ಸುಮಾರು ಎರಡು ವರುಷಗಳ ಹಿಂದಿನ ಮಾತು ಇದು. ನಾನು ಅದ್ಯಾವುದೋ ಚಲನ ಚಿತ್ರೋತ್ಸವದ ವಿಳಾಸಕ್ಕಾಗಿ ಅಂತರ್ಜಾಲದಲ್ಲಿ ಹುಡುಕುತ್ತಿದ್ದೆ. ಅಂತರ್ಜಾಲದಲ್ಲಿ ಹುಡುಕುತ್ತಾ ಹೋದಂತೆ ವಿಶ್ವದಾದ್ಯಂತ ಇರುವ ಚಲನ ಚಿತ್ರೋತ್ಸವಗಳ ಪಟ್ಟಿಯನ್ನು ನೋಡಿದರೆ ಗಾಬರಿಯಾಗುತ್ತದೆ. ಅಷ್ಟು ಉತ್ಸವಗಳಿವೆ! ಅದರಲ್ಲಿಯೂ ಪ್ರತಿಯೊಂದು ವಿಷಯಕ್ಕೂ ಒಂದು ಚಲನಚಿತ್ರೋತ್ಸವ. ಅಕ್ಕಿಯ ಕುರಿತಾಗಿಯೇ ಒಂದು ಚಲನಚಿತ್ರೋತ್ಸವ ನಡೆಯುತ್ತದೆ. ಪಕ್ಷಿಗಳ ಕುರಿತೇ ಇನ್ನೊಂದು. ಬಿಯರಿನ ಕುರಿತಾಗಿ ಒಂದು ಚಿತ್ರೋತ್ಸವ ಇದ್ದರೆ ಇನ್ನೊಂದು ಕೇವಲ ಹೆಂಗಸರೇ ನಿರ್ಮಿಸಿದ ಚಿತ್ರಗಳ ಉತ್ಸವ. ಹೀಗೆ ನನ್ನ ಬಳಿ ಇದ್ದ ಚಿತ್ರಕ್ಕೆ ಹೊಂದಿ ಬರುವ ಚಿತ್ರೋತ್ಸವವನ್ನು ಹುಡುಕುತ್ತಾ ಹೋಗುತ್ತಿದ್ದೆ. ಆಗ ಅದ್ಯಾವುದೋ ‘ಸಿದ್ಧಾರ್ಥ’ ಎಂಬ ಹೆಸರಿನ ಚಲನ ಚಿತ್ರೋತ್ಸವದ ಪ್ರಕಟಣೆ ಕಂಡಿತು. ಕುತೂಹಲದಿಂದ ತೆರೆದು ನೋಡಿದೆ. ನೋಡಿದರೆ, ಅದು ಭಾರತದಲ್ಲಿ ನಡೆಯುತ್ತಿದ್ದ ಸಲಿಂಗ ಕಾಮ ಕುರಿತಾದ ಚಿತ್ರಗಳಿಗೇ ಸೀಮಿತವಾಗಿದ್ದ ಚಿತ್ರೋತ್ಸವ! ಹೋ! ಇದು ನನ್ನ ಚಿತ್ರಕ್ಕೆ ಆಗುವುದಿಲ್ಲ ಎಂದು ಮುಂದುವರೆದೆ. ಆದರೆ ಮನಸ್ಸಿನಲ್ಲಿ ಈ ಚಿತ್ರೋತ್ಸವ ಒಂದು ಪ್ರಶ್ನೆಯನ್ನು ಎಬ್ಬಿಸಿತು. ಭಾರತೀಯ ಸಿನೆಮಾಗಳಲ್ಲಿ ಗಂಡು ಹೆಣ್ಣು ಚುಂಬಿಸುವುದನ್ನೇ ಸಹಿಸುವುದು ಕಷ್ಟವಿರುವಂಥಾ ಸಂದರ್ಭದಲ್ಲಿ ಸಲಿಂಗ ಕಾಮ, ನಪುಂಸಕರ ಸಮಸ್ಯೆಗಳು ಇತ್ಯಾದಿ ವಿಷಯಗಳ ಕುರಿತಾದ ಚಿತ್ರಗಳು ಭಾರತೀಯ ಮುಖ್ಯವಾಹಿನಿ ಸಿನೆಮಾಗಳಲ್ಲಿ ಹೇಗೆ ಪ್ರಸ್ತುತ ಪಡಿಸಲು ಸಾಧ್ಯ ಎಂದು ನಾನು ಯೋಚಿಸಿದೆ. ಆದರೆ ಪರಿಸ್ಥಿತಿ ನಾನು ಯೋಚಿಸಿದ್ದಕ್ಕಿಂತ ಬೇಗನೇ ಬದಲಾಗುತ್ತಾ ಸಾಗಿತು!

