
ಇವತ್ತಿಗೆ ನನ್ನ ಬ್ಲಾಗ್ ಆರಂಭವಾಗಿ ಒಂದು ವರುಷವಾಯ್ತು. ಸಣ್ಣಮಟ್ಟಿಗೆ ವೆಬ್ ಸೈಟ್ ನಡೆಸುತ್ತಿದ್ದ ನನಗೆ ಅದನ್ನು ಕಾರಣಾಂತರಗಳಿಂದ ಮುಂದುವರೆಸಲಾಗಲಿಲ್ಲ. ತಾಂತ್ರಿಕ ಹಾಗೂ ವ್ಯಾವಹಾರಿಕ ತೊಂದರೆಗಳಿಗೆ ಸಿಲುಕಿ ಅದನ್ನು ತೊರೆಯಬೇಕಾಯಿತು. ಅದೇ ಸಂದರ್ಭದಲ್ಲಿ ಬ್ಲಾಗುಗಳ ಬಗ್ಗೆ ಸ್ವಲ್ಪ ತಿಳಿದುಕೊಂಡಿದ್ದೆ. ಹಾಗೇ ಹೀಗೇ ಪ್ರಯೋಗ ಮಾಡುತ್ತಾ ಕೊನೆಗೆ ಇಲ್ಲಿ ಬ್ಲಾಗ್ ತೆರೆದು ಕುಳಿತೆ. ಎನ್.ಎ.ಎಂ ಇಸ್ಮಾಯಿಲರ ಪ್ರೇರಣೆಯಿಂದ ಉದಯವಾಣಿಗೆ ಬರೆಯುತ್ತಿದ್ದ ಕೆಲವು ಲೇಖನಗಳನ್ನು ಇಲ್ಲಿ ಹಾಕಿದ್ದು, ಮತ್ತೆ ಅದಕ್ಕೆ ಜನ ಪ್ರತಿಕ್ರಿಯೆ ಕೊಡಲಾರಂಭಿಸಿದಾಗ ಮತ್ತಷ್ಟು ಬರೆಯಲು ಪ್ರೇರಣೆ ಸಿಕ್ಕಿತು. ಹೀಗೆ ಬರೆಯುತ್ತಾ ಬರೆಯುತ್ತಾ ಹೋದವನು ನಾನು. ಇಂದು ಒಟ್ಟು ಆರು ವಿಭಾಗಗಳು, ಅರವತ್ತು ಬ್ಲಾಗ್ ಬರಹಗಳು, ಸುಮಾರು ಹನ್ನೆರಡು ಸಾವಿರದ ಐನೂರರ ಹತ್ತಿರ ಸಂದರ್ಶಕರಿಂದ ನೂರ ಎಂಭತ್ತನಾಲ್ಕು ಕಮೆಂಟ್ಸ್ ಇತ್ಯಾದಿಗಳನ್ನು ಬ್ಲಾಗ್ ಇಂದು ಹೊಂದಿದೆ. ಅದ್ಯಾಕೋ ಇತ್ತೀಚೆಗೆ ಇದೆಲ್ಲಾ ಎಲ್ಲಿ ಆರಂಭವಾದದ್ದು ಎಂದು ನೋಡಲು ಹೋದಾಗ ೩ ಫೆಬ್ರವರಿ ೨೦೦೮ಕ್ಕೆ ಆರಂಭವಾಗಿದ್ದು ಎಂದು ತಿಳಿಯಿತು. ಹಾಗಾಗಿ ಈ ಬರಹವನ್ನು ಬರೆಯಬೇಕು ಎಂದನಿಸಿತು. ನಾನು ಬರಹಗಾರನಲ್ಲ. ಹೆಚ್ಚೆಂದರೆ ಸಿನೆಮಾ ಮಾಡಿಯೇನು. ಆದರೆ ನಾನು ಬರೆದದ್ದನ್ನು ಪ್ರೀತಿಯಿಟ್ಟು ಓದಿದ್ದೀರಾ… ಮುಂದೆ ಹೋಗಲು ಪ್ರೋತ್ಸಾಹ ನೀಡಿದ್ದೀರ. ಅದಕ್ಕೆ ಮುಖ್ಯವಾಗಿ ನಿಮಗೆಲ್ಲಾ ಧನ್ಯವಾದಗಳು.
ಈ ಮಧ್ಯೆ ಏನೆಲ್ಲಾ ಆಗಿಹೋಯ್ತು. ನನ್ನ ಮೆಚ್ಚಿನ ಬರ್ಗ್ಮನ್ ತೀರಿಕೊಂಡರು, ಗುಬ್ಬಚ್ಚಿಗಳು ಚಲನಚಿತ್ರ ಕಲ್ಪನೆಯ ಕಾಗದಗಳಿಂದ ಹೊರಟು ಕಲ್ಪನಾತೀತವಾಗಿದ್ದ ಪರದೆಯ ಮೇಲೂ ಕಂಡು ಬಂತು. ‘ಶಿಕಾರಿಯ’ ಆರಂಭವಾಯಿತು. ನನಗೆ ಮದುವೆ ಆಯ್ತು, ಮಂಗಳೂರಿನಲ್ಲಿ ಪಬ್ ಮೇಲೆ ಧಾಳಿ ನಡೆಯಿತು ಹೀಗೆ ಏನೆಲ್ಲಾ ಆಗಿಹೋಗಿದ್ದು ಕೇವಲ ಒಂದೇ ವರುಷದಲ್ಲಿ ಎನ್ನುವುದು ಈ ಬ್ಲಾಗ್ ಬರಹಗಳಿಗೆ ಒಂದು ಮರುಭೇಟಿಕೊಟ್ಟಾಗಲೇ ನನಗೆ ತಿಳಿದಿದ್ದು. ಬಹುಷಃ ಈ ಬ್ಲಾಗಿಗೆ ವಿಷಯ ತುಂಬುವ ಆಸೆಯಲ್ಲಿ, ನಿಮ್ಮ ಅಭಿಪ್ರಾಯ ತಿಳಿಯುವ ಹಂಬಲದಲ್ಲಿ ಗೊತ್ತಿಲ್ಲದಂತೆ ಒಂದು ಡೈರಿಯಂತೆಯೂ ಈ ಬ್ಲಾಗ್ ಕೆಲಸ ಮಾಡುತ್ತದೆ ಎಂದು ನನಗೆ ಈಗ ಅನಿಸುತ್ತದೆ. ಇಂಥಾ ಸಾವಿರಗಟ್ಟಲೆ ಬ್ಲಾಗುಗಳು ಚಿತ್ರವಿಚಿತ್ರ ವಿಷಯಗಳ ಬಗ್ಗೆ, ಹತ್ತು ಸಾವಿರ ಭಾಷೆಗಳಲ್ಲಿ ಇವೆ. ಇದೆಲ್ಲದರಲ್ಲಿ ಬರುತ್ತಿರುವ ಕೋಟಿಗಟ್ಟಲೆ ಬರಹಗಳಲ್ಲಿ ಇರುವ ವಿಷಯಗಳ ಬಗ್ಗೆ ಯೋಚಿಸಿದಾಗ ಅಂತರ್ಜಲದ ತಾಕತ್ತಿಗೆ ಮತ್ತೊಮ್ಮೆ ಬೆರಗಾಗುತ್ತೇನೆ ನಾನು.
ಹೀಗೇ ನಾನು ಬರೆಯುತ್ತಿರುತ್ತೇನೆ, ನೀವೂ ಬರೆಯುತ್ತಿರಿ, ಬ್ಲಾಗ್ ಬ್ಲಾಕಿನಲ್ಲಿ ಸಿಕ್ಕಿ ಬೌಬೌ ಎನ್ನುತ್ತಿರೋಣ… ಸಧ್ಯಕ್ಕೆ ಬಾಯ್ ಬಾಯ್…