇವನ ಹಾಸ್ಟೆಲ್ ಕೋಣೆಗೆ ಸ್ಥಳಾಂತರಗೊಂಡಳು. ಅವನ ಕೋಣೆಯಲ್ಲಾ ಗುಡಿಸಿ, ಸಾರಿಸಿ ಅವನ ವಸ್ತ್ರಗಳನ್ನೆಲ್ಲಾ ಒಗೆದು ಅವನ ಬುದ್ಧಿಯನ್ನೆಲ್ಲಾ ಶುದ್ಧಿ ಮಾಡಿದಳು. ಹೀಗೆ ಸಾಗಿತ್ತು ಅವರ ಅಮರ ಪ್ರೇಮ…
ಒಂದು ದಿನ ನಮ್ಮ ಕ್ಯಾಮರಾ ಪ್ರಾಕ್ಟಿಕಲ್ ಮಾಡಿಸಲು ಮುಂಬೈನಿಂದ ಒಬ್ಬ ಹಿರಿಯ ಕ್ಯಾಮರಾ ಮ್ಯಾನ್ ಬಂದಿದ್ದರು. ಅವರು ಐಟಂ ಸಾಂಗ್ ಚಿತ್ರೀಕರಣ ಹಾಗೂ ಅಲ್ಲಿ ಕ್ಯಾಮರಾ ಮ್ಯಾನ್ಗಳಿಗೆ ಎದುರಾಗ ಬಹುದಾದ ಸಮಸ್ಯೆಗಳ ಬಗ್ಗೆ ಪಾಠ ಮಾಡುತ್ತಿದ್ದರು. ಸ್ತ್ರೀಯನ್ನು ಕನಿಷ್ಟ ಬಟ್ಟೆಗಳಲ್ಲಿ ಚಿತ್ರೀಕರಿಸುವಾಗ ಅವರನ್ನು ಹೇಗೆ ತೋರಿಸುವುದು, ಹೇಗೆ ಬೆಳಕು ಹಾಕಿದರೆ ಹೆಚ್ಚು ಉನ್ಮಾದಕಾರಿಯಾಗಿರುವುದು ಎಂಬಿತ್ಯಾದಿ ವಿಷಯಗಳ ಗಂಭೀರ ತರಗತಿ ನಡೆಯುತ್ತಿತ್ತು. ಅವರಿಗೆ ಚಿತ್ರೀಕರಣ ಪ್ರಯೋಗಗಳಿಗೆ ಒಬ್ಬ ಹುಡುಗಿಯ ಅಗತ್ಯವಿತ್ತು. ನಮ್ಮ ಜೂನಿಯರ್ ಇದೇ ನಟೀಮಣಿ ತಾನೇ ಸ್ವಯಂ ಪ್ರೇರಣೆಯಿಂದ ಪ್ರಯೋಗಕ್ಕೆ ಒಪ್ಪಿದಳು. ಸರಿ, ಆ ದಿನ ಬೆಳಗ್ಗೆ ನನ್ನ ಸಹಪಾಠಿ ನಿರ್ದೇಶಕನಿಗೆ ಬೆಳಕು ಹರಿಯುವ ಮುನ್ನ, ಅವನ ಪ್ರೇಯಸಿ ಕನಿಷ್ಟ ಬಟ್ಟೆಗಳಲ್ಲಿ ಕ್ಯಾಮರಾ ಮುಂದೆ ನಿಂತಿದ್ದಳು! ಇದು ಕ್ಯಾಮರಾ ವಿದ್ಯಾರ್ಥಿಗಳಿಗೆ ತರಗತಿಯಾಗಿದ್ದರೂ ಇತರರಿಗೆ ಅಂದು ಕ್ಯಾಮರಾ ಬಗ್ಗೆ ವಿಶೇಷ ಆಸಕ್ತಿ ಬಂದು (ಕಾರಣ ವಿವರಿಸಬೇಕಿಲ್ಲ ಎಂದುಕೊಂಡಿದ್ದೇನೆ!) ಎಲ್ಲರೂ ತರಗತಿಯಲ್ಲಿ ಹಾಜರ್! ವಿವಿಧ ಕೋನಗಳಿಂದ, ಬೆಳಕಿನ ಸಂಯೋಜನೆ ಇತ್ಯಾದಿಗಳು ನಡೆಯುತ್ತಿದ್ದವು. ಆ ಹಿರಿಯ ಕ್ಯಾಮರಾ ಮನ್ ಸಾಕಷ್ಟು ಕಲಾತ್ಮಕವಾಗಿಯೇ, ಸದಭಿರುಚಿಯಿಂದಲೇ ಕೆಲಸ ಮಾಡುತ್ತಿದ್ದರು. ಅಷ್ಟರಲ್ಲಿ ಅವರು ಇವಳೊಂದಿಗೆ ಒಬ್ಬ ಹುಡುಗನೂ ಇದ್ದರೆ ಚೆಂದ ಎಂದರು. ಇವಳ ಪ್ರೇಮ ಪ್ರಕರಣ ಗೊತ್ತಿದ್ದರಿಂದ ನಮ್ಮ ನಿರ್ದೇಶಕ ಗೆಳೆಯನೇ ಸರಿ ಎಂದು ಅವನನ್ನು ಎಬ್ಬಿಸಲಾಯಿತು. ಹನ್ನೊಂದು ಗಂಟೆಗೇ ಅಂದು ಎದ್ದುದರಿಂದ ಗೊಂದಲಕ್ಕೀಡಾದರೂ ಸುಧಾರಿಸಿಕೊಂಡು ಬಂದ ಅವನಿಗೆ ತನ್ನ ಪ್ರೇಯಸಿ ಇಷ್ಟು ಜನರ ಮುಂದೆ ಕನಿಷ್ಟ ಬಟ್ಟೆಯಲ್ಲಿ ನಿಂತಿರುವುದನ್ನು ಕಂಡು ಗಾಬರಿಯಾಯಿತು. ಮತ್ತೆ ಪರಿಸ್ಥಿತಿಯ ಅರಿವಾಗುತ್ತಲೂ ಇನ್ಯಾರೋ ಹುಡುಗನಿಗಿಂತ ತಾನೇ ಅಲ್ಲಿರುವುದು ವಾಸಿ ಎಂದು ಆತ ತನ್ನ ಮಾಸಲು ಜುಬ್ಬ ಕಿತ್ತೆಸೆದು ಕಣಕ್ಕೆ ಧುಮುಕಿದ. ಸಂಜೆಯವರೆಗೆ ಪ್ರಯೋಗಗಳು ನಡೆದುವು. ಓದುಗರು ಗಮನಿಸಬೇಕು… ನಮ್ಮ ಸಿನೆಮಾಗಳಲ್ಲಿ ಐಟಂ ಸಾಂಗ್ ಎನ್ನುವುದು ಅವಿಭಾಜ್ಯ ಅಂಗವಾಗಿಬಿಟ್ಟಿದೆ ಇಂದು. ಹೀಗಿರುವಾಗ ಶಾಸ್ತ್ರೀಯವಾಗಿ ಸಿನೆಮಾ ಕಲಿಯುವ ವಿದ್ಯಾರ್ಥಿಗಳಿಗೆ ಇದನ್ನೂ ಕಲಿಯುವುದೂ ಅಗತ್ಯವೇ ಆಗಿರುತ್ತದೆ. ಆ ದಿನ ಸಾಕಷ್ಟು ಕಲಾತ್ಮಕತೆಯಿಂದಲೇ ಎಲ್ಲವನ್ನೂ ಚಿತ್ರೀಕರಿಸಲಾಯಿತು. ಆದರೆ ಈ ದಿನದ ನಂತರ ನಮ್ಮ ನಿರ್ದೇಶಕ ಮಹಾಶಯನ ನಿಲುವುಗಳು ಬದಲಾದುವು. ಆತನಿಗೆ ಹೆಣ್ಣು ಪರದೆಯ ಮೇಲೆ ಹೇಗಾದರೂ ಕಾಣಲಿ, ನನ್ನ ಪತ್ನಿ ಆಗುವವಳು ಅಥವಾ ಪ್ರೇಯಸಿ ಹಾಗೆ ಕಾಣಬಾರದು ಎನಿಸಿತು. ಅವರ ಸಂಬಂಧವೇ ಮುರಿಯಿತು ಇದರಿಂದಾಗಿ! ಇದು ದುರಂತ ಕಥೆ ಸರಿ. ಆದರೆ ಬಿಂಬಗಳನ್ನು ರೂಪಿಸುವ ನಮ್ಮ ಜೀವನದಲ್ಲಿನ ನಾಜೂಕಿನ ಘಳಿಗೆಗಳಿವು. ನಿಭಾಯಿಸಲೇ ಬೇಕಾದ ವಿಷಯಗಳಾಗಿವೆ.
ಅದಂತಿರಲಿ… ನಮ್ಮ ಚಿತ್ರಗಳಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ, ನಮ್ಮ ಚಿತ್ರಗಳಲ್ಲಿ ಸ್ತ್ರೀ ಒಂದು ಭಾವವನ್ನು ಕೆರಳಿಸುವವಳಾಗಲಿ, ನಾಯಕನಲ್ಲಿ ಅವನ ಕರ್ತವ್ಯಗಳ ಕುರಿತಾಗಿ ಜಾಗೃತಗೊಳಿಸುವುದಾಗಲೀ, ಅವನ ಪ್ರೀತಿಗೆ, ಕಾಳಜಿಗೆ, ಭಯಕ್ಕೆ, ಸಿಟ್ಟಿಗೆ ಕಾರಣವಾಗುವುದಾಗಲಿ ಮಾತ್ರ ಪಾತ್ರ ಇರುತ್ತದೆ. ಉಳಿದಂತೆ ಚಿತ್ರದಲ್ಲಿ ಆಕೆ ಕೇವಲ ಅಂದದ ಗೊಂಬೆಯಾಗಿರುತ್ತಾಳೆ. ಆಕೆ ಅರ್ಥದ ಧಾತೃವೇ ಹೊರತು ಅರ್ಥದ ಕರ್ತೃವಾಗಿರುವುದಿಲ್ಲ. ಸಿನೆಮಾ ಎನ್ನುವುದು ನಮ್ಮಲ್ಲಿ ಪುರುಷ ಪ್ರಧಾನ ಉದ್ಯಮವಾಗಿದೆ. ಇಲ್ಲಿ ತುಂಬಾ ಕಡಿಮೆ ಮಹಿಳಾ ನಿರ್ದೇಶಕರಿರುವುದು. ಇರುವಂಥವರೂ ‘ಮಾಸ್’ ಅಥವಾ ದೊಡ್ಡ ಮಾರುಕಟ್ಟೆಯನ್ನು ಉದ್ದೇಶಿಸಿ ಚಿತ್ರನಿರ್ಮಾಣದ ಅಗತ್ಯ ಇರುವುದರಿಂದ, ತಮ್ಮ ಚಿತ್ರಗಳಲ್ಲಿಯೂ ಹೆಣ್ಣನ್ನು ಗಂಡಿನ ದೃಷ್ಟಿಯಲ್ಲಿ ನೋಡುವ ಪ್ರಯತ್ನ ಮಾಡುತ್ತಾಳೆ. ಹೀಗಾಗಿ ಮಾರುಕಟ್ಟೆ ನಿರ್ದೇಶಿತ ಈ ರೀತಿಯ ಚಿತ್ರಗಳಲ್ಲಿ ಒಂದು ಸ್ವತಂತ್ರ ಧ್ವನಿ ಉಡುಗಿ ಹೋಗುವುದೇ ಹೆಚ್ಚು.
ಈ ಕುರಿತಾಗಿ ನಾನು ಮುಂಬೈನಲ್ಲಿನ ನನ್ನ ಸ್ನೇಹಿತೆ, ನಿರ್ದೇಶಕಿ ರೀಮಾಳನ್ನು ಕೇಳಿದೆ. ಆಕೆ ನೇರವಾಗಿ ಹೇಳಿದಳು, ಚಿತ್ರದಲ್ಲಿ ಹೆಣ್ಣನ್ನು ಬಿಂಬಿಸುವ ರೀತಿ ಸರಿಯಾಗಲು ಆ ಬಿಂಬದ ಕರ್ತೃವಿನ ಲಿಂಗ ಮುಖ್ಯವಲ್ಲಿ ಕರ್ತೃವಿನಲ್ಲಿನ ಸಂವೇದನೆ ಅಗತ್ಯ ಎಂದು. ಒಮ್ಮೆ ಹೌದು ಎನಿಸಿತು. ಆದರೆ… ಹೌದೇ? ಮಹಿಳೆಯ ಬದುಕನ್ನು ನಿಜಕ್ಕೂ ಕೇವಲ ಸಂವೇದನೆಯಿಂದ ಪುರುಷನೊಬ್ಬನು ಅರಿಯುವುದು ಸಾಧ್ಯವೇ? ಮರು ಸೃಷ್ಟಿ ಮಾಡುವುದು ಸಾಧ್ಯವೇ? ನಾನು ಬರೆಯುವ ಮಹಿಳಾ ಪಾತ್ರಗಳು ನೈಜವಾಗಲು ಸಾಧ್ಯವೇ? ಇಲ್ಲಾ… ನಾನು ಅಂದುಕೊಂಡಿರುವ ಮಹಿಳೆಯ ಲೋಕದ ಪ್ರತಿಬಿಂಬ ಮಾತ್ರವಾಗಿಯೇ ಉಳಿಯುತ್ತದೆಯೇ ಅದು…? ನೀವೇನು ಹೇಳ್ತೀರೀ…? ನನಗೆ ತಿಳಿಸುತ್ತೀರೆಂದು ಭಾವಿಸುತ್ತೇನೆ…