ಭಾರತೀಯ ಸಿನೆಮಾಗಳಲ್ಲಿ ಸಲಿಂಗ ಕಾಮದ ಕುರಿತಾದ ಸಿನೆಮಾಗಳು ಇತ್ತೀಚೆಗೆ ಹೆಚ್ಚು ಹೆಚ್ಚಾಗಿ ಬರಲಾರಂಭಿಸಿವೆ. ಅದೂ ಮುಖ್ಯವಾಹಿನಿ ಸಿನೆಮಾಗಳಲ್ಲಿ. ಸಧ್ಯಕ್ಕೆ ಸಲಿಂಗ ಕಾಮವನ್ನು ಒಂದು ಹಾಸ್ಯದ ವಸ್ತುವಾಗಿ ಬಳಸಲಾಗುತ್ತಿದ್ದರೂ, ಅದರ ಭಿನ್ನ ಮಗ್ಗುಲುಗಳನ್ನು ಶೋಧಿಸುವಲ್ಲಿ ಕೆಲವು ಚಿತ್ರಗಳು ಕೆಲಸ ಮಾಡಿವೆ. ಶಾರುಖ್ ಖಾನ್ ಅಭಿನಯದ ‘ಕಲ್ ಹೋ ನ ಹೋ’ ಚಿತ್ರದಲ್ಲಿ ಅವನ ಮತ್ತು ಸೈಫ್ ಅಲೀ ಖಾನ್ ನಡುವೆ ಅಸ್ವಾಭಾವಿಕ ಸಂಬಂಧ ಇದೆಯೋ ಎಂದು ಅವರ ಮನೆಗೆಲಸದವಳೊಬ್ಬಳಿಗೆ ಸಂಶಯವಿರುವಂತೆ ಚಿತ್ರಿಸಲಾಗಿತ್ತು. ಅದರಲ್ಲಿ ಈ ಸಂಬಂಧ ನಿಜಕ್ಕೂ ಇಲ್ಲ ಆದರೆ ಅವರು ಹಾಗೆ ಬಿಂಬಿಸುತ್ತಿದ್ದಾರೆ ಎಂದು ತೋರಿಸಿ, ಒಂದಷ್ಟು ನಗೆ ಪಡೆಯುವಲ್ಲಿ ಚಿತ್ರ ಯಶಸ್ಸಾಯಿತು. ಬಹುಷಃ ಇದೇ ಪ್ರೇರಣೆಯಿಂದಲೋ ಏನೋ, ಮುಂದೆ ನಮ್ಮ ಚಿತ್ರಗಳಲ್ಲಿ ಈ ವಿಷಯದ ಕುರಿತು ಭಿನ್ನ ಮಗ್ಗುಲುಗಳಲ್ಲಿ ಪ್ರಯೋಗವನ್ನು ಮಾಡಲಾಯಿತು.

ನಾನು ಇತ್ತೀಚೆಗೆ ಬಂದ ವಿನಯ್ ಪಾಠಕ್ ಅಭಿನಯದ ‘ಸ್ಟ್ರೇಯಿಟ್’ಚಿತ್ರವನ್ನು ನೋಡಿದೆ. ವಿನಯ್ ಪಾಠಕ್ ಎಂದರೆ, ಒಂದು ಮಟ್ಟಿನ ಅತಿರೇಕವಲ್ಲದ, ಮಾನವ ಭಾವನೆಗಳ ಹಾಸ್ಯ ಮಿಶ್ರಿತ ಚಿತ್ರಣವಿರುವ ಚಿತ್ರಗಳೆಂದು ಸಿದ್ಧವಾಗಿವೆ. ಇದೇ ರೀತಿಯ ಮತ್ತೊಂದು ಚಿತ್ರ ಸ್ಟ್ರೇಯಿಟ್. ಇಲ್ಲಿ ವಿನಯ್‍ಗೆ ತಾನು ಸಲಿಂಗ ಕಾಮಿಯೇ ಎಂಬ ಸಂಶಯ ಕಾಡುವುದು ಸಮಸ್ಯೆ. ಇದು ಚಿತ್ರದ ಮುಖ್ಯ ಸಮಸ್ಯೆ. ವಿನಯ್ ಪಾಠಕ್ ಸಹಜ ಅಭಿನಯದಲ್ಲಿ ಚಿತ್ರ ಚೆನ್ನಾಗಿ ಮೂಡಿ ಬಂದಿದೆ. ಬದಲಾಗುತ್ತಿರುವ ಪರಿಸರದಲ್ಲಿ, ಸಲಿಂಗ ಕಾಮವನ್ನೂ ಸಹಜವಾಗಿ ಜನ ಒಪ್ಪಿಕೊಳ್ಳಲಾರಂಭಿಸುತ್ತಿರುವ ಈ ಪರಿವರ್ತನೆಯ ಕಾಲದಲ್ಲಿ ಯುವಕ-ಯುವತಿಯರ ಮಾನಸಿಕ ತಳಮಳಗಳನ್ನು, ಸಲಿಂಗ ಕಾಮದ ಕುರಿತಾದ ಅರೆ-ಜ್ಞಾನದಿಂದ ಉಂಟಾಗುವ ಗೊಂದಲಗಳನ್ನು ಚಿತ್ರ ಹಾಸ್ಯ ರೂಪದಲ್ಲಿ ಪ್ರಸ್ತುತಪಡಿಸುತ್ತಾ ಹೋಗುತ್ತದೆ. ಎಲ್ಲಿಯೂ ಅಶ್ಲೀಲವೆನಿಸದೇ, ಮಾನವ ಸಂಬಂಧಗಳ, ಮಾನಸಿಕ ಒತ್ತಡಗಳ ಕಥೆಯನ್ನು ಈ ಚಿತ್ರ ಹೇಳುತ್ತದೆ.

ವಿನಯ್ ಪಾಠಕ್ ಲಂಡನ್ನಿನಲ್ಲಿ ವಾಸಿಸುತ್ತಿರುವ, ಭಾರತೀಯ. ಅವನಿಗೆ ಮದುವೆಯಾಗುವ ವಯಸ್ಸು ಹಾಗೂ ವಧು ಅನ್ವೇಷಣೆ ಜೋರಿನಲ್ಲಿ ಸಾಗಿದೆ. ಈ ಸಂದರ್ಭದಲ್ಲಿ ಅವನಿಗೆ ಅಕಸ್ಮತ್ತಾಗಿ ತಾನು ಸಲಿಂಗ ಕಾಮಿಯಾಗಿದ್ದರೆ?! ಎಂದು ಸಂಶಯ ಕಾಡಲಾರಂಭಿಸುತ್ತದೆ. ಅವನ ಸುತ್ತಲಿರುವ ಜನರ ಮಾತು ಕಥೆ, ಅದನ್ನು ಅವನು ಅರ್ಥೈಸುವ ಪರಿ ಇತ್ಯಾದಿಗಳಿಂದ ಅವನ ಸಂಶಯ ಬಲವಾಗುತ್ತಾ ಹೋಗುತ್ತದೆ. ಇದರಿಂದ ಸಹಜ ಮಾನವ ಸಂಬಂಧಗಳ ಕುರಿತಾಗಿ ಅವನು ಸಂಶಯ ಪಡುತ್ತಾ, ದೈನಂದಿನ ಸಣ್ಣ ಸಣ್ಣ ಸಂತೋಷಗಳಿಂದ ವಂಚಿತನಾಗುತ್ತಾ ಸಾಗುತ್ತಾನೆ. ಈ ಸಂದರ್ಭದಲ್ಲಿ ಅವನ ಜೀವನವನ್ನು ಪ್ರವೇಶಿಸುವ ಒಬ್ಬ ಹುಡುಗಿ ಹಾಗೂ ಒಬ್ಬ ಹುಡುಗರಿಂದಾಗಿ ಇವನ ಜೀವನ ಮತ್ತಷ್ಟು ಅಸ್ತವ್ಯಸ್ತವಾಗುತ್ತದೆ. ತಾನು ಹುಡುಗಿಯನ್ನು ಪ್ರೀತಿಸುತ್ತಿರುವುದು ಅವನ ಅರಿವಿಗೆ ಬರುತ್ತದಾದರೂ ಹುಡುಗನನ್ನು ತಾನು ಕಾಮಿಸುತ್ತಿದ್ದೇನೋ ಎಂಬ ಸಂಶಯವೇ ಅವನನ್ನು ಬಹಳ ಕುಗ್ಗಿಸುತ್ತದೆ. ಈ ರೀತಿ ಚಿತ್ರ ವಿನಯ್ ಪಾಠಕ್ ಮಾನಸಿಕ ತುಮುಲಗಳನ್ನು ಹಾಸ್ಯದೊಂದಿಗೆ ಹೇಳುತ್ತಾ ಹೋಗುತ್ತದೆ. ಕೊನೆಯಲ್ಲಿ ಏನಾಗುತ್ತೆ ಎನ್ನುವುದನ್ನು ಪರದೆಯಲ್ಲಿ ನೋಡಿ ಆನಂದಿಸಿರಿ.

ಭಾರತದಲ್ಲಿ ಇಂದು ಸಹಸ್ರಾರು ಕಿರು ಚಿತ್ರಗಳು ನಿರ್ಮಿಸಲ್ಪಡುತ್ತವೆ. ಚಿತ್ರೋತ್ಸವಗಳಿಂದ ಚಿತ್ರೋತ್ಸವಗಳಿಗೆ ಹೋಗುತ್ತಾ ಈ ಚಿತ್ರಗಳು ಸೀಮಿತ ಪ್ರಸರಣವನ್ನು ಪಡೆಯುತ್ತವೆ. ಆದರೂ ಇವುಗಳಿಗೆ ಮುಖ್ಯವಾಹಿನಿ ಚಿತ್ರಗಳ ಒತ್ತಡಗಳಿಲ್ಲದೇ ಇರುವುದರಿಂದ, ಅವುಗಳ ವಿಷಯ ಆಯ್ಕೆ ಹಾಗೂ ಮಂಡನೆಗಳಲ್ಲಿ ತೀರಾ ವಿಭಿನ್ನವಾಗಿರುತ್ತವೆ. ಇವುಗಳಲ್ಲಿ ಇಂದು ಸಲಿಂಗ ಕಾಮ, ನಪುಂಸಕರ ಜೀವನದ ಆಯಾಮಗಳು ಇತ್ಯಾದಿ ವಿಷಯಗಳ ಕುರಿತಾದ ಗಂಭೀರ ಶೋಧನೆ, ಚಿಂತನೆ ನಡೆಯುತ್ತಿವೆ. ಇಂಥಾ ಸಂದರ್ಭದಲ್ಲಿ ಮುಖ್ಯವಾಹಿನಿ ಚಿತ್ರಗಳಲ್ಲೂ ಇಂಥಾ ವಿಷಯಗಳು ಚರ್ಚೆಗೆ ಬರುತ್ತಿರುವುದು ಸ್ವಾಗತಾರ್ಹ ವಿಷಯವಾಗಿದೆ. ಇಂಥಾ ಪ್ರಯೋಗಗಳು, ಸರಿಯಾದ ದಿಕ್ಕಿನಲ್ಲಿ, ಸಾಮಾಜಿಕ ಮರ್ಯಾದೆಯ ಪರಿಧಿಯೊಳಗೆ ಸಾಗಲಿ ಎಂದು ಆಶಿಸುತ್ತೇನೆ.

Share